ವಿಷಯಕ್ಕೆ ಹೋಗು

ತುಳುನಾಡ ಸಿರಿ-ಭೂತಕೋಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತುಳುನಾಡ ಭೂತ

ಪೀಠಿಕೆ

[ಬದಲಾಯಿಸಿ]

ಭವ್ಯ ಪರಂಪರೆಯ ಸಿರಿ ಸಂಪತ್ತಿನ ದಕ್ಷಿಣ ಕನ್ನಡ ಕನ್ನಡ ಪರಶುರಾಮ ಸೃಷ್ಟಿಯ ತುಳು ನಾಡೆಂದೇ ಪ್ರಖ್ಯಾತ. ತುಳುನಾಡು ಹಲವು ನಂಬಿಕೆ, ಆಚರಣೆಗಳ ಬೀಡು. ತುಳು ಜನರ ಧಾರ್ಮಿಕ ಆಚರಣೆಯಲ್ಲಿ ಭೂತಕೋಲಕ್ಕೆ ಭವ್ಯ ಪರಂಪರೆಯಯಿದೆ. ಭೂತಕೋಲಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೆ ಅದನ್ನು ಮೂಢನಂಬಿಕೆ ಎನ್ನಲು ಸಾಧ್ಯವಿಲ್ಲ.

ತುಳುನಾಡಿನಲ್ಲಿ ಭೂತ ವೇಷ ಹಾಕುವವರಲ್ಲಿ ಎರಡು ಪಂಗಡಗಳಿವೆ. ಪರವರು ಮತ್ತು ನಲಿಕೆಯವರು. ಪರವರು ಸಂಸಾರದ ಒಳಗೆ ಅಂದರೆ ಕೆಲವು ಮನೆಗಳಿಗೆ ಸೇರಿದ ಭೂತಗಳನ್ನು ಕಟ್ಟುತ್ತಾರೆ. ನಲಿಕೆಯವರು ಹೊರಗಿನ ಅಂದರೆ ಮನೆಗಳಿಗೆ ಸೇರದ ಬೇರೆ ಭೂತಗಳನ್ನು ಕಟ್ಟುತ್ತಾರೆ. ಇದು ಪ್ರಸ್ತುತ ಈಗಲೂ ರೂಢಿಯಲ್ಲಿದೆ.

ಮಂಜುನಾಥನಿಗೂ ಭೂತಕೋಲಕ್ಕೂ ಸಂಬಂಧ

[ಬದಲಾಯಿಸಿ]
ತುಳುನಾಡ ಭೂತಗಳಲ್ಲಿ ಅಣ್ಣಪ್ಪ ಪಂಜುರ್ಲಿ ಎಂಬ ಭೂತ ದೊಡ್ಡ ಭೂತ. ಇದನ್ನು ಮಂಜುನಾಥನ ಬಲಗೈ ಬಂಟನೆಂದು ಕರೆದರೆ, ಕುಮಾರ ಸ್ವಾಮಿ ಹಾಗೂ ಕಾಲ ರಾತ್ರಿಯನ್ನು ಎಡಗೈ ಬಂಟರೆಂದು ಕರೆಯುತ್ತಾರೆ.

ಹೆಣ್ಣು ಹಾಗೂ ಗಂಡು ಭೂತಗಳು

[ಬದಲಾಯಿಸಿ]
ತುಳುನಾಡ ಜನರು ನಂಬುವ ಭೂತಗಳಲ್ಲಿ ಹೆಣ್ಣು ಹಾಗೂ ಗಂಡು ಭೂತಗಳು ಎಂಬ ಪ್ರಭೇದವೂ ಇದೆ.

ಗಂಡು ಭೂತಗಳು

[ಬದಲಾಯಿಸಿ]
                     ೧.ಪಿಲಿಚಾಮುಂಡಿ
                     ೨.ಗುಳಿಗ
                     ೩.ಪಂಜುರ್ಲಿ
                     ೪.ಮಲ್ರಾಯ

ಹೆಣ್ಣು ಭೂತಗಳು

[ಬದಲಾಯಿಸಿ]
                     ೧.ಕಲ್ಲುರ್ಟಿ 
                     ೨.ರಕ್ತೇಶ್ವರಿ
                     ೩.ಉಳ್ಳಾಲ್ತಿ 
                     ೪.ಮಂತ್ರದೇವತೆ 
                     ೫.ಕೊಡಮೈತಾಯಿ 
                     ೬.ಪೊಸಭೂತ

ಗಂಡು ಭೂತಗಳಲ್ಲಿ ಅತೀ ಕೋಪದ ಭೂತಗಳೆಂದರೆ ಗುಳಿಗ ಹಾಗೂ ಪಂಜುರ್ಲಿ. ಹೆಣ್ಣು ಭೂತಗಳಲ್ಲಿ ಕೋಪದ ಭೂತ ಕಲ್ಲುರ್ಟಿ.

ಭೂತ ಕಟ್ಟುವ ಮೊದಲು ಅನುಸರಿಸಬೇಕಾದ ಅಗತ್ಯ ಕ್ರಮ

[ಬದಲಾಯಿಸಿ]

ಮೊದಲನೆಯದಾಗಿ, ಭೂತಕಟ್ಟುವವರು ಶುದ್ಧವಿರಬೇಕಾಗುತ್ತದೆ. ಅಂದರೆ ಮೀನು, ಮಾಂಸ, ಮದ್ಯ ಮುಟ್ಟುವಂತಿಲ್ಲ. ಆದಿನ ಪೂರ್ತಿ ಸಸ್ಯಹಾರಿಯಾಗಿರಬೇಕು. ಎರಡನೆಯದಾಗಿ ಅವನು ದಿನಕ್ಕೆ ಮೂರು ಬಾರಿ ಸ್ನಾನ ಮಾಡಬೇಕು, ಬೆಳಿಗ್ಗೆ, ಮಧ್ಯಾನ, ಸಂಜೆ. ಮೂರನೆಯದಾಗಿ ಆ ದಿನ ಅವನಿಗೆ ಮಧ್ಯಾನ್ನದ ಊಟ ಮಾತ್ರ. ಅದರಲ್ಲೂ ಉಳ್ಳಾಲ್ತಿ ಎಂಬ ಹೆಣ್ಣು ಭೂತ ಭಾರೀ ಶುದ್ಧ. ಇದನ್ನು ಕಟ್ಟುವವರು ಮೂರು ದಿನ ಶುದ್ಧರಾಗಿರಬೇಕು. ಅಕ್ಕಿಯಲ್ಲಿ ಮಾಡಿದ ಯಾವುದೇ ವಸ್ತು ಮುಟ್ಟಬಾರದು(ತಿನ್ನಬಾರದು) ಬಾಳೆಹಣ್ಣು, ಎಳನೀರು ಇತ್ಯಾದಿ ಸೇವಿಸಬಹುದು. ಒಂದು ವೇಳೆ ಭೂತಕಟ್ಟುವವರು ಈ ಮೇಲಿನ ರೀತಿ ನೀತಿಗಳಿಗೆ ಬದ್ಧರಾಗದಿದ್ದಲ್ಲಿ ಅವರ ಮೈಗೆ ಭೂತ ಪ್ರವೇಶಿಸುವುದಿಲ್ಲ.

ಮೈಗೆ ಭೂತ ಬರುವಾಗ ಆಗುವ ಅನುಭವ

[ಬದಲಾಯಿಸಿ]

ಭೂತ ಕಟ್ಟುವವರು ಯಾವುದೇ ವಿರಾಮಗಳಿಲ್ಲದೆ ರಾತ್ರಿಯಿಂದ ಬೆಳಿಗ್ಗೆಯವರೆಗೆ ಕುಣಿಯಬೇಕು. ಮೈಗೆ ಭೂತ ಬರಬೇಕೆಂದರೆ ಹಿಂದಿನಿಂದ ಹೆಂಗಸರು ಸಂಧಿ(ಮಂತ್ರ)ಯನ್ನು ಹೆಂಗಸರು ಪಠಿಸಬೇಕಾಗುತ್ತದೆ. ನಂತರ ನಿಧಾನವಾಗಿ ಭೂತ ಮೈಯೊಳಗೆ ಪ್ರವೇಶಿಸುತ್ತದೆ. ಆ ಸಮಯದಲ್ಲಿ ಭೂತ ಕಟ್ಟಿದವನಿಗೆ ಏನೋ ಒಂದು ರೀತಿ ಸಂಕಟವಾಗುತ್ತದೆ, ನಿತ್ರಾಣವಾಗುತ್ತದೆ, ಮೈನೋವು ಶುರುವಾಗುತ್ತದೆ. ಭೂತ ಪೂರ್ತಿಯಾಗಿ ಮೈಗೆ ಪ್ರವೇಶಿಸಿದ ಮೇಲೆ ಅವನಿಗೆ ಪ್ರಜ್ಞೆಯೇ ಇರುವುದಿಲ್ಲ. ನಂತರ ಕುಣಿಯುವುದು. ತಿನ್ನುವುದು ಎಲ್ಲವೂ ಭೂತ. ಬೆಳಿಗ್ಗೆ ತನಕ ಕುಣಿಯುವುದು ಭೂತವೇ. ಬೆಳಿಗ್ಗೆ ಭೂತ ಮೈ ಬಿಟ್ಟು ಹೊರಟು ಹೋದ ನಂತರ ಭೂತ ಕಟ್ಟಿದವನಿಗೆ ಪ್ರಜ್ಞೆ ಮರಳುತ್ತದೆ. ಆದರೆ ಅವನಿಗೆ ಯಾವುದೇ ರೀತಿ ರಾತ್ರಿ ಕುಣಿದ ನೆನಪಿರುವುದಿಲ್ಲ.

ಪಾರಿ ಹೇಳುವುದು

[ಬದಲಾಯಿಸಿ]

ಪಾರಿ ಹೇಳುವುದೆಂದರೆ ಮನೆಯ ಯಜಮಾನ ಅಥವಾ ಭೂತಕೋಲವನ್ನು ಮಾಡಿಸುವವರು ತಮ್ಮ ಕಷ್ಟಗಳನ್ನು ಭೂತದ ಮುಂದೆ ಹೇಳಿಕೊಳ್ಳುವುದು. ಭೂತ ಇವರ ಕಷ್ಟಗಳಿಗೆ ಪರಿಹಾರ ಕೊಡುತ್ತೇನೆಂದು ಭರವಸೆಯನ್ನು ನೀಡುತ್ತದೆ, ಇದು ನೆರವೇರುತ್ತದೆ ಎಂಬುದು ತುಳುನಾಡು ಜನರ ನಂಬಿಕೆ.

ಭೂತದ ಕೆಲವು ವಿಶೇಷ ಲಕ್ಷಣಗಳು

[ಬದಲಾಯಿಸಿ]

ಭೂತ ಕಟ್ಟಿದವನ ಮೈಗೆ ಭೂತ ಬಂದ ಮೇಲೆ ಅವನ ವರ್ತನೆ ಸಂಪೂರ್ಣ ಬದಲಾಗುತ್ತದೆ. ಅವನ ಮುಖ ಗುರುತು ಹಿಡಿಯಲಾಗದಷ್ಟು ಬದಲಾಗುತ್ತದೆ. ಈ ಭೂತಗಳು ಎಳನೀರು ಎಷ್ಟು ಬೇಕಾದರೂ ಕುಡಿಯುತ್ತವೆ. ಒಂದೇ ರಾತ್ರಿಯಲ್ಲಿ 200ಕ್ಕೂ ಮಿಕ್ಕಿ ಎಳನೀರು ಕುಡಿದ ಉದಾಹರಣೆಗಳಿವೆ. ಕೋಳಿ ತಿನ್ನುವುದೂ ನಮ್ಮ ಭೂತಗಳ ವಿಶೇಷ. ಕೋಳಿಯೆಂದರೆ ಹಸಿ ಕೋಳಿಯನ್ನು ಇವು ಹಾಗೇ ತಿನ್ನುತ್ತವೆ.

ಗುಳಿಗನ ವಿಶೇಷ ಲಕ್ಷಣಗಳು

[ಬದಲಾಯಿಸಿ]

ಗುಳಿಗ ಭೂತವು ತುಳುನಾಡ ಗಂಡು ಭೂತಗಳಲ್ಲಿ ಒಂದು. ಇದು ಭಾರೀ ಕೋಪದ ಭೂತವೆಂದೇ ಹೆಸರುವಾಸಿ. ಈ ಭೂತ ಎಷ್ಟು ಕೋಳಿ ಹಾಗು ಎಳನೀರು ಕೊಟ್ಟರು ತಿನ್ನುತ್ತವೆ. ಅತೀ ಹೆಚ್ಚು ಕೋಳಿ ತಿನ್ನುವ ಭೂತ ಇದಾಗಿದೆ. ಕೋಳಿ ಕೊಡದಿದ್ದಲ್ಲಿ ಗುಳಿಗ ಭೂತ ಓಡಲು ಪ್ರಾರಂಭಿಸುತ್ತದೆ, ಆಗ ಜನರು ಹಿಡಿದು ನಿಲ್ಲಿಸಿ ಕೋಳಿ ಕೊಟ್ಟು ಸಮಾಧಾನಪಡಿಸುತ್ತಾರೆ.

ಹೆಣ್ಣಿನ ಹಿಂದಿನ ಭೂತ

[ಬದಲಾಯಿಸಿ]

ತುಳುನಾಡ ಭೂತಗಳು ಕೆಲವು ಪರಂಪರೆಗಳನ್ನು ಹೊಂದಿವೆ. ಅದರಲ್ಲಿ ಇದೂ ಒಂದು. ಯಾವ ಯುವತಿಯ ಮನೆಯಲ್ಲಿ ಪಂಜುರ್ಲಿಯನ್ನು ಆರಾಧಿಸುತ್ತಾರೋ ಅವಳನ್ನು ಮದುವೆ ಮಾಡಿಕೊಂಡು ಮನೆ ತುಂಬಿಸಿಕೊಳ್ಳುವಾಗ ಅವಳ ಗಂಡನ ಮನೆಗೂ ಆ ಭೂತ ಬರುತ್ತದೆಂದು ಪ್ರತೀತಿ. ಅಲ್ಲಿಯೂ ನಂತರ ಈ ಪಂಜುರ್ಲಿಯನ್ನು ಅವರ ಮನೆಯಲ್ಲಿ ಆರಾಧಿಸಬೇಕಾಗುತ್ತದೆ.

ಬಳಸುವ ಬಣ್ಣಗಳು

[ಬದಲಾಯಿಸಿ]

ಭೂತ ಧರಿಸುವವರು ಮುಖಕ್ಕೆ ಬಣ್ಣಗಳನ್ನು ಹಾಕಿಕೊಳ್ಳುತ್ತಾರೆ. ಅದೆಂದರೆ ಹಳದಿ, ಕಪ್ಪು, ಬಿಳಿ, ಕೆಂಪು.

ಧರಿಸುವ ಬಟ್ಟೆ ಹಾಗೂ ಗೆಜ್ಜೆ

[ಬದಲಾಯಿಸಿ]

ಭೂತ ಕಟ್ಟುವವರು ಧರಿಸುವ ಬಟ್ಟೆ ಕೆಂಪು ಹಾಗೂ ಗೆಜ್ಜೆಗೆ ಗಗ್ಗರ ಎಂದು ಕರೆಯುತ್ತಾರೆ. ಇದು ಒಂದು ಕೆ.ಜಿ.ಗಿಂತಲೂ ಭಾರವಾಗಿದ್ದು, ಇವುಗಳಲ್ಲಿ ಗಂಡು ಹಾಗೂ ಹೆಣ್ಣು ಎಂಬ ಎರಡು ವಿಧಗಳಿವೆ. ಅದರಂತೆ ಹೆಣ್ಣಿನ ಸ್ವರ ಮೆಲ್ಲಗೆ ಮತ್ತು ಗಂಡಿನ ಸ್ವರ ಜೋರಾಗಿರುತ್ತದೆ.

ಭೂತಕ್ಕೆ ಹೂ

[ಬದಲಾಯಿಸಿ]

ತುಳುನಾಡ ಭೂತಗಳಿಗೆ ಹೂಗಳಿಂದಲೂ ಆರಾಧಿಸುತ್ತಾರೆ. ಕನಕಾಂಬರ, ಸೇವಂತಿಗೆ, ಹಿಂಗಾರ, ಮಲ್ಲಿಗೆ, ಕೇಪುಳ ಹೂ, ಹಾಗೂ ಇನ್ನಿತರ ವಿವಿಧ ಹೂಗಳನ್ನು ಇದರ ಆರಾಧನೆಗಾಗಿ ಬಳಸುತ್ತಾರೆ.

ಉಪಸಂಹಾರ

[ಬದಲಾಯಿಸಿ]

ಸಾಮಾನ್ಯವಾಗಿ ಭೂತ ಕಟ್ಟುವವರಿಗೆ ಒಂದು ರಾತ್ರಿಗೆ ಸಂಬಳವೆಂದು 1,000, 1,500, 2,000 ರೂಪಾಯಿಗಳನ್ನು ಕೊಡುತ್ತಾರೆ.ತುಳುನಾಡ ಭೂತರಾಧನೆಯನ್ನು ಇಂದಿನವರೆಗೆ ಇಲ್ಲಿ ಮೂಢನಂಬಿಕೆ ಎಂದವರು ಯಾರು ಇಲ್ಲ. ಆದರೆ ತುಳುನಾಡ ಜನರಲ್ಲಿ ಭೂತರಾಧನೆ ಇಂದಿಗೂ ಚಾಲ್ತಿಯಲ್ಲಿದೆ, ಅದನ್ನು ಈಗಲೂ ಪಾಲಿಸಿಕೊಂಡು ಬರುತ್ತಿದ್ದಾರೆ.