ಸದಾಶಿವನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಸದಾಶಿವನಗರ ಲೋಯರ್ ಪ್ಯಾಲೇಸ್ ಆರ್ಚರ್ಡ್ಸ್ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಿದೆ. ಈ ಬಡಾವಣೆಗೆ ಕರಾವಳಿಯ ಪ್ರಸಿದ್ಧ ಗಾಂಧಿವಾದಿ, ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಶ್ರೀ ಕಾರ್ನಾಡು ಸದಾಶಿವರಾವ್ ಅವರ ಹೆಸರನ್ನು ಇಡಲಾಗಿದೆ. ವಿಪರ್ಯಾಸವೆಂದರೆ ಸದಾಶಿವರಾಯರು ಆಗರ್ಭ ಶ್ರೀಮಂತರಾಗಿ ಜನಿಸಿದರೂ ಸರಳ ಜೀವನ ನಡೆಸಿ ತಮ್ಮ ಸರ್ವಸ್ವವನ್ನೂ ಸ್ವಾತಂತ್ರ್ಯ ಹೋರಾಟಕ್ಕೆ ಮುಡಿಪಾಗಿಟ್ಟು ಅಂತ್ಯ ಕಾಲದಲ್ಲಿ ಕಡು ಬಡವರಂತೆ ದಾರುಣವೇ ಎನ್ನಬಹುದಾಗಿ ಬದುಕಿದವರು. ಆದರೆ ಅವರ ಹೆಸರನ್ನು ಹೊತ್ತ ಬಡಾವಣೆಯು ಪ್ರತಿಷ್ಠಿತರ ನೆಲೆದಾಣವಾಗಿದ್ದು ಜನ ಸಾಮಾನ್ಯರು ಮುಟ್ಟಲಾರದ ಭೂಮಿಯ ಬೆಲೆ ಹೊತ್ತು ನಿಂತಿದೆ.

ವೈಯಾಲಿಕಾವಲ್, ಬೆಂಗಳೂರು ಅರಮನೆ, ಮಲ್ಲೇಶ್ವರಂಗಳಿಂದ ಸುತ್ತುವರಿದ ಈ ಬಡಾವಣೆ ವಿಸ್ತಾರವಾದ ರಸ್ತೆ, ಉದ್ಯಾನಗಳಿಂದಲೂ ವಿಶಾಲವಾದ ನಿವೇಶನಗಳಲ್ಲಿ ಕಟ್ಟಲಾಗಿರುವ ದೊಡ್ಡ ಬಂಗಲೆಗಳಿಂದಲೂ ಕೂಡಿದೆ. ಬೆಂಗಳೂರಿನಲ್ಲಿದ್ದ ನೂರಾರು ಕೆರೆಗಳಲ್ಲಿ ಉಳಿದಿರುವ ಕೆಲವೇ ಕೆರೆಗಳಲ್ಲಿ ಒಂದಾದ ಸ್ಯಾಂಕಿ ಕೆರೆ ಈ ಪ್ರದೇಶದಲ್ಲಿ ವಿಸ್ತರಿಸಿದೆ. ಕೆಂಪೇಗೌಡರು ತಮ್ಮ ಆಡಳಿತ ಕಾಲದಲ್ಲಿ ಬೆಂಗಳೂರು ನಗರದ ಆಯಕಟ್ಟಿನ ಎತ್ತರದ ಪ್ರದೇಶಗಳಲ್ಲಿ ನಿರ್ಮಿಸಿದ್ದ ಕಾವಲು ಗೋಪುರಗಳಲ್ಲೊಂದು ಇಲ್ಲೇ ಇದೆ. ಈ ಗೋಪುರಕ್ಕೆ ಸಮೀಪವೇ ಸರ್ ಇನಾಯತುಲ್ಲಾ ಮೇಖ್ರಿಯವರ ಹೆಸರನ್ನು ಹೊತ್ತ ಪ್ರಸಿದ್ಧ ಮೇಖ್ರಿ ವೃತ್ತವಿದೆ.

ಸದಾಶಿವನಗರದಲ್ಲಿ ಅನೇಕ ಪ್ರಸಿದ್ಧ ವ್ಯಕ್ತಿಗಳು ಬಾಳಿದ್ದರು, ನೆಲೆಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ ಡಾ! ರಾಜ್‍ಕುಮಾರ್ ಅವರ ಮನೆ ಇದೇ ಬಡಾವಣೆಯಲ್ಲಿದೆ.