ಆಲಿಗುಂ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಲಿಗುಂ ಕುಣಿತ[ಬದಲಾಯಿಸಿ]

ಜಾನಪದ ಕುಣಿತ ಪ್ರಕಾರಗಳಲ್ಲಿ ಆಲಿಗಂ ಕುಣಿತ ಕೂಡ ಒಂದು.

ಇತಿಹಾಸ[ಬದಲಾಯಿಸಿ]

ಉತ್ತರ ಕನ್ನಡ ಜಿಲ್ಲೆಯ ಕೆಲವು ಕಡೆ ಸಿದ್ದಿ ಎಂಬ ಜನಾಂಗವಿದೆ. ಬಣ್ಣ ಮತ್ತು ಆಕಾರದಲ್ಲಿ ಈ ಜನರು ಸ್ಥಳೀಯ ಜನರಿಗಿಂತ ಭಿನ್ನ. ಎತ್ತರವಾದ ದೃಡವಾದ ನೀಳದೇಹ, ದಪ್ಪನೆಯ ತುಟಿಗಳು, ಮೊಟಕಾದ ಮೂಗು, ಗುಂದು ತಲೆಯ ಮೇಲೆ ಮಿಂಚುವ ಗುಂಗುರು ಕೂದಲು, ಹೊಳೆಯುವ ದೊಡ್ಡ ಕಣ್ಣುಗಳು, ಅಚ್ಚ ಕಪ್ಪು ಬಣ್ಣದಿಂದ ಕೂಡಿರುವ ಇವರ ಮುಖಲಕ್ಷಣ ನೋಡಿದರೆ ಆಫ್ರಿಕಾನೀಗ್ರೋ ಮೂಲದವರಾಗಿರಬೇಕೆಂಬುದು ಸ್ಪಷ್ಟವಾಗುತ್ತದೆ. ಇವರು ಹಿಂದೆ ಭಾರತಕ್ಕೆ ಬಂದಿದ್ದ ಪೋರ್ಚುಗೀಸರ ಸೈನ್ಯದಲ್ಲಿ ಇದ್ದಿರಬಹುದು. ಯುದ್ದ ಸಮಯದಲ್ಲಿ ಅಲ್ಲಲ್ಲಿ ಚದುರಿ ಜೀವನೋಪಾಯಕ್ಕಾಗಿ ಬಂದು ಇಲ್ಲಿ ನೆಲೆಸಿರಬೇಕು. ಬಹು ಕಾಲದಿಂದಲೂ ಕೂಲಿಯಿಂದಲೇ ಜೀವನ ಸಾಗಿಸುತ್ತಿದ್ದ ಇವರು ಇತ್ತಿಚೆಗೆ ವ್ಯವಸಾಯವನ್ನು ಕೈಗೊಂಡಿದ್ದಾರೆ. ಅವರ ನಡೆ ನುಡಿ ವೇಷ ಭೂಷಣಗಳಲ್ಲೂ ಸುಧಾರಣೆಯಾಗುತ್ತಿದೆ.

ಆಚರಣೆ[ಬದಲಾಯಿಸಿ]

ಸಿದ್ದಿ ಜನಾಂಗ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಈ ಮೂರು ಧರ್ಮಗಳಲ್ಲಿ ಹಂಚಿ ಹೋಗಿದ್ದಾರೆ. ಹೀಗೆ ಬೇರೆ ಬೇರೆ ಧರ್ಮಗಳನ್ನು ಸ್ವೀಕರಿಸಿದರೂ ಕೂಡ ಅವರಲ್ಲಿ ಅನೇಕ ಸಾಮಾಜಿಕ ಪದ್ದತಿಗಳನ್ನು ಮತ್ತು ಜೀವನ ವಿಧಾನಗಳು ಹೆಚ್ಚಾಗಿ ಹಿಂದುಗಳಂತೆಯೇ ಇರುವುದು ಕಂಡುಬರುತ್ತದೆ. ಕರ್ಬಲಾ ಕದನದಲ್ಲಿ ಮಡಿದ ವೀರ ಹುತಾತ್ಮಸ್ಮರಣೆ ಮೊಹರಂ ಹಬ್ಬ. ಈ ಹಬ್ಬದಲ್ಲಿ ರೂಡಿಯಲ್ಲಿರುವ ಅಲಾವಿ ಕುಣಿತದ ಒಂದು ರೂಪ ಮುಸಲ್ಮಾನ ಸಿದ್ದಿಗಳಲ್ಲಿ ಪ್ರಚಾರದಲ್ಲಿರುವ 'ಆಲಿಗುಂ ಕುಣಿತ', ಕುಣಿಯುವಾಗ ಗತ್ತಿಗೆ ಸರಿಯಾಗಿ ಹೆಜ್ಜೆ ಹಾಕುತ್ತಾ 'ಆಲಿ, ಆಲಿ. ಆಲಿ ಎಂದು ಕೂಗುವುದರಿಂದ ಈ ಕುಣಿತ 'ಆಲಿಗುಂ ಕುಣಿತ ಆಗಿದೆ. ಇವರು ಅಡಿಗಡಿಗೆ ಆಲಿ, ಆಲಿ ಎನ್ನುವುದು ಹಜರತ್ ಅಲಿಯವರ ಸ್ಮರಣೆಯೆಂದು ಊಹಿಸಬಹುದು. ಮಹಮ್ಮದೀಯರ ಹಿರಿಯ ದೇವರಾದ 'ಪೀರ್' ದೇವರ ಉತ್ಸವದ ಸಂದರ್ಭದಲ್ಲಿ 'ಕುಣಿತದ ಸೇವೆ' ಸಲ್ಲಿಸುವ ಸಂಪ್ರದಾಯವಾಗಿ ಇದು ಬೆಳೆದುಬಂದಿದೆ. 'ಕುಣಿತದ ಹರಕೆ'ಯನ್ನು ಹೊರುವ ರೂಡಿ ಕೂಡ ಇವರಲ್ಲಿದೆ.

ವೇಷಭೂಷಣ[ಬದಲಾಯಿಸಿ]

"ಆಲಿಗಂ" ಕುಣಿತದಲ್ಲಿ ಭಾಗವಹಿಸುವ ಕಲಾವಿದರು ಮೊಣಕಾಲಿನವರೆಗೆ ಬರುವ ಬಟ್ಟೆಯನ್ನು ಸೊಂಟಕ್ಕೆ ಸುತ್ತಿಕೊಳ್ಳುತ್ತಾರೆ. ಇಲ್ಲದೆ ಚಡ್ಡಿ ಹಾಕುತ್ತಾರೆ. ಮುಖಕ್ಕೆ ಮತ್ತು ಬರಿ ಮೈಗೆ 'ಶೇಡಿ' ಎಂದು ಕರೆಯಲಾಗುವ ಬಿಳಿ ಮಣ್ಣಿನ ಪುಡಿಯನ್ನು ನೀರಿನಲ್ಲಿ ಕಲಿಸಿ ಹಚ್ಚಿಕೊಂಡು ಬೆರಳ ಉಗುರಿನಿಂದ ಅಲ್ಲಲ್ಲಿ ಕೆದರಿಕೊಳ್ಳುವುದರಿಂದ ಮೈ ತುಂಬಾ ಬಿಳಿಬಟ್ಟೆಯ ಪಟ್ಟೆಗಳನ್ನು ಬಳಿದಂತೆ ಇರುತ್ತದೆ. ಇದೇ ಒಂದು ವಿಚಿತ್ರ ವೇಷದಂತೆ ಕಾಣುತ್ತದೆ. ತಲೆಗೆ ಹುಲ್ಲಿನಿಂದ ತಯಾರಿಸಿದ ಉಂಗುರಾಕಾರದ ಬಿದಿರು ಕಡ್ಡಿಯ ಬಳೆಗೆ ಮೂರು ಪ್ರತ್ಯೇಕ ಕಡ್ಡಿಗಳನ್ನು ಸಮಾಂತರವಾಗಿ ಸಿಕ್ಕಿಸಿ, ಆ ಕಡ್ಡಿಗಳ ತುದಿಯನ್ನು ಸೇರಿಸಿ ಕಟ್ಟಿ, ಹೂವಿನ ಕೈಮಾಲೆಯನ್ನು ಕಡ್ಡಿಗಳಿಗೂ ಸುತ್ತುಬಳೆಗೂ ಸುತ್ತಿ ತಯಾರಿಸಿದ ಒಂದು ವಿಶಿಷ್ಟ ನಮೂನೆಯ ತಲೆ ದೊಡಿಗೆಯನ್ನು ಧರಿಸುತ್ತಾರೆ. ಸೊಂಟಕ್ಕೆ ಘಂಟೆ ಪಟ್ಟಿಯನ್ನು ಕಟ್ಟಿಕೊಂಡಿರುತ್ತಾರೆ. ನಾರಿನ ದಾರಕ್ಕೆಸಾಲಾಗಿ ಸಣ್ಣ ಘಂಟೆಗಳನ್ನು ಜೋಡಿಸಿ ಈ ಪಟ್ಟಿಯನ್ನು ಹೆಣೆದಿರುತ್ತಾರೆ. ಒಂದು ಪಟ್ಟಿಯಲ್ಲಿ ಸುಮಾರು ೧೦ ರಿಂದ ೧೨ ಘಂಟೆಗಳಿರುತ್ತವೆ. ಕೈಯಲ್ಲಿ ನಾರಿನಿಂದ ತಯಾರಿಸಿದ ಚಾಟಿಯನ್ನು ಹಿಡಿದಿರುತ್ತಾರೆ. ಈ ಕುಣಿತದಲ್ಲಿ ಎಷ್ಟು ಜನರಾದರು ಇರಬಹುದು. ಆದರೆ ಸಾಮಾನ್ಯವಾಗಿ ಕುಣಿಯುವುದು ಉಂಟು.

ಕುಣಿತದ ನೋಟ[ಬದಲಾಯಿಸಿ]

ಆಲಿಗುಂ ಕುಣಿತದವರು ಬಂದರೆಂದರೆ ಪುಕ್ಕಲು. ಮಕ್ಕಳು ಆ ವಿಚಿತ್ರ ವೇಷಭೂಷಣ ನೋಡಿ ಹೆದರಿ ಓಡಿಹೋಗುವುದುಂಟು. ಕುಣಿತಕ್ಕೆ ಹಿನ್ನಲೆಯಾಗಿ ವಾದ್ಯಗಳೆ ಇಲ್ಲಾ. ಕಲಾವಿದರು ಸೊಂಟಕ್ಕೆ ಕಟ್ಟಿ ಕೊಂಡ ಘಂಟೆಯ ನಾದದ ಗತ್ತಿಗೆ ಕಾಲುಗಳನ್ನು ಹಿಂದಕ್ಕೆ ಮುಂದಕ್ಕೆ ಚಂಗಿಸುತ್ತಾ ಮುಷ್ಠಿಗೊಡಿದ ಕೈಗಳನ್ನು ಮೇಲಕ್ಕೆತ್ತಿ ಅರ್ಧ ಮುದುರಿ ಹಿಡಿದು ಸುತ್ತ ತಿರುಗುತ್ತಾ 'ಆಲಿ ಆಲಿ ಆಲಿ ...'ಎಂದು ಕೂಗುತ್ತಾ ಕುಣಿಯುವರು. ಇವರ ಕುಣಿತಕ್ಕೆ ತಕ್ಕಂತೆ ಘಂಟೆಗಳು 'ಗಣಗಣ' ಸದ್ದು ಮಾಡಿ ವಿಶಿಷ್ಠ ಹಿಮ್ಮೇಳ ಒದಗಿಸುವವು. ಕೆಲವು ನಿಮಿಷಗಳು ಕುಣಿದ ನಂತರ ಕುಣಿತದವರು ಮಧ್ಯೆ ಮಧ್ಯೆ ಕುಣಿತ ನಿಲ್ಲಿಸಿ ಚಾಟಿಯಿಂದ ಮೈಗೆ ಹೊಡೆದು ಕೊಳ್ಳುತ್ತಾರೆ. ನಂತರ ಮತ್ತೆ ಕುಣಿತ ಆರಂಭವಾಗುತ್ತದೆ. 'ಆಲಿಗುಂ' ಕುಣಿತ ಕೇವಲ ಮನರಂಜನೇಯ ಕಲೆ. ಪೀರ್ ಹಬ್ಬದ ಸಂದರ್ಭದಲ್ಲಿ ಕಲಾವಿದರು ಮನೆ ಮನೆಯ ಮುಂದೆ ಆಲಿಗುಂ ಕುಣಿದು ಅವರು ಕೊಡುವ ದವಸ ಧಾನ್ಯವನ್ನು ಪಡೆದು ಹಬ್ಬ ಮಾಡಿ ಸಂತೋಷದಿಂದ ಊಟ ಮಾಡುತ್ತಾರೆ.

ಉಲ್ಲೇಖ[ಬದಲಾಯಿಸಿ]

  1. ಗೊ.ರು. ಚನ್ನಬಸಪ್ಪ, ಕರ್ನಾಟಕ ಜನಪದ ಕಲೆಗಳು, ಪುಟ: ೭-೮.