ವಿಷಯಕ್ಕೆ ಹೋಗು

ಗಂಟೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಂಟೆಯು ಪೂಜಾದಿಕಾಲಗಳಲ್ಲಿ ಬಾರಿಸುವ ಒಂದು ಬಗೆಯ ಶೋಭನ ವಾದ್ಯ. ಶುದ್ಧ ಕಂಚಿನಿಂದಾದ ಇದನ್ನು ಬಾರಿಸಿದಾಗ ಓಂಕಾರ ಸ್ಫುರಿಸುತ್ತದೆಂದು ಹೇಳಲಾಗಿದೆ. ಗಂಟೆ ಎಂಬುದು ಸಂಸ್ಕೃತದ ಘಂಟಾ ಎಂಬುದರ ತದ್ಭವ ರೂಪ. ಶೈವಾಗಮದಲ್ಲಿ ತಿಳಿಸಿರುವಂತೆ ಸಾಮಾನ್ಯ ಗಂಟೆಯ ಎತ್ತರ 5''. ಎತ್ತರದಷ್ಟೇ ವಿಸ್ತಾರ. ಓಷ್ಠ ನಾಲ್ಕು ಗೋದಿಯ ದಪ್ಪ. ಶಿಖರ 1''. ಕತ್ತು ½''. ನಾಲಗೆ 1'. ಮಹಾ ಘಂಟೆಯಾದರೆ ಎತ್ತರ 7''. ವಿಸ್ತಾರ 8''. ಶಿಖರ 2''.

ಗಂಟೆಯ ನಾಲಗೆಯಲ್ಲಿ ಸರಸ್ವತಿಯೂ, ಮುಖದಲ್ಲಿ ಬ್ರಹ್ಮನೂ, ಹೊಟ್ಟೆಯಲ್ಲಿ ರುದ್ರನೂ, ದಂಡದಲ್ಲಿ ವಾಸುಕಿಯೂ, ತುದಿಯಲ್ಲಿ ಚಕ್ರವೂ ಅಧಿದೇವತೆಗಳಾಗಿ ನೆಲೆಸಿದ್ದಾರೆ. ಘಂಟಾಸ್ವನವನ್ನು ನಾದಬ್ರಹ್ಮವೆಂದು ಸಂಬೋಧಿಸಲಾಗಿದೆ. ಇವರನ್ನು ಪೂಜಿಸಿ ಬಳಿಕ ಗಂಟೆಯನ್ನು ಹೊಡೆಯಬೇಕು. ಉಪಯೋಗಿಸುವಾತ ತನ್ನ ನಾಭಿಯ ಕೆಳಗೆ ಬರುವಂತೆ ಗಂಟೆಯನ್ನು ಹಿಡಿದುಕೊಂಡು ಹೊಡೆಯಬಾರದು. ಗಂಟೆಯ ಧ್ವನಿಯಲ್ಲಿ ಒಡಕಾಗಲಿ ಮರ್ಮರ ಘರ್ಘರ ಶಬ್ದಗಳಾಗಲಿ ಇರಬಾರದು. ಗಂಟೆಯ ಮೇಲೆ ಹನುಮಂತ, ಚಕ್ರ, ಗರುಡ, ವೃಷಭಶೂಲ, ಕಮಲ ಇತ್ಯಾದಿ ಚಿಹ್ನೆಗಳಿರುವುದುಂಟು.[]

ಯಾವೊಂದು ಶುಭಕಾರ್ಯವನ್ನಾಗಲೀ ಘಂಟಾನಾದವಿಲ್ಲದೆ ಪ್ರಾರಂಭಿಸುವಂತಿಲ್ಲ. ಪದ್ಮಪುರಾಣದಲ್ಲಿ ಸರ್ವವಾದ್ಯಮಯಿ ಘಂಟಾವಾದ್ಯಭಾವೇ ನಿಯೋಜಯೇತ್ ಎಂದು ತಿಳಿಸಿರುವಂತೆ ಗಂಟೆ ಸರ್ವಮಂಗಳ ವಾದ್ಯಗಳ ಪ್ರತೀಕವಾಗಿದೆ. ಸ್ಕಾಂದ ಪುರಾಣದಲ್ಲಿ ಘಂಟಾನಾದೇನ ದೇವೇಶಃ ಪ್ರೀತೋಭವತಿ ಕೇಶವಃ ಎಂದಿದೆ. ನಾಗಾರಿ ಚಿಹ್ನಿತಾ ಘಂಟಾ ರಥಾಂಗೇನಾ ಸಮನ್ವಿತಾ ವಾದನಾತ್ ಕುರುತೇನಾಶಂ ಜನ್ಮಮೃತ್ಯು ಭಯಾ ನಿ ಚ ಎಂಬ ಆರ್ಯೋಕ್ತಿಯೂ ಇದೆ. ಇದರಂತೆ ಭಗವಂತನ ನಿತ್ಯ ಕಿಂಕರನಾದ ಗರುಡ ಇಲ್ಲವೆ ಚಕ್ರದಿಂದ ಅಂಕಿತವಾದ ಗಂಟೆಯ ನಾದದಿಂದ ಭಗವಂತ ಪ್ರೀತನಾಗುತ್ತಾನಾಗಿ ಜನ್ಮಮೃತ್ಯು ಭಯಗಳು ತಪ್ಪುತ್ತವೆ. ದೇವೀ ಮಹಾತ್ಮ್ಯದಲ್ಲಿ ಹಿನಸ್ತಿ ದೈತ್ಯತೇಜಾಂಸಿ ಸ್ವನೇನಾಪೂರ್ಯ ಯಾ ಜಗತ್ ಸಾ ಘಂಟಾಪಾತುನೋ ದೇವೀ ಪಾಪೇಭ್ಯೋಃ ಸುತಾನಿವ ಎಂದಿದೆ. ಇದರಂತೆ ಘಂಟಾನಾದದಿಂದ ಮನಸ್ಸಿನಲ್ಲಿರುವ ರಾಕ್ಷಸೀಭಾವನೆಗಳು ದೂರೀಕೃತವಾಗಿ ದೈವೀಭಾವನೆಗಳು ಅವಿರ್ಭವಿಸುತ್ತವೆ. ಓಂಕಾರನಾದ ಸಹಿತ ಘಂಟಾಧ್ವನಿರೂಪ ವರ್ಣಶಕ್ತಿಯಿಂದ ವರ್ಣಘಟಕಮಂತ್ರಗಳೂ ತನ್ನಿಷ್ಟದೇವತೆಗಳು ಎಚ್ಚರಗೊಳ್ಳುವುದರಿಂದ ದೇವಪೂಜಾರಂಭ ಕಾಲದಲ್ಲಿ ಗಂಟೆಯನ್ನು ಪೂಜಿಸಿ ಬಳಿಕ ಧ್ವನಿ ಮಾಡಬೇಕು. ಈ ಕಾರಣದಿಂದ ಗಂಟೆಯನ್ನು ಮಂತ್ರಮಾತಾ ಎಂದು ಕರೆಯುತ್ತಾರೆ. ಸಚ್ಚಿದಾನಂದ ಸಾಕ್ಷಾತ್ಕಾರಕ್ಕೆ ಮೂಲವಾದ ನಾದ ತತ್ತ್ವದ ಬಾಹ್ಯಪ್ರಯೋಗವಾಗಿ ಗಂಟೆ ಬಳಕೆಗೆ ಬಂದಿತೆಂದೂ ಕ್ರಮೇಣ ದೇವತಾಲಾಂಛನವೆಂಬ ಗೌರವವನ್ನು ಹೊಂದಿ ಪೂಜಾರ್ಹವಾಯಿತೆಂದೂ ಹೇಳಲಾಗಿದೆ. ಘಂಟನಾದವಿಲ್ಲದ ಪೂಜೆ ಇಲ್ಲ. ಪೂಜಾಕಾಲವನ್ನು ಬಿಟ್ಟು ಇತರ ಕಾಲಗಳಲ್ಲಿ ಘಂಟಾನಾದವಿಲ್ಲ.

ದೇವಾರ್ಚನೆ, ಆವಾಹನೆ, ಧೂಪ, ದೀಪ, ಅರ್ಘ್ಯ, ನೈವೇದ್ಯ, ಜಪ, ಸ್ತುತ್ಯವಸಾನ, ಪೂರ್ಣಾಹುತಿ, ವಿಷ್ವಕ್ಸೇನಾರ್ಚನೆ, ಗಣಪತಿ ಪೂಜೆ, ಬಲಿಪ್ರದಾನ-ಈ ಕಾಲಗಳಲ್ಲಿ ಘಂಟಾನಾದ ಮಾಡಬೇಕು. ಘಂಟಾನಾದ ಎಚ್ಚರಿಸುವುದು ಮಾತ್ರವಲ್ಲದೆ ಸರ್ವವಿಘ್ನಗಳನ್ನೂ ನಾಶಪಡಿಸಿ ಮಂಗಳವನ್ನುಂಟುಮಾಡುತ್ತದೆ.[]

ಗಂಟೆಯನ್ನು ಆಗಮೋಕ್ತಪ್ರಕಾರದಲ್ಲಿ ಪ್ರತಿಷ್ಠೆ ಮಾಡಿ ಬಳಿಕ ಉಪಯೋಗಿಸಬೇಕು. ಅಸಂಸ್ಕೃತ ಗಂಟೆಯನ್ನು ಬಾರಿಸುವುದರಿಂದ ಪೂಜೆ ನಿಷ್ಫಲವಾಗುತ್ತದೆ. ಗಂಟೆಯನ್ನು ಬಾರಿಸುವುದಕ್ಕೆ ಮೊದಲು

ಆಗಮಾರ್ಥಂತು ದೇವಾನಾಂ ಗಮಾನಾರ್ಥಂತು ರಾಕ್ಷಸಾಂ ಕುರ್ವೇಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ
(ದೇವರ ಆಗಮನಕ್ಕಾಗಿ ರಕ್ಕಸರ ನಿರ್ಗಮನಕ್ಕಾಗಿ ದೇವಸ್ಥಾನದ ಲಾಂಛನವಾದ ಘಂಟಾಧ್ವನಿಯನ್ನು ಮಾಡುತ್ತೇನೆ)

ಎಂದು ಹೇಳಿ ಬಳಿಕ ಘಂಟಾನಾದ ಮಾಡುವುದು ಇಂದಿಗೂ ರೂಢಿಯಲ್ಲಿದೆ.[] ವೈಷ್ಣವ ದೇವಾಲಯಗಳಲ್ಲಿ ಮಹಾನಿವೇದನ ಕಾಲದಲ್ಲಿ ಬಾರಿಸುವುದಕ್ಕಾಗಿಯೇ ಪ್ರತ್ಯೇಕವಾದ ಒಂದು ದೊಡ್ಡ ಗಂಟೆ ಇರುತ್ತದೆ. ಕೆಲವಡೆ ದೇವಮಂದಿರದ ಬಾಗಿಲಿಗೆ ಚಿಕ್ಕ ಚಿಕ್ಕ ಗಂಟೆಗಳನ್ನು ಜೋಡಿಸಿರುವುದುಂಟು. ಕ್ರೈಸ್ತರ ಪ್ರಾರ್ಥನಾ ಮಂದಿರಗಳಲ್ಲಿ ಒಂದು ದೊಡ್ಡ ಗಂಟೆ ಇರುತ್ತದೆ. ಪ್ರಾರ್ಥನೆಗೆ ಮೊದಲು ಎಲ್ಲರೂ ಮಂದಿರಕ್ಕೆ ಬಂದು ಸೇರಲು ಅನುಕೂಲಿಸುವಂತೆ ಈ ಗಂಟೆಯನ್ನು ಬಾರಿಸುತ್ತಾರೆ. ಹಿಂದೂ ದೇವಾಲಯಗಳಲ್ಲೂ ದೇವರ ಮುಂಭಾಗದಲ್ಲಿ ದೊಡ್ಡ ಗಂಟೆಗಳನ್ನು ಕಟ್ಟಿರುತ್ತಾರೆ. ಭಕ್ತರು ದೇವರ ದರ್ಶನಕ್ಕೆ ಹೋದಾಗ ಗಂಟೆ ಬಾರಿಸಿ ಬಳಿಕ ನಮಸ್ಕರಿಸುತ್ತಾರೆ.[]

ಶ್ರೀ ವೈಷ್ಣವ ಆಚಾರ್ಯಪರಂಪರೆಗೆ ಸೇರಿದ ವೇದಾಂತ ದೇಶಿಕರು ಭಗವಂತನ ಘಂಟಾವತಾರವೆಂದು ಪ್ರತೀತಿ. ಶ್ರೀ ವೆಂಕಟೇಶನ ಭಕ್ತರಾದ ಇವರ ಮಾತಾಪಿತೃಗಳಿಗೆ ಬಹುಕಾಲದವರೆಗೆ ಮಕ್ಕಳಿರಲಿಲ್ಲ. ಒಮ್ಮೆ ಇವರು ಮಲಗಿದ್ದಾಗ ತಿರುಪತಿಯ ವೆಂಕಟೇಶನ ಗರ್ಭಗೃಹದ ಗಂಟೆಯನ್ನು ಆಚಾರ್ಯರ ತಾಯಿಯವರು ನುಂಗಿದಂತೆ ಸ್ವಪ್ನವನ್ನು ಕಂಡು ಬೆಳಗ್ಗೆ ದೇವಸ್ಥಾನದಲ್ಲಿ ನೋಡಲಾಗಿ ಆ ಗಂಟೆಯೂ ಇರಲಿಲ್ಲ. ತಮ್ಮ ತಾಯಿಯ ಗರ್ಭದಲ್ಲಿ ತಿರುಪತಿಯ ಶ್ರೀವೆಂಕಟೇಶನ ಘಂಟಾ ಸ್ವರೂಪವಾಗಿ ಶ್ರೀ ಆಚಾರ್ಯರು ಅವಿರ್ಭವಿಸಿ ಘಂಟಾವತಾರವೆಂದು ಪ್ರಸಿದ್ಧರಾಗಿ ಶಿಷ್ಯವರ್ಗದ ದಾನವೀ ಭಾವಗಳನ್ನು ದೂರೀಕರಿಸಿ ಅವರ ಮನಸ್ಸಿನಲ್ಲಿ ದೈವೀಭಾವಗಳನ್ನು ನೆಲೆಗೊಳಿಸುವಂತೆ ಮಾಡಿದ ಮಹಾತ್ಮರಾಗಿದ್ದಾರೆ.

ಲೌಕಿಕ ಬಳಕೆ

[ಬದಲಾಯಿಸಿ]
ತೂಗಾಡಲು ನೇತುಹಾಕಲಾದ ಸಾಮಾನ್ಯ ಗೋಪುರ ಗಂಟೆಯ ಭಾಗಗಳು: 1. ಗಂಟೆಯ ಅಡ್ಡಪಟ್ಟಿ ಅಥವಾ ಆಧಾರ, 2. ತೂಗುಬಳೆಗಳು, 3. ಶಿರ, 4. ಭುಜ, 5. ನಡುಭಾಗ, 6. ಘಂಟಾ ಮುಖ, 7. ಅಂಚು, 8. ಬಾಯಿ, 9. ನಾಲಗೆ, 10. ಬೀಡ್ ಲೈನ್

ಲೌಕಿಕವಾಗಿ ಗಂಟೆಯ ಬಳಕೆ ಎಷ್ಟೆಂಬುದನ್ನು ನೋಡಬಹುದು. ಜಿಲ್ಲಾ ಮತ್ತು ತಾಲ್ಲೂಕು ಕಚೇರಿಗಳಲ್ಲಿ ವೇಳೆ ತಿಳಿಸಲು ದಿನದಿನವೂ ಗಂಟೆ ಬಾರಿಸುವ ಸಂಪ್ರದಾಯವಿತ್ತು. ಇಲ್ಲಿನ ಗಂಟೆಗಳಿಗೆ ಜಾಗಟೆಯ ರೂಪವಿರುತ್ತದೆ. ದಪ್ಪ ಲೋಹದ ತಟ್ಟೆಯೊಂದನ್ನು ಹಗ್ಗದಿಂದ ನೇತುಹಾಕಿದ್ದು ಅದನ್ನು ಲೋಹದ ಇಲ್ಲವೆ ಮರದ ದಾಂಡಿನಿಂದ ಬಾರಿಸುವುದು ವಾಡಿಕೆ. ಶಾಲೆ ಕಾಲೇಜುಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಉಪಯೋಗಿಸುವ ಗಂಟೆಗಳು ಮತ್ತೊಂದು ಬಗೆಯವು. ದಪ್ಪದೊಂದು ಕಬ್ಬಿಣದ ತುಂಡನ್ನು ಹಗ್ಗದಿಂದ ನೇತುಗಟ್ಟಿ ಅದನ್ನು ಸುತ್ತಿಗೆಯಿಂದ ಬಡಿಯುವುದು ಇಲ್ಲಿನ ವಾಡಿಕೆ. ಬೀದಿಯಲ್ಲಿ ವ್ಯಾಪಾರಕ್ಕೆ ಬರುವ ತಿಂಡಿಗಾಡಿಯವನು ನಾಲಗೆಯಿರುವ ದಪ್ಪ ಗಂಟೆಯನ್ನು ಬಾರಿಸಿ ತನ್ನ ಆಗಮನವನ್ನು ಘೋಷಿಸುತ್ತಾನೆ. ರಸಿಕರನೇಕರು ಮನೆಯ ಬಾಗಿಲಿಗೆ ತೋರಣದಂತೆ ಕಿರುಗಂಟೆಯ ಸಾಲನ್ನು ಅಳವಡಿಸುತ್ತಾರೆ. ಬಾಗಿಲ ತೆರೆ ಅಲುಗಿದಾಗ ಗಂಟೆಗಳ ಕಿರುದನಿ ಮನೋಹರವಾಗಿ ಹೊಮ್ಮುತ್ತದೆ. ಜಾನುವಾರುಗಳ ಕೊರಳುಗಳಿಗೆ ಮರದ, ತೆಂಗಿನ ಕರಟದ ಲೋಹದ ಗಂಟೆಗಳನ್ನು ಕಟ್ಟುವ ಅಭ್ಯಾಸ ಹಳ್ಳಿಗರಲ್ಲಿ ಇಂದಿಗೂ ಉಳಿದುಬಂದಿವೆ. ಕಾಡಿನಲ್ಲಿ ಮೇವಿಗಾಗಿ ಸಂಚರಿಸುವ ಪ್ರಾಣಿಗಳಿಗೆ ಇದರಿಂದ ಬಹಳ ಪ್ರಯೋಜನವಿದೆ. ಗಂಟೆಯ ದನಿಯನ್ನು ಸಂಚರಿಸುವ ಪ್ರಾಣಿಗಳು ಒಂದನ್ನೊಂದು ಹಿಂಬಾಲಿಸುತ್ತವೆ. ಕಳೆದುಹೋದ ಪ್ರಾಣಿಯ ಜಾಡು ಹಿಡಿಯುವಾಗಲೂ ಗಂಟೆಯ ದನಿ ಅನುವಾಗುತ್ತದೆ.

ವಾದ್ಯಮೇಳದಲ್ಲಿ ತಾಳದ ಒಂದು ಪ್ರಭೇದವಾಗಿ ಬಳಕೆಯಲ್ಲಿರುವ ತ್ರಿಕೋಣ ಗಂಟೆಯ ಒಂದು ರೂಪವೇ ಆಗಿದೆ. ಒಂದು ದೃಷ್ಟಿಯಲ್ಲಿ ಜಲತರಂಗವೂ ಗಂಟೆಯ ವಿನ್ಯಾಸವನ್ನೇ ಹೋಲುತ್ತದೆನ್ನಬಹುದು. ಫ್ಲ್ಯಾಂಡರ್ಸಿನ ಜನ ಅನೇಕ ಶತಮಾನಗಳಿಂದ ಪ್ರಯೋಗ ನಡಸಿ ಗಂಟೆಗಳಿಂದಲೇ ವಾದ್ಯವೊಂದನ್ನು ತಯಾರಿಸುವ ಪ್ರಯತ್ನ ಮಾಡಿದ್ದರೆನ್ನಲಾಗಿದೆ.

ಗಂಟೆಯ ಸಂಯೋಜನೆ

[ಬದಲಾಯಿಸಿ]

ಸಾಮಾನ್ಯವಾಗಿ ತಾಳದ ಒಂದು ಸುಮಾರು ನಾಲ್ಕು ಭಾಗ ತಾಮ್ರಕ್ಕೆ ಒಂದು ಭಾಗ ತವರ ಮಿಶ್ರಿತವಾಗಿರುವ ಕಂಚಿನಲ್ಲಿ ಗಂಟೆಗಳನ್ನು ತಯಾರಿಸುತ್ತಾರೆ.[] ಕೆಲವೊಮ್ಮೆ ಸತು-ಸೀಸ ಮತ್ತು ಬೆಳ್ಳಿ ಇವನ್ನೂ ಉಪಯೋಗಿಸುವುದುಂಟು. ಗಂಟೆಯಲ್ಲಿ ಬೆಳ್ಳಿಯನ್ನು ಬಳಸುವುದರಿಂದ ಅದರ ಧ್ವನಿ ಮಧುರವಾಗುವುದೆಂಬ ನಂಬಿಕೆ ಬಹಳ ಕಾಲದಿಂದ ಇದ್ದರೂ ಈಗ ಅದನ್ನು ಶಾಸ್ತ್ರವಿದರು ಒಪ್ಪುವುದಿಲ್ಲ. ಗಂಟೆಯ ಆಕೃತಿ, ಅದಕ್ಕೆ ಇರುವ ತಿರುವುಗಳು ಅದರ ಉದ್ದ. ಗಾತ್ರ, ಅಡ್ಡಳತೆ, ವಿವಿಧ ಭಾಗಗಳಲ್ಲಿನ ದಪ್ಪ ಇವನ್ನು ಅನುಭವದಿಂದ ನಿರ್ಧರಿಸುತ್ತಾರೆ.

ಗಂಟೆಯ ಉಬ್ಬಿರುವ ತೆರೆದ ಭಾಗದಲ್ಲಿನ ಹೊರ ಮತ್ತು ಒಳಮುಖಗಳ ವಕ್ರತೆಗಳು ಪರಸ್ಪರ ವಿರುದ್ಧವಾಗಿವೆ. ಇದನ್ನು ಶಬ್ದ ಧನು (ಸೌಂಡ್ ಬೋ) ಎಂದು ಕರೆಯುವರು. ಗಂಟೆಯ ಈ ಭಾಗದ ಸ್ಥೂಲತೆ ಅಲ್ಲಿಯ ಅಡ್ಡಳತೆಯ ಸುಮಾರು ಹನ್ನೆಡನೆಯ ಒಂದು ಭಾಗದಿಂದ ಹದಿನೈದನೆಯ ಒಂದು ಭಾಗದಷ್ಟಿರುವುದು. ಗಂಟೆಯೊಳಗೆ ತೂಗಾಡುತ್ತಿರುವ ಅದರ ನಾಲಗೆ ಭಾಗವನ್ನು ಪ್ರಹರಿಸಿದಾಗ ಶಬ್ದದ ಉತ್ಪತ್ತಿಯಾಗುತ್ತದೆ.

ಪ್ರಪಂಚದ ಪ್ರಮುಖ ಗಂಟೆಗಳು

[ಬದಲಾಯಿಸಿ]

ವಿವಿಧಾಕೃತಿ ಮತ್ತು ಗಾತ್ರಗಳ ಗಂಟೆಗಳಿರುವಂತೆಯೇ ಗಂಟೆಗಳ ತೂಕಗಳಲ್ಲೂ ಭಾರಿ ಪ್ರಮಾಣದ ವೈವಿಧ್ಯ ಕಂಡುಬರುವುದು. ಹಲವಾರು ಟನ್‍ಗಳಷ್ಟು ಭಾರವಾದ ಗಂಟೆಗಳಿಂದ ಹಿಡಿದು ಕೆಲವೇ ಔನ್ಸ್‌ಗಳಷ್ಟು ಹಗುರವಾಗಿರುವ ಗಂಟೆಗಳೂ ಉಂಟು. ರಷ್ಯಾದ ಮಾಸ್ಕೊದ ಕ್ರೆಮ್‍ಲಿನ್ ಆವರಣದಲ್ಲಿರುವ ಜ಼ಾರ್ ಕೊಲೊಕೊಲ್ (ಗಂಟೆಗಳ ರಾಜ) ಎಂಬ ರಷ್ಯನ್ ಗಂಟೆ ಪ್ರಪಂಚದಲ್ಲೇ ಅತಿ ದೊಡ್ಡದೆನ್ನಲಾಗಿದೆ.[] 19' ಎತ್ತರ. 22 1/2' ವ್ಯಾಸವಿರುವ ಇದರ ತೂಕ 200 ಟನ್ನುಗಳಿಗಿಂತಲೂ ಹೆಚ್ಚು.[] ಕ್ರಿ.ಶ. 1733-35ರಲ್ಲಿ ಎರಕವಾದ ಈ ಗಂಟೆಯನ್ನು ಒಂದು ಬಾರಿಯೂ ಬಾರಿಸಲಾಗಲಿಲ್ಲವೆಂಬುದು ಗಮನಾರ್ಹ ಸಂಗತಿ. ಇದನ್ನು ಬಂಧಿಸಿದ್ದ ಆಧಾರಗಳು ಸುಟ್ಟುಹೋದವಾಗಿ ಗಂಟೆ ಮೆಲಿನಿಂದ ಕೆಳಕ್ಕೆ ಬಿದ್ದು ಒಡೆದು ಹೋಯಿತು (1737). ಹಾಗೆ ಬಿದ್ದಾಗ 11 ಟನ್ ತೂಕದ ಅದರ ಭಾಗವೊಂದು ಮುರಿದು ಬಿದ್ದಿತು. ಟ್ರಾಟ್ಸ್‌ಕೋಯ್‍ನಲ್ಲಿನ ಒಂದು ಗಂಟೆಗೆ 171 ಟನ್ ತೂಕವಿದೆ. ಸದ್ಯದಲ್ಲಿ ಬಳಕೆಯಲ್ಲಿರುವ ಗಂಟೆಗಳಲ್ಲಿ ಅತಿದೊಡ್ಡದು (110 ಟನ್) ಮಾಸ್ಕೋನಲ್ಲಿದೆ. ಇತರ ದೊಡ್ಡ ಗಂಟೆಗಳಿವು: ಪೀಕಿಂಗಿನದು (53 ಟನ್), ನಾತ್ರ ದಾಮ್‍ನದು (17 ಟನ್), ಫಿಲಡೆಲ್ಫಿಯದ ಇಂಡಿಪೆಂಡೆನ್ಸ್ ಗಂಟೆ (64 ಟನ್), ವೆಸ್ಟ್‌ಮಿನಿಸ್ಟರಿನ ಬಿಗ್‍ಬೆನ್ (13.5 ಟನ್). ಇದು ಈಗ ಬಿರುಕು ಬಿಟ್ಟಿದೆ.[] ಅತಿ ಎತ್ತರದಲ್ಲಿನ ಗಂಟೆಗಳೆಂದರೆ ನ್ಯೂಯಾರ್ಕಿನ ಮೆಟ್ರೊಪಾಲಿಟನ್ ಲೈಫ್ ಇನ್ಷೂರೇನ್ಸ್ ಗೋಪುರದಲ್ಲಿನ (ಎತ್ತರ 700') ಗಂಟೆಗಳು.[][೧೦] ಇವುಗಳ ಶಬ್ದವೇ ಮೈಲಿಗಳವರೆಗೂ ಕೇಳಿಸುತ್ತದೆನ್ನಲಾಗಿದೆ.

ಗಂಟೆಯ ತಯಾರಿಕಾ ವಿಧಾನ

[ಬದಲಾಯಿಸಿ]

ಗಂಟೆಯ ನಿರ್ಮಾಣಕಾರ್ಯದಲ್ಲಿ ಮೊದಲು ಅದರ ಆಕಾರದ ಅಚ್ಚನ್ನು ಸಿದ್ಧಪಡಿಸಿಕೊಳ್ಳಬೇಕು. ಹೊಸ ಗಂಟೆಯ ರೂಪರೇಖೆಗಳ ನಿರ್ಣಯದ ಬಳಿಕ ಅಚ್ಚಿನ ಒಳಭಾಗವನ್ನು ಇಟ್ಟಿಗೆಯಿಂದ ಕಟ್ಟಿ ಅದರ ಮೇಲೆ ಗಾರೆಯನ್ನು ಲೇಪಿಸಿ ಅದರ ಮೈಯನ್ನು ಬೇಕಾದ ರೂಪಕ್ಕೆ ತರಲಾಗುವುದು. ಇದರ ಆಧಾರದ ಮೇಲೆ ಭಂಗುರವಾದ ಜೇಡಿಮಣ್ಣಿನಲ್ಲಿ ನಕಲಿ ಗಂಟೆಯನ್ನು ನಿರ್ಮಿಸಲಾಗುವುದು. ಅನಂತರ ನಿಜ ಗಂಟೆಯ ಹೊರಭಾಗದಲ್ಲಿರಬೇಕಾದ ಅಲಂಕಾರ, ವಿನ್ಯಾಸ, ಬರವಣಿಗೆ ಮೊದಲಾದುವನ್ನು ನಕಲಿ ಗಂಟೆಯ ಮೇಲೆ ಮೇಣದಲ್ಲಿ ರೂಪಿಸಲಾಗುವುದು. ಈಗ ಎರಕದ ಅಚ್ಚಿನ ಹೊರಭಾಗವನ್ನು ಗಾರೆಯಿಂದ ರಚಿಸಿ ಕಾದ ಕಂಚಿನ ದ್ರವದ ಒತ್ತಡವನ್ನು ತಡೆದುಕೊಳ್ಳುವಂತೆ ಕಬ್ಬಿಣದ ಪೆಟ್ಟಿಗೆಗಳಿಂದ ಈ ಭಾಗವನ್ನು ಬಲಪಡಿಸಲಾಗುವುದು. ಈಗ ಅಚ್ಚಿನ ಒಳ ಮತ್ತು ಹೊರಭಾಗಗಳನ್ನು (ಮಣ್ಣಿನ ನಕಲಿ ಗಂಟೆ) ಚೆನ್ನಾಗಿ ಒಣಗಿಸಿ, ಸುಡುವುದರಿಂದ ಮೇಣ ಕರಗಿ, ಹೊರಬಂದು-ಅಚ್ಚಿನ ಒಳ ಮತ್ತು ಹೊರ ಭಾಗಗಳು ಹೆಚ್ಚು ಗಟ್ಟಿಯಾಗುತ್ತವೆ. ಅಲಂಕಾರ ವಿನ್ಯಾಸ ಬರವಣಿಗೆಗಳ ಋಣ ರೂಪ ಅಚ್ಚಿನ ಹೊರ ಮುಖದ ಒಳಪದರದಲ್ಲಿ ಮುದ್ರಿತವಾಗಿರುತ್ತವೆ. ಈಗ ಹೊರ ಮುಚ್ಚಳವನ್ನು ಹೊರತೆಗೆದು ನಕಲಿ ಗಂಟೆಯನ್ನು ಚಕ್ಕೆ ಎಬ್ಬಿಸಿ ತೆಗೆಯಲಾಗುವುದು. ಮತ್ತೆ ಹೊರ ಭಾಗವನ್ನು ಅದರ ಸ್ಥಾನದಲ್ಲಿ ಭದ್ರಪಡಿಸಿ ನಕಲಿ ಗಂಟೆಯ ಸ್ಥಳದಲ್ಲಿ ಕರಗಿದ ಕಂಚಿನ ದ್ರವವನ್ನು ಸುರಿಯಲಾಗುವುದು. 18 ಟನ್ ಭಾರವುಳ್ಳ ಗಂಟೆಯನ್ನು ನಿರ್ಮಿಸಲು ಕಾದ ಲೋಹದ ದ್ರವವನ್ನು ಸುರಿಯಲು ಸುಮಾರು 15 ಮಿನಿಟುಗಳಾದರೂ ಬೇಕಾಗುವುದು. ಇದು ಆರಲು 36 ಗಂಟೆಗಳು ಬೇಕು. ಅನಂತರ ಅಚ್ಚನ್ನು ತೆಗೆದು ಗಂಟೆಯ ಮೇಲ್ಮೈಗಳಲ್ಲಿರಬಹುದಾದ ಪ್ರಕ್ಷೇಪಗಳನ್ನು ತೆಗೆದು ಹಾಕಿ ಮೇಲ್ಮೈಯನ್ನು ನಯಗೊಳಿಸಿ ಮೆರುಗು ಕೊಡಲಾಗುವುದು. ಗಂಟೆಯ ತಯಾರಿಕೆಯಲ್ಲಿ ಕರಗಿದ ಲೋಹದ್ರವವನ್ನು ಅಚ್ಚಿನೊಳಗೆ ಹೊಯ್ಯುವುದೇ ಅತ್ಯಂತ ಕ್ಲಿಷ್ಟವಾದ ಕಾರ್ಯ. ಬಿರುಕು ಬೀಳದಂತೆಯೂ ಮಧ್ಯೆ ಗಾಳಿ ಸೇರದಂತೆಯೂ ಎಚ್ಚರಿಕೆ ವಹಿಸಬೇಕು. ಇಲ್ಲದಿದ್ದರೆ ಗಂಟೆಯ ಸ್ವರ ಕೆಡುವುದು.

ಅಚ್ಚಿನಿಂದ ಹೊರತೆಗೆದ ಗಂಟೆಯ ಹೊರಮುಖವನ್ನು ಉಜ್ಜುವುದರಿಂದ ಸ್ವರದ ಸ್ಥಾಯಿಯನ್ನು ಎತ್ತರಿಸಬಹುದು. ಒಳಮುಖವನ್ನು ಉಜ್ಜುವುದರಿಂದ ಸ್ವರಸ್ಥಾಯಿಯನ್ನು ಕಡಿಮೆ ಮಾಡಬಹುದು.

ಸಾಮಾನ್ಯವಾಗಿ ಭಾರಿ ಪ್ರಮಾಣದ ಗಂಟೆಯನ್ನು ಅದರ ಶಿಖಾಗ್ರದಲ್ಲಿ ತೂಗುಹಾಕಿ ಗಂಟೆ ಉಬ್ಬಿರುವ ಕೆಳ ತುದಿಯಲ್ಲಿ ಸುತ್ತಿಗೆಯಿಂದ ಬಡಿದು ಶಬ್ದ ಹೊರಹೊಮ್ಮುವಂತೆ ಮಾಡುವರು.

ಗಂಟೆಯಿಂದ ಹೊರಹೊಮ್ಮುವ ಶಬ್ದ

[ಬದಲಾಯಿಸಿ]

ಗಂಟೆಯನ್ನು ಸರಿಯಾದ ರೀತಿಯಲ್ಲಿ ಬಾರಿಸಿದಾಗ ಎರಡು ರೀತಿಯ ಸ್ವರಗಳು ಹೊರಹೊಮ್ಮುತ್ತವೆ.

  1. ಪ್ರಹಾರ ಧ್ವನಿ,
  2. ಗುಂಜನ ಸ್ವರ (ಹಂ ನೋಟ್)

ಗಂಟೆಯಿಂದ ಹೊರ ಹೊಮ್ಮುವ ಶಬ್ದದಲ್ಲಿ ಪ್ರಹಾರ ಧ್ವನಿಯನ್ನು ಬಿಟ್ಟು ಐದು ಮುಖ್ಯ ಅಂಶ ಸ್ವರಗಳನ್ನು ಗುರುತಿಸಬಹುದೆಂದು ತಿಳಿಯಲಾಗಿದೆ. ಇವನ್ನು ನಾಮಿನಲ್, ಪಂಚಮ, ಟರ್ಸ್, ಮೂಲನಾದ ಮತ್ತು ಗುಂಜನಸ್ವರವೆಂದು ಕರೆಯುತ್ತಾರೆ. ಹೆಚ್ಚಿನ ಸ್ಥಾಯಿ ಇರುವ ಇನ್ನೂ ಕೆಲವು ಅಂಶಸ್ವರಗಳಿರುವುದಾದರೂ ಅವು ಬಹು ಬೇಗ ಕಾಲದೊಂದಿಗೆ ನಶಿಸಿಹೋಗುತ್ತವೆ.

ಗಂಟೆಯ ನಿರ್ಮಾಪಕರು ಗಂಟೆಯ ಬೇರೆ ಬೇರೆ ಭಾಗಗಳಲ್ಲಿ ದಪ್ಪವನ್ನು ಯಥೋಚಿತವಾಗಿ ವ್ಯವಸ್ಥಿತಗೊಳಿಸಿ ಲಘುಸ್ವರಗಳು (ಲೋಅರ್) ಸಾಧ್ಯವಾದಷ್ಟು ಮಟ್ಟಿಗೆ ಗೌಣಸ್ವರಗಳಾಗಿರುವಂತೆಯೂ (ಹಾರ್ಮೋನಿಕ್ಸ್), ಗುಂಜನ ಸ್ವರ, ಮೂಲನಾದ ಮತ್ತು ನಾಮಿನಲ್ ಇವು ಮೂರೂ ಅನುಕ್ರಮವಾಗಿರುವ ಅಷ್ಟಮ ಸ್ವರಗಳಾಗಿರುವಂತೆಯೂ, ಮೂಲನಾದ ಮತ್ತು ಪ್ರಹಾರ ಧ್ವನಿ ಇವು ಒಂದೇ ಸ್ಥಾಯಿವುಳ್ಳವಾಗಿರುವಂತೆಯೂ ಅಳವಡಿಸಲು ಪ್ರಯತ್ನಿಸುತ್ತಾರೆ.

ಪ್ರಹಾರ ಧ್ವನಿಯೊಂದರ ಇರುವಿಕೆ ಅತ್ಯಂತ ವಿಲಕ್ಷಣವಾಗಿದ್ದು ಅದು ಇದುವರೆಗೆ ಯಾವುದೇ ರೀತಿಯ ಭೌತ ವಿವರಣೆಗೂ ಸಿಕ್ಕಿಲ್ಲ. ಗಂಟೆಯಿಂದ ಹೊರಹೊಮ್ಮುವ ಅಂಶ ಸ್ವರಗಳನ್ನು ಶ್ರುತಿಕವಲೊಂದರ ಸಹಾಯದಿಂದ ಅನುನಾದದಿಂದ ಹೊರಡಿಸಬಹುದಾದರೂ ಪ್ರಹಾರ ಧ್ವನಿಯನ್ನು ಈ ರೀತಿ ಹೊರಸೆಳೆಯುವುದು ಅಸಾಧ್ಯ. ಅಲ್ಲದೆ ಅನುನಾದಕದ ಸಹಾಯದಿಂದ ಈ ನಾದವನ್ನು ಪತ್ತೆಹಚ್ಚಲು ಸಾಧ್ಯವಿಲ್ಲ ; ಹಾಗೂ ಮತ್ತೊಂದು ಸ್ವರದೊಂದಿಗೆ (ಪ್ರಹಾರಧ್ವನಿ ಮಟ್ಟದಷ್ಟೇ ಇರುವ ವಿಸ್ಪಂದನಗಳನ್ನು (ಬೀಟ್ಸ್) ಉತ್ಪತ್ತಿ ಮಾಡಲು ಸಾಮರ್ಥ್ಯ ಹೊಂದಿರುವುದಿಲ್ಲ.

ಗಂಟೆಯೊಂದರ ಬಡಿತದ ಅನಂತರದ ವಿವಿಧ ಕಾಲಗಳಲ್ಲಿನ ಶ್ರವಣ ಸಂಬಂಧವಾದ ವರ್ಣಪಟಲಗಳನ್ನು ಜೋನ್ಸ್ ಮತ್ತು ಅಲ್ಡರ್‍ಮನ್ ಎಂಬ ವಿಜ್ಞಾನಿಗಳು ನಿರ್ಣಯಿಸಿರುವರು. ಕರ್ಬಿಸ್ ಮತ್ತು ಗಿಯನಿನಿ ಎಂಬ ವಿಜ್ಞಾನಿಗಳು ಟೈಸರ್ ವಿಧಾನದಿಂದ ಅಂದರೆ ವಾಲ್ವ್ ಅಂದೋಲಕ ಮತ್ತು ಧ್ವನಿವರ್ಧಕ ಯಂತ್ರಗಳ ಸಹಾಯದಿಂದ ಪ್ರತಿಯೊಂದು ಅಂಶಸ್ವರವನ್ನು ಗಂಟೆಯಲ್ಲಿ ಹೊರಹೊಮ್ಮಿಸಿ ಗಂಟೆಯ ಕಂಪನ ಮೇಲ್ಮೈಯನ್ನು ಸ್ಟೆತೊಸ್ಕೋಪ್ ಒಂದರಿಂದ ಪರೀಕ್ಷಿಸುವುದರಿಂದ ಗಂಟೆಯ ಮೇಲಿನ ನಿಸ್ಪಂದನ ರೇಖೆಗಳ ಶೋಧನೆಯಲ್ಲಿ ಜಯಪ್ರದರಾಗಿದ್ದಾರೆ.

ಗಂಟೆಯ ಕಂಪನ ರೀತಿಗಳು ಗುಂಡಾದ ತಟ್ಟೆಗಿರುವಂತೆಯೇ ಇರುತ್ತವೆ. ನಿಸ್ಪಂದನ ಅಥವಾ ಸ್ಥಾಯಿರೇಖೆಗಳಿಂದ ಅಂಚು ಪರಸ್ಪರ ವಿರುದ್ಧ ರೀತಿಯಲ್ಲಿ ಕಂಪಿಸುತ್ತಿರುವ ಭಾಗಗಳಾಗಿ ವಿಭಾಗಿಸಲ್ಪಡುವುದು. ಈ ರೀತಿ ವಿಭಾಗಿಸಲ್ಪಟ್ಟ ಭಾಗಗಳು ನಾಲ್ಕಕ್ಕೆ ಕಡಿಮೆ ಇಲ್ಲದಂತೆ ಸಮಸಂಖ್ಯೆಯಲ್ಲಿರುತ್ತವೆ. ಅಂಚಿನ ವಿವಿಧ ಭಾಗಗಳಲ್ಲಿ ತೂಗು ಹಾಕಿದ ಬೆಂಡಿನ ಚಂಡೊಂದನ್ನು ಸ್ಪರ್ಶಿಸುವುದರಿಂದ ಇದನ್ನು ಪರೀಕ್ಷಿಸಬಹುದು. ಅಥವಾ ಗಂಟೆಯನ್ನು ತಲೆಕೆಳಗುಮಾಡಿ ನೀರನ್ನು ತುಂಬಿ ಅಂಚನ್ನು ಕಮಾನೊಂದರಿಂದ ನುಡಿಸುವುದರಿಂದ ನಿಸ್ಪಂದನ ರೇಖೆಗಳನ್ನು ಬಿಟ್ಟು ಉಳಿದೆಲ್ಲ ಬಿಂದುಗಳಿಂದಲೂ ಹೊರಬರುತ್ತಿರುವ ಅಲೆಗಳನ್ನು ಕಾಣಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. "Why Do We Ring Bells or Ghanta in Hindu Temples?". TemplePurohit.com. 12 February 2016. Retrieved 22 April 2021.
  2. "Hindu Scriptures | Vedic lifestyle, Scriptures, Vedas, Upanishads, Smrutis". Hinduscriptures.com. Retrieved 22 April 2021.
  3. "Hindu rituals". Sanskjritdocuments.org, Retrieved on 9 March 2015
  4. "Why do Hindus ring bell in temple". 6 January 2014. Archived from the original on 12 March 2015. Retrieved 4 March 2015.
  5. Cubberly 1989, pp. 15–38.
  6. Slobodskoy, Archpriest Seraphim (1996), "Bells and Russian Orthodox Peals", The Law of God, Jordanville, N.Y.: Holy Trinity Monastery, p. 624, ISBN 978-0-88465-044-7
  7. Radó, Sándor (1928). Guide-book to the Soviet Union (in ಇಂಗ್ಲಿಷ್). International Pub. p. 42. It was recast in 1735 by the Moscow bell-founder Motorin from an old bell weighing 130000 kg., and weighs 201924 kgs
  8. "The Story of Big Ben". Whitechapel Bell Foundry. Archived from the original on 17 February 2018. Retrieved 4 May 2022.
  9. Frost & Sames 1909, p. 387.
  10. "Buildings as Big as a Town". New York Sun. June 28, 1908. p. 22. Archived from the original on February 28, 2022. Retrieved August 13, 2020 – via newspapers.com.


ಗ್ರಂಥಸೂಚಿ

[ಬದಲಾಯಿಸಿ]
  • Cubberly, William H. (1989). "Metals". In Bakerjian, Ramon (ed.). Tool and manufacturing engineers handbook. Dearborn, MI: Society of Manufacturing Engineers. ISBN 978-0-87263-351-3.
  • Frost, H.; Sames, C.M.C. (1909). The Engineering Digest. Technical Literature Company.

ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಗಂಟೆ&oldid=1239369" ಇಂದ ಪಡೆಯಲ್ಪಟ್ಟಿದೆ