ವಿಷಯಕ್ಕೆ ಹೋಗು

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ

Coordinates: 12°56′22.4″N 77°35′55.7″E / 12.939556°N 77.598806°E / 12.939556; 77.598806
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಿಮ್ಹಾನ್ಸ್ ಇಂದ ಪುನರ್ನಿರ್ದೇಶಿತ)
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ'
National Institute of Mental Health and Neurosciences
ಸ್ಥಾಪನೆ
  • 1925 as Mental Hospital,[]
  • 27 December 1974 as NIMHANS
ಪ್ರಕಾರಸಾರ್ವಜನಿಕ
ಸ್ಥಳಬೆಂಗಳೂರು, ಭಾರತ
12°56′22.4″N 77°35′55.7″E / 12.939556°N 77.598806°E / 12.939556; 77.598806
ಆವರಣನಗರ
ಅಂತರಜಾಲ ತಾಣwww.nimhans.ac.in


ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (NIMHANS) ಭಾರತದ ಪ್ರಮುಖ ವೈದ್ಯಕೀಯ ಸಂಸ್ಥೆಯಾಗಿದೆ. ಇದು ಮಿದುಳು, ನರ ಮತ್ತು ಮಾನಸಿಕ ಕಾಯಿಲೆಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಹಾಗೂ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ತರಬೇತು ನೀಡುವ ರಾಷ್ಟ್ರೀಯ ಸಂಸ್ಥೆ. ಇದು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿದೆ.[] NIMHANS 1994 ರಲ್ಲಿ ವಿಶ್ವವಿದ್ಯಾಲಯ ಧನಸಹಾಯ ಆಯೋಗದಿಂದ ಸ್ವಾಯತ್ತ ವಿಶ್ವವಿದ್ಯಾಲಯ ಮತ್ತು 2012 ರಲ್ಲಿ ಸಂಸತ್ತಿನ ಕಾಯ್ದೆಯ ಮೂಲಕ ಮಹತ್ವದ ಸಂಸ್ಥೆ ಎಂದು ಘೋಷಿತವಾಗಿದೆ.[]

ಇದರ ವಿಸ್ತಾರ 40X40 ಚ.ಕಿಮೀ. ಕರ್ನಾಟಕ  ಸರ್ಕಾರದ ಅಧೀನದಲ್ಲಿದ್ದ ಅಖಿಲ ಭಾರತ ಮಾನಸಿಕ ಆರೋಗ್ಯ ಸಂಸ್ಥೆಗಳ ಸಂಯೋಗದಿಂದಾಗಿ ನಿಮ್ಹಾನ್ಸ್ ಜನ್ಮ ತಾಳಿತು. ಕರ್ನಾಟಕ ರಾಜ್ಯದ ಖ್ಯಾತ ನರಶಸ್ತ್ರವೈದ್ಯರಾದ ಪ್ರಾಧ್ಯಾಪಕ ಎಂ.ಆರ್. ವರ್ಮ ಎಂಬವರು ಈ ಸಂಸ್ಥೆಯ ಸ್ಥಾಪನೆಗೆ ಕಾರಣರಾದವರು.

ಇತಿಹಾಸ

[ಬದಲಾಯಿಸಿ]

ಬುದ್ಧಿಭ್ರಮಣೆ ಮತ್ತು ತೀವ್ರ ಬುದ್ಧಿಮಾಂದ್ಯ ವಿಕಲತೆಗಳಿಗೆ ಈಡಾದವರನ್ನು ಇಟ್ಟುಕೊಂಡು ಅವರ ಯೋಗಕ್ಷೇಮ ನೋಡಿಕೊಳ್ಳಲು ಮತಿವಿಕಲರ ಕೂಡುಖಾನೆಯೊಂದು ಬೆಂಗಳೂರಿನಲ್ಲಿ ಅಸ್ತಿತ್ವದಲ್ಲಿತ್ತು (ಸು. 1848). 1925ರಲ್ಲಿ ಇದು ಮಾನಸಿಕ ಆಸ್ಪತ್ರೆಯಾಗಿ ಪರಿವರ್ತನೆಯಾಯಿತು. ಕೆಂಪೇಗೌಡರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕಟ್ಟಡದಲ್ಲಿ ಈ ಆಸ್ಪತ್ರೆ ಕೆಲಸ ಮಾಡುತ್ತಿತ್ತು. ಇದನ್ನು 1937ರಲ್ಲಿ ಹೊಸೂರು ರಸ್ತೆಯಲ್ಲಿರುವ ಈಗಿನ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು. ಹಳೆಯ ಮೈಸೂರು ಸಂಸ್ಥಾನದಲ್ಲಿದ್ದದ್ದು ಇದೊಂದೇ ಈ ತೆರನ ಆಸ್ಪತ್ರೆ. 805 ಹಾಸಿಗೆಗಳಿರುವ ಒಳರೋಗಿ ಘಟಕದ ಜೊತೆಗೆ ಹೊರ ರೋಗಿ ಘಟಕವೂ ಇದ್ದು ಮನೋರೋಗಿಗಳಿಗೆ ಆಧುನಿಕ ರೀತಿಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುತ್ತಿತ್ತು. 1954ರಲ್ಲಿ ಭಾರತದ ಕೇಂದ್ರ ಸರ್ಕಾರ ಅಖಿಲ ಭಾರತ ಮಾನಸಿಕ ಆರೋಗ್ಯ ಸಂಸ್ಥೆಯನ್ನು ಇದೇ ಆವರಣದಲ್ಲಿ ಸ್ಥಾಪಿಸಿ, ಮನೋವಿಜ್ಞಾನದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಹಾಗೂ ಚಿಕಿತ್ಸಾ ಮನೋವಿಜ್ಞಾನದಲ್ಲಿ ಎರಡು ವರ್ಷಗಳ ಡಿಪ್ಲೊಮಾ ಶಿಕ್ಷಣಗಳನ್ನು ಪ್ರಾರಂಭಿಸಿ, ಇಡೀ ದೇಶಕ್ಕೆ ಪ್ರಪ್ರಥಮವಾಗಿ ಮನೋವೈದ್ಯರನ್ನೂ ಚಿಕಿತ್ಸಾ ಮನೋವಿಜ್ಞಾನಿಗಳನ್ನೂ ತಯಾರುಮಾಡುವ ಅವಕಾಶ ಕಲ್ಪಿಸಿಕೊಟ್ಟಿತ್ತು. ಈ ಎರಡೂ ಸಂಸ್ಥೆಗಳು ಹಲವಾರು ಜನಪರ ಕೆಲಸಗಳನ್ನು ಮಾಡುತ್ತ ಅನೇಕ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ, ಸಂಶೋಧನೆಗಳನ್ನು ನಡೆಸುತ್ತಿದ್ದುವು. ಕಾಲಕ್ರಮೇಣ ಇಲ್ಲಿ ನರರೋಗ ವಿಭಾಗ ಮತ್ತು ನರಶಸ್ತ್ರಕ್ರಿಯಾವಿಭಾಗಗಳನ್ನು ಪ್ರಾರಂಭಿಸಲಾಯಿತು.

ನಿಮ್ಹಾನ್ಸ್ ಸಂಸ್ಥೆಯು ಮಾನಸಿಕ ಆಸ್ಪತ್ರೆ ಮತ್ತು ಅಖಿಲ ಭಾರತ ಮಾನಸಿಕ ಆರೋಗ್ಯ ಸಂಸ್ಥೆಯ ಸಂಯೋಜನೆಯ ಪರಿಣಾಮವಾಗಿ ೨೭ ಡಿಸೆಂಬರ್ ೧೯೭೪ರಂದು ರಚನೆಗೊಂಡಿತು. ಇದು ಸಂಸ್ಥೆಗಳ ನೋಂದಣಿ ಕಾಯಿದೆಯಡಿ ದೇಶದಲ್ಲಿ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಸೇವೆಯನ್ನು ನೀಡುತ್ತದೆ.

ಸಂಸ್ಥೆ ಮತ್ತು ಆಡಳಿತ

[ಬದಲಾಯಿಸಿ]

ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿರ್ದೇಶನದಲ್ಲಿ ಈ ಸಂಸ್ಥೆ ಕಾರ್ಯನಿರ್ವಹಿಸುತ್ತದೆ.[] ಕರ್ನಾಟಕ ಸರ್ಕಾರ, ಅನೇಕ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳು ಸಂಶೋಧನೆಗೆ ಸಂಪನ್ಮೂಲಗಳನ್ನು ಒದಗಿಸುತ್ತವೆ.

ಚಿಕಿತ್ಸೆ, ತರಬೇತಿ ಮತ್ತು ಸಂಶೋಧನೆ ಈ ಮೂರೂ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ನಿಮ್ಹಾನ್ಸ್ ಸಂಸ್ಥೆಗೆ ಪ್ರತಿವರ್ಷ ಸು. 60,000 ಹೊಸ ರೋಗಿಗಳು ಬಂದು ಸಲಹೆ ಪಡೆಯುತ್ತಾರೆ. ಅನುಸರಿಕೆಗೆ ಬರುವ ಹೊರರೋಗಿಗಳ ಸಂಖ್ಯೆ ವರ್ಷಕ್ಕೆ ಸು.1.5 ಲಕ್ಷ. ಮನೋವೈದ್ಯಕೀಯ ವಿಭಾಗದಲ್ಲಿ 650 ಹಾಸಿಗೆಗಳಿವೆ. ವರ್ಷಕ್ಕೆ ಸು. 4500 ಮಂದಿ ಒಳರೋಗಿಳಾಗಿ ಚಿಕಿತ್ಸೆ ಪಡೆಯುತ್ತಾರೆ. ಅಂತೆಯೇ ನರರೋಗ ವಿಭಾಗದಲ್ಲಿ 2000 ರೋಗಿಗಳೂ, ನರವಿಜ್ಞಾನ ವಿಭಾಗದಲ್ಲಿ 2500 ರೋಗಿಗಳೂ ಈ ರೀತಿ ಚಿಕಿತ್ಸೆ ಪಡೆಯುತ್ತಾರೆ. ಅಪಘಾತ ಮತ್ತು ತುರ್ತುಚಿಕಿತ್ಸಾ ವಿಭಾಗ ಸದಾ ಕೆಲಸ ಮಾಡುತ್ತಿದೆ. ಸೇಕಡ 70ಕ್ಕೂ ಹೆಚ್ಚಿನ ರೋಗಿಗಳಿಗೆ ಸಲಹೆ ಮತ್ತು ಚಿಕಿತ್ಸೆ ಉಚಿತವಾಗಿ ದೊರೆಯುತ್ತವೆ. ಸ್ಕ್ಯಾನಿಂಗ್, ಎಂ.ಆರ್.ಐ., ವಿವಿಧ ಪಂಗಡದ ರಕ್ತಗಳು, ಮಿದುಳು ದ್ರವಪರೀಕ್ಷೆಗಳು, ಸ್ನಾಯು ಇಲ್ಲವೆ ನರ ಪರೀಕ್ಷೆಗಳು ಮತ್ತು ಮಿದುಳಿನ ಶಸ್ತ್ರಚಿಕಿತ್ಸೆಗಳು ಬಡವರಿಗೆ ಉಚಿತವಾಗಿ ಲಭ್ಯ. ತೀವ್ರರೀತಿಯ ಮಾನಸಿಕ ರೋಗಿಗಳನ್ನು ಮುಕ್ತ ವಾರ್ಡುಗಳಲ್ಲಿಟ್ಟು ಅವರೊಂದಿಗೆ ಮನೆಯವರೂ ಇರುವಂಥ ಸನ್ನಿವೇಶಗಳಿದ್ದು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಇದರಿಂದ ಈ ರೋಗಿಗಳು ಶೀಘ್ರವಾಗಿ ಗುಣಮುಖರಾಗಿ, ಉಪಯುಕ್ತ ಮನುಷ್ಯರಾಗಲು ಸಾಧ್ಯವಾಗುತ್ತದೆ. ಅತ್ಯಾಧುನಿಕ ಔಷಧಿಗಳು, ಸುಧಾರಿತ ವಿದ್ಯುತ್‌ಕಂಪನ ಚಿಕಿತ್ಸೆ, ಮನೋಚಿಕಿತ್ಸೆ, ಆಪ್ತಸಲಹೆ, ಸಮಾಧಾನ, ಉದ್ಯೋಗಚಿಕಿತ್ಸೆ, ಪುನರ್ವಸತಿ ಕಾರ್ಯಕ್ರಮಗಳು ಇವೆಲ್ಲವುಗಳಿಂದಾಗಿ ಹೆಚ್ಚಿನ ಮನೋರೋಗಿಗಳು ತಮ್ಮ ರೋಗ ಇಲ್ಲವೇ ಸಮಸ್ಯೆಗಳಿಂದ ಮುಕ್ತರಾಗುತ್ತಿದ್ದಾರೆ.

ರೋಗಿಗಳು ಆಸ್ಪತ್ರೆಗೆ ಬರುವುದರ ಬದಲು, ಅವರಿದ್ದೆಡೆಗೇ ತಜ್ಞರು ಹೋಗುವ ವಿಸ್ತರಣಾ ಕಾರ್ಯಕ್ರಮ ನಿಮ್ಹಾನ್ಸ್ ಸಂಸ್ಥೆಯ ಇನ್ನೊಂದು ವೈಶಿಷ್ಟ್ಯ. ಕನಕಪುರ, ಆನೆಕಲ್, ಗೌರಿಬಿದನೂರು, ಮಧುಗಿರಿ ಮತ್ತು ಮದ್ದೂರಿನಲ್ಲಿ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿರುವ ಈ ಮಾಸಿಕ ಚಿಕಿತ್ಸಾ ಶಿಬಿರಗಳಲ್ಲಿ ವರ್ಷಕ್ಕೆ ಸರಾಸರಿ 60,000 ರೋಗಿಗಳು ಈ ಬಗೆಯ ನೆರವು ಪಡೆಯುತ್ತಿದ್ದಾರೆ.

ಜನಸಂಖ್ಯೆಯ ಸೇಕಡ 20ರಷ್ಟು ಮಂದಿಗೆ ವಿವಿಧ ಬಗೆಯ ಮಾನಸಿಕ ಸಮಸ್ಯೆಗಳು, ಅಸ್ವಸ್ಥತೆಗಳಿದ್ದು ಚಿಕಿತ್ಸೆ ನೀಡಲು ಸಂಸ್ಥೆಯ ವೈದ್ಯಕೀಯ ಸಿಬ್ಬಂದಿವರ್ಗ, ಇತರ ಎಲ್ಲ ವೈದ್ಯರು, ಆರೋಗ್ಯ ಕಾರ್ಯಕರ್ತರು, ಶಿಕ್ಷಕರು, ಸ್ವಯಂ ಸೇವಾ ಸಂಸ್ಥೆಗಳ ಸದಸ್ಯರು, ಸಮಾಜಸೇವೆಯಲ್ಲಿ ತೊಡಗಿರುವವರು ಮೊದಲಾದವರ ಸಹಕಾರದಿಂದ ನಿಮ್ಹಾನ್ಸ್ ಹಲವಾರು ಸಮುದಾಯ ಮಟ್ಟದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಭಾರತದಲ್ಲಿ ಪ್ರಥಮವಾಗಿ ಕರ್ನಾಟಕದ ಬಳ್ಳಾರಿ ಜಿಲ್ಲೆಯಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಕಾರ್ಯಕ್ರಮ ಅನುಷ್ಠಾನಕ್ಕೆ ಬಂದಿತು (1985). ಅಲ್ಲಿ ಸಾವಿರಾರು ಬಡರೋಗಿಗಳಿಗೆ ಚಿಕಿತ್ಸೆ-ಸಲಹೆಗಳು ದೊರೆಯುತ್ತಿವೆ.

ಈ ಸಂಸ್ಥೆಯನ್ನು ಒಂದು ಪರಿಗಣಿತ ವಿಶ್ವವಿದ್ಯಾಲಯ ಎಂದು ಘೋಷಿಸಲಾಗಿದೆ. ಇದೊಂದು ಸ್ವಯಂ ಆಡಳಿತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಇದರಲ್ಲಿಯ ಸ್ನಾತಕೋತ್ತರ ಶಿಕ್ಷಣಗಳು ಜನಪ್ರಿಯವಾಗಿದ್ದು ಭಾರತದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ಪ್ರಪಂಚದ ಇತರ ರಾಷ್ಟ್ರಗಳಿಂದಲೂ ತರಬೇತಿಗಾಗಿ ಅಭ್ಯರ್ಥಿಗಳು ಇಲ್ಲಿಗೆ ಬರುತ್ತಾರೆ.

ನಿಮ್ಹಾನ್ಸ್ ನಡೆಸುತ್ತಿರುವ ಅನೇಕ ಸಂಶೋಧನೆಗಳ ಪೈಕಿ ಪ್ರಮುಖವಾದವು ವಿವಿಧ ಬಗೆಯ ನರರೋಗ, ಮಾನಸಿಕ ರೋಗಗಳಲ್ಲಿ ಜೀವಕೋಶಗಳ ಮಟ್ಟದಲ್ಲಿ ಕಾಣುವ ಬದಲಾವಣೆಗಳು, ಮಿದುಳು ಮತ್ತು ನರಮಂಡಲದ ಬೆಳೆವಣಿಗೆ ಮತ್ತು ಕಾರ್ಯವೈಖರಿ, ರೋಗ ನಿರೋಧಕ ಸಾಮರ್ಥ್ಯ, ಮಾಹಿತಿವಿಜ್ಞಾನ, ನರರೋಗ-ಮನೋರೋಗಗಳಿಗೆ ಪರಿಣಾಮಕಾರಿ ಚಿಕಿತ್ಸಾ ವಿಧಾನಗಳು, ವ್ಯಕ್ತಿ ಮತ್ತು ಸಮುದಾಯದ ಮಾನಸಿಕ ಆರೋಗ್ಯ, ಸಮುದಾಯದಲ್ಲಿ ಕಡಿಮೆ ಖರ್ಚಿನಲ್ಲಿ ನಡೆಸಬಹುದಾದಂಥ ಚಿಕಿತ್ಸಾ ವಿಧಾನಗಳ ಪರಿಣಾಮ ಇತ್ಯಾದಿ.

ಈ ಸಂಸ್ಥೆಯಲ್ಲೊಂದು ಪ್ರಕಟಣಾ ವಿಭಾಗವೂ ಇದೆ. ಅನೇಕ ಸಂಶೋಧನ ಗ್ರಂಥಗಳು, ವಿಚಾರಸಂಕಿರಣಗಳ ಪುಸ್ತಕಗಳು, ನಿಮ್ಹಾನ್ಸ್ ಜರ್ನಲ್ ಎಂಬ ನಿಯತಕಾಲಿಕೆ ಅಲ್ಲದೇ ಜನಸಾಮಾನ್ಯರಿಗಾಗಿ ಮನಸ್ಸು ಮತ್ತು ಮಾನಸಿಕ ಆರೋಗ್ಯ ಹಾಗೂ ಸಾಮಾಜಿಕ ನಂಬಿಕೆಗಳು ಮತ್ತು ಮಾನಸಿಕ ಆರೋಗ್ಯ ಎಂಬ ಕನ್ನಡ ಕೃತಿಗಳನ್ನೂ ಪ್ರಕಟಿಸಿದೆ. ಸಂಸ್ಥೆಯ ಆರೋಗ್ಯ ಶಿಕ್ಷಣ ಇಲಾಖೆ ಮೂರ್ಛೆರೋಗ, ಮಾನಸಿಕ ಕಾಯಿಲೆಗಳು, ಮದ್ಯಪಾನ ಮಾದಕವಸ್ತುಗಳ ಸೇವನೆ, ಏಡ್ಸ್ ಮುಂತಾದ ಜನಶಿಕ್ಷಣ ಸಾಹಿತ್ಯವನ್ನು ಪ್ರಕಟಿಸಿದೆ.

ನಿಮ್ಹಾನ್ಸ್‌ನಲ್ಲಿ ಒಂದು ಸುಸಜ್ಜಿತ ಗ್ರಂಥಾಲಯವಿದೆ. ರೆಫ್ರೊಗ್ರಫಿ ವಿಭಾಗ, ಗಣಕವಿಭಾಗ, ಪ್ರಲೇಖನ ವಿಭಾಗ, ಕಛೇರಿ, ರಟ್ಟುಕಟ್ಟುವ ವಿಭಾಗ ಹೀಗೆ ಹಲವಾರು ವಿಭಾಗಗಳು ಇದರಲ್ಲಿವೆ. ನವದೆಹಲಿಯ ನ್ಯಾಷನಲ್ ಇನ್‌ಫರ್‌ಮೇಷನ್ ಸೆಂಟರ್ ಸಂಸ್ಥೆಯೊಂದಿಗೆ ಗಣಕ ಸಂಪರ್ಕ ಸೌಲಭ್ಯ ಪಡೆದಿದೆ. ಗ್ರಂಥಾಲಯ ಮಾಹಿತಿ ಸ್ವತಃಶ್ಚಲೀಕರಣ, ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನಗಳಿಗೆ ಸಂಬಂಧಿಸಿದಂಥ ಭಾರತೀಯ ಸಾಹಿತ್ಯವನ್ನು ಕುರಿತ ಗಣಕತಂತ್ರಾಂಶದ ತಯಾರಿಕೆಯನ್ನು ಈ ಗ್ರಂಥಾಲಯ ಕೈಗೆತ್ತಿಕೊಂಡಿದೆ.

ವಿಭಾಗಗಳು

[ಬದಲಾಯಿಸಿ]
  • ಜೀವಭೌತಶಾಸ್ತ್ರ
  • ಜೈವಿಕ ಸಂಖ್ಯಾಶಾಸ್ತ್ರ
  • ಸೋಂಕುಶಾಸ್ತ್ರ
  • ಮಾನವ ತಳಿಶಾಸ್ತ್ರ
  • ಮಾನಸಿಕ ಆರೋಗ್ಯ ಶಿಕ್ಷಣ[]
  • ಚಿಕಿತ್ಸಕ ಮನೋವಿಜ್ಞಾನ
  • ಚಿಕಿತ್ಸಕ ನರವಿಜ್ಞಾನ
  • ಮಗು ಮತ್ತು ಹದಿಹರೆಯದ ಮನೋವೈದ್ಯಶಾಸ್ತ್ರ
  • ನರ ಅರಿವಳಿಕೆಶಾಸ್ತ್ರ
  • ನರ ರಾಸಾಯನಿಕಗಳು
  • ನರಚಿತ್ರಣ ಮತ್ತು ಶಸ್ತ್ರಚಿಕಿತ್ಸೆಯ ವಿಕಿರಣಶಾಸ್ತ್ರ
  • ನರವಿಜ್ಞಾನ
  • ನರ ಸೂಕ್ಷ್ಮಜೀವಶಾಸ್ತ್ರ
  • ನರರೋಗಶಾಸ್ತ್ರ
  • ನರಶರೀರಶಾಸ್ತ್ರ
  • ನರಶಸ್ತ್ರಕ್ರಿಯೆ
  • ನರವೈರಾಣುಶಾಸ್ತ್ರ
  • ನರ್ಸಿಂಗ್
  • ನರವೈಜ್ಞಾನಿಕ ಪುನರ್ವಸತಿ
  • ಮನೋವೈದ್ಯಶಾಸ್ತ್ರ ಸಮಾಜ
  • ಮನೋವೈದ್ಯಶಾಸ್ತ್ರ
  • ಮನೋಔಷಧಶಾಸ್ತ್ರ
  • ಇಂಜಿನಿಯರಿಂಗ್
  • ಮನೋವೈದ್ಯ ಪುನರ್ವಸತಿ
  • ವಾಕ್ ರೋಗಶಾಸ್ತ್ರ ಮತ್ತು ಶ್ರವಣಶಾಸ್ತ್ರ

ಕೇಂದ್ರಗಳು

[ಬದಲಾಯಿಸಿ]
  • ಅಡ್ವಾನ್ಸ್ಡ್ ಸೆಂಟರ್ ಫಾರ್ ಆಯುರ್ವೇದ[]
  • ಸಾರ್ವಜನಿಕ ಆರೋಗ್ಯ ಕೇಂದ್ರ
  • ಕೇಂದ್ರ ಪ್ರಾಣಿ ಸಂಶೋಧನಾ ಸೌಕರ್ಯ
  • ಮಾದಕವ್ಯಸನ ಔಷಧ ಕೆಂದ್ರ
  • ಗ್ರಂಥಾಲಯದ ಮಾಹಿತಿ ಕೇಂದ್ರ
  • ಕಾಂತೀಯ ಮಸ್ತಿಷ್ಕ ಚಿತ್ರಣ (ಎಮ್ಇಜಿ) ಕೇಂದ್ರ
  • ನರಜೀವಶಾಸ್ತ್ರ ಸಂಶೋಧನಾ ಕೇಂದ್ರ (NRC)
  • ಯೋಗಕ್ಷೇಮ ಕೇಂದ್ರ
  • ಅಡ್ವಾನ್ಸ್ಡ್ ಸೆಂಟರ್ ಫಾರ್ ಯೋಗ
  • ಸಕಲವಾರ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರ
  • ವರ್ಚ್ಯುಯಲ್ ಲರ್ನಿಂಗ್ ಸೆಂಟರ್
  • ಗಾಯ ತಡೆಗಟ್ಟುವಿಕೆ ಮತ್ತು ಸುರಕ್ಷತೆ

ಛಾಯಾಂಕಣ

[ಬದಲಾಯಿಸಿ]
ನಿಮ್ಹಾನ್ಸ್ ಆವರಣ
Department of Psychiatry
Department of Psychiatry 
Neurobiology Research Centre
MV Govindaswamy Centre
MV Govindaswamy Centre 
NIMHANS Convention Centre
NIMHANS Convention Centre 
Rehabilitation Centre Park
Rehabilitation Centre Park 
NIMHANS Central Garden
NIMHANS Central Garden 
NIMHANS Men's Hostel
NIMHANS Men's Hostel 
NIMHANS Lakkasandra campus
NIMHANS Lakkasandra campus 
NIMHANS Byrasandra campus
NIMHANS Byrasandra campus 

ಉಲ್ಲೇಖಗಳು

[ಬದಲಾಯಿಸಿ]
  1. NIMHANS: About Us Archived 2011-07-21 ವೇಬ್ಯಾಕ್ ಮೆಷಿನ್ ನಲ್ಲಿ.. Nimhans.kar.nic.in. Retrieved on 2013-10-09.
  2. Dhar, Aarti (21 October 2010). "NIMHANS to be declared institute of national importance". The Hindu – via www.thehindu.com.
  3. "The National Institute of Mental Health and Neuro- Sciences, Bangalore". prsindia.org accessdate 27 February 2017.
  4. "Speeches Detail - The President of India". PresidentOfIndia.nic.in. Retrieved 17 May 2017.
  5. "Mental Health Education Nimhans".
  6. "Advanced Center for Ayurveda in Mental Health & Neurosciences, Bengaluru | Central Council for Research in Ayurvedic Sciences, Ministry of AYUSH, Government of India". ccras.nic.in.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]