ವಿಷಯಕ್ಕೆ ಹೋಗು

ಚಂಡೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಂಡೆ
ಚಂಡೆ

ಚಂಡೆ ದಕ್ಷಿಣ ಭಾರತದ ಸಾಂಪ್ರದಾಯಿಕ ಮತ್ತು ಶಾಸ್ತ್ರೀಯ ಸಂಗೀತದಲ್ಲಿ, ವಿಶೇಷವಾಗಿ ಕರ್ನಾಟಕದ ಯಕ್ಷಗಾನ ರಂಗಭೂಮಿಯಲ್ಲಿ ಬಳಸಲಾಗುವ ಸಂಗೀತ ಸಾಧನವಾಗಿದೆ.[] ಇದು ಯಕ್ಷಗಾನ ತಾಳ ಪದ್ಧತಿಯನ್ನು ಅನುಸರಿಸುತ್ತದೆ.[] ಇದರ ಲಯಗಳು ಪೂರ್ವ ಶಾಸ್ತ್ರೀಯ ಸಂಗೀತದ ಪ್ರಕಾರಗಳಾದ ಕರ್ನಾಟಕ ಸಂಗೀತ ಮತ್ತು ಹಿಂದುಸ‍್ತಾನಿ ಸಂಗೀತವನ್ನು ಆಧರಿಸಿದೆ.[] ಈ ಉಪಕರಣದಲ್ಲಿ ಅನೇಕ ಪ್ರಭೇದಗಳಿವೆ, ಅದರಲ್ಲಿ ಎರಡು ಪ್ರಮುಖ ಪ್ರಭೇದಗಳೆಂದರೆ ಬಡಗು ತಿಟ್ಟು ಚಂಡೆ (ಉತ್ತರ ಶಾಲೆ) ಮತ್ತು ತೆಂಕು ತಿಟ್ಟು ಚಂಡೆ (ದಕ್ಷಿಣ ಶಾಲೆ). ದಕ್ಷಿಣ ಕರಾವಳಿ ಕರ್ನಾಟಕ ಮತ್ತು ಕೇರಳದ ಕಲಾ ಪ್ರಕಾರಗಳಲ್ಲಿ ಪ್ರತ್ಯೇಕವಾಗಿ ಬಳಸಲಾಗುವ ಚೆಂಡ ಕೂಡ ಇದರ ಪ್ರಭೇದವಾಗಿದೆ. ಬಡಗು ತಿಟ್ಟುಗಳಲ್ಲಿ ಬಳಸುವ ಚಂಡೆಯು ಕೇರಳದಲ್ಲಿ ಬಳಸುವ ಚೆಂಡಕ್ಕಿಂತ ರಚನಾತ್ಮಕವಾಗಿ ಮತ್ತು ಧ್ವನಿಯ ದೃಷ್ಟಿಯಿಂದ ಭಿನ್ನವಾಗಿದೆ.

ಇತಿಹಾಸ

[ಬದಲಾಯಿಸಿ]

ಪ್ರಾಚೀನ ಹಿಂದೂ ಶಿಲ್ಪಕಲೆ, ಚಿತ್ರಕಲೆ ಮತ್ತು ಪುರಾಣಗಳಲ್ಲಿ, ಚಂಡೆಯನ್ನು ಸಾಮಾನ್ಯವಾಗಿ ಯುದ್ಧವನ್ನು ಘೋಷಿಸಲು ಬಳಸುವ ಸಾಧನವಾಗಿ ಚಿತ್ರಿಸಲಾಗಿದೆ (ರಣ ಚಂಡೆ). ಈ ಉಪಕರಣವು ಸಂಕೀರ್ಣವಾದ ಲಯಗಳನ್ನು ಉತ್ಪಾದಿಸುತ್ತದೆ ಹಾಗೂ ಅದನ್ನು ೩ ಕಿ.ಮೀ. ಗಿಂತ ಹೆಚ್ಚು ದೂರದಿಂದ ಕೇಳಬಹುದು. ಚಂಡೆಯು ಸುಮಾರು ೧೫೦ ವರ್ಷಗಳಿಂದಲೂ ಬಳಕೆಯಲ್ಲಿದೆ ಎಂದು ನಂಬಲಾಗಿದೆ. ಆದರೆ ಇದು ಯಕ್ಷಗಾನಕ್ಕೆ ಇತ್ತೀಚಿಗೆ ಸೇರ್ಪಡೆಯಾಗಿದೆ. ಇದರ ದೇಹವನ್ನು ಹಲಸಿನ ಮರದಿಂದ ನಿರ್ಮಿಸಲಾಗಿದೆ. ಇದರ ದೇಹಕ್ಕೆ ಕನ್ನಡದಲ್ಲಿ ‘ಗೂಡು’ ಎನ್ನುತ್ತಾರೆ. ಚಂಡೆ ವಾದಕರು ಯಕ್ಷಗಾನದ ತಾಳ ಪದ್ದತಿಯನ್ನು ಅನುಸರಿಸುತ್ತಾರೆ. ಇದು ಕರ್ನಾಟಕ ಸಂಗೀತದ ತಾಳಗಳನ್ನೂ ಹೋಲುತ್ತದೆ. ಲಯ ಪದ್ಧತಿಯು ಪೂರ್ವ-ಶಾಸ್ತ್ರೀಯ ಮೂಲವನ್ನು ಹೊಂದಿದೆ.

ಭೌತಿಕ ಘಟಕಗಳು

[ಬದಲಾಯಿಸಿ]

ವೃತ್ತಾಕಾರದ ಚಂಡೆಯ ಮೇಲ್ಭಾಗವನ್ನು ಸಂಸ್ಕರಿಸಿದ ಹಸುವಿನ ಚರ್ಮದಿಂದ ಮಾಡಲಾಗುತ್ತದೆ. ಸಾಮಾನ್ಯವಾಗಿ ದಪ್ಪ ಹಗ್ಗಗಳನ್ನು ಬಳಸಿ, ಚಂಡೆಯ ದೇಹವು ಅದರ ವೃತ್ತಾಕಾರದ ಮೇಲ್ಭಾಗವನ್ನು ಹಿಡಿದಿಟ್ಟುಕೊಳ್ಳುವ ಹಾಗೆ ೧೨ ಕೀಲುಗಳನ್ನು ಅಳವಡಿಸಲಾಗುತ್ತದೆ. ಚಂಡೆಯ ಮೇಲ್ಭಾಗ, ಗಾತ್ರದಲ್ಲಿ ಸುಮಾರು ೩೨ ಸೆಂ.ಮೀ ಮತ್ತು ಸುಮಾರು ೨೩ ಸೆಂ.ಮೀ ಒಳಗಿನ ವ್ಯಾಸವನ್ನು ಹೊಂದಿದೆ. ಚಂಡೆಯ ನುಡಿಸುವ ಭಾಗವು ಸುಮಾರು ೨೦ ಸೆಂ.ಮೀ ವ್ಯಾಸವನ್ನು ಹೊಂದಿದೆ. ಇದನ್ನು ಬಳಸುವಾಗ ಇದರ ಮೇಲ್ಭಾಗವನ್ನು ಬಿಗಿಗೊಳಿಸಲು ಅಥವಾ ಸಡಿಲಗೊಳಿಸಲು ಹಗ್ಗಗಳ ಒಳಗೆ ಸೇರಿಸಲಾದ ಬೆಣೆಗಳನ್ನು ತಿರುಚಲಾಗುತ್ತದೆ. ವಾದಕರ ಪ್ರಬಲವಾದ ಕೈಯಿಂದ ಉರುಳಿಸಲು ಒಂದು ಕೊಳವೆಯಾಕಾರದ ಮರದ ಬೆಣೆಯನ್ನು ಇದರ ಮೇಲ್ಭಾಗದ ಅಂಚಿಗೆ ಕಟ್ಟಲಾಗುತ್ತದೆ.

ಎರಡು ಕೋಲುಗಳನ್ನು ಬಳಸಿ ಚಂಡೆ ನುಡಿಸುತ್ತಾರೆ. ಇದನ್ನು ಲಂಬವಾಗಿ ಆದರೆ, ತಳದಲ್ಲಿರುವ ಚರ್ಮವು ನೆಲವನ್ನು ಸ್ಪರ್ಶಿಸದಂತೆ ಸ್ವಲ್ಪ ಓರೆಯಾಗಿ ಹಿಡಿದಿರುತ್ತಾರೆ.

ಚಂಡೆ ಕೋಲುಗಳು

[ಬದಲಾಯಿಸಿ]

ಚಂಡೆ ಕೋಲುಗಳನ್ನು ವಿಶೇಷವಾಗಿ ಚಂಡೆಗಾಗಿ ತಯಾರಿಸಲಾಗುತ್ತದೆ. ಕೋಲಿನ ಆಕಾರ ಮತ್ತು ದಪ್ಪವು ಅದರ ಉದ್ದಕ್ಕೆ ಅನುಗುಣವಾಗಿ ಬದಲಾಗುತ್ತದೆ. ಎಡಗೈ ಮತ್ತು ಬಲಗೈ ಕೋಲುಗಳು ವಿಭಿನ್ನ ಆಕಾರದಲ್ಲಿರುತ್ತವೆ. ಸಾಮಾನ್ಯವಾಗಿ, ಕೋಲಿನ ಉದ್ದ ಸುಮಾರು ೨೮ ಸೆಂಟಿಮೀಟರ್; ಆದಾಗ್ಯೂ ಇದು ಚಂಡೆಯ ಮೇಲ್ಭಾಗದ ವ್ಯಾಸದೊಂದಿಗೆ ಬದಲಾಗಬಹುದು.

ಬಳಕೆಯ ವಿಧಾನಗಳು

[ಬದಲಾಯಿಸಿ]

ಕೋಲುಗಳನ್ನು ಸಾಮಾನ್ಯವಾಗಿ ಒಂದು ವಿಧದ ಬಿದಿರಿನಿಂದ ತಯಾರಿಸಲಾಗುತ್ತದೆ. ಪ್ರಬಲವಾದ ಕೈಗೆ ಬಳಸುವ ಕೋಲಿನ ತಲೆಯು ದಪ್ಪವಾಗಿರುತ್ತದೆ ಮತ್ತು ಕೋಲಿನ ದೇಹ ಮತ್ತು ಕೋಲನ್ನು ಹಿಡಿಯುವ ಅಂತ್ಯವು ಸಾಮಾನ್ಯ ಗಾತ್ರದ್ದಾಗಿದೆ. ಇನ್ನೊಂದು ಕೋಲು ಸ್ವಲ್ಪ ದಪ್ಪವಾಗಿರುತ್ತದೆ ಮತ್ತು ಕಡಿಮೆ ಮೊನಚಾಗಿರುತ್ತದೆ. ಪ್ರಬಲವಾದ ಕೋಲು ಸಾಮಾನ್ಯವಾಗಿ ಚಂಡೆಯ ಮೇಲ್ಭಾಗದ ಬೆಣೆಯ ಮೇಲೆ ಇರುತ್ತದೆ ಮತ್ತು ಬೀಸುವ ಧ್ವನಿಯನ್ನು ಉತ್ಪಾದಿಸಲು ಕೋಲನ್ನು ಉರುಳಿಸಲಾಗುತ್ತದೆ. ಕೈಯಿಂದ ಅಥವ ಬೆರಳಿನಿಂದ ನುಡಿಸುವ ಧ್ವನಿಗಿಂತ ಭಿನ್ನವಾದ ಧ್ವನಿಯನ್ನು ಚಂಡೆಯ ಮೂಲಕ ನುಡಿಸಬಹುದಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
"https://kn.wikipedia.org/w/index.php?title=ಚಂಡೆ&oldid=1250466" ಇಂದ ಪಡೆಯಲ್ಪಟ್ಟಿದೆ