ವಿಷಯಕ್ಕೆ ಹೋಗು

ಗಂಟು (ಸಸ್ಯಶಾಸ್ತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಲೆ ಗಂಟು

ಗಂಟು ಎಂದರೆ ಕೆಲವು ಬಗೆಯ ಪರಾವಲಂಬಿ ಜೀವಿಗಳಾದ ಬ್ಯಾಕ್ಟೀರಿಯ, ಶಿಲೀಂಧ್ರ ಮತ್ತು ಕೀಟಗಳು ಗಿಡಗಳ ಮೇಲೆ ವಾಸ ಮಾಡಲು ತೊಡಗಿದಾಗ ಉಂಟಾಗುವ ರಚನೆ (ಗಾಲ್). ಗಂಟುಗಳು ಸಸ್ಯ ಅಂಗಾಂಶಗಳ ಅಪಸಾಮಾನ್ಯ ಬಾಹ್ಯವೃದ್ಧಿಗಳು.[] ಗಿಡಗಳಿಗೆ ಬೇರೆ ಕಾರಣಗಳಿಂದ ಗಾಯಗಳಾದಾಗಲೂ ಗಂಟುಗಳು ಉಂಟಾಗುತ್ತವೆ. ಪರಾವಲಂಬಿ ಜೀವಿಯು ಗಿಡವನ್ನು ಹೊಕ್ಕಾಗ ಜೀವಿಯಿಂದ ಒಂದು ವಿಧವಾದ ದ್ರವ ಸ್ರವಿಸಿ ಸುತ್ತಮುತ್ತಲಿನ ಜೀವಕೋಶಗಳು ವಿಭಜನೆ ಹೊಂದುವಂತೆಯೂ ಹಿಗ್ಗುವಂತೆಯೂ ಮಾಡಿ ಗಂಟುಗಳ ಉದ್ಭವಕ್ಕೆ ಕಾರಣವಾಗುತ್ತದೆ.

ಗಂಟುಗಳ ರೂಪಗಳ ಮೇಲೆ ಪ್ರಭಾವ ಬೀರುವ ಅಂಶಗಳಲ್ಲಿ ಸಸ್ಯದ ಪ್ರಭೇದಗಳು, ಅಂಗಾಂಶದ ಬಗೆ, ಗಂಟುಗಳನ್ನು ಉಂಟುಮಾಡುವ ಕಾರಕಗಳು ಮತ್ತು ಪಾರಿಸರಿಕ ಪರಿಸ್ಥಿತಿಗಳು ಸೇರಿವೆ.[][][][][]

ಗಂಟುಗಳು ಕಾಂಡ, ಬೇರು ಇಲ್ಲವೆ ಎಲೆಗಳಲ್ಲಿ ಉಂಟಾಗಬಹುದು. ಕೆಲವು ಸಸ್ಯಗಳಲ್ಲಿ ಹೂಗಳೂ ಕಾಯಿಗಳೂ ಗಂಟುಗಳಾಗಿ ಮಾರ್ಪಾಡಾಗುವುದುಂಟು. ಸಸ್ಯಕೋಶಗಳ ಜೋಡಣೆ ಮತ್ತು ಪರಾವಲಂಬಿಗಳಿಂದ ಸ್ರವಿಸುವ ರಸದ ಉದ್ವೇಗಕಾರಕ ಗುಣಗಳನ್ನವಲಂಬಿಸಿ ಗಂಟುಗಳು ತಮ್ಮ ಗಾತ್ರ, ಆಕಾರ ಮತ್ತು ರಚನೆಗಳಲ್ಲಿ ವ್ಯತ್ಯಾಸವನ್ನು ಪ್ರದರ್ಶಿಸುತ್ತವೆ. ಒಂದು ಜೀವಿ ಮತ್ತೊಂದು ಜೀವಿಯ ಕೋಶದ ಮೇಲೆ ತನ್ನ ಪ್ರಭಾವವನ್ನು ಬೀರಿದಾಗ, ಇವೆರಡರ ಜೀವಕೋಶಗಳಿಗೂ ಉಂಟಾಗುವ ಘರ್ಷಣೆ ಮತ್ತು ಕೋಶಗಳಲ್ಲಿನ ವಿಭಿನ್ನ ಅಂಶಗಳಲ್ಲಿನ ಮಿಲನದಿಂದ, ಕೋಶಗಳು ಚೋದನೆಗೊಂಡು ಅತಿಯಾಗಿ ಬೆಳೆಯುತ್ತವೆ.

ಕೀಟಗಂಟುಗಳು

[ಬದಲಾಯಿಸಿ]

ಗಂಟುಗಳಲ್ಲಿ ಬೇರಿನ ಗ್ರಂಥಿ, ಕಾಂಡದ ಗ್ರಂಥಿ, ಎಲೆಗಳ ಗ್ರಂಥಿಗಳೂ ಸೇರಿರಬಹುದು. ಕೆಲವು ಕೀಟಗಳು ಮೊಟ್ಟೆಗಳನ್ನು ಎಲೆಗಳ ಮೇಲೆ ಇಡುತ್ತವೆ. ಆಗ ಇವು ಒಂದು ವಿಧವಾದ ಪ್ರಚೋದಕ ದ್ರವವನ್ನು ಸ್ರವಿಸುತ್ತವೆ. ಈ ದ್ರವದ ಪ್ರಭಾವದಿಂದ ಎಲೆಯ ಒಳಗಿನ ಜೀವಕೋಶಗಳು ಮೊಟ್ಟೆಗಳ ಸುತ್ತಲೂ ಬೆಳೆದು ಗಂಟುಗಳಾಗುತ್ತವೆ. ಇಂಥ ಗಂಟುಗಳಿಗೆ ಕೀಟಗಂಟುಗಳು ಎಂದು ಹೆಸರು. ಹೈಮೆನಾಪ್ಟರ, ಡಿಪ್ಟರ, ಹೆಮಿಪ್ಟರ, ಹೋಮಾಪ್ಟರ, ಕೋಲಿಯಾಪ್ಟರ ಮುಂತಾದ ಗುಂಪುಗಳ ಕೀಟಗಳು ಗಂಟುಗಳನ್ನು ಉತ್ಪತ್ತಿ ಮಾಡುವ ಕೀಟಗಳಲ್ಲಿ ಮುಖ್ಯವಾದುವು.

ಅಕೇಸಿಯ ಲ್ಯೂಕೋಫ್ಲಿಯ (ಬಿಳಿಗೊಬ್ಬಳಿ) ಆರಿಕ ಕ್ಯಾಟಿಚು (ಅಡಿಕೆ), ಸಿನಮೋಮಮ್ ಜೀ಼ಲ್ಯಾನಿಕಮ್ (ದಾಲ್ಚಿನ್ನಿ), ಫ್ರಾಕ್ಸಿನಸ್ ಫ್ಲಾರಿಬಂಡ, ಪೊಂಗೇಮಿಯ ಗ್ಲಾಬ್ರ (ಹೊಂಗೆ), ಪ್ರೊಸಾಪಿಸ್ ಸ್ಪೈಸಿಜರ (ದಿವಿ), ಟರ್ಮಿನೇಲಿಯ ಚೆಬಲ (ಅಳಲೆ), ಗಾರುಗ ಪಿನೇಟ, ಪಿಸ್ತಾಚಿಯ ವೇರ (ಪಿಸ್ತಾ), ಟಮಾರಿಕ್ಸ್, ಕ್ವರ್ಕಸ್ (ಓಕ್) ಮುಂತಾದ ಮರಗಳಲ್ಲಿ ಕೀಟಗಂಟುಗಳನ್ನು ಕಾಣಬಹುದು.

ಉಪಯೋಗಗಳು

[ಬದಲಾಯಿಸಿ]

ಕೀಟಗಂಟುಗಳಿಂದ ಅನೇಕ ಉಪಯೋಗಗಳಿವೆ. ಚರ್ಮದ ಕೈಗಾರಿಕೆ, ಬಣ್ಣದ ಕೈಗಾರಿಕೆಗಳಲ್ಲಿ ಇವನ್ನು ವಿಶೇಷವಾಗಿ ಉಪಯೋಗಿಸುತ್ತಾರೆ. ಕೆಲವು ಗಂಟುಗಳನ್ನು ಔಷಧಿ ತಯಾರಿಕೆಗೂ ಉಪಯೋಗಿಸುತ್ತಾರೆ. ಪಿಸ್ತಾ ಗಿಡದ ಗಂಟುಗಳಿಂದ ಕೆಮ್ಮು, ಅಸ್ತಮ ಮುಂತಾದ ರೋಗಗಳಿಗೆ ಕಷಾಯವನ್ನು ಮಾಡುತ್ತಾರೆ. ಸರ್ಪದ ಮತ್ತು ಚೇಳಿನ ವಿಷಾಪಹಾರಿಯಾಗಿಯೂ ಇದನ್ನು ಬಳಸುವುದುಂಟು. ಅನೇಕ ರಾಸಾಯನಿಕಗಳನ್ನೂ ಇವುಗಳಿಂದ ತಯಾರಿಸಬಹುದು.

ಬೇರು ಗಂಟುಗಳು

[ಬದಲಾಯಿಸಿ]

ಬೇರಿನಗ್ರಂಥಿಗಳೂ ಒಂದು ಬಗೆಯ ಗಂಟುಗಳೇ. ಮಣ್ಣಿನಲ್ಲಿ ವಾಸಿಸುವ ಬ್ಯಾಕ್ಟೀರಿಯ ಮತ್ತಿತರ ಸೂಕ್ಷ್ಮ ಕ್ರಿಮಿಗಳು ಬೇರಿನಲ್ಲಿ ಸೇರಿ ಗಂಟುಗಳಾಗುತ್ತವೆ. ಅವರೆ ಜಾತಿಯ ಗಿಡಗಳಲ್ಲಿ ಗಂಟುಗಳು ಹೇರಳವಾಗಿರುತ್ತವೆ. ಇವುಗಳ ಆಕಾರ ವೈವಿಧ್ಯಮಯ. ಇವುಗಳಲ್ಲಿ ರೈಜೋ಼ಬಿಯಂ ಎಂಬ ಬ್ಯಾಕ್ಟೀರಿಯ ಸೇರಿಕೊಂಡು ನೈಟ್ರೋಜನ್ ಸ್ಥಿರೀಕರಣದಲ್ಲಿ ಸಹಾಯ ಮಾಡಿ ಮಣ್ಣನ್ನು ಫಲವತ್ತಾಗಿ ಮಾಡುತ್ತವೆ. ಸೊಲನೇಸೀ (ಬದನೆ ಕುಟುಂಬ) ಮತ್ತು ಕುಕರ್ಬಿಟೇಸೀ ಕುಟುಂಬಗಳ (ಕುಂಬಳ ಕುಟುಂಬ) ಸಸ್ಯಗಳಲ್ಲಿ ನೆಮಟೋಡ ಪ್ರಾಣಿಗಳಿಂದ ಕೆಲವು ಬೇರಿನ ಗಂಟುಗಳು ಉಂಟಾಗುತ್ತವೆ. ಇವು ಸಣ್ಣ ಸಣ್ಣ ಗುಳ್ಳೆಗಳಂತೆ ಕಂಡುಬರುತ್ತವೆ. ಕ್ರೂಸಿಫೇರಿ ಕುಟುಂಬದ (ಮೂಲಂಗಿ ಕುಟುಂಬ) ಸಸ್ಯಗಳ ಬೇರುಗಳಲ್ಲಿ ಕ್ಲಬ್‍ರೂಟ್ ಎಂಬ ರೋಗದ ಫಲವಾಗಿ ಬೇರುಗಳಲ್ಲಿ ಗಂಟುಗಳಾಗಿರುತ್ತವೆ.

ಕಾಂಡ ಮತ್ತು ಎಲೆ ಗಂಟುಗಳು

[ಬದಲಾಯಿಸಿ]

ಕಾಂಡ ಮತ್ತು ಎಲೆ ಗಂಟುಗಳಲ್ಲಿ ಎರಡು ವಿಧ:

  1. ಹಿಸ್ಟಾಯ್ಡ್ ಗಂಟು. ಹಿಸ್ಟಾಯ್ಡ್ ಗಂಟುಗಳು ಸರಳವಾದುವು ಮತ್ತು ಅಂಗಾಂಶಗಳಿಗೆ ಸಂಬಂಧಿಸಿದುವು. ಇವು ಸಿಂಕೈಟ್ರಿಯಂ, ಜಿಮ್ನೊಸ್ಪೊರ್‍ಯಾಂಜಿಯಂ ಮುಂತಾದ ಶಿಲೀಂಧ್ರಗಳಿಂದ ಉಂಟಾಗುತ್ತವೆ. ಈ ಜೀವಿಗಳು ಗಿಡಗಳ ಎಪಿಡರ್ಮಿಸಿನಲ್ಲಿ ಸೇರಿ ಸುತ್ತಮುತ್ತಲಿನ ಕೋಶಗಳನ್ನು ಉದ್ವೇಗಗೊಳಿಸಿ ಬೆಳವಣಿಗೆಯನ್ನುಂಟು ಮಾಡಿ ಗಂಟುಗಳನ್ನುತ್ಪತ್ತಿ ಮಾಡುತ್ತವೆ. ನಿಂಬೆಜಾತಿಯ ಸಸ್ಯಗಳಿಗೆ ಅಂಟುವ ಸ್ಕ್ಯಾಬ್ ರೋಗ ಎಲ್ಸಿನೋ ಎಂಬ ಶಿಲೀಂಧ್ರದಿಂದಾಗುತ್ತದೆ.
  2. ಆರ್ಗನಾಯ್ಡ್ ಗಂಟು. ಆರ್ಗನಾಯ್ಡ್ ಗಂಟುಗಳಲ್ಲಿ ನಿರ್ದಿಷ್ಟವಾದ ಗಂಟಿನ ರೂಪ ಕಾಣುವುದಿಲ್ಲ. ಕಾಂಡ, ಎಲೆ, ಹೂ ಮತ್ತು ಹೂವಿನ ಭಾಗಗಳು ಅನಿರ್ದಿಷ್ಟ ರೀತಿಯಾಗಿ ಬೆಳೆದು ವಿವಿಧಾಕಾರಗಳನ್ನು ತಾಳುತ್ತವೆ. ಪರಾವಲಂಬಿಗಳು ಆಶ್ರಯ ಕೋಶಗಳನ್ನು ಕೊಲ್ಲುವುದಿಲ್ಲ. ಬಾಹ್ಯ ರಚನೆಯನ್ನು ಮಾತ್ರ ಬದಲಾಯಿಸುತ್ತವೆ. ಮೊಟಕಾದ ಕಾಂಡವನ್ನು ನೀಳವಾಗಿಯೂ, ಕವಲೊಡೆಯದ ಕಾಂಡವನ್ನು ವಿಪರೀತವಾಗಿ ಕವಲೊಡೆಯುವಂತೆಯೂ, ಎಲೆಗಳ ಸ್ಥಾನಗಳನ್ನು ಬದಲಾಯಿಸಿ ಅವುಗಳ ಸಮತೆ ಬದಲಾಗುವಂತೆಯೂ ಮಾಡುತ್ತವೆ. ಹೂಗಳಲ್ಲಿನ ದಳಗಳ ಸಂಖ್ಯೆ ಹೆಚ್ಚಾಗುತ್ತದೆ. ಕೇಸರಗಳು ಅಗಲವಾದ ದಳಗಳಾಗುತ್ತವೆ. ಅಂಡಾಶಯವೂ ಮಾರ್ಪಾಡಾಗುತ್ತದೆ. ವೈರಸ್, ಬ್ಯಾಕ್ಟೀರಿಯ, ಆಲ್ಬುಗೊ ಮುಂತಾದ ಜೀವಿಗಳು ಈ ರೀತಿಯ ಬಾಹ್ಯರಚನಾ ವೈಪರೀತ್ಯಗಳನ್ನುಂಟುಮಾಡುತ್ತವೆ. ಮಾಟಗಾತಿಯ ಬರಲು (ವಿಚಸ್ ಬ್ರೂಮ್) ಎಂದು ಕರೆಯಲ್ಪಡುವ ರಚನೆಯೂ ಇದೇ ರೀತಿಯಲ್ಲಿ ಉಂಟಾದುದು. ಇದರಲ್ಲಿ ಕೊಂಬೆಗಳು ಅಧಿಕ ಸಂಖ್ಯೆಯಲ್ಲಿ ಉತ್ಪತ್ತಿಯಾಗಿ ಒಂದರ ಪಕ್ಕದಲ್ಲೊಂದು ಬೆಳೆದು ಪೊರಕೆಯಂತೆ ಕಾಣುತ್ತವೆ. ಟ್ಯಾಫ್ರೈನ ಎಂಬ ಶಿಲೀಂಧ್ರ ಇದಕ್ಕೆ ಕಾರಣ. ಇವು ಅಂಗಗಳಿಗೆ ಸಂಬಂಧಿಸಿದ ಗಂಟುಗಳು.

ಉಪಯೋಗಗಳು

[ಬದಲಾಯಿಸಿ]

ಗಂಟುಗಳಲ್ಲಿ ಅಧಿಕ ಆಹಾರಾಂಶ ಶೇಖರವಾಗಿರುತ್ತದೆ. ಫಾರ‍್ಮೋಸದಲ್ಲಿ ಬೆಳಯುವ ಜೈಜಾನಿಯ ಗಿಡದಲ್ಲಿ ಯುಸ್ಟಿಲ್ಯಾಗೊ ಎಂಬ ಶಿಲೀಂಧ್ರದಿಂದ ಉಂಟಾಗುವ ಗಂಟುಗಳನ್ನು ಆಹಾರವಾಗಿ ಉಪಯೋಗಿಸುತ್ತಾರೆ. ಸಿಡಾರ್ ಆಪಲ್ ಗಂಟಿನಲ್ಲಿ ಪಿಷ್ಟವು ಶೇಖರವಾಗಿರುತ್ತದೆ. ಹಿಮಾಲಯದಲ್ಲಿ ಬೆಳೆಯುವ ಅರ‍್ಟಿಕ ಪಾರ್ವಿಫ್ಲೋರಾ ಎಂಬ ಗಿಡದಲ್ಲಿ ಉಂಟಾಗುವ ಗಂಟುಗಳನ್ನು ಅಲ್ಲಿನ ನಿವಾಸಿಗಳು ತಿನ್ನುವುದುಂಟು.

ಕ್ರೌನ್ ಗಾಲ್ (Crown gall) ಮುಂತಾದ ಗಂಟುಗಳಲ್ಲಿ ಅಧಿಕ ಮೊತ್ತದ ಪ್ರೋಟೀನ್ ಅಂಶವಿರುತ್ತದೆ. ಪಿಷ್ಟ, ಪೆಕ್ಟಿನ್, ಸೆಲ್ಯುಲೋಸ್, ಲಿಗ್ನಿನ್ ಮುಂತಾದ ಪದಾರ್ಥಗಳು ಇತರ ಜೀವಕೋಶಗಳಲ್ಲಿರುವುದಕ್ಕಿಂತಲೂ ಹೆಚ್ಚು ಮೊತ್ತದಲ್ಲಿರುತ್ತದೆ.

ರೂಬಸ್ ಜಾತಿಯ ಗಿಡಗಳಲ್ಲಿ ಹಾಗೂ ಸೇಬು, ಪಿಯರ್, ಪ್ಲಮ್, ಚೆರ‍್ರಿ, ಏಪ್ರಿಕಾಟ್, ಪೀಚ್ ಗಿಡಗಳಲ್ಲಿ ಬ್ಯಾಕ್ಟೀರಿಯ ರೂಬಿ ಎಂಬ ಶಿಲೀಂಧ್ರದಿಂದ ಗಂಟುಗಳಾಗುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. "gall(4)". Merriam-Webster Online Dictionary. Retrieved November 16, 2007. an abnormal outgrowth of plant tissue usually due to insect or mite parasites or fungi and sometimes forming an important source of tannin
  2. Krikorian, A. D. (June 1988). "Plant Galls and Gall Inducers. Jean Meyer , S. Cheskin". The Quarterly Review of Biology. 63 (2): 225–226. doi:10.1086/415876. ISSN 0033-5770.
  3. Barnes, Jeffrey K. (1993-01-01). "Biology of Insect-Induced Galls". Annals of the Entomological Society of America. 86 (1): 122–123. doi:10.1093/aesa/86.1.122. ISSN 1938-2901.
  4. Crespi, Bernard; Worobey, Michael (December 1998). "Comparative Analysis of Gall Morphology in Australian Gall Thrips: The Evolution of Extended Phenotypes". Evolution. 52 (6): 1686–1696. doi:10.1111/j.1558-5646.1998.tb02248.x. ISSN 0014-3820.
  5. Heard, Stephen B.; Buchanan, Corinne K. (October 1998). "Larval Performance and Association Within and Between Two Species of Hackberry Nipple Gall Insects, Pachypsylla spp. (Homoptera: Psyllidae)". The American Midland Naturalist. 140 (2): 351–357. doi:10.1674/0003-0031(1998)140[0351:lpaawa]2.0.co;2. ISSN 0003-0031.
  6. Florentine, S. K.; Raman, A.; Dhileepan, K. (October 2005). "Effects of Gall Induction by Epiblema Strenuana on Gas Exchange, Nutrients, and Energetics in Parthenium Hysterophorus". Biocontrol. 50 (5): 787–801. doi:10.1007/s10526-004-5525-3. hdl:1959.17/64564. ISSN 1386-6141.

ಹೊರಗಿನ ಕೊಂಡಿಗಳು

[ಬದಲಾಯಿಸಿ]



ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: