ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಡಿಪ್ಟರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಡಿಪ್ಟರ - ಕೀಟವರ್ಗದ ಅತ್ಯಂತ ದೊಡ್ಡ ಗಣಗಳಲ್ಲೊಂದು. ನೋಣ, ಸೊಳ್ಳೆ ಮುಂತಾದ ಕೀಟಗಳನ್ನು ಒಳಗೊಂಡಿದೆ. ಈ ಗಣದ ಸದಸ್ಯರು ಹೆಚ್ಚು ಕಡಿಮೆ ಸರ್ವವ್ಯಾಪಿಗಳು. ಇವುಗಳಲ್ಲಿ ಒಂದೇ ಒಂದು ಜೊತೆ ರೆಕ್ಕೆಯುಂಟು. ಇವೇ ಮುಂಭಾಗದ ರೆಕ್ಕೆಗಳು. ಹಿಂಭಾಗದ ರೆಕ್ಕೆಗಳು ಗಾತ್ರದಲ್ಲಿ ಬಲು ಚಿಕ್ಕವಾಗಿದ್ದು ಸಣ್ಣ ಗುಬಟುಗಳಂತಿವೆ. ಇವಕ್ಕೆ ಹಾಲ್ಟಿಯರ್ಸ್ ಎಂದು ಹೆಸರು. ಕೀಟ ಹಾರುತ್ತಿರುವಾದ ಅದರ ಸಮತೋಲನವನ್ನು ಕಾಯ್ದುಕೊಳ್ಳುವುದು ಈ ರಚನೆಗಳ ಕೆಲಸ.

ಈ ಗಣದ ಬಹುಪಾಲು ಕೀಟಗಳು, ಬೇರೆ ಗುಂಪಿನ ಕೀಟಗಳೊಡನೆ ಹೋಲಿಸಿದರೆ ಬಲು ಚಿಕ್ಕ ಗಾತ್ರದವು. ಕೆಲವಂತೂ ತುಂಬ ಸೂಕ್ಷ್ಮಗಾತ್ರವಾಗಿವೆ; ದೇಹ ಮೆತುವಾದುದು. ಇವುಗಳಲ್ಲಿ ಅನೇಕ ಬಗೆಯವಕ್ಕೆ ಆರ್ಥಿಕ ಪ್ರಾಮುಖ್ಯವುಂಟು. ಸೊಳ್ಳೆ, ಕಪ್ಪುನೊಣ, ಕುದುರೆ ನೊಣ, ಮುಂತಾದುವು ರಕ್ತಹೀರುವ ಕೀಟಗಳಾಗಿದ್ದು ಮನುಷ್ಯ ಹಾಗೂ ಪ್ರಾಣಿಗಳ ಪಿಡುಗುಗಳೆನೆಸಿಕೊಂಡಿದ್ದರೆ ಸಾಮಾನ್ಯ ನೊಣ ಮೊದಲಾದುವು ರೋಗವಾಹಕ ಕೀಟಗಳೆಂದು ಪ್ರಸಿದ್ಧವಾಗಿವೆ; ಉದಾಹರಣೆಗೆ ಮಲೇರಿಯ, ಹಳದಿಜ್ವರ, ಆನೆಕಾಲುರೋಗ, ನಿದ್ರಾರೋಗ, ಟೈಫಾಯಿಡ್, ಅತಿಸಾರ ಮುಂತಾದ ರೋಗಗಳು ಈ ಕೀಟಗಳಿಂದ ಹರಡುವುವು. ಹೇಸಿಯನ್ ನೊಣ, ಸೇಬುನೊಣ ಮುಂತಾದವು ಕೃಷಿಬೆಳೆಗಳ ಪೀಡೆಗಳಾಗಿವೆ. ಆದರೆ ಬೇರೆ ಜಾತಿಯ ಕೀಟಪಿಡುಗುಗಳ ಮೇಲೆ ಪರಾವಲಂಬಿಗಳಾಗಿ ಜೀವಿಸುವ ಹಾಗೂ ಅಪಾಯಕಾರಿ ಕಳೆ ಸಸ್ಯಗಳನ್ನು ತಿಂದು ಬದುಕುವ ಉಪಕಾರಿಗಳೂ ಈ ಗುಂಪಿನಲ್ಲಿ ಇಲ್ಲದಿಲ್ಲ.

ಡಿಪ್ಟರ ಗಣದ ಕೀಟಗಳ ಬಾಯಿ ಆಹಾರವನ್ನು ಹೀರುವುದಕ್ಕೆ ಅನುಕೂಲವಾಗಿದೆ. ಅನೇಕ ಕೀಟಗಳು ಆಹಾರವನ್ನು ಚುಚ್ಚುವುದಾದರೆ ಇನ್ನು ಕೆಲವು ಆಹಾರವನ್ನು ಒದ್ದೆಮಾಡಿ, ನೆಕ್ಕುತ್ತವೆ. ಕೆಲವಲ್ಲಿಯಂತೂ ಬಾಯಭಾಗಗಳು ಎಷ್ಟು ಕ್ಷೀಣವಾಗಿವೆಯೆಂದರೆ ಅವು ಯಾವತೆರನ ಕೆಲಸಕ್ಕೂ ಬಾರದಂತಿವೆ.

ಸಂತಾನೋತ್ಪತ್ತಿ ಮತ್ತು ಬೆಳವಣಿಗೆ

[ಬದಲಾಯಿಸಿ]

ಡಿಪ್ಟರ ಕೀಟಗಳು ಲೈಂಗಿಕರೀತಿಯಲ್ಲಿ ಸಂತಾನೋತ್ಪತ್ತಿ ನಡೆಸುವುವು. ಮೊಟ್ಟೆಗಳು ವೈವಿಧ್ಯಪೂರ್ಣ; ಅಸಂಖ್ಯಾತ, ಮನೆ ನೊಣ, ತನ್ನ ಜೀವಿತಕಾಲದಲ್ಲಿ 2000 ಮೊಟ್ಟೆಗಳನ್ನು 75-150 ಗುಂಪುಗಳಲ್ಲಿಡಬಲ್ಲದು. ಹೆಚ್ಚಿನ ಬಗೆಯವು ನೀರು ಮತ್ತು ಕೊಳೆತವಸ್ತುಗಳ ಬಳಿ ಮೊಟ್ಟೆಗಳನ್ನು ಗುಂಪಾಗಿ ಅಥವಾ ಸಾಲಾಗಿ ಇಡುತ್ತವೆ. ಕ್ಯೂಲೆಕ್ಸ್ ಸೊಳ್ಳೆ ಮೊಟ್ಟೆಗಳನ್ನು ಗಟ್ಟಿಸಾಲುಗಳಾಗಿ ಇಡುತ್ತದೆ. ಉಳಿದವು ಮರಿಗಳಿಗೆ ಸಾಕಷ್ಟು ಆಹಾರ ಸಿಕ್ಕುವ ಕಡೆಗಳಲ್ಲೆಲ್ಲ ಬಿಡಿಬಿಡಿಯಾಗಿಡುತ್ತವೆ. ಇನ್ನು ಕೆಲವು ಎಲೆಗಳ ಮೇಲೂ ಇಡುವುದುಂಟು. ಪರೋಪಜೀವಿ ತೆರನಾದ ಕೀಟಗಳು ಆಶ್ರಯ ಕೀಟಗಳೊಳಗೆ ಅಥವಾ ಅವುಗಳ ಮೇಲೆ ಮೊಟ್ಟೆಗಳನ್ನಿಡುತ್ತವೆ. ಕೆಲವು ನೆಮೆಸ್ಟ್ರಿನಿಡ್ ನೊಣಗಳು, ಮರಗಳ ಬಿರುಕುಗಳಲ್ಲಿ ಮೊಟ್ಟೆಗಳನ್ನಿಡುವುವು. ಮೊಟ್ಟೆಗಳಿಂದ ಹೊರಬಂದ ಮರಿಗಳು ಗಾಳಿಯ ಮುಲಕ ತೂರಿಹೋಗಿ ಕಡೆಗೆ ಮಣ್ಣಿನಲ್ಲಿರುವ ಬಿಳಿದುಂಬಿಯ ಮರಿಗಳನ್ನು ಹಿಡಿಯುತ್ತವೆ. ಮೈಯಾಸ್ಟರ್ ನೊಣದಲ್ಲಿ ಮರಿಗಳೇ ಸಂತಾನೋತ್ಪತ್ತಿ ಮಾಡುತ್ತವೆ ; ಮೊಟ್ಟೆಯೊಡೆದು ಬಂದ ಮರಿ ಬೆಳೆಯುತ್ತಿರುವಾಗ, ಅದರೊಳಗೆ ಅನೇಕ ಮರಿಗಳು ಬೆಳೆದು, ತಾಯಿ ಮರಿಯನ್ನು ಕೊರೆದು ಹೊರಕ್ಕೆ ಬರುತ್ತವೆ. ತಾಯಿಮರಿ ಸತ್ತುಹೋಗುತ್ತದೆ. ಕೆಲವು ನೊಣಗಳು ಮೊಟ್ಟೆಯಿಡುವ ಬದಲು ನೇರವಾಗಿ ಮರಿಗಳನ್ನೇ ಹಾಕುತ್ತವೆ. ಮತ್ತೆ ಕೆಲವು ನೊಣಗಳು ಮೊಟ್ಟೆ ಮತ್ತು ಮರಿಗಳೆರಡನ್ನೂ ಹಾಕುತ್ತವೆ. ಈ ಗಣದ ಕೀಟಗಳಲ್ಲಿ ಸಂಪೂರ್ಣ ರೀತಿಯ ರೂಪಪರಿವರ್ತನೆಯನ್ನು ಕಾಣಬಹುದು. ಡಿಂಬಗಳಿಗೆ ಸಾಧಾರಣವಾಗಿ ಕಾಲುಗಳಿಲ್ಲ. ಇವು ನೋಡುವುದಕ್ಕೆ ಹುಳುಗಳಂತಿವೆ. ಇವಕ್ಕೆ ಮ್ಯಾಗಟ್ಸ್ ಎಂದು ಹೆಸರು. ನೆಮಟೊಸೀರ ಮುಂತಾದ ಕುಟುಂಬಗಳಲ್ಲಿ ಡಿಂಬಗಳಿಗೆ ಚೆನ್ನಾಗಿ ರೂಪುಗೊಂಡ ತಲೆಯಿದ್ದು ಬಾಯಿಯ ಮ್ಯಾಂಡಿಬಲ್ ಭಾಗಗಳು ಪಕ್ಕದಿಂದ ಪಕ್ಕಕ್ಕೆ ಚಲಿಸುತ್ತವಾದರೆ ಬ್ರ್ಯಾಕಿಸೀರ, ಸೈಕ್ಲೊರೇಫ ಮುಂತಾದ ಮುಂದುವರಿದ ಕುಟುಂಬಗಳಲ್ಲಿ ತಲೆ ಕ್ಷೀಣಿಸಿದ್ದು ಬಾಯಕೊಕ್ಕೆಗಳು ಮೇಲಿನಿಂದ ಕೆಳಕ್ಕೆ ಚಲಿಸುತ್ತವೆ. ಅಲ್ಲದೆ ಬ್ರ್ಯಾಕಿಸೀರ ಕುಟುಂಬದ ನೊಣಗಳ ಡಿಂಬಗಳ ತಲೆ ಗಡುಸಾಗಿದೆಯಲ್ಲದೆ ಹೆಚ್ಚು ಕಡಿಮೆ ಒಳಕ್ಕೆ ಸೆಳೆದುಕೊಳ್ಳುವಂತಿದೆ. ಈ ಗಣದ ಡಿಂಬಗಳಲ್ಲಿ ಹೆಚ್ಚಿನವು ಜಲವಾಸಿಗಳು ; ಕೊಳ, ಕೆರೆ, ನದಿ, ತೊರೆ, ಚೌಳು ನೀರಿನ ಕುಂಟೆ ಮುಂತಾದ ವಿವಿಧ ತೆರನ ನೆಲೆಗಳಲ್ಲಿ ವಾಸಿಸುತ್ತವೆ. ಡಿಂಬಗಳಲ್ಲಿ ಸಸ್ಯಹಾರಿಗಳೂ ಉಂಟು ಮಾಂಸಾಹಾರಿಗಳೂ ಉಂಟು. ಸಸ್ಯಹಾರಿಗಳು ಸಾಮಾನ್ಯವಾಗಿ ಗಿಡಗೆಂಟೆಗಳ ವಿವಿಧ ಅಂಗಗಳನ್ನು ಕೊರೆದು ಗೂಡು ಮಾಡಿಕೊಂಡು ಬದುಕುವುವು. ಮಾಂಸಾಹಾರಿಗಳು ನೀರಿನಲ್ಲಿ, ಮಣ್ಣಿನಲ್ಲಿ, ತೊಗಟೆ ಇಲ್ಲವೆ ಕಲ್ಲುಗಳ ಅಡಿಯಲ್ಲಿ ವಾಸಿಸುತ್ತಿದ್ದು ಬೇರೆ ಸಣ್ಣಪುಟ್ಟ ಕೀಟಗಳನ್ನು ಅಥವಾ ಅಕಶೇರುಕ ಪ್ರಾಣಿಗಳನ್ನು ತಿಂದು ಬದುಕುತ್ತವೆ. ಕೆಲವು ಬಗೆಯ ಡಿಂಬಗಳು ಕೊಳೆಯುತ್ತಿರುವ ಸಸ್ಯ ಪ್ರಾಣಿ ಅವಶೇಷಗಳನ್ನು ತಿಂದು ಜೀವಿಸುವುದೂ ಉಂಟು. ವಿಚಿತ್ರ ರೀತಿಯ ಜೀವನಕ್ರಮವನ್ನು ಪ್ರದರ್ಶಿಸುವ ಡಿಂಬಗಳೂ ಇಲ್ಲದಿಲ್ಲ. ಉದಾಹರಣೆಗೆ, ಎಫಿಡ್ರಿಡೀ ಕುಟುಂಬಕ್ಕೆ ಸೇರಿದ ಸೈಲೋಪ ಪೆಟ್ರೋಲೈ ಎಂಬ ನೊಣದ ಡಿಂಬ ಕಚ್ಚಾಪೆಟ್ರೋಲಿಯಮ್ಮಿನ ಮಡುಗಳಲ್ಲಿ ಜೀವಿಸುತ್ತದಾದರೆ ಇದೇ ಕುಟುಂಬದ ಇನ್ನಿತರ ಡಿಂಬಗಳು ಫಾರ್ಮಲಿನ್ ದ್ರಾವಣದಲ್ಲಿ ನೆನೆಯಿಟ್ಟ ಶವಗಳ ಮೇಲೆ ಜೀವಿಸುತ್ತವೆ.

ಪ್ರೌಢಜೀವಿಗಳಲ್ಲಿ ಕೆಲವು ಬಗೆಯವು. ಸಸ್ಯಗಳ ಕಾಂಡರಸ, ಮಕರಂದ ಮುಂತಾದವನ್ನು ಸೇವಿಸುತ್ತವೆ. ಇನ್ನು ಕೆಲವು ರೀತಿಯವು ಬೇರೆ ಪ್ರಾಣಿಗಳ ರಕ್ತ ಹೀರಿ ಬದುಕುತ್ತವೆ. ಅಂತೆಯೇ ಬೇರೆ ಕೀಟಗಳನ್ನು ತಿಂದು ಬದುಕುವ ಜಾತಿಗಳೂ ಉಂಟು.

ಈ ಗಣದ ಕೀಟಗಳು ಅತ್ಯಂತ ವೇಗವಾಗಿ ಹಾರಬಲ್ಲ ಜೀವಿಗಳು ಎನಿಸಿಕೊಂಡಿವೆ ; ಕೆಲವು ಪ್ರಭೇದಗಳು ಗಂಟೆಗೆ 50 ಮೈಲಿ ವೇಗದಲ್ಲಿ ಹಾರುತ್ತವೆ ಎಂದು ಹೇಳಲಾಗಿದೆ. ಹಾರುವಾಗ ಸದ್ದುಮಾಡುವುದು ಹೆಚ್ಚಿನ ಕೀಟಗಳ ಮುಖ್ಯಲಕ್ಷಣಗಳಲ್ಲೊಂದು, ಆದರೆ ಈನಿಗ್‍ಮ್ಯಾಟಿಯಾಸ್ ಮತ್ತು ಈನಿಗ್‍ಮ್ಯಾಟಿಸ್ಟಿಸ್ ಎಂಬ ಬಗೆಗಳಲ್ಲಿ ರೆಕ್ಕೆಗಳಾಗಲಿ ಹಾಲ್ಟಿಯರುಗಳಾಗಲಿ ಇಲ್ಲವೇ ಇಲ್ಲ. ಇನ್ನು ಕೆಲವು ನೀರಪಾತಳಿಯ ಮೇಲೆ ತುಂಬ ಚುರುಕಾಗಿ ಓಡಬಲ್ಲವು ಇಲ್ಲವೆ ಜಾರುತ್ತ ಚಲಿಸಬಲ್ಲವು. ಕೆಲವು ಬಗೆಗಳು ನೀರಿನಲ್ಲಿ ಈಜಲೂ ಬಲ್ಲವು, ಇಂಥವುಗಳ ರೆಕ್ಕೆ ಮತ್ತು ಕಾಲುಗಳು ಈಜುವಿಕೆಗೆ ಅನುಕೂಲವಾಗುವಂತೆ ಮಾರ್ಪಾಟಾಗಿವೆ.

ವರ್ಗೀಕರಣ

[ಬದಲಾಯಿಸಿ]

ರೆಕ್ಕೆದಿಂಡುಗಳು ಮತ್ತು ಕುಡಿಮೀಸೆಗಳ ರಚನೆಯ ಆಧಾರದ ಮೇಲೆ ಡಿಪ್ಟರವನ್ನು ನೆಮಟೊಸೀರ (ಆತ್ರ್ರೊರೇಫ), ಬ್ರ್ಯಾಕಿಸೀರ ಮತ್ತು ಸೈಕ್ಲೊರೇಫ ಎಂಬ 3 ಉಪಗಣಗಳನ್ನಾಗಿ ವಿಂಗಡಿಸಲಾಗಿದೆ. ನೆಮಟೊಸೀರ ಉಪಗಣದ ನೊಣಗಳ ಸ್ಪರ್ಶಾಂಗಗಳಲ್ಲಿ ಅಧಿಕ ಸಂಖ್ಯೆಯ ಖಂಡಗಳಿದ್ದರೆ ಬ್ರ್ಯಾಕಿಸೀರ ಹಾಗೂ ಸೈಕ್ಲೊರೇಫದ ನೊಣಗಳಲ್ಲಿ ಐದು ಅಥವಾ ಇನ್ನೂ ಕಡಿಮೆ ಖಂಡಗಳಿವೆ. ಬ್ರ್ಯಾಕಿಸೀರದ ಡಿಂಬಾವಸ್ಥೆಯ ಕೊನೆಯ ಹಂತವಾದ ಪ್ಯೂಪೇರಿಯಮ್ಮಿನಿಂದ ವಯಸ್ಕಕೀಟಗಳು ಖಿ ಆಕಾರದ ತೆರಪಿನ ಮೂಲಕ ಹೊರಬರುವುವು. ಸೈಕ್ಲೊರೇಫನ ವಯಸ್ಕ ಕೀಟಗಳಾದರೊ ಉಂಡನೆಯ ಆಕಾರದ ತೆರಪಿನ ಮುಖಾಂತರ ಹೊರಬರುತ್ತವೆ. ಪ್ರತಿಯೊಂದು ಉಪಗಣವನ್ನೂ ಅನೇಕ ಕುಟುಂಬಗಳಾಗಿ ವಿಂಗಡಿಸಲಾಗಿದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಡಿಪ್ಟರ&oldid=1075025" ಇಂದ ಪಡೆಯಲ್ಪಟ್ಟಿದೆ