ಹೋಳಿ ಕುಣಿತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೋಳಿ ಹಬ್ಬ ಕಾಮನಹಬ್ಬ ಎಂದು ಕರೆಯಲಾಗುತ್ತದೆ. ಈ ಹಬ್ಬ ಭಾರತದಾದ್ಯಂತ ಪ್ರಚಲಿತದಲ್ಲಿದೆ. ಆದರೆ ಕನ್ನಡ ನಾಡಿನ ಹೋಳಿ ಉತ್ತರ ಹಾಗೂ ದಕ್ಷಿಣ ಸಂಸ್ಕೃತಿಗಳ ಸಂಗಮವಾಗಿ ಕಂಡುಬರುವ ಮೂಲಕ ಹೊಸದೊಂದು ಆಯಾಮಕ್ಕೆ ಕರೆದೊಯ್ಯುತ್ತದೆ. ಸಾಮಾನ್ಯವಾಗಿ ಮೂರರಿಂದ ಇಪ್ಪತ್ತು ದಿನಗಳವರೆಗೆ ಪಾಲ್ಗುಣ ಹುಣ್ಣಿಮೆ ಮೊದಲ್ಗೊಂಡು ಈ ಹೋಳಿ ಹಬ್ಬವನ್ನು ಆಚರಿಸುತ್ತಾರೆ. ಇವುಗಳಿಗೆ ಸಂಬಂಧಿಸಿದಂತೆ ಕೆಲವು ಪುರಾಣಗಳಿವೆ.

ಪುರಾಣ ೧[ಬದಲಾಯಿಸಿ]

"ಒಂದು ಕಾಲದಲ್ಲಿ ರಘು ಎಂಬ ಧರ್ಮಾತ್ಮನಾದ ರಾಜನಿದ್ದ. ಅವನ ನಗರಕ್ಕೆ 'ಡೋಂಡಾ' ಎಂಬ ರಾಕ್ಷಸಿ ಪ್ರವೇಶಿಸಿ ತೊಂದರೆಯನ್ನುಂಟು ಮಾಡುತ್ತಿದ್ದಳು. ಹೀಗಿರುವಾಗ ಒಂದು ದಿನ ಪ್ರಜೆಗಳು ರಾಜನಿಗೆ ದೂರಿತ್ತರು. ಆಗ ಆಶ್ಚರ್ಯಗೊಂಡ ರಾಜನು ವಸಿಷ್ಠರಲ್ಲಿ ಕೇಳುತ್ತಾನೆ. ವಸಿಷ್ಠರು ಆಕೆಯ ವಿವರಗಳನ್ನು ಹೀಗೆ ಹೇಳಿದರು: ಈಕೆ ಮಾಲಿ ಎಂಬ ರಾಕ್ಷಸನ ಮಗಳು. ಆಕೆಯು ಶಿವನಿಂದ ವರ ಪಡೆದಿದ್ದಳು. ಏನೆಂದರೆ ಮಾನವ, ದಾನವ, ದೇವತೆ, ಶಸ್ತ್ರಾಸ್ತ್ರ, ಶೀತೋಷ್ಣ ವರ್ಷ ಕಾಲಗಳು, ಹಗಲು - ರಾತ್ರಿ ಮನೆಯ ಒಳಗೆ ಹೊರಗೆ ಎಲ್ಲೆಲ್ಲೂ ಸಾವು ಬರಬಾರದೆಂದು. ಆದರೆ ಆಕೆಗೆ ಒಂದು ಎಚ್ಚರಿಕೆಯನ್ನು ಕೊಡಲಾಗಿತ್ತು. "ಋತು ಸಂಧಿಕಾಲದಲ್ಲಿ ಉನ್ಮತ್ತರಿಂದ, ಮಕ್ಕಳಿಂದ ಭಯವಿದೆ" ಇದರಿಂದ ಆಕೆ ಆ ಸಮಯದಲ್ಲಿ "ಅಡಡಾ" ಎಂದು ಕೂಗುತ್ತಾ ಮಕ್ಕಳನ್ನು ಪೀಡಿಸುತ್ತಾಳೆ. ಇದರಿಂದ 'ಪಾಲ್ಗುಣ ಶುದ್ಧ ಹುಣ್ಣಿಮೆಯಂದು' ಪ್ರಜೆಗಳು ನಿರ್ಭಯರಾಗಿ, ನಿಶ್ಶಂಕೆಯಿಂದ ವಿನೋದ ವಿಲಾಸಗಳಿಂದ ಇರಬೇಕು. ಸಣ್ಣ ಮಕ್ಕಳು ಖಡ್ಗಗಳನ್ನು ಹಿಡಿದು ಯುದ್ಧೋತ್ಸಾಹದಿಂದ ಮೆರೆಯಬೇಕು. ಒಣ ಹುಲ್ಲಿಗೆ ಬೆಂಕಿಯಿಟ್ಟು ಮಂತ್ರಗಳಿಂದ ಹೋಮ ಮಾಡಬೇಕು. ಅನಂತರ ಅಶ್ಲೀಲ ಹಾಡುಗಳನ್ನು ಹಾಡುತ್ತಾ ಕುಣಿಯಬೇಕು. ಇದರಿಂದ ರಾಕ್ಷಸಿ ಭಯಗೊಂಡು ಕ್ಷೀಣಿಸುವವಳು" ಎಂದು ವಸಿಷ್ಠರು ಆದೇಶಿಸಿದರು. ಹೀಗೇ ಪ್ರಜೆಗಳು ಮಾಡಿದಾಗ ಆ ರಾಕ್ಷಸಿ ಸತ್ತಳು. ಅಂದಿನಿಂದ ಆಕೆಗೆ "ಅಡಡಾ" ಎಂದು ಹೆಸರಾಯಿತು. ದುಷ್ಟರನ್ನು ನಾಶ ಮಾಡುವ ಸರ್ವರೋಗೋಪಹಾರಕವಾದ ಆ ಹೋಮಕ್ಕೆ 'ಹೋಲಿಕಾ' ಎಂದು ಹೆಸರಾಯಿತು.

ಪುರಾಣ ೨[ಬದಲಾಯಿಸಿ]

"ಮೇಲಿನ ಕಥೆಗೆ ಇನ್ನೊಂದು ರೂಪವು ಇದೆ. ಆ ರಾಕ್ಷಸಿಯ ಹೆಸರೇ ಹೋಲಿಕಾ. ಅವಳು ಮಕ್ಕಳನ್ನು ಕೊಲ್ಲುವವಳು. ಜನ ಅವಳ ವಿರುದ್ಧ ರಾಜನಿಗೆ ದೂರು ಕೊಟ್ಟರು. ಆ ರಾಜ ಬಹಳ ಕ್ರೂರಿ. ಆತನಿಗೆ ರಾಕ್ಷಸಿಯೊಂದಿಗೆ ದ್ವೇಷ ಕಟ್ಟಿಕೊಳ್ಳುವುದಕ್ಕೆ ಇಷ್ಟವಿರಲಿಲ್ಲ. ಜನರೇ ದಿನಕ್ಕೊಂದು ಮಗುವನ್ನು ಸರದಿಯಂತೆ ಕೊಡುವಂತೆ ಆದೇಶಿಸಿದ. ಇದರಿಂದ ಪ್ರಜೆಗಳಿಗೆ ಇನ್ನಷ್ಟು ಅಸಮಧಾನ ಉಂಟಾಯಿತು. ಒಮ್ಮೆ ಒಬ್ಬಳು ಮುದುಕಿಯ ಸರದಿ ಬಂತು. ಆಕೆಗೆ ಒಬ್ಬನೇ ಮೊಮ್ಮಗ. ಆಕೆಗೆ ಅವನನ್ನು ರಾಕ್ಷಸಿಗೆ ಕೊಡಲು ಇಷ್ಟವಾಗಲಿಲ್ಲಿ. ಆಕೆ ಅದಕ್ಕಾಗಿ ಗೋಳಾಡುತ್ತಿರುವಾಗ ಒಬ್ಬ ಯೋಗಿ ಪುರುಷ ಬಂದ. ಆಕೆಯನ್ನು ಸಮಾಧಾನಪಡಿಸಿ, ಮಕ್ಕಳಿಂದ ಅಶ್ಲೀಲವಾಗಿ ಕೂಗಾಡಲು ಹೇಳಿದ. ಆಕೆ ಓಡಿಸಲು ಬರುವಾಗಲೂ ನಿರ್ಭಯವಾಗಿ ಕೇಕೆ ಹಾಕಬೇಕೆಂದು ಸೂಚಿಸಲಾಯಿತು. ಹಾಗೆ ಮಾಡಲಾಗಿ ಆ ರಾಕ್ಷಸಿ ಸತ್ತಳು". 'ಧರ್ಮಸಿಂಧು' ಗ್ರಂಥದಲ್ಲಿ ಇದಕ್ಕೆ ಸಂಭಂಧಿಸಿದ ಉಲ್ಲೇಖ ಇಂತಿದೆ. "ಪಾಲ್ಗುಣ ಹುಣ್ಣಿಮೆ ಹೋಲಿಕಾ ಇಂದು ಹೋಲಿಕಾ ದೀಪನ. ಆದರೆ ಹಗಲು ಹೋಳಿ ನಿಷಿದ್ಧ. ದುಂಡಾರಾಕ್ಷಸಿಯ ಪ್ರೀತ್ಯರ್ಥವಾಗಿ ಹೋಳಿಕಾ ಪೂಜೆ ಮಾಡುತ್ತೇನೆ ಎಂದು ಸಂಕಲ್ಪ ಮಾಡಿ (ದುಂಡಾ ರಾಕ್ಷಸೀ ಕಾಷ್ಟನಾಂ ಗೋಮಯ ಪಿಂಡಾನಾಂ ಚ ರಾಶೀಂಕೃತ್ವಾ ವನ್ಹಿನಾ ಪ್ರದೀಷ್ಯಾ ) ಒಣಗಿದ ಕಟ್ಟಿಗೆ, ಸಗಣಿ ಉಂಡೆಗಳ ರಾಶಿ ಹಾಕಿ ಬೆಂಕಿ ಹಚ್ಚಬೇಕು. ಆ ಬೆಂಕಿಯ ಮುಂದೆ ಆಸ್ಮಾಭಿ: ಭಯ ಸಂತ್ರೈಸ: ಕೃತಾತ್ವಂ ಹೋಲಿಕೇಯತ: ಆತಸ್ಪಾಂ ಪೂಜಯಿಷ್ಯಾಮಿ ಭೂತೇ ಭೂತಿ ಪರಾಭವ - ಇತಿ ಪ್ರಾರ್ಥಯೇತ್. (ನಾವು ಭಯ ಸಂತ್ರಸ್ಥರಾಗಿದ್ದೇವೆ, ನಿನ್ನನ್ನು ಪೂಜಿಸುತ್ತಿದ್ದೇವೆ, ನಮಗೆ ಐಶ್ವರ್ಯ ನೀಡುವವಳಾಗು" ಎಂದು ಪ್ರಾರ್ಥಿಸಬೇಕು. ರಾಶಿಗೆ ಬೆಂಕಿ ಹಚ್ಚಲು ಚಂಡಾಲರ ಸೂತಿಕಾ ಗೃಹದಿಂದ ಬೆಂಕಿಯನ್ನು ತರಬೇಕು ಆ ಬೆಂಕಿಗೆ ಪ್ರದಕ್ಷಿಣೆ ಬಂದು ಬಾಯಿಗೆ ಬಂದ ಹಾಗೆ ಹಾಡಿ ಕುಣಿಯಬೇಕು. ಲಿಂಗ-ಯೋನಿಗಳನ್ನು ಕುರಿತು ಅಸಭ್ಯ ಹಾಡುಗಳನ್ನು ಹಾಡುತ್ತಾ ರಾತ್ರಿಯಲ್ಲಿ ವಾದ್ಯಗಳ ಸಹಿತ ಕುಣಿಯಬೇಕು. ಬೆಂಕಿಗೆ ಮೂರು ಪ್ರದಕ್ಷಿಣೆ ಹಾಕಬೇಕು. ಇದರಿಂದ ಆ ಪಾಪಿಷ್ಠ ರಾಕ್ಷಸಿ ತೃಪ್ತಳಾಗುವಳು. ನಿಶ್ಚಿಂತೆಯಿಂದಲೂ, ಸ್ವೇಚ್ಛೆಯಿಂದಲೂ ಹಾಡಿ ನಕ್ಕು ಕುಣಿಯಬೇಕು" ಎಂದು ಜ್ಯೋತಿನಿರಭಂದದಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.

ಪುರಾಣ ೩[ಬದಲಾಯಿಸಿ]

"ತಾರಕಾಸುರನೆಂಬ ರಾಕ್ಷಸನು ತಾನು ಪಡೆದ ವರಗಳ ಬಲದಿಂದ ಲೋಕವನ್ನೇ ಅಲ್ಲಾಡಿಸತೊಡಗಿದನು. ಜನರು ಅವನ ಉಪಟಳವನ್ನು ಸೈಹಿಸಲಾರದೆ ವಿಷ್ಣು ಇಂದ್ರಾದಿಗಳ ಮೊರೆ ಹೊಕ್ಕರು. ಅವರೇನು ಮಾಡಬಲ್ಲರು? ತಾರಕಾಸುರನನ್ನು ಕೊಲ್ಲುವುದು ಯಾರಿಂದಲೂ ಸಾಧ್ಯವಿಲ್ಲ. ಶಿವನ ಉದರದಲ್ಲಿ ಜನಿಸುವ ಷಣ್ಮುಖನಿಂದ ಈ ತಾರಕಾಸುರನ ಕೊಲೆಯಾಗಬಲ್ಲದು. ಆದ್ದರಿಂದ ಷಣ್ಮುಖ ಜನಿಸುವುದು ಅಗತ್ಯವಾಗಿದೆ. ಶಿವನು ಸಮಾಧಿಯಿಂದ ಎಚ್ಚೆತ್ತು ಪಾರ್ವತಿಯೊಡನೆ ಒಂದು ಗೂಡಿದಾಗಲೇ ಷಣ್ಮುಖ ಜನಿಸಿ ತಾರಕನನ್ನು ಕೊಲ್ಲುವನು. ಹೀಗೆ ವಿಚಾರ ಮಾಡುತ್ತಾ ದೇವಾನುದೇವತೆಗಳು ತಲೆಯ ಮೇಲೆ ಕೈ ಹೊತ್ತು ಕುಳಿತರು. ಶಿವನು ಸಮಾಧಿಯಿಂದ ಏಳುವ ಬಗೆಯಂತು? ಅವನ್ನು ಎಬ್ಬಿಸುವ ಕಲಿಯಾದರೂ ಯಾರು? ಎಂದು ಒಬ್ಬರನ್ನೊಬ್ಬರು ಕೇಳಿಕೊಳ್ಳವಷ್ಟರಲ್ಲಿಯೇ 'ಕಾಮನಿಂದಲೇ ಈ ಕಾರ್ಯ ಸಾಧ್ಯ' ಎನ್ನುವ ಉತ್ತರ ಬಂತು. ವಿಷ್ಣುವಿನ ಅಪ್ಪಣೆಯಂತೆ ಕಾಮದೇವನು ತನ್ನ ಸೈನ್ಯ ಸಮೇತ ಶಿವನಿದ್ದ ಹೇಮಕೂಟಕ್ಕೆ ದಂಡೆತ್ತ ಬಂದನು. ಕಾಮದೇವನು ಹೇಮಕೂಟಕ್ಕೆ ಬರುತ್ತಲೇ ಪಾರ್ವತಿಯು ಶಿವನ ಪೂಜೆಗೆ ನಡೆದುದನ್ನು ಕಂಡನು. ಅವಳ ಸಹಾಯವನ್ನು ಯೋಚಿಸಿ ತಾನು ಕೈಗೊಂಡ ಕಾರ್ಯವನ್ನು ನಿವೇದಿಸಿದನು. ಕಾಗೆ ಕೂರುವುದಕ್ಕೂ ಟೊಂಗೆ ಮುರಿಯುವುದಕ್ಕೂ ಸಮಾನ ಎಂಬಂತೆ ಪಾರ್ವತಿಗೆ ಹೊರಗಿನ ಸಹಾಯ ಸಂಪದ ದೊರೆತು ತನ್ನ ಕಾರ್ಯವು ಸುಗಮವೆನಿಸಿತು. ಆಗ ಅವಳು ಕಾಮನಿಗೆ ಚಿಂತೆ ಬೇಡವೆಂದು ಹೇಳಿ ಅವನನ್ನು ಪ್ರಚೋದಿಸಿದಳು. ಶಿವ ಪೋಜೆಯನ್ನು ತಾನು ಮಾಡುತ್ತಿರುವಾಗಲೇ ನೀನು ಎದುರಿಗೆ ನಿಂತು ಶಿವನ ಮೇಲೆ ಬಾಣ ಹೊಡೆಯೆಂದು ಕಿವಿಮಾತು ಹೇಳಿದಳು. ನಿತ್ಯದಂತೆ ಶಿವನ ಪೂಜೆಗೆ ಅಣಿಯಾದಳು. ಶೃಂಗಾರವೇ ಕೋಡಿ ಒಡೆದಂತೆ, ಲಾವಣ್ಯವೇ ಪುರುಷಾಕಾರವನ್ನು ಪಡೆದಂತೆ ಕಾಣಿಸುತ್ತಿದ್ದ ಕಾಮದೇವನು ಸರ್ರನೆ ಬಾಣವೊಂದನ್ನು ಎಳೆದು ಶಿವನೆಡೆಗೆ ಬಿಟ್ಟನು. ಶಿವನು ಅಲುಗಾಡಲಿಲ್ಲ. ಆಗ ಪಾರ್ವತಿ ಶಿವನ ಸರ್ವಾಂಗವನ್ನೂ ನೆಟ್ಟ ದಿಟ್ಟಿಯಿಂದ ನೋಡತೊಡಗಿದಳು. ಕಾಮನು ತನ್ನ ಪಂಚ ಬಾಣಗಳನ್ನು ಒಂದರ ಹಿಂದೊಂದು ಬಿಡತೊಡಗಿದನು. ಪಾರ್ವತಿಯ ಶೃಂಗಾರ ದೃಷ್ಟಿ ಕಾಮ ಬಾಣಗಳೊಡನೆ ಬೆರೆತಾಗ ಹೇಳುವುದೇನು? ಶಿವನ ನಿರ್ವಿಕಾರ ಸಮಾಧಿಯಲ್ಲಿ ಮೆಲ್ಲನೆ ಮಮತೆ ಸುರಿಯಿತು. ಮೈತಿಳಿದು ಕಣ್ತೆರೆದು ನೋಡಿದ, ಎದುರಿಗೆ ರತಿಯೊಡನೆ ಕಾಮ ನಿಂತಿದ್ದ. ಅವನನ್ನು ಕಂಡೊಡನೆ ಕೋಪ ಉಕ್ಕಿ ಹರಿಯಿತು. ಅವನ ಹಣೆಗಟ್ಟು ತಾನೆ ತೆರೆಯಿತು. ಶಿವನ ಕೊಪವೇ ಹೆಪ್ಪುಗಟ್ಟಿದ ಉರಿಗಣ್ಣಿನಿಂದ ಜ್ವಾಲೆ ಹೊರಬಿದ್ದು ಕಾಮನನ್ನು ಆಕ್ರಮಿಸಿತು. ಅವನನ್ನು ಸುಟ್ಟ ಬಸ್ಮ ಮಾಡಿತು. ಶಿವನು ಕೋಪದಿಂದ ಮೇಲೆದ್ದು ಆ ಭಸ್ಮವನ್ನು ಕಾಲಿನಿಂದ ತುಳಿದು ಎದುರಿಗಿದ್ದ ಗಿರಜೆಯನ್ನು ಕಣ್ಣೆತ್ತಿ ನೋಡದೆ ಅಂತರ್ಧಾನನಾದನು. ಕಾಮನನ್ನು ಕಳೆದುಕೊಂಡ ರತಿಯ ದುಖಃ ಕೋಟಿಯೊಡೆದು ಹರಿಯುವುದನ್ನು ನೋಡಿ ಚಲನೆಯೆನಿಸಿದ ಪಾರ್ವತಿ ಅವಳಿಗೆ ಧೈರ್ಯ ಹೇಳಿ ಘೋರತಪಸ್ಸನ್ನು ಮಾಡಿ ಶಿವನನ್ನು ಒಲಿಸಿಕೊಂಡಳು. ಕಾಮನನ್ನು ಶಿವನಿಂದ ಪಡೆದು ರತಿಯ ಮಾಂಗಲ್ಯ ಕಾಪಾಡಿದಳು. ಶಿವನ ಕೈ ಹಿಡಿದು ಶಿವೆಯು ಷಣ್ಮುಖನನ್ನು ಪಡೆದಳು. ಲೋಕ ಕಂಟಕ ದೂರವಾಯಿತು".

ಉಲ್ಲೇಖ[ಬದಲಾಯಿಸಿ]

  1. ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.