ವಿಷಯಕ್ಕೆ ಹೋಗು

ಜನಪದ ವಾದ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೆಜ್ಜೆನಾದ - ಕರ್ನಾಟಕ ಜಾನಪದ ಲೋಕದ ವಸ್ತುಸಂಗ್ರಹಾಲ
ಸೋಮನ ಕುಣಿತ
ಡೊಳ್ಳು ಕುಣಿತ

ಮಾನವನ ಸ್ವಭಾವ, ಮಾತು ಬುದ್ಧಿಶಕ್ತಿ ಗಾಯನ ಇವುಗಳೆಲ್ಲ ಯಾವ ಕ್ರಮದಲ್ಲಿ ಬೆಳೆವಣಿಗೆಯಾದುವೆಂದು ಹೇಳುವುದು ಕಷ್ಟ. ಆದರೆ ಮಾತಿನ ಜೊತೆಯಲ್ಲಿ ಅಥವಾ ಮಾತುಗಳಿಗಿಂತಲೂ ಮುಂಚಿತವಾಗಿಯೇ, ರಾಗ ಹಾಡು ಗಾಯನಗಳಲ್ಲಿ ಅವನಿಗೆ ಅಭಿರುಚಿಯುಂಟಾಗಿರಬಹುದೆಂದು ಊಹಿಸಲು ಅವಕಾಶವಿದೆ. ಜನಪದ ವಾಙ್ಮಯ, ಸಂಸ್ಕೃತಿ ಮತ್ತು ಪರಂಪರೆಯಲ್ಲಿ ನಾದ-ಗಾನ-ತಾಳ-ಲಯಗಳಿಗೆ ಪ್ರಧಾನಸ್ಥಾನ. ಗ್ರಾಮೀಣ ಜನತೆ, ಗುಡ್ಡಗಾಡಿನವರು ಆದಿವಾಸಿಗಳು ತಮ್ಮ ಭಾವನೆಗಳನ್ನು ಹಾಡುಗಬ್ಬಗಳು ತ್ರಿಪದಿಗಳು ಲಾವಣಿಗಳು ಕೋಲಾಟದ ಪದಗಳು ಮುಂತಾದ ಕಲಾವಿಧಾನದಿಂದಲೇ ಪ್ರಕಟಿಸುತ್ತಾರೆ. ಮಾತಿಗಿಂತ ಗಾಯನ ಯಾವಾಗಲೂ ಹೆಚ್ಚು ಮನೋಹರ ಮತ್ತು ಹೃದಯಂಗಮ. ಹಳ್ಳಿಗಾಡಿನ ಜನಕ್ಕೆ ಗಾಯನ ಸಂತೋಷವನ್ನು ಕೊಡುವ ವಸ್ತು ಮಾತ್ರವೇ ಅಲ್ಲ; ಅವರ ಕೆಲಸಗಳಲ್ಲಿ ಸಹಾಯಕವಾಗಿ ಅವರ ಕಾರ್ಯವನ್ನು ಸುಲಭ ಮಾಡುವ ಕಲೆಯೂ ಆಗಿದೆ. ರೈತರಂತೆ ಬಯಲಿನಲ್ಲಿ, ನದಿಯ ತೀರದಲ್ಲಿ, ಸದಾ ನೀರು ಹರಿಯುವ ನಾಲೆ ದಡದಲ್ಲಿ, ಹಸಿರು ಹೊಲಗದ್ದೆ ತೋಟಗಳಲ್ಲಿ ಕೆಲಸ ಮಾಡುವವರಿಗೆ, ಪ್ರಕೃತಿಯ ಚೈತನ್ಯ ಮತ್ತು ಉತ್ಸಾಹದಿಂದ, ಹಾಡು, ಬಾಯಿಂದ ತಾನೇ ತಾನಾಗಿ ಹೊರಡುತ್ತದೆ (ನೋಡಿ- ಕೆಲಸದ-ಹಾಡುಗಳು). ಯಾತದಿಂದ ನೀರೆತ್ತುವಾಗ, ಭಾರವೆಳೆವಾಗ, ದೊಡ್ಡ ದೊಡ್ಡ ದಿಮ್ಮಿಗಳನ್ನೂ ಕಲ್ಲುಚಪ್ಪಡಿಗಳನ್ನೂ ಸಾಗಿಸುವಾಗ, ಗಾಡಿ ಹೊಡೆಯುವಾಗ ಹೆಂಗಳೆಯರು ಹೊಲಗದ್ದೆಗಳಲ್ಲಿ ಕೆಲಸ ಮಾಡುವಾಗ, ರಾಗಿ ಬೀಸುವಾಗ ಜೊತೆಗೆ ಗಾಯನವಿದ್ದರೆ ಕೆಲಸದ ಆಯಾಸ ತೋರುವುದೇ ಇಲ್ಲ. ನಮ್ಮ ಜನಪದಕ್ಕಂತೂ ಸಂಗೀತ ಜೀವನದ ಸಂತತಸಖಿ. ಮದುವೆ ಸಾವು ಹಬ್ಬ ಹರಿದಿನ ಜಾತ್ರೆ ದೇವರ ಉತ್ಸವ ಯಾವುದಕ್ಕೂ ಸಂಗೀತ ಬೇಕೇ ಬೇಕು. ಯಕ್ಷಗಾನ, ಬಯಲಾಟ, ಬೊಂಬೆಯಾಟ ಇನ್ನೂ ಉಳಿದ ನಾನಾ ವಿಧಗಳಾದ ಜನಪದ ಆಟಗಳು ಮನೋರಂಜನೆ ಮುಂತಾದ ವಿನೋದಗಳು ಸಂಗೀತ ಮಯವಾಗಿಯೇ ಇರುತ್ತದೆ.[]

ಶ್ರುತಿ ಮತ್ತು ಲಯ

[ಬದಲಾಯಿಸಿ]

ಯಾವ ಸಂಗೀತಕ್ಕೂ ಶ್ರುತಿ ಮತ್ತು ಲಯ ಮುಖ್ಯವಾದುವು. ಜನಪದ ಸಂಗೀತಗಾರರಿಗೆ ಶ್ರುತಿ ಲಯ ತಾಳ ಇವು ಮೂರು ಮುಖ್ಯ. ಅವರಿಗೆ ಶ್ರುತಿಯ ಜ್ಞಾನ ಬಹಳ ಚೆನ್ನಾಗಿರುತ್ತದೆ. ಶ್ರುತಿಗೆ ತಮ್ಮ ಧ್ವನಿಯನ್ನು ಹೊಂದಿಸಿಕೊಳ್ಳುವುದರಲ್ಲಿ ಅವರು ಬಹಳ ನಿಪುಣರು. ಲಯ ತಾಳ ಸರಿಯಾಗಿ ಇಲ್ಲದಿದ್ದಲ್ಲಿ ನಾನಾವಿಧದ ಸಂಕೀರ್ಣ ಚಲನೆಗಳುಳ್ಳ ಕೋಲಾಟದಂಥ ಆಟವನ್ನು ಆಡುವುದೇ ಕಷ್ಟ. ಲಯ ಜ್ಞಾನವಿಲ್ಲದವನಿಗೆ ಕೋಲಾಟದಲ್ಲಿ ಕೋಲಿಗೆ ಕೋಲು ತಾಕುವ ಬದಲು, ಅವನ ತಲೆ ಸೊಂಟ ತೊಡೆಗಳಿಗೆ ತಗಲಬಹುದು. ಹೆಣ್ಣುಮಕ್ಕಳು ಬೀಸುವ ಕಲ್ಲಿನ ಶ್ರುತಿಗೆ ಧ್ವನಿಯನ್ನು ಅಳವಡಿಸುತ್ತಾರೆ. ಬೊಂಬೆಯಾಟ ಮುಂತಾದುವುಗಳಲ್ಲಿ ಸಾಧಾರಣವಾಗಿ ಒಂದು ಕಂಚಿನ ತಟ್ಟೆಯ ಮೇಲೆ ಲೋಹದ ಕಡ್ಡಿ ಅಥವಾ ಲಾಳದ ಕಡ್ಡಿಯನ್ನು ಇಟ್ಟು ಕೆಳ ಮುಂದಾಗಿ ನೀವುತ್ತಿದ್ದರೆ, ಒಂದು ಬಗೆಯ ಶ್ರುತಿ ಹೊರಡುತ್ತದೆ.

ಹೀಗೆ ಸಂಗೀತ, ಗಾನ, ನಾದಗಳನ್ನು ಪ್ರೀತಿಸುವ ಹಳ್ಳಿಗರು ನಾನಾ ಬಗೆಯ ವಿನೋದಗಳನ್ನೂ ಕುಣಿತಗಳನ್ನೂ ಆಟಗಳನ್ನೂ ಸೃಷ್ಟಿಸಿ ಆಡಿ ಅನುಭವಿಸಿ ಆನಂದಗೊಳ್ಳುತ್ತಾರೆ. ಅವರ ಸಂಗೀತಕ್ಕೆ ಪೋಷಕಗಳಾಗಿ ಅವರು ಬಗೆಬಗೆಯ-ಮಿಡಿಯುವ ಊದುವ ಬಡಿಯುವ-ವಾದ್ಯಗಳನ್ನು ಸೃಷ್ಟಿಮಾಡಿಕೊಂಡಿದ್ದಾರೆ. ಸಂಗೀತವಿಲ್ಲದೆ ಯಾವ ಕುಣಿತವೂ ಇಲ್ಲವಷ್ಟೆ. ಒಂದೊಂದು ಬಗೆಯ ಆಟ ಕುಣಿತ ಮೇಳಗಳಲ್ಲಿ ಒಂದೊಂದು ನಾಲ್ಕು ಹತ್ತು ಹೀಗೆ ಸಂಗೀತವಾದ್ಯಗಳಿರುತ್ತವೆ. ಹಾಡುವ ಕುಣಿಯುವ ಜನಪದ ಮೇಳಗಳ ಸಂಖ್ಯೆ ಈಗಲೇ ಕಡೆಯ ಪಕ್ಷ ಅರವತ್ತಕ್ಕೂ ಮಿಕ್ಕಿವೆ. ಅವುಗಳಲ್ಲೆಲ್ಲ ವಾದ್ಯಗಳನ್ನು ಉಪಯೋಗಿಸುತ್ತಾರೆ. ಇಂಥ ಆಟಗಳಿಗೆ ಇಂಥ ವಾದ್ಯಗಳನ್ನೇ ಉಪಯೋಗಿಸಬೇಕೆಂಬ ವಾಡಿಕೆ ಇದೆ.

ವೈವಿಧ್ಯ

[ಬದಲಾಯಿಸಿ]

ಈಗ ದೊರೆಯುವ ಜನಪದ ವಾದ್ಯಗಳಲ್ಲಿ ಸಾಕಷ್ಟು ವೈವಿಧ್ಯವಿದೆ.[]

ಊದುವ ವಾದ್ಯಗಳು

[ಬದಲಾಯಿಸಿ]

ತಂಬೂರಿ ಕಿನ್ನರಿ ಏಕನಾದ ಇವು ತಂತಿವಾದ್ಯಗಳು. ಶ್ರುತಿಗೆ ಸಹಾಯಕವಾಗುವುದರಿಂದ, ಇವನ್ನು ಎಲ್ಲ ಸಂದರ್ಭದಲ್ಲಿಯೂ ಉಪಯೋಗಿಸಬಹುದು.[] ಆದರೆ ಸಾಧಾರಣವಾಗಿ, ಸೋಬಾನೆ ಪದ ಹಾಡುವಾಗ, ಗದ್ದೆ ನಾಟಿ ಹಾಕುವಾಗ, ಪದಗಳಿಗೆ ಯಾವ ಶ್ರುತಿಯೂ ಇರುವುದಿಲ್ಲ. ಒಬ್ಬರಿಗೊಬ್ಬರು ಅಥವಾ ಒಂದು ಗುಂಪಿಗೆ ಎದುರು ಗುಂಪಿನವರು ಧ್ವನಿಕೊಟ್ಟುಕೊಂಡು ಹಾಡುತ್ತಾರೆ. ಓಲಗ, ತುತ್ತೂರಿ, ಕೊಂಬು, ಕಹಳೆ, ಮುಖವೀಣೆ, ಕೊಳಲು, ಪಿಳ್ಳಂಗೋವಿ, ಶಂಖ ಮುಂತಾದುವು ಊದುವ ವಾದ್ಯಗಳು.[]

ಬಡಿಯುವ ವಾದ್ಯಗಳು

[ಬದಲಾಯಿಸಿ]

ತಮ್ಮಟೆ, ಹರೆ, ದುಡಿ, ಡೊಳ್ಳು, ಜೌಡಿಕೆ, ನಗಾರಿ, ಕಣಿ, ಕುಣಿಮಿಣಿ, ಢಾಲಿ, ಕೋಲು, ಹುಯಿಲು, ತಮಟೆ, ಚಂಡೆ, ಹೆಬ್ಬರೆ, ಮದ್ದಳೆ, ಡವಣೆ ಡಂಕ, ಡೋಲು, ಕರಡಿಮಜಲು-ಮುಂತಾದುವು ಬಡಿಯುವ ವಾದ್ಯಗಳು.

ಬಡಿಯುವ ಊದುವ ನುಡಿಸುವ ವಾದ್ಯಗಳು

[ಬದಲಾಯಿಸಿ]

ಕರಡಿಮಜಲು ಈಶ್ವರಪೂಜೆಗೆ ಮುಖ್ಯ. ವೀರಗೀತಕ್ಕೂ ಬೇಕು. ಬಳೆ, ಗೆಜ್ಜೆ, ತಾಳ, ಗಂಟೆ, ಕೋಲು, ಜಾಗಟೆ ಇವು ಕಂಚಿನ ವಾದ್ಯಗಳು. ಚೌಡಿಕೆ ಹಾಡಿಕೆಯಲ್ಲಿ ನಾಲ್ಕು ಜನರಿರುತ್ತಾರೆ. ಸಣ್ಣನಗಾರಿ ಉಪಯೋಗಿಸುತ್ತಾರೆ. ಕೊಡವರು ಶ್ರುತಿಗೆ, ಚೀಣಿ ಎಂಬ ವಾದ್ಯವನ್ನೂ ಲಂಬಾಣಿಗರು ಉಪ್ಪಂಗವನ್ನೂ (ಕಂಚಿನ ತಟ್ಟೆ, ಕಡ್ಡಿ) ಬಳಸುತ್ತಾರೆ. ಈ ವಾದ್ಯಗಳನ್ನೆಲ್ಲ ಬಡಿಯಲು ಊದಳು ನುಡಿಸಲು ಅನೂಚಾನವಾಗಿ ಬಂದ ಪದ್ಧತಿ ಇದೆ.

ಹುತ್ತರಿ, ಸುಗ್ಗಿ ಕುಣಿತದ ವಾದ್ಯಗಳು

[ಬದಲಾಯಿಸಿ]

ಇವುಗಳ ಜೊತೆಗೆ ಕೊಡವರು ಸುಗ್ಗಿ ಕುಣಿತ ಮತ್ತು ಹುತ್ತರಿ ಕುಣಿತಗಳಲ್ಲಿ ಉಪಯೋಗಿಸುವ ಓಲಗ, ತಮಟೆ ಮುಂತಾದ ವಾದ್ಯಗಳೂ ಇವೆ. ಗಂಟೆಯನ್ನು ಗಂಟೆ ಹೆಳವರು ಪದ ಹೇಳುವಾಗ ಉಪಯೋಗಿಸುತ್ತಾರೆ.

ಡೊಳ್ಳು ಕುಣಿತದ ಡೊಳ್ಳು ಧ್ವನಿ - ಜಾನಪದ ಲೋಕ

ಡೊಳ್ಳಿನ ವಾದ್ಯ

[ಬದಲಾಯಿಸಿ]

ೊಳ್ಳಿನ ವಾದ್ಯದಲ್ಲಿ ನಾಲ್ಕು ಐದು ದಪ್ಪ ಡೊಳ್ಳುಗಳನ್ನು ಒಟ್ಟಿಗೆ ಹೊಡೆಯುವುದರಿಂದ ಭಯಂಕರವಾದ ಅತ್ಯುತ್ಸಾಹಯುತವಾದ ಸದ್ದು ಉಂಟಾಗುತ್ತದೆ. ಈ ಎಲ್ಲ ವಾದ್ಯಗಳನ್ನೂ ಸಾಧಾರಣವಾಗಿ ಜಾತ್ರೆಗಳಲ್ಲಿ ದೇವತಾ ಮೆರವಣಿಗೆ ರಥೋತ್ಸವಗಳಲ್ಲಿ ಕೇಳಬಹುದು. ಆಗ, ಅವೆಲ್ಲವೂ ಏಕಕಾಲದಲ್ಲಿ ಬಾರಿಸಲ್ಪಟ್ಟಾಗ ಅಲ್ಲಿನ ಒಟ್ಟು ಶಬ್ದ, ಅಂತರಿಕ್ಷವನ್ನೇ ಭೇದಿಸುವುದು. ಒಂದೆಡೆ ಹರಿಜನರ ಓಲಗ ತಮಟೆ, ಹೆರೆ ತಾಳ ಹೆಬ್ಬರೆ ಕುಣಿಮಿಣಿ ಮುಂತಾದವು ಮತ್ತೊಂದೆಡೆ ಡೊಳ್ಳು. ಅವನ್ನು ಭೇದಿಸಿಕೊಂಡು ದಾಸಯ್ಯಗಳ ತುತ್ತೂರಿ ಭಾಂಕಿ ಶಂಖ ಜಗಟೆಗಳ ಶಬ್ದ. ಅವೆಲ್ಲವನ್ನೂ ಮೀರಿ ಕೊಂಬಿನ ಶಬ್ದ. ಕೊಂಬು ಅತ್ಯಂತ ಮನೋಹರವಾದ ವಾದ್ಯ. ಅದರ ಆಕಾರವೇ ಸೊಗಸಾಗಿದೆ. ಪ್ರಾರಂಭದಲ್ಲಿ ಚಿಕ್ಕದಾಗಿ ಮುಂದೆ ದಪ್ಪವಾಗಿ ಬಾಗಿ ಅಲ್ಲಿಂದ ಮುಂದೆ ಇನ್ನೂ ದಪ್ಪವಾಗಿ ಕೊನೆಯಲ್ಲಿ ಬಾಯನ್ನು ಗಾಳಿಗೆ ತೆಗೆದಿರುತ್ತದೆ. ಸಾಮಾನ್ಯವಾಗಿ ಇಡಿಯ ಕೊಂಬನ್ನು ಮೂರು ಭಾಗ ಮಾಡಿ ಮೂರನ್ನೂ ಬೇರ್ಪಡಿಸಿ ಇಟ್ಟಿರುತ್ತಾರೆ. ಊದುವಾಗ ಮಾತ್ರ ಮೂರನ್ನೂ ಕಮಾನಿನಂತೆ ಸೇರಿಸಿ, ಸಣ್ಣ ತುದಿಯನ್ನು ಬಾಯಲ್ಲಿಟ್ಟುಕೊಂಡು ಊದುತ್ತಾರೆ. ಆಗ ಅದರಿಂದ ನಾದ ಹೊರಟು, ಬಾಗಿ ಬಾಗಿ ನಾಲ್ಕನೆಯ ಸ್ವರವನ್ನು ಮುಟ್ಟಿ, ಪೂರ್ಣಕಂಠದಲ್ಲಿ ಮೊರೆದು ಮೊಳಗಿ, ಧ್ವನಿ ಅಂತರಿಕ್ಷಕ್ಕೆ ಮುಟ್ಟುತ್ತದೆ. ಅದೊಂದು ವಿಚಿತ್ರವಾದ ಅನುಭವ. ಅದನ್ನು ಕೇಳಿದರೆ ರೋಮಾಂಚನವಾಗುವುದು. ಅದರಲ್ಲಿ ಇಂಥ ಧ್ವನಿ ಹೊರಡಿಸಲು ಅನುಭವವುಳ್ಳ ನಿಪುಣ ಊದುಗಾರ ಬೇಕು. ಶಂಖ ಮತ್ತು ಜಾಗಟೆಗಳ ಶಬ್ದವು ಹಾಗೆಯೇ ಮನೋಹರ. ಜನಪದ ವಾದ್ಯಗಳಲ್ಲಿ, ಶಂಖದಲ್ಲಿಯಂಥ ಘನಸ್ವರ ಮತ್ತಾವುದರಿಂದಲೂ ಹೊರಡುವುದಿಲ್ಲ. ಜಾಗಟೆ ಸಹ, ಹುರುಪುಗೊಳಿಸುವ ವಾದ್ಯ. ಶಂಖವನ್ನೂ ಜಾಗಟೆಯನ್ನೂ ದೇವಸ್ಥಾನಗಳಲ್ಲಿ ಉಪಯೋಗಿಸುತ್ತಿರುವುದು ಜನಪದಕ್ಕೆ ವೈದಿಕರು ಸಲ್ಲಿಸುತ್ತಿರುವ ಕೃತಜ್ಞತೆಯೆನ್ನಬಹುದು.

 ವಿಶಿಷ್ಟ ಪಂಗಡದವರ ವಾದ್ಯ

[ಬದಲಾಯಿಸಿ]

ಕೆಲವು ವಿಶಿಷ್ಟ ಪಂಗಡದವರು ತಮತಮಗೆ ವಿಶಿಷ್ಟವಾದ ವಾದ್ಯಗಳನ್ನು ಮಾತ್ರ ಉಪಯೋಗಿಸುತ್ತಿರುವುದನ್ನು ಗಮನಿಸಬೇಕು. ಕೊಡವರು ಬೆಳಕಾಟದಲ್ಲಿ (ಬೆಳದಿಂಗಳಿನಲ್ಲಿ ಆಡುವ ಆಟವಿರಬೇಕು) ದುಡಿ ಎಂಬ ಚರ್ಮವಾದ್ಯವನ್ನು ಉಪಯೋಗಿಸುತ್ತಾರೆ. ಚೌಗಟದಲ್ಲಿ ಶ್ರುತಿ, ಸಣ್ಣನಗಾರಿ, ತಾಳಗಳು ಬಳಕೆಯಲ್ಲಿವೆ.

  1. ಚೌಡಿಕೆ ಎಂಬ ವಾದ್ಯವನ್ನು ಚೌಡಿಕೆಯವರು ಮಾತ್ರ ಉಪಯೋಗಿಸುತ್ತಾರೆ. ಅದರಿಂದಲೇ ಆ ವಾದಕ್ಕೆ ಆ ಹೆಸರು.
  2. ಚೋಮನ ಕುಣಿತ ಅಥವಾ ಚಾಮನ ಕುಣಿತವನ್ನು ಕುಣಿಯುವಾಗ ತಮಟೆ, ಹೆರೆ, ಗೆಜ್ಜೆ, ಕೈಯಲ್ಲಿ ಚಾವಟಿ ಇರಬೇಕು. ಕಾರವಾರದ ಕಡೆ ಜಾಗಟೆ ಸಹ ಇರುತ್ತದೆ.
  3. ಡೊಳ್ಳುಮೇಳದವರು, ಐದು ಆರು ಡೊಳ್ಳುಗಳನ್ನು ಜೊತೆಗೆ ತಾಳವನ್ನೂ ಉಪಯೋಗಿಸುತ್ತಾರೆ. ಡೊಳ ಕುಣಿತದವರು ಡೊಳ್ಳು ವಾದ್ಯವನ್ನು ಹೊಟ್ಟೆಗೆ ಕಟ್ಟಿಕೊಂಡು, ತುದಿಗೆ ಬಟ್ಟೆ ಕಟ್ಟಿದ ಕೋಲಿನಿಂದ ಎರಡು ಕಡೆಯೂ ಹೊಡೆಯುತ್ತಾರೆ. ಹೆರೆಯನ್ನು ಬರಿ ಮರದ ತುಂಡಿನಿಂದ ತಿಕ್ಕಿದರೆ ಭರ್ ಭರ್ ಎಂದು ಸದ್ದಾಗುತ್ತದೆ. ಕುಣಿಮಿಣಿಯನ್ನು ಹೊಟ್ಟೆಗೆ ಕಟ್ಟಿಕೊಂಡು ಎರಡು ಕೈಗಳಿಂದಲೂ ಎರಡು ಸಣ್ಣ ಕಡ್ಡಿಗಳಿಂದ ಹೊಡೆಯುತ್ತಾರೆ. ಅದು ಸಣ್ಣ ಧ್ವನಿಯಲ್ಲಿ ಶಬ್ದ ಮಾಡುತ್ತದೆ. ಡಂಕದಲ್ಲಿ ಎರಡು ತಮಟೆಗಳಿರುತ್ತವೆ. ಸೊಂಟಕ್ಕೆ ಕಟ್ಟಿಕೊಂಡು ಎರಡೂ ಕೈಗಳಿಂದಲೂ ಸಣ್ಣಕೋಲಿನಲ್ಲಿ ಹೊಡೆಯುತ್ತಾರೆ. ತುತ್ತೂರಿ, ಭಾಂಕಿ, ಕೊಂಬು ಇವು ಹಿತ್ತಾಳೆ ವಾದ್ಯಗಳು, ತಾಳಗಳು ಕಂಚಿನವು. ಮೇಲೆ ಹೇಳಿದ ಎಲ್ಲ ವಾದ್ಯಗಳೂ ಈಗಲೂ ನಮ್ಮ ಜನತೆಯಲ್ಲಿ ಬಳಕೆಯಲ್ಲಿವೆಯಾದರೂ ಕೆಲವು ಕಾಣದಾಗುತ್ತಿದೆ.
  4. ಎಲ್ಲಮ್ಮನ ಜಾತ್ರೆಯಲ್ಲಿ ಜೋಗಿತಿಯರು ಕಾಲಿಗೆ ಗೆಜ್ಜೆ ಕಟ್ಟಿ ವಾಡಿಕೆ ವಾದ್ಯವನ್ನು ಬಳಸುತ್ತಾರೆ.
  5. ಗುಮಟೆ ವಾದ್ಯವನ್ನು ಗುಮಟೆ ಪಂಥದವರು ತಂಬೂರಿ ಶ್ರುತಿಯೊಂದಿಗೆ ಉಪಯೋಗಿಸುತ್ತಾರೆ.

ಹೆಚ್ಚಿನ ವಿವರಗಳಿಗೆ

[ಬದಲಾಯಿಸಿ]

ಜನಪದ ಸಂಗೀತ ಮತ್ತು ವಾದ್ಯಗಳ ವಿಷಯದಲ್ಲಿ ಹೆಚ್ಚಿನ ಮಾಹಿತಿ ಬಯಸುವವರು ಈ ಕೆಳಗಿನ ಲೇಖನಗಳನ್ನು ನೋಡಬಹುದು.

  1. ಕಂಸಾಳೆ
  2. ಕೋಲಾಟ
  3. ಕರ್ಣಾಟಕ ಜಾನಪದ ನೃತ್ಯ
  4. ಕರ್ನಾಟಕ ಜಾನಪದ ಸಂಗೀತ
  5. ಗಮಟೆ ಪದಗಳು
  6. ಗೊಂದಲಿಗರು
  7. ಚೌಡಿಕೆ
  8. ಜುಂಜಪ್ಪ
  9. ಜೋಗಿಗಳು

ಉಲ್ಲೇಖ

[ಬದಲಾಯಿಸಿ]
  1. http://shodhganga.inflibnet.ac.in/bitstream/10603/99965/9/09_chapter%204.pdf
  2. http://kanaja.in/?p=41828
  3. http://kanaja.in/?p=41823
  4. http://kanaja.in/?p=41825
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: