ಕಣಗಾಲ್ ಪ್ರಭಾಕರ ಶಾಸ್ತ್ರಿ
ಕಣಗಾಲ್ ಪ್ರಭಾಕರ ಶಾಸ್ತ್ರಿ (೧೯೨೯ - ೧೯೮೯) - ಕನ್ನಡ ಚಿತ್ರರಂಗದ ಹೆಸರಾಂತ ಗೀತರಚನೆಕಾರರಲ್ಲೊಬ್ಬರು. ಕಲಾವಿದರಾಗುವ ಕನಸಿನಿಂದ ರಂಗಭೂಮಿಗೆ ಪ್ರವೇಶಿಸಿ ಸಾಹಿತ್ಯ ರಚನೆಯಲ್ಲಿ ಯಶಸ್ಸು ಕಂಡ ಅಪರೂಪದ ವ್ಯಕ್ತಿ. ಇವರು ಕೆಲವು ಚಿತ್ರಗಳಿಗೆ ನಿರ್ದೇಶನ ಕೂಡ ಮಾಡಿದ್ದು, ಒಂದು ಚಿತ್ರವನ್ನು ನಿರ್ಮಿಸಿದ್ದಾರೆ. ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇವರ ಸಹೋದರರು.
ಬಾಲ್ಯ
[ಬದಲಾಯಿಸಿ]ಮೈಸೂರು ಜಿಲ್ಲೆ ಪಿರಿಯಾಪಟ್ಟಣದ ಸಮೀಪದ ಕಣಗಾಲು ಗ್ರಾಮದ ರಾಜನ ಬಿಲುಗುಳಿಯಲ್ಲಿ ೧೯೨೯ರ ನವೆಂಬರ್ ೧೧ರಂದು ಜನಿಸಿದ ಪ್ರಭಾಕರ ಶಾಸ್ತ್ರಿ, ಬಾಲ್ಯದಿಂದಲೇ ತಾತ, ಲಕ್ಷ್ಮೀ ನರಸಿಂಹಯ್ಯನವರ ಮೂಲಕ, ಸಾಂಪ್ರದಾಯಿಕ ಶಿಕ್ಷಣದ ಪರಿಚಯಮಾಡಿಕೊಂಡರು. ತಾತನವಾರಿಂದ ಕನ್ನಡ, ಸಂಸ್ಕೃತ,ಇಂಗ್ಲೀಷ್ ಭಾಷೆಗಳನ್ನು ಕಲಿತರು. ಚಿಕ್ಕಂದಿನಲ್ಲೇ ಪಡೆದ ಸಂಗೀತದ ಪಾಠ ಅವರ ನೆರವಿಗೆ ಬಂತು. ಕಡು ಬಡತನದ ಬವಣೆಗೆ ತುತ್ತಾದ ಶಾಸ್ತ್ರಿಗಳು, ಚಿಕ್ಕ ವಯಸ್ಸಿನಲ್ಲೇ ಬಯಲು ನಾಟಕಗಳನ್ನು ನೋಡಲು ಆರಂಭಿಸಿದರು. ಸಿ.ಬಿ.ಮಲ್ಲಪ್ಪನವರ ನಾಟಕ ಕಂಪನಿಗೆ ಏಳನೇ ವಯಸ್ಸಿನಲ್ಲೇ ಸೇರಿಕೊಂಡ ಇವರು ತಮ್ಮ ೧೧ನೇ ವಯಸ್ಸಿನಲ್ಲೇ 'ರಾಜಾಸ್ಯಾಂಡೊ' ಅವರ ಬಳಿ ಸಂಕಲನ ಸಹಾಯಕರಾಗಿ ಸೇರಿಕೊಂಡರು. ಈ ನಡುವೆ ಹತ್ತಾರು ಪೌರಾಣಿಕ ನಾಟಕಗಳನ್ನೂ ಬರೆದರು. ಗಂಗೆ-ಗೌರಿ ನಾಟಕದಲ್ಲಿ ನಾರದನ ಪಾತ್ರ ಅಭಿನಯಿಸಿ ಜನರ ಮನಸ್ಸನ್ನು ಗೆದ್ದರು. ವೃತ್ತಿ ರಂಗಭೂಮಿಯ 'ಲಕ್ಷಿ ಸಾನಿ ಕಂಪೆನಿ'ಯ ನಾಟಕಗಳಲ್ಲಿ ಕಾಣಿಸಿಕೊಂಡರು. ಕಾಳಿದಾಸ ನಾಟಕದಲ್ಲಿ ಭೋಜರಾಜನ ಪಾತ್ರದಿಂದ ಪ್ರೇಕ್ಷಕರಿಗೆ ಗುರುತಿಸಲ್ಪಟ್ಟರು.ಎರಡೂವರೆ ದಶಕಗಳಲ್ಲಿ ಹಲವಾರು ನಾಟಕ ಕಂಪೆನಿಗಳಲ್ಲಿ ದುಡಿದು ಐವತ್ತಕ್ಕೂ ಮಿಗಿಲಾಗಿ ಪಾತ್ರಗಳಲ್ಲಿ ಹೆಸರುಮಾಡಿದರು. ಅಪಾರ ಜ್ಞಾಪಕ ಶಕ್ತಿಯನ್ನು ಹೊಂದಿದ್ದರು.
ನಾಟಕಗಳ ರಚನೆ
[ಬದಲಾಯಿಸಿ]- ಸ್ವರ್ಣ ಸೀತಾ,
- ಪ್ರತಿಕಾರ,
- ಪ್ರಚಂಡ ರಾವಣ
ಮುಖ್ಯವಾದವುಗಳು. ಪ್ರಚಂಡ ರಾವಣ ನಾಟಕ ಕನ್ನಡ ರಂಗಭೂಮಿಯಲ್ಲಿ ಬಿರುಗಾಳಿ ಎಬ್ಬಿಸಿತು.
ಚಿತ್ರರಂಗ
[ಬದಲಾಯಿಸಿ]ನಿರ್ದೇಶಕ ಶಂಕರ್ ಸಿಂಗ್ ಅವರ ಕೃಷ್ಣಲೀಲಾ ಚಿತ್ರಕ್ಕೆ ಮೊದಲ ಬಾರಿ ಹಾಡುಗಳನ್ನು ರಚಿಸಿದ ಪ್ರಭಾಕರ ಶಾಸ್ತ್ರಿ ಭಾಗ್ಯೋದಯ ಚಿತ್ರಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ-ಗೀತೆಗಳನ್ನು ರಚಿಸುವ ಮೂಲಕ ಪೂರ್ಣ ಪ್ರಮಾಣದ ಚಿತ್ರಸಾಹಿತಿಯಾದರು. ಬಿ.ಆರ್.ಪಂತುಲು ಅವರ ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯ ಖಾಯಂ ಬರಹಗಾರರಾಗಿ ಶ್ರೀಕೃಷ್ಣದೇವರಾಯ ಚಿತ್ರದವರೆಗೂ ಸೇವೆ ಸಲ್ಲಿಸಿದರು. ಹಲವು ಅತ್ಯುತ್ತಮ ಚಿತ್ರಗಳಿಗೆ ಕಾರಣೀಭೂತರಾದರು. ಭಲೇ ಭಟ್ಟ, ಸುಭದ್ರಾ ಕಲ್ಯಾಣ ಎಂಬ ಎರಡು ಚಿತ್ರಗಳನ್ನು ನಿರ್ದೇಶಿಸಿದರು. ೧೯೬೩ರಲ್ಲಿ ತಾವೇ ಸತಿಶಕ್ತಿ,ಚಿತ್ರ ನಿರ್ಮಿಸಿ ನಿರ್ದೇಶಿಸಿದರು. ವಾಸ್ತವವಾಗಿ ಈ ಚಿತ್ರವನ್ನು ದೇವಿಫಿಲಂಸ್ ಸಂಸ್ಥೆ ನಿರ್ಮಿಸಬೇಕಿತ್ತು. ಕಾರಣಾಂತರಗಳಿಂದ ಕೊನೆ ಕ್ಷಣದಲ್ಲಿ ಹಿಂದೆಗೆಯಿತು. ಇದನ್ನು ತಮ್ಮ ಸ್ವಾಭಿಮಾನದ ಪ್ರಶ್ನೆ ಎಂದು ಭಾವಿಸಿದ ಶಾಸ್ತ್ರಿಗಳು ನಿರ್ಮಾಣಕ್ಕೂ ತೊಡಗಿದರೆಂದು ಹೇಳಲಾಗುತ್ತದೆ. ದಕ್ಷಿಣ ಭಾರತದ ಅಂದಿನ ಖ್ಯಾತ ನಟಿ ಸಾಹುಕಾರ್ ಜಾನಕಿ ನಾಯಕಿಯಾಗಿದ್ದ ಈ ಚಿತ್ರದಲ್ಲಿ ರಾಜಕುಮಾರ್ ನಾಯಕ ಮತ್ತು ಖಳನಾಯಕನ ಎರಡೂ ಪಾತ್ರಗಳಲ್ಲಿ ಅಪಾರ ಯಶಸ್ಸನ್ನುಹೊಂದಿದ್ದರು. ರಾಜಕುಮಾರ್ ಅವರ ಮಾಂತ್ರಿಕನ ಮೇಕಪ್, ಶ್ಯಾಮಲಾದಂಡಕವನ್ನು ಒಂದು ತಂತ್ರವಾಗಿ ಬಳಸಿಕೊಂಡ ಕ್ರಮ, ಹಾಗೂ ಜನಪ್ರಿಯ ಗೀತೆಗಳು ಚಿತ್ರದ ಯಶಸ್ಸಿಗೆ ಕಾರಣವಾದವು. ಹೀಗಿದ್ದೂ ಶಾಸ್ತ್ರಿಗಳು ಮತ್ತೆ ಚಿತ್ರನಿರ್ಮಾಣದತ್ತ ಆಸಕ್ತಿ ತೋರಲಿಲ್ಲ.
ಚಿತ್ರಸಾಹಿತ್ಯದಲ್ಲಿ ಪ್ರಯೋಗಗಳು
[ಬದಲಾಯಿಸಿ]ಪ್ರಭಾಕರ ಶಾಸ್ತ್ರಿಗಳ ಗೀತೆಗಳಲ್ಲಿ ನೂತನ ರೀತಿಯ ಪ್ರತಿಮೆಗಳನ್ನು ಅಳವಡಿಸಿರುತ್ತಾರೆ. ಇದಕ್ಕೆ ಕೆಲವು ನಿದರ್ಶನಗಳು:
- ಜಲಲ ಜಲಲ ಜಲಧಾರೆ( ವಾಲ್ಮೀಕಿ)- ಒಂದು ಅತ್ಯುತ್ತಮ ಸಾಹಿತ್ಯ ರಚನೆಯುಳ್ಳ ಗೀತೆ
- ಒಲವಿನ ಯಮುನಾ ನದಿ ಹರಿದಿದೆ ರಾಧಾಮಾಧವರು ಅವರ ಅಮರ ಪ್ರೇಮಿಗಳು
- ಮನವೆಲ್ಲ ಮೈಮರೆವ ಬೃಂದಾವನ ಅವರ ಗೀತ ಪರಂಪರೆಯ ಬೆನ್ನೆಲುಬು
- ಚಿತ್ರದಿ ಚಿತ್ರವ ಬರೆದವಳು
- ಸತಿಪತಿಗೊಲಿದ ರತಿಪತಿಗಾನ
- ಗಾಂಧಾರ ಭಾಷೆಯ ಹಕ್ಕಿಗಳಿಂಚರ
ಹಾಗೆಯೇ, ಒಲವು ಪದದ ಹೇರಳ ಬಳಕೆ ಇವರ ಗೀತೆಗಳಲ್ಲಿ ಕಾಣಬಹುದು. ಉದಾಹರಣೆಗೆ ಕೆಳಗಿನ ಕೆಲವು ಗೀತೆಗಳು:
- ಒಲವಿನಾ ಪ್ರಿಯಲತೆ ಅವಳದೇ ಚಿಂತೆ
- ಒಲವೇ ನಮ್ಮ ಒಲಿದಂತೆ
- ಒಲವಿನ ಸವಿಯ ಸವಿಯುವ ಶುಭದಿನ
- ಒಲವಿನ ಪೂಜೆಗೆ ಒಲವೇ ಮಂದಾರ
ಶಾಸ್ತ್ರಿಯವರು ಒಟ್ಟು ಸುಮಾರು ೩೮೦ ಕನ್ನಡ ಚಿತ್ರಗೀತೆಗಳನ್ನು ರಚಿಸಿದ್ದಾರೆ.
ನಿಧನ
[ಬದಲಾಯಿಸಿ]ಪ್ರಭಾಕರ ಶಾಸ್ತ್ರಿಗಳು ೧೯೮೯ರಲ್ಲಿ ನಿಧನ ಹೊಂದಿದರು.
ಆಕರಗಳು
[ಬದಲಾಯಿಸಿ]ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- 'ಸಿನಿ ಸಾಹಿತ್ಯದ ಪ್ರತಿಭೆ-ಕಣಗಾಲ್ ಪ್ರಭಾಕರ ಶಾಸ್ತ್ರಿ'-ಎನ್. ಜಗನ್ನಾಥ ಪ್ರಕಾಶ್,ಮಯೂರ,'ರಂಗ ವಿಹಂಗಮ,' ಏಪ್ರಿಲ್,೨೦೧೬, ಪುಟ,೧೩೦