ವಿಷಯಕ್ಕೆ ಹೋಗು

ಚೌಡಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚೌಡಿಕೆ ಎಂಬುದು ಒಂದು ಜನಪದ ವಾದ್ಯ . ಶಕ್ತಿ ದೇವಿಯ ಆರಾಧನೆಯಲ್ಲಿ ದೇವಿಯ ಮಹಿಮೆಯನ್ನು ಸ್ತುತಿಸುವಾಗ ಹಿನ್ನೆಲೆಯ ರೂಪದಲ್ಲಿ ಇದನ್ನು ನುಡಿಸುತ್ತಾರೆ. ಈ ಸಂಪ್ರದಾಯವು ಕರ್ನಾಟಕದ ನಾಲ್ಕು ಮುಖ್ಯ ಕೇಂದ್ರಗಳಲ್ಲಿ ಕಂಡುಬರುವುದು ಅವುಗಳೆಂದರೆ ಬಳ್ಳಾರಿ ಜಿಲ್ಲೆಯ ಉಚ್ಚಂಗಿ, ಶಿವಮೊಗ್ಗ ಜಿಲ್ಲೆಯ ಚಂದ್ರಗುತ್ತಿ, ರಾಯಚೂರು ಜಿಲ್ಲೆಯ ಮುನೀರಾಬಾದ್ (ಹುಲಿಗಿ) ಮತ್ತು ಬೆಳಗಾವಿ ಜಿಲ್ಲೆಯ ಸವದತ್ತಿ. ಈ ಸ್ಥಳಗಳು ಪೌರಾಣಿಕ ಕಥೆಗಳನ್ನು ಒಳಗೊಂಡಿರುವುದು. ಇದರ ಪ್ರಕಾರ ರೇಣುಕೆಯು ನೆಲೆಸಿರುವಂತಹ ಪುಣ್ಯ ಕ್ಷೇತ್ರವಾಗಿ ಪ್ರಸಿದ್ದಿಯನ್ನು ಪಡೆದಿದೆ. ಸವದತ್ತಿಯು ಒಂದು ಪ್ರಸಿದ್ದ ಯಾತ್ರಾ ಸ್ಥಳವಾಗಿ ಮಾರ್ಪಟ್ಟಿರುವುದು ಹಾಗೂ ಜನರನ್ನು ಆಕರ್ಷಿಸುವಂತಹ ತಾಣವಾಗಿದೆ. ಚೌಡಿಕೆಯನ್ನು ನುಡಿಸುವಂತಹ ವ್ಯಕ್ತಿಗಳು ಎಲ್ಲಮ್ಮ ದೇವಿಯ ಸೇವೆಗಾಗಿ ದೀಕ್ಷೆ ಯನ್ನು ಪಡೆದಿರುವರು ಹಾಗೂ ಇವರನ್ನು ’ಜೋಗಿ’ , ’ಜೋಗಿತಿ’ ಎಂದು ಕರೆಯುತ್ತಾರೆ.

ಚೌಡಿಕೆ ಉಗಮದ ಪ್ರಸ್ತಾವನೆಗಳು

[ಬದಲಾಯಿಸಿ]

ಜಮದಗ್ನಿಯ ಆಶ್ರಮದಲ್ಲಿದ್ದ ಕಾಮಧೇನುವನ್ನು ಪಡೆಯಬೇಕೆಂಬ ಆಸೆಯಿಂದ ಕಾರ್ತವೀರ‍್ಯನು ಋಷಿಯನ್ನು ಕೊಂದು ಗೋವನ್ನು ಕೊಂಡೊಯ್ಯುತ್ತಾನೆ. ಋಷಿಯ ಪತ್ನಿಯಾದ ರೇಣುಕೆಯು ದುಃಖದಲ್ಲಿ ರುವಾಗ ಮಗ ಪರಶುರಾಮ ತಾಯಿಯ ದುಃಖವನ್ನು ನಿವಾರಿಸುವುದಕ್ಕಾಗಿ ಕಾರ್ತವೀರ‍್ಯನನ್ನು ಕೊಂದು ಮತ್ತೆ ಕಾಮಧೇನುವನ್ನು ಪಡೆಯುತ್ತಾನೆ. ಕಾರ್ತವೀರ‍್ಯನ ಶರೀರದ ಭಾಗಗಳಿಂದ ಚೌಡಿಕೆ ಎಂಬ ವಾದ್ಯವನ್ನು ರಚಿಸಿ,ನುಡಿಸಿ ತಾಯಿಯ ಮನಸ್ಸಿಗೆ ನೆಮ್ಮದಿಯನ್ನು ಉಂಟುಮಾಡಿದನಂತೆ! ಈ ಕಥೆಯಂತೆ ಕಾರ್ತವೀರ‍್ಯನ ಹೊಟ್ಟೆಯೇ ಚೌಡಿಕೆಯ ಕೊಳಗ . ಕರುಳೇ ತಂತಿ, ಕೈಯೇ ಸರಿಗೋಲು, ಬೆರಳೇ ಬಾರಿಸುವ ಕಡ್ಡಿಯಾಗಿರುವುದು ಕಂಡುಬರುತ್ತದೆ.

ಮತ್ತೊಂದು ಕಥೆಯಂತೆ ಋಷಿಯ ಮಡದಿಯಾದ ರೇಣುಕೆಯ ದಿನನಿತ್ಯದಂತೆ ಸೂರ್ಯೊದಯಕ್ಕೆ ಮೊದಲು ನದಿಯಲ್ಲಿ ಮೀಯಲು ನಂತರ ತಲೆಯ ಮೇಲೆ ಸರ್ಪವನ್ನು ಸಿಂಬೆಯಾಗಿ ಮಾಡಿಟ್ಟು ಕೊಂಡು ಮಡಿಕೆಯಲ್ಲಿ ನೀರನ್ನು ತುಂಬಿಕೊಂಡು ಪತಿಯ ಪೂಜೆಗೆ ತರುತ್ತಿದ್ದಳು. ಒಂದು ದಿನ ಮಡಿಕೆಯನ್ನು ಹೊತ್ತು ಬರುತ್ತಿರುವಾಗ ಗಂಧರ್ವರ ಜಲಕ್ರೀಡೆಯನ್ನು ನೋಡಿ ಮೈ ಮರೆತಳು. ಮಡಿಕೆ ಒಡೆದು ಹೋಯಿತು. ಇದರಿಂದ ಋಷಿಯ ವ್ರತಕ್ಕೆ ಅಡಚಣೆ ಉಂಟಾಯಿತು. ಈ ಕಾರಣದಿಂದ ಪತಿಯ ಶಾಪಕ್ಕೆ ಗುರಿಯಾದ ರೇಣುಕೆಯು ರೋಗಕ್ಕೆ ಒಳಗಾಗಿ ಅಲೆಯುತ್ತಿರುವಾಗ ಚಿಕ್ಕಯ್ಯ ಮತ್ತು ಚೋಗಯ್ಯ ಎಂಬ ಶರಣರನ್ನು ನೋಡಿದಳು. ಅವರ ಕೃಪೆಯಿಂದ ಶಾಪ ವಿಮುಕ್ತಳಾದಳು. ಮುಂದೆ ಮಹಿಮೆಯನ್ನು ಪಡೆದ ಆಕೆಯನ್ನು ಚಿಕ್ಕಯ್ಯ, ಜೋಗಯ್ಯಗಳ ಪರಂಪರೆ ಸ್ತುತಿಸಿದರು . ಆ ಸಂಪ್ರದಾಯವೇ ಚೌಡಿಕೆ.

ಚೌಡಿಕೆ ವಾದ್ಯದ ತಯಾರಿಕೆ

[ಬದಲಾಯಿಸಿ]

ಈ ವಾದ್ಯವು ಮರ, ತಂತಿ , ಚರ್ಮಗಳಿಂದ ಸೇರಿದವು ಆಗಿದೆ.ಹೊನ್ನೆ, ಬೇವಿನ ದಿಮ್ಮಿಯನ್ನು ಕೊರೆದು ಮಾಡಿದ ಒಂದು ಭಾಗವನ್ನು ಕುರಿಯ ಚರ್ಮದ ಒಳಪೊರೆಯಿಂದ ಪೂರ್ಣ ಮುಚ್ಚಿ ಬಿಗಿದಿರುತ್ತಾರೆ. ಕಂಚು, ಹಿತ್ತಾಳೆಯ ಕೊಳಗವನ್ನು ಬಳಸುವುದು ರೂಢಿಯಲ್ಲಿರುವುದು.

ಚೌಡಿಕೆಯ ಸ್ವರೂಪ

[ಬದಲಾಯಿಸಿ]

ಕೊಳಗದ ಉದ್ದ ೧೦,೧೨ ಅಂಗುಲ. ವ್ಯಾಸ ೧೫ ಅಂಗುಲ. ಸುಮಾರು ಎರಡೂವರೆ ಅಡಿ ಉದ್ದದ ಬಿದಿರು ದಂಡವೊಂದನ್ನು ಕೊಳಗದ ಒಂದು ಪಾಶ್ವಕ್ಕೆ ಸಿಕ್ಕಿಸಿರುತ್ತಾರೆ. ಕೊಳಗಕ್ಕೆ ಬಿಗಿದ ಚರ್ಮದ ಮಧ್ಯದಿಂದ ಎಳೆದು ತಂದ ತಂತಿಯನ್ನು ದಂಡದ ತುದಿಗೆ ಎಳೆದು ಕಟ್ಟಿರುತ್ತಾರೆ. ಲಯಕ್ಕೆ ತಕ್ಕಂತೆ ಬಿಗಿ ಸಡಿಲು ಮಾಡುವಂತಿರುವ ಈ ತಂತಿಯನ್ನು ಕೊಳಗದ ಒಳಭಾಗದಲ್ಲಿ ಕೈಯಿಂದ ಅಥವಾ ಕಡ್ಡಿಯಿಂದ ನುಡಿಸಿದಾಗ ನಾದವು ಹೊರಹೊಮ್ಮುತ್ತದೆ.

ಚೌಡಿಕೆಯವರ ವಸ್ತ್ರ ವಿನ್ಯಾಸ

[ಬದಲಾಯಿಸಿ]

ಚೌಡಿಕೆಯ ಜೋಗಯ್ಯನ ವೇಷದಲ್ಲಿರುವ ವ್ಯಕ್ತಿಯು ಕಚ್ಚೆ ಪಂಚೆ, ತಲೆಗೆ ಬಿಳಿಯ ಪೇಟ, ಅಂಗಿಯ ಮೇಲೊಂದು ಕೋಟು, ಹಣೆಯಲ್ಲಿ ಭಂಡಾರ, ಕೊರಳಲ್ಲಿ ಮಣಿ, ಹೆಗಲಲ್ಲಿ ಜೋಳಿಗೆಯನ್ನು ಹೊಂದಿರುವನು. ಜೋಗಿತಿಯಾದರೆ ಕೆಂಪು, ಹಸಿರು ಅಥವಾ ಹಳದಿ ಬಣ್ಣದ ಸೀರೆ, ಕುಪ್ಪಸ, ಕೈತುಂಬ ಬಳೆ, ಹಣೆಯಲ್ಲಿ ಕುಂಕುಮ, ಭಂಡಾರ, ತಲೆತುಂಬ ಹೂವು,ಕಾಲಿಗೆ ಗೆಜ್ಜೆ, ತಲೆಯ ದೇವಿಯ ಪ್ರತೀಕವಾದ ತಾಮ್ರದ ಬಿಂದಿಗೆ. ಇದಕ್ಕೆ ನವಿಲುಗರಿ, ವೀಳೆಯದೆಲೆ ಮೊದಲಾದವುಗಳನ್ನಿಟ್ಟು. ಮುಂಭಾಗಕ್ಕೆ ಯಲ್ಲಮ್ಮನ ಮೂ‌ರ್ತಿ ಇಟ್ಟು ಅಲಂಕಾರ ಮಾಡಿರುತ್ತಾರೆ.

ಚೌಡಿಕೆಯವರ ಕುಣಿತ

[ಬದಲಾಯಿಸಿ]

ಜೋಗಿ, ಜೋಗಿತಿಯರು ಒಟ್ಟಿಗೆ ಕುಣಿಯುವುದು ಹಾಗೂ ಪ್ರತ್ಯೇಕವಾಗಿ ಕುಣಿಯುವ ಬಗೆಯು ಇರುವುದು. ಮೂರು ಜನ ಜೋಗಿತಿಯರಲ್ಲಿ ಒಬ್ಬರು ಕಥೆ ಹೇಳುವುದು ಮತ್ತಿಬ್ಬರು ಅದಕ್ಕೆ ತಕ್ಕ ಹಾಗೆ ಹಿಮ್ಮೆಳದ ರೀತಿಯಲ್ಲಿ ದನಿಗೂಡಿಸಿ ಹಾಡುವುದುಂಟು. ದೇವಿಯ ಶಾಪಕ್ಕೆ ಒಳಗಾದಂತಹ ಗಂಡಸರು ಸೀರೆ ಧರಿಸಿಕೊಂಡು ಚೌಡಿಕೆಯನ್ನು ಬಾರಿಸುತ್ತ ಮೇಳದವರೊಂದಿಗೆ ಭೀಕ್ಷೆಯನ್ನು ಬೇಡುತ್ತ ಜೀವನವನ್ನು ನಡೆಸುತ್ತಾರೆ. ಚೌಡಿಕೆಯ ನಾದ ಶಬ್ದಗಳಿಂದ ದೇಹಶಕ್ತಿಯು ಜಾಗೃತವಾಗಿ ಮತ್ತೆ ಪುರುಷತ್ವ ಪಡೆಯಬಹುದಂತೆ ಎಂಬ ನಂಬಿಕೆಯು ಇರುವುದು. ಸೀರೆ ಧರಿಸಿದಂತಹ ಗಂಡು ಜೋಗಿಗೆ ’ಗಂಡು ಜೋಗಿತಿ’ಯೆಂದು ಕರೆಯುವುದುಂಟು.

ಚೌಡಿಕೆಯವರ ಕಥಾ ಪ್ರಸಂಗ ದಾಟಿ

[ಬದಲಾಯಿಸಿ]

ಇವರು ರೇಣುಕೆಯ ಮಹಿಮೆಯನ್ನು ಹೇಳುವುದರ ಜೊತೆಗೆ ಜನಪದ ಕಥಾ ಪ್ರಸಂಗಗಳನ್ನು ನಡೆಸುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನ ಗಾಯಕನು ಚೌಡಿಕೆ ಹಿಡಿದು ನಿಲ್ಲುತ್ತಾನೆ. ಪಕ್ಕದಲ್ಲಿ ಶೃತಿಗಾಯಕ ಮತ್ತು ಹಿಮ್ಮೇಳಕ್ಕೆ ಇಬ್ಬರು ನಿಂತಿರುತ್ತಾರೆ. ಉದಾಹರಣೆಗೆ: ಪ್ರಧಾನ ಗಾಯಕ......

     "ಆದಿಯಲ್ಲಿ ರೇಣುಕೆಯಾಗಿ
     ತ್ರೇತದೊಳಗೆ ಜಾನಕಿಯಾಗಿ
     ದ್ವಾಪರದಲ್ಲಿ ದ್ರೌಪದಿಯಾಗಿ
     ಕಲಿಯುಗದಲ್ಲಿ ಎಲ್ಲಮ್ಮನೆನಿಸಿದೆ.....
     ದಂಡ ದೈತ್ಯರ ಹೊಡೆದು
     ರುಂಡ ಚೌಡಿಕೆ ಮಾಡಿ
     ಪರಶುರಾಮನ ಪಡೆದೀ ಆನಂದಾದೇವಿ,
     ಪರಶುರಾಮನ ಪಡೆದೀ....."

ಎಂದು ಚೌಡಿಕೆಯನ್ನು ನುಡಿಸುತ್ತಿರುವಾಗಲೇ ಹಿಮ್ಮೇಳದವನು ’ಭಲಾ’ ’ಭಲಾ’ ’ಅಲ್ಲವೇ’ ಎಂದು ದನಿ ಸೇರಿಸುತ್ತಾನೆ. ಕಥೆಯು ಮುಗಿದ ಮೇಲೆ ’ಉಧೋ, ಉಧೋ’ ಎಂಬ ಮುಕ್ತಾಯವನ್ನು ಹೇಳುತ್ತಾರೆ.

ಚೌಡಿಕೆ ಪ್ರದರ್ಶನ ಬಗೆ

[ಬದಲಾಯಿಸಿ]

ಕೆಲವೊಮ್ಮೆ ಹಸಿರು ಚಪ್ಪರದ ವೇದಿಕೆಯಿದ್ದರೆ ಸಾಕು. ಕೆಲವೊಮ್ಮೆ ಇಲ್ಲದಿದ್ದರೂ ನಡೆಯುತ್ತದೆ. ಈ ಮೇಳವನ್ನು ನಡೆಸಲು ನಿರ್ದಿಷ್ಷದ ಕಾಲವೆಂದೆನು ಇಲ್ಲ. ಮೊದಲು ಕಲಾವಿದರು ಚೌಡಿಕೆಯನ್ನು ಪೂಜಿಸಿ , ದೇವಿಯ ಮಹಿಮೆಯನ್ನು ಹೇಳುವ ನಿರೂಪಣೆಯಿಂದ ಕಥೆಯನ್ನು ಆರಂಭಿಸುತ್ತಾರೆ. ಚೌಡಿಕೆಯವರಲ್ಲಿ ಎರಡು ಬಗೆಯನ್ನು ಗುರುತಿಸಬಹುದು. ಮನೆತನದ ಸಂಪ್ರದಾಯದಂತೆ ದೀಕ್ಷೆ ಪಡೆದು, ಮನೆ ದೇವತೆಯನ್ನು ಸ್ತುತಿಸಿ ಹಬ್ಬ, ಹುಣ್ಣಿಮೆಯ ದಿನಗಳಲ್ಲಿ ಜೋಳಿಗೆ, ಚೌಡಿಕೆ ಹಿಡಿದು ಮನೆ ಮನೆಗೂ ಹೋಗಿ ಹಾಡುತ್ತ ಭಿಕ್ಷೆ ಬೇಡುವವರು ಒಂದು ವರ್ಗ. ಎರಡನೇಯ ವರ್ಗ ವೃತ್ತಿಗಾಯಕರು. ಇವರೂ ಸಹ ದೀಕ್ಷೆ ಪಡೆದವರೇ. ಇವರು ಒಂದು ಕಡೆ ನೆಲೆಸಿರುವಂತಹವರಲ್ಲ. ಊರೂರುಗಳನ್ನು ಸುತ್ತುತ್ತ ಕಥಾ ಪ್ರಸಂಗಗಳನ್ನು ನಡೆಸುತ್ತಾರೆ. ಇದು ಇವರ ಜೀವನಾಧಾರವಾಗಿರುವುದು.ಚೌಡಿಕೆಯ ನಾದಕ್ಕೆ ತಕ್ಕಂತೆ ಹಾಡುತ್ತ, ಕುಣಿಯುವುದು ಹಾಗೂ ಒಬ್ಬ ಜೋಗಿಯೇ ಕಥೆಯನ್ನು ಹೇಳುತ್ತ, ಅಭಿನಯಿಸುವುದರ ಮೂಲಕ ನಿರೂಪಿಸುವುದು ವೀಶೇಷವಾಗಿರುವುದು.

ಜೋಗಿಯ ಹಾಡಿಗೆ ತಕ್ಕಂತೆ ಜೋಗಿತಿಯರು ಅಭಿನಯಿಸುತ್ತ ಕುಣಿಯುವರು. ಜೋಗಿತಿಯರು ತಲೆಯ ಮೇಲೆ ದೇವಿಯ ಪ್ರತಿಕದಂತೆ ತಾಮ್ರದ ಕೊಡವನ್ನು ಸಿಂಗರಿಸಿ ತಲೆಯ ಮೇಲೆ ಹೊತ್ತು ವಿವಿಧ ರೀತಿಯಲ್ಲಿ ಕುಣಿಯುವರು. ಇವರ ಕುಣಿತವನ್ನು ಕಂಡಾಗ ಗಂಡಿನ ಕುಣಿತದ ರೀತಿಯಲ್ಲಿ ಹೋಲುವುದು. ಸಾಮಾನ್ಯವಾಗಿ ಈ ಕಲೆಯು ಹೆಣ್ಣು ದೇವತೆಯ ಜಾತ್ರೆ, ಉತ್ಸವಗಳ ಸಂದರ್ಭದಲ್ಲಿ ಮಾತ್ರ ನಡೆಯುವುದು. ಜೋಗಿತಿಯಾಗಿ ದೀಕ್ಷೆ ಪಡೆದಂತಹ ಹೆಣ್ಣು ಮದುವೆಯಾಗದೇ ದೇವದಾಸಿಯಾಗಿ ಇರುವ ಪದ್ದತಿಯು ಹಿಂದೆ ಇತ್ತು. ಆದರೆ ಇಂದಿನ ಅಧುನಿಕ ಯುಗದಲ್ಲಿ ಅಲ್ಪ ಪ್ರಮಾಣದಲ್ಲಿ ಇಳಿತವಾಗಿರುವುದು ಕಂಡುಬರುವುದು. ಜೋಗಿತಿಯಾಗಿ ದೀಕ್ಷೆಯನ್ನು ಪಡೆದಿದ್ದರೂ ಕೂಡ ಅವರನ್ನು ದೇವದಾಸಿಯರಾಗಿ ಬಿಡದೇ ಅವರಿಗೆ ಮದುವೆಯನ್ನು ಮಾಡಿ ನಂತರ ಅವರು ಸಂಸಾರಿಯಾಗಿಯೇ ದೇವಿಯ ಸೇವೆಯನ್ನು ಮಾಡಬಹುದು ಎಂಬ ಕ್ರಮವು ಉತ್ತಮ ಬದಲಾವಣೆಯನ್ನು ಪಡೆದುಕೊಂಡಿರುವುದು. ನಪುಂಸಕರಾದಂತಹ ಗಂಡಸರು ಹೆಂಗಸರ ವೇಷ ಧರಿಸಿ ಜೋಗಿತಿ ಅಥವಾ ಜೋಗಮ್ಮ ಆಗುತ್ತಾರೆ. ಈ ಚೌಡಿಕೆ ಸಂಪ್ರದಾಯವನ್ನು ಮರಾಠಿಗಳು, ಹರಿಜನರು ಹಾಗೂ ಕುರುಬರು ಬೆಳೆಸಿಕೊಂಡು ಬಂದಿರುವುದು ತಿಳಿಯುತ್ತದೆ.

ಉಲ್ಲೇಖ

[ಬದಲಾಯಿಸಿ]

ಕರ್ನಾಟಕ ಜನಪದ ಕಲೆಗಳು, ಸಂ.ಗೊ. ರು. ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತು, ೧೯೭೭

"https://kn.wikipedia.org/w/index.php?title=ಚೌಡಿಕೆ&oldid=788980" ಇಂದ ಪಡೆಯಲ್ಪಟ್ಟಿದೆ