ವಿಷಯಕ್ಕೆ ಹೋಗು

ಕಂಗಿಲು ಕುಣಿತ -ಆಚರಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಂಗಿಲು ಕುಣಿತ

ಕಂಗಿಲು ಕುಣಿತ ಮತ್ತ ಆಚರಣೆ : ಕಂಗಿಲು ಮಾರಿ ಓಡಿಸುವ ಆಶಯವನ್ನು ಹೊಂದಿರುವ ಒಂದು ಜನಪದ ಕುಣಿತ. ಇದು ತುಳುನಾಡಿನಲ್ಲಿ ಕಂಡುಬರುವ ಪ್ರದರ್ಶನ ಕಲೆ. ಕರಾವಳಿ ಕರ್ನಾಟಕದಲ್ಲಿ ಕಂಗಿಲು ಆಚರಣೆ ಹಾಗೂ ಕುಣಿತ ಪ್ರಕಾರವು ಒಂದು ನಿರ್ದಿಷ್ಟ ಜನವರ್ಗದವರುಗಳ ಆರಾಧನಾ ಪದ್ಧತಿಯಾಗಿದೆ. ಮುಂಡಾಲ ಜನಾಂಗ ಹಾಗೂ ಗೊಡ್ಡ ಜನಾಂಗ ದವರು ಈ ಕಂಗಿಲು ಕುಣಿತವನ್ನು ನಡೆಸುತ್ತಾರೆ. ಈ ಕುಣಿತ ಹಾಗೂ ಆರಾಧನಾ ಕ್ರಮಗಳನ್ನು ನಿರ್ದಿಷ್ಟವಾದ ಋತುಮಾನದಲ್ಲಿ ನಡೆಸುವರು. ಸಸ್ಯ ಸಮೃದ್ಧಿ ಹಾಗೂ ರೋಗ ಪರಿಹಾರದ ಮಿಶ್ರ ಆಶಯಗಳು ಈ ಕುಣಿತದಲ್ಲಿ ಕಂಡುಬರುತ್ತವೆ. ಮುಖ್ಯವಾಗಿ ತುಳುವಿನಲ್ಲಿ ಹೆಚ್ಚಾಗಿ ಆರಾಧನಕ್ರಮಗಳು ನಡೆಯಲ್ಪಡುವ 'ಮಾಯಿ'- ತಿಂಗಳ ಹುಣ್ಣಿಮೆಯ ಬೆಳದಿಂಗಳಲ್ಲಿ ನಡೆಯುವುದು ರೂಢಿ. 'ಮಾಯಿ'= ತಿಂಗಳ ಬೆಳದಿಂಗಳ ಈ ಆರಾಧನ ಪದ್ಧತಿಯಲ್ಲಿ ಹಾಸ್ಯ, ಕುಣಿತ, ಹಾಡು, ಡೋಲು ಬಡಿಯುವಿಕೆ ಮತ್ತು ಆಶೀರ್ವಚನ ಕಾಣಿಕೆ ಒಪ್ಪಿಸುವುದು ಮುಂತಾದ ಕ್ರಿಯೆಗಳಿವೆ.[]

ಆಚರಣಾ ಕ್ರಮ

[ಬದಲಾಯಿಸಿ]

ಕಂಗಿಲು ನೃತ್ಯ ಮತ್ತು ಆರಾಧನ ಪದ್ಧತಿಯನ್ನು ಮೂರು ಹಗಲು ಮೂರು ರಾತ್ರಿ ನಡೆಸುವರು. ಮುಖ್ಯವಾಗಿ ಈ ಪದ್ಧತಿಯನ್ನು ಉಳಿಸಿಕೊಂಡು ಬಂದಿರುವ ಜನವರ್ಗ 'ಗೊಡ್ಡ ಜನಾಂಗದವರು'. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಈ ಜನಾಂಗದವರ ಸಂಖ್ಯೆ ಅತ್ಯಂತ ವಿರಳ. 'ಗೊಡ್ಡ'- ಜನಾಂಗದವರು ತಮ್ಮ ಮಾತೃ ಭಾಷೆಯಾಗಿ ತುಳು ಮಾತಾನಾಡಿದರೂ ಪರಂಪರೆಯ ಕಥೆಯ ಪ್ರಕಾರ ಈ ಜನವರ್ಗದವರು ' ತುಳು ನಾಡಿಗೆ '-ಪ್ರವೇಶಿಸಿದ್ದು ಹೊರಗಿನಿಂದ ಎಂಬ ಅಭಿಪ್ರಾಯವಿದೆ. ಹೊಯ್ಸಳ-ರ ಕಾಲದಲ್ಲಿ ಈ ಜನವರ್ಗದವರುಗಳು ದೇವಳದ ಸೇವೆಯಲ್ಲಿದ್ದರೆಂದೂ ಮತ್ತು ಕ್ರಮೇಣ ಯುದ್ದ ಕೌಶಲವನ್ನು ತಿಳಿದವರಾಗಿದ್ದರೆಂಬುದು ಅಭಿಮತವಿದೆ. ಆರಂಭದಲ್ಲಿ ಕಟ್ಟಿಂಗೇರಿಯಲ್ಲಿ ಈ ಜನವರ್ಗದವರ ಮೂಲ ಸಂತತಿ ಇದ್ದುದಾಗಿ ಕ್ರಮೇಣ ಉತ್ತರ ಭಾಗವಾದ 'ಕಾಪು'-ಉಡುಪಿ ಈ ಪ್ರದೇಶಗಳಲ್ಲಿ ದೈವಾರಾಧನೆಯ ಕೈಂಕರ್ಯ ನಡೆಸುವಲ್ಲಿ ಪಾಲ್ಗೊಂಡರು. ಇದಕ್ಕೆ ಉದಾಹರಣೆ ಎನ್ನುವಂತೆ ಕಾಪು ಹಳೇ ಮಾರಿಗುಡಿಯ ಸಮೀಪದಲ್ಲಿ ಇರುವ ದೈವಸಾನದಲ್ಲಿ ನಡೆಸುವ ಪಿಲಿ ಕೋಲ, ಗುಳಿಗ ಆರಾಧನೆ, ಬೆರ್ಮೆರು ಆರಾಧನೆ ನಡೆಸುವ ಯಜಮಾನಿಕೆ ಈ ಜನವರ್ಗದಲ್ಲಿ ಇಂದಿಗೂ ಇರುವುದು ಸಾಕ್ಷಿಯಾಗಿದೆ. ಈ ಆರಾಧನೆಯಲ್ಲಿ ನಡೆಯುವ ಕ್ರಿಯೆಗಳನ್ನು ಗಮನಿಸಿದಾಗ ಈ ಜನವರ್ಗದವರು ಕ್ಷಾತ್ರಧರ್ಮವನ್ನು ಮೈಗೂಡಿಸಿಕೊಂಡಿದ್ದರೆನ್ನುವುದನ್ನು ಇನ್ನಷ್ಟೂ ಸ್ಪಷ್ಟಪಡಿಸಬಲ್ಲದು. 'ಗೊಡ್ಡ'= ಜನವರ್ಗದವರು ನಡೆಸುವ ಬೆಳದಿಂಗಳ ಈ ಆರಾಧನ ಪದ್ಧತಿ ಮತ್ತು ಕುಣಿತ ಪುರುಷ ಪ್ರಧಾನವಾದುದು. ಈ ಕುಣಿತವನ್ನು ಗಮನಿಸಿದಾಗ ಆರಾಧನ ಪಾತ್ರಧಾರಿಗಳು ತಮ್ಮ ಉಡುಪು ಮತ್ತು ಶಿರಸ್ತ್ರಾಣವಾಗಿ ತೆಂಗಿನ ತಿರಿಯನ್ನು ಹೆಚ್ಚಾಗಿ ಬಳಸುತ್ತಾರೆ ಮತ್ತು ಡೋಲು-ಚಂಡೆಯ ನಿನಾದಕ್ಕೆ ತಕ್ಕನಾಗಿ ಕುಣಿಯುವರು. ದೈವಸಾನದಲ್ಲಿ ಆರಂಭವಾಗುವ ಕಂಗಿಲು ಕುಣಿತದ ತಿರುಗಾಟ ಮೂರು ರಾತ್ರಿ ಮತ್ತು ಮೂರು ಹಗಲು ನಡೆಯುವುದು. ತಿರುಗಾಟದ ಸಂದರ್ಭದಲ್ಲಿ ಕಂಗಿಲು ಕುಣಿತದವರುಗಳು ತೆಂಗಿನ ತಿರಿಯನ್ನು ಹೊದ್ದುಕೊಳ್ಳುವುದರಿಂದಾಗಿ ಇವರನ್ನು ಸಿರಿಯ ಮಕ್ಕಳೆಂದು ಕರೆಯುವರು. (ದ.ಕ. ಜಿಲ್ಲೆಯಲ್ಲಿ ಸಿರಿ-ಆಚರಣೆ ಅಥವಾ ಸಾಮೂಹಿಕ ದೈವಾವೇಷ ಬರುವ ಸಿರಿ ಆಚರಣೆಗೂ ಈ ಆಚರಣೆಗೂ ಸಂಬಂಧವಿಲ್ಲ). ಕಂಗಿಲು ಪಾತ್ರಧಾರಿಗಳು ತೆಂಗಿನ ತಿರಿಲಂಗ ಧರಿಸಿದುದರಿಂದ ಇವರನ್ನು ಸಿರಿಯ ಮಕ್ಕಳು ಎಂದು ಮನ್ನಣೆ ಕೊಡಲಾಗಿದೆ. ಸಿರಿಯ ಮಕ್ಕಳೆಂದರೆ ಫಲವತ್ತಿಕೆಯನ್ನು ತಂದು ಅನಿಷ್ಟವನ್ನು ಹೊಡೆದೋಡಿಸುವ ಮಕ್ಕಳೆಂಬುದು ಈ ಆರಾಧನಾ ಪದ್ಧತಿಯಿಂದ ತಿಳಿದು ಬರುವುದು. ಕಂಗಿಲು ಕುಣಿತದ ಮೊದಲ ದಾಖಲೀಕರಣದ ಮಾಹಿತಿ ಲಭ್ಯವಾಗುವುದು ೧೯೩೮-ರಲ್ಲಿ ಆರ್ನಾಲ್ದ್ ಬಾಕೆ ಡಚ್ ವಿದ್ವಾಂಸ ಸಂಗ್ರಹಿಸಿದ ಮೂಕಿ-ಟಾಕಿ ಚಿತ್ರದಿಂದ. ಆನಂತರ ೧೯೯೬-ರಲ್ಲಿ ದಾಖಲೀಕರಣ ಹಾಗೂ ಅಧ್ಯಯನ ನಡೆಸಲು ಮುಂದಾದ ಸಂಸ್ಥೆ ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಂಶೋಧನ ಬಳಗ ಬಹು ಮಾಧ್ಯಮಗಳಲ್ಲಿ ದಾಖಲೀಕರಣ ಹಾಗೂ ಸಂಶೋಧನಾ ಅಧ್ಯಯನ ನಡೆಸಿತು.

ಕಂಗಿಲು ಪದ ನಿಷ್ಪತ್ತಿ

[ಬದಲಾಯಿಸಿ]

ಕಂಗಿಲು ಶಬ್ದ ಕುರಿತು: ಕೆಲವೊಮ್ಮೆ ಬರಹ ಮಾಧ್ಯಮದಿಂದ ಇಡೀ ಜನ ಸಮೂಹದ ಅರಿವನ್ನು ತಪ್ಪಾಗಿ ಗ್ರಹಿಸುವಂತೆ ಮಾಡಬಹುದಾಗಿದೆ, ಇದಕ್ಕೆ ಕಂಗಿಲು ಪದ ಅಥವಾ ಶಬ್ದ ಕೂಡ ಈ ಅಪವಾದದಿಂದ ಹೊರತಾಗಿಲ್ಲ. ಹಂಪಿ ವಿಶ್ವ ವಿದ್ಯಾನಿಲಯ ಪ್ರಕಟಿಸಿದ (ಹಿ.ಚಿ. ಬೋರಲಿಂಗಯ್ಯ ಸಂಪಾದಿತ) ಹೊರ ತಂದ 'ಕರ್ನಾಟಕ ಜನಪದ ಕಲೆಗಳ ಕೋಶ' (೧೯೯೬) ತಿಳಿಸುವಂತೆ 'ಕಂಗು' -ಎಂದರೆ ಅಡಿಕೆ ಮರ, ಈ ಮರದ ಸಿರಿಯನ್ನು ಬಳಸಿದುದರಿಂದ 'ಕಂಗಿಲು '-ಬಂದಿದೆ ಎಂದಿರುವರು.[] ಇದೊಂದು ತಪ್ಪು ಗ್ರಹಿಕೆ. ಕ್ಷೇತ್ರಕಾರ್ಯ ಮತ್ತು ಅಧ್ಯಯನದ ಪ್ರಕಾರ ಕಂಗಿಲು ಸಿರಿ ಮಕ್ಕಳು ಪುರುಷ ಪಾತ್ರಧಾರಿಯಾದರೂ ಇವರೆಲ್ಲಾ ಸ್ರ್ತೀಯರು ಮತ್ತು ಕೃಷ್ಣನ ಓಲೈಸಿಕೊಳ್ಳಲು ಬಂದವರು ಎನ್ನುವುದು ಒಂದು ಅಭಿಮತವಾಗಿದೆ.

ಆಚರಣಾ ಕ್ರಿಯೆ

[ಬದಲಾಯಿಸಿ]

ಕಂಗಿಲುವಿನ ಎಲ್ಲಾ ಕ್ರಿಯೆಗಳು ನಡೆಯುವುದು ಮತ್ತು ನಡೆಯುತ್ತಿದ್ದುದು ಕಾನನ-ದಲ್ಲಿ. ಇದಕ್ಕೆ ಮುಖ್ಯ ಕಾರಣ ಈ ಕುಣಿತದ ನಡುವೆ ಗೊಲ್ಲರ ಪ್ರತಿನಿಧಿಯೆನಿಸಿಕೊಂಡ ಕೃಷ್ಣ ಕಡೆಗಣ-ನಾಗಿ ( ಕೊರಗ ಸಮುದಾಯದ ಸಾಂಸ್ಕೃತಿಕ ಪುರುಷ ) ಪ್ರಮುಖ ಪಾತ್ರ ವಹಿಸಿದ್ದಾನೆ. ಈತನ ಸುತ್ತ ಸಿರಿ ಮಕ್ಕಳು ಕುಣಿಯುವರು. ಸಿರಿ ಮಕ್ಕಳು ಮನೆಯ ಮುಂದೆ ಕುಣಿದು ಪಡಿ-ಕಾಣಿಕೆ ದಾನವಾಗಿ ಮನೆಯ ಯಜಮಾನತಿಯಿಂದ ಪಡೆದರೆ ಕಡೆಗಣ-ಪಾತ್ರಧಾರಿ ಮನೆಯ ಹಿಂಭಾಗದಲ್ಲಿ ಹೋಗಿ ದಾನ ಪಡೆಯುವುದು ಈ ಆರಾಧನಾ ಪದ್ಧತಿಯ ವೈಶಿಷ್ಟ್ಯವಾಗಿದೆ. ಭಕ್ತಾದಿಗಳು ಕೊಡುವ ಪಡಿ-ಕಾಣಿಕೆ ಯನ್ನು ಕಡೆಗಣ ಪಡೆದು ತನ್ನ ಹಣೆಯಲ್ಲಿನ ಕಪ್ಪು ಮಸಿ (ಮಾಂತ್ರಿಕ ತಿಲಕ)-ಯನ್ನು ತೆಗೆದು ಭಕ್ತಾದಿಗಳ ಹಣೆಗೆ ಸೋಕಿಸುವುದು ಕಂಗಿಲು-ಆರಾಧನಾ ಪದ್ಧತಿಯಲ್ಲಿ ವಿಶೇಷವಾಗಿದೆ. ಕಂಗಿಲು ಕುಣಿತ ಹಾಗೂ ಆರಾಧನಾ ಪದ್ಧತಿಗೂ ಹುಣ್ಣಿಮೆ ಕಾಮನಿಗೂ ಸಂಬಂಧವಿರುವುದನ್ನು ಈ ಆರಾಧನಾ ಪದ್ಧತಿಯಲ್ಲಿ ಬಳಸುವ ಸಾಹಿತ್ಯದಲ್ಲಿ ಗಮನ ಸೆಳೆಯುವ ಅಂಶವಾಗಿದೆ. ಇಲ್ಲಿ ಕೃಷ್ಣ ಕಾಮನ ಸಂಕೇತವಾಗಿರುವುದನ್ನು ಅಧ್ಯಯನದಿಂದ ತಿಳಿಯಲಾಗಿದೆ.

ಕಂಗಿಲು ಕುಣಿತದ ಹಾಡು

[ಬದಲಾಯಿಸಿ]

ಕಂಗೀಲು ಪುಟುದಿನಿ ಓಲುಂಡು ಪಿಂಬರ ಕಂಗೀಲು ಪುಟುದಿನಿ ದೆಸೆ ಬಡೆಕಾಯಿ ದೆಸೆ ಬಡೆಕಾಯಿ ಪುಟಿ ಕಂಗ್ಲು ಲೆಂಚ ಕನವೊಲಿ ಜಪ್ಪದಾ ಬಯಿಲ್ಡೆಂಚ ಜಪ್ಪದೇ ಕನವೊಲಿ ಕೂಲೂರು ಬಿಯಲ್ಡೆಂಚ ಕೂರದೇ ಕನವೊಲಿ ಇಟ್ಟಯಿನ ಇರೆಟೆಂಚ ಇಟ್ ಕನವೊಲಿ ತೂರಿನ ಮುಳ್ಳುಡೆಂಚ ತೂರಿ ಕನವೊಲಿ ಬಾರೆನ ಬಲ್ಲಡೆಂಚ ಬರಿ ಕನವೊಲಿ ತಪ್ಪುದಾ ಮೈಪುಡೆಂಚ ಲಡ್ತ್ ಕನವೊಲಿ ಕಂಗಿಲ್ ಪಾಡ್ಜಿನಾರ್ ಕಾಮ ದೇವರ್ಯೇ ರಾಜ ಪಾಡ್ದಿನಾರ್ ಬೊಳ್ಳಿ ದೇವರ್ಯೇ ಕಾಮ ದೇವೆರೆ ಗುಂಡೋ ಡವುಲು ಕಂಚಿ ತುಡರ್ಯೇ ಬೊಳ್ಳಿ ದೇವರೇ ಗೊಂಡೋಡವ್ಲ್ ಮೆಂಚಿ ತುಂಡರಿಯೇ ಕಂಚಿನಾ ತುಡರ್ದಾ ಕಡೆ ಪಿಜಿರುಂಡು ಮೆಂಚಿನಾ ತುಡರ್ದಾ ನಿನೆ ಪಿಜರುಂಡು ಕಂಗೀಲುದ ಜೋಕ್ಲು ಪೋದು ಇಲ್ಲ ಬಾಕಿಲ್ಡೆ ಗೋವುಲೆನ ದಿಕ್ಕೆ ಪೋದು ಕಿದೆ ಬಾಕಿಲ್ಡೆ ಕಂಗೀಲುದ ಜೋಕುಲೆಗ್ ಕಳೆಸದ ಪಡಿಯಾಂಡೆ ಗೋಮಲೆನ ದಿಕ್ಕಗಮಲು ಮರಯಿದ ಪಡಿಯಾಂಡೆ ಮಾಯಿಡೆ ಬತ್ತಿ ಕಂಗೀಲು ಮಾಯ ಡೋ ಪೋವೋಡು ಕಾಲೊಡು ಬತ್ತಿನವು ಕಮರ್ೋಡವೇ ಪೋವೋಡು ಬಾಯಿಗಾ ರೋನೊತ್ತುಂಡ ಬೇನ್ಯೋಡೆ ಪೋಲುಂಡು ಕೈಕಂಜಿದ ಕಾರಕುತ್ತ ಓಕರ್ುಡೇ ಪೋವೋಡು ಲರಿ ಬೀರಿ ಮರಿ ಮಗ ಮೂಡಾಯೆ ಪೊವೋಡು ಮಂಡೆಮಾರಿ ಓಂತಿಕುತ್ತ ಮೂಡಾಯೆ ಪೊವೋಡು ಲಾಯಿಸದ ಪಟ್ಟ ಇತ್ತ್ಂಡ ಪಡ್ಡಯೆ ಬರಡ್ (ಅಪೂರ್ಣ)[]

ಕುಣಿತದ ಕ್ರಮ

[ಬದಲಾಯಿಸಿ]

ಆರಂಭದಲ್ಲಿ ಮಾರಿ ಪೂಜೆ ನಡೆಯುತ್ತದೆ. ಅನಂತರ ಕಂಗಿಲು ವೇಷ ತೊಡಲು ಆರಂಭಿಸುತ್ತಾರೆ. ಈ ಕುಣಿತದಲ್ಲಿ ಸಾಮಾನ್ಯವಾಗಿ ೫ರಿಂದ ೧೪ ಮಂದಿ ಇರುತ್ತಾರೆ. ಏಳು ಜನ ಒಂದೇ ರೀತಿಯ ವೇಷ ಹಾಕುತ್ತಾರೆ. ಲುಂಗಿ ಉಟ್ಟು ಅಂಗಿ ಹಾಕಿಕೊಳ್ಳುತ್ತಾರೆ. ಸೊಂಟಕ್ಕೆ ಹಾಗೂ ಕುತ್ತಿಗೆಗೆ ತೆಂಗಿನ ತಿರಿಯನ್ನು ಸುತ್ತಿಕೊಳ್ಳುತ್ತಾರೆ. ಮುಖಕ್ಕೆ ಕಪ್ಪು ಬಣ್ಣ ಹಚ್ಚಿರುತ್ತಾರೆ. ಕೆಲವು ಕಡೆ ಹಾಗೇ ಇರುತ್ತಾರೆ. ತಲೆಗೆ ಒಂದು ಮುಂಡಾಸು ಇರುತ್ತದೆ. ಕೆಲವು ಕಡೆ ತೆಂಗಿನ ತಿರಿಯನ್ನು ಜಾಲರಿಯಂತೆ ತಲೆಯ ಸುತ್ತ ಇಳಿಸಿ ಕಟ್ಟಿರುತ್ತಾರೆ. ಕುಣಿತಗಾರರು ವೃತ್ತಾಕಾರದಲ್ಲಿ ಕುಣಿಯುತ್ತಾರೆ. ಹಿಮ್ಮೇಳದಲ್ಲಿ ಹಾಡುವವರು, ಡೋಲು ಹೊಡೆಯುವವರು, ತಾಸೆ ಹೊಡೆಯುವವರು, ಘಂಟಾಮಣಿ ಹೊಡೆಯುವವರು ಒಂದು ಪಕ್ಕದಲ್ಲಿ ನಿಂತಿರುತ್ತಾರೆ. ಈ ಕುಣಿತ ನಡೆಯುತ್ತಿರಬೇಕಾದರೆ ಸಭೆಯ ಮಧ್ಯೆದಿಂದ ಒಬ್ಬ ಮುದುಕನ ವೇಷದವನು ಅಥವಾ ಕೊರಗ ವೇಷದವನು ಕುಣಿಯುತ್ತಾ ಬರುತ್ತಾನೆ. ಈತ ಕುಣಿಯುವವರ ಹೊರಗಿನಿಂದ ಅಥವಾ ಒಳಗಿನಿಂದ ಒಂದು ದೊಣ್ಣೆಕುಟ್ಟಿಕೊಂಡು ಕುಣಿಯುತ್ತಾನೆ. ಈತ ಸೊಂಟಕ್ಕೆ ಕಪ್ಪುಬಟ್ಟೆ ಕಟ್ಟಿಕೊಂಡಿರುತ್ತಾನೆ. ಕೊರಳಿಗೆ ಹೂಮಾಲೆ ಹಾಕಿಕೊಂಡಿರುತ್ತಾನೆ. ತಲೆಗೆ ಹಾಲೆಯ ಮುಟ್ಟಾಳೆ ಇಟ್ಟಿರುತ್ತಾನೆ. ಕಾಲಿಗೆ ಗೆಜ್ಜೆ ಕಟ್ಟಿಕೊಂಡು ಅಡ್ಡಾದಿಡ್ಡಿ ಕುಣಿಯುತ್ತಾನೆ. ಕುಣಿಯುವವರು ಆಗಾಗ ಕ್ಹೂ, ಕ್ಹೂ ಎಂದು ಕೂಗುತ್ತಾರೆ. ಮಂಗಳೂರಿನ ಕಡೆ ಮಹಿಳೆಯರೂ ಈ ಕುಣಿತವನ್ನು ವೇದಿಕೆ ಮೇಲೆ ಕುಣಿಯುವ ಕ್ರಮ ಇದೆ.

ಉಲ್ಲೇಖ

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2015-02-15. Retrieved 2016-02-23.
  2. ಕರ್ನಾಟಕ ಜನಪದ ಕಲೆಗಳ ಕೋಶ -ಸಂಪಾದಕ : ಪ್ರೊ. ಹಿ.ಚಿ.ಬೋರಲಿಂಗಯ್ಯ, ೧೯೯೬. ಹಂಪಿ:ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಕಮಲಾಪುರ, ಹೊಸಪೇಟೆ ತಾಲೂಕು, ಬಳ್ಳಾರಿ ಜಿಲ್ಲೆ
  3. http://suddinews.com/sullia/2013/02/04/44398/[ಶಾಶ್ವತವಾಗಿ ಮಡಿದ ಕೊಂಡಿ]