ಕಂಸಾಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೀಸು ಕಂಸಾಳೆ

ಕಂಸಾಳೆ ಮಲೆ ಮಹಾದೇಶ್ವರನ ಭಕ್ತರಾದ ದೇವರಗುಡ್ಡರು ಬಳಸುವಂತಹ ವಿಶಿಷ್ಟ ಬಗೆಯ ವಾದ್ಯ . ಮಾದೇಶ್ವರನ ಕಾವ್ಯವನ್ನು ಈ ಕಲಾವಿದರು ಹಾಡುವರು. ಇವರು ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆಗಳಲ್ಲಿ ನೆಲೆಸಿರುವರು.[೧] ಕಥಾ ರೂಪದಲ್ಲಿ ಶಿವ ಮತ್ತು ಶರಣರ ಮಹಿಮೆಗಳನ್ನು ವಂಶಪಾರಂಪರ್ಯವಾಗಿ ಹೇಳುತ್ತಾ ಮುಂದುವರೆಸಿಕೊಂಡು ಬಂದಿರುವರು.

ಕಂಸಾಳೆ ಪದದ ನಿಷ್ಪತ್ತಿ[ಬದಲಾಯಿಸಿ]

 • ಇದರ ನಿಷ್ಪತ್ತಿಯ ಬಗೆಗೆ ಹಲವು ಚರ್ಚೆಗಳಿವೆ. ’ಕಾಂಸ್ಯ(ಕಂಚು)ತಾಳವೇ ಕಂಸಾಳೆಯಾಗಿದೆ’ ಎಂಬ ಅಭಿಪ್ರಾಯವಿದೆ. ಇದಕ್ಕೆ ಕೇಶಿರಾಜನ ಸಮರ್ಥನೆಯೆಂದರೆ "ಪೂರ್ವ ಪದಾಂತಕ್ಕೆ ದೀರ್ಘಮುಂ ಉತ್ತರ ಪದಾದಿಗೆ ಲೋಪಮುಮಾಗಿ ಕಾಂಸ್ಯತಾಳಕ್ಕೆ ಕಂಸಾಳಂ ಎಂದಾಯ್ತು" (ಸೂತ್ರ.೨೦೮) ಎಂಬ ವಿವರಣೆಯನ್ನು ನೀಡಿರುವನು.
 • ಹಳಗನ್ನಡ ಕಾವ್ಯಗಳಲ್ಲಿ ಕಂಸಾಳೆಯ ಬಗ್ಗೆ ಕಂಡುಬರುವ ಉಲ್ಲೇಖಗಳೆಂದರೆ ಹರಿಹರನ ’ಗಿರಿಜಾ ಕಲ್ಯಾಣ” ಮತ್ತು ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣಗಳಲ್ಲಿ ’ಕಂಸಾಳ’ ಎಂಬ ಪದದ ಬಳಕೆಯಿರುವುದು.
 • ಅಷ್ಟೇ ಅಲ್ಲದೆ ರಾಘವಾಂಕನ ’ಸಿದ್ದರಾಮ ಚಾರಿತ್ರ‍್ಯ’ , ಭೀಮಕವಿಯ ’ಬಸವ ಪುರಾಣ’ , ಸೂರ‍್ಯಕವಿಯ ’ಕವಿಕಂಠಹಾರ’ , ಗೋವಿಂದ ವೈದ್ಯನ ’ಕಂಠೀರವ ನರಸರಾಜ ವಿಜಯಂ’, ಗೋವಿಂದ ಕವಿಯ ’ನಾರಿಮಹಾತ್ಮ್ಯಂ’ ಕೃತಿಗಳಲ್ಲಿ ಕೌಸಾಳ, ಕಂಸತಾಳ, ಕಾಂಸಾಳ, ಕೈತಾಳ ಎಂಬ ಪ್ರಯೋಗಗಳು ಬಂದಿರುವುದನ್ನು ಗಮನಿಸಬಹುದಾಗಿದೆ.
 • ಆಡುಭಾಷೆಯಲ್ಲಿ ಕಂಸಾಳೆ, ಕೈತಾಳ, ಕೌಸಳೆ, ಬಟ್ಲು ಎಂಬಿತ್ಯಾದಿ ಪದಗಳು ರೂಢಿಯಲ್ಲಿರುವುದು.’ಕಂಸಾಳೆ’ಯು ಕಂಚಿನಿಂದ ತಯಾರಿಸಿದ ತಾಳವಾಗಿರುವುದು.ಮಧ್ಯೆ ದಾರ ಕಟ್ಟಿರುವ ಅಂಗೈ ಅಗಲದ ಒಂದು ಬಟ್ಟಲು. ಎಡ ಕೈಗೆ, ಹಾಗೆಯೇ ಇನ್ನೊಂದು ಕೈಯಲ್ಲಿ ಮಟ್ಟಸವಾದ ತಾಳ. ಮುಚ್ಚಳದ ನಡುಭಾಗ ಬಿಟ್ಟಿದ್ದು ಅದರ ರಂಧ್ರದ ಮೂಲಕ ದಾರವೊಂದನ್ನು ಬಿಗಿದು ಅದನ್ನು ಗೊಂಡೆಗಳಿಂದ ಅಲಂಕಾರ ಮಾಡಿ ಇಳಿ ಬಿಡುತ್ತಾರೆ. ಸಾಮ್ಯಾನವಾಗಿ ಇದು ಬಲಗೈ ಮೇಲಿಂದ ಇಳಿ ಬಿದ್ದಿರುತ್ತದೆ.
 • ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಾಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ.[೨]
 • ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂತವುಂಟುಮಾಡುತ್ತದೆ. `ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ. ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ.
 • ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ. ಸಾಮಾನ್ಯವಾಗಿ ಕಂಸಾಳೆಯ ಮೇಳದಲ್ಲಿ ಮೂರು ಜನರಿರುತ್ತಾರೆ. ವೃತ್ತಿ ಗಾಯಕರಾದ ಕಂಸಾಳೆಯವರಿಗೆ ವಿಶೇಷವಾದ ವೇಷಭೂಷಣಗಳೇನೂ ಇರುವುದಿಲ್ಲ. ಸಾಧಾರಣವಾಗಿ ಅಂಗಿ, ಪಂಚೆ, ಹೆಗಲಲ್ಲಿ ಜೋಳಿಗೆ, ಕೊರಳಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ, ಇವರಲ್ಲಿ ಇಬ್ಬರು ಏಕತಾರಿ ಕಂಜರ ಹಿಡಿದು ಹಿಮ್ಮೇಳದವರಾಗುತ್ತಾರೆ. * ಇನ್ನೊಬ್ಬ ಮುಮ್ಮೇಳದವನಾಗಿ ನಡುವೆ ಕಂಸಾಳೆ ಹಿಡಿದು ಕುಳಿತಿರುತ್ತಾನೆ. ಎಡಗೈ ಬಟ್ಟಲನ್ನು ಮೇಲುಮುಖವಾಗಿ ಅಂಗೈ ಮೇಲೆ ಇರಿಸಿಕೊಂಡು. ಬಲಗೈಯ ಮೇಲು ತಾಳವನ್ನು ಕುಟ್ಟುವುದರಿಂದ ಕಂಚಿನ ಕಣಿ ಕಣಿ ನಾದ ಉಂಟಾಗುತ್ತದೆ. ವಿವಿಧ ಧಾಟಿಯ ವಿವಿಧ ತಾಳದ ಹಾಡುಗಳಿಗೆ ಈ ನಾದ ಮಧುರ ಹಿನ್ನಲೆಯಾಗುತ್ತದೆ.
 • ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ-ನವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ. ಮಲೆಯ ಮಹದೇಶನ ಜಾತ್ರೆಯಲ್ಲಿ ಕಂಸಾಳೆಯ ಪ್ರದರ್ಶನ ಕೇಂದ್ರವಾಗುತ್ತದೆ ಆ ಪ್ರದೇಶ. ಬೆಳದಿಂಗಳ ರಾತ್ರಿಯಲ್ಲಿ ಕಂಸಾಳೆಯ ಕಲಾವಿದರ ಹಲವಾರು ಗುಂಪುಗಳು ಅಲ್ಲಿ ಮೇಳ ನಡೆಸುತ್ತವೆ.
 • ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು, ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ

ಹುಲಿಹೆಜ್ಜೆ ಕುಣಿತ[ಬದಲಾಯಿಸಿ]

 • ಇದಕ್ಕೆ ಪ್ರಾಚೀನ ಜನಪದರು ಕೊಟ್ಟಿರುವ ಹೆಸರು 'ಹುಲಿಹೆಜ್ಜೆ ಕುಣಿತ'. ಬಹಳ ಹಿಂದೆ ಸಾರಿಗೆ ವ್ಯವಸ್ಥೆ ಇರಲಿಲ್ಲ. ಮಹದೇಶ್ವರನ ಬೆಟ್ಟಕ್ಕೆ ಭಕ್ತರು ಕಾಲ್ನಡಿಗೆಯಲ್ಲಿ, ದಟ್ಟ ಕಾಡಿನ ನಡುವೆ ಪ್ರಯಾಣ ಮಾಡಬೇಕಾಗಿತ್ತು. ಕ್ರೂರಪ್ರಾಣಿಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು, ಗುಂಪು ಗುಂಪಾಗಿ ಹೋಗುವಾಗ ಪ್ರಯಾಣದ ಆಯಾಸಕ್ಕೊ, ಪ್ರಾಣಿಗಳ ಮೇಲಿನ ಭಯಕ್ಕೊ, ದೊಡ್ಡ ದೊಡ್ಡ ಹೆಜ್ಜೆ ಇಡುತ್ತಾ ಸಾಗುತ್ತಿದ್ದರಂತೆ.
 • ಕಂಸಾಳೆಯ ಎಡಗೈಭಾಗದ ಪರಿಕರ ತಟ್ಟೆ/ಬಟ್ಟಲಿನ ಮಾದರಿಯಲ್ಲಿದೆ. ಭಕ್ತರು ಹಲವಾರು ದಿನ ಅರಣ್ಯದಲ್ಲಿ ಸಂಚರಿಸುವಾಗ ತಾವು ತಂದ ಬುತ್ತಿ ಮುಗಿದು ಹೋಗಿ, ಭಿಕ್ಷಾಟನೆ ಮಾಡಬೇಕಾಗಿ ಬಂದಾಗ, ಜನರನ್ನು ರಂಜಿಸಲು ಕಂಸಾಳೆ ಆಡುತ್ತಾ ಭಿಕ್ಷೆ ಬೇಡುತ್ತಿದ್ದರೆಂದು ಕಂಸಾಳೆ ಮಹಾದೇವಯ್ಯ ಒಂದೆಡೆ ಉಲ್ಲೇಖಿಸಿದ್ದಾರೆ.

ಕಂಸಾಳೆ ಮೇಳದ ಬಗೆ[ಬದಲಾಯಿಸಿ]

 • ಕಂಸಾಳೆ ಮೇಳದಲ್ಲಿ ಮೂರರಿಂದ ಎಂಟು ಜನರು ಭಾಗವಹಿಸುತ್ತಾರೆ. ಹಾಡುವ ಸಂದರ್ಭದಲ್ಲಿ ಮೂವರು, ನೃತ್ಯ ಮಾಡುವ ಸಂದರ್ಭದಲ್ಲಿ ಎಂಟರಿಂದ ಹನ್ನೆರಡು ಜನ ಕಲಾವಿದರಿರುತ್ತಾರೆ. ಇವರಿಗೆ ಮೇಳದ ಸಮಯದಲ್ಲಿ ಇಂತಹುದೇ ವೇಷಭೂಷಣಗಳು ಇರಬೇಕೆಂಬ ನಿಯಮವೇನಿಲ್ಲ.
 • ನಿತ್ಯದ ಅಂಗಿ, ಪಂಚೆ, ಹೆಗಲಿಗೆ ಜೋಳಿಗೆ, ಕೊರಳಿಗೆ ರುದ್ರಾಕ್ಷಿ, ಹಣೆಗೆ ವಿಭೂತಿಗಳಿರುತ್ತವೆ. ಈ ಕಲಾವಿದರಲ್ಲಿ ಒಬ್ಬ ಕಂಜರವನ್ನು ಹಿಡಿದಿರುತ್ತಾನೆ. ಇತರರು ಹಿಮ್ಮೆಳದವರು. ಹಾಡಿನ ಲಯಕ್ಕೆ ಅನುಗುಣವಾಗಿ ತಾಳದ ನುಡಿತವು ಉಂಟಾಗುತ್ತದೆ.

ಉದಾಹರಣೆಗೆ: ’ಮಾದೇಶ್ವರನ’ ಸಾಲಿನಲ್ಲಿ ಹೀಗೆ ವರ್ಣಿಸಲಾಗಿದೆ.

"ವಾಸ ಕಂಸಾಳೆಯ ನುಡಿಸಿಕೊಂಡು ಮಾ
ದೇಶನಂಘ್ರಿಗೆ ನಮೋಯೆಂದು
ಭಾಷೆ ಪಾಲಕ ದುರಿತವ ಪೊರೆಯೆಂದು ವೀ
ರೇಶನ ಕೊಂಡಾಡಿದರು
ಕಂಸಾಳೆಯ ದೇವರ ಗುಡ್ಡರು"

 • ದೀಕ್ಷೆಯನ್ನು ಪಡೆದ ಮೇಲೆ ಗುಡ್ಡರಾಗುವ ಇವರು ತಮ್ಮ ಪಂಥದ ಪ್ರಚಾರಕರಾಗಿ, ಪ್ರಸಾರಕರಾಗಿ ಕಾರ‍್ಯವನ್ನು ನಿರ್ವಹಿಸುವರು. ಮಾದೇಶ್ವರನ ಗುಡ್ಡರನ್ನು ಕೈಸಾಳೆಯವರು, ಕಂಸಾಳೆಯವರು ಎಂದು ಕರೆಯುವರು. ಹರಿಜನರು, ಒಕ್ಕಲಿಗರು, ಕುರುಬರು, ಗಂಗಾಮತಸ್ಥರು, ಉಪ್ಪಲಿಗರು, ಮಡಿವಾಳರು, ಪರಿವಾರದವರು ಮಾದೇಶ್ವರನ ಗುಡ್ಡದವರಾಗುತ್ತಾರೆ. * ಗಂಡಸರು ಮತ್ತು ಹೆಂಗಸರು ಮಾದೇಶ್ವರನ ಭಕ್ತರಾಗಿ ದೀಕ್ಷೆ ಪಡೆಯುವಾಗ ಗಂಡಸರನ್ನು ಗುಡ್ಡರೆಂದೂ, ಹೆಂಗಸರನ್ನು ಗುಡ್ಡಮ್ಮ, ಗುಡ್ಡಿಯರೆಂದು ಕರೆಯುವರು. ಸೂತಕವಾದ ಹೆಂಗಸರನ್ನು ಗುಡ್ಡಿಯಾಗಿ ಬಿಡುವಂತಹ ಕ್ರಮವಿಲ್ಲ.
 • ಒಮ್ಮೆ ಗುಡ್ಡಿಯಾದ ಹೆಂಗಸಿಗೆ ಮದುವೆಯೂ ಇರುವುದಿಲ್ಲ. ಈ ಪದ್ದತಿಯು ಹೆಚ್ಚಾಗಿ ಹರಿಜನರಲ್ಲಿಯೇ ಕಂಡು ಬರುವುದುಂಟು. ಗುಡ್ಡರು ಮಾದೇಶ್ವರನ ಕಥೆಯನ್ನು, ಗುಡ್ಡಿಯರು ಬಿಡಿ ಹಾಡುಗಳನ್ನು ಹಾಡುವರು. ಗುಡ್ಡರಾಗಿ ಬಿಡುವಂತಹ ಸಂಪ್ರದಾಯವು ವಂಶಪರಂಪರ‍್ಯವಾಗಿ ಬಂದಿರುವಂತಹುದು.

ದೇವರ ಗುಡ್ಡರಲ್ಲಿ ೨ ಬಗೆ[ಬದಲಾಯಿಸಿ]

 1. ಸಿರಿಯ ದೇವರ ಗುಡ್ಡರು
 2. ಅಲೆಮಾರಿ ಗುಡ್ಡರು

ಸಿರಿಯ ದೇವರ ಗುಡ್ಡರು[ಬದಲಾಯಿಸಿ]

ಕಂಚಿನ ತಟ್ಟೆಯಲ್ಲಿ ಇವರು ಊಟವನ್ನು ಮಾಡುವುದಿಲ್ಲ. ಕಾರಣ ಇವರು ಕಂಚನ್ನು ಮಾದೇಶ್ವರನ ಶ್ರೇಷ್ಠ ಕಂಸಾಳೆಯೆಂದು ಭಾವಿಸುತ್ತಾರೆ.ಇವರು ಪಾದರಕ್ಷೆಯನ್ನು ಹಾಕುವುದಿಲ್ಲ. ಸೋಮವಾರ, ಶುಕ್ರವಾರ, ಅಮಾವ್ಯಾಸೆಯ ದಿನದಂದು ’ಕ್ವಾರಣ್ಯ’ವನ್ನು ಮಾಡುವರು. ಹಬ್ಬ, ಉತ್ಸವದ ದಿನಗಳಲ್ಲಿ ಮಾದೇಶ್ವರನ ದರ್ಶನವನ್ನು ಮಾಡುವರು. ಈ ಗುಡ್ಡರು ದೀಕ್ಷೆಯನ್ನು ಪಡೆದಿದ್ದರೂ ಕೂಡ ಮದುವೆಯನ್ನು ಆಗಬಹುದಾಗಿದೆ.

ಅಲೆಮಾರಿ ಗುಡ್ಡರು[ಬದಲಾಯಿಸಿ]

ಮಾದೇಶ್ವರನ ಸಂಪೂರ್ಣ ಕಥೆಯನ್ನು ಹಾಡುವರು. ಅಲ್ಲದೇ ಹಬ್ಬ, ಉತ್ಸವದ ದಿನಗಳಲ್ಲಿ ಮಾದೇಶ್ವನ ದರ್ಶನವನ್ನು ಪಡೆದು ಸೇವೆಯನ್ನು ಸಲ್ಲಿಸುತ್ತಾರೆ.

ಕಂಸಾಳೆಯಲ್ಲಿ ಎರಡು ವಿಧ[ಬದಲಾಯಿಸಿ]

 1. ಕುಳಿತು ಹಾಡುವ ಕಂಸಾಳೆ
 2. ಬೀಸು ಕಂಸಾಳೆ

ಕುಳಿತು ಹಾಡುವ ಕಂಸಾಳೆ[ಬದಲಾಯಿಸಿ]

 • ಈ ಮೇಳದಲ್ಲಿ ಮೂವರಿಂದ ಎಂಟು ಜನ ಭಾಗವಹಿಸುವುದುಂಟು. ಪ್ರಧಾನ ಹಾಡುಗಾರನು ಮಧ್ಯದಲ್ಲಿದ್ದು ಸಹ ಕಲಾವಿದರು ಡಪ್ಪು, ಕಂಸಾಳೆ, ಚಿಟಿಕೆ ಹಿಡಿದು ಸುತ್ತಲೂ ಕುಳಿತಿರುತ್ತಾರೆ. ವಾದ್ಯಕ್ಕೆ ಅನುಗುಣವಾಗಿ ಹಾಡುತ್ತ ದನಿಗೂಡಿಸುತ್ತಾರೆ. ಕಥೆಯ ಸಂಭಾಷಣೆಗೆ ತಕ್ಕಂತೆ ನಡೆಯುವಾಗ ಉಳಿದವರು ’ಹೌದಪ್ಪಾ ಹೌದು’ ಎಂದು ಹೇಳುವರು.
 • ಒಬ್ಬ ಕಲಾವಿದನು ಒಂದು ಕಥೆಯನ್ನು ಹೇಳಿ ನಿಲ್ಲಿಸಿದಾಗ, ಮತ್ತೊಬ್ಬ ಕಲಾವಿದನು ಮತ್ತೊಂದು ಕಥೆಯನ್ನು ಮುಂದುವರೆಸಿಕೊಂಡು ಹೋಗುವನು. ಇಂತಹ ಕಥಾ ನಿರೂಪಣೆಯು ಗದ್ಯ ಪದ್ಯ ಮಿಶ್ರಿತದಿಂದ ಕೂಡಿರುವುದು. ಕಂಸಾಳೆಯ ಮೂಲಕ ಮಾದೇಶ್ವರನ ಕಾವ್ಯವನ್ನು ಹೇಳುವುದಕ್ಕೆ ’ಕಥೆ ಮಾಡುವುದು’ ಎನ್ನಲಾಗುತ್ತದೆ.
 • ಮೊದಲಿಗೆ ಗಣಪತಿ, ಸರಸ್ವತಿ ದೇವತೆಗಳನ್ನು ಸ್ತುತಿಸಿ ಕೊನೆಗೆ ಮಂಗಳದೊಂದಿಗೆ ಕಥೆಯನ್ನು ಮುಕ್ತಾಯ ಮಾಡುವರು. ಮಾದೇಶ್ವರ ಮತ್ತು ಇತರ ದೇವತೆಗಳನ್ನು ಕಥೆಯ ಆರಂಭ ಮತ್ತು ಅಂತ್ಯದಲ್ಲಿ ಸ್ಮರಿಸುವುದು ಕಡ್ಡಾಯವಾಗಿರುವುದು.

ಬೀಸು ಕಂಸಾಳೆ[ಬದಲಾಯಿಸಿ]

 • ಮಾದೇವನು ಇದರ ಪ್ರವರ್ತಕನೆಂಬ ನಂಬಿಕೆಯಿದೆ. ಕತ್ತಿ ಪವಾಡದ ಹಳ್ಳದಲ್ಲಿ ಬಿಲ್ಲಯ್ಯ-ಕಾರಯ್ಯನನ್ನು ಪರೀಕ್ಷೆ ಮಾಡಿದ ಸಂತೋಷದಿಂದ ಮಾದೇಶ್ವರನು ಕಂಸಾಳೆ ಬೀಸಿ ನೃತ್ಯ ಮಾಡಿದರಿಂದ ಇದರ ಆರಂಭ ಎಂಬ ನಂಬಿಕೆಯು ಇರುವುದು. ಇದರಲ್ಲಿ ’ತಟ್ ಬಟ್ಲು’ , ’ತಾರ‍್ ಬಟ್ಲು’ ಎಂಬ ಎರಡು ವಿಧಗಳಿವೆ. [೩]
 • ಕಂಸಾಳೆಯನ್ನು ತಟ್ಟುತ್ತಾ ಕುಣಿಯುವುದೇ ತಟ್ ಬಟ್ಲು. ಮೂವರಿಂದ ಎಂಟು ಜನರು ಇದರಲ್ಲಿ ಭಾಗವಹಿಸುತ್ತಾರೆ.ಈ ಕಂಸಾಳೆಯ ಮೇಲಿನ ಮುಸುಕಿಗೆ ಸುಮಾರು ೦.೪೫ ಮೀ. ಅಥವಾ ೦.೬೧ ಮೀ ಉದ್ದದ ದಾರವನ್ನು ಕಟ್ಟಲಾಗುತ್ತದೆ. ಇದಕ್ಕೆ ಬಣ್ಣದ ಗೊಂಡೆಗಳಿಂದ ಅಲಂಕಾರವನ್ನು ಮಾಡಲಾಗಿರುತ್ತದೆ. ಈ ದಾರದ ತುದಿಯನ್ನು ಹಿಡಿದು ಬೀಸಿ ತಾಳ ಹಾಕುವುದರಿಂದಲೇ ಇದನ್ನು ಬೀಸು ಕಂಸಾಳೆಯೆಂದು ಕರೆಯುವರು.

ಬೀಸು ಕಂಸಾಳೆ[ಬದಲಾಯಿಸಿ]

 • ಕಂಸಾಳೆಯ ಕಲಾಪ್ರಕಾರಗಳಲ್ಲಿ `ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ, ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ.
 • ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು.
 • ಗಾಯಕರು `ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ.ಕಲಾವಿದರು ಕಂಸಾಳೆಗೆ ಕಟ್ಟಿದ ದಾರದ ತುದಿಯನ್ನು ಹಿಡಿದುಕೊಂಡು ಬೀಸಿ ತಾಳ ಹಾಕುವುದರಿಂದ ಇದು `ಬೀಸು ಕಂಸಾಳೆ’ ಯಾಗಿದೆ. ಈ ದಾರ ಸುಮಾರು ಒಂದೊವರೆ ಅಥವಾ ಎರಡು ಅಡಿ ಉದ್ದವಿರುವುದರಿಂದ ಕಲಾವಿದ ದೇಹದ ಸುತ್ತಮುತ್ತ ಯಾವ ಭಾಗಕ್ಕಾದರೂ ತಿರುಗಿಸಿ ತಾಳ ಬಡಿಯಲು ಅವಕಾಶವಾಗುತ್ತದೆ.
 • ಆದರೂ ಇದಕ್ಕೆ ಅತ್ಯಂತ ಕುಶಲತೆ ಹಾಗೂ ಅಭ್ಯಾಸ ಬೇಕಾಗುತ್ತದೆ. ವಿವಿಧ ಭಂಗಿಗಳಲ್ಲಿ ತಿರುಗುತ್ತ ಕಂಸಾಳೆಯನ್ನು ಬೀಸುತ್ತಿರುವಾಗ ಸ್ವಲ್ಪ ಲೆಕ್ಕಾಚಾರ ತಪ್ಪಿದರೂ ತಾಳ ತಪ್ಪಿ ಮೈಗೆ ಏಟು ಬೀಳುವ ಸಂಭವವುಂಟು. ಆದ್ದರಿಂದ ಕುಂತಾಡುವ ಅಥವಾ ನಿಂತಾಡುವ ಕಂಸಾಳೆಗಿಂತ ಬೀಸುಕಂಸಾಳೆ ಕ್ಲಿಷ್ಟವಾದ ಕಲೆ; ಅಷ್ಟೇ ರೋಮಾಂಚಕಾರಿ!

ವೇಷಭೂಷಣ[ಬದಲಾಯಿಸಿ]

 • ಕಲಾವಿದರು ಬಿಗಿ ಕಸೆ ಅಂಗಿ, ಮೊಳಕಾಲಿನವರೆಗೆ ಬಿಗಿ ಕಾಸೆ ಕಟ್ಟಿದ ಪಂಚೆ ಧರಿಸಿರುತ್ತಾರ್‍ಹೆ;. ಕೆಲವು ಕಡೆ ಬರಿ ಮೈಯಲ್ಲಿದ್ದು ಚಡ್ಡಿ ಮಾತ್ರ ಧರಿಸಿರುವುದುಂಟು. ಉಳಿದಂತೆ ಮೈಕೈಗೆ ಅಲ್ಲಲ್ಲಿ ವಿಭೂತಿ ಧರಿಸಿರುತ್ತಾರೆ. ಕಿವಿಗೆ ರುದ್ರಾಕ್ಷಿಯಿರುತ್ತದೆ.

ಕಂಸಾಳೆಯವರನ್ನು `ದೇವರ ಗುಡ್ಡ’ ರೆಂದೂ ಕರೆಯುತ್ತಾರೆ. `ಗುಡ್ಡ' ಮಹದೇಶ್ವರನ `ಭಕ್ತ’, ಗುಡ್ಡನನ್ನು ಬಿಡುವುದು ಕಂಸಾಳೆ ಮನೆತನದ ವಿಶಿಷ್ಟ ಸಂಪ್ರದಾಯ.

 • ವಂಶ ಪಾರಂಪರ್‍ಯವಾಗಿ ಬಂದ ಪದ್ಧತಿಯಂತೆ ಮನೆಗೊಬ್ಬ ಗುಡ್ಡನನ್ನು ಬಿಡುವುದು ಮಹದೇಶ್ವರನ ಒಕ್ಕಲಲ್ಲಿ ಕಡ್ಡಾಯ. ಅಲ್ಲದೆ ಕಂಟಕ ನಿವಾರಣೆ, ಕಷ್ಟ ಪರಿಹಾರದ ದೆಸೆಯಿಂದ ಮಾಡಿಕೊಂಡ ಹರಕೆಯಂತೆ ಗುಡ್ಡನನ್ನು ಬಿಡುವುದೂ ಉಂಟು. ಮಕ್ಕಳಾಗದವರು ಹೊತ್ತ ಹರಕೆಯ ಪರಿಣಾಮವಾಗಿ ಹುಟ್ಟಿದ ಹಿರಿಯ ಹೆಣ್ಣು-ಗಂಡು ಮಕ್ಕಳನ್ನು `ಗುಡ್ಡಿ’-`ಗುಡ್ಡ’ ರಾಗಿ ಬಿಡುವುದೂ ಉಂಟು. ಗುಡ್ಡಿ ಬಿಡುವ ಸಂಪ್ರದಾಯ ಇತ್ತೀಚೆಗೆ ಕಡಿಮೆಯಾಗಿದೆ. ಆಕೆ ಗುಡ್ಡಿಯಾದ ಮೇಲೆ ವಿವಾಹವಾಗುವಂತಿಲ್ಲ.
 • ಇಷ್ಟಪಟ್ಟಲ್ಲಿ ಗುಡ್ಡನೊಬ್ಬನನ್ನು ಆಕೆ `ಸ್ವೀಕರಿ’ಸಬಹುದು. ಗಂಡಸರನ್ನು`ಗುಡ್ಡ’ರಾಗಿ ಬಿಡುವ ಸಂಪ್ರದಾಯ ಈಗಲೂ ಇದೆ. ಗುಡ್ಡರಾದ ಮೇಲೆ ಕಂಸಾಳೆ ವಾದ್ಯ ಮತ್ತು ಪದಗಳನ್ನು ಕಲಿತು ಹಾಡುವ ಕಲೆಯನ್ನು ಬೆಳಸಿಕೊಂಡು ಕ್ರಮವಾಗಿ ಮಹದೇಶ್ವರನ ಸೇವೆ ಸಲ್ಲಿಸಬೇಕು.

“ಕೂಗೋ ಕೂಗು ಮಾದೇವನ,
ಕೂಗಿದರೆ ದುಂಡು ಮಾದೇವನ,
ಕೂಗಿದರೆ ಕುಣಿಯುತ್ತ, ಬರುವನ ಮಾದೇವನ,
ಕೂಗಯ್ಯ ಮುದ್ದು ಮಾದೇವನ”

ಎಂಬತಹ ಸೊಲ್ಲುಗಳ ಹಿನ್ನಲೆಯಲ್ಲಿ ಕಂಚಿನ ತಾಳದ ಶಬ್ದ ಕರ್ಣಾನಂದವನ್ನುಂಟುಮಾಡುತ್ತದೆ

ಪರಿಸಮಾಪ್ತಿ[ಬದಲಾಯಿಸಿ]

 • ಶಿವ ಮತ್ತು ಶರಣರ ಮಹಿಮೆಗಳನ್ನು ಕಥಾರೂಪದಲ್ಲಿ ಹಾಡುತ್ತ ಒಂದು ವಿಶಿಷ್ಟ ಜಾನಪದ ಸಂಪ್ರದಾಯವನ್ನು ಬೆಳಸಿಕೊಂಡು ಬಂದಿದೆ ಕಂಸಾಳೆ ಪ್ರಕಾರ. ಕಂಸಾಳೆಯ ಕಲಾವಿದರು ಪ್ರಮುಖವಾಗಿ ಮೈಸೂರು ಜಿಲ್ಲೆಯ ಮಲೆ ಮಹದೇಶ್ವರನ ಭಕ್ತರು. ಮಂಡ್ಯ-ಬೆಂಗಳೂರು ಜಿಲ್ಲೆಗಳಲ್ಲೂ ವಿರಳವಾಗಿ ಕಾಣುತ್ತಾರೆ.
 • ಜಾನಪದ ಸತ್ವವುಳ್ಳ ಕಥನಗೀತೆ, ಕಂಚಿನ ತಾಳಗಳ ವಿಶಿಷ್ಟವಾದ ಶಬ್ದ ಹಾಗೂ ಕಲಾವಿದರ ಕೈಚಳಕಗಳ ಸುಂದರ ಸಮ್ಮಿಳನದಿಂದಾಗಿ ಈ ಕಲೆ ವಿಸ್ಮಯಕಾರಕವಾಗಿ ಜನಮನವನ್ನು ತಣಿಸಿ ಶ್ರವಣಾನಂದವುಂಟುಮಾಡುತ್ತದೆ.‘ಕಂಸಾಳೆ’ ಎನ್ನುವುದು ಕಲಾವಿದರು ಕೈಯಲ್ಲಿ ಹಿಡಿಯುವ ಒಂದು ಬಗೆಯ ವಾದ್ಯ ವಿಶೇಷ.
 • ಭಿಕ್ಷಾಪಾತ್ರೆಯಂತಿರುವ, ಮಧ್ಯೆ ದಾರದ ಕುಚ್ಚು ಕಟ್ಟಿದ, ಅಂಗೈ ಅಗಲದ ಮಿಶ್ರಲೋಹದ ಒಂದು ಬಟ್ಟಲು ಎಡಗೈಯಲ್ಲಿದ್ದರೆ, ಬಲಗೈಯಲ್ಲಿ ಮಟ್ಟಸವಾದ ತಾಳವಿರುತ್ತದೆ. ಮುಚ್ಚಳದ ನಡುವಿನ ಹೊರಭಾಗ ಉಬ್ಬಿರುತ್ತದೆ. ಆ ಉಬ್ಬಿನ ರಂಧ್ರದಿಂದ ಬಿಗಿದ ನೀಳವಾದ ದಾರ ಗೊಂಡೆಗಳಿಂದ ಅಲಂಕೃತವಾಗಿ ಬಲಗೈ ಮೇಲಿಂದ ಇಳಿಬಿದ್ದಿರುತ್ತದೆ.
 • ಹಬ್ಬ ಹರಿದಿನಗಳಲ್ಲಿ, ಶಿವರಾತ್ರಿ ಕಾಲದಲ್ಲಿ ಮಹದೇಶ್ವರನ ಜಾತ್ರೆ ಸಂದರ್ಭದಲ್ಲಿ ಕೈಯಲ್ಲಿ ಕಂಸಾಳೆ ಹಿಡಿದು, ಮಾದಯ್ಯನ ಕೋಲ (ನಾಗಬೆತ್ತ)ನ್ನು ಕಂಕುಳಲ್ಲಿಟ್ಟು ಕೊಂಡು, ಬುತ್ತಿಯ ಗಂಟನ್ನು ತಲೆಯ ಮೇಲಿಟ್ಟುಕೊಂಡು, ಯಾತ್ರೆ ಹೊರಡುವುದು ಮೈಸೂರು ಜಿಲ್ಲೆಯಲ್ಲಿ ಸಾಮಾನ್ಯ ದೃಶ್ಯ.
 • ಕಂಸಾಳೆಯ ಕಲಾವಿದರಲ್ಲಿ ಮಹದೇಶ್ವರನ ಹುಟ್ಟು, ಬಾಲ್ಯ, ಬಾಲಲೀಲೆ, ಯೌವನ, ವಿನೋದ, ವಿರಸ, ಮುಪ್ಪು, ಮಹಿಮೆಗಳು ಕಂಠಸ್ಥವಾಗಿ ನಿಂತಿವೆ. ಈ ಕಾವ್ಯವನ್ನು ಇಡೀ ರಾತ್ರಿ ಹಾಡಿ ತಣಿಸುವ ಅವರ ಕಲೆಗಾರಿಕೆ ಮೆಚ್ಚುವಂತಹುದು.
 • ಇದಲ್ಲದೆ ಕಲಾವಿದರು ಪಿರಿಯಾಪಟ್ಟಣದ ಲಾವಣಿ, ಸಾರಂಗಧರ, ಚೆನ್ನಿಗರಾಮ, ಘನಪತಿರಾಯ, ಬಾಲನಾಗಮ್ಮ, ಅರ್ಜುನ ಜೋಗಿ ಮುಂತಾದ ಜನಪದ ಕಥಾ ಪ್ರಸಂಗಗಳನ್ನೂ ಹಾಡುತ್ತಾರೆ. ಜನಪದ ಬೆಳೆಸಿಕೊಂಡು ಬರುತ್ತಿರುವ ಇವರ ಕಲೆ ಜಾನಪದ ಕ್ಷೇತ್ರದ ದೊಡ್ಡ ನಿಧಿಗಳಲ್ಲೊಂದಾಗಿದೆ.
 • ಕಂಸಾಳೆಯ ಕಲಾಪ್ರಕಾರಗಳಲ್ಲಿ ‘ಬೀಸುಕಂಸಾಳೆ’ಯು ವಿಶಿಷ್ಟ ಶೈಲಿಯದು. ಚಮತ್ಕಾರ, ಶ್ರಮ ಎರಡೂ ಒಟ್ಟಿಗೆ ಸೇರಿ ಅಭಿವ್ಯಕ್ತವಾಗುವ ಈ ಪ್ರದರ್ಶನಕ್ಕೆ ನಾಲ್ಕು ಜನ ಬೇಕು, ಒಬ್ಬಾತ ಮಧ್ಯೆ ಇದ್ದು ತಾಳಕ್ಕೆ ತಕ್ಕಂತೆ ತಲೆಯ ಮೇಲೆ, ಬೆನ್ನ ಹಿಂದೆ, ಕಾಲು ಕೆಳಗೆ, ಕುಳಿತು, ನಿಂತು, ಬಾಗಿ ಬಳುಕಿ, ಉರುಳಾಡಿ, ಸುತ್ತ ನಿಂತ ಮೂವರಿಗೆ ತಾಳಗಳನ್ನು ಕೊಡುತ್ತ ನಿರ್ದಿಷ್ಟ ಲಯದಲ್ಲಿ ಬೀಸು ಕಂಸಾಳೆಯನ್ನು ಪ್ರದರ್ಶಿಸುತ್ತಾನೆ.
 • ಹೀಗೆ ಆರಂಭವಾದ ಪ್ರದರ್ಶನ ಪರಾಕಾಷ್ಠೆಗೆ ಹೋದಾಗ ನಾಲ್ಕು ಜೊತೆ ಕಂಸಾಳೆಗಳ ತಾಳದ ಕಂಚಿನ ಸ್ವರ, ಮಿಂಚಿನ ವೇಗದ ಕೈ ಚಳಕ ನೋಟಕರನ್ನು ಮೂಕವಿಸ್ಮಯರನ್ನಾಗಿ ಮಾಡುತ್ತದೆ. ಎಷ್ಟೇ ಚುರುಕಿನಿಂದ ಕಲೆ ನಡೆದರೂ ಎಲ್ಲೂ ತಾಳ ತಪ್ಪದಂತೆ ಎಚ್ಚರ ವಹಿಸುವ ಕಲಾವಿದರ ಪರಿಪೂರ್ಣ ಕುಶಲತೆ ನಿಜಕ್ಕೂ ಸೋಜಿಗ ಪಡುವಂಥದು. ಗಾಯಕರು ‘ಲಿಂಗ ಬಾ, ಮುದ್ದು ಲಿಂಗ ಬಾ, ನಮ್ಮ ಮುದ್ದು ಮಾದಯ್ಯನ ಲಿಂಗ ಬಾ’-ಎಂಬ ಹಾಡನ್ನು ಲಯಬದ್ಧವಾಗಿ ತಾಳದೊಂದಿಗೆ ಹೊಂದಿಸಿಕೊಂಡೇ ಹಾಡುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

 1. https://indiaforyou.in/2016/06/07/kamsale/
 2. https://timesofindia.indiatimes.com/city/mysuru/Master-of-Kamsale/articleshow/9412907.cms
 3. "ಆರ್ಕೈವ್ ನಕಲು". Archived from the original on 2018-05-29. Retrieved 2018-08-27.


ಚಿತ್ರಗಳು[ಬದಲಾಯಿಸಿ]

"https://kn.wikipedia.org/w/index.php?title=ಕಂಸಾಳೆ&oldid=1198133" ಇಂದ ಪಡೆಯಲ್ಪಟ್ಟಿದೆ