ಏತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏತವು ಒಂದು ನೀರಾವರಿ ಉಪಕರಣ. ಏತವು ಪ್ರಾಚೀನ ಈಜಿಪ್ಷಿಯನ್‍ಗಳಿಂದ ಮತ್ತು ಮೆಸೊಪೊಟೇಮಿಯನ್‍ರಿಂದ ನೀರಾವರಿಯಲ್ಲಿ ಬಳಸಲಾದ ಮುಂಚಿನ ಉಪಕರಣವಾಗಿತ್ತು. ಇವರು ನೈಲ್ ನದಿ ಉದ್ದಕ್ಕೂ ಇರುತ್ತಿದ್ದರು. ನೀರಾವರಿಯು ಹೊಂಡಗಳು, ಕಾಲುವೆಗಳು, ಕಂದಕಗಳು, ಬಾವಿಗಳು, ಹಳ್ಳಗಳು, ಮತ್ತು ಜಲಮಾರ್ಗಗಳನ್ನು ಬಳಸಿ ಬೆಳೆಗಳಿಗೆ ನೀರುಹಾಕುವ ಒಂದು ರೀತಿಯಾಗಿದೆ. ಏತವನ್ನು ನದಿ ಅಥವಾ ಕೆರೆಯಿಂದ ನೆಲಕ್ಕೆ ಅಥವಾ ಮತ್ತೊಂದು ನದಿ ಅಥವಾ ಕೆರೆಗೆ ನೀರನ್ನು ಎತ್ತಲು ಬಳಸಲಾಗುತ್ತಿತ್ತು. ಇದು ಅದರ ಕೊನೆಗೆ ಬಕೆಟ್ ಜೋಡಿಸಿದ ಉದ್ದದ ಕೋಲಿನಂತೆ ಕಾಣುತ್ತದೆ.[೧] ಈಗಲೂ ಇದನ್ನು ಆಫ಼್ರಿಕಾ ಮತ್ತು ಏಷ್ಯಾದ ಅನೇಕ ಪ್ರದೇಶಗಳಲ್ಲಿ ಬಳಸಲಾಗುತ್ತದೆ. ಇದು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ, ಉದಾಹರಣೆಗೆ ಗಂಗಾ ಬಯಲಿನ ಭೋಜ್‍ಪುರಿ ಭೂಪ್ರದೇಶದಲ್ಲಿ ಬಹಳ ಸಾಮಾನ್ಯವಾಗಿದೆ (ಇಲ್ಲಿ ಇದನ್ನು ಢೇಂಕಿ ಎಂದು ಕರೆಯಲಾಗುತ್ತದೆ). ಹಂಗೇರಿಯ ಗ್ರೇಟ್ ಪ್ಲೇನ್‍ನಲ್ಲಿ ಇವು ಸಾಮಾನ್ಯವಾಗಿ ಉಳಿದಿವೆ ಮತ್ತು ಇವನ್ನು ಈ ಪ್ರದೇಶದ ಸಂಕೇತವಾಗಿ ಪರಿಗಣಿಸಲಾಗುತ್ತದೆ.

ಏತವು ಲಂಬ ಚೌಕಟ್ಟನ್ನು ಹೊಂದಿರುತ್ತದೆ. ಇದರ ಮೇಲೆ ಉದ್ದನೆಯ ಕೋಲು ಅಥವಾ ಶಾಖೆಯನ್ನು, ಒಂದು ಕೊನೆಯಿಂದ ಸುಮಾರು ಅದರ ಉದ್ದದ ಐದನೇ ಒಂದು ಭಾಗದಷ್ಟು ದೂರದಲ್ಲಿ ಜೋತುಬಿಡಲಾಗುತ್ತದೆ. ಈ ಕೋಲಿನ ಉದ್ದನೆಯ ತುದಿಯಲ್ಲಿ ಒಂದು ಬಕೆಟ್, ಚರ್ಮದ ಚೀಲ, ಅಥವಾ ಡಾಂಬರ್ ಲೇಪಿತ ಜೊಂಡಿನ ಚೀಲ ಜೋತು ಬಿದ್ದಿರುತ್ತದೆ. ಬಕೆಟ್ಟನ್ನು ಅನೇಕ ಭಿನ್ನ ಶೈಲಿಗಳಲ್ಲಿ ತಯಾರಿಸಿರಬಹುದು, ಕೆಲವೊಮ್ಮೆ ಅಸಮ ತಳವನ್ನು ಹೊಂದಿದ್ದು ಅಥವಾ ಬಿಚ್ಚಬಹುದಾದ ಭಾಗವನ್ನು ಚರ್ಮದ ಮೇಲ್ಭಾಗದಲ್ಲಿ ಹೊಂದಿರುತ್ತದೆ. ಇದರಿಂದ ನೀರನ್ನು ಕೈಯಿಂದ ಖಾಲಿ ಮಾಡುವ ಬದಲು ತಕ್ಷಣ ವಿತರಿಸಲು ಸಾಧ್ಯವಾಗುತ್ತದೆ. ಗಿಡ್ಡನೆಯ ತುದಿಯು ಒಂದು ತೂಕವನ್ನು (ಜೇಡಿ ಮಣ್ಣು, ಕಲ್ಲು ಅಥವಾ ಹೋಲುವ ತೂಕ) ಹೊತ್ತಿರುತ್ತದೆ. ಇದು ಸನ್ನೆಕೋಲಿನ ಪ್ರತಿಭಾರವಾಗಿ ಕಾರ್ಯನಿರ್ವಹಿಸುತ್ತದೆ. ಸರಿಯಾಗಿ ಸಮವಾದಾಗ, ಪ್ರತಿಭಾರವು ಅರ್ಧ ತುಂಬಿದ ಬಕೆಟ್‍ಗೆ ಆಧಾರವಾಗುತ್ತದೆ. ಹಾಗಾಗಿ ಖಾಲಿ ಬಕೆಟ್ಟನ್ನು ಕೆಳಗೆ ನೀರಿಗೆ ಎಳೆಯುವುದಕ್ಕೆ ಸ್ವಲ್ಪ ಶ್ರಮವನ್ನು ಬಳಸಲಾಗುತ್ತದೆ, ಆದರೆ ತುಂಬಿದ ಬಕೆಟ್ಟನ್ನು ಎತ್ತಲು ಕೇವಲ ಅಷ್ಟೇ ಶ್ರಮ ಬೇಕಾಗುತ್ತದೆ.

ಬಹುತೇಕ ಶ್ರಮವಿರದ ತೂಗಾಟ ಮತ್ತು ಎತ್ತುವ ಚಲನೆಯಿಂದ, ಜಲನಿರೋಧಕ ಪಾತ್ರೆಯನ್ನು ಒಂದು ಜಲಸಮೂಹದಿಂದ (ಸಾಮಾನ್ಯವಾಗಿ ನದಿ ಅಥವಾ ಹೊಂಡ) ನೀರನ್ನು ಎತ್ತಿ ನೆಲಕ್ಕೆ ಅಥವಾ ಮತ್ತೊಂದು ಜಲಸಮೂಹಕ್ಕೆ ಸಾಗಿಸಲು ಬಳಸಲಾಗುತ್ತದೆ. ಪ್ರತಿ ಚಲನೆಯ ಅಂತ್ಯದಲ್ಲಿ, ನೀರನ್ನು ನಾಲೆಗಳಲ್ಲಿ ಸುರಿಯಲಾಗುತ್ತದೆ. ಇವು ನೀರನ್ನು ಬೇಕಾದ ದಿಕ್ಕಿನಲ್ಲಿ ನೀರಾವರಿ ಕಾಲುವೆಗಳ ಉದ್ದಕ್ಕೂ ಸಾಗಿಸುತ್ತವೆ.

ಉಲ್ಲೇಖಗಳು[ಬದಲಾಯಿಸಿ]

  1. John Roberts (historian), edited by Allen Lane (2013). The Penguin History of the World. Penguin Books. {{cite book}}: |author= has generic name (help)
"https://kn.wikipedia.org/w/index.php?title=ಏತ&oldid=975881" ಇಂದ ಪಡೆಯಲ್ಪಟ್ಟಿದೆ