ವಿಷಯಕ್ಕೆ ಹೋಗು

ದ್ರವ್ಯ ಹಂತಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ದ್ರವ್ಯ ಹಂತ ಇಂದ ಪುನರ್ನಿರ್ದೇಶಿತ)

ದ್ರವ್ಯ ಹಂತ - ಭೌತ ವ್ಯವಸ್ಥೆಗಳಲ್ಲಿ ಸುಮಾರಾಗಿ ಒಂದೇ ಥರದ ರಸಾಯನಿಕ ರಚನಾಂಶಗಳು ಮತ್ತು ಭೌತ ಗುಣಲಕ್ಷಣಗಳನ್ನು (ಅಂದರೆ, ಸಾಂದ್ರತೆ, ಸ್ಫಟಿಕ ರಚನೆ, ವಕ್ರೀಭವನಾಂಕ, ಇತ್ಯಾದಿ.) ಹೊಂದಿರುವ ಸ್ಥಿತಿಗಳ ಒಂದು ಗುಂಪಿಗೆ ಆ ದ್ರವ್ಯದ ಒಂದು ಹಂತವೆಂದು ಹೆಸರು.

ದ್ರವ್ಯದ ಹಂತಗಳು ಮತ್ತು ಸ್ಥಿತಿಗಳು

[ಬದಲಾಯಿಸಿ]

ದ್ರವ್ಯ ಹಂತ ಮತ್ತು ದ್ರವ್ಯ ಸ್ಥಿತಿಗಳು ಸಾಮಾನ್ಯವಾಗಿ ಪರಸ್ಪರ ಗೊಂದಲಗೊಳಿಸಬಲ್ಲ ಪದಗಳಾದರೂ, ಇವೆರಡರ ನಡುವೆ ಗಮನಾರ್ಹ ವ್ಯತ್ಯಾಸಗಳಿವೆ. ದ್ರವ್ಯ ಸ್ಥಿತಿಗಳು ಅನಿಲ, ದ್ರವ, ಘನ, ಪ್ಲಾಸ್ಮ, ಇತ್ಯಾದಿಗಳ ನಡುವಿನ ವ್ಯತ್ಯಾಸಗಳನ್ನು ಸೂಚಿಸುತ್ತವೆ. ಒಂದು ರಸಾಯನಿಕ ವ್ಯವಸ್ಥೆಯಲ್ಲಿ ದ್ರವ್ಯದ ಎರಡು ವಲಯಗಳು ಬೇರೆ ಬೇರೆ ದ್ರವ್ಯಸ್ಥಿತಿಗಳಲ್ಲಿದ್ದರೆ, ಅವು ಬೇರೆ ಬೇರೆ ಹಂತಗಳಲ್ಲೂ ಇರುತ್ತವೆ. ಆದರೆ, ಇದರ ವ್ಯತಿರಿಕ್ತ ವಾದವು ವಾಸ್ತವದಲ್ಲಿ ಅನ್ವಯಿಸುವುದಿಲ್ಲ. ಒಂದು ವ್ಯವಸ್ಥೆಯಲ್ಲಿ ಸಮತೋಲನದಲ್ಲಿರುವ ಹಲವು ಹಂತಗಳಿದ್ದು, ಈ ಎಲ್ಲ್ಲ ಹಂತಗಳೂ ಒಂದೇ ದ್ರವ್ಯಸ್ಥಿತಿಯಲ್ಲಿರಬಹುದು. ಉದಾಹರಣೆಗೆ, ವಜ್ರ ಮತ್ತು ಗ್ರಾಫೈಟ್ಗಳೆರಡೂ ಘನರೂಪಿಗಳಾದರೂ, ಇವು ಬೇರೆ ಬೇರೆ ಹಂತಗಳ ಘನಗಳು. ಕೊಠಡಿಯ ತಾಪಮಾನದಲ್ಲಿರುವ ನೀರು ಮತ್ತು ಎಣ್ಣೆಯ ಮಿಶ್ರಣವು ಬೇರೆ ಬೇರೆ ರಚನೆಯ ಎರಡು ಹಂತಗಳುಳ್ಳ ಮಿಶ್ರಣವಾಗಿದ್ದು, ಒಂದೇ ದ್ರವ್ಯಸ್ಥಿತಿಯಲ್ಲಿ (ದ್ರವ) ಇರುತ್ತದೆ.