ವಿಷಯಕ್ಕೆ ಹೋಗು

ಜೋಕುಮಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುನ್ನುಡಿ

[ಬದಲಾಯಿಸಿ]

ಇದು ಉತ್ತರ ಕರ್ನಾಟಕದ ಭಾಗದಲ್ಲಿ ಪರಂಪರೆಯಿಂದ ಉಳಿಸಿಕೊಂಡು ಬಂದ ಜಾನಪದ ಹಬ್ಬ. ಬರಗಾಲದ ಬೇಸಿಗೆ ಸಮಯದಲ್ಲಿ ಮಳೆಗಾಗಿ ಜೋಕುಮಾರನ ಮಣ್ಣಿನ ಮೂರ್ತಿ ಮಾಡಿ ವಿಶೇಷ ಪೂಜೆ ಸಲ್ಲಿಸಿ ತಮ್ಮ ಮೊರೆಗಳನ್ನು ಜೋಕುಮಾರನಲ್ಲಿ ಕೇಳಿಕೊಂಡು ಜೋಕುಮಾರ ಇರುವ ವಿಗ್ರಹಗಳನ್ನು ಮೂರು ಬಾರಿ ಮೇಲಕ್ಕೆ ಎತ್ತಿಕೊಂಡು ತಮ್ಮ ಹರಕೆಯನ್ನು ಕಟ್ಟಿಕೊಂಡು ದವಸ ಧಾನ್ಯಗಳನ್ನು ಧಾನವಾಗಿ ಜೋಕುಮಾರನ ಶಿಷ್ಯರಿಗೆ ಕೊಡುತ್ತಾರೆ. ಜೋಕುಮಾರನ ಪದಗಳು ತುಂಬಾ ಕೇಳಲು ಮಧುರವಾಗಿ ಅರ್ಥವನ್ನು ಕೊಡುತ್ತಾ ಹೋಗುತ್ತದೆ. ಇದು ಬಡವರ ಗಣಪತಿ ಎಂದು ಕರೆಯುತ್ತಾರೆ. ಈ ಪೂಜೆ ಮುಗಿಸಿದ ದಿನದಿಂದ ಮಳೆ ಬರುತ್ತದೆ ಎಂದು ಗ್ರಾಮೀಣ ಭಾಗದಲ್ಲಿನ ಜನರ ನಂಬಿಕೆ. ಜೋಕುಮಾರನ ಪೂಜೆಗೆ ಸಾಮಾನ್ಯವಾಗಿ ಜನರು ಮಾಡುವ ನುಚ್ಚು, ಮಜ್ಜಿಗೆ, ಬೆಣ್ಣೆ, ಗಂಜಿ ಪ್ರಿಯನಾಗಿದ್ದು, ಬಡವರ ವಿನಾಯಕ ಈ ಜೋಕುಮಾರ ಎಂದು ಇಂದಿಗೂ ಆಚರಣೆಯಲ್ಲಿದೆ. ಬಡವರ ಮನೆಯ ಬೆನಕನೆಂದು ಕರೆಯುತ್ತಾರೆ. ಈ ಒಂದು ಹಬ್ಬದಿಂದ ನಾಡಿನ ಸುತ್ತಮುತ್ತಲೂ ಜಾನಪದ ಕಲರವ ಮೂಡುತ್ತದೆ. ಸಾಂಸ್ಕೃತಿಕ ಹಬ್ಬದಲ್ಲಿ ವಿಶೇಷವಾಗಿ ನಾಡಿನ ಸುತ್ತಮುತ್ತಲಿನ ಮನೆಗಳಿಗೆ ಜೋಕುಮಾರನ ಮೆರವಣಿಗೆ ಮಾಡುತ್ತಾ ಹಳ್ಳಿಗರನ್ನು ಆಕರ್ಷಿಸುತ್ತದೆ. ಇದೊಂದು ನಾಮಪದ. ಒಬ್ಬ ಜಾನಪದ ದೇವರ ಹೆಸರು, ಜೋಕ ಪದ ವಿಶ್ಲೇಷಣೆ. ಜೋಕು ಈ ಪದಕ್ಕೆ ಠೀವಿ, ಡಾಲು, ಹಂಚಿಕೆ ತಂತಿವಾದ್ಯ ನುಡಿಸುವುದರಲ್ಲಿನ ಒಂದು ಕ್ರಮ ಎಂಬ ಅರ್ಥ ಕೊಡುವುದು. ಜೋ ಇದು ಮುಂದೆ ಜೋಗುಳ ಧ್ವನಿ ಅಂದರೆ ನೇತಾಡುವ ಎಂಬ ಅರ್ಥವನ್ನು ಕೊಡುತ್ತದೆ. ಜೋಕುಮಾರನ ಹಾಡುಗಳಲ್ಲಿ ಮೇಲಿಂದ ಮೇಲೆ ಬರುವ ಕೊಮರಾಗೆ ಉದಾಹರಣೆಗೆ:

ಯಾಕೊ ಕೊಮರಾಯ

ನಿನ್ನ ಬಾಯಿಗೆ ಬೆಣ್ಣಿಲ್ಲ|

ಮೇಲೆ ಮಾಣಿಕದ ಹರಳಿಲ್ಲ | ಈ ಊರ

ಓಣ್ಯಾಗ ನಿನ್ನ ಸುಳುವಿಲ್ಲ||

ಈ ಪದವನ್ನು ವಿಶ್ಲೇಷಿಸಿದಾಗ:

ಕೊಮೆ - ಸುಡು - ಉರಿ - ಎಂತಲೂ

ಕೊಮ್ಮೆ - ಕೊಬ್ಬು, ಅಹಂಕಾರ ಎಂತಲೂ

ಕುವರ -ಮಗ, ತರುಣ, ಯುವಕ ಎಂತಲೂ ಅರ್ಥ ಮಾಡಿಕೊಳ್ಳಬಹುದು.

ಹೆಸರು ಬಂದ ಬಗೆ

[ಬದಲಾಯಿಸಿ]

ಜೋಕ ಮುನಿಯ ಮಗನು - ಪುರಾಣ ಕಥೆಗಳ ಪ್ರಕಾರ, ಜೋಕುಮಾರ ಅಂದರೆ ಉಡಾಳ, ಫಟಿಂಗ ಎಂಬ ಅರ್ಥವನ್ನು ಕೊಡುತ್ತದೆ.

ಹಿನ್ನೆಲೆ

[ಬದಲಾಯಿಸಿ]

ಜೋಕುಮಾರನ ಉಲ್ಲೇಖದ ಬಗ್ಗೆ ವಿವೇಚಿಸುವದಾದರೆ - ಕ್ರಿ. ಶ ೧೦೪೯ ರಲ್ಲಿಯ ಜಾತಕ ತಿಲಕದಲಿ ವಿವರಿಸಿದಂತೆ:

ಭವನಾಂತದೊಳ್ ಸುರಸಂ |

ಭವನಿಗೆ ಕಾಣಿದಿರೆ ಸೌಮ್ಯದಿರೆ ಪಾಪಗಣಂ ||

ನವ ಪಂಚಮದೊಳ್ ಪುಟ್ಟಿದ ಕುವರಂ |

ಜೋಕುಮಾರನಂತೆ ಪರಿದಿವಸಮಿರಂ ||

ಕ್ರಿ.ಶ ೧೦೪೯ ಕ್ಕಿಂತ ಮೊದಲೇ ಜೋಕುಮಾರನ ಸಂಪ್ರದಾಯವಿತ್ತೆಂದು ಹೇಳಬಹುದು. ಅದರಂತೆ ಕನ್ನಡ ಸಾಹಿತ್ಯದಲ್ಲಿ ಜೋಕುಮಾರನನ್ನು ಉಲ್ಲೇಖಿಸುವ ಕೆಲವು ಕೃತಿಗಳ ಪ್ರಕಾರ,

 1. ಶ್ರೀಧರಚಾರ್ಯರ: ಜಾತಕ ತಿಲಕ, ಕ್ರಿ.ಶ.೧೦೪೯
 2. ಬಂಧುವರ್ಮನ: ಜೀವಸಂಭೋಧನೆ, ಕ್ರಿ.ಶ.೧೧೫೦
 3. ನೇವಿಚಂದ್ರನ: ನೇಮಿನಾಥ ಪುರಾಣ, ಕ್ರಿ.ಶ.೧೧೭೦
 4. ಬಸವಣ್ಣನವರ: ವಚನಗಳು, ಕ್ರಿ.ಶ.೧೧೬೦

ಈ ಮೇಲಿನ ಎಲ್ಲಾ ಕೃತಿಗಳಲ್ಲಿ ಉಲ್ಲೇಖಗೊಂಡ ಜೋಕುಮಾರನು ಒಬ್ಬ ದೇವತೆಮಗನು, ಅಂದರೆ ಮಾರಿಯ ಮಗನು, ಅಲ್ಪಾಯುಷಿಯಾಗಿ, ಏಳು ದಿನಗಳಲ್ಲಿ ಮೆರೆದು ಪುಂಡಾಟಿಕೆ ಮಾಡಿ ತೀರಿ ಹೋದ ಜಾನಪದ ಸಂಪ್ರದಾಯದ ದೇವತೆಯಾಗಿದ್ದಾನೆ. ಅವನ ತಾಯಿಯು ದೇವತಾ ಸ್ತ್ರೀ ಇದ್ದರೂ ಸಹ ಅವನನ್ನು ಕಾಪಾಡದೆ ಹೋದಳೆಂದ ಬಳಿಕ, ಕ್ಷುದ್ರ ದೇವತೆಗಳಲ್ಲಿ ಇವನೂ ಒಬ್ಬನೆನ್ನಬಹುದು.

ವಿಗ್ರಹ ತಯಾರಿಕೆ

[ಬದಲಾಯಿಸಿ]

ಸಾಮಾನ್ಯವಾಗಿ ಗಣಪತಿಯನ್ನು ಮಾಡುವ ಚಿತ್ರಕಾರನೇ ಮೂರರಿಂದ ನಾಲ್ಕು ಅಡಿಯ ಎತ್ತರವಾದ ಒಂದು ಮಣ್ಣಿನ ಮೂರ್ತಿಯನ್ನು ಮಾಡುವನು. ರೂಪದಲ್ಲಿ ಅರ್ಜುನನಂತೆ ಸುಂದರನೂ ಹಳದಿ ವರ್ಣದವನೂ ಅಗಲವಾದ ಮುಖದವನೂ ಅದಕ್ಕೆ ತಕ್ಕಂತೆ ಹೊಳೆಯುವ ದೊಡ್ಡ ಕಣ್ಣುಗಳುಳ್ಳವನು ಆಗಿರುವನು. ಹಣೆಯಲ್ಲಿ ವಿಭೂತಿ ಪಟ್ಟಿ, ಕುಂಕುಮ, ತಲೆಯ ಮೇಲೆ ಕಿರೀಟ ದೊಡ್ಡದಾದ ಹುರಿಕಟ್ಟಾದ ಕಲ್ಲಿ ಮೀಸೆ, ದೊಡ್ಡ ಬಾಯಿ, ಕಾಮುಕತೆಯನ್ನು ಎತ್ತಿ ತೋರಿಸುವಂತ ದೊಡ್ಡ ಗುಪ್ತಾಂಗ, ಕಣ್ಣಿನ ಸ್ಥಾನದಲ್ಲಿ ಒಂದು ಕವಡೆಯನ್ನಿಡುವರು, ಬಾಯಿಗೆ ಬೆಣ್ಣೆಯನ್ನು ಹಚ್ಚುವರು. ಒಂದು ಬುಟ್ಟಿಯಲ್ಲಿ ಬೇವಿನ ತೊಪ್ಪಲ ಹಾಕಿ ಅದರ ನಡುವೆ ಕೂರಿಸುವರು. ಅದರಲ್ಲಿ ಪತ್ರೆ, ಹೂವು ಇಡುವರು, ಎಣ್ಣೆ ಹಾಕಲು ಒಂದು ಮಣ್ಣಿನ ಮಡಿಕೆ ಇಡುವರು. ಮೊದಲನೆಯ ಪೂಜೆಯನ್ನು ಊರ ಹಿರಿಯರ ಮನೆಯಲ್ಲಿ ಅಥವಾ ಗೌಡರ ಮನೆಯಲ್ಲಿ ಹೋಗಿ ಮಾಡುವರು. ನಂತರ ಅವರು ಜೋಕುಮಾರನನ್ನು ಹೊತ್ತ ಹೆಂಗಸರಿಗೆ ರಾಗಿ, ಮೆಣಸಿನಕಾಯಿ, ಹುಣಸೆ ಹಣ್ಣು, ರೊಟ್ಟಿ, ಉಪ್ಪು, ಖೊಬ್ರಿ ಕೊಡುವರು. ನಂತರ ಅವರು ಅವರಿಗೆ ತಿರುಗಿ ಅವರ ಮರಕ್ಕೆ ಬೇವಿನ ತೊಪ್ಪಲು ಸ್ವಲ್ಪ ಜೋಳ ಹಾಕಿ ಕೊಡುವರು. ಬೇವಿನ ತೊಪ್ಪಲು ಹಣೆಯಲ್ಲಿ ಹಾಕುವರು. ಯಾಕೆಂದರೆ ಜೋಳ ಕೆಡುವದಿಲ್ಲ. ಉಪ್ಪು ಜೋಳದ ನುಚ್ಚನ್ನು ನುಚ್ಚಂಬಲಿ ಜನರು ತೆಗೆದುಕೊಂಡು ಹೋಗಿ ತಮ್ಮ ಹೊಲದಲ್ಲಿ ಚರಗ ಚಲ್ಲುವರು. ಹೀಗೆ ಆರು ದಿನಗಳವರೆಗೆ ಬೇರೆ ಬೇರೆ ಓಣಿ ಹಾಗೂ ಬೇರೆ ಬೇರೆ ಮನೆಗಳಿಗೆ ಅಡ್ಡಾಡಿ ಹಾಡುತ್ತಾ ಪೂಜಿಸಿ ಏಳನೆಯ ದಿನಕ್ಕೆ ಅವನ ದಿನವನ್ನು ಮಾಡಿ ಹಬ್ಬ ಆಚರಿಸುತ್ತಾರೆ. ಏಳನೆಯ ದಿವಸ ರಾತ್ರಿ ಹೊಲೇರ ಓಣಿಯಲ್ಲಿ ಇಟ್ಟು ಬರುತ್ತಾರೆ. ನಂತರ ಹೊಲೆಯರು ಪೂಜೆ ಮಾಡಿ ಆ ದೇವರನ್ನು ಎತ್ತಿ ಮಳೆ- ಬೆಳೆಯ ಭವಿಷ್ಯ ಕೇಳುವರು. ಹಾಗೂ ಒನಕೆಯಿಂದ ಕುತ್ತಿಗೆಗೆ ಹೊಡದು ಕೊಲ್ಲುವರು, ರುಂಡವು ಅಂಗಾತ ಬಿದ್ದರೆ ದೇಶಕ್ಕೆ ಸುಖ, ಬೋರಲು ಬಿದ್ದರೆ ದೇಶಕ್ಕೆ ದು:ಖವೆಂದು ಜನರ ಭಾವನೆ. ನಂತರ ಅದನ್ನು ಹಳ್ಳಕ್ಕೆ ಒಯ್ದು ಚೆಲ್ಲುವರು. ಅಲ್ಲಿ ಸತ್ತ ಮೂರು ದಿನಗಳವರೆಗೆ ಜೋಕುಮಾರನು ನರಳುವದರಿಂದ ಅಗಸರು ಮೂರು ದಿನ ಅರಿವೆ ಒಗೆಯಲು ಹೋಗುವದಿಲ್ಲ.

ಆಶಯಗಳು

[ಬದಲಾಯಿಸಿ]

ತಗಣಿ, ಚಿಕ್ಕಾಡು ಆದರೆ ಮೆಣಸಿನಕಾಯಿ ಉಪ್ಪು ಕೊಟ್ಟು ಅವು ನಾಶವಾಗುವಂತೆ ಬೇಡಿಕೊಳ್ಳುವರು. ಆನಂತರ ಅದರಂತೆ ಅವು ಹೋಗುತ್ತವೆ ಎಂಬ ನಂಬಿಕೆ ಇದೆ. ನುಚ್ಚು, ಅಂಬಲಿ ಚರಗಾ ಚಲ್ಲಿದಾಗ ಹೊಲದಲ್ಲಿ ಲಕ್ಷ್ಮಿಯು ಮಗನನ್ನು ಹುಡುಕಲು ಅಡ್ಡಾಡಲು ಹೋಗುವಳು. ಅದರಿಂದ ಬೆಳೆ ಹುಲುಸಾಗಿ ಬರುಬಹುದು ಎಂಬ ಜಾನಪದ ನಂಬಿಕೆ ಇರುತ್ತದೆ. ಅಳ್ಳಂಬಲಿ ಆ ಗಡಿಗೆಗೆ 'ಬೆಚ್ಚು' ಅನ್ನುವರು, ಗಣಪತಿ- ಜೋಕುಮಾರನ ಬಗ್ಗೆ ಸಾಮ್ಯ, ವೈಷಮ್ಯಗಳ ಬಗ್ಗೆ ವಿಚಾರ ಮಾಡಿದರೆ ಗಣಪತಿಯು ಭಾದ್ರಪದ ಚೌತಿಯ ದಿನ ಬಂದು ನವಮಿಗೆ ಹೋಗುವನು. ಆದರೆ ಭಾದ್ರಪದ ಅಷ್ಟಮಿಗೆ ಜೋಕುಮಾರನು ಬಂದು ಪೌರ್ಣಮಿಗೆ ಅಂದರೆ ಆರು ದಿನಕ್ಕೆ ಹೋಗುವನು. ಕೇವಲ ಒಂದು ದಿನ ಮಾತ್ರ ಇವರಿಬ್ಬರ ಭೇಟಿ ಆಗುವದು. ಜೋಕುಮಾರನು ಬಂದರೆ ಗಣಪತಿಯನ್ನು ಒಂದು ಅರಿವೆಯಿಂದ ಮುಚ್ಚಿಬಿಡುವರು. ಅದರ ಬಗ್ಗೆ ಹೇಳುವುದಾದರೆ ಒಂದು ವೇಳೆ ಗಣಪತಿಯು ಜೋಕುಮಾರನನ್ನು ನೋಡಿದರೆ ಅವನ ಹೊಟ್ಟೆಯು ಒಡೆಯುವುದು. 'ಸೊಂಡ್ಯಾ' ಅಂದರೆ ಗಣಪತಿ, ಗಂಡ್ಯಾ ಅಂದರೆ ಜೋಕುಮಾರ. ಲೊಂಡ್ಯಾ ಅಂದರೆ ಅಲಾವಿ ದೇವರು ಇವು ಒಂದೇ ಸಮಯಕ್ಕೆ ಕೂಡುವುದು ಅಪಶಕುನ ಎಂದು ಜಾನಪದರಲ್ಲಿ ಬಲವಾದ ನಂಬಿಕೆ ಇದೆ.

ಪಡೆನುಡಿಗಳು

[ಬದಲಾಯಿಸಿ]

ಜೋಕುಮಾರನಿಗೆ ಹೋಲಿಸಿ ಬಳಸುವ ಜಾನಪದ ಪಡೆನುಡಿಗಳು : ಉತ್ತರ ಕರ್ನಾಟಕದ ಕೆಲವು ಹಳ್ಳಿಗಳಲ್ಲಿ ಹೆಚ್ಚಾಗಿ ಇವೆ.

 1. ಊರಾಗ ಜೋಕುಮಾರನ ಆಗ್ಯಾನ ಜೋಕುಮಾರ
 2. ಗುಳ್ಳವ್ವ - ಜೋಕುಮಾರನ ಸಂಬಂಧ ಕಲ್ಪಿಸಿ ಅಶ್ಲೀಲ ನುಡಿಗಳಿಂದ ಹಾಡುವರು
 3. ಜೋಕುಮಾರನ ಹಾಂಗ ಬೇವಿನ ಎಲಿಯಾಗ ಹೋಗಿ ನೋಡ
 4. ಅಷ್ಟಮಿ ದಿನ ಹುಟ್ಯಾನ ನನ್ನ ಕೋಮರಾ ಜೇಷ್ಠಾದೇವಿ ನಿನ್ನ ಮಗಾ ಜೋಕುಮಾರ
 5. ಏ ಜೋಕುಮಾರಂಗನ ಮೆರಿಬ್ಯಾಡ ಊರಾಗ
 6. ಅಬ್ಬಬ್ಬಾ ಇವನ ಏನ ಡೌಲು - ಜೋಕುಮಾರ ಆಗ್ಯಾನ ಜೋಕುಮಾರ
 7. ಹೆಡಕು ಮುರಿಸಿಕೊಂಡೀ ಹೆಡಕು ಆ ಜೋಕುಮಾರನ ಹಾಂಗ

ಈ ತರಹದ ಅನೇಕ ಪಡೆನುಡಿಗಳು ಉತ್ತರ ಕರ್ನಾಟಕದ ಬಹುತೇಕ ಜೋಕುಮಾರ ನಿದ್ದ ಹಳ್ಳಿಗಳಲ್ಲಿ ಜಾನಪದೀಯರ ಬಾಯಿಯಿಂದ ಪ್ರಸಂಗಾನುಸಾರ ಹೊರಗೆ ಹೊಮ್ಮುವದರಿಂದ ಈ ಪಡೆನುಡಿಗಳು ಜೋಕುಮಾರನೊಬ್ಬ ಫಟಿಂಗ, ಉಡಾಳ ದೇವತೆಯೆಂದು ಅನ್ನುವರು.

ವಿದ್ವಾಂಸರ ಅಭಿಪ್ರಾಯಗಳು

[ಬದಲಾಯಿಸಿ]

ಡಾ. ಬೆಟೆಗೇರಿ ಕೃಷ್ಣಶರ್ಮರ ಅಭಿಪ್ರಾಯದ ಪ್ರಕಾರ, ಸೋಮಾರಿ ಎಂಬ ಪದದ ಅರ್ಥವು, ಪುಂಡ, ಪೋಲಿ. ಇದು ಸೋಮಾರಿ ಹೋಗಿ ಯೋಗಕುಮಾರ ಎಂಬುದರ ಅಪಭ್ರಂಶ ಲೋಪವೇ ಜೋಕುಮಾರ ಎಂದಾಗಿರವಬಹುದೆಂದು ವಿದ್ವಾಂಸರ ಊಹೆ, ಆದರೆ ಜೋಕುಮಾರನಿಗೆ ಸಂಬಂಧಿಸಿದ ಲೋಕ ವಾರ್ತೆಗಳಲ್ಲಿಯೂ ಜಾನಪದ ಹಾಡುಗಳಲ್ಲಿಯೂ ಯೋಗ ಮತ್ತು ಜೋಕುಮಾರಿಗೆ ಸಂಬಂಧವಿದ್ದಂತೆ ಎಲ್ಲಿಯೂ ಪ್ರಮಾಣಗಳಿಲ್ಲವೆಂದು ದಿ. ಡಾ. ಬೆಟಗೇರಿ ಕೃಷ್ಣಶರ್ಮರು ಅಭಿಪ್ರಾಯ ಪಡುತ್ತಾರೆ.

ಡಾ. ಶಿವರಾಮ ಕಾರಂತ ಅವರ ಅಭಿಪ್ರಾಯದ ಪ್ರಕಾರ, ಜೋಕುಮಾರ ಕುದುರೆಯನ್ನೇರಿ ಸಂಚರಿಸಿ ಆಕಾಶದಿಂದ ಅಂತಹ ಮಳೆಯನ್ನು ತರಿಸುತ್ತಾನೆ. ಅವರ ತಂದೆಯು ಅದಕ್ಕಾಗಿಯೇ ಭೂಮಿಯಲ್ಲಿಯೇ ಉಳಿಯಬೇಕಾಯಿತು. ಕೊನೆಯ ಮಳೆಯೇ ಉತ್ತರೆಯ ಮಳೆ. ೧) ಜೇಷ್ಠ - ಜನನಕ್ಕೆ ಕಾರಣವಾದ ಮಳೆಯಾದರೆ, ಮುಂದೆ ಬೆಳೆಗೆ ೨) ಮೂಲಾ, ೩) ಪೂರ್ವಾಷಾಢಾ, ೪) ಉತ್ತರಾಷಾಢಾ ೫) ಶ್ರಾವಣ ೬) ಪೂರ್ವಭಾದ್ರ ೭) ಉತ್ತರ ಭಾದ್ರ ಹೀಗೆ ಏಳು ನಕ್ಷತ್ರಗಳ ಕಾಲದ ತನಕವೂ ಮಳೆ ಬೀಳಬೇಕಾಗುತ್ತದೆ. ಜೇಷ್ಠದಲ್ಲಿ ಹುಟ್ಟಿದ ಆ ಕೂಸಿಗೆ ಮುಂದೆ ೭೧೪ ದಿನಗಳ ಆಯುಷ್ಯ ಕಥೆಯು ಏಳು ದಿನಗಳೆಂಬುದು ಮಳೆಯು ಏಳು ನಕ್ಷತ್ರಗಳ ಅವಧಿ. ದೀನವೃಷ್ಟಿ ಎಂಬ ಪದಕ್ಕೆ - ನಕ್ಷತ್ರದೃಷ್ಟಿ ಎಂಬ ಪದವಿದೆ. ಹಾಗಿದ್ದರೆ ದಿನ ಎಂಬುದಕ್ಕೆ ನಕ್ಷತ್ರ ಎಂಬ ವಿಚಾರವು ಸ್ಪಷ್ಟವಾಗುತ್ತದೆ.

ಡಾ. ಎಂ. ಚಿದಾನಂದಮೂರ್ತಿಯವರ ಅಭಿಪ್ರಾಯದ ಪ್ರಕಾರ, ಶಿವ - ಪಾರ್ವತಿಯರಿಗೆ ಗಣಪತಿಯು ಹೇಗೆ ಮಗನೋ ಹಾಗೆ ಜೋಕ ಹಾಗೂ ಎಳೆ ಗೌರಿಯರಿಗೆ ಜೋಕುಮಾರನೂ ಒಬ್ಬ ಮಗನು. ಅವನು ಜನತೆಯ ಆರಾಧ್ಯ ದೇವತೆಯೆಂತಲೂ ಅವರ ಹೆಸರಿನಿಂದ ಹಬ್ಬ ಹುಣ್ಣಿಮೆಗಳು ಬಳಕೆಯಲ್ಲಿ ಬಂದಿರಬಹುದೆಂದೂ ಊಹಿಸುತ್ತಾರೆ. ಜೋಕುಮಾರನು ಹುಟ್ಟಿದ್ದು ಭಾದ್ರಪದ ಶುದ್ದ ಅಷ್ಡಮಿಯ ದಿನ ಎಂಬುದಕ್ಕೆ ಮೈಸೂರು ಪ್ರಾಚ್ಯಕೋಶಾಗಾರದ ಕೆ-೩೨೦ ಸಂಖ್ಯೆಯ ಹಸ್ತಪ್ರತಿ ಪತ್ರ ೫೨ ಆಧಾರವಾಗಿದೆ. ಇದರ ಪ್ರಕಾರ

ಆದಿಮೂರುತಿ ಗುರುವೆ ಆವ ಜನ

ನಾದ ದಿನವನು ಪೇಲು ಯಂದೊಡೆ

ಭಾದ್ರಪದ ಶುದ್ಧದಲಿ ದೇವಿಯ ಅಷ್ಡಮಿಯ ಧಾರಾ |

ಭೇದವಿಲ್ಲದೆ ಸರ್ವಲೋಕವು |

ಆದಲಿಸಿ ಕಟ್ಟೀರ ಬಳಿಕಲಿ |

ಆ ದಿವಸವೇ ಹುಟ್ಟಿ ನಡೆದನು ಭೂಪಕೇಳಂದಾ|| ಈ ಪ್ರಕಾರ ಅವನ ಹುಟ್ಟಿನ ಬಗ್ಗೆ ತಮ್ಮ ಅಭಿಪ್ರಾಯವನ್ನು ಈ ಆಧಾರದಿಂದ ವ್ಯಕ್ತಪಡಿಸಿದ್ದಾರೆ.

ಉಪಸಂಹಾರ

[ಬದಲಾಯಿಸಿ]

ಜೋಕುಮಾರನ ಹಾಡುಗಳಲ್ಲಿ ಏಳು ದಿನದ ಅವನ ಜೀವನದಲ್ಲಿ ಅವನ ಜನನ, ಬಾಲ್ಯ ಕೌಮಾರ್ಯ, ಯೌವ್ವನ, ಮದುವೆ. ನಾವು ಎಲ್ಲವನ್ನು ಸೇರಿಸಿ, ಆಡಿಸಿ, ಏಳು ದಿನ ಮೆರೆಸುವ, ಇಂದಿಗೂ ಜೀವಂತವಿರುವ ಜೋಕುಮಾರ ಮಳೆಯ ದೇವರು. ಜನಪದರಲ್ಲಿ ಇವನು ಗಣಪತಿಯ ಸಹೋದರನು. ತಾಯಿ ಪಾರ್ವತಿ ಗಣಪತಿಯ ಕಥೆಯಂತೆ ಇವನ ಕಥೆಯನ್ನು ಸಹ ಕಲ್ಪಿಸಿದ್ದಾರೆ. ಅಂದರೆ ಪಾರ್ವತಿ ಇವನನ್ನು ಮಣ್ಣಿನ ಗೊಂಬೆ ಮಾಡಿ ಜೀವ ತುಂಬಿ ಸ್ನಾನ ಮಾಡುವಾಗ ಬಾಗಿಲಿಗೆ ಕಾಯಲು ನಿಲ್ಲಿಸುವಳು. ಶಿವನು ಬಂದಾಗ ಅವನು ಹೆದರಿ ಓಡಿ ಹೋಗಿ ಜಳಕದ ಮನೆಯಲ್ಲಿದ್ದ ತಾಯಿಯನ್ನೇ ಹಿಡಿದುಕೊಂಡನು. ಆಗ ಅವಳು ಅವನ ಅಲ್ಪತ್ವಕ್ಕೆ ಸಿಟ್ಟಾಗಿ ಏಳು ದಿನಗಳ ಅಲ್ಪ ಜೀವನವನ್ನು ನೀಡಿದಳು. ಅವಳ ಕೋಪದ ಉಗ್ರತೆಗೆ ಜೋಕುಮಾರನು ಬೀದಿ ಪಾಲಾಗಿ ಓಡಿ ಹೋಗಿ ಕೊನೆಗೂ ಒಬ್ಬ ಅಗಸರ ಬಟ್ಟೆಯಲ್ಲಿ ಆಶ್ರಯ ಪಡೆದನು. ಪಾರ್ವತಿಯ ಶಾಪದ ತೀಕ್ಷಣತೆಗೆ ಹೋಲಿಸಿದಂತೆ ಅಗಸನ ಬಟ್ಟೆಯೆ ಅವನಿಗೆ ತಂಪು ಅನಿಸಿರಬೇಕು. ಹೀಗೆ ಎದ್ದು ಬಿದ್ದು ಓಡಿದ ಜೋಕುಮಾರನು ಹೊಳೆ ಬಿದ್ದು ಬೆಸ್ತರಿಗೆ ದೊರೆಕಿದನು. ಅವರು ಇವನನ್ನು ಕರೆದು ಪ್ರೀತಿಸಿ ಸಲಹಿ ಸಾಕಿದರು. ಅವನನ್ನೇ ಸೇವಕರೆಂದು ಬಗೆದು ಜೋಕುಮಾರನ ಭಕ್ತರಾದರು. ಸಂಬಧಿಗಳಾದರು, ಗಂಗಾಮತರಾದರು.

ಉಲ್ಲೇಖ

[ಬದಲಾಯಿಸಿ]
 1. ಡಾ. ಎಸ್. ಎಂ ವೃಷಭೇಂದ್ರ ಸ್ವಾಮಿ, ಜಾನಪದ ಸಾಹಿತ್ಯ ದರ್ಶನ, ಪುಟ: ೯೫-೧೧೬.
"https://kn.wikipedia.org/w/index.php?title=ಜೋಕುಮಾರ&oldid=1049348" ಇಂದ ಪಡೆಯಲ್ಪಟ್ಟಿದೆ