ಕ್ರಿಪ್ಟಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರಮಾಣು ಸಂಕೇತದ ರೂಪದಲ್ಲಿರುವ ಕ್ರಿಪ್ಟಾನ್ ಅನಿಲ ತುಂಬಿದ ಕೊಳವೆ

ಕ್ರಿಪ್ಟಾನ್ ಒಂದು ಮೂಲಧಾತು ಅನಿಲ. ಇದು ವಾತಾವರಣದಲ್ಲಿ ಅತ್ಯಲ್ಪ ಪ್ರಮಾಣದಲ್ಲಿದೆ. ಇದನ್ನು ೧೮೯೮ರಲ್ಲಿ ಇಂಗ್ಲೆಂಡ್‍ನ ಸರ್ ವಿಲಿಯಮ್ ರಾಮ್ಸೆ ಮತ್ತು ಮೊರಿಸ್ ಟ್ರೆವರ್ಸ್ ಎಂಬವರು ಕಂಡುಹಿಡಿದರು. ಇದಕ್ಕೆ ಬಣ್ಣ, ವಾಸನೆ, ರುಚಿ ಇಲ್ಲ. ಇದನ್ನು ಬಣ್ಣದ ವಿದ್ಯುತ್ ದೀಪಗಳನ್ನು ತಯಾರಿಸಲು ಉಪಯೋಗಿಸುತ್ತಾರೆ.

ಇದು ಆವರ್ತಕೋಷ್ಟಕದ ಸೊನ್ನೆ ಗುಂಪಿನ ಸದಸ್ಯ. ವಿರಳ ಅನಿಲಗಳಲ್ಲಿ ಒಂದು. ಪರಮಾಣು ಸಂಖ್ಯೆ 36. ಪರಮಾಣು ತೂಕ 83.80. ಸಂಕೇತ Kr. ವ್ಯಾಂಡೆರ್‌ವಾಲ್ ತ್ರಿಜ್ಯ 2.01Å. ನಿಸರ್ಗದತ್ತ ಸಮಸ್ಥಾನಿಗಳ (ಐಸೋಟೋಪ್ಸ್) ದ್ರವ್ಯರಾಶಿ 78, 80, 82, 83, ಮತ್ತು 84.[೧][೨] ಎಲೆಕ್ಟ್ರಾನ್ ವಿನ್ಯಾಸ 1s22s22p63s23p63d104s24p6.  ಆಯಾನೀಕರಣ ವಿಭವ (ಎಲೆಕ್ಟ್ರಾನ್ ವೋಲ್ಟುಗಳಲ್ಲಿ): ಪ್ರಾಥಮಿಕ 13.996, ದ್ವಿತೀಯಕ 26.4, ತೃತೀಯಕ 36.8. ದ್ರವನ ಬಿಂದು-156.6 ಸೆಂ. ಕುದಿಬಿಂದು-151.7 ಸೆಂ. ಸಾಂದ್ರತೆ 3.708. ಗ್ರ್ಯಾಂ/ಲೀ (STP). ಸಂಧಿಸ್ಠ ಉಷ್ಣತೆ - 62 ಸೆಂ. ಸಂಧಿಸ್ಥ ಒತ್ತಡ 54.3 ವಾಯುಮಂಡಲಗಳು.

೧೮೯೮ರ ಪ್ರಯೋಗದಲ್ಲಿ ನೂರಾರು ಲೀಟರುಗಳಷ್ಟು ದ್ರವಗಾಳಿಯನ್ನು ಭಿನ್ನ ಆಸವನಕ್ಕೆ ಗುರಿಪಡಿಸಿದಾಗ ಅಷ್ಟೇನೂ ಆವಿಶೀಲವಲ್ಲದ ಭಾಗ ಉಳಿಯಿತು. ಇದರಿಂದ ಕ್ರಿಪ್ಟಾನನ್ನು ಪ್ರತ್ಯೇಕಿಸಲಾಯಿತು.[೩] ವಾಯುಮಂಡಲದಲ್ಲಿ ಇದರ ಮೊತ್ತ ಅತ್ಯಲ್ಪ. ಗಾತ್ರಾನುಸಾರ 1,000 ಭಾಗ ಗಾಳಿಯಲ್ಲಿರುವ ಕ್ರಿಪ್ಟಾನಿನ ಮೊತ್ತ ಕೇವಲ 0.00005. ಇತರ ವಿರಳ ಅನಿಲಗಳಂತೆ ಇದು ಕೂಡ ಬಣ್ಣ, ವಾಸನೆ ಮತ್ತು ರುಚಿಗಳಿಲ್ಲದ ವಸ್ತು. ನೀರಿನಲ್ಲಿ ಅಲ್ಪದ್ರಾವ್ಯ ದ್ರವೀಕರಿಸಬಹುದು. ವಿಶಿಷ್ಟವಾದ ರೋಹಿತವನ್ನು ಕೊಡುವುದರಿಂದ ಇದನ್ನು ಗುರುತಿಸುವುದು ಸುಲಭ. ಪರಮಾಣು ಸ್ಥಿತಿಯಲ್ಲೇ ದೊರೆಯುವುದು. ಎಂದರೆ ಅದರ ಅಣುವಿನಲ್ಲಿರುವುದು ಒಂದೇ ಪರಮಾಣು. ಅದರ ಪರಮಾಣ್ವಕತೆ (ಅಟಾಮಿಸಿಟಿ) 1 ಎಂಬುದಕ್ಕೆ ಕ್ರಿಪ್ಟಾನಿನ

Cp    ನಿಯತ ಒತ್ತಡದಲ್ಲಿ ಅನಿಲದ ಗ್ರಾಹ್ಯೋಷ್ಣ

Cc    ನಿಯತ ಗಾತ್ರದಲ್ಲಿ ಅನಿಲದ ಗ್ರಾಹ್ಯೋಷ್ಣ

ಮೌಲ್ಯ 1,689 ಆಗಿರುವುದೇ ಸಾಕ್ಷಿ.

ಗುಣಗಳು[ಬದಲಾಯಿಸಿ]

ಕ್ರಿಪ್ಟಾನ್ ಪರಮಾಣುವಿನ ಹೊರಚಿಪ್ಪಿನಲ್ಲಿ ಎಂಟು ಎಲೆಕ್ಟ್ರಾನುಗಳ ಗುಂಪು ಇದೆ. ಪ್ರಾಯಶಃ ಈ ಸ್ಥಿರಾಷ್ಟಕ (ಸ್ಟೇಬಲ್ ಆಕ್ಟಟ್) ರಚನೆ ಅದರ ಪರಮಾಣುಗಳು ಪರಸ್ಪರ ಹಾಗೂ ಇತರ ಪರಮಾಣುಗಳ ಜೊತೆಗೂಡಲು ಅಡ್ಡಿಯಾಗಬಹುದೆಂದು ತೋರುತ್ತದೆ. ಹಾಗೆಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಸೂಕ್ತ ಸನ್ನಿವೇಶದಲ್ಲಿ ಕ್ರಿಪ್ಟಾನ್ ಫ್ಲೂರೈಡುಗಳನ್ನು ತಯಾರಿಸಿರುವ ಬಗ್ಗೆ ವರದಿಯಾಗಿದೆ. 187º ಸೆಂ. ನಲ್ಲಿಟ್ಟಿರುವ ಕ್ರಿಪ್ಟಾನ್ ಫ್ಲೂರಿನ್ ಮಿಶ್ರಣದ ಮೂಲಕ ವಿದ್ಯುತ್ ಸ್ರಾವವಾದರೆ ಕ್ರಿಪ್ಟಾನ್ ಟೆಟ್ರಫ್ಲೂರೈಡ್ ಉಂಟಾಗುತ್ತದೆ. ಇದರ ಅಣುಸೂತ್ರ KrF4. ಇದೊಂದು ಹರಳುರೂಪದ ಬಿಳಿಯ ಘನ. ಬಲು ಅಸ್ಥಿರ. ಸರಾಗವಾಗಿ ವಿಭಜಿಸುವುದು. -78º ಸೆಂ. ಉಷ್ಣತೆಯಲ್ಲಾದರೆ ಕೆಲವು ತಿಂಗಳಕಾಲ ಇದನ್ನು ಕೂಡಿಡಲು ಸಾಧ್ಯ. -40º ಸೆಂ.ನಲ್ಲಿ ಬರ್ಫದ ಸಂಪರ್ಕದಲ್ಲಿಟ್ಟರೆ ನಿಧಾನವಾಗಿ ಜಲವಿಭಜನೆ ಹೊಂದಿ ಕ್ರಿಪ್ಟಾನಿನ ಆಮ್ಲವೊಂದು ಉತ್ಪತ್ತಿಯಾಗುತ್ತದೆ. ಘನೀಕರಿಸಿದ ಆರ್ಗಾನಿನಲ್ಲಿ ಫ್ಲೂರಿನ್-ಕ್ರಿಪ್ಟಾನುಗಳ ಘನ ಮಿಶ್ರಣವನ್ನಿಟ್ಟು -253º ಸೆಂ.ನಷ್ಟು ಶೈತ್ಯವೇರ್ಪಡಿಸಿ ಅತಿರಕ್ತ ಕಿರಣಗಳಿಗೆ ಒಡ್ಡಿದರೆ ಕ್ರಿಪ್ಟಾನ್ ಡೈಫ್ಲೂರೈಡು (KrF2) ಉಂಟಾಗುವುದೆಂದು ಗೊತ್ತಾಗಿದೆ.

ತಣಿಸಿದ ಕ್ರಿಪ್ಟಾನ್ ಅನಿಲಕ್ಕೆ ನೀರಾವಿಯನ್ನು ಪ್ರಯೋಗ ಮಾಡಿದರೆ ಬಣ್ಣವಿಲ್ಲದ ಹರಳುರೂಪದ ಹೈಡ್ರೇಟ್ ಮೈದಳೆಯುವುದು. ಇದರ ಅಣುಸೂತ್ರ Kr.6H2O ಸಾಮಾನ್ಯ ಒತ್ತಡದಲ್ಲಿ ಇದು ವಿಭಜಿಸುವ ಉಷ್ಣತೆ-39.2o ಸೆಂ. ಎಂದು ಟಮ್ಮನ್ ಮತ್ತು ಕ್ರೀಗೆಯವರು 1925ರಲ್ಲಿ ನಡೆಸಿದ ಪ್ರಯೋಗಗಳಿಂದ ದೃಢಪಟ್ಟಿದೆ.

40 ವಾಯುಮಂಡಲಗಳ ಒತ್ತಡದಲ್ಲಿರುವ ಕ್ರಿಪ್ಟಾನಿನ ವಾತಾವರಣದಲ್ಲಿ ಕ್ವಿನಾಲಿನ ನೀರಿನ ದ್ರಾವಣವನ್ನು ಸ್ಫಟಿಕೀಕರಿಸಲು ಬಿಟ್ಟರೆ ಅದು Q3Kr ಸೂತ್ರವುಳ್ಳ (Q ಕ್ವಿನಾಲಿನ ಒಂದು ಅಣುವನ್ನು ಸೂಚಿಸುತ್ತದೆ) ಸಂಯುಕ್ತವನ್ನು ಕೊಡುವುದು. ಕ್ವಿನಾಲಿನ 3 ಅಣುಗಳು ಒಂದು ಪಂಜರದಂತೆ ವರ್ತಿಸಿ ಕ್ರಿಪ್ಟಾನಿನ 1 ಅಣುವನ್ನು ಅದರಲ್ಲಿ ಸೆರೆ ಹಿಡಿದಿವೆ ಎಂದು ಊಹಿಸಲಾಗಿದೆ. ಸ್ಥಿರವೆನ್ನಬಹುದಾದ ಈ ಸಂಕಲನ ಸಂಯುಕ್ತವನ್ನು ಕಾಯಿಸಿ ಕರಗಿಸಿದರೆ ಅಥವಾ ಸೂಕ್ತ ದ್ರಾವಕಗಳಲ್ಲಿ ವಿಲೀನ ಮಾಡಿದರೆ ಮಾತ್ರ ಕ್ವಿನಾಲಿನ ಅಣುಗಳು ತಾವು ಬಂಧಿಸಿದ್ದ ಕ್ರಿಪ್ಟಾನಿನ ಪರಮಾಣುಗಳನ್ನು ಬಿಡುಗಡೆ ಮಾಡುತ್ತವೆ. ಆರ್ಗಾನ್ ಮತ್ತು ಗ್ಸೇನಾನುಗಳೂ ಇದೇ ನಮೂನೆಯ ಸಂಕಲನ ಸಂಯುಕ್ತಗಳನ್ನು ಕೊಡಬಲ್ಲುವು. ಇವನ್ನು ಕುರಿತು ವಿಶೇಷ ಅಧ್ಯಯನ ನಡೆಸಿರುವ ಹೆಚ್.ಎಂ. ಪೊವೆಲ್ ಅವನ್ನು ಕ್ಲ್ಯಾತ್ರೇಟ್ ಸಂಯುಕ್ತಗಳು ಎಂದು ಕರೆದಿದ್ದಾನೆ (1950).

ಉಪಯೋಗಗಳು[ಬದಲಾಯಿಸಿ]

ಕ್ರಿಪ್ಟಾನ್ ಅತಿ ವಿರಳವಾದ ಅನಿಲವಾದುದರಿಂದ ಅದರ ಬಳಕೆ ಸೀಮಿತಗೊಂಡಿದೆ. ಗ್ಸೇನಾನ್-ಕ್ರಿಪ್ಟಾನ್ ಮಿಶ್ರಣವನ್ನು ವಿದ್ಯುತ್ ಬಲ್ಬುಗಳಲ್ಲಿ ಉಪಯೋಗಿಸಿದರೆ ಅವುಗಳ ಬಾಳಿಕೆ ಹೆಚ್ಚುವುದು ಕಂಡು ಬಂದಿದೆ. ಬಲ್ಬಿನಲ್ಲಿ ಶೂನ್ಯಪ್ರದೇಶವಿದ್ದರೆ ಬಿಳಿಗಾವಿನಲ್ಲಿರುವ ಟಂಗಸ್ಟನ್ ತಂತುವಿನಿಂದ ಲೋಹ ಆವಿಯಾಗಿ ಬಲ್ಬಿನ ಒಳ ಮೈಮೇಲೆ ಶೇಖರಿಸುವುದರಿಂದ ಬಲ್ಬು ಕಪ್ಪಿಡುತ್ತದೆ. ಕ್ರಮೇಣ ಟಂಗಸ್ಟನ್ ತಂತು ಪುಡಿಯಾಗಿ ಉದುರಿಹೋಗುವುದು. ಆದರೆ ಕ್ರಿಪ್ಟಾನ್-ಗ್ಸೇನಾನುಗಳ ಜಡ ವಾತಾವರಣವಿದ್ದ ಪಕ್ಷದಲ್ಲಿ ಹೀಗಾಗುವ ಸಂಭವ ಕಡಿಮೆ. ಆದ್ದರಿಂದ ಬಲ್ಬು ಬಹುಕಾಲ ಬಾಳುವುದು. ವಿಶ್ವಕಿರಣಗಳಿಗೆ ಸಂಬಂಧಿಸಿ ಪ್ರಯೋಗಗಳಲ್ಲಿ ಉಪಯೋಗಿಸುವ ಅಯಾನೀಕರಣ ಕೋಷ್ಠಗಳಲ್ಲಿ ಗಾಳಿಯ ಬದಲು ಕ್ರಿಪ್ಟಾನ್ ಇದ್ದರೆ ಕೋಷ್ಠದ ಕಾರ್ಯದಕ್ಷತೆ 40 ಪಟ್ಟು ಹೆಚ್ಚುವುದು.

ಉಲ್ಲೇಖಗಳು[ಬದಲಾಯಿಸಿ]

  1. Patrignani, C.; et al. (Particle Data Group) (2016). "Review of Particle Physics". Chinese Physics C. 40 (10): 100001. Bibcode:2016ChPhC..40j0001P. doi:10.1088/1674-1137/40/10/100001. See p. 768
  2. Gavrilyuk, Yu. M.; Gangapshev, A. M.; Kazalov, V. V.; Kuzminov, V. V.; Panasenko, S. I.; Ratkevich, S. S. (4 March 2013). "Indications of 2ν2K capture in 78Kr". Phys. Rev. C. 87 (3): 035501. Bibcode:2013PhRvC..87c5501G. doi:10.1103/PhysRevC.87.035501.
  3. "How Products are Made: Krypton". Retrieved 2006-07-02.

ಹೆಚ್ಚಿನ ಓದಿಗೆ[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]