ವಿಷಯಕ್ಕೆ ಹೋಗು

ಪ್ಯಾಟ್ರಿಕ್ ಮ್ಯಾನ್‍ಸನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪ್ಯಾಟ್ರಿಕ್ ಮ್ಯಾನ್‍ಸನ್

ಪ್ಯಾಟ್ರಿಕ್ ಮ್ಯಾನ್‍ಸನ್ (1844-1922) ಸ್ಕಾಟ್ಲೆಂಡಿನ ಒಬ್ಬ ಶರೀರಕ್ರಿಯಾವಿಜ್ಞಾನಿ; ಪರೋಪಜೀವಿಕೃತ ರೋಗತಜ್ಞ; ಮಿಗಿಲಾಗಿ ಉಷ್ಣವಲಯ ರೋಗಶಾಸ್ತ್ರದ ಜನಕ ಎಂದು ವೈದ್ಯಲೋಕದಲ್ಲಿ ಪ್ರಸಿದ್ಧಿ ಪಡೆದವ.

ಬಾಲ್ಯ, ವಿದ್ಯಾಭ್ಯಾಸ

[ಬದಲಾಯಿಸಿ]

ತಂದೆ ಜಾನ್ ಮ್ಯಾನ್‌ಸನ್ ಬ್ಯಾಂಕೊಂದರ ಮ್ಯಾನೇಜರ್. ತಾಯಿ ಎಲಿಜಬೆತ್ ಲಿವಿಂಗ್‌ಸ್ಟನ್. ಈಕೆ ಪ್ರಸಿದ್ಧ ಭೂಗೋಳ ಅನ್ವೇಷಕ ಎಂದೆನಿಸಿದ್ದ ಡೇವಿಡ್ ಲಿವಿಂಗ್‌ಸ್ಟನ್‌ನ ದೂರ ಸಂಬಂಧಿ ಆಗಿದ್ದಳು. ಈ ದಂಪತಿಗಳು ಸ್ಕಾಟ್‌ಲೆಂಡಿನ ಅಬರ್‌ಡೀನ್ ಜಿಲ್ಲೆಗೆ ಸೇರಿದವರು. ಎಲಿಜಬೆತ್ ಕಬ್ಬಿಣ ಕಾರ್ಖಾನೆಯ ಮಾಲೀಕರಾಗಿದ್ದ ಬ್ಲೆಯ್ಕಿ ಮನೆತನಕ್ಕೆ ಸೇರಿದ್ದವಳು. ಈಕೆ ತನ್ನ 88ನೆಯ ವಯಸ್ಸಿನ ತನಕವೂ ಬದುಕಿದ್ದು ಮ್ಯಾನ್‌ಸನ್ನನ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದಳು. ದಂಪತಿಗಳ 5 ಗಂಡು 4 ಹೆಣ್ಣು ಮಕ್ಕಳ ಪೈಕಿ ಮ್ಯಾನ್‌ಸನ್ 2ನೆಯ ಮಗ. ಜನಿಸಿದ್ದು 3 ಅಕ್ಟೋಬರ್ 1844 ಓಲ್ಡ್ ಮೆಲ್‌ಡ್ರಮ್ ಎಂಬ ಊರಿನಲ್ಲಿ. ಮಕ್ಕಳ ವಿದ್ಯಾಭ್ಯಾಸಕ್ಕೆಂದು ಇವನ ತಾಯಿ ತಂದೆ ಮೆಲ್‌ಡ್ರಮ್ಮನ್ನು ಬಿಟ್ಟು 1857 ರಲ್ಲಿ ಅಬರ್‌ಡೀನ್ ನಗರದಲ್ಲೇ ಸಂಸಾರ ಹೂಡಿದರು. ಅನಂತರ ಈತ ಅಲ್ಲಿಯ ವೆಸ್ಟ್ ಎಂಡ್ ಅಕಾಡೆಮಿ ಎಂಬ ಶಾಲೆಗೆ ಸೇರಿದ. ವಿದ್ಯಾಭ್ಯಾಸದಲ್ಲಿ ಇವನಿಗೆ ಆಸಕ್ತಿ ಕಡಿಮೆ ಎನ್ನಿಸಲಾಗಿ ಇವನ 15ನೆಯ ವಯಸ್ಸಿನಲ್ಲಿ ಶಾಲೆಯನ್ನು ಬಿಡಿಸಿ ಇವನನ್ನು ಬ್ಲೆಯ್ಕಿಯವರ ಕಬ್ಬಿಣ ಕಾರ್ಖಾನೆಯಲ್ಲಿ ಅಭ್ಯಾಸಿ ಎಂಜಿನಿಯರಾಗಿ ಸೇರಿಸಿದರು. ಕೆಲಸ ಚೆನ್ನಾಗಿ ಕಲಿಯಬೇಕೆಂಬ ಅತ್ಯುತ್ಸಾಹವಿದ್ದು ಶ್ರಮವಹಿಸಿ ದುಡಿಯುತ್ತಿದ್ದುದರಿಂದ ಇವನಿಗೆ ತೀವ್ರ ಬೆನ್ನು ನೋವು ಹಾಗೂ ಬಲಗೈ ನಿಶ್ಶಕ್ತಿ ಉಂಟಾದುವು. ಕೆಲಸ ಬಿಡಬೇಕಾಗಿ ಬಂದದ್ದಲ್ಲದೆ ಸುಮಾರು 5 ತಿಂಗಳ ಕಾಲ ಹಾಸಿಗೆಯಲ್ಲೇ ಮಲಗಿರಬೇಕಾಯಿತು. ಇದರಿಂದ ಸ್ವಲ್ಪ ಗುಣವಾದಂತಾದರೂ ಬೆನ್ನು ನೋವು, ಬಲಗೈ ನಿಶ್ಶಕ್ತಿಗಳನ್ನೂ, ನಡುವಯಸ್ಸಿನಲ್ಲಿ ಎರಗಿದ ಗೌಟ್ ಎಂಬ ರೋಗದ ಕೀಲುನೋವುಗಳನ್ನೂ[] ಜೀವಮಾನ ಪರ್ಯಂತ ಈತ ಅನುಭವಿಸಿದ. ಮಲಗಿಯೇ ಇರಬೇಕಾಗಿದ್ದ 5 ತಿಂಗಳುಗಳಲ್ಲೂ ಇವನು ಹೇಗೋ ಕಷ್ಟಪಟ್ಟು ದಿನಕ್ಕೆ 2 ಗಂಟೆಗಳ ಕಾಲ ಮಾರಿಷಾಲ್ ಕಾಲೇಜ್ ಎಂಬಲ್ಲಿ ನಿಸರ್ಗವಿಜ್ಞಾನದ ವ್ಯಾಸಂಗ ಮಾಡಿದ. ಇದು ಇವನ ವೈದ್ಯವ್ಯಾಸಂಗಕ್ಕೆ ತಳಹದಿಯಾಯಿತು. ಇದರಿಂದಾಗಿ ಮ್ಯಾನ್‌ಸನ್ ಕಾರ್ಖಾನೆ ಎಂಜಿನಿಯರ್ ಆಗುವ ಆಸೆಯನ್ನು ಬಿಟ್ಟು ವೈದ್ಯವಿದ್ಯೆಯನ್ನು ಕಲಿಯುವುದು ವಿಧಿವಿಹಿತವಾಯಿತು. ಅದರಂತೆ ಈತ ಅಬರ್‌ಡೀನ್ ವಿಶ್ವವಿದ್ಯಾಲಯವನ್ನು ಸೇರಿದ (1860). ವೈದ್ಯಕೀಯ ಪದವಿ ಪಡೆದು (1864) ಲಂಡನ್ನಿನ ಆಸ್ಪತ್ರೆಗಳ ಕಾರ್ಯವಿಧಾನಗಳನ್ನು ತಿಳಿದುಕೊಳ್ಳಲು ಅಲ್ಲಿಗೆ ತೆರಳಿದ. ಆದರೆ ಶೀಘ್ರದಲ್ಲೆ ಡರ್‌ಹ್ಯಾಮಿನಲ್ಲಿ ಮತಿವಿಕಲರ ಆಸ್ಪತ್ರೆಯಲ್ಲಿ ಉದ್ಯೋಗಕ್ಕೆ ಸೇರಿಕೊಂಡ.[] ಇಲ್ಲಿ ಇವನು ನಡೆಸಿದ ಅನೇಕ ಮರಣೋತ್ತರ ಪರೀಕ್ಷೆಗಳ ಫಲವಾಗಿ ಮಿದುಳು ರೋಗಗಳಲ್ಲಿ ಮಿದುಳಿಗೆ ರಕ್ತಪೂರೈಕೆ ಮಾಡುವ ಅಪಧಮನಿ ಅನೇಕ ವೇಳೆ ರೋಗ ಪ್ರಕ್ರಿಯೆಗೆ ಈಡಾಗಿರುವುದು ತಿಳಿಯಿತು. ಇದನ್ನು ಕುರಿತು ಒಂದು ಪ್ರೌಢ ಪ್ರಬಂಧವನ್ನು ಬರೆದು ಒಪ್ಪಿಸಿ ಅಬರ್‌ಡೀನಿನ ಎಂ.ಡಿ. ಪದವಿಯನ್ನು ಪಡೆದ(1866).[]

ವೃತ್ತಿಜೀವನ, ಸಾಧನೆಗಳು

[ಬದಲಾಯಿಸಿ]

ಇವನ ಅಣ್ಣ ಚೀನದ ಶಾಂಗ್ಹಾಯ್‌ನಲ್ಲಿ ಕೆಲಸದಲ್ಲಿದ್ದು ಪ್ಯಾಟ್ರಿಕ್ಕನನ್ನೂ ಚೀನಕ್ಕೆ ಬರಲು ಪ್ರೋತ್ಸಾಹಿಸಿದ್ದರಿಂದ ಇವನು ಡರ್‌ಹ್ಯಾಮಿನ ಕೆಲಸ ಬಿಟ್ಟು ಚೀನಕ್ಕೆ ಸೇರಿದ್ದ ಫಾರ್ಮೋಸ ದ್ವೀಪದಲ್ಲಿ ಚೀನೀ ಸರ್ಕಾರದ ನೌಕಾಸುಂಕದ ಇಲಾಖೆಯಲ್ಲಿ ವೈದ್ಯವೃತ್ತಿ ಕೈಗೊಂಡ (1866). ಖಾಸಗಿಯಾಗಿಯೂ ವೈದ್ಯವೃತ್ತಿ ಮಾಡಿ ಚೆನ್ನಾಗಿ ಹಣ ಸಂಪಾದಿಸಿದ. ಇದಲ್ಲದೆ ತನ್ನ ವೈದ್ಯವಿದ್ಯಾಭ್ಯಾಸಕ್ಕಾಗಿ ತಂದೆ ಖರ್ಚು ಮಾಡಿದ್ದ 700 ಪೌಂಡುಗಳನ್ನೂ ತೀರಿಸಿದ. ಆದರೆ ಸ್ಥಳೀಯ ಚೀನೀಯರಿಗೂ ಬಂದರಿಗೆ ಬರುತ್ತಿದ್ದ ಜಪಾನೀ ಹಡಗುಗಳ ನಾವಿಕರಿಗೂ ರಾಜಕೀಯ ವೈಮನಸ್ಯ ಉಂಟಾಗಿ ಅದರಲ್ಲಿ ಈತ ಸಿಕ್ಕಿಹಾಕಿಕೊಂಡದ್ದರಿಂದ ಹಠಾತ್ತಾಗಿ ಫಾರ್ಮೋಸವನ್ನು ಬಿಡಬೇಕಾಗಿ ಬಂದು ಈತ ಚೀನಕ್ಕೆ ಸೇರಿದ್ದ ಅಮಾಯ್ ಎಂಬ ಇನ್ನೊಂದು ದ್ವೀಪಕ್ಕೆ ಬಂದು ಅಲ್ಲಿಯೂ ವೈದ್ಯವೃತ್ತಿಗೆ ಸೇರಿದ. ಫಾರ್ಮೋಸದಲ್ಲೂ ಅಮಾಯ್‍ನಲ್ಲೂ ಆನೆಕಾಲುರೋಗಕ್ಕೆ (ಎಲಿಫೆಂಟಿಯಾಸಿಸ್) ಶಸ್ತ್ರಚಿಕಿತ್ಸೆ ಮಾಡುವುದರಲ್ಲಿ ಸಿದ್ಧಹಸ್ತನೆಂದು ಹೆಸರು ಗಳಿಸಿದ. ಪಾಶ್ಚಾತ್ಯ ವೈದ್ಯರು ವಿಷ ಗುಳಿಗೆಗಳನ್ನು ಕೊಡುತ್ತಾರೆಂದು ಚೀನೀಯರಿಗೆ ಇದ್ದ ಅಪಾರ ಅಪನಂಬಿಕೆಯನ್ನು ಆನೆಕಾಲುರೋಗ ಚಿಕಿತ್ಸೆಯಂಥ ಹಲವು ಪ್ರಸಂಗಗಳಿಂದ ಹೋಗಲಾಡಿಸಿ ಚೀನಿಯರ ವಿಶ್ವಾಸವನ್ನೂ ಗಳಿಸಿದ.

ಈತ 1875ರಲ್ಲಿ ಒಂದು ವರ್ಷ ರಜ ಪಡೆದು ಇಂಗ್ಲೆಂಡ್-ಸ್ಕಾಟ್ಲೆಂಡ್‌ಗಳಲ್ಲಿ ಕಳೆದ. ಆನೆಕಾಲು ರೋಗದ ವಿಷಯವನ್ನು ವಿಶದವಾಗಿ ತಿಳಿದುಕೊಳ್ಳಬೇಕೆಂಬ ಆಸೆ ಇತ್ತು. ಆದರೆ ಹೇಗೆ, ಎಲ್ಲಿ ಎಂಬುದು ಏನೂ ಗೊತ್ತೇ ಆಗದೆ ಕೊನೆಗೆ ಬ್ರಿಟಿಷ್ ಮ್ಯೂಸಿಯಮ್ಮಿನ ಗ್ರಂಥಾಲಯದಿಂದ ಲಭ್ಯವಾದಷ್ಟು ಮಾಹಿತಿ ಸಂಗ್ರಹಿಸಿದ. ಆನೆಕಾಲು ರೋಗಿಗಳ ರಕ್ತದಲ್ಲಿ ಸೂಕ್ಷ್ಮಾಕಾರದ ಫೈಲೇರಿಯ ಎಂಬ ಹುಳುಗಳು ಇರುವುವೆಂಬುದನ್ನು ಹಲವು ವಿಜ್ಞಾನಿಗಳು ವಿವರಿಸಿದ್ದುದು ತಿಳಿಯಿತು. ಆನೆಕಾಲು ರೋಗ ಪ್ರಮುಖವಾಗಿ ವಿಷುವದ್ವೃತ್ತ 100 ಉತ್ತರ ಹಾಗೂ ದಕ್ಷಿಣ ಅಕ್ಷಾಂಶ ಪ್ರದೇಶಗಳಲ್ಲಿ ಕಂಡುಬರುತ್ತದೆಂದೂ ತಿಳಿಯಿತು. ಭಾರತದ ವೈದ್ಯ ಇಲಾಖೆಯ (ಇಂಡಿಯನ್ ಮೆಡಿಕಲ್ ಸರ್ವಿಸ್) ಟಿಮೊತಿ ಲೂಯಿಸ್ ಎಂಬ ಶಸ್ತ್ರವೈದ್ಯ ಇಂಥ ಸೂಕ್ಷ್ಮ ಫೈಲೇರಿಯಗಳು ದುಗ್ಧರಸಮೂತ್ರರೋಗಿಗಳ (ಕೈಲ್ಯೂರಿಯ) ರಕ್ತದಲ್ಲೂ ಇರುತ್ತವೆಂದು ತೋರಿಸಿದ್ದನೆಂಬುದೂ (1872) ತಿಳಿಯಿತು. ಮ್ಯಾನ್‌ಸನ್ ಅನಂತರ ಹೆನ್ರಿ ಎಟ್ಟಥೂರ್‌ಬರ್ನ್ ಎಂಬಾಕೆಯನ್ನು ವಿವಾಹವಾಗಿ (21 ಡಿಸೆಂಬರ್ 1875) ಅನಂತರ 1875 ರ ತರುಣದಲ್ಲಿ ಅಮಾಯ್ ದ್ವೀಪಕ್ಕೆ ಆಕೆಯೊಡನೆ ಹಿಂದಿರುಗಿದ.

ಅಮಾಯ್‌ನಲ್ಲಿ ಪುನಃ ಆನೆಕಾಲು ರೋಗದ ವ್ಯಾಸಂಗವನ್ನು ಈತ ಕೈಗೆತ್ತಿಕೊಂಡ. ರೋಗಿಗಳ ರಕ್ತದಲ್ಲಿ ಸೂಕ್ಷ್ಮ ಫೈಲೇರಿಯ ಹುಳುಗಳಿರುವುದನ್ನು ಸೂಕ್ಷ್ಮದರ್ಶಕದಲ್ಲಿ ಸ್ವತಃ ವೀಕ್ಷಿಸಿದ. ಕೆಲವೊಮ್ಮೆ ಇವು ಆರೋಗ್ಯವಂತರಂತೆಯೇ ಕಾಣಬರುವವರಲ್ಲೂ ಇರುವುದೆಂದು ಆನೆಕಾಲುರೋಗಿಗಳಲ್ಲಿ ಅನೇಕ ಬಾರಿ ಇವು ಇರುವುದಿಲ್ಲವೆಂದೇ ಭಾಸವಾಗುತ್ತದೆಂದೂ ಇವನಿಗೆ ಅರಿವಾಯಿತು. ಯಥಾರ್ಥವನ್ನು ತಿಳಿಯಲು ಮೂರು ಗಂಟೆಗಳಿಗೆ ಒಂದು ಸಾರಿ ರೋಗಿಯ ರಕ್ತ ಪರೀಕ್ಷೆಮಾಡಿ ನೋಡಬೇಕೆಂಬುದಾಗಿ ಇಬ್ಬರು ವೈದ್ಯಸಹಾಯಕರನ್ನು ನೇಮಿಸಿಕೊಂಡ. ಒಬ್ಬ ಹಗಲಿನಲ್ಲೂ ಮತ್ತೊಬ್ಬ ರಾತ್ರಿಯಲ್ಲೂ ರಕ್ತಪರೀಕ್ಷೆ ಮಾಡುವವರಾದರು. ಜೊತೆಗೆ ಇಬ್ಬರೂ ರೋಗಿಗಳೇ ಪರಸ್ಪರ ರಕ್ತಪರೀಕ್ಷೆಗಳನ್ನು 3 ಗಂಟೆಗಳಿಗೆ ಒಂದು ಬಾರಿ ಮಾಡಿಕೊಳ್ಳುವಂತೆ ಅವರಿಗೆ ಕಲಿಸಿ ಫಲಿತಾಂಶಗಳನ್ನು ಗಮನಿಸಿದ. ಈ ತನಿಖೆಗಳಿಂದ ಲಕ್ಷಾಂತರ ಸೂಕ್ಷ್ಮ ಫೈಲೇರಿಯ ಹುಳುಗಳು ರಾತ್ರಿ ಹೊತ್ತು ರೋಗಿಗಳ ರಕ್ತದಲ್ಲಿ ಕಂಡುಬರುವುವೆಂದೂ ಹಗಲು ಹೊತ್ತು ರೋಗಿಯ ದೇಹದಲ್ಲಿ ಎಲ್ಲೋ ಅಡಗಿರುವುವೆಂದೂ ತಿಳಿದುಬಂತು. ಅತ್ಯಧಿಕ ಸಂಖ್ಯೆಯಲ್ಲಿ ಇವು ರಕ್ತಪರಿಚಲನೆಯಲ್ಲಿದ್ದಾಗ ಪರಸ್ಪರ ತೊಡಗಿಸಿಕೊಂಡು ರಕ್ತನಾಳಗಳಲ್ಲಿ ಮಾತ್ರ ಅಲ್ಲದೆ ದುಗ್ಧರಸನಾಳಗಳಲ್ಲೂ ಪರಿಚಲನೆಗೆ ಅಡ್ಡಿಮಾಡಬಹುದೆಂದೂ ಅದರಿಂದಲೇ ಊತ ಉಂಟಾಗಿ ಆನೆಕಾಲು ಸ್ಥಿತಿ, ದುಗ್ಧಮೂತ್ರತೆ ಇತ್ಯಾದಿಗಳು ಉಂಟಾಗುವುವೆಂದೂ ಮ್ಯಾನ್‌ಸನ್ ತರ್ಕಿಸಿದ. ಇದು ಸರಿ ಎಂದು ಅನಂತರದ ಪ್ರತ್ಯೇಕ ಸಂಶೋಧನೆಗಳಿಂದ ಬೇರೆ ವಿಜ್ಞಾನಿಗಳು ಸ್ಥಿರಪಡಿಸಿದರು. ತಂಪಾದ ರಾತ್ರಿ ಹೊತ್ತಿನಲ್ಲಿ, ವ್ಯಕ್ತಿ ನಿದ್ರೆ ಮಾಡುತ್ತಿರುವ ಸಮಯದಲ್ಲಿ ಹುಳುಗಳು ರಕ್ತಪರಿಚಲನೆಯಲ್ಲಿ ಕಾಣಬಹುದು, ಜೌಗುಪ್ರದೇಶಗಳ ನಿವಾಸಿಗಳೇ ಹೆಚ್ಚಾಗಿ ರೋಗಕ್ಕೆ ಈಡಾಗುವುದು, ಅಧಿಕ ಮಳೆ ಬೀಳುವ ದಟ್ಟ ಕಾಡುಗಳೂ ಸತ್ತ ಸಸ್ಯಗಳೂ (ಅಂಡರ್‌ಗ್ರೋತ್) ಇರುವ ವಿಷುವದ್ವೃತ್ತಪ್ರದೇಶದಲ್ಲಿ ಈ ರೋಗಗಳೂ ಹೆಚ್ಚಾಗಿ ಕಂಡುಬರುವುದು, ಇವುಗಳಿಂದ ರಕ್ತವನ್ನು ಹೀರುವ ನಿಶಾಚರ ಕೀಟ ಯಾವುದೋ ಬಹುಶಃ ಸೊಳ್ಳೆ - ರೋಗ ಹರಡುವುದಕ್ಕೆ ಕಾರಣ ಎಂದು ಮ್ಯಾನ್‌ಸನ್ ಊಹಿಸಿದ. ರೋಗಿಗಳ ರಕ್ತವನ್ನು ಹೀರಿದ್ದ ಸೊಳ್ಳೆಗಳನ್ನು ಸೂಚಿಗಳಿಂದ ಬೆದಕಿ (ಟೀಸ್) ಸೂಕ್ಷ್ಮದರ್ಶಕದ ಮೂಲಕ ನೋಡಿ ಅವುಗಳಲ್ಲಿ ಫೈಲೇರಿಯ ಹುಳುಗಳು ಇರುವುದೆಂದೂ ಈ ಹುಳುಗಳು ಸೊಳ್ಳೆಯ ದೇಹದಲ್ಲಿ ಸ್ವಲ್ಪ ಮಟ್ಟಿಗೆ ಬೆಳೆಯುವುವೆಂದೂ ವಿಶದಪಡಿಸಿದ (1877). ಸೊಳ್ಳೆಗಳು ನೀರಿನಲ್ಲಿ ಮೊಟ್ಟೆ ಇಟ್ಟ ಬಳಿಕ ಸಾಯುತ್ತವೆ. ಫೈಲೇರಿಯ ಇರುವ ಮೃತಸೊಳ್ಳೆಗಳ ದೇಹದಿಂದ ಫೈಲೇರಿಯಗಳು ಹೊರಬಂದು ನೀರನ್ನು ಸೇರುತ್ತವೆ. ಮನುಷ್ಯ ಆ ನೀರನ್ನು ಕುಡಿಯುವುದರಿಂದಲೊ ಅದರ ಸಂಪರ್ಕದಿಂದ ಚರ್ಮದ ಮೂಲಕವೋ ಫೈಲೇರಿಯಗಳು ಅವನ ದೇಹವನ್ನು ಹೊಕ್ಕು ವ್ಯಕ್ತಿಯಲ್ಲಿ ರೋಗವನ್ನು ಉಂಟುಮಾಡುತ್ತವೆ ಎಂದು ತಿಳಿಸಿದ. ಈ ಅಭಿಪ್ರಾಯ ತಪ್ಪು ಎಂದು ಅನಂತರ ತಿಳಿದುಬಂದಿದೆ. ರೋಗಿಯನ್ನು ಕಚ್ಚಿದ ಸೊಳ್ಳೆಗಳು ಮತ್ತೆ ಇನ್ನೊಬ್ಬ ವ್ಯಕ್ತಿಯನ್ನು ಕಡಿದಾಗಲೇ ಫೈಲೇರಿಯ ಹುಳುಗಳು ಆ ವ್ಯಕ್ತಿಯ ದೇಹದ ಒಳಹೋಗುವುದೆಂದೂ ರೋಗ ಹೀಗೆ ಹರಡುವುದೇ ಸರಿ ಎಂದೂ ಈಗ ವ್ಯಕ್ತವಾಗಿದೆ. ಅದರ ಮೂಲತಃ ರೋಗಕಾರಕ ಮನುಷ್ಯನಿಂದ ಮತ್ತೊಬ್ಬ ಮನುಷ್ಯನಿಗೆ ಈ ವರ್ಗಾವಣೆ ನಡೆಯಬೇಕಾದರೆ ಸೊಳ್ಳೆಯಂಥ ರಕ್ತಹೀರುವ ಕೀಟದ ಮಧ್ಯಸ್ಥಿಕೆ ಅಗತ್ಯ ಎಂದು ಮ್ಯಾನ್‌ಸನ್ ನಿರೂಪಿಸಿದ್ದು ಒಂದು ಅಪೂರ್ವ ಪ್ರತಿಪಾದನೆಗೆ ಅವಕಾಶ ಮಾಡಿಕೊಟ್ಟಿತು. ವೈದ್ಯಪರಿಶೋಧಕರು ಇದನ್ನು ಅನುಮೋದಿಸಿ ವ್ಯಾಸಂಗಗಳನ್ನು ಜರುಗಿಸಿ ಪರೋಪಜೀವಿಕೃತ ರೋಗಪ್ರಸಾರದಲ್ಲಿ ಕೀಟಗಳು ಮತ್ತು ಇತರ ಸಂಧಿಪದಿಗಳು ಮಧ್ಯವರ್ತಿಗಳು ಮಾತ್ರವೇ ಅಲ್ಲದೆ ಮಧ್ಯವರ್ತಿ ಆತಿಥೇಯಗಳೂ (ಇಂಟರ್‌ಮೀಡಿಯಟ್ ಹೋಸ್ಟ್ಸ್) ಆಗಿರುತ್ತವೆ ಎಂದು ತೋರಿಸಿದ್ದಾರೆ.

ಮಲೇರಿಯ ರೋಗದ ಹರಡುವಿಕೆಗೂ ರಕ್ತಹೀರುವ ಕೀಟವೇ ಪಾತ್ರವಾಗಿರಬೇಕೆಂದೂ ಅದು ಸೊಳ್ಳೆಯೇ ಆಗಿರಬೇಕೆಂದೂ ಈತನ ದೃಢನಂಬಿಕೆಯಾಗಿತ್ತು. ತನ್ನ ನಂಬಿಕೆಯನ್ನು ರೊನಾಲ್ಡ್ ರಾಸ್ ಎಂಬ ವೈದ್ಯನಿಗೆ ಒತ್ತಿ ಒತ್ತಿ ಹೇಳಿ ಅವನೂ ನಂಬುವಂತೆ ಮಾಡಿದ್ದರಿಂದ ಮುಂದೆ ರಾಸ್ ಅನಾಫೆಲಿಸ್ ಜಾತಿಯ ಹೆಣ್ಣು ಸೊಳ್ಳೆ ಮಲೇರಿಯಕಾರಕದ ಮಧ್ಯವರ್ತಿ ಆತಿಥೇಯವಾಗಿರುವುದನ್ನು ಆವಿಷ್ಕರಿಸುವಂತಾಗಿ ಅದಕ್ಕಾಗಿ ರಾಸ್ ನೊಬೆಲ್ ಪಾರಿತೋಷಿಕ ಪಡೆಯುವಂತೆ ಆಯಿತು.

ಫೈಲೇರಿಯ ರೋಗದ ಹರಡುವಿಕೆಗೆ ಸೊಳ್ಳೆ ಕಾರಣವೆಂದು ಮ್ಯಾನ್‌ಸನ್ ವಿಶದಪಡಿಸಿದಾಗ (1876) ಅವನಿಗೆ ಇನ್ನೂ ಚಿಕ್ಕವಯಸ್ಸು; ಸೋಂಕುರೋಗಗಳ ವಿಶೇಷಜ್ಞಾನ ಇನ್ನೂ ಪಡೆಯದಿದ್ದ ಸಾಮಾನ್ಯ ವೈದ್ಯನಾಗಿದ್ದ. ಪ್ರಾಯೋಗಿಕ ವ್ಯಾಸಂಗಗಳ ವಿಧಾನಗಳನ್ನು ಅರಿಯದವ; ವಿಷಯ ಪರ್ಯಾಲೋಚನೆ ಹಾಗೂ ಗ್ರಹಣೆಗೆ ಗ್ರಂಥಾಲಯಗಳನ್ನಾಗಲಿ ಇತರ ವೈಜ್ಞಾನಿಕ ಸಂಶೋಧಕರನ್ನಾಗಲಿ ಮೊರೆಹೋಗುವ ಸಂಭವ ದೂರವಾಗಿದ್ದ ಪ್ರದೇಶದಲ್ಲಿದ್ದವ. ತಜ್ಞ ಸಹಾಯಕರೂ ಇಲ್ಲದೆ ಏಕಾಂಗಿಯಾಗಿ ಈತ ಮಾಡಿದ ಸಂಶೋಧನೆಯಿಂದ ರೋಗ ಹರಡುವಿಕೆಯ ವಿಷಯದಲ್ಲಿ ಒಂದು ನೂತನ ಪ್ರತಿಪಾದನೆಯೇ ಹೊರಬಂತು. ಕೀಟಗಳು ಮತ್ತು ಇತರ ಸಂಧಿಪದಿಗಳು ಮನುಷ್ಯರಲ್ಲಿ ರೋಗಕಾರಕಗಳೂ ಆಗಿರಬಹುದಾದ ಪರೋಪಜೀವಿಗಳಿಗೆ ಮಧ್ಯವರ್ತಿ ಆತಿಥೇಯಗಳಾಗಿದ್ದು ಸೋಂಕು ಹರಡುವಿಕೆಯಲ್ಲಿ ಪ್ರಧಾನಪಾತ್ರ ವಹಿಸುವುವು ಎಂಬ ಈ ತತ್ತ್ವಕ್ಕೆ ಮೂಲಪುರುಷ ಮ್ಯಾನ್‌ಸನ್ನನೇ ಎಂದು ಹೇಳುವುದುಂಟು. ಗಹನ ವಿಚಾರಧಾರೆ, ಅಪೂರ್ವ ಬಗೆಯ ಪರ್ಯಾಲೋಚನೆ, ಪ್ರಯೋಗ ವ್ಯಾಸಂಗಗಳಲ್ಲಿ ಯುಕ್ತ ತಾಳ್ಮೆ ಇವು ಈತನನ್ನು ಆ ಮಟ್ಟಕ್ಕೆ ಏರಿಸಿದುವು. ಇಷ್ಟಾಗಿ ಇವನ ಪರಿಶೋಧನೆ ವ್ಯಾಸಂಗಕ್ಕೆ ಇದ್ದ ಸೌಲಭ್ಯ ಎಂದರೆ ಒಂದು ಸೂಕ್ಷ್ಮದರ್ಶಕ ಮಾತ್ರ.

ಅಮಾಯ್ ದ್ವೀಪದಲ್ಲಿ ಮ್ಯಾನ್‌ಸನ್ನಿನ ಸಂಸಾರ ಬೆಳೆದು ವರಮಾನ ಸಾಲದೇ ಹೋದದ್ದರಿಂದ ಈತ ಅಮಾಯಿನ ಕೆಲಸಕ್ಕೆ ರಾಜೀನಾಮೆ (1883) ಕೊಟ್ಟು ಹಾಂಗ್‌ಕಾಂಗಿಗೆ ಬಂದು ಅಲ್ಲಿ ಖಾಸಗಿ ವೈದ್ಯವೃತ್ತಿ ಕೈಗೊಂಡ. ಸ್ಥಳೀಯ ಪ್ರತಿಭಾವಂತ ತರುಣರಿಗೆ ವೈದ್ಯ ವಿದ್ಯೆ ಕಲಿಸಿದರೆ ಕೆಲವರು ತನಗೇ ಸಹಾಯಕರಾಗಿರಬಹುದೆಂದೂ ಮಿಕ್ಕವರು ಗ್ರಾಮಾಂತರ ಪ್ರದೇಶಗಳಲ್ಲಿ ನೆಲೆಸಿ ವೈದ್ಯಸೇವೆ ಮಾಡಬಹುದೆಂದೂ ಯೋಚಿಸಿ ಹಾಂಗ್‌ಕಾಂಗಿನಲ್ಲಿ ಜೇಮ್ಸ್ ಕ್ಯಾಂಟ್ಲಿ ಎಂಬ ಮತ್ತೊಬ್ಬ ವೈದ್ಯನೊಡನೆ ಸೇರಿ ವೈದ್ಯಶಿಕ್ಷಣಶಾಲೆಯೊಂದನ್ನು ತೆರೆದ (1887). ವಾಸ್ತವವಾಗಿ ಈತ ಅಮಾಯ್‌ನಲ್ಲಿದ್ದಾಗಲೂ ತರುಣ ವ್ಯಕ್ತಿಗಳಿಗೆ ಸ್ವತಃ ವೈದ್ಯಕೀಯ ಶಿಕ್ಷಣ ಕೊಟ್ಟು ತನಗೇ ಸಹಾಯಕರಾಗಿರುವಂತೆ ಮಾಡಿಕೊಂಡದ್ದಲ್ಲದೆ ಕೆಲವರು ಗ್ರಾಮಾಂತರ ಪ್ರದೇಶಗಳಿಗೆ ಹೋಗಿ ವೈದ್ಯಕೀಯ ನೆರವು ಕೊಡುವಂತೆ ಏರ್ಪಡಿಸಿದ್ದ ಕೂಡ. ಹಾಂಗ್‌ಕಾಂಗಿನಲ್ಲಿ ತೆರೆದಿದ್ದ ವೈದ್ಯಶಾಲೆ ಕಾಲಕ್ರಮದಲ್ಲಿ ಹಾಂಗ್‌ಕಾಂಗ್ ವಿಶ್ವವಿದ್ಯಾಲಯಕ್ಕೆ ಮಾತೃ ಸಂಸ್ಥೆ ಆಯಿತು.

ಮ್ಯಾನ್‌ಸನ್ ಇಂಗ್ಲೆಂಡಿಗೆ ವಾಪಸಾಗಿ (1889) ವಿಶ್ರಾಂತಜೀವನ ನಡೆಸಲು ಉದ್ಯುಕ್ತನಾದ. ಚೀನದಲ್ಲಿ ಠೇವಣಿ ಇಟ್ಟಿದ್ದ ಸ್ವತಃ ಗಳಿಸಿದ ಹಣದ ಮೌಲ್ಯ ಕುಸಿದುಹೋದದ್ದರಿಂದ ವರಮಾನ ಸಾಲದೆ ಪುನಃ ತನ್ನ 46 ನೆಯ ವಯಸ್ಸಿನಲ್ಲಿ ಲಂಡನ್ನಿನಲ್ಲಿ ಖಾಸಗಿ ವೈದ್ಯವೃತ್ತಿಯನ್ನು ಪ್ರಾರಂಭಿಸಬೇಕಾಯಿತು. ಆಗಲೂ ರೋಗಿಗಳ ರಕ್ತದ ಹಾಗೂ ಕೀಟಗಳ ಸೂಕ್ಷ್ಮದರ್ಶಕ ಪರೀಕ್ಷಾ ವ್ಯಾಸಂಗವನ್ನು ಮುಂದುವರಿಸಿದ. ಲಂಡನ್ನಿನ ಎಂ. ಆರ್. ಸಿ. ಪಿ. ಪರೀಕ್ಷೆಯಲ್ಲಿ ಉತ್ತೀರ್ಣನಾಗಿ (1892) ಆಲ್ಬರ್ಟ್ ಡಾಕ್ ಆಸ್ಪತ್ರೆಯಲ್ಲಿ ವೈದ್ಯನಾಗಿ ನೇಮಕಗೊಂಡ. ಹೆಚ್ಚು ಸಂಖ್ಯೆಯಲ್ಲಿಲ್ಲದಿದ್ದರೂ ಇಲ್ಲಿಗೆ ಪ್ರಪಂಚದ ವಿವಿಧ ಭಾಗಗಳಿಂದ ಬರುತ್ತಿದ್ದ ರೋಗಿಗಳ ಚಿಕಿತ್ಸೆ ಮಾಡುತ್ತ ಕ್ರಮೇಣ ಲಂಡನ್ನಿನ ವೈದ್ಯಕೀಯ ಸಮಾಜದಲ್ಲಿ ಉಷ್ಣವಲಯ ರೋಗಗಳ ಪತ್ತೆ ಹಾಗೂ ಚಿಕಿತ್ಸೆಯಲ್ಲಿ ಸಿದ್ಧಹಸ್ತನೆಂದು ಮಾನ್ಯತೆ ಪಡೆದ. ಅನಂತರ ಈತ ಬ್ರಿಟನ್ನಿನ ಸಾಗರೋತ್ತರ ವಸಾಹತುಗಳ ವೈದ್ಯಕೀಯ ವಿಚಾರಗಳ ಸಲಹೆಗಾರರಾಗಿ ನೇಮಿತನಾದ (1897). 1899 ರಿಂದ ಆಲ್ಬರ್ಟ್ ಡಾಕ್ ಆಸ್ಪತ್ರೆಯಲ್ಲೂ ಮತ್ತಿತರ ಕಡೆಗಳಲ್ಲೂ ಉಷ್ಣವಲಯ ರೋಗಗಳ ಬಗ್ಗೆ ಪಾಠಪ್ರವಚನಗಳನ್ನು ನಡೆಸಿದ. ಅದೇ ವರ್ಷ ಈ ರೋಗಗಳ ಬಗ್ಗೆ ವಿಶದವಾದ ಒಂದು ಗ್ರಂಥವನ್ನೂ (ಟೆಕ್ಸ್ಟ್ ಬುಕ್ ಆಫ್ ಟ್ರಾಪಿಕಲ್ ಡಿಸೀಸಸ್) ರಚಿಸಿದ. ಇವನ ಅಳಿಯನೂ ಸ್ವತಃ ಉಷ್ಣವಲಯರೋಗತಜ್ಞನೂ ಆದ ಫಿಲಿಪ್ಸ್ ಮ್ಯಾನ್‌ಸನ್ ಭಾರ್ ಎಂಬವನಿಂದ ಈ ಗ್ರಂಥ ಆಗಿಂದಾಗ್ಗೆ ಪರಿಷ್ಕರಿಸಲ್ಪಟ್ಟು ಅನೇಕ ಆವೃತ್ತಿಗಳನ್ನು ಕಂಡಿದೆ. ಅಲ್ಲದೆ ಇದು ಇಂದಿಗೂ ಉಷ್ಣವಲಯರೋಗಗಳ ಬಗ್ಗೆ ಅಮೂಲ್ಯ ಹಾಗೂ ಪ್ರಮಾಣಗ್ರಂಥ ಎನಿಸಿಕೊಂಡಿದೆ. ಆಲ್ಬರ್ಟ್ ಡಾಕ್ ಆಸ್ಪತ್ರೆಯಲ್ಲಿ ಮ್ಯಾನ್‌ಸನ್ ಪ್ರಾರಂಭಿಸಿದ ಉಷ್ಣವಲಯ ರೋಗವಿದ್ಯಾಲಯ 1920 ರಲ್ಲಿ ರೆಡ್‌ಕ್ರಾಸ್ ಸಂಸ್ಥೆಯಿಂದ ದತ್ತವಾದ ವಿಶಾಲವಾದ ಸ್ವಂತ ಕಟ್ಟಡಕ್ಕೆ ವರ್ಗಾವಣೆಗೊಂಡಿತು. ಇದು ಮುಂದೆ (1929) ಲಂಡನ್ ಸ್ಕೂಲ್ ಆಫ್ ಹೈಜಿಯೀನ್ ಅಂಡ್ ಟ್ರಾಪಿಕಲ್ ಮೆಡಿಸನ್ ಎಂದು ಪುನರ್‌ನಾಮಕರಣಗೊಂಡು ವೈಭವಯುತವಾದ ಬೇರೆ ಸ್ವಂತ ಕಟ್ಟಡಕ್ಕೆ ವರ್ಗಾವಣೆ ಹೊಂದಿ ಪ್ರಸಿದ್ಧವಾಯಿತು.[][][]

ಮ್ಯಾನ್‌ಸನ್ 1900 ರಲ್ಲಿ ರಾಯಲ್ ಸೊಸೈಟಿಯ ಸದಸ್ಯನಾಗಿ ಚುನಾಯಿತನಾದ. ಇವನಿಗೆ ಸರ್ ಪದವಿಯನ್ನೂ ನೀಡಿ ಗೌರವಿಸಲಾಯಿತು (1901). ಅನೇಕ ವಿಶ್ವವಿದ್ಯಾಲಯಗಳು ಇವನಿಗೆ ಗೌರವ ಪದವಿಗಳನ್ನು ನೀಡಿದುವು (1901).

ಈತ 1914 ರಿಂದ ವಿಶ್ರಾಂತ ಜೀವನ ನಡೆಸಿ 1922 ರ ಏಪ್ರಿಲ್ 9 ರಂದು ಲಂಡನ್ನಿನಲ್ಲಿ ನಿಧನನಾದ.

ಉಲ್ಲೇಖಗಳು

[ಬದಲಾಯಿಸಿ]
  1. To, Kelvin KW; Yuen, Kwok-Yung (2012). "In memory of Patrick Manson, founding father of tropical medicine and the discovery of vector-borne infections". Emerging Microbes & Infections. 1 (10): e31. doi:10.1038/emi.2012.32. PMC 3630944. PMID 26038403.
  2. Cook, G.C. (2007). Tropical Medicine: an Illustrated History of The Pioneers. Burlington: Elsevier. pp. 51–66. ISBN 9780080559391.
  3. "Patrick Manson". AboutAberdeen.com. Retrieved 3 February 2014.
  4. Manson-Bahr, Patrick (1962). Patrick Manson. The Father of Tropical Medicine. Thomas Nelson.
  5. Eli Chernin (1983). "Sir Patrick Manson: An Annotated Bibliography and a Note on a Collected Set of His Writings". Reviews of Infectious Diseases. 15 (2): 353–386. JSTOR 4453015.
  6. {{cite encyclopedia  |encyclopedia=Oxford Dictionary of National Biography  |edition=online  |publisher=Oxford University Press  |ref=harv  |last    =  |last1    =  |author  =J. W. W. Stephens  |author1  =  |authors  =  |first    =  |first1  =  |authorlink  =  |author-link  =  |HIDE_PARAMETER10=  |authorlink1  =    |last2    =  |author2  =  |first2    =  |authorlink2  =  |HIDE_PARAMETER16=  |last3    =  |author3  =  |first3    =  |authorlink3  =  |HIDE_PARAMETER21=  |title    =Manson, Sir Patrick (1844–1922)  |title    =  |url      =http://www.oxforddnb.com/templates/article.jsp?articleid=34865&back  |doi        =10.1093/ref:odnb/34865  |origyear    =  |year        =2004  |date        =  |month      =  |HIDE_PARAMETER30=  |HIDE_PARAMETER31=  |separator  =  |mode        =    |HIDE_PARAMETER38= }} (Subscription or UK public library membership required.)

ಹೊರಗಿನ ಕೊಂಡಿಗಳು

[ಬದಲಾಯಿಸಿ]