ವಿಷಯಕ್ಕೆ ಹೋಗು

ಸರ್ವಜ್ಞ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸರ್ವಜ್ಞ
ಕೂಡಲಸಂಗಮದಲ್ಲಿ ಸರ್ವಜ್ಞನ ಪ್ರತಿಮೆ
ಜನನಹದಿನಾರನೇ ಶತಮಾನದ ಆರಂಭ
ಅಂಬಲೂರ, ಹಿರೇಕೆರೂರ ತಾಲ್ಲೊಕು, ಹಾವೇರಿ ಜಿಲ್ಲೆ
ವೃತ್ತಿಕವಿ, ವಾಸ್ತವವಾದಿ, ತತ್ವ್ತಜ್ಞಾನಿ, ವಿರಾಗಿ
ಸರ್ವಜ್ಞ Sarvajna

ಜನನ ಮತ್ತು ಬಾಲ್ಯ

[ಬದಲಾಯಿಸಿ]
  • ಸರ್ವಜ್ಞ ಜನಿಸಿದ್ದು ಇಂದಿನ ಹಾವೇರಿ ಜಿಲ್ಲೆ ಹಿರೇಕೆರೂರ ಅಂಬಲೂರ . ಇದು ಈಗ ಸರ್ವಜ್ಞನ ಅಬಲೂರು ಎಂದೇ ಪ್ರಸಿದ್ಧಿ ಪಡೆದಿದೆ.
  • ಅವನ ಹೆತ್ತಮ್ಮ ಕುಂಬಾರ ಮಾಳೆ, ಪ್ರೀತಿಯಿಂದ ನಾಮಕರಣ ಮಾಡಿದ ಹೆಸರು -ಪುಷ್ಪದತ್ತ. ಸಾಕು ತಾಯಿ ಮಲ್ಲಕ್ಕ. ತಂದೆ ಬಸವರಸ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲ್ಲೂಕು ಮಾಸೂರಿನಲ್ಲಿ ವಾಸವಾಗಿದ್ದ ಆರಾಧ್ಯ ಬ್ರಾಹ್ಮಣ, ಬಸವರಸನು, ಎಷ್ಟು ದಿನಗಳಾದರೂ ಮಕ್ಕಳಾಗದಿದ್ದಾಗ ಮಲ್ಲಮ್ಮನನ್ನು ಸಮಾಧಾನ ಮಾಡಿ, ಪುತ್ರಸಂತಾನದ ವರ ಪಡೆಯಲು ಕಾಶೀ ಕ್ಷೇತ್ರಕ್ಕೆ ಹೊರಡುತ್ತಾನೆ.
  • ಭಕ್ತಿಯಿಂದ ಸೇವೆ ಮಾಡಿದ ಬಸವರಸನಿಗೆ ಕಾಶಿ ವಿಶ್ವನಾಥನು ಕನಸಿನಲ್ಲಿ ಪ್ರತ್ಯಕ್ಷನಾಗಿ, 'ನಿನಗೆ ಪುತ್ರಪ್ರಾಪ್ತಿಯಾಗುವುದು. ಹುಟ್ಟುವ ಮಗನು ನನ್ನ ಪ್ರಸಾದದಿಂದ ಮಹಾಜ್ಞಾನಿಯಾಗುವನು' ಎಂದು ಹೇಳಲು ಆನಂದಭರಿತನಾದ ಬಸವರಸನು, ಪ್ರಾತಃಕಾಲದಲ್ಲಿ ಎದ್ದು, ಪವಿತ್ರ ಗಂಗಾಸ್ನಾನ ಮಾಡಿ, ವಿಶ್ವನಾಥನನ್ನು ಅರ್ಚಿಸಿ, ಪ್ರಸಾದಗಳೊಂದಿಗೆ ತನ್ನ ಗ್ರಾಮದ ಹಾದಿ ಹಿಡಿದನು.
  • ಹಗಲಿರುಳು ಪ್ರಯಾಣ ಮಾಡಿ ಅನೇಕ ಗ್ರಾಮಗಳಲ್ಲಿ ವಿಶ್ರಮಿಸಿ, ದಾರಿಯಲ್ಲಿ ಸಿಕ್ಕ 'ಅಂಬಲೂರ ಎಂಬ ಗ್ರಾಮಕ್ಕೆ ಬರುವಾಗ ಭಯಂಕರ ಗುಡುಗು, ಸಿಡಿಲುಗಳಿಂದ ಮಳೆ ಸುರಿಯುತ್ತಿತ್ತು. ಸಮೀಪದಲ್ಲಿದ್ದ ಕುಂಬಾರಸಾಲೆಯಲ್ಲಿ ಕುಂಬಾರ ಮಾಳಿ ಎಂಬುವಳ ಮನೆಯಲ್ಲಿ ವಸತಿ ಮಾಡಿದನು. ಕಾಲಧರ್ಮ ಸಂಯೋಗದಿಂದ ಮಾಳಿಯಲ್ಲಿ ವ್ಯಾಮೋಹಗೊಂಡ ಬಸವರಸನಿಗೆ ಕಾಮ ವಿಕಾರವಾಯಿತು.
  • ಕಾಶಿಯಿಂದ ತಂದ ತೀರ್ಥ ಪ್ರಸಾದಗಳನ್ನು ಕೊಟ್ಟು ಅವಳ ಸಂಗ ಮಾಡಿದನು. ೯ ತಿಂಗಳ ನಂತರ ಮಾಳಿ ದಿವ್ಯ ತೇಜಸ್ಸಿನ ಗಂಡು ಕೂಸಿಗೆ ಜನ್ಮವಿತ್ತಳು. 'ಪುಷ್ಪದತ್ತ'ನೆಂದು ನಾಮಕರಣವೂ ಆಯಿತು. ಮುಂದೆ ಈ ಮಗುವೇ ಜಗತ್ತಿಗೆ ಸರ್ವಜ್ಞನೆಂದು ಪ್ರಸಿದ್ಧಿಯಾದನು. ಬಾಲ್ಯದಲ್ಲಿಯೇ ಅಗಾಧವಾದ ಪಾಂಡಿತ್ಯವನ್ನು ಶಿವನ ವರಪ್ರಸಾದದಿಂದ ಪಡೆದಿದ್ದನು.
  • ತಂದೆ ತಾಯಿಗಳಿಂದ ಅಗಲಿ ಪುಣ್ಯಕ್ಷೇತ್ರಗಳನ್ನೂ ಗುರುಮಠಗಳನ್ನೂ ಭೇಟಿ ಮಾಡಿ ಜ್ಞಾನಾರ್ಜನೆ ಮಾಡಿದನು. ಎಲ್ಲಾ ಶಾಸ್ತ್ರಗಳ ಜ್ಞಾನವನ್ನು ಸಂಪಾದಿಸಿದನು. ಅವನ ಜನಪ್ರಿಯ ವಚನಗಳು ಅವನ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒದಗಿಸಿವೆ. ಅವನು ರಚಿಸಿದ ತ್ರಿಪದಿಗಳಿಗೆ ಲೆಕ್ಕವಿಲ್ಲ. ಅವನು ಆಶುಕವಿಯಾದ್ದರಿಂದ, ಎಷ್ಟೋ ಕವನಗಳು ಅವನ ಸ್ಮೃತಿಯಲ್ಲೇ ಉಳಿದಿರಬಹುದು. ಸುಮಾರು ೭,೦೭೦ ವಚನಗಳು ಲಭ್ಯವಾಗಿದೆಯೆಂದು ತಜ್ಞರ ಅಭಿಪ್ರಾಯ.

ಸರ್ವಜ್ಞ - ತನ್ನ ಬಗೆಗೆ

[ಬದಲಾಯಿಸಿ]
  • ೧. ಮುನ್ನ ಪೂರ್ವದಲಾನು | ಪನ್ನಗಧರನಾಳು ಎನ್ನಯ ಪೆಸರು ಪುಷ್ಪದತ್ತನು-ಎಂದು ಮನ್ನಿಪರು ನೋಡ ಸರ್ವಜ್ಞ
  • ೨. ಅಂದಿನಾ | ಪುಷ್ಪದತ್ತ || ಬಂದ ವರರುಚಿಯಾಗಿ ಮುಂ ದೇವಸಾಲೆ ಸರ್ವಜ್ಞ - ನೆಂದೆನಿಸಿ ನಿಂದವನು ತಾನೇ ಸರ್ವಜ್ಞ
  • ೩. ಮಕ್ಕಳಿಲ್ಲವು ಎಂದು | ಅಕ್ಕಮಲ್ಲಮ್ಮನು ದುಕ್ಕದಿ ಬಸವ | ಗರಿಪಲ್ಲವ | - ಕಾಶಿಯ ಮುಕ್ಕಣ್ಣಗೆ ಹೋದ ಸರ್ವಜ್ಞ
  • ೪. ಮಾಸನೂರ ಬಸವರಸ | ಕೊಸನಿಶನ ಕೇಳಲು ಕಾಶಿಯೀಶನೊಳು ಪಡೆದ ವರ - ವಧು ನಡುವೆ ಸೂಸಿತೆಂತಲು ಸರ್ವಜ್ಞ
  • ೫. ಗಂಡಾಗಬೇಕೆಂದು | ಪಿ0ಡವ ನುಂಗಲು ಲಂಡೆ ಮಾಳ್ವೆಯೊಳು ಜನಿಸಿ - ಲೋಕದೊಳು ಕಂಡುದನೆ ಪೇಳ್ವೆ ಸರ್ವಜ್ಞ
  • ೬. ಗಡಿಗೆ-ಮಡಕೆಯ ಕೊಂಡು | ಅಡುವಡಾವಿಗೆಯೊಳಗೆ ಬಿಡದೆ ಮಳೆಮೋಡ ಹಿಡಿಯಲವ - ರಿಬ್ಬರಿಗು ತಡೆ ಬಿಡಲಾಯ್ತು ಸರ್ವಜ್ಞ
  • ೭. ಅಂಬಲೂರೊಳಗೆಸೆವ | ಕುಂಬಾರಸಾಲೆಯಲಿ ಇಂದಿನ | ಕಳೆಯ | ಮಾಳಿಯೊಳು - ಬಸವರಸ ನಿಂಬಿಟ್ಟನೆನ್ನ ಸರ್ವಜ್ಞ
  • ೮. ಬಿಂದುವ ಬಿಟ್ಟು ಹೋ | ದಂದು ಬಸುರಾದಳವ ಳಂದದಿಯಷ್ಟಾದಶ ಮಾಸ - ಉದರದಲಿ ನಿಂದು ನಾ ಬೆಳೆದೆ ಸರ್ವಜ್ಞ
  • ೯. ಹೆತ್ತವಳು ಮಾಳಿ ಎನ್ನ | ನೊತ್ತಿ ತೆಗೆದವಳು ಕೇಶಿ ಕತ್ತು ಬೆನ್ನ ಹಿಡಿದವಳು ಕಾಳಿ - ಮೊರಿದೊಳೆನ್ನ ಬತ್ತಲಿರಿಸಿದಳು ಸರ್ವಜ್ಞ
  • ೧೦. ಬೆಳೆದೆನವರಿಂದೆನ್ನ | ಕಳೆಯ ಕಂಡವರೆಲ್ಲ ಮೊಳೆಯಲ್ಲಿ ಸಸಿಯನರಿವಂತೆ - ಮಾಳಿಯ ತಿಳಿದವರರೆಗು ಸರ್ವಜ್ಞ
  • ೧೧. ಗಂಡ ತನ್ನಯದೆಂಬ | ಲಂಡೆ ತನ್ನಯದೆಂಬ ಖಂಡಪರಶುವಿನ ವರಪುತ್ರ - ನಾನು ನೆರೆ ಕಂಡುದನೆ ಪೇಳ್ವೆ ಸರ್ವಜ್ಞ
  • ೧೨. ಮಾಳನು ಮಾಳಿಯು | ಕೊಳ್ ತಿಂದ ಹೆಮ್ಮೆಯಲಿ ಕೇಳೆ ನೀನಾರ ಮಗನೆಂದು - ನಾ ಶಿವನ ಮೇಳದಣುಗೆಂಬೆ ಸರ್ವಜ್ಞ
  • (ವಿಕಿಸೋರ್ಸ್)

ತ್ರಿಪದಿಗಳು

[ಬದಲಾಯಿಸಿ]

ಒಟ್ಟು ಸುಮಾರು ೧,೦೦೦ ತ್ರಿಪದಿಗಳು ಸರ್ವಜ್ಞನ ಹೆಸರಿನಲ್ಲಿ ದಾಖಲಾಗಿವೆ. ಚರಿತ್ರಜ್ಞರ ಪ್ರಕಾರ ಇವುಗಳಲ್ಲಿ ಕೆಲವು ತ್ರಿಪದಿಗಳು ನಂತರದ ಕಾಲದಲ್ಲಿ ಬೇರೆ ಬೇರೆ ಲೇಖಕರಿಂದ ಬರೆಯಲ್ಪಟ್ಟಿರಬಹುದು. ಸರ್ವಜ್ಞನ ತ್ರಿಪದಿಗಳು ತಮ್ಮ ಸರಳತೆ ಮತ್ತು ಪ್ರಾಸಬದ್ಧತೆಯಿಂದ ಜನಪ್ರಿಯವಾಗಿವೆ. ಈ ತ್ರಿಪದಿಗಳು ಮುಖ್ಯವಾಗಿ ನೈತಿಕ, ಸಾಮಾಜಿಕ ಮತ್ತು ಧಾರ್ಮಿಕ ವಿಷಯಗಳನ್ನು ಕುರಿತವು. ಹಲವು ಒಗಟುಗಳು ಸಹ ಸರ್ವಜ್ಞನ ತ್ರಿಪದಿಗಳಲ್ಲಿ ಸೇರಿವೆ.

ಸರ್ವಜ್ಞನ ತ್ರಿಪದಿಗಳ ಕೆಲವು ಉದಾಹರಣೆಗಳು:

ಮಾಸೂರ ಬಸವರಸ । ಕೂಸನೀಶನ ಕೇಳೆ।
ಕಾಶಿಯ ಅಭವನೊಳು । ಪಡೆದ ವರವದುವೇ ।
ಸೂಸಿತೆಂತೆನಲು ಸರ್ವಜ್ಞ ॥
ಸರ್ವಜ್ಞನೆಂಬುವನು ಗರ್ವದಿಂದಾದವನೇ?
ಸರ್ವರೊಳು ಒಂದೊಂದು ನುಡಿಗಲಿತು
ವಿದ್ಯೆಯ ಪರ್ವತವೆ ಆದ ಸರ್ವಜ್ಞ.
  • ಮೂರ್ಖಂಗೆ ಬುದ್ಧಿಯನು ನೂರ್ಕಾಲ ಹೇಳಿದರು
ಗೋರ್ಕಲ್ಲಮೇಲೆ ಮಳೆಗರೆದರೆ
ಆಕಲ್ಲು ನೀರುಕುಡಿವುದೆ ಸರ್ವಜ್ಞ?
  • ಸಾಲವನು ಕೊಂಬಾಗ ಹಾಲೋಗರುಂಡಂತೆ
ಸಾಲಿಗರು ಕೊಂಡು ಎಳೆವಾಗ
ಕಿಬ್ಬಡಿಯ ಕೀಲು ಮುರಿದಂತೆ ಸರ್ವಜ್ಞ.
  • ಏಳು ಕೋಟಿಯೆ ಕೋಟಿ, ಏಳು ಲಕ್ಷವೇ ಲಕ್ಷ
ಏಳು ಸಾವಿರದ ಎಪ್ಪತ್ತು ವಚನಗಳ
ಹೇಳಿದನು ಕೇಳ ಸರ್ವಜ್ಞ."
ಬೆಚ್ಚನೆಯ ಮನೆಯಾಗೆ ವೆಚ್ಚಕ್ಕೆ ಹೊನ್ನಾಗೆ
ಇಚ್ಛೆಯನರಿವ ಸತಿಯಾಗೆ ಸ್ವರ್ಗಕ್ಕೆ
ಕಿಚ್ಚು ಹಚ್ಚೆಂದ ಸರ್ವಜ್ಞ

ಇತರ ಮಾಹಿತಿ

[ಬದಲಾಯಿಸಿ]

ಸರ್ವಜ್ಞನನ್ನು ಕುರಿತು ಸರ್ವಜ್ಞಮೂರ್ತಿ ಎಂಬ ಕನ್ನಡ ಚಲನಚಿತ್ರವು ೧೯೬೫ರಲ್ಲಿ ತೆರೆಕಂಡಿತು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಉಲ್ಲೇಖಗಳು

[ಬದಲಾಯಿಸಿ]

[] [] []

  1. https://en.wikiquote.org/wiki/Sarvajna
  2. https://thinkbangalore.blogspot.com/2015/10/sarvagna-vachana-tripadi-kannada-poems.html
  3. "ಆರ್ಕೈವ್ ನಕಲು". Archived from the original on 2020-10-24. Retrieved 2018-08-31.


"https://kn.wikipedia.org/w/index.php?title=ಸರ್ವಜ್ಞ&oldid=1202693" ಇಂದ ಪಡೆಯಲ್ಪಟ್ಟಿದೆ