ವಿಷಯಕ್ಕೆ ಹೋಗು

ಕರಡಿಮಜಲು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಡಿಮಜಲು : ಕರಡಿ ಹಾಗೂ ಅದರ ಸಹವಾದ್ಯ ಡೊಳ್ಳುಗಳೆರಡೂ ಚರ್ಮವಾದ್ಯಗಳೇ. ಒಂದು ಕರಡಿಗೆ ಎರಡು ಡೊಳ್ಳು, ಒಂದು ಜೊತೆ ತಾಳಗಳು ಸಹವಾದ್ಯಗಳಾಗಿವೆ. ಚಿಗರೆ ಅಥವಾ ಆಡಿನ ಚರ್ಮದಿಂದ ಮಾಡಿದ ಕರಡಿ ಎರಡು ಗುಣಿಗಳಿಂದ ಬಾರಿಸುವ ವಾದ್ಯ. ಎತ್ತಿನ ಅಥವಾ ಕೋಣನ ಚರ್ಮದಿಂದ ಮಾಡಿದ ಡೊಳ್ಳು ಒಂದೇ ಗುಣಿಯಿಂದ ಬಾರಿಸುವ ವಾದ್ಯವಾದರೂ ಅದಕ್ಕೆ ಎಡಗೈ ಸಹಾಯಕವಾಗುತ್ತದೆ. ಕಮಾನುಕಂಟಿಯ ನಿಲುವಂಗಿಯನ್ನು ತೊಟ್ಟು, ಕರಡಿಯನ್ನು ನಡುವಿಗೆ ಕಟ್ಟಿ ಕೊಂಡಾತ ಮಧ್ಯದಲ್ಲಿ, ಬಗಲುಗಸೆಯ ಅಂಗಿತೊಟ್ಟು, ಡೊಳ್ಳುಗಳನ್ನು ಹೆಗಲಿಗೆ ನೇತುಹಾಕಿಕೊಂಡು ಬಾರಿಸುವವರು ಕರಡಿಯವನ ಎಡಬಲಗಳಲ್ಲಿ ನಿಂತಿರುತ್ತಾರೆ. ತಾಳ ಬಾರಿಸುವವನೂ ಕರಡಿಯವನ ಹತ್ತಿರದಲ್ಲೇ ನಿಂತಿರುತ್ತಾನೆ. ಕರಡಿವಾದನಕ್ಕೆ ಪುರಕವಾಗಿ ಶ್ರುತಿ, ಸನಾದಿಗಳೆಂಬ ಊದುವಾದ್ಯಗಳಿರುತ್ತವೆ. ಒಬ್ಬ ಶ್ರುತಿಹಿಡಿದರೆ, ಇನ್ನೊಬ್ಬ ಸನಾದಿಯಲ್ಲಿ ರಾಗಾಲಾಪಗಳನ್ನು ನುಡಿಸುತ್ತಾನೆ. ಆ ತಾಳವನ್ನು ಅನುಸರಿಸಿ ಕರಡಿಡೊಳ್ಳಿನವರು ಬಾರಿಸುವರು. ಅದು ಕೇಳುವುದಕ್ಕೆ ಕರಡಿ ಗುಡುಗು ಹಾಕಿದಂತಿರುತ್ತದೆ. ಸನಾದಿಯವ ಕರಡಿಯವನ ಎದುರಿಗೆ ನಿಂತು, ಶ್ರುತಿಗನುಸರಿಸಿ ರಾಗಾಲಾಪನೆ ಮಾಡಿ ದೀರ್ಘ ಪಲ್ಲವಿಯ ಒಂದು ಮಟ್ಟವನ್ನು ಊದುತ್ತಾನೆ. ಉದಾಹರಣೆಗೆ: ಶರಣು ಶ್ರೀ ಗುರುವರ, ಮರಣರಹಿತಕರ, ಕರುಣಾಕರಗೆ ದೇವಗೆ ಮಾತ್ರೆಗಳನ್ನು ಎಣಿಸಿಕೊಂಡು ಕರಡಿಯವ ವೀರಗಾಲು ಹೊಡೆದು, ಮೂರು ಮುಕ್ತಾಯಗಳನ್ನು ಹಾಕಿ ಮುಗಿಸುವುದಕ್ಕೂ ಸನಾದಿಯವನ ಕಡೆಯ ಮಾತ್ರೆಯ ಪೆಟ್ಟಿಗೂ ಮೇಳಯಿಸಿತೆಂದರೆ, ಡೊಳ್ಳು, ತಾಳಿನವರು ಸಂದರ್ಭಕ್ಕೆ ತಕ್ಕ ಗತ್ತು ಬಾರಿಸುತ್ತ ಕುಣಿದಾಡುವರು. ಸನಾದಿಯವ ದ್ವಿಗುಣದಲ್ಲಿ ನುಡಿಸುವಂತೆ ಕರಡಿ, ಡೊಳ್ಳಿನವರನ್ನು ಪ್ರೇರಿಸಿದಾಗಲಂತೂ ಅವರೆಲ್ಲರ ಉತ್ಸಾಹ, ಕುಣಿತ, ಕೇಕೆ ಪ್ರೇಕ್ಷಕರ ಮೈತುಂಬಿಸುವುವು. ಆಗ ಕೊನೆಯ ಹಂತದಲ್ಲಿ ಬಂದ ಗತ್ತು ಕೊನೆಗೊಳ್ಳುವುದು. ಅಮೇಲೆ ಮತ್ತೊಂದು. ಗ್ರಾಮದ ಆಯಕಟ್ಟಿನ ಸ್ಥಳದಲ್ಲಿ ಮಜಲಿನವರು ಬಂiÀÄಲುಗತ್ತು ಎಂಬ ವಿಶಿಷ್ಟಗತ್ತನ್ನು ಬಾರಿಸುವರು. ಅಲ್ಲಿ ಲಾವಣಿಕಾರ ಬಂiÀÄಲು ಲಾವಣಿಯನ್ನು ಹಾಡಿ, ಮೇಲೊಂದು ಸಖಿ ಹೇಳುತ್ತಾನೆ. ಲಾವಣಿಕಾರ ಕಾಲಲ್ಲಿ ಗೆಜ್ಜೆ ಕಟ್ಟಿ, ಕೈಯಲ್ಲಿ ತಾಳಹಾಕುತ್ತ, ಬಾಯಲ್ಲಿ ಲಾವಣಿ ಹೇಳುತ್ತ ಕುಣಿಯುವ ಸಂದರ್ಭ ಉತ್ಸಾಹ ದಾಯಕವಾಗಿರುತ್ತದೆ. ನೀರಜಾಕ್ಷಿ ಬಾರನ್ಯಾತಕೆ ಪ್ರಿಯ | ಕರೆತಾರೆ ಮುಗಿಯುವೆನು ಕೈಯ || ಇಂಥ ಒಂದು ಸಖಿಯ ಮಟ್ಟವನ್ನೇ ಸನಾದಿಯವ ಸ್ವೀಕರಿಸಿ ನುಡಿಸತೊಡಗಲು, ಡೊಳ್ಳಿನವರು ಜಿಗಿದು ನಿಂತು ಮುಕ್ತಾಯ ಹಾಕಿದಾಗ ನೆರೆದವರೆಲ್ಲ ಭಲೆ-ಎಂದು ಉದ್ಗರಿಸದೆ ಇರಲಾರರು. ಕನ್ನಡನಾಡಿನ ವಾದ್ಯವಿಶೇಷಗಳಾದ ಚೌಡಿಕೆ-ಊಡಕಗಳಂತೆ ಕರಡಿವಾದ್ಯವೂ ಪ್ರಾಣವನ್ನು ಚೇತರಿಸಿ, ಉತ್ಸಾಹಶಕ್ತಿಯನ್ನು ಜಾಗೃತಗೊಳಿಸುವಂಥ ಗಂಡುಗಾಡಿಯಾಗಿದೆ.