ಜಾನಪದ ಲೋಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ಸಾಹಿತ್ಯ ಮತ್ತು ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಕನ್ನಡ ಸಾರಸ್ವತ ಲೋಕದ ಹಿರಿಯರಲ್ಲಿ ಒಬ್ಬರಾದ ಎಚ್.ಎಲ್. ನಾಗೇಗೌಡರದು ಬಹುಮುಖ ಪ್ರತಿಭೆ. ಅವರ ಬಹುದಿನದ ಕಲ್ಪನೆಯ ಕೂಸು ಜನಪದ ಲೋಕ. ಇದರಲ್ಲಿ ಇಡೀ ಗ್ರಾಮೀಣ ಸಂಸ್ಕೃತಿಯ ಹೂರಣವೇ ಅಡಗಿದೆ.

ಜಾನಪದ ಲೋಕ
ಜಾನಪದ ಲೋಕದ ಲಾಂಛನ

ಎಚ್.ಎಲ್. ನಾಗೇಗೌಡರ ಸಂಕ್ಷಿಪ್ತ ಪರಿಚಯ[ಬದಲಾಯಿಸಿ]

 • ಎಚ್.ಎಲ್. ನಾಗೇಗೌಡರ ಹುಟ್ಟೂರು ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಹೆರಗನಹಳ್ಳಿ, ಸಾರಿಗೆ ಸೌಕರ್ಯವನ್ನು ಕಂಡರಿಯದ ಊರು ಇವರದು. ೧೯೧೫ ಫೆಬ್ರವರಿ ೧೧ ರಂದು ದೊಡ್ಡ ಮನೆ ಕುಟುಂಬದಲ್ಲಿ ಜನಿಸಿದರು. ಇವರಿಗೆ ಮೂರು ವಯಸ್ಸಿದ್ದಾಗ ತಾಯಿಯನ್ನು ಕಳೆದುಕೊಂಡರು. ಅಜ್ಜಿ ಮತ್ತು ತಂದೆಯ ನೆರಳಿನಲ್ಲಿ ಬೆಳೆದವರು. ಅವರ ತಂದೆಗೆ ಮಗ ಓದಿ ಅಮಲ್ದಾರನಾಗಬೇಕೆಂಬ ಆಸೆ ಇತ್ತು. ಅದನ್ನು ಮಗನು ನೆರವೇರಿಸಿದನು. ಗೌಡರು ಬಿ.ಎಸ್.ಸಿ. ಮತ್ತು ಎಲ್.ಎಲ್.ಬಿ. ಪದವಿಯನ್ನು ೧೯೪೧ರಲ್ಲಿ ಪಡೆದರು.
 • ಮೈಸೂರು ಸಿವಿಲ್ ಸರ್ವೀಸ್ ಸ್ಪರ್ಧಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರೆವಿನ್ಯೂ ಪ್ರೊಬೇಷನರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಮುಂದೆ ಇವರು ಐ.ಎ.ಎಸ್. ಅಧಿಕಾರಿಯಾಗಿ ಶಿವಮೊಗ್ಗ, ಚಿಕ್ಕ ಮಗಳೂರು, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ತಮ್ಮ ಸೇವೆಯನ್ನು ಸಲ್ಲಿಸಿದರು. ೧೯೬೯ರಲ್ಲಿ ರಾಜ್ಯದ ಲೇಬರ್ ಕಮೀಷನರ್ ಆಗಿ ಬೆಂಗಳೂರು ನಲ್ಲಿಯೇ ನೆಲೆಸಿದರು. ೧೯೭೯ರಲ್ಲಿ ಇವರು ಬಡ ವಿದ್ಯಾವಂತ ಯುವಕರಿಗೆ ಹಲವು ಇಲಾಖೆಗಳಲ್ಲಿ ಉದ್ಯೋಗ ಕೊಡಿಸಿದರು.
 • ೧೯೭೯ರಲ್ಲಿ ಇವರು ನಿವೃತ್ತಿ ಹೊಂದಿದರು. ಶ್ರೀ ನಾಗೇಗೌಡರು ಸುಮಾರು ೫೦ ಕೃತಿಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಉತ್ತಮವಾದವು ಇವರ ಮೊದಲ ಕೃತಿ 'ನಾನಾಗುವೆ ಗೀಜನ ಹಕ್ಕಿ' ಮತ್ತು ಕಥೆ-ವ್ಯಥೆ, ಭೂಮಿಗೆ ಬಂದ ಗಂಧರ್ವ ಬೆಟ್ಟದಿಂದ ಬಟ್ಟಲಿಗೆ, ಪ್ರವಾಸಿ ಕಂಡ ಇಂಡಿಯಾ, ಸರೋಜಿನಿದೇವಿ. ನಾಗೇಗೌಡರ ಕನ್ನಡ ಸಾಹಿತ್ಯ ಮತ್ತು ಅವರ ಕೃತಿಗಳನ್ನು ಕುವೆಂಪುರವರು ಬಹಳವಾಗಿ ಮೆಚ್ಚಿಕೊಂಡಿದ್ದರು.
 • 'ನಾಗಸಿರಿ' ಎಂಬ ಅವರ ಸುಮಾರು ೨೦೦೦ ಪುಟಗಳ ಆತ್ಮ ಚರಿತ್ರೆಯನ್ನು ಡಾ: ಜಿ.ಎಸ್. ಶಿವರುದ್ರಪ್ಪನವರು ಬಹಳವಾಗಿ ಮೆಚ್ಚಿ ಕೊಂಡಿದ್ದರು. ೧೯೭೯ರಲ್ಲಿ ಜಾನಪದ ಲೋಕವನ್ನು ಸ್ಥಾಪಿಸಿದರು. ಶ್ರೀ ನಾಗೇಗೌಡರು, ಬೆಂಗಳೂರು - ಮೈಸೂರು ಮತ್ತು ರಾಮ ನಗರದ ಹೆದ್ದಾರಿ ಬಳಿ ಇದನ್ನು ಸುಮಾರು ೧೫ ಎಕರೆಯಲ್ಲಿ ಸ್ಥಾಪಿಸಿದರು. ಜಾನಪದ ಲೋಕ ಗೌಡರ ಕನಸಿನ, ಕಲ್ಪನೆಯ ಕೂಸಾಗಿದೆ.

ಜಾನಪದ ಲೋಕದಲ್ಲಿ ಪ್ರವಾಸಿಗರು ನೋಡಬಹುದಾದ ಸ್ಥಳಗಳು[ಬದಲಾಯಿಸಿ]

ಮಹಾದ್ವಾರ[ಬದಲಾಯಿಸಿ]

ಜಾನಪದ ಲೋಕವನ್ನು ಪ್ರವೇಶಿಸಿದ ಕೂಡಲೇ ಜನರ ಕಣ್ಣಿಗೆ ಗೋಚರವಾಗುವುದು ಅಲ್ಲಿನ ಪ್ರಸಿದ್ಧ ಬೃಹದಾಕಾರದ ಮಹಾದ್ವಾರ. ಈ ಮಹಾದ್ವಾರವು ದೊಡ್ಡದಾದ ಕೊಂಬು ಕಹಳೆ ಹಾಗೂ ಹರಿಗೆಗಳಿಂದ ಅಲಂಕೃತವಾದ, ಇಪ್ಪತ್ತು ಅಡಿಗಳಷ್ಟು ವಿಶಾಲವಾದ ಮಹಾದ್ವಾರ. ದ್ವಾರದ ಎರಡೂ ಬದಿಯಲ್ಲಿ ಆಕಾಶಕ್ಕೆ ಜಾಚಿನಿಂತ ಇಪ್ಪತ್ತಾರು ಅಡಿ ಎತ್ತರದ ಹಿತ್ತಾಳೆಯ ನಂದಿ ಧ್ವಜಗಳು ಪ್ರೀತಿಯಿಂದ ಜನರನ್ನು ಸ್ವಾಗತಿಸುತ್ತವೆ.

ಲೋಕಮಾತಾ ಮಂದಿರ[ಬದಲಾಯಿಸಿ]

ಜಾನಪದ ಲೋಕದಲ್ಲಿ ನೋಡಬಹುದಾದ ಮತ್ತೊಂದು ವಿಶಿಷ್ಟ ಸ್ಥಳವೆಂದರೆ ಲೋಕಮಾತಾ ಮಂದಿರ. ದುಡಿಮೆಯನ್ನೇ ತಮ್ಮ ಉಸಿರಾಗಿಸಿಕೊಂಡ ಹಳ್ಳಿಗರ ಜೀವನದಲ್ಲಿನ ಸೊಗಡು, ಸೊಗಸು ಸೊಬಗುಗಳಿಗೆ ಕೊರತೆಯಿಲ್ಲ. ಬಗೆ ಬಗೆಯ ಚಿತ್ತಾರ, ಚಿತ್ರಪುಟಗಳು, ಗಿರಿಜನರು ಮತ್ತು ಗ್ರಾಮೀಣರ ಬಳಕೆಯ ವಿಶಿಷ್ಟ ವಸ್ತುಗಳ ವಾಡೆ, ಗುಡಾಣಗಳು, ರೇಷ್ಮೆ ಮಗ್ಗ, ಒಳಮನೆ ವಸ್ತುಗಳು, ಕನಾ‍ಟಕದ ಜನಪದ ಕಲೆಗಳ ಭೂಪಟ, ಛಾಯಾ ಚಿತ್ರಗಳು, ಅಲ್ಲಿನ ಜನರಿಗೆ ಸಂಬಂಧಿಸಿದ ವಸ್ತುಗಳನ್ನು ನಾವು ಜಾನಪದ ಲೋಕದಲ್ಲಿ ಕಾಣಬಹುದು. ಈ ಲೋಕಮಾತಾ ಮಂದಿರದ ಮುಂಭಾಗದಲ್ಲಿ ಜಾನಪದ ಲೋಕದ ಸಂಸ್ಥಾಪಕರಾದ ಶ್ರೀ ಎಚ್. ಎಲ್. ನಾಗೇಗೌಡರ ಕಂಚಿನ ಪುತ್ಥಳಿ ಇರುವ ಮಂಟಪವಿದೆ.

ಚಿತ್ರ ಕುಟೀರ[ಬದಲಾಯಿಸಿ]

ಚಿತ್ರ ಕುಟೀರದಲ್ಲಿ ಹಲವಾರು ಛಾಯಾಚಿತ್ರಗಳು ಪ್ರದರ್ಶಿತಗೊಂಡಿವೆ. ಈ ಕುಟೀರದಲ್ಲಿ ಪ್ರದರ್ಶಿತವಾಗಿರುವ ವಿಶಿಷ್ಟ ಬಣ್ಣದ ಚಿತ್ರಗಳು ನಾಡಿನ ಹಬ್ಬ,ಕಲೆ ಆಚರಣೆ ಜಾತ್ರೆಗಳನ್ನು ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುವಷ್ಟು ಸುಂದರವಾಗಿವೆ. ಶ್ರೀ ಎಚ್.ಎಲ್. ನಾಗೇಗೌಡರು ಕೈಗೊಂಡ ಧ್ವನಿ ಮುದ್ರಣ, ಚಿತ್ರೀಕರಣ, ವಸ್ತು ಸಂಗ್ರಹ ಮೊದಲಾದ ಸನ್ನಿವೇಶದ ಛಾಯಾಚಿತ್ರಗಳು ಹಾಗೂ ಅವರಿಗೆ ಸೇರಿದ ಅಮೂಲ್ಯ ವಸ್ತುಗಳು ಇಲ್ಲಿ ಪ್ರದರ್ಶಿತವಾಗಿವೆ. ಇಲ್ಲಿ ಹಲವಾರು ರೀತಿಯ ಛಾಯಾಚಿತ್ರಗಳು ಜನರನ್ನು ಮನಸೂರೆಗೊಳ್ಳುತ್ತವೆ. ಉದಾ: ಬುಡಕಟ್ಟು ಜನಾಂಗದ ಛಾಯಾಚಿತ್ರಗಳು, ಜನಪದ ರಂಗಭೂಮಿ, ಛಾಯಾಚಿತ್ರಗಳು, ತೆಂಕುತಿಟ್ಟು, ಯಕ್ಷಗಾನದ ಮುಖಾವಶೇಷಗಳ ಛಾಯಾಚಿತ್ರಗಳು.

ಶಿಲ್ಪಮಾಲ[ಬದಲಾಯಿಸಿ]

ಜಾನಪದ ಲೋಕವು ಹಲವಾರು ಪ್ರಸಿದ್ಧ ಐತಿಹಾಸಿಕ ವಸ್ತುಗಳನ್ನು ತನ್ನಲ್ಲಿ ಹೊಂದಿದೆ. ಒಂದು ಸಾವಿರದ ಎರಡು ನೂರು ವಸಂತಗಳಿಗೂ ಹಿಂದಿನ ವೀರಗಲ್ಲು, ಸತಿಕಲ್ಲುಗಳು,ಗೋಲು ಗಲ್ಲುಗಳು, ಶಾಸನ ರಥ, ಫಿರಂಗಿ ಮೊದಲಾದವುಗಳು ತಮ್ಮ ಗತಕಾಲದ ಚರಿತ್ರೆಯನ್ನು ಹೇಳುತ್ತಾ ಇಲ್ಲಿ ನಿಂತಿವೆ. ರಾಜ ಮಹಾರಾಜರುಗಳ ಕಾಲದ ಬೃಹದಾಕಾರದ ಕಲ್ಲಿನ ತೊಟ್ಟಿಗಳೂ ಸಹ ಇಲ್ಲಿವೆ.

ಲೋಕಮಹಲ್[ಬದಲಾಯಿಸಿ]

ಲೋಕಮಹಲ್ ಒಂದು ವಿಶಾಲವಾದ ಎರಡು ಅಂತಸ್ತುಗಳ ಬೃಹತ್ ಕಟ್ಟಡ. ಇಲ್ಲಿ ಹಲವಾರು ರೀತಿಯ ಜಾನಪದ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಯಕ್ಷಗಾನದ ವೇಷಭೂಷಣಗಳು ,ಕೊಡವ ದಂಪತಿಗಳು, ದಾಸಯ್ಯ ,ಗೊರವಯ್ಯಗಳು, ಕಿನ್ನರಿ ಜೋಗಿಯರು, ಲಂಬಾಣಿ, ಸುಗ್ಗಿ ಕುಣಿತದ ಹಾಲಕ್ಕಿ ಒಕ್ಕಲಿಗರು, ವಿವಿಧ ಬಗೆಯ ಆಯುಧಗಳು, ಮದುವೆ ಶಾಸ್ತ್ರಗಳಲ್ಲಿ ಬಳಸುವ ವಸ್ತುಗಳು, ತೂಕ -ಅಳತೆ ಸಾಧನೆಗಳು, ಪೂಜೆ, ಅಡುಗೆಮನೆ ಉಪಕರಣಗಳು ಮುಂತಾದವುಗಳನ್ನು ಸಂಗ್ರಹಿಸಲಾಗಿದೆ. ಕೆಳ ಅಂತಸ್ತಿನಲ್ಲಿರುವ ಭೂತದ ಗ್ಯಾಲರಿಯಲ್ಲಿ ಅಳೆತ್ತರದ ಮರದ ಭೂತದ ವಿಗ್ರಹಗಳು ಮತ್ತು ಕಲ್ಲಿನ ವಿಗ್ರಹಗಳಿವೆ. ಮೇಲಿನ ಅಂತಸ್ತಿನಲ್ಲಿ ನಾಡಿನ ವೈವಿಧ್ಯಮಯ ಜಾನಪದ ವಾದ್ಯಗಳ ಸಮೂಹವು ಪ್ರದರ್ಶಿತಗೊಂಡಿವೆ.

ಜಾನಪದ ಲೋಕದ ಬಹುಮುಖ ಪ್ರದರ್ಶನ[ಬದಲಾಯಿಸಿ]

ಜಾನಪದ ಡಿಪ್ಲೊಮೊ[ಬದಲಾಯಿಸಿ]

ಜಾನಪದ ಲೋಕವು ಹಲವಾರು ಕಲೆ, ವಸ್ತು ಸಂಗ್ರಹಾಲಯ, ಪ್ರಮುಖ ಮಂದಿರಗಳಲ್ಲದೇ, ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿದೆ. ಅನೇಕ ಜಾನಪದ ಸಾಂಸ್ಕೃತಿಕ ವಿಕಾಸ ಕ್ಕಾಗಿ ಹಾಗೂ ಹಲವಾರು ಚಟುವಟಿಕೆಗಳಿಗಾಗಿ ಅದರ ಮುಂದುವರಿಕೆಗಾಗಿ "ಜಾನಪದ ಮಹಾ ವಿದ್ಯಾಲಯ"ಎಂಬ ಹೆಸರಿನಲ್ಲಿ ಅಧ್ಯಯನಾಂಗವನ್ನು ರಚಿಸಿದೆ. ನಾಡೋಜ ಶ್ರೀ ಎಚ್. ಎಲ್. ನಾಗೇಗೌಡರು ೧೯೭೯ರಲ್ಲಿ ಕನಾ‌ಟಕ ಜಾನಪದ ಪರಿಷತ್ತು ಕಳೆದ ೩೩ ವಸಂತಗಳಿಂದಲೂ ಅಪಾರ ಹಾಗೂ ವೈವಿಧ್ಯಮಯ ಚಟುವಟಿಕೆಗಳನ್ನು ನಿ‍ರ್ವಹಿಸುತ್ತಾ ಬಂದಿದೆ.

ಜಾನಪದ ಮಹಾವಿದ್ಯಾಲಯವು ಜಾನಪದ ಸರ್ಟಿಫಿಕೇಟ್ ಮತ್ತು ಜಾನಪದ ಡಿಪ್ಲೊಮೊ ಕೋರ್ಸ್ಗಳನ್ನು ದಶಕಕ್ಕೂ ಹೆಚ್ಚು ಕಾಲದಿಂದ ನಡೆಸಿಕೊಂಡು ಬಂದಿದೆ. ಇಲ್ಲಿನ ತರಭೇತಿಗಳು ಪ್ರತಿ ಭಾನುವಾರದಂದು ಮಾತ್ರ ನಡೆಯುತ್ತವೆ. ಹಲವಾರು ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಕುಣಿತದಲ್ಲಿ ಆಸಕ್ತಿ ಇರುವವರು ಈ ಕೋರ್ಸ್ಗಳಲ್ಲಿ ಭಾಗವಹಿಸಬಹುದಾಗಿದೆ. ಜಾನಪದ ಕುರಿತ ಅಭ್ಯಾಸವೆಂದರೆ ಪರಂಪರೆಯ ಜ್ಞಾನ -ವಿಜ್ಞಾನದ ಅಭ್ಯಾಸವೇ ಆಗಿರುತ್ತದೆ.

ಜನಪದ ಹಾಡುಗಳ ತರಬೇತಿ[ಬದಲಾಯಿಸಿ]

ಕೇಳಿದ ಕೂಡಲೇ ತನ್ನ ದನಿ ಬನಿಗಳಿಂದ ನಡೆ-ನುಡಿಗಳಿಂದ ಮತ್ತು ಗತ್ತು -ಗೈರತ್ತುಗಳಿಂದ ನಮ್ಮನ್ನು ಆಕರ್ಷಿಸಿರುವ ಗ್ರಾಮೀಣರ ಸಂಗೀತವೇ ಜನಪದ ಸಂಗೀತ. ಅದು ಹುಟ್ಟಿದ್ದು, ಪ್ರಕೃತಿಯ ಮಡಿಲಲ್ಲಿ. ಬೆಳೆದದ್ದು ದಿನನಿತ್ಯದ ಕಾಯಕದಲ್ಲಿ. ಫಲವಾದದ್ದು ಮುಗ್ಧ ಹಳ್ಳಿಗರ ಬಾಯಲ್ಲಿ. ಜಾನಪದ ಹಾಡುಗಳನ್ನು ಕಲಿಯುವ ಆಸಕ್ತಿ ಇರುವವರಿಗೆ ಸಂಸ್ಥೆಯು ಯೋಜನೆಗಳನ್ನು ಏರ್ಪಡಿಸಿದೆ. ಈಗಾಗಲೇ ೫೦೦ ಜನರಿಗೆ ಜನಪದ ಸಂಗೀತವನ್ನು ಕಲಿಸಲಾಗಿದೆ.

ಜನಪದ ಕುಣಿತಗಳ ತರಬೇತಿ[ಬದಲಾಯಿಸಿ]

ಸಮೂಹ ಮಾಧ್ಯಮಗಳ ಧಾಳಿಗೊಳಗಾಗಿ ನಶಿಸಿ ಹೋಗುತ್ತಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸಬೇಕೆಂಬ ಮಹಾತ್ವಾಕಾಂಕ್ಷೆಯಿಂದ ಕನ್ನಡ ಪರಿಷತ್ತು ಮತ್ತು ಕನ್ನಡ ಸಂಸ್ಕೃತಿ ಇಲಾಖೆಯ ನೆರವಿನೊಂದಿಗೆ ಜಾನಪದ ಲೋಕದಲ್ಲಿ ಗುರುಕುಲ ಮಾದರಿಯಲ್ಲಿ ಮಯುಕರಿಗೆ ರಂಗದ ಕುಣಿತ ಡೊಳ್ಳು ಕುಣಿತ, ಗೊರವರ ಕುಣಿತ, ಲಂಬಾಣಿ ಕುಣಿತ, ಕೋಲಾಟ ಕಲೆಗಳಲ್ಲಿ ತರಭೇತಿ ನೀಡಲಾಗುತ್ತದೆ. ಜಾನಪದ ಲೋಕದಲ್ಲಿ ತರಭೇತಿ ಹೊಂದಿದ ಡೊಳ್ಳು ಕುಣಿತದ ಕಲಾವಿದರು ನಾಡಿನಾದ್ಯಂತ ಜನಪ್ರಿಯರಾಗಿರುವುದಲ್ಲದೆ, ಹೊರನಾಡುಗಳಲ್ಲಿಯೂ ಜಾನಪದ ಲೋಕದ ಕಲಾ ತರಭೇತಿ ಪಡೆದವರು ಜಯಭೇರಿಯನ್ನು ಬಾರಿಸುತ್ತಿದ್ದಾರೆ.

ಜಾನಪದ ಲೋಕದ ಪರಿಷತ್ತಿನ ಉದ್ದೇಶಗಳು[ಬದಲಾಯಿಸಿ]

 1. ಗ್ರಾಮೀಣ ಜನರ ವೇಷಭೂಷಣಗಳು ಅವರು ಉಪಯೋಗಿಸುತ್ತಿದ್ದ ವಸ್ತುಗಳು, ಕೃಷಿಗೆ ಸಂಬಂಧಪಟ್ಟ ವಸ್ತುಗಳ ಸಂಗ್ರಹ.
 2. ಗ್ರಾಮೀಣ ಜನರ ಗಾದೆಗಳು, ಕಥೆಗಳು, ಬಯಲಾಟ ಮುಖ್ಯವಾಗಿ ಜಾನಪದ ಪತ್ರಿಕೆಯ ಪ್ರಕಟಣೆ.
 3. ಜಾನಪದ ಮೌಲ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸುವುದು. ಜಾನಪದ ವಿಷಯದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾಥಿ‍ಗಳಿಗೆ ಬಹುಮಾನ ನೀಡುವುದು. ಶಾಲಾ ಕಾಲೇಜುಗಳಲ್ಲಿ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದು.
 4. ಜಾನಪದ ಕಲೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು. ಅಲ್ಲಲ್ಲಿ ಜಾನಪದ ಕಲೆಗಳ ಪ್ರದರ್ಶನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಕಲ್ಪಿಸುವುದು.
 5. ಹಳ್ಳಿಯ ಜನರ ಮದುವೆ, ಜಾತ್ರೆ, ತೇರು, ಹಬ್ಬ, ಸಂಪ್ರದಾಯಗಳು ಅವರ ಜೀವನ ಶೈಲಿಯನ್ನು ಸಾಕ್ಷ್ಯ ಚಿತ್ರಗಳ ತಯಾರಿಸುವುದರ ಮೂಲಕ ಜೀವಂತವಾಗಿಡುವುದು.
 6. ಜನಪದ ಸ್ಪರ್ಧೆಗಳು, ಕಲಾ ಮೇಳಗಳನ್ನು ಆಯೋಜಿಸುವುದು.
 7. ಜಾನಪದ ಗೀತೆ ಬಯಲಾಟ, ಡೊಳ್ಳುಕುಣಿತಗಳನ್ನು ರೇಡಿಯೋ ಮತ್ತು ಟಿ.ವಿ.ಗಳಲ್ಲಿ ಪ್ರಸಾರವಾಗಲು ಅನುಕೂಲವಾಗುವಂತೆ ಕಲಾವಿದರನ್ನು ತರಭೇತಿ ಗೊಳಿಸುವುದು.
 8. ಜಾನಪದ ಕಲೆಗಳನ್ನು ಕಲಿಸುವುದಕ್ಕಾಗಿ ಒಂದು ಕಲಾ ಶಾಲೆಯನ್ನು ತೆರೆಯುವುದು.
 9. ಈ ಕಾರಣದಿಂದ ಬೆಂಗಳೂರಿನಲ್ಲಿ ಒಂದು ಜಾನಪದ ಲೋಕವನ್ನು ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ.

ತ್ರೈವಾರ್ಷಿಕ ಜಾನಪದ ಯೋಜನೆ[ಬದಲಾಯಿಸಿ]

ಜಾನಪದ ಪರಿಷತ್ತು ತ್ರೈವಾರ್ಷಿಕ ಜಾನಪದ ಯೋಜನೆಯನ್ನು ರೂಪಿಸಿದ್ದು, ಮೂರು ಹಂತಗಳಲ್ಲಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಉದ್ದೇಶಿಸಿರುತ್ತದೆ. ತ್ರೈವಾರ್ಷಿಕ ಯೋಜನೆಯ ವಿವರಗಳು-

 1. ಜಾನಪದ ಸಂಗೀತ ತರಭೇತಿ.
 2. ಜಾನಪದ ರಂಗಭೂಮಿ ತರಭೇತಿ.
 3. ಜಾನಪದ ಮಾಹಿತಿ ಕೇಂದ್ರ.
 4. ಜಾನಪದ ಕಲೆಗಳ ತರಭೇತಿ.
 5. ಜಾನಪದ ಕ್ರೀಡೆಗಳು.
 6. ಜಾನಪದ ಕಾರ್ಯಗಾರಗಳು.
 7. ಜಾನಪದ ಕಲಾವಿದರ ಗ್ಯಾಲರಿ ನಿರ್ಮಾಣ.
 8. ಜಾನಪದ ಪುಸ್ತಕ ಸಂಗ್ರಹಾಲಯ.
 9. ಬುಡಕಟ್ಟು ಜನಾಂಗಗಳ ಕಲೆಗಳ ಸಂರಕ್ಷಣೆ ಮತ್ತು ತರಭೇತಿ.

ಇನ್ನಿತರ ಕಾರ್ಯ ಚಟುವಟಿಕೆಗಳು[ಬದಲಾಯಿಸಿ]

ಹಿರಿಯ ಜಾನಪದ ಕಲಾವಿದರಿಗೆ ವೈದ್ಯಕೀಯ ನೆರವು[ಬದಲಾಯಿಸಿ]

ಹಳ್ಳಿ ಹಳ್ಳಿಗಳಲ್ಲಿರುವ ಜಾನಪದ ಕಲಾವಿದರ ಬದುಕು ತುಂಬಾ ಕಷ್ಟಕರವಾಗಿದೆ ಬಹುತೇಕ ಮಂದಿಗೆ. ಮನೆ ಮಠವಿಲ್ಲದೇ ಹೊಟ್ಟೆ ಬಟ್ಟೆಗೆ ಇಲ್ಲದೆ ತುಂಬಾ ಪರದಾಡುವಂತಾಗಿದೆ. ಈ ಕಾರಣದಿಂದ ಅವರಿಗೆ ವೈದ್ಯಕೀಯ ನೆರವು ನೀಡಲು ಪರಿಷತ್ತು ಆಲೋಚಿಸಿದೆ.

ಲೋಕೋತ್ಸವ[ಬದಲಾಯಿಸಿ]

ಪ್ರತಿ ವರ್ಷ ಜಾನಪದ ಲೋಕದಲ್ಲಿ ಲೋಕೋತ್ಸವ ನಡೆಸುತ್ತಾ ಬಂದಿದ್ದಾರೆ. ೨,೩ ದಿನ ನಡೆಯುವ ಈ ಉತ್ಸವದಲ್ಲಿ ಜಾನಪದ ಕಲಾವಿದರು ಕಲಾ ಪೋಷಕರು ಮಾಧ್ಯಮ ಪ್ರತಿನಿಧಿ ಗಳು ಬರುತ್ತಾರೆ. ಜಾನಪದ ಕಲಾವಿದರಿಗೆ ಪ್ರಶಸ್ತಿಗಳನ್ನು ನೀಡಲಾಗುವುದು[೧].

ಗಾಳೀಪಟ ಉತ್ಸವ[ಬದಲಾಯಿಸಿ]

ಜಗತ್ತಿನ ಬಹುತೇಕ ಪ್ರಾಚೀನ ಸಂಸ್ಕೃತಿಗಳಲ್ಲಿ ಇದು ಒಂದು. ಇದು ನಶಿಸಿ ಹೋಗಬಾರದೆಂಬ ಉದ್ದೇಶದಿಂದ ಪರಿಷತ್ತು ಗಾಳೀಪಟ ಉತ್ಸವವನ್ನು ೧೯೮೮ರಲ್ಲಿ ಆರಂಭ ಮಾಡಿತು. ಪ್ರತಿ ವರ್ಷ ಆಷಾಢಮಾಸದಲ್ಲಿ ಗಾಳೀಪಟ ಉತ್ಸವವನ್ನು ಏರ್ಪಡಿಸುತ್ತಾರೆ. ಗೆದ್ದವರಿಗೆ ಬಹುಮಾನವನ್ನು ಕೊಡುತ್ತಾರೆ.

ದಸರಾ ಉತ್ಸವ[ಬದಲಾಯಿಸಿ]

ಪ್ರತಿ ವರ್ಷ ಮೈಸೂರಿನಲ್ಲಿ ನಡೆಯುವ ದಸರಾ ಹಬ್ಬದ ಹಾಗೇಯೇ, ಜಾನಪದ ಲೋಕದಲ್ಲಿಯೂ ಸಹ ದಸರಾ ಉತ್ಸವವನ್ನು ನವರಾತ್ರಿಯಲ್ಲಿ ಆಚರಿಸುತ್ತಾರೆ.

ವಾರಾಂತ್ಯದ ಕಾರ್ಯಕ್ರಮಗಳು[ಬದಲಾಯಿಸಿ]

ಪ್ರತಿ ಭಾನುವಾರದಂದು ಜಾನಪದ ಕುಣಿತ, ಹಾಡು, ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಬೆಂಗಳೂರಿನ ಕೇಂದ್ರ ಕಛೇರಿಯಾದ ಜಾನಪದ ಸಿರಿಭವನದಲ್ಲಿ ತಿಂಗಳ ೨ನೇ ಶನಿವಾರದಂದು ಕಾರ್ಯಕ್ರಮಗಳನ್ನು ಆಯೋಜಿಸುತ್ತಾರೆ. ಈ ರೀತಿಯ ಸಾಂಸ್ಕೃತಿಯ ಕಾರ್ಯಕ್ರಮಗಳಿಂದ ಅಳಿದು ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಮತ್ತು ಬೆಳೆಸಿಕೊಂಡು ಹೋಗುವ ಪ್ರಯತ್ನದಿಂದ ಜನಪದ ಕಲಾವಿದರನ್ನು ಪ್ರೋತ್ಸಾಹಿಸಿ ಇದನ್ನು ಮುಂದಿನ ಪೀಳಿಗೆಗಾಗಿ ಕೊಂಡ್ಯೊಯುವ ಮಹಾದಾಸೆ ಹೊಂದಿದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. http://www.prajavani.net/article/ಜಾನಪದ-ಲೋಕ-ಕಣ್ಮನ-ಸೆಳೆದ-ಲೋಕೋತ್ಸವ[ಶಾಶ್ವತವಾಗಿ ಮಡಿದ ಕೊಂಡಿ]