ಜನಪದ ಛಂದಸ್ಸು
ಜನಪದ ಛಂದಸ್ಸು - ಜನಪದ ಹಾಡುಗಳ ರಚನೆ ಅಥವಾ ಅದರ ಛಂದಸ್ಸು ಆ ಒಂದು ವರ್ಗದ ವಿಶಿಷ್ಟವೂ ಸ್ವಕೀಯವೂ ಆದ ಲಕ್ಷಣಗಳನ್ನೊಳಗೊಂಡಿರುತ್ತದೆ. ಇತರ ಶಾಖೆಗಳಂತೆ ಇದೂ ಪ್ರಭಾವಿತವಾಗುವುದಕ್ಕಿಂತ ಪ್ರಭಾವ ನೀಡುವುದು ಹೆಚ್ಚು. ವಿಶೇಷವೆಂದರೆ ಜನಪದ ಛಂದಸ್ಸು ಭಾಷೆ ಇತ್ಯಾದಿಗಳಂತೆ ಬೇಗ ವಿಕಾರಗೊಳ್ಳದೆ ತನ್ನತನವನ್ನು ಗರಿಷ್ಠ ಪ್ರಮಾಣದಲ್ಲಿ ಉಳಿಸಿಕೊಂಡಿರುತ್ತದೆ. ಆದುದರಿಂದ ಛಂದಸ್ಸು ಜನಪದೀಯತೆಯ ಮುಖ್ಯ ಲಕ್ಷಣಗಳಲ್ಲೊಂದಾಗಿರುತ್ತದೆ. ವಿಕಾಸ ಜೀವಂತಿಕೆಯ ಕುರುಹು. ಜನಪದದ್ದು ಸಹಜವಾದ ವಿಕಾಸ. ಇಲ್ಲಿ ಪಲ್ಲವಿಯ ಪುನರುಕ್ತಿಯಿಂದಲೂ ಏಕತಾನ ಸಹಜವಾದರೂ ವಿಕಾಸಶೀಲವೂ ಆದ ಜನಪದರ ಸಮಾಜದ ಕೈಯಲ್ಲಿ ವೈವಿಧ್ಯಸಾಧನೆಯೂ ಆಗುತ್ತದೆ. ಈ ವೈವಿಧ್ಯ ಮತ್ತು ಅದರ ಚರಿತ್ರೆ ಆ ಒಂದು ಸಮಾಜದ ವಿಶಿಷ್ಟವಾದ ಸಾಂಸ್ಕೃತಿಕ ಕೊಡುಗೆಯನ್ನು ನಿರ್ಧರಿಸುತ್ತದೆ.[೧]
ಕನ್ನಡ ಛಂದಸ್ಸು
[ಬದಲಾಯಿಸಿ]ದ್ರಾವಿಡ ಛಂದಸ್ಸಿನಲ್ಲಿ ಮುಖ್ಯವಾದ ಪಾತ್ರ ಕನ್ನಡ ಛಂದಸ್ಸಿನದು. ಕನ್ನಡ ಛಂದಸ್ಸಿನ ಚರಿತ್ರೆಯನ್ನು ಆಮೂಲಾಗ್ರವಾಗಿ ಪ್ರುನರ್ರಚಿಸಬೇಕಾಗಿದೆ. ಆದರೆ ಕನ್ನಡ ಛಂದಸ್ಸಿನ ಸಮಗ್ರ ವಿವೇಚನೆಗೆ ಅನುಕೂಲವಾಗುವಂಥ ಪ್ರತ್ಯಕ್ಷ ಪ್ರಮಾಣಗಳು ಸಾಕಷ್ಟು ನಿದರ್ಶನಗಳು ದೊರೆಯುವಂತಿಲ್ಲ. ಬಹುಶಃ ಕನ್ನಡ ಸಾಹಿತ್ಯದ ಸುವರ್ಣಯುಗ ಆರಂಭವಾಗುವ ಹೊತ್ತಿಗೆ ಸಂಸ್ಕೃತ ಪ್ರಾಕೃತಗಳ ಪ್ರಭಾವ ಅದರ ಮೇಲೆ ಸಾಕಷ್ಟು ಉಂಟಾದುದರಿಂದ ಕನ್ನಡ ಛಂದಸ್ಸು ಶ್ರೀಮಂತರ ಮನೆಯ ದಾಸಿಯಂತೆ ಮೂಲೆಗುಂಪಾಯಿತು. ಆದಾಗ್ಯೂ ಬೇರೊಂದು ರೂಪದಲ್ಲಿ ಗುಪ್ತಗಾಮಿನಿಯಾಗಿ ನಿರಂತರವಾಗಿ ಪ್ರವಹಿಸುತ್ತಲೇ ಇತ್ತು. ಬೆದಂಡೆಯಂಥ ದೇಸೀ ರೂಪಗಳನ್ನು ಹಾಡುವುದೂ ಕೇಳವುದೂ ಗೌರವಕ್ಕೆ ಯೋಗ್ಯವೆನಿಸಿರಲಿಲ್ಲ. ಹೀಗೆ ಕನ್ನಡ ಸಾಹಿತ್ಯ ಪಂಡಿತರ ಸೊತ್ತಾಯಿತು. ಜನಪದ ಸಾಹಿತ್ಯ ಅದಕ್ಕೆ ತೊತ್ತಾಯಿತು. ಆದುದರಿಂದಲೇ ಅಕ್ಕರ ತ್ರಿಪದಿ ಷಟ್ಪದಿಗಳನ್ನು ಬಿಟ್ಟರೆ ಉಳಿದುವು ಛಂದೋಗ್ರಂಥಗಳಲ್ಲಿ ಮಾತ್ರ ದೊರೆಯುತ್ತವೆ. ಜನಪದ ಛಂದಸ್ಸನ್ನು ಪರಿಶೀಲಿಸಿದರೆ ದೇಸಿಯನ್ನು ಅಲಕ್ಷ್ಯದಿಂದ ನೋಡುತ್ತ ಉಪಚಾರಕ್ಕಾಗಿ ವಿವರಿಸುತ್ತಿದ್ದ ಶಾಸ್ತ್ರಕಾರ ಮಾರ್ಗಿಗಳು ದೇಸೀರೂಪಗಳ ಪರಿಚಯವನ್ನು ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲವೆಂಬುದು ಸ್ಪಷ್ಟವಾಗುತ್ತದೆ. ಇಲ್ಲದಿದ್ದರೆ ಜಯಕೀರ್ತಿಯಂಥವನಿಗಾದರೂ ಗೀತಿಕೆಯ ಲಕ್ಷಣವನ್ನು ಕಂಡುಕೊಳ್ಳುವುದು ಕಷ್ಟವಾಗುತ್ತಿರಲಿಲ್ಲ. ಶಾಸ್ತ್ರದ ಲಕ್ಷಣಗಳು ಜನಪದ ಛಂದಸ್ಸಿನ ವಿಷಯದಲ್ಲಿ ಹೆಚ್ಚು ಬೆಳಕು ಬೀರುವುದಿಲ್ಲ. ಬ್ರಹ್ಮ ವಿಷ್ಣು ರುದ್ರಗಳ ಕಲ್ಪನೆಯಾದರೂ ಬಹುಮಟ್ಟಿಗೆ ಸಾಂಪ್ರದಾಯಿಕ. ಜನಪದ ಛಂದಸ್ಸಿನ ಚರಿತ್ರೆಯ ಪುನರ್ರಚನೆ ಎಂದರೆ ಬೇರೊಂದು ರೂಪದಲ್ಲಿ ಹರಿಯುತ್ತಿರುವ ಗುಪ್ತಗಾಮಿನಿಯನ್ನು ಗೊತ್ತುಹಚ್ಚುವುದೇ ಆಗಿದೆ. ಅದಕ್ಕೆ ಇಂದಿನ ಜನಪದ ಛಂದಸ್ಸಿನ ಅರಿವೇ ತಳಹದಿಯಾಗಿರುತ್ತದೆ. ಈ ಅರಿವೇ ಅನ್ಯಪ್ರಭಾವಗಳಿಂದ ರೂಪುಗೊಳ್ಳುತ್ತಿರುವ ಆಧುನಿಕ ಸಾಹಿತ್ಯ ಗೀತರೂಪವನ್ನು ಸ್ವದೇಶೀ ಪೋಷಣೆಯಿಂದ ತೇಜಸ್ವಿಗೊಳಿಸತಕ್ಕದ್ದಾಗಿದೆ.
ಜನಪದ ಛಂದಸ್ಸನ್ನು ಅಂಶಲಯವೆಂದು ವ್ಯವಹರಿಸುತ್ತಿದ್ದೇವೆ. ಈ ಅಂಶಲಯ ಸಂಸ್ಕೃತ ವರ್ಣಸಂಗೀತಕ್ಕೂ ಪ್ರಾಕೃತದ ತಾಳಸಂಗೀತಕ್ಕೂ ಹೊಂದದೆ ವೈದಿಕ ಛಂದಸ್ಸಿನ ಸ್ವರಸಂಗೀತಕ್ಕೆ ಹೊಂದುತ್ತದೆ ಎಂದು ಎಚ್. ಡಿ. ವೇಲಣಕರರು ಹೇಳುತ್ತಾರೆ. ಇದನ್ನು ಡಿ.ಎಸ್.ಕರ್ಕಿ ಅವರು ಒಪ್ಪುತ್ತಾರೆ. ಆದರೆ ವೇಲಣಕರರು ವೈದಿಕ ಛಂದಸ್ಸಿನಲ್ಲಿ ಕಾಲತತ್ತ್ವ ಮುಖ್ಯಪಾತ್ರವೇನೂ ವಹಿಸಿಲ್ಲ (ಜಯದಾಮ್) ಎಂದಿದ್ದಾರೆ. ಆದರೆ, ದ್ರಾವಿಡಛಂದಸ್ಸಿನಲ್ಲಿ, ಕನ್ನಡ ಜನಪದ ಛಂದಸ್ಸಿನಲ್ಲಿ ಕಾಲತತ್ತ್ವ ಅನಿವಾರ್ಯ ಪಾತ್ರದ್ದಾಗಿದೆ.
ಛಂದೋ ಲಯಗಳು
[ಬದಲಾಯಿಸಿ]ಲಯದಲ್ಲಿ ಎರಡು ವಿಧ. ಮಾತ್ರಾಗಣದ್ದು ಸ್ವಯಂ ವ್ಯಕ್ತ ಲಯ, ಓದಿದಾಗ ತಾನಾಗಿ ಒಂದು ಮಾತ್ರಾಲಯವನ್ನು ವ್ಯಕ್ತಪಡಿಸುತ್ತದೆ. ಅಂಶಗಣಗಳ ವಿಷಯದಲ್ಲಾದರೆ ನಮ್ಮ ಶ್ರಮ ಅಗತ್ಯ. ನಮ್ಮ ಇಷ್ಟದ ಒಂದು ಮಾತ್ರಾಲಯವನ್ನು ಆರೋಪಿಸುತ್ತೇವೆ; ಆದುದರಿಂದ ಆರೋಪಿತಲಯ. ಅನ್ವಯಿಸುತ್ತೇವೆ-ಅನ್ವಿತಲಯ; ಸಾಧಿಸುತ್ತೇವೆ-ಸಾಧಿತಲಯ. ಮಾತ್ರಾಗಣ ತನ್ನಲ್ಲೆ ಒಂದು ಕ್ರಮವನ್ನುಳ್ಳದ್ದು; ಇರುವ ಕ್ರಮವನ್ನು ಅನುಸರಿಸುತ್ತೇವೆ. ಇಲ್ಲಿ ಕ್ರಮವಿಲ್ಲದ್ದು; ಅದನ್ನು ಕ್ರಮಗೊಳಿಸುತ್ತೇವೆ. ನಮ್ಮ ಇಷ್ಟದ ಮಾತ್ರಾಲಯದ ಕ್ರಮವನ್ನು ಬಂಧ ಅನುಸರಿಸುತ್ತದೆ. ಆದುದರಿಂದ ವಾಸ್ತವವಾಗಿ ಅಂಶಲಯ ಎಂಬುದಿಲ್ಲ; ಕಾಲತತ್ತ್ವಕ್ಕೆ ಒಳಪಡಿಸಿ ಹಾಡಿದಾಗ ಎಲ್ಲವೂ ಮಾತ್ರಾಲಯದ್ದೇ.
ಗಣಗಳು
[ಬದಲಾಯಿಸಿ]ಒಂದು ಆಘಾತದಿಂದ ಇನ್ನೊಂದು ಆಘಾತದ ವರೆಗಿನ ಕಾಲಾವಕಾಶಕ್ಕೆ ಗಣ ಎಂದು ಹೆಸರು, ಸ್ಥೂಲವಾಗಿ. ತಮಿಳಿನಲ್ಲಿ ಗಣ ಒಂದೇ ಅಕ್ಷರವುಳ್ಳದ್ದೂ ಆಗಿರಬಹುದು. ಆದರೆ ಕನ್ನಡದಲ್ಲಿ (ತಮಿಳಿನಲ್ಲೂ) ಆ ಒಂದಕ್ಷರವೂ ಇರಬೇಕಿಲ್ಲ. ಆಘಾತದಿಂದ ಆಘಾತದ ವರೆಗೆ ಮೌನವೋ ಹೊಂದಿನ ಗಣದ ಅಂತ್ಯಾಕ್ಷರದ ಸ್ವರದ ಮುಂದುವರಿದ ಆಲಾಪನೆಯೋ ವ್ಯಾಪಿಸಬಹುದು. ಆದುದರಿಂದ ಗಣ ಮೂಲ ಘಟಕವಾಗದು. ಕೊನೆಯ ಪಕ್ಷ ಎರಡು ಗಣಗಳಾದರೂ ಎಡೆಬಿಡದೆ ಬಂದಾಗ ಲಯಕ್ಕೆ ಗತಿ ಒದಗುತ್ತದೆ. ತಮಿಳಿನಲ್ಲಿ ಗಣವನ್ನು ಬಿಟ್ಟರೆ ತೋಲ್ ಕಾಪ್ಪಿಯರ್ ಪ್ರಕಾರ ಪಾದವೂ ತಿರುಗಾಕ್ಕೈ ಪಾಡಿಯಾರ್ ಪ್ರಕಾರ ತಾಳವೂ ಛಂದಸ್ಸಿನ ಮೂಲ ಘಟಕವಾಗಿದೆ. ತಾಳಕ್ಕೆ ಆವೃತ್ತಿಯನ್ನು ನೀಡತಕ್ಕದ್ದು ಪಾದವಾದುದರಿಂದ ಕನ್ನಡ ಜನಪದ ಛಂದಸ್ಸಿಗೆ ಪಾದವನ್ನೇ ಮೂಲಘಟಕವನ್ನಾಗಿಟ್ಟುಕೊಳ್ಳಬಹುದು.
ಲಘು-ಗುರು
[ಬದಲಾಯಿಸಿ]ಉಚ್ಚಾರಣೆಯ ಸಾಧ್ಯತೆಯ ಪರಿಮಿತಿಯೊಂದನ್ನು ಬಿಟ್ಟರೆ ಅಂಶಗಣದಲ್ಲಿ ಇಂತಿಷ್ಟೇ ಅಕ್ಷರಗಳು ಹೀಗೇ ಬರಬೇಕೆಂಬ ನಿಯಮವೇನೂ ಇಲ್ಲ. ಸಾಮಾನ್ಯವಾಗಿ ಮೊದಲ ಅಂಶ ಒಂದು ಗುರು ಅಥವಾ ಎರಡು ಲಘುಗಳು. ಅನಂತರದ ಅಂಶಗಳಲ್ಲಿ ಎರಡು ಲಘುಗಳು ತ್ವರಿತಗೊಳ್ಳುವುದೂ ಉಂಟು; ಒಂದು ಗುರುವಿನ ಸ್ಥಾನದಲ್ಲಿ ಎರಡು ಲಘುಗಳು ಬಂದಂತೆ, ಷಟ್ಪದಿಯ ಮೂರು ಆರನೆಯ ಪಾದಾಂತ್ಯದ ರುದ್ರ ವಿಚ್ಛೇದ್ಯರುದ್ರ-ಎಂದರೆ ವಿಷ್ಣು+ಗುರು. ವಿಷ್ಣುವಿನ ಸ್ಥಾನದಲ್ಲಿ ಬ್ರಹ್ಮ ಬರಬಹುದಾದ್ದರಿಂದ ಇದು ಬ್ರಹ್ಮ+ಗುರು ಕೂಡ ಆಗಬಹುದು. ಆದುದರಿಂದ ವಿಷ್ಣು ರುದ್ರಗಳಲ್ಲಿ ಎರಡು ಬಗೆಗಳಿವೆ. ಒಂದು ಗಣಾವಕಾಶದೊಳಗೆ ಉಚ್ಚರಿಸಲ್ಪಡುವ ವಿಷ್ಣು ಮತ್ತು ರುದ್ರ; ಮತ್ತು ಇವು ವಿಚ್ಛೇದಗೊಂಡು ಕ್ರಮವಾಗಿ ಬ್ರ+ಗ ಮತ್ತು ವಿ+ಗ ಆಗತಕ್ಕವು. ಇಲ್ಲಿನ ಬ್ರಹ್ಮ ವಿಷ್ಣುಗಳ ಸ್ಥಾನದಲ್ಲಿ ಒಂದೇ ಅಕ್ಷರವೂ ಬರಬಹುದು. ಆಗ ಗ+ಗ ಆಗುತ್ತದೆ. ಒಂದು ಗಣದಲ್ಲಿ ಅಕ್ಷರವೇ ಇಲ್ಲದಿರಬಹುದಾಗಿರುವುದರ ಚೊತೆಗೆ, ಗಣದ ಆರಂಭದಲ್ಲಿ ಒಂದು ಅಕ್ಷರ ಬರುವುದರ ಜೊತೆಗೆ, ಗಣದ ಆರಂಭ ಮತ್ತು ಅಂತ್ಯಗಳಲ್ಲಿ ಮಾತ್ರ ಅಕ್ಷರ ಬಂದು ಮಧ್ಯೆ ಎಡೆ, ಎಳೆತ ಮೌನ ಇರಬಹುದು. ಅಥವಾ ಗಣಾಂತದಲ್ಲಿ ಮಾತ್ರ ಅಕ್ಷರ ಅಥವಾ ಅಕ್ಷರಗಳು ಬರಬಹುದು. ರುದ್ರ ವಿ+ಗ ಆಗುವುದೆಂದು ಹೇಳಿದೆವು. ಇಲ್ಲಿಯ ವಿಷ್ಣುವಿನ ಸ್ಥಾನದಲ್ಲಿ ಬ್ರಹ್ಮ ಬರಬಹುದಾದುದರ ಜೊತೆಗೆ ರುದ್ರವೇ ಬರಬಹುದು. ಆಗ ಗಣಾವಕಾಶದ ರು+ಗ ಆಗುತ್ತದೆ. ಈ ರುದ್ರ ಅತಿರುದ್ರವೂ ಆಗಬಹುದು. ಒಂದು ಲಕ್ಷಣಕ್ಕೆ ಉದಾಹರಿಸಿರುವ ಲಕ್ಷ್ಯಗಳಲ್ಲಿ ಇತರ ಪರಿಶೀಲನಾಂಶಗಳೂ ಇರುವುದನ್ನು ಗಮನಿಸಬಹುದು. ಒಟ್ಟಿನಲ್ಲಿ ಗಣಸ್ವರೂಪ ಎಷ್ಟೇ ಸ್ವಚ್ಛಂದವಿರಲಿ ಆಘಾತ (ತಾಳ) ನಿಯಮವನ್ನು ಪಾದ (ಆವರ್ತ) ನಿಯಮವನ್ನು ಜನಪದ ಛಂದಸ್ಸು ಮೀರುವುದಿಲ್ಲ.
ಮುಂದಿನ ಬರೆವಣಿಗೆಯಲ್ಲಿ ಈ ಕೆಲವು ಸಂಕೇತಗಳನ್ನು ಬಳಸಲಾಗಿದೆ. ಅವುಗಳ ಅರ್ಥ ಹೀಗದೆ. † = ಗಣ ; ‡ =ಪಾ; *=ಯತಿ; -‡=ವಿಲಂಬ ಮತ್ತು ಪಾದಾಂತ್ಯ ; ಊ=ವಿಲಂಬ; ]=ಇಲ್ಲಿನವರೆಗೆ ಹುಸಿ.
- ಒಂದು ಗಣದ ಸ್ಥಾನದಲ್ಲಿ ಒಂದೇ ಗುರ್ವಕ್ಷರ ಬರಬಹುದು. ಲಘು ಬಂದಾಗ ಅವನ್ನೆಳೆದು ವಿಲಂಬಿಸುತ್ತೇವೆ.
- ಒಂದು ಅಕ್ಷರ ಎರಡು ಗಣಗಳ ಕಾಲವನ್ನು ತೆಗೆದುಕೊಳ್ಳಬಹುದು. ಈ ವಿಲಂಬದಲ್ಲಿ ಹಿಂದಿನ ಸ್ವರವನ್ನು ಆಲಾಪಿಸಬಹುದು; ಇಲ್ಲವೆ ಮೌನತುಂಬಬಹುದು ; ಉಸಿರ್ದಾಣ ಮಾಡಿಕೊಳ್ಳಬಹುದು.
- ಒಂದು ಗಣಾವಕಾಶದೊಳಗೆ ರುದ್ರ ಬರಬಹುದು.
- ಅತಿರುದ್ರಗಳೂ ಬರಬಹುದು.
- ಅತಿರುದ್ರಕ್ಕೂ ಹೆಚ್ಚಿನ ಅಕ್ಷರಗಳು ಬರಬಹುದು. ಇದನ್ನು ಮಹಾಗಣ ಎನ್ನಬಹುದು.
- ಗಣದ ಮೊದಲಂಶ ಹ್ರಸ್ವವಾಗಿದ್ದು ಹಾಡುವಾಗ ದೀರ್ಘವಾಗಬಹುದು.
- ಗಣದ ಮೊದಲಂಶ ಹ್ರಸ್ವವಾಗಿದ್ದು ಅದರ ಬೆಲೆ ಹ್ರಸ್ವವಾಗೇ ಇರಬಹುದು.
- ಹುಸಿ ಅಥವಾ ಸಾಮಾನ್ಯವಾಗಿ ವಿಲಂಬದ ಮುಂದೆ ಬರುವ, ಗಣಾಘಾತದ ಹಿಂದೆ ಬರುವ ಅಕ್ಷರ ಅಥವಾ ಅಕ್ಷರಗಳನ್ನು ಎರಡು ರೀತಿಗಳಲ್ಲಿ ಅಚ್ಚಿಸುವ ರೂಢಿಯಿದೆ. ಮೊದಲ ಪಾದದ ಮೊದಲ ಗಣದ ಹಿಂದಿನ ಹುಸಿಯನ್ನು ಆರಂಭದಲ್ಲಿ ತೋರುವುದು ಒಳ್ಳೆಯದು. ಹುಸಿ ಎರಡು ರೀತಿಗಳಲ್ಲಿ ಬರುಬಹುದು.
- ಅಕ್ಷರ ಅಥವಾ ಅಕ್ಷರಗಳು + ವಿಚ್ಛೇದಯತಿ + ಹುಸಿಯ ಅಕ್ಷರ ಅಥವಾ ಅಕ್ಷರಗಳು.
- ಅಕ್ಷರ ಅಥವಾ ಅಕ್ಷರಗಳು + ವಿಲಂಬಯತಿ + ಹುಸಿಯ ಅಕ್ಷರ ಅಥವಾ ಅಕ್ಷರಗಳು.
ಗಣಪರಿವೃತ್ತಿ
[ಬದಲಾಯಿಸಿ]ಎರಡು ಅಂಶಗಣಗಳು ಮೂರು ಉಪಗಣಗಳಾಗಿ ಒಡೆದುಕೊಳ್ಳುತ್ತದೆ. ಜಾನಪದ ಬಂಧಗಳು : ಜನಪದ ಗೀತಗಳಲ್ಲಿ ಅಗ್ರಸ್ಥಾನ ತ್ರಿಪದಿಗಿದ್ದರೂ ಇನ್ನುಳಿದ ಬಗೆಗಳೂ ಅಷ್ಟೇ ಆಕರ್ಷಕವಾಗಿವೆ ; ಹಲವು ಮಾತ್ರಾಛಂದೋ ಬಂಧಗಳ ಮೂಲದ ಬಗೆಗೆ ಬೆಳಕು ಬೀರತಕ್ಕವಾಗಿವೆ. ಅವನ್ನು ಕ್ರಮವಾಗಿ ಪರಿಶೀಲಿಸಬಹುದು.
- I ವಿ ವಿ : ಕಟಕಟಿ | ಕಲ್ಲೂರು || ಅರಗಿನ | ಆಲೂರು || ಬೆಡಗಿನ | ಬೇಲೂರು || ಹಿಂದೆ ತಾ | ವರೆಗೇರೆ
- II ವಿ ವಿ ಗ : ಅವ್ರು]ಬೆನ್ನಿಗೆ|ಬಿಗಿದಾ|ರೆ ಊ | ಊ ಅವ]| ರೇಳುಜನ | ಅಣ್ಣದೀ | ರು ಊ | ಊ || ಎದ್ದಾರು | ಎದ್ದಂ | ಗೆ ಊ | ಊ ಅವ್ರು || ಏಳು ಚೋಜಿ | ಏರ್ಯಾ | ರೆ ಊ | ಊ
- III ವಿ ವಿ ವಿ ಗ : ಇಂದಿನ | ದಿನದಲ್ಲಿ | ಓಲಗ | ವಾ ಊ || ಅಥವಾ ಎಲ್ಲೋರುಂ | ಪೋರಪಕ್ಕಂ | ಕಲ್ಲುಕರ | ಡುಂ
- Iಗಿ ವಿ ವಿ ವಿ ಬ್ರ : ಕೋಲೇಕೋ | ಲೇಕೋಲು | ಕೋಲಣ್ಣ | ಕೋಲೆ ಗಿ ವಿ ವಿ ವಿ ವಿ (ಎರಡನೆಯ ನಾಲ್ಕನೆಯ ಗಣಗಳು ಬ್ರಹ್ಮವಾಗುವ ಪ್ರವೃತ್ತಿ ಇದೆ) ಹೇಳಿದ | ನಾಗಣ್ಣ | ಕೇಳಿದ | ನಿಂಗಣ್ಣ ಗಿI ವಿ ವಿ ವಿ ವಿ ವಿ ಬ್ರ ವಿ ಬ್ರ ಜಾಣೆಯ | ಮನೆಸುತ್ತ | ಜಾಲದ | ವನಗಳು || ಜಾಣೆಯ ಅರ | ಮನೆಗೆ | ಜಾಣಾತಾ | ಬಂದ ||
- ಗಿII ವಿ ವಿ ವಿ ವಿ ವಿ ವಿ ವಿ ಗ ಅರಮನೆಗೆ | ಬಂದಾನ | ಬಾಬಾಸಾ | ಹೇಬ || ರಾಣಿನ್ನ | ನುಡಿಸ್ಯಾನ | ಕೌತುಕ | ದಿ ಊ || ಚಿಂತೆಯ | ಕಂತ್ಯಾಕ | ಜೀವದ | ಚಿಂತ್ಯಾಕ || ಈಶಸಂ | ಕೇತಕ್ಕೆ | ತಲೆಬಾಗಿ | ರಿ ಊ || ಇದೇ ಷಟ್ಪದಿಗೆ ಕಾರಣವಾಗಿರುವುದು. ಆವರ್ತ ದೃಷ್ಟಿಯಿಂದ ಷಟ್ಪದಿ ಚೌಪದಿಯೇ. ಈ ರಚನೆಯ ದ್ವಿಪದಿಯಲ್ಲಿ ಮಾಡಿಕೊಂಡಿರುವ ವೈವಿಧ್ಯ : ಸುವ್ವಿ ಸು | ವ್ವಮ್ಮಲಾಲೆ | ಸುವ್ವಲಾ | ಲೆ* ನಮ್ಮ || ಜಾಣೆ ಜಾ | ಗರುದ್ಹೆಣ್ಣೆ | ಸುವ್ವಿಲಾ | ಲೆ
- ಗಿIII ವಿ ವಿ ವಿ ವಿ ವಿ ವಿ ಗ ಬಾರದಪ | ನಾಡಕೆಲ್ಲ | ಬಂದು ಒದಗೊ | ಘನನೀಲಿ || ಸಿದ್ದಯ್ಯ | ನೀವೆಬ | ನ್ನಿ ಊ | ಊ || ; ನಾಲ್ಕು ಪಾದಗಳೂ ಆಗಬಹುದು. ಈ ರಚನೆಯಲ್ಲಿ ಸಾಧಿಸಿರುವ ವೈವಿಧ್ಯ : ಕೊಡಗುಮಲೆ | ಯಾಳರಾಜ್ಯ | ಕೆಊಗಡಿ | ಯಾವುದೆಂದ್ರೆ || ಬೆಡಗಿನಂಥ | ಪೆರಿಯ ಪಟ್ಟ | ಣ ಊ | ಊ ||
- Iಘಿ ವಿ ವಿ ವಿ ವಿ ವಿ ಬ್ರ ವಿ ಏಳೆ ದ್ವಿಪದಿ : ಏಳನೇ ಗಣ ವಿಚ್ಛೇದ್ಯವಿಷ್ಣು ಅಥವಾ ವಿಚ್ಛೇದ್ಯರುದ್ರ ಆಗಬಹುದು. ಮೂಡಲ | ಸೀಮಿಂದ | ನಾಡ ದೊಂ | ಬರು ಬಂದು || ಊರಾಗಳ | ಮಠಕೆ | ನಿಲುತಾರೆ ; ನಿಲುತಾ | ರೆ; ಘಿ ವಿ ವಿ ವಿ ವಿ ವಿಬ್ರವಿ ವಿ ವಿ ವಿ ವಿ ವಿ ಬ್ರ ವಿ ಏಳೆ ಚತುಷ್ಪದಿ : ದಬ್ಬಣಸಾಲೆ | ಬತ್ತ | ಒಬ್ಬ ಕು| ಟ್ಟ ಲಾರೆ || ಯೆಬ್ಬಿಸೊ | ನಿನ್ನ | ಮಡದೀಯ || ಮಡದಿಯೆ | ಬ್ಬಿಸಿದರೆ | ಅರೆನಿದ್ದೆ | ಯಾದಾವೆ || ಒಬ್ಬೊಬ್ಬೆ | ಮಾಡಿ| ತೆಗಿ ತಂಗಿ
- ಘಿI ವಿ ವಿ ವಿ ವಿ ವಿ ಬ್ರ ವಿ ವಿ ವಿ ಬ್ರ ವಿ
ತ್ರಿಪದಿ ಅಥವಾ ಏಳೆ ತ್ರಿಪದಿ
[ಬದಲಾಯಿಸಿ]ಏಳು ಮತ್ತು ಹನ್ನೊಂದನೆಯ ಗಣ ವಿಚ್ಛೇದ್ಯ ವಿಷ್ಣು ಅಥವಾ ವಿಚ್ಛೇದ್ಯ ರುದ್ರವಾಗಬಹುದು. ಉಳಿದ ಸ್ಥಾನಗಳಲ್ಲಿ ಬ್ರಹ್ಮರುದ್ರ (ಸಂಕೋಚ) ಬರುವುದು.
- ತ್ರಿಪದಿಯ ಬ್ರಹ್ಮದ ಸ್ಥಾನದಲ್ಲಿ -U ರೂಪ ಬರಬಹುದು. ಇಂಥ ಕಡೆಗಳಲ್ಲಿ ಮೊದಲ ಹ್ರಸ್ವವನ್ನು ಎಳೆದು ವಿಲಂಬಿಸಬೇಕು.
- ತ್ರಿಪದಿಯ ಬ್ರಹ್ಮದ ಸ್ಥಾನದಲ್ಲಿ ವಿಷ್ಣುವೂ ಕ್ವಚಿತ್ತಾಗಿ ರುದ್ರ ಅತಿರುದ್ರಗಳೂ ಬರಬಹುದು.
- ಈ ಬ್ರಹ್ಮದ ಸ್ಥಾನದಲ್ಲಿ ಒಂದೇ ಅಕ್ಷರವೂ ಬರಬಹುದು.
- ತ್ರಿಪದಿಯ ಎರಡನೆಯ ಪಾದದ ಮೂರನೆಯ ಗಣ ವಿಷ್ಣುವಿನ ಸ್ಥಾನದಲ್ಲಿ : (ಅ) ಮಾರ್ಗಿಗಳಿಂದ ಹೇಳಲ್ಪಟ್ಟ ರೂಪ: ಮನೆಗೆ ಬಂ | ದಳಿಯ | ಮಗನಲ್ಲ | ತೌರೀಗೆ | (ಆ) ಮೊದಲು ಹಾಡುವಾಗ ಇದು ವಿಚ್ಛೇದ್ಯವಿಷ್ಣುವಾಗಬಹುದು : ಮನೆಗೆ ಬಂ | ದಳಿಯ | ಮಗನ | ಲ್ಲ (ಇ) ಈ ಸ್ಥಾನದಲ್ಲಿ ವಿಚ್ಛೇದ್ಯ ರುದ್ರ ಬರಬಹುದು. ಪುನರಾವೃತ್ತಿಯಲ್ಲಿ ಅದು ಸಂಕುಚಿತ ರುದ್ರವಾಗುತ್ತದೆ: ನೀರಿದ್ರೆ | ಬಾಳೆ | ಗೊನೆಗೆ ಭೋ | ಗ ; ಪುನರಾವೃತ್ತಿಯಲ್ಲಿ : ನೀರಿದ್ರೆ | ಬಾಳೆ | ಗೊನೆಗೆ ಭೋಗ | ತಾಯವ್ವ ;
- ತ್ರಿಪದಿಯ ಮೂರನೆಯಪಾದದ ಮೂರನೆಯ ಗಣವೂ ವಿಚ್ಛೇದ್ಯ ವಿಷ್ಣು (ಬ್ರ+ಗ): ವಿಚ್ಛೇದ್ಯ ರುದ್ರ (ವಿ+ಗ) ಆಗಿರಬಹುದು: ರಂಗನೇ | ರ್ಯಾನೆ | ಹೊಸತೇ | ಜಿ
- ತ್ರಿಪದಿಯ ಎರಡನೆಯ ಪಾದವನ್ನು ಮೂರನೆಯ ಗಣದವರೆಗೆ ಹಾಡಿ ಅನಂತರ ನಾಲ್ಕನೆಯ ಗಣದೊಡನೆ ಅದನ್ನೇ ಮತ್ತೆ ಹಾಡುತ್ತೇವೆ ಎಂದುಕೊಂಡಿದ್ದೇವೆ. ಆದರೆ ಇಲ್ಲಿ ಹಲವು ಪ್ರಕ್ರಿಯೆಗಳಿವೆ : (ಅ) ಸಾಮಾನ್ಯ ರೂಪ : ಸೂಳೆಯ | ಹೆಣ್ಣು | ನಾನಲ್ಲ | ಊ || ಸೂಳೆಯ | ಹೆಣ್ಣು | ನಾನಲ್ಲ | ದೇವರೆ || (ಆ) ಮೂರನೆಯ ಗಣಾನಂತರದ ಅಕ್ಷರ ಎರಡನೆಯ ಬಾರಿ ಹಾಡುವಾಗ ಮೂರನೆಯ ಗಣದೊಳಗೆ ಸೇರಬಹುದು. ಎಂದರೆ ವಿಚ್ಛೇದ್ಯವಿಷ್ಣು >ಸಾಮಾನ್ಯ ವಿಷ್ಣು ; ವಿಚ್ಛೇದ್ಯರುದ್ರ>ಸಂಕುಚಿತರುದ್ರ : ಬಸುರಿಲ್ಲ | ವಂತೆ | ಅಳುತಾ | ಳೆಊ || ಬಸುರಿಲ್ಲ | ವಂತೆ | ಅಳುತಾಳೆ | ನಮ ಕೊಮರ ; (ಇ) ಮೂರನೆಯ ಗಣಾನಂತರದ ಅಕ್ಷರ ಎರಡನೆಯ ಬಾರಿ ಹಾಡುವಾಗ ಲುಪ್ತವಾಗಬಹುದು : ಕನ್ಯೆ ಎಡ | ಗಡೆಗೆ | ಕರೆತನ್ನಿ | ರಿ ಊ || ಕನ್ಯೆ ಎಡ | ಗಡೆಗೆ | ಕರೆತನ್ನಿ | ನಮ್ಮನೆಯ (ಈ) ಮೂರನೆಯ ಗಣದ ಆದ್ಯಂತ ಹಿಂಜರಿಯ ಎರಡನೆಯ ಗಣವಾದ ಬ್ರಹ್ಮವನ್ನು ವಿಷ್ಣುವನ್ನಾಗಿ ಮಾಡಬಹುದು : ನಾರಿಗೌ | ರಮ್ಮ | ತೌರಿಂದ | ಊ || ನಾರಿಗೌ | ರಮ್ಮ ತೌ | ರೂರಿಂದ | ಬರುವಾಗ (ಉ) ಮೂರನೆಯ ಗಣಕ್ಕೆ ಇನ್ನಷ್ಟು ಅಕ್ಷರಗಳು ಸೇರಿಕೊಳ್ಳಬಹುದು : ಕರುವಲ್ಲೆ | ಚಂದ | ಗೌಡರು | ಊ || ಕರುವಲ್ಲೆ | ಚಂದ | ಗೌಡರು ಶಿವ | ರುದ್ರಪ್ಪನ (ಊ) ಮೂರನೆಯ ಗಣದ ಅಂತ್ಯಾಕ್ಷರಗಳು ವ್ಯತ್ಯಸ್ತವಾಗಬಹುದು : ಒಂಬತ್ತು | ವರ್ಷ | ಸಲಹಿದೆ-|| ಒಂಬತ್ತು | ವರ್ಷ | ಸಲಹಿಸಾ | ಕಿದ ಮಗಳ ಹಾವಡ್ಡ | ಲಾಗಿ-ಸುಳಿದಾಳೆ-|| ಹಾವಡ್ಡ | ಲಾಗಿ ಸುಳಿ | ದಾಳೆ ಆ | ಮಾರಿಯ
- ಊನಗಣತ್ರಿಪದಿ : ಎರಡನೆಯ ಪಾದದಲ್ಲಿ ನಾಲ್ಕನೆಯ ಗಣವಿರದು. ಆ ಸ್ಥಾನದಲ್ಲಿ ಒಂದೇ ಮೀಸಲಕ್ಷರ ಬರಬಹುದು : ಕೆಲಮಾ | ಳಿಗೆ ಮನೆ | ಯವ್ವ ತಾಯ | ವ್ವ-|| ಗುತ್ತಿನ ಮಳೆ | ನಾಡ | ಹೊಳೆಕಟ್ಟೆ-||
- ತ್ರಿಪದಿಯಲ್ಲಿ ಸಾಮಾನ್ಯವಾಗಿ ಪಾದಾಂತಯಿತ ಖಚಿತ. ಪಾದಾರ್ಥಯತಿ (ಮೂರನೆಯ ಪಾದದಲ್ಲಿ ಎರಡು ಗಣಗಳ ಅನಂತರ ) ಸಾಮಾನ್ಯ. ಎರಡನೆಯ ಪಾದಾಂತ್ಯದಲ್ಲಿ ಯತಿ ಇಲ್ಲದಿದ್ದರೂ ನಡೆಯುತ್ತದೆಂದು ತೋರುತ್ತದೆ: ನಾಚಿಕೆ| ಬರಿದೆ | ಮನದೊಳು | ನಿನಗೆ ಮ || ತ್ತಾ ಚದು | ರೆಯರು | ನುಡಿದಾರು. ಆದರೆ ಇಂಥ ಪ್ರಯೋಗಗಳು ಅಪೂರ್ವ. ಎರಡನೆಯ ಪಾದದ ಮೂರನೆಯ ಗಣಾನಂತರ ಯತಿ ಇದ್ದರೂ ಪುನರಾವೃತ್ತಿಯಲ್ಲಿ ಅದು ಲೆಕ್ಕಕ್ಕೆ ಬರುವುದಿಲ್ಲ. ಬ್ರಹ್ಮದ ವಿಲಂಬ ಯತಿಯನ್ನು ಪೇಕ್ಷಿಸುತ್ತದೆ.
- ಇತರ ಬಂದಗಳಲ್ಲಿನಂತೆಯೇ ತ್ರಿಪದಿಯಲ್ಲಿ ಪ್ರಾಸ ಐಚ್ಛಿಕ : ಪಡಿಯ ಪ್ರವೃತ್ತಿ ಇದೆ : ಬಲ್ಲಾಳ ಹಿತ್ತಿಲಬಳ್ಳಿಯ ಹೆಸರೇನು || ಬೆಳ್ಳಿಯ ದಂಡೆ-ಬಿಡುಗೀರ || ಬಲ್ಲಾಳು ತಿಂಬ-ಬಿಳಿಯೆಲೆ. ಘಿII ವಿ ವಿ ವಿ ವಿ ವಿ ಬ್ರ ವಿ ವಿ ವಿ ಬ್ರ ವಿ ವಿ ವಿ ಬ್ರ ವಿ ಇತ್ಯಾದಿ.
ಏಳೆ ಬೆಳವಣಿಗೆ
[ಬದಲಾಯಿಸಿ]ತ್ರಿಪದಿಯಲ್ಲಿ ಬೆಳೆದು ಏಳೆ ಮೂರು ಪಾದವಾದಂತೆ ಇನ್ನೂ ಬೆಳೆದು ಬಹು ಪದಿಯಾಗಬಹುದು. ಆರು ಪಾದಗಳನ್ನಾಗಿ ಹಾಡಬೇಕಾಗುವ ಏಳೆ ಚತುಷ್ಪದಿ:
ರಾಯ ಹರ್ತೀಯ ರುವಾರ್ದ ಬೀದ್ಯಾಗೆ || ಸೂರ್ಯ ಉರಿದಂಗೆ ಉರಿದಾಳೆ* ಆ ಮಾರಿ || ಹಾವಡ್ಡಲಾಗಿ ಸುಳಿದಾಳೆ | ಆ* ಮಾರಿಯ|| ನಾಲ್ಕೆ ಮೇಲೆ ಬಿಟ್ಟಾಳೆ ಉರಿಬಾಣ; ಏಳೆ ಪಂಚಪದಿ, ಏಳೆ ಷಟ್ಪದಿ, ಏಳೆ ಸಪ್ತಪದಿ, ಏಳೆ ಅಷ್ಟಪದಿಗಳಿಗೂ ಉದಾಹರಣೆಗಳಿವೆ. ಘಿIII ಬ್ರಹ್ಮದೀರ್ಘಿಕಾ : ಬ್ರಹ್ಮಗಣದ ನಡೆಯನ್ನು ಪ್ರಧಾನವಾಗಿ ಉಳ್ಳ ಪಾದಕ್ಕೆ ನಾಲ್ಕು ಗಣಗಳ ಮಿತಿಯಲ್ಲಿ ಬರುವ ಬಂಧಗಳನ್ನು ಹಿಂದೆ ಉದಾಹರಿಸಲಾಗಿದೆ. ಪಾದಕ್ಕೆ ನಾಲ್ಕಕ್ಕಿಂತ ಹೆಚ್ಚು ಗಣಗಳು ಬ್ರಹ್ಮಪ್ರಧಾನವಾಗಿ ಬರುವ ಬಂಧಗಳನ್ನು ಬ್ರಹ್ಮದೀರ್ಘಿಕಾ ಎನ್ನಲಾಗಿದೆ.
- 4ಬ್ರ+ಗ ಅವ್ರು ಮಡದಿ | ಹೆಸರು | ಹರಿಯಲ | ದೇವ | ಮ್ಮ-|| ಮಗನ | ಹೆಸರು | ಸೀತಾಳ | ರಾಮ | ಯ್ಯ-||
- 6ಬ್ರ+ಗ ನಾಗರು | ಕೊಡತಿ | ನಂತ | ಹೇಳಿ | ಸಾರಿ | ಹೇಳ್ಯಾ | ರೊ-||; ಸುತ್ತ | ಮುತ್ತ | ಕೋಲು | ಕೊಡಿ | ಸೂಳೆ | ರಾಯ | ಗೆ (4 ಪಾದ, ಇಲ್ಲಿ 3ನೆಯ ಪಾದದಲ್ಲಿ 8 ಬ್ರ ಇದೆ).
- 7ಬ್ರ+ಗ (3 ಪಾದ)+ (6ಬ್ರ+ಗ) ಊರು| ಊರಿಗೆ | ಯಾವ್ದು | ಮೇಲು | ಕೊಲ್ಲಂ | ಪುರವೆ | ಮೇಲ | ಲ್ಲೊ ಕ್ಯಾತಾ | ರೀಫ್‍ಹೋ | ಇನ್‍ಕೊಮಿ | ಲಾಕರ್ | ಕಪ್ಪಡಿ | ಸಂಗಮ | ಬಿಸ್ಮಿ | ಲ್ಲಾ. (8 ಬ್ರ) + (6ಬ್ರ + ಗ) ಅಥವಾ 4ಬ್ರ + 4ಬರ + 6ಬ್ರ + ಗ ಪಾದಕ್ಕೆ ನಾಲ್ಕು ಗಣಗಳ ಷಟ್ಪದಿಗೆ ಇದು ಹೋಲುತ್ತದೆ: ಬೆಡಗಿ | ನ ಮಾ | ತಿದು | ಸಲ್ಲ | ಭೀಮ | ಸೇನನ | ಗದೆಯು | ನಿನ್ನ || ತೊಡೆಯ | ಮೇಲೆ | ಬಿದ್ದಿ | ತಂತೆ | ಬೇಡ | ಎಂದ | ಳು : ಕಡುಕಡು | ಗತ್ತಿ | ಕೈಯಾಗ್ | ಹಿಡಿದು. ಘಿIಗಿ ಮಿಶ್ರಬಂಧಗಳು : ಐದು ತಿಂ | ಗಳ ಬಸು | ರೀಊ|ಊ || ಕೆನ್ನೆಮೇ | ಗಾಲುಹಸು | ರುಊ | ಊ || ಭೂಮಿಯಾತಿ | ನೀ ಮಿಂದ | ದಿನ ಹೇ | ಳೆ-ಸುವ್ವಿ || ನಾನು ಮಿಂ | ದಂತ ದಿನವ | ನೀವೇನು | ಕೇಳೀರಿ || ಏಲಕ್ಕಿ | ಮಾವಿನ | ಫಲಬಂ | ದುಊ | ಊ || ನಾಮಿಂದೇ | ನನ್ನ | ತವರ | ಲಿಊಸುವ್ವಿ ಇತ್ಯಾದಿ. ಮದುವೆ ಹಾಡುಗಳಲ್ಲಿ ಕೆಲವು ಖಚಿತವಾದ ಪಂಚಪದಿಗಳು ರೂಢವಾಗಿವೆ. ವಿವಿವಿಬ್ರ ಎಂಬಂತೆ ಮೂರು ಪಾದಗಳು, ನಾಲ್ಕು ವಿಷ್ಣು ಒಂದು ಪಾದ, ಕೊನೆಗೆ ವಿಬ್ರವಿ ಎಂದು ಒಂದು ಪಾದ. ದ್ರಾವಿಡ ಛಂದಸ್ಸಿನ ವೈಶಿಷ್ಟ್ಯ, ಕನ್ನಡ ಜನಪದ ಛಂದಸ್ಸಿನ ವೈಶಿಷ್ಟ್ಯ, ಕನ್ನಡ ಜನಪದ ಛಂದಸ್ಸಿನ ಕೊಡುಗೆ, ಇದರ ಚರಿತ್ರೆಯ ರಚನೆ-ಇವನ್ನು ಕುರಿತು ಎರಡು ಮಾತುಗಳು ಅಗತ್ಯ
ತಾಳ (ಗಣಾಘಾತ ) ಮತ್ತು ಆವರ್ತ
[ಬದಲಾಯಿಸಿ]ತಾಳ (ಗಣಾಘಾತ ) ಮತ್ತು ಆವರ್ತವನ್ನು (ಪಾದ) ಆಧಾರವಾಗಿಟ್ಟುಕೊಂಡು ಅದರೊಳಗೆ ಎಲ್ಲ ವೈವಿಧ್ಯದ ನಡೆಗಳನ್ನು ಸಾಧಿಸುವ ಪದ್ಧತಿ ಏಕಮೇವವಾಗಿ ದ್ರಾವಿಡ ಛಂದಸ್ಸಿನದು. ಅಕ್ಷರವೃತ್ತಗಳ ಮಾತ್ರಾಲಯಕ್ಕಿಂತ, ಮಾತ್ರಾಗಣಗಳ ಮಾತ್ರಾಲಯಕ್ಕಿಂತ ಅಂಶಗಣಗಳ ಮಾತ್ರಾಲಯ ಅತ್ಯಂತ ಕಡಿಮೆ ಪರಿಣತಿಯನ್ನು ಅಪೇಕ್ಷಿಸತಕ್ಕದ್ದಾದುದರಿಂದ ಇದೇ ಅತ್ಯಂತ ಪ್ರಾಚೀನವಿರಬೇಕು. ಜೊತೆಗೆ ಗಣದ ವ್ಯಾಪ್ತಿಯೊಳಗೆ ಅಕ್ಷರಗಳ ಮೊತ್ತ ಹೇಗೂ ಬರಬಹುದಾದುದರಿಂದ ಲಯದ ನಡೆಯಲ್ಲಿ ಸಾಧಿತವಾಗುವ ವೈವಿಧ್ಯವೂ ಇಲ್ಲಿ ಹೆಚ್ಚು ; ಮಲಯಾಳಂ ಜನಪದಗೀತೆ ಯೊಂದರಲ್ಲಿ, ಚೆತ್ತಿ | ಮಂದಾ | ರಂತು | ಳಸಿ | ಪಿಚ್ಚ | ಕಮಾ | ಲೆಯುಂ | ಚೂಡಿ . ಎಂದು ಅಕ್ಷರಗಳ ಲೆಕ್ಕವೇ ಮುಖ್ಯವಾದ, ಅಕ್ಷರ ಮೌಲ್ಯ ಅಗಣ್ಯವಾದ, ಎಲ್ಲ ಅಕ್ಷರಗಳನ್ನೂ ಎಳೆದು ಹೇಳುವಂಥ ರೀತಿ ಇದೆ. ಬೆಡಗಿ | ನ ಮಾ | ತಿದು | ಸಲ್ಲ. ಎಂದು ಮೊದಲಾಗುವ ಕನ್ನಡ ಉದಾಹರಣೆ ಇದನ್ನೇ ಹೋಲುತ್ತದೆ. ಪ್ರಾಯಃ ಮನುಷ್ಯ ಮೊದಲು ಅಕ್ಷರಗಳ ಹ್ರಸ್ವತೆ ದೀರ್ಘತೆಗಳನ್ನು ಗಮನಿಸಿ ಹಾಡಿರಲು ಸಾಧ್ಯವಿಲ್ಲ.
ತಾಳದ ಚಾರಿತ್ರಿಕ ಹಿನ್ನೆಲೆ
[ಬದಲಾಯಿಸಿ]ಕಾಲದ ಒಂದು ಖಚಿತವಾದ ಅಂತರದ ತಾಳವನ್ನು (ಗಣಾಘಾತ) ಮುಖ್ಯವಾಗಿಟ್ಟುಕೊಂಡು, ಆ ತಾಳಕ್ಕೆ ತಪ್ಪದೆ, ಬಲಿದು ಬಂದಂತೆ ಹಾಡಿರುವುದೇ ಸಹಜ. ತಮಿಳು ಸಂಸ್ಕøತದ ಪ್ರಭಾವದಿಂದ ದೂರವಿರಲು ಪ್ರಯತ್ನಿಸುತ್ತ ಅದಕ್ಕಾಗಿ ತನ್ನ ಸಂಪ್ರದಾಯವನ್ನು ಉಳಿಸಿಕೊಂಡುಬರಲು ಹೆಣಗಿತು. ಈ ಪರಿಸ್ಥಿತಿಯಲ್ಲಿ ತನ್ನಲ್ಲೇ ವೈವಿಧ್ಯವನ್ನು ಸಾಧಿಸುವುದರೆಡೆಗೆ ಹೆಚ್ಚು ಗಮನ ಕೊಡಲಾಗಿದೆ. ಹಳೆಯದನ್ನು ಉಳಿಸಿಕೊಂಡು ಬರುವುದರಲ್ಲೇ ಹೆಚ್ಚಿನ ಶಕ್ತಿ ವ್ಯಯಮಾಡಬೇಕಾಗಿ ಬಂದಿರಬೇಕು. ಆದುದರಿಂದ ತಮಿಳು ಜನಪದ ಛಂದಸ್ಸಿನಲ್ಲಿ ಹಳಮೆಯ ಕೆಲವು ವಿಶಿಷ್ಟತೆಗಳು ಉಳಿದಿವೆ. ಕನ್ನಡದಂತೆ ತೆಲುಗು ಸಂಸ್ಕøತದಿಂದ ಪ್ರಭಾವಗೊಂಡಿತು. ಮೇಲಾಗಿ ಶಿಷ್ಟರ ಕೈಯಲ್ಲಿ ಜನಪದ ಛಂದಸ್ಸೂ ಶಿಷ್ಟವಾಗಿ, ನಿಯಮಗಳಿಂದ ಅಲಂಕೃತವಾಗಿ ವೈವಿಧ್ಯಸಾಧನೆಯಲ್ಲಿ ಹಿಂದಾಯಿತು. ಜನಪದದ ಕೋಗಿಲೆಗೆ ಶಿಷ್ಟತೆಯ ಚಿನ್ನದ ಮನೆ ದೊರಕಿತು. ಕನ್ನಡದ ರೀತಿ ವಿಶಿಷ್ಟ. ಕನ್ನಡ ಇಲ್ಲಿ ಸಂಸ್ಕೃತ ಪ್ರಾಕೃತಗಳಿಂದ ಪ್ರಭಾವಿತವಾದುದೇನೋ ನಿಜ. ಆದರೆ ಈ ಪ್ರಭಾವ ಜನಪದರ ಮೇಲೆ ಏನೂ ಪರಿಣಾಮ ಬೀರಲಿಲ್ಲ. ವೃತ್ತರತ್ನಾಕರವನ್ನು ಶಿಷ್ಟರು ಬಿಡಲಿಲ್ಲ ; ಜನಪದರು ಹಿಡಿಯಲಿಲ್ಲ. ಎಲ್ಲೋ ಶತಮಾನ, ಮುಕ್ಕಾಲು ಶತಮಾನಗಳಿಗೊಮ್ಮೆ ಶಿಷ್ಟರು ಕೆಲಗಿಳಿದು ಬಂದು ಕರೆದಾಗ ಜನಪದರು ಹೋಗಿ ಸೇರಿ, ತಮ್ಮ ರೂಪ ಅವರಿಗೆ ತೊಡಿಸಿ, ಮತ್ತೆ ತಮ್ಮ ಪಾಡಿಗೆ ಜನಪದರಾಗಿಯೇ ಉಳಿಯುತ್ತಾರೆ. ಸಂಸ್ಕøತ ಪ್ರಭಾವ ಪಡೆದ ಜನ ಜನಪದವನ್ನು ಅಲಕ್ಷಿಸಿದ್ದು, ದೂರವಿರಿಸಿದ್ದು ಅಥವಾ ತಾವೇ ದೂರ ಊಳಿದದ್ದು ಒಳ್ಳೆಯದೇ ಆಯಿತು. ಜನಪದರ ಸ್ವಕೀಯವಾದ ಬೆಳೆವಣಿಗೆಗೆ ಅವಕಾಶವಾಯಿತು. ಈ ಸುಸಂಸ್ಕøತರು ಶಿಷ್ಟರೇ ಬಳಸಿಕೊಂಡು ಬಂದ ಕೆಲವು ಜನಪದ ಬಂಧಗಳನ್ನು ಉಪಚಾರಕ್ಕೆಂಬಂತೆ ಅವರ ನಿಯಮಕ್ಕನುಸಾರ ಅನುಸರಿಸಿ ತಾವೂ ಗ್ರಂಥಗಳಲ್ಲಿ ಬಳಸಿದರು. ಜನಪದರ ಪರಿಚಯಕ್ಕೆ ಹೋಗದೆ, ಜನಪದ ಛಂದಸ್ಸಿನ ವೈವಿಧ್ಯ ಕಾಣಲಾರದೆ, ಬಳಸಲಾರದೆ ಹೋದರು. ಓದುವ ಧಾಟಿಯೇ ಮರೆತು ಹೋದಾಗ ಜನಪದ ಬಂಧದ ಹೆಸರಿನಲ್ಲಿ ತೋಚಿದಂತೆ ಬರೆದು, ಅಥವಾ ಗೀತಿಕೆಯನ್ನು ಹೇಗೋ ಹಾಗೆ ಕೈಬಿಟ್ಟರು. ಹೀಗಾಗಿ ತೆಲುಗಿನಲ್ಲಾದಂತೆ ಜನಪದರ ಛಂದಸ್ಸು ಶಿಷ್ಟಗೊಂಡು ನಿಯಮಗಳ ಸಂಕೋಲೆಗಳಿಗೆ ಒಪ್ಪಿಸಿಕೊಳ್ಳುವ ಬಗೆ ಕನ್ನಡಕ್ಕೆ ಬರಲಿಲ್ಲ. ತನ್ನ ಮೇಲೆ ಯಾವ ದಾಳಿಯೂ ಇಲ್ಲದ್ದರಿಂದ ಆತ್ಮರಕ್ಷಣೆಯತ್ತ ಗಮನ ಕೇಂದ್ರೀಕರಿಸಿ ವೈವಿಧ್ಯ ಸಾಧಿಸಲಾಗದ ಸ್ಥಿತಿಯೂ ಬರಲಿಲ್ಲ. ಯಾರ ಹಂಗು ಅಂಕೆ ಪುಸಲಾವಣೆಗಳಿಲ್ಲದೆ ತನ್ನ ಪಾಡಿಗೆ ಕಾಡಿನ ಮಲ್ಲಿಗೆಯಂತೆ ಅದು ಅರಳಿತು. ಆದುದರಿಂದಲೇ ಸುಸಂಸ್ಕøತರ ಗಾಳಿ ಇಲ್ಲದೆಡೆಗಳಲ್ಲಿ ಕನ್ನಡ ಜನಪದ ಸಂಸ್ಕøತಿ, ಛಂದಸ್ಸು ಇಂದಿಗೂ ತನ್ನ ವೈವಿಧ್ಯಗಳಿಂದ ಜೀವ ತುಂಬಿ ನಿಂತಿದೆ. ಯಾವುದೇ ಒಂದು ಛಂದೋಪದ್ಧತಿ ಎರಡು ಅನುಕೂಲಗಳನ್ನು ಎಷ್ಟರಮಟ್ಟಿಗೆ ನಡೆಸಿಕೊಡುತ್ತದೆ ಎಂಬುದನ್ನು ಅವಲಂಬಿಸಿದೆ. ಒಂದು : ಸಹಜವಾದ ಅಭಿವ್ಯಕ್ತಿಯನ್ನು ವಿಕಾರಗೊಳಿಸುವ ಅಗತ್ಯ ಬೀಳದಂತೆ ಗರಿಷ್ಠ ಪ್ರಮಾಣದಲ್ಲಿ ಹೊಂದಿಸಿಕೊಳ್ಳುವ ಗುಣ ಆ ಛಂದಸ್ಸಿಗೆ ಇರಬೇಕು. ಈ ಗುಣ ದ್ರಾವಿಡ ಛಂದಸ್ಸಿಗೆ, ವಿಶೇಷವಾಗಿ ಕನ್ನಡ ಜನಪದ ಛಂದಸ್ಸಿಗಿದೆ. ಎರಡು : ಗಣ ಹಾಗೂ ಆವರ್ತದ ಪರಿಮಿತಿಯಲ್ಲಿ ಗರಿಷ್ಠ ಪ್ರಮಾಣದಲ್ಲಿ ನಡೆವೈವಿಧ್ಯ ಸಾಧ್ಯವೆ-ಎಂಬುದು. ಈ ಸಾಧ್ಯತೆಯ ಪ್ರಮಾಣವೂ ದ್ರಾವಿಡಛಂದಸ್ಸಿನಲ್ಲಿ, ವಿಶೇಷವಾಗಿ ಕನ್ನಡ ಜನಪದ ಛಂದಸ್ಸಿನಲ್ಲಿ ಹೆಚ್ಚು. ಕಾಲಂದೀ | ಗೆ-ತೋಳು | ಬಂದೀ | ಗೆ, ಎಂಬಂತೆ ಗಣಾವಕಾಶದೊಳಗೆ ಹಾಗೂ ಪಾದದೊಳಗೆ ನಡೆಭೇದ ಕಲ್ಪಿಸಿರುವುದನ್ನು ಕನ್ನಡ ಜನಪದ ಛಂದಸ್ಸಿನಲ್ಲಿ ಬಹುವಾಗಿ ಕಾಣುತ್ತೇವೆ. ಸಿರಿಗಿರಿ| ಮಂಚಾದ ಮುಂದೆ (ಅಂಕೆಗಳು ಆ ಅಕ್ಷರಗಳ ಮಾತ್ರಾಕಾಲವನ್ನು ಸೂಚಿಸುತ್ತವೆ. ) ಎಂಬಂಥ ಕಾಲ ವಿತರಣೆ ಶಿಷ್ಟರಲ್ಲೂ ಸಂಗೀತದ ಸಾಧನೆ ಮಾಡಿದವರಿಗೆ ಮಾತ್ರ ಸಾಧ್ಯ. ಇಲ್ಲಿ ಸಹಜವಾಗಿ ಅದು ಅಭಿವ್ಯಕ್ತಿ. ಇದು ಕನ್ನಡ ಜನಪದ ಛಂದಸ್ಸಿನ ಕೋಡು. ಇಲ್ಲಿನ ಮಹಾಗಣಗಳು ತಮಿಳಿನ ಮೂರಶೈಗಳ ಸರಣಿಯಲ್ಲಿ ಕಾಣಬಹುದಾದರೂ ಇವು ತಮಿಳಿನಲ್ಲಿ ಇಲ್ಲಿನಂತೆ ಒಂದು ಗಣಾವಕಾಶದೊಳಗೆ ಬಂದಿವೆಯೋ ಎಂಬುದು ಪರಿಶೀಲನಾರ್ಹ. ಪ್ರಾಯಃ ತೋಲ್‍ಕಾಪ್ಪಿಯರ್ ಸೂತ್ರಗಳ, ಅತ್ತ ಗದ್ಯವೂ ಅಲ್ಲ ಇತ್ತ ಪದ್ಯವೂ ಅಲ್ಲ ಎನ್ನಲಾದ ವಿಶಿಷ್ಟ ರೂಪದ ನೂಟ್‍ಚೆಯ್ಯಳ್‍ನ ಸಮಸ್ಯೆಯನ್ನು ಬಿಡಿಸುವಲ್ಲಿ ಕನ್ನಡ ಜನಪದ ಛಂದಸ್ಸಿನ ವೈವಿಧ್ಯಗಳು ಬೆಳಕು ಬೀರಬಲ್ಲವು.
ಕೊಡವ ತುಳು ಮೊದಲಾದ ಆಡುಭಾಷೆಗಳ ಜನಪದ ಛಂದಸ್ಸಿನ ಅಧ್ಯಯನದಿಂದಲೂ ಮಿಗಿಲಾದ ಪ್ರಯೋಜನವಿದೆ. ಕಾಲಕಾಲಕ್ಕೆ ಕನ್ನಡ ಸಾಹಿತ್ಯದ ರೂಪಗಳು ಬದಲಾಗಲು ಕನ್ನಡ ಜನಪದ ಛಂದಸ್ಸು ಹೇಗೆ ಸಹಾಯವಾಗಿದೆ ಎಂಬುದು ಈ ಲೇಖನದ ವ್ಯಾಪ್ತಿಗೆ ಮೀರಿದ್ದು. ಕರ್ಣಾಟಕ ಸಂಗೀತದ ತಾಳಾಂಗದ ಮೇಲೆ ದ್ರಾವಿಡ ಛಂದಸ್ಸು, ಅದರಲ್ಲೂ ಕನ್ನಡ ಜನಪದ ಛಂದಸ್ಸು ಬೀರಿದ ಪ್ರಭಾವ ಹೆಚ್ಚಿನದು. ಔತ್ತರೇಯರು ಶ್ರುತಿಯಲ್ಲಿಯೂ ದಾಕ್ಷಿಣಾತ್ಯರು ತಾಳದಲ್ಲಿಯೂ ಹೆಚ್ಚು ಗಮನವಿಟ್ಟರು ಎಂಬ ರಾ. ಅನಂತಕೃಷ್ಣಶರ್ಮರ ಮಾತು ಗಮನೀಯ. ಉತ್ತರಾದಿ ಸಂಗೀತದ ಖಯಾಲ್‍ಗೂ ದ್ರಾವಿಡ ಛಂದಸ್ಸು ಹತ್ತಿರದ್ದು. ಸಂಗೀತದಲ್ಲಿ ವಿಲಂಬ ಮಧ್ಯ ದ್ರುತ ಲಯಗಳ ಗತಿಗಳಿವೆಯಷ್ಟೆ. ಈ ಒಂದೊಂದನ್ನೂ ಒಂದು ಆವರ್ತಕ್ಕೆ ಅನ್ವಯಿಸಿದಾಗ ಆ ಒಂದೊಂದಕ್ಕೆ ತಕ್ಕಂತೆ ಗಣವೂ ಗಣದ ಅಕ್ಷರಗಳೂ ಪ್ರಮಾಣತಃ ಪ್ರವರ್ತಿಸುತ್ತವೆ. ಗಣದ ಕಾಲಾವಕಾಶವನ್ನು ಬದಲಿಸದೆ ಗಣಾಂಶಗಳಿಗೆ ವಿಲಂಬ ಮಧ್ಯ ದ್ರುತ ಈ ಮೂರನ್ನೂ ಬೇಕಾದರೆ ಅನ್ವಯಿಸಿ ನಡೆಯ ವೈಚಿತ್ರ್ಯವನ್ನು ತೋರತಕ್ಕದ್ದು ಕನ್ನಡ ಜನಪದ ಛಂದಸ್ಸು.
ಕರ್ಣಾಟಕ ಸಂಗೀತದ ಸ್ಥಾಯಿ (ಠಾಯಿ) ಪದ್ಧತಿಯನ್ನು ಕರ್ಣಾಟಕದ ಗೋಪಾಲನಾಯಕ ಕ್ರಿ.ಶ. ಸು. 1300ರಲ್ಲಿ ಉತ್ತರ ದೇಶದಲ್ಲಿ ಪ್ರಚಾರ ಮಾಡಿದೆ. ಈ ಪದ್ಧತಿಯಲ್ಲಿ ಸಂಗೀತಗಾರನಿಗೆ ತನ್ನ ಇಚ್ಛೆಯಂತೆ ತಾಳವನ್ನು ಆಧಾರವಾಗಿಟ್ಟುಕೊಂಡು ತನ್ನ ರಾಗವಿಸ್ತರಣ ಪ್ರಾವೀಣ್ಯವನ್ನು ತೋರಿಸುವುದಕ್ಕೆ ಅಧಿಕಾರವುಂಟು ; ಹಾಗೂ ಅವಕಾಶ ಉಂಟು ಎಂದು ಹುಲಗೂರು ಕೃಷ್ಣಾಚಾರ್ಯರು ಹೇಳಿದ್ದಾರೆ. ಒಂದು ತಾಳವನ್ನು ಆಧಾರವಾಗಿಟ್ಟುಕೊಳ್ಳುವುದು ಜನಪದ ಛಂದಸ್ಸಿನಲ್ಲೂ ಮೊದಲ ಅಗತ್ಯ. ರಾಗ-ವ್ಯಂಜನಾ ವ್ಯಾಪಾರದಿಂದ ರಸಪ್ರತೀತಿ ಉಂಟು ಮಾಡುವ ವಾಚ್ಯಾರ್ಥವಿಲ್ಲದ ನಾದ, ನಾದ ಪರಂಪರೆ, ಇಲ್ಲಿ ಅರ್ಥವುಳ್ಳ ಅಕ್ಷರಗಳ ಸಮೂಹ; ತಾಳಕ್ಕೆ ಸಂಬಂಧಿಸಿದಂತೆ ಪಾಟಾಕ್ಷರಗಳಿಗೆ (ಬೋಲ್) ಸಮಾನ ; ಕಾಲಘಟಕದ (ಗಣದ) ಮಿತಿಯಲ್ಲಿ ಅಕ್ಷರಗಳ ವಿವಿಧ ರೀತಿಯ ಕಲ್ಪನೆ ಇಲ್ಲಿಗೆ ಅನ್ವಯಕ. ಹೀಗೆ ಕೀರ್ತನ ಸಂಪ್ರದಾಯಕ್ಕೆ ಕರ್ಣಾಟಕ ಸಂಗೀತವೂ ಕರ್ಣಾಟಕ ಸಂಗೀತಕ್ಕೆ ವಿಶೇಷವಾಗಿ ಕನ್ನಡ ಜನಪದ ಛಂದಸ್ಸೂ ಮೂಲಸ್ರೋತವಾಗಿದೆ. ಆದಿಪ್ರಾಸ ಕನ್ನಡ ಜನಪದ ಛಂದಸ್ಸಿನ ಕೊಡುಗೆ. ಗೀತಗೋವಿಂದದಲ್ಲಿ ಕೆಲವೆಡೆ ಕಾಣತಕ್ಕ ಆದಿಪ್ರಾಸ ಕೇವಲ ಆಕಸ್ಮಿಕವಿರಲಾರದು. ರಗಳೆಗಳಿಗೆ ಪ್ರಾಕೃತಮೂಲವನ್ನು ತೀನಂಶ್ರೀ ಅವರು ಕಂಡುಹಿಡಿದಿದ್ದಾರೆ. ಆದರೆ ಪ್ರಾಕೃತಕ್ಕೆ ಅದು ಎಲ್ಲಿಂದ ಬಂತು ? ಜನಪದ ರಗಳೆಗಳದ್ದು. ಬಗೆಬಗೆಯ ರಗಳೆಗಳನ್ನು ನೋಡುವುದಗತ್ಯ. ತಮಿಳಿನಲ್ಲಿ ಒಂದು ಅಥವಾ ಮೂರು ಪಾದಗಳ ಕನಿಷ್ಟ ಮಿತಿಯಿಂದ ಆರಂಭಿಸಿ ತೋಲ್ಕಾಪ್ಪಿಯರ್ ಪ್ರಕಾರ ಸಾವಿರ ಪಾದ ಪರಮಾವಧಿಯಿರುವ, ಆದರೆ ಪ್ರಯೋಗದಲ್ಲಿ 782 ಪಾದಗಳು ಸಿಕ್ಕಿರುವ ಆಸ್ಸರಿಯವಿರುತ್ತು ಇದೆ. ಅಂಶಷಟ್ಪದಿ ವಿವಿಧ ಮಾತ್ರಾಷಟ್ಪದಿಗಳಾಗ ಬಹುದಾದರೆ ಅಂಶರಗಳೆ, ಜನಪದ ರಗಳೆಗಳು ಮಾತ್ರಾರಗಳೆಗಳೇಕೆ ಆಗಬಾರದು ? ಪ್ರಾಕೃತಕ್ಕೂ ದ್ರಾವಿಡರ ಕಾಣಿಕೆ ಏಕಿರಬಾರದು ? ಇವೆಲ್ಲ ಪರಿಶೀಲನ ಯೋಗ್ಯ. ರಗಳೆಗಳಿಗೆ ಅಂಶಮೂಲವನ್ನು ಬಿಎಂಶ್ರೀ ಅವರು ಕಲ್ಪಿಸಿರುವುದು ಹೆಚ್ಚು ಆಧಾರವುಳ್ಳದ್ದೆನ್ನಿಸುತ್ತದೆ. ಮೊದಲಿನಿಂದಲೂ ತನ್ನ ಪಾಡಿನಲ್ಲಿ ವೈವಿಧ್ಯಗಳನ್ನು ಉಳಿಸಿಕೊಂಡು, ಬೆಳೆಸಿ ಕೊಂಡು ಬಂದಿರುವ ಕನ್ನಡ ಜನಪದ ಛಂದಸ್ಸಿನ ಅರಿವನ್ನು ಆಧಾರವಾಗಿಟ್ಟುಕೊಂಡು ಕನ್ನಡ ಜನಪದ ಛಂದಸ್ಸಿನ ಚರಿತ್ರೆಯನ್ನು ಪುನರ್ರಚಿಸಬೇಕಾಗಿದೆ. ಇಂದಿನಿಂದ ಹಿಂದಕ್ಕೆ ಹೀಗೆ ಹೋಗಬೇಕಾಗಿದೆ. ಹರಿದಾಸ ಕೀರ್ತನ ಸಂಪ್ರದಾಯದ ಛಂದಸ್ಸು ; ಶಿವದಾಸರ ಗೀತಗಳು ; ವಚನಗಳ ಮಧ್ಯೆ ಸೇರಿರುವ ವಚನಕಾರರ ವಚನಗಳೆನ್ನಿಸಿಕೊಂಡಿರುವ ಹಾಡುಗಳು ; ಅಂಶಗಣ ಘಟಿತವಾಗಿರುವ ಸೋಮೇಶ್ವರ ಹೇಳಿರುವ (ಅಭಿಲಾಷಿತಾರ್ಥ ಚಿಂತಾಮಣಿ) ಮಾತ್ರೈಎಲಾ ಎಂಬ ಹೆಸರಿನ ಅಂಶಬಂಧಗಳು ; ಅಚಲಾನಂದನ ಕೀರ್ತನೆಗಳು ; ಪೂರ್ವದ ಹಳಗನ್ನಡ ಶಾಸನಗಳಲ್ಲಿ ಸಿಗುವ ಅಂಶಬಂಧಗಳು. (ಒಂದು ಉದಾ : ಉದಿತಶ್ರೀ ಕಚ್ಚಪ್ಪಿ | ನು(ಳೆ)ರಿಸಿ| ಗಿರಿಶಿಲೆ || ಮೇಲ್ ನೋನ್ತು | ತನ್ ದೇಹ | ಮಿಕ್ಕಿ-|| ನಿರವದ್ಯ| ನೇರಿ ಸ್ವ | ರ್ಗಂ | ಶಿವ | ನಿಲೆ ಪಡೆದಾನ್ || ಸಾಧುಗಳ್ | ಪೂಜ್ಯ | ಮಾನನ್-|| ಇತ್ಯಾದಿ ಸಾಂಗತ್ಯ. ಕಾಲ ಸು. 700) ನಾಲ್ಕು ಮಾತ್ರೆಗಳ ನಡೆಯಿರುವ, ಆ ನಡೆಯಲ್ಲಿ ಸ್ವಾತಂತ್ರ್ಯವಹಿಸಿರುವ ಚಂಪಕಮಾಲೆಯಲ್ಲಿ-ಇದು ಸು. 700ರದ್ದು-ಎಡೆಪ್ನ 1 ಗೀನಡೆ ಕೆಯ್ದುತಪಂ' . . . . . " ಎಂಬಲ್ಲಿ ನಾಲ್ಕು ಮಾತ್ರೆಗಳ ಸ್ಥಳದಲ್ಲಿ ಆರು ಮಾತ್ರೆಗಳನ್ನು ಅಡಕಿಸಿರುವುದು; ಮುಂದೆ ಕೆಲವು ವೈದಿಕ ಛಂದೋಬಂಧಗಳು-ಇವುಗಳ ಸೂಕ್ಷ್ಮಪರಿಶೀಲನೆ ನಡೆಯಬೇಕಾಗಿದೆ. ವೈದಿಕ ಛಂದಸ್ಸು ದ್ರಾವಿಡ ಛಂದಸ್ಸಿನ ಒಂದು ಪರಿಣತ ರೂಪವೋ ಪ್ರಭಾವಿತ ರೂಪವೋ ಆಗಿರುವುದು ಸಾಧ್ಯವಿದೆ-ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಸಂಶೋಧನೆ ನಡೆಯಬೇಕಾಗಿದೆ.
ಬಾಹ್ಯ ಕೊಂಡಿ
[ಬದಲಾಯಿಸಿ]ಉಲ್ಲೆಖ
[ಬದಲಾಯಿಸಿ]- ↑ chrome-extension://oemmndcbldboiebfnladdacbdfmadadm/http://shodhganga.inflibnet.ac.in/bitstream/10603/110069/12/12_chapter%206.pdf