ಜೋಗುಳ

ವಿಕಿಪೀಡಿಯ ಇಂದ
Jump to navigation Jump to search

ಜೋಗುಳ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಜೋ ಜೋ ಎಂಬ ಪಲ್ಲವಿಯೊಡನೆ ತೂಗುತ್ತಾ ಹಾಡುವ ಹಾಡು. ಜನಪದರ ಪ್ರತಿಯೊಂದು ನಡವಳಿಕೆ ಜೀವನ ಕ್ರಮಗಳು ಅವರ ಹಾಡುಗಳಲ್ಲಿ ದಾಖಲಾಗಿವೆ. ಮಕ್ಕಳನ್ನು ಮಲಗಿಸುವ ಕ್ರಿಯೆ ಭಾವನಾ ತ್ಮಕವಾದುದು, ನವಿರಾದುದು. ಏಕೆಂದರೆ ಮಗುವಿನ ಪರಿಕಲ್ಪನೆಯೆ ಸೂಕ್ಷ್ಮ ಸ್ವರೂಪದ್ದು. ತಾಯಿ ತನ್ನ ಮಗುವನ್ನು ಅಕ್ಕರೆಯಿಂದ ಮಲಗಿಸುವ ಕ್ರಮಕ್ಕೆ ಜೋಗುಳ, ಲಾಲಿಪದ, ದೂರಿ ಹಾಡು, ತೊಟ್ಟೀಲಹಾಡುಗಳೆಂದು ಕರೆಯುತ್ತಾರೆ. ತಾಯಿ ಮಗುವನ್ನು ತೋಳಿನ ಮೇಲೆ ,ಹಾಸಿಗೆ ಮೇಲೆ ಇಲ್ಲವೆ ತೊಟ್ಟಿಲಲ್ಲಿ ಮಲಗಿಸಿ ಮೆದುವಾಗಿ ತೂಗುತ್ತಾ ಹೇಳುವ ಒಂದು ಆತ್ಮೀಯ ಪ್ರಕಾರವಾಗಿದೆ. ಜೋಗುಳದ ಹಾಡಿನಲ್ಲಿ ತೊಟ್ಟಿಲನ್ನು ಕಾಯುವುದಕ್ಕಾಗಿ ಸಂತರು, ದೇವರು, ದೇವತೆಗಳನ್ನೂ ಆಹ್ವಾನಿಸುವ ಪದ್ದತಿ ಪ್ರಪಂಚದ ಕೆಲವು ಭಾಗಗಳಲ್ಲಿದೆ. ಜೋಗುಳವೆಂದರೆ ಒಂದರ್ಥದಲ್ಲಿ ಮಗುವಿನ ಹಿತಕ್ಕಾಗಿ ತಾಯಿ ಪ್ರಾರ್ಥಿಸಿ ಹಾಡುವ ಪ್ರಾರ್ಥನಾ ಗೀತೆಗಳಾಗಿವೆ.

ಜೋಗುಳದಲ್ಲಿನ ಉಪಮೆ/ಜೋಗುಳದ ಹಾಡುಗಳು[ಬದಲಾಯಿಸಿ]

ಜೋ ಜೋ ಮುದ್ದಿನ ಪುಟಾಣಿ ಕಂದ
ಜೋ ಜೋ ಲಲ್ಲೆಯ ಮಾತಿನ ಅಂದ
ಜೋ ಜೋ ಗೆಜ್ಜೆಯ ಝಣಝಣ ಚಂದ
ಜೋ ಜೋ ತಾರಾಕುವರಿ ಆನಂದ||ಜೋ ಜೋ||

೧.ಅಳುವ ಕಂದನ ತುಟಿಯು ಹವಳದ ಕುಡಿಯಂಗೆ
ಕುಡಿ ಹುಬ್ಬು ಬೆವಿನೆಸಳಂಗ/ಕಣ್ಣೋಟ
ಶಿವನ ಕೈಯಲಗು ಹೊಳೆದಂಗ

೨.ಕೂಸೆಲ್ಲ ಕುಂದಣ ನೆತ್ತೆಲ್ಲ ಜಾವೂಳ
ಕಟ್ಟಿ ಕೆಳಗಾಡಿ ಬೆವತಾನ/ನನ ಬಾಲ
ಹೊಸ ಮುತ್ತಿನ ದೃಷ್ಟಿ ತಗದೇನ

೩.ಹಸರಂಗಿ ತೊಡಸಿದ ಹಾಲ್ಗಡಗ ಇಡಸಿದ
ಹಳ್ಳಕ್ಕೆ ನೀನು ಬರಬೇಡ /ನನ ಕಂದಯ್ಯ
ಬೆಳ್ಳಕ್ಕಿ ಹಿಂಡು ಬೆದರ್ಯಾವೆ

೪.ಬಾಳಿಹಣ್ಣಿನ ಮಾಟ ಬಾದಾಮಿ ಎಲಿದೋಟ
ಬಾಗಿಲಾಗಾಡು ಮಗನಾಟ/ಕಲಕೇರಿ
ತೇರಿನ ಮಾಟ ಬಲುಮಾಟ

೫.ಕಂದವ್ವ ಅತ್ತರ ತಂದಿದ ಹೊರಿಯಾಕ
ಚಂದಿರನ ನೋಡೊ ನನ ಬಾಲ/ತವರಿನ
ಅಂದಾಲ ನೋಡೊ ಅರಗಿಳಿಯೆ
ಜೋಗುಳದ ಹಾಡುಗಳು[ಬದಲಾಯಿಸಿ]

೧.ಜೋಜೋ ಕಂದ ಜೋಪುರ ಮಾಳಂದ
ನಾರಿಯ ಕಂದ ರಾಮ ಗೋವಿಂದ ಜೋಜೋ
ಜೋಜೋ ಎನ್ನಯ್ಯನಿಗೆ
ಜೋಜೋ ಚಿನ್ನಯ್ಯನಿಗೆ
ಕಲ್ಯಾಣಿ ಪಟ್ಟಣದಲ್ಲಿರುವ
ರುದ್ರಕುಮಾರನಿಗೆ ಜೋಜೋ

೨.ತೊಟ್ಟೀಲದಾಗೋಂದು ತೊಳದ ಮುತ್ತಿನ ಕಂಡೆ
ಹೊಟ್ಟಿ ಮ್ಯಾಲಾಗಿ ಮಲಗ್ಯಾನ/ಕಂದೈಗ
ಮುತ್ತಿನ ದೃಷ್ಠಿ ತೆಗೆದೇನ

೩.ಜೋಗುಳ ಹಾಡಿದರ ಆಗಳೇ ಕೇಳ್ಯಾನ
ಹಾಲ ಹಂಬಲ ಮರತಾನ/ಕಂದೈಗ
ಜೋಗುಳದಾಗ ಅತಿಮುದ್ದು

೪.ತೂಗು ತೊಟ್ಟಿಲಿಗೊಂದು ಪಾಗು ಪಟ್ಟೆಯ ಹಾಸಿ
ಮಾಗಾಯಿ ಮಗನ ಮಲಗಿಸಿ/ಅವರಮ್ಮ
ಜೋಗುಳ ಹಾಡಿ ಹಿಗ್ಯಾಳೆ

೫.ಅತ್ತಿಯ ಮರಕೆ ಹತ್ತೀತೊ ಗುಮ್ಮ
ಹತ್ತೆಂಟು ಹಣ್ಣ ಮೆದ್ದಿತೊ ಗುಮ್ಮ
ಗುಮ್ಮ ಬತ್ತದೆ ಕಂದ ಸುಮ್ಮನೆ ಮಲಗು ಜೋಜೋ

೬.ದೂರೀ ದೂರೀ ದೂರೀ ಆಡೋ
ಕಲ್ಲ ಮೇಲೆ ದೂರೀ ದೂರೀ
ಅಕ್ಕತಂಗೇರು ದೂರೀ ದೂರೀ
ಆಡಿ ಬಂದವರೆ ದೂರೀ ದೂರೀ
ತಾಯಿ ಮಕ್ಕಳು ದೂರೀ ದೂರೀ
ನೋಡುಕ್ ಬಂದವರೆ ದೂರೀ ದೂರೀ

೭.ಹಸು ಮಕ್ಕಳಿಲ್ಲದೆ ಹಸದವೆ ನಮ್ಮಂಗಳ
ಹಸುದೀ ಬಾಲವ್ವೀ ಬರುವಾಗೇ/ನಮ್ಮಂಗಳ
ಗೊಂಬೆ ಚಿನುದಂತೆ ಹೊಳೆವದೆ.

ಪರಿಸಮಾಪ್ತಿ[ಬದಲಾಯಿಸಿ]

ಜೋಗುಳದ ಹಾಡಿಗೆ ಸಂಗೀತವೇ ಬೇಕಿಲ್ಲ. ಹಾಡುಗಾರರ ಪರಿಸರ ,ಕಲ್ಪನೆಗಳಿಗನುಗುಣವಾಗಿ ಹಾಡು ಬೆಳೆಯುತ್ತಾ ಸಾಗುತ್ತದೆ. ಯಾವುದೇ ರೀತಿಯ ಹಾಡನ್ನು ಜೋಗುಳದಂತೆ ಹಾಡಬಹುದಾಗಿದೆ. ಏಕೆಂದರೆ ಜೋಗುಳದ ಹಾಡು ಬಹಳ ಕಾಲ ಮಗುವಿನ ಮನದಲ್ಲಿ ಉಳಿಯುತ್ತದೆ. ಜೋಗುಳದಲ್ಲಿರುವ ಮತ್ತಿತರ ಸೊಲ್ಲುಗಳೆಂದರೆ-ಲೂ..ಲೂ..ಲಲ್ಲೆ..ಲಲ್ಲೆ ,ದೂರೀ ದೂರೀ ,ಜೋ ಜೋ ಜೋ ಜೋ ,ಬೊ ಬೊ, ಡೂ ಡೂ ಇತ್ಯಾದಿ. ಎಲ್ಲಿಯವರೆಗೆ ಮಕ್ಕಳು ಅಳುತ್ತಾರೋ, ಅಲ್ಲಿಯವರೆಗೆ ತಾಯಂದಿರ ದನಿ ಜೋಗುಳ ರೂಪದಲ್ಲಿ ಅವನ್ನು ಸಮಾಧಾನಗೊಳಿಸುತ್ತಾ, ಅಂಥದನಿ, ಪದಗಳು ಒಬ್ಬರಿಂದೊಬ್ಬರಿಗೆ ಮೌಖಿಕವಾಗಿ ವರ್ಗಾಯಿತವಾಗುತ್ತಾ ಇನ್ನು ಅಸ್ತಿತ್ವದಲ್ಲಿ ಉಳಿದಿವೆ.

ಗ್ರಂಥ ನೆರವು[ಬದಲಾಯಿಸಿ]

ಕನ್ನಡ ಜಾನಪದ ವಿಶ್ವಕೋಶ ಸಂಪುಟ-೧

ಉಲ್ಲೇಖ[ಬದಲಾಯಿಸಿ]

[೧] [೨] [೩] [೪] [೫] [೬]

  1. http://kanaja.in/archives/56584
  2. https://iynandaprabhu.wordpress.com/tag/%E0%B2%9C%E0%B3%8B%E0%B2%97%E0%B3%81%E0%B2%B3/
  3. http://oppanna.com/lekhana/artikaje-mava/jogula-koogeda-magalu
  4. http://sampada.net/%E0%B2%AC%E0%B3%8D%E0%B2%B2%E0%B2%BE%E0%B2%97%E0%B3%8D-%E0%B2%B5%E0%B2%B0%E0%B3%8D%E0%B2%97%E0%B2%97%E0%B2%B3%E0%B3%81/2201
  5. http://kannada.oneindia.com/column/triveni/2006/080306lullaby.html
  6. http://baalyada-ata.blogspot.in/2010/02/blog-post_28.html
"https://kn.wikipedia.org/w/index.php?title=ಜೋಗುಳ&oldid=684801" ಇಂದ ಪಡೆಯಲ್ಪಟ್ಟಿದೆ