ವಿಷಯಕ್ಕೆ ಹೋಗು

ತ್ರಿಪದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತ್ರಿಪದಿ
ತ್ರಿಪದಿ ಅಂದರೆ ಮೂರು ಸಾಲಿನ ಪದ್ಯ , ಇದು ಅಚ್ಚಕನ್ನಡದೇಸೀಮಟ್ಟಿನ ಛಂದಸ್ಸಾಗಿದೆ. ಇದರಲ್ಲಿ ಕೂಡ ಹಲವಾರು ಪ್ರಬೇಧಗಳಿದ್ದರೂ ಅಂಶಗಣ ಆಧಾರಿತ ತ್ರಿಪದಿಗಳೇ ಹೆಚ್ಚು ಪ್ರಾಮುಖ್ಯತೆ ಪಡೆದಿವೆ
ಸರ್ವಜ್ಞನ ವಚನಗಳಲ್ಲಿ ಮಾತ್ರಾಗಣಗಳ ಆಧಾರದ ಮೇಲೆ ಕೂಡ ತ್ರಿಪದಿಗಳನ್ನು ರಚಿಸಿರುವುದು ಕಂಡುಬರುತ್ತದೆ. ಅಲ್ಲಿ ಐದು ಮಾತ್ರೆಗಳ ಗಣಗಳನ್ನು ನಾವು ಕಾಣಬಹುದು
ಅಂಶಗಣ ಆಧಾರಿತ ತ್ರಿಪದಿಗಳಲ್ಲಿ ಹಲವು ವೈವಿಧ್ಯಗಳಿದ್ದರೂ ಜಾನಪದ ಒನಕೆವಾಡು,ಬೀಸುವಕಲ್ಲಿನ ಹಾಡುಗಳಲ್ಲೆಲ್ಲ ಕಂಡುಬರುವ ಸಾಮಾನ್ಯ ತ್ರಿಪದಿಯ ಲಕ್ಷಣ ಹೀಗಿದೆ.

ತ್ರಿಪದಿ ಲಕ್ಷಣಗಳು

[ಬದಲಾಯಿಸಿ]

ಮೊದಲ ಸಾಲಿನಲ್ಲಿ ನಾಲ್ಕು ವಿಷ್ಣುಗಣಗಳು ಹಾಗೇ ಎರಡನೇ ಸಾಲಿನಲ್ಲಿ ನಾಲ್ಕುಗಣಗಳಲ್ಲಿ ಎರಡನೇ ಗಣ ಬ್ರಹ್ಮಗಣ ಹಾಗೂ ಉಳಿದವು ವಿಷ್ಣುಗಣಗಳು,
ಮೂರನೇ ಸಾಲಿನಲ್ಲಿ ಮೂರುಗಣಗಳೂ, ಅದರಲ್ಲಿಯೂ ಎರಡನೇ ಗಣ ಬ್ರಹ್ಮಗಣವಾಗಿರುತ್ತದೆ.
ವಿನ್ಯಾಸ ಹೀಗಿದೆ-
ವಿಷ್ಣು|ವಿಷ್ಣು|ವಿಷ್ಣು|ವಿಷ್ಣು|
ವಿಷ್ಣು|ಬ್ರಹ್ಮ|ವಿಷ್ಣು|ವಿಷ್ಣು|
ವಿಷ್ಣು|ಬ್ರಹ್ಮ|ವಿಷ್ಣು|
ಇವುಗಳಲ್ಲಿ ಪ್ರತಿ ಸಾಲಿನ ಎರಡನೇ ಅಕ್ಷರ ಹಾಗೂ ಮೊದಲ ಸಾಲಿನ ಮೂರನೇ ಗಣದ ಎರಡನೇ ಅಕ್ಷರ ಪ್ರಾಸದಿಂದಕೂಡಿರುವುದೂ ಇದೆ. ಅಲ್ಲದೇ ಎರಡನೇ ಸಾಲಿನ ಮೊದಲ ಮೂರು ಗಣಗಳ ನಂತರ ಯತಿ ಬರುವಂತೆ ರಚಿಸಿದ ರಚನೆಗಳೂ ಇವೆ.
ನಾಗವರ್ಮನ ತ್ರಿಪದಿಯಲ್ಲೇ ರಚಿತವಾದ ಲಕ್ಷಣ ಪದ್ಯ ಹೀಗಿದೆ-
ಬಿಸುರು ಹೋದ್ಭವಗಣಂ ರಸದಶ ಸ್ಥಾನದೊಳ್
ಬಿಸುರುಹ ನೇತ್ರ ಗಣಮೇ ಬರ್ಕುಳಿದವು
ಬಿಸುರುಹ ನೇತ್ರೇ|

ತ್ರಿಪದಿ ಇತಿಹಾಸ

[ಬದಲಾಯಿಸಿ]

ಕನ್ನಡ ಸಾಹಿತ್ಯದ ತ್ರಿಪದಿಯ ಇತಿಹಾಸದಲ್ಲಿ ಮೊಟ್ಟಮೊದಲ ರಚನೆ ಸಿಗುವುದು ಬಾದಾಮಿಯ ತಟ್ಟುಕೋಟಿ ಶಾಸನದಲ್ಲಿರುವ ಕಪ್ಪೆಅರಭಟ್ಟನ ಕೀರ್ತಿಯನ್ನು ಹೇಳುವ ತ್ರಿಪದಿಗಳು
(ಮೊದಲ ಪದ್ಯಕ್ಕೆ ಮಾತ್ರ ಗಣವಿಂಗಡಿಸಿ ತೋರಿಸಿದೆ)
೧.ಸಾಧುಗೆ| ಸಾಧು ಮಾ|ಧುರ್ಯನ್ಗೆ| ಮಾಧುರ್ಯಂ|
ಬಾಧಿಪ್ಪ|ಕಲಿಗೆ | ಕಲಿಯುಗ|ವಿಪರೀತನ್|
ಮಾಧವ|ನೀತನ್|ಪೆಱನಲ್ಲ||
‌ ೨. ಒಳ್ಳಿತ್ತ ಕೆಯ್ವೊರಾರ್ಪೊಲ್ಲದುಮದರನ್ತೆ
ಬಲ್ಲಿತ್ತು ಕಲಿಗೆ ವಿಪರೀತಾ ಪುರಾಕೃತ|
ಮಿಲ್ಲಿ ಸಂಧಿಕ್ಕುಮದು ಬಂದು||
೩. ಕಟ್ಟಿದ ಸಿಂಘಮನ್ಕೆಟ್ಟೊಡೇನೆಮಗೆಂದು |
ಬಿಟ್ಟವೋಲ್ಕಲಿಗೆ ವಿಪರೀತಂಗಹಿತರ್ಕ್ಕ|
ಳ್ಕೆಟ್ಟರ್ಮೇಣ್ಸತ್ತರವಿಚಾರಮ್||

ಜಾನಪದ ತ್ರಿಪದಿಗಳು

[ಬದಲಾಯಿಸಿ]


ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ್ಕ|
ಕೂಸು ಕಂದಯ್ಯ ಒಳಹೊರಗ| ಆಡಿದರೆ|
ಬೀಸಣಿಕೆ ಗಾಳಿ ಸುಳಿದಾವು||
ಬ್ಯಾಸಗಿ ದಿವಸಕ ಬೇವಿನ ಮರತಂಪು|
ಭೀಮರತಿಯೆಂಪ ಹೊಳಿತಂಪು| ಹಡೆದವ್ವ |
ನೀತಂಪು ನನ್ನ ತವರೀಗೆ||
'

ಸರ್ವಜ್ಞನ ತ್ರಿಪದಿಗಳ ಸ್ವರೂಪ
ಸರ್ವಜ್ಞನ ತ್ರಿಪದಿಗಳಲ್ಲಿ ಒಂದು ವಿಷ್ಣುಗಣಕ್ಕೆ ಬದಲಾಗಿ ೫ ಮಾತ್ರೆಗಳ ಒಂದುಗಣವೂ ಹಾಗೆಯೆ ಒಂದು ಬ್ರಹ್ಮ ಗಣಕ್ಕೆ ಬದಲಾಗಿ ಮೂರು ಅಥವಾ ನಾಲ್ಕು ಮಾತ್ರೆಗಳ ಒಂದು ಗಣವೂ ಬರುತ್ತದೆ.
ಹಾಗೆಯೇ ಅಕ್ಕಮಹಾದೇವಿಯ "ಯೋಗಾಂಗ ತ್ರಿವಿಧಿ" "ಶೀಲವಂತಯ್ಯನ ತ್ರಿವಿಧಿ" ಮೊದಲಾದ ಕಡೆಗಳಲ್ಲಿಯೂ ಈ ರೀತಿಯ ತ್ರಿಪದಿಗಳು ಬಳಕೆಯಾಗಿವೆ.

ಸರ್ವಜ್ಞನ ತ್ರಿಪದಿಗೆ ಉದಾಹರಣೆ

[ಬದಲಾಯಿಸಿ]

-
'ಒಡಲೆಂಬ| ಹುತ್ತಕ್ಕೆ| ನುಡಿ ನಾ|ಲಿಗೆ ಸರ್ಪ|
ಕಡುರೋಷ|ವೆಂಬ| ವಿಷವೇರೆ| ಸಮತೆ ಗಾ|
ರುಡಿಗನಂ| ತಕ್ಕು| ಸರ್ವಜ್ಞ||
ಸಿರಿಬಂದ| ಕಾಲಕ್ಕೆ| ಕರೆದು ದಾ|ನವ ಮಾಡು|
ಪರಿಣಾಮ|ವಕ್ಕು| ಪದವಕ್ಕು| ಕೈಲಾಸ|
ನೆರೆಮನೆ|ಯಕ್ಕು| ಸರ್ವಜ್ಞ||
' (ಪ್ರಸ್ತುತ ಪದ್ಯದಲ್ಲಿ "ನೆರೆಮನೆ" ಎಂಬಲ್ಲಿ ಮಾತ್ರ ನಾಲ್ಕು ಮಾತ್ರೆಗಳ ಗಣ ಬಂದಿದೆ.)

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ತ್ರಿಪದಿ&oldid=1232223" ಇಂದ ಪಡೆಯಲ್ಪಟ್ಟಿದೆ