ಕೋಳಿ ಅಂಕ
Jump to navigation
Jump to search
ತುಳುನಾಡಿನ ಜಾನಪದ ಆಟಗಳಲ್ಲಿ ಕೋಳಿಕಟ್ಟ ಮುಖ್ಯವಾಗಿದೆ. ಕೋಳಿಕಟ್ಟಕ್ಕೆ ಭೂತ ದೈವಗಳೇ ಅಧಾರ. ತುಳುನಾಡಿನಲ್ಲಿ ದೈವ ದೇವರುಗಳಿಗೆ ಅಂಕ ಆಯನ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಇದರೊಂದಿಗೆ ಕೋಳಿಕಟ್ಟ ಎಂಬ ಸ್ಪರ್ಧಾತ್ಮಕ ಆಟವೂ ನಡೆಯುತ್ತದೆ. ಊರಿನಲ್ಲಿ ಎಲ್ಲೆಲ್ಲಿ ಅಂಕ ಆಯನಗಳು ನಡೆಯುತ್ತಿವೆಯೋ ಅಲ್ಲಿ ಕೋಳಿಕಟ್ಟಗಳೂ ನಡೆಯುತ್ತಿವೆ[೧].ಅಂಕ ಆಯನಗಳಿಗಿಂತ ಮೊದಲು ಕೋಳಿಕಟ್ಟ. ಕೋಳಿಕಟ್ಟಕ್ಕೆ ಕೆಲವು ಸ್ಥಳಗಳು ತುಂಬಾ ಹೆಸರು ಪಡೆದಿವೆ. ಅಂಬಿಲಡ್ಕ, ತೊರವೊಲು, ಬಲ್ಲಂಗುಡೆಲ್, ಬೆಜ್ಜ, ಮುಡಿಪು, ಬಪ್ಪನಾಡ್ ಹೀಗೆ ಸ್ಥಳಗಳಿವೆ. ಹಿಂದಿನ ಕಾಲದಲ್ಲಿ ಈ ಕೋಳಿ ಅಂಕದ ಆಟದಲ್ಲಿ ಬಂಟರು ಬಹಳ ಹೆಸರು ಪಡೆದಿದ್ದರು. ಪ್ರತಿಯೊಬ್ಬ ಬಂಟನ ಮನೆಯಲ್ಲಿಯೂ ಕೋಳಿಕಟ್ಟಕ್ಕಾಗಿ ವಿಶೇಷ ರೀತಿಯಲ್ಲಿ ಸಾಕಿದ ೧೦-೧೫ ಹುಂಜಗಳು ಇರಲೇಬೇಕು. ಇನ್ನು ಶ್ರೀಮಂತರ ಮನೆಯಲ್ಲಿ ನೂರಾರು ಹುಂಜಗಳನ್ನು ಸಾಕುತ್ತಿದ್ದರು.
ಆಚರಣೆ[ಬದಲಾಯಿಸಿ]
- ಹಿಂದೆ ನಮ್ಮೂರ ಜಾತ್ರೆಯ ಸಮಯದಲ್ಲಿ ಮನೆಯಲ್ಲಿ ನೆಂಟರೇ ನೆಂಟರು. ಬರುವವರು ಬರಿಗೈಯಲ್ಲಿ ಬರುತ್ತಿರಲ್ಲಿಲ್ಲ. ಉತ್ತಮ ತಳಿಯ ನಾಲ್ಕಾರು ಹುಂಜಗಳನ್ನು ಹಿಡಿದುಕೊಂಡೆ ಬರುತ್ತಿದ್ದರು. ಕೆಲವರು ಜಾತ್ರೆಯ ನಾಲ್ಕಾರು ದಿನಗಳ ಮೊದಲೇ ದಲಿತ ಅಳುಗಳ ಮೂಲಕ ಕೋಳಿಗಳನ್ನು ಮುಂದಾಗಿ ಕಳುಹಿಸಿಕೊಟ್ಟು ತಾವು ಜಾತ್ರೆಯ ದಿನ ಬರುತ್ತಿದ್ದರು. ಆ ಸಮಯದಲ್ಲಿ ಮನೆಯಂಗಳದಲ್ಲಿ ಬೇರೆ ಬೇರೆ ಗೂಟಗಳಿಗೆ ಕಟ್ಟಿದ ಕೋಳಿಗಳು ರೆಕ್ಕೆ ಬಡಿದು ಕೆಲೆಯುತ್ತಿರುತ್ತವೆ.
- ಕೋಳಿಕಟ್ಟದ ದಿನ ಸಮೀಪಿಸಿತೆಂದರೆ ಮನೆಯ ಯಜಮಾನ ಎಣ್ಣೆಯಲ್ಲಿ ಹಾಕಿಟ್ಟ ಬಾಳುಗಳನ್ನು ಒಂದೊಂದಾಗಿ ಹಲಗೆಯ ಮೇಲೆ ಬಿಳಿಕಲ್ಲಿನ ಪುಡಿ ಹಾಕಿ ಹರಿತ ಮಾಡುತ್ತಾನೆ. ಅನಂತರ ಮನೆ ಕೆಲಸದವನೂ ಆ ಬಾಳುಗಳನ್ನು ಮಸೆಯುತ್ತಾನೆ. ಬಾಳುಗಳನ್ನು ಇಡಲು ಪ್ರತ್ಯೇಕ ಒಂದು ಸೂಡಿ. ಅದರ ಒಳಗೆ ದೋರೆ. ಹರಕು ತೆಳ್ಳಗಾದ ಬಿಳಿ ಬಟ್ಟೆಯ ತುಂಡು. ಅದರೊಂದಿಗೆ ಸೂಜಿ ಮತ್ತು ನೂಲು. ಹೀಗೆ ಎಲ್ಲವನ್ನು ಸಿದ್ಧಗೊಳಿಸು ಇಡುತ್ತಾರೆ.
- ಬಾಳಿನ ಸೂಡಿ ಅಂದರೆ ಅದರಲ್ಲಿ ಕೋಳಿಕಟ್ಟಕ್ಕೆ ಬೇಕಾಗುವ ಎಲ್ಲ ವಸ್ತುಗಳೂ ಇರುತ್ತವೆ. ಈ ಕೋಳಿಕಟ್ಟದ ಮಹತ್ವ ಹಾಗೂ ಔಚಿತ್ಯ ಏನು ಎಂಬುದನ್ನು ನಾವು ತಿಳಿದುಕೊಳ್ಳುವುದು ಒಳ್ಳೆಯದು. ಊರಿನ ಪ್ರತಿಯೊಂದು ದೈವಗುಡಿಗಳಲ್ಲೂ ಇನ್ನಿತರ ಭೂತ, ಗಣಗಳು ಇರುತ್ತವೆ. ಅವುಗಳಿಗೆ ಆಹಾರ ಕೊಡಬೇಕು. ಅಂಥ ಗಣಗಳಿಗೆ ಆಹಾರ ಕೊಡುವ ಸಲುವಾಗಿಯೆ ಈ ಕೋಳಿಕಟ್ಟ[೨]. ಅದುವೇ ಮೂಲ ಉದ್ದೇಶ.
ಕೋಳಿ ಕಟ್ಟಕ್ಕೆ ಹೊರಡುವಾಗ.....[ಬದಲಾಯಿಸಿ]
- ಪ್ರತಿಷ್ಟಿತರ ಮನೆಯ ಅಂಗಳದಲ್ಲಿ, ಮರದಡಿಯ ನೆರಳಿನಲ್ಲಿ ಗೂಟಕ್ಕೆ ಕಟ್ಟಿ ಹಾಕಿದ ಮತ್ತು ಗೂಡಿನಲ್ಲಿ ಹಿಡಿದಿಟ್ಟ ಹುಂಜಗಳಿಗೆ ಮನೆಯ ಹೆಂಗಸರು ದಿನಾಲೂ ಸಮಯಕ್ಕೆ ಸರಿಯಾಗಿ ಭತ್ತದ ಕಾಳು ಮತ್ತು ನೀರು ಮರೆಯದೆ ಕೊಡುತ್ತಾರೆ. ಕೋಳಿಕಟ್ಟದ ದಿನ ಕಟ್ಟಿ ಹಾಕಿದ ಕೋಳಿಗಳ ಸ್ಥಳವನ್ನು ಗುಡಿಸುವುದಿಲ್ಲ.
- ಬೆಳಿಗ್ಗೆ ಗಂಜಿ ಊಟ ಮಾಡಿ ಕೋಳಿಕಟ್ಟಕ್ಕೆ ಹೊರಡುವ ಕ್ರಮ. ಹೋಗುವಾಗ ಕೈಯಲ್ಲೊಂದು ತೊಂಡು ಇರುತ್ತದೆ. ಅದು ಕೋಳಿಗೆ ನೀರು ಹಿಡಿಯಲಿಕ್ಕಾಗಿ ಬಳಸಲಾಗುತ್ತದೆ. ಮನೆಯ ಯಜಮಾನತಿ ತನ್ನ ಕೈಯಿಂದಲೇ ಕೋಳಿಗೆ ಅಕ್ಕಿ ತಿನ್ನಿಸುತ್ತಾಳೆ. ಕೆಲಸದವನು ಸ್ವಲ್ಪ ಅಕ್ಕಿಯನ್ನು ನೀರಿನ ತೊಂಡನ್ನು ಹಿಡಿದು ಕೊಳ್ಳುತ್ತಾನೆ.
- ಹೊರಡುವಾಗ ಮನೆಯ ಗುರಿಕಾರ ಒಳ್ಳೆಯ ರಟ್ಟೆಮುಳ್ಳೆಯ ಕೋಳಿಯನ್ನು ಮಗುವಿನಂತೆ ಎತ್ತಿಕೊಂಡು ಮುಂದಿನಿಂದ ಗತ್ತಿನಿಂದ ಹೋಗುತ್ತಾನೆ. ಕೋಳಿಗಳ ಮೈಬಣ್ಣದಲ್ಲೂ ಹಲವಾರು ವಿಧಗಳಿವೆ. ಅದಕ್ಕೆ ಅನುಸಾರವಾಗಿ ಕೋಳಿಯ ಜಾತಿಯನ್ನು ಹೇಳುವ ಕ್ರಮವಿದೆ. ಉರಿಯೆ, ಮೈಪೆ, ಕೆಮ್ಮೈರೆ,ನೀಲೆ,ಪಂಚನಿ,ಬೊಳ್ಳೆ(ಕೊರುಂಗೆ),ಗಿದಿಯೆ(ಕಡ್ಲೆ), ಪೆರಡಿಂಗೆ, ಮಂಜೆಲೆ ಇತ್ಯಾದಿ.
- ಒಬ್ಬೊಬ್ಬರು ಒಂದೊಂದು ಕೋಳಿ ಹಿಡಿದುಕೊಂಡು ಹೊರಡುತ್ತಾರೆ. ಕೋಳಿ ಹಿಡಿದುಕೊಂಡು ಕಟ್ಟಕ್ಕೆ ಹೋಗುವಾಗ ಯಾವುದೆ ಅಪಶಕುನವಾಗಬಾರದು. ಹಿಂದಿನ ಕೆಲವು ಅಂಧಶ್ರದ್ಧ್ಹೆಯ ಪ್ರಕಾರ ವಿಧವೆ ಹೆಂಗಸು, ಮಡಕೆಗಳ ಮೂಟೆ ಹೊತ್ತುಕೊಂಡು ಹೋಗುವ ಕುಂಬಾರ ಇದಿರಾಗಲೇಬಾರದು.ಒಂದು ವೇಳೆ ಇದಿರಾದರೆ ಅಂದು ತಮ್ಮ ಕೋಳಿಗಳಿಗೆ ಸೋಲುಂಟಾಗುತ್ತದೆ ಎಂಬಂತಹ ಕುರುಡು ನಂಬಿಕೆಗಳು ಹಿಂದೆ ಇದ್ದವು.
- ಕೋಳಿ ಅಂಕ ಜರಗುವ ವಿಶಾಲ ಬಯಲನ್ನು ತಲುಪಿದ ಮೇಲೆ ಪ್ರತಿ ಮನೆಯವರು ತಮ್ಮ ಕೋಳಿಗಳನ್ನು ಪ್ರತ್ಯೇಕ ಸ್ಥಳಗಳಲ್ಲಿ ಗೂಟ ಬಡಿದು ಕಟ್ಟಿ ಹಾಕುತ್ತಾರೆ. ಅವುಗಳನ್ನು ಕಾಯಲು ಯಾರಾದರೊಬ್ಬರನ್ನು ಅದೇ ಸ್ಥಳದಲ್ಲಿ ನಿಲ್ಲಿಸಿರುತ್ತಾರೆ. ಹಿಂದೆ ಒಂದು ಮನೆಯ ಕೋಳಿಗಳನ್ನು ಕಾದಲು(ಹೋರಾಡಲು) ಬಿಡುವವನು ಬೇರೊಂದು ಮನೆಯ ಕೋಳಿಯನ್ನು ಬಿಡಲಾರ. ಕೋಳಿಯ ಕಾಲಿಗೆ ಬಾಳು ಕಟ್ಟುವುದೂ ಒಂದು ಕಲೆ.ಒಂದು ಮನೆಯ ಕೋಳಿಗೆ ಬಾಳು ಕಟ್ಟಿದವ ಇತರರ ಮನೆಯ ಕೋಳಿಗೆ ಬಾಳು ಕಟ್ಟಿಕೊಡಲು ಮೊದಲಿನ ಯಜಮಾನ ಬಿಡಲಾರ. ಹಿಂದೆ ಹೆಚ್ಚಾಗಿ ಧನಿಗಳ ಕೋಳಿಗೆ ಅವನ ಒಕ್ಕಲಿನವನೆ ಬಾಳು ಕಟ್ಟುತ್ತಿದ್ದ.
ಕೋಳಿಯನ್ನು ಕಾದಲು ಬಿಡುವುದು[ಬದಲಾಯಿಸಿ]
- ಒಂದು ಬದಿಯಲ್ಲಿ ಒಬ್ಬ ತನ್ನ ಮನೆಯ ಹತ್ತಿಪತ್ತು ಕೋಳಿಗಳನ್ನು ನಿಲ್ಲಿಸುತ್ತಾನೆ.ನನ್ನ ಕೋಳಿಗಳಿಗೆ ಇದಿರು ಕೋಳಿಗಳನ್ನು ನಿಲ್ಲಿಸುವವರಿದ್ದರೆ ಬರಬಹುದು ಅನ್ನುತ್ತಾನೆ. ಆಗ ಯಾರಾದರೊಬ್ಬರು ಮುಂದೆ ಬರುತ್ತಾರೆ. ಎರಡು ಕಡೆಯವರೂ ಅಯಾಯ ಕೋಳಿಗಳಿಗೆ ಎತ್ತರದಲ್ಲಿಯೋ ಮೈಭಾರದಲ್ಲಿಯೋ ಸರಿ ಹೊಂದುವ ಕೋಳಿಗಳನ್ನು ಜೋಡಿ ಮಾಡುತ್ತಾರೆ. ಹೀಗೆ ಜೋಡಿ ಮಾಡುವುದಕ್ಕೆ ಪತಿ ಮಾಡುವುದು ಎನ್ನುತ್ತಾರೆ.
- ಇಕ್ಕೆಡೆಯವರೆಗೂ ಒಪ್ಪಿಗೆಯಾದರೆ ತಮ್ಮ ತಮ್ಮ ಕೋಳಿಯ ಕಾಲಿಗೆ ಹರಿತವಾದ ಬಾಳು ಕಟ್ಟುತ್ತಾರೆ. ಬಾಳುಗಳಲ್ಲಿ ಎರಡು ವಿಧವಿರುತ್ತದೆ. ಕಾಲಿನ ಅರುವಾಯಿಗೆ ಬಟ್ಟೆ ಕಟ್ಟದೆ ಕಟ್ಟುವ ಬಾಳು ಒಂದು ವಿಧವಾದರೆ ಬಟ್ಟೆ ಕಟ್ಟಿ ಆಮೇಲೆ ಕಟ್ಟುವ ಬಾಳು ಇನ್ನೊಂದು ವಿಧದ್ದು. ಜಿಲ್ಲೆಯ ದಕ್ಷಿಣ ಪ್ರದೇಶದ ಜನರು ಮೊದಲನೆಯ ಕ್ರಮವನ್ನು ಊರ ಬಾಳು ಎಂದರೆ ಮತ್ತೊಂದನ್ನು ಬಡಗು ಪ್ರದೇಶದ ಬಾಳು ಎನ್ನುತ್ತಾರೆ.
- ಕೋಳಿ ಅಂಕದ ಷರತ್ತುಗಳನ್ನು ಅಯಾಯಾ ಕೋಳಿಗಳ ಯಜಮಾನರು ಸೇರಿ ಮೊದಲೇ ನಿರ್ಧರಿಸುತ್ತಾರೆ.ಒಂದು ಕ್ರಮ ಪ್ರಕಾರ ಯಾರ ಎಷ್ಟೇ ಕೋಳಿಗಳು ಗೆಲ್ಲಲಿ ಸತ್ತ ಕೋಳಿಗಳಲ್ಲಿ(ಒಟ್ಟೆ ಕೋರಿ)ಸಮಪಾಲು ಮಾಡಬೇಕು. ಇದಕ್ಕೆ ಭಾಗದಲ್ಲಿ ಕೋಳಿಕಟ್ಟುವುದು ಎಂದೂ ಹೇಳುತ್ತಾರೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ದಕ್ಷಿಣ ಭಾಗದಲ್ಲಿರುವ ದೊಡ್ಡ ದೊಡ್ಡ ಮನೆತನದವರೆಲ್ಲ ಹೆಚ್ಛಾಗಿ ಇಂತಹ ಶರ್ತದಲ್ಲೆ ಕೋಳಿ ಕಟ್ಟುತ್ತಾರೆ.
- ಇದರಿಂದಾಗಿ ಇದಿರಾಳಿಗಳಿಬ್ಬರ ಮನೆಗಳಲ್ಲೂ ನೆರೆದ ನೆಂಟರಿಗೆ ಕೋಳಿ ಪದಾರ್ಥ ಸಿಕ್ಕಿಯೇ ಸಿಗುತ್ತದೆ. ಕೋಳಿ ಕಾಳಗ ನಡೆಯುತ್ತಿರುವಾಗ ಗಾಯಗೊಂಡ ಕೋಳಿಗಳ ರಕ್ತ ನೆಲಕ್ಕೆ ಬೀಳುತ್ತದೆ. ಅದು ಅವರು ನಂಬಿದ ಭೂತಗಳಿಗೆ ಆಹಾರವಾಗುತ್ತದೆ ಎಂದು ಜನ ನಂಬುತ್ತಾರೆ. ರಾತ್ರಿ ಸಾಧಾರಣ ಏಳೆಂಟು ಗಂಟೆಯ ಹೊತ್ತಿಗೆ ತಮ್ಮ ತಮ್ಮ ಕೋಳಿಗಳನ್ನು ಹಿಡಿದುಕೊಂಡು ನೆಂಟರ ಜೊತೆಯಲ್ಲಿ ಸೂಟೆಯನ್ನು ಬೀಸುತ್ತಾ ಮನೆಗೆ ಮರಳುತ್ತಾರೆ.
- ಮನೆ ತಲುಪಿದ ಮೇಲೆ ಮನೆಯೊಳಗಿನ ಮಹಿಳೆಯರಿಗೆ ಕೆಲಸ. ಮನೆಯ ಅಂಗಳದಲ್ಲಿ ನೆಂಟರ ಜೊತೆಯಲ್ಲಿ ಗಂಡಸರು ಮಾತನಾಡುತ್ತಾ ಕುಳಿತುಕೊಂಡರೆ ಒಳಗೆ ಹೆಂಗಸರು ಪಲ್ಯದ ತಯಾರಿಯಲ್ಲಿ ಮಗ್ನರಾಗಿರುತ್ತಾರೆ. ಬಂದ ನೆಂಟರಲ್ಲಿ ಒಬ್ಬ ಪ್ರಸಂಗ ಪುಸ್ತಕವೇನಾದರೂ ಇದೆಯೆ ಎಂದು ಕೇಳುವುದುಂಟು. ಅದು ಇಲ್ಲದ ಮನೆಯುಂಟಾ? ಎಂಬ ಉತ್ತರದೊಂದಿಗೆ ಅಭಿಮನ್ಯು ಕಾಳಗವೋ ಕರ್ಣಪರ್ವವೋ ಯಾವುದಾದರೊಂದು ಪ್ರಸಂಗ ಪುಸ್ತಕವನ್ನು ಎತ್ತಿಕೊಳ್ಳುತ್ತಾರೆ. ಹಾಗೆ ದಿಢೀರ್ ತಾಳಮದ್ದಳೆ ಶುರುವಾಗುತ್ತದೆ. ಸಾಧಾರಣ ಹನ್ನೊಂದು ಗಂಟೆಯ ಹೊತ್ತಿಗೆ ಅಡುಗೆ ತಯಾರಾಗುತ್ತದೆ. ಊಟಕ್ಕೆ ಏಳಿಎಂಬ ಸಂದೇಶ ಒಳಗಿನಿಂದ ಬರುತ್ತದೆ. ಅಂಗಳದಲ್ಲಿದ್ದ ಗಂಡಸರು ತಾಳಮದ್ದಳೆ ನಿಲ್ಲಿಸಿ ಊಟಕ್ಕೆ ಏಳುತ್ತಾರೆ.
ಊಟ[ಬದಲಾಯಿಸಿ]
- ಕಲಾಯಿ ಹಾಕಿದ ದೊಡ್ಡ ತಾಮ್ರದ ಹಂಡೆಯಲ್ಲಿ ಹತ್ತಾರು ಕೋಳಿಗಳ ಮಾಂಸದ ಬೇಯಿಸಿದ ಪಲ್ಯ ಸಿದ್ಧವಾಗಿದೆ. ಮನೆಯ ಹುಡುಗರು ಮಾಂಸ ಬೆಂದಿದೆಯೋ ಎಂದು ನೋಡುವ ನೆವದಿಂದ ಈ ಮೊದಲೆ ಕೆಲವು ತಿಂದು ರುಚಿ ನೋಡಿ ಆಗಿದೆ. ಆದರೂ ಬಂದ ನೆಂಟರಿಗೆಲ್ಲ ತಿಂದು ತಣಿಯುವಷ್ಟು ಕೋಳಿ ಮಾಂಸ ಹಂಡೆಯಲ್ಲಿರುತ್ತದೆ.
- ಮನೆಗೆ ಬಂದ ನೆಂಟರು, ಮನೆವಕ್ಕಲಿನವರು, ಜೊತೆಯಲ್ಲಿ ಬಂದ ಕೆಲಸದವರು ಹಾಗು ಮನೆಯ ಗಂಡಸರು ಎಲ್ಲಾ ಸೇರಿ ಸುಮಾರು ೪೦-೫೦ ಜನರೂ ಮನೆಯ ಚಾವಡಿ-ಜಗಲಿ-ಅಂಗಳದಲ್ಲಿ ಊಟಮಾಡುತ್ತಾರೆ. ಇದೊಂದು ಸ್ಮರಣೀಯ ಸ್ನೇಹಕೂಟ ವಾಗುತ್ತದೆ. ಊಟ ಮಾಡುವಾಗಲೂ ಅಂದಿನ ಕೋಳಿ ಅಂಕದ ಸುದ್ದಿಯನ್ನು ವರ್ಣಿಸಿ ಮಾತಾಡುತ್ತಾ ಬಾಯಿ ಚಪ್ಪರಿಸುತ್ತಾರೆ. ಮರುದಿವಸವೂ ಕೋಳಿ ಅಂಕ ಮುಂದುವರಿಯುತ್ತದೆ. ಕೋಳಿಗಳಲ್ಲಿ ವಿವಿಧ ರಂಗಿನವಿರುತ್ತದೆ.
- ಕೋಳಿಗಳ ಪಂಚಾಗವೂ ಇದೆ. ಯಾವ ರಂಗಿನ ಕೋಳಿಗೆ ಯಾವ ದಿನ ಹುಟ್ಟು, ಬಾಲ್ಯ, ಯೌವನ, ಮುಪ್ಪು, ಮರಣ ಎಂಬುದು ಕೋಳಿ ಶಾಸ್ತ್ರಜ್ಞ ರಿಗೆ ಗೊತ್ತಿರುತ್ತದೆ. ಇಲ್ಲಿ ಹುಣ್ಣಿಮೆ ಮತ್ತು ಅಮವಾಸ್ಯೆಗಳೂ ಪ್ರಮುಖ ಪಾತ್ರ ವಹಿಸುತ್ತದೆ. ಅದನ್ನೆಲ್ಲಾ ತಿಳಿದುಕೊಂಡೇ ಆ ಪ್ರಕಾರ ಕೋಳಿ ಅಂಕ ನಡೆಸುವವರಿದ್ದಾರೆ. ಯಾವ ಕೋಳಿ ಗೆಲ್ಲುತ್ತದೆ ಎಂದು ಪಂಥ ಹಾಕಿ ಜೂಜಾಡುವ ಪದ್ಧತಿ ಹಿಂದಿನಿಂದಲೂ ಇತ್ತು .[೩].
- ಈಗ ಕೋಳಿಯ ದ್ಯೂತವನ್ನು ಸರಕಾರ ನಿಷೇಧಿಸಿರುತ್ತದೆ.ಆದರೂ ಬಂಧು ಬಳಗದವರೆಲ್ಲಾ ಒಟ್ಟಾಗುವ, ಪರಸ್ಪರ ಪ್ರೀತಿ ವಿಶ್ವಾಸಗಳನ್ನು ಬೆಳೆಸುವ ಒಂದು ಒಳ್ಳೆಯ ಅವಕಾಶ ಈ ಕೋಳಿ ಅಂಕದಿಂದ ಜನತೆಗೆ ದೊರೆಯುತ್ತದೆ.[೪]
ಉಲ್ಲೇಖ[ಬದಲಾಯಿಸಿ]
- ↑ http://www.prajavani.net/article/%E0%B2%A4%E0%B3%81%E0%B2%B3%E0%B3%81%E0%B2%B5%E0%B3%88%E0%B2%AD%E0%B2%B5%E0%B2%A6%E0%B2%B2%E0%B3%8D%E0%B2%B2%E0%B2%BF-%E0%B2%AE%E0%B2%A8%E0%B2%B8%E0%B3%86%E0%B2%B3%E0%B3%86%E0%B2%A6-%E0%B2%95%E0%B3%8B%E0%B2%B3%E0%B2%BF-%E0%B2%85%E0%B2%82%E0%B2%95-%E0%B2%AA%E0%B3%8D%E0%B2%B0%E0%B2%A6%E0%B2%B0%E0%B3%8D%E0%B2%B6%E0%B2%A8
- ↑ http://www.icarelive.com/bedra/index.php?action=coverage&type=124
- ↑ http://www.udayavani.com/kannada/news/62169/%E0%B2%95%E0%B2%A1%E0%B2%BF%E0%B2%B5%E0%B2%BE%E0%B2%A3-%E0%B2%AC%E0%B3%80%E0%B2%B3%E0%B2%AC%E0%B3%87%E0%B2%95%E0%B2%BF%E0%B2%A6%E0%B3%86-%E0%B2%95%E0%B3%8B%E0%B2%B3%E0%B2%BF-%E0%B2%85%E0%B2%82%E0%B2%95-%E0%B2%AE%E0%B2%9F%E0%B3%8D%E0%B2%95%E0%B2%BE-%E0%B2%A6%E0%B2%82%E0%B2%A7%E0%B3%86%E0%B2%97%E0%B3%86
- ↑ ತುಳುನಾಡಿನ ಕಟ್ಟುಕಟ್ಟಳೆಗಳು ರಾಘು ಪ್ ಶೆಟ್ಟಿ ಪ್ರಕಾಶಕರು ಲಕ್ಶ್ಮಿಛಾಯಾ ವಿಛಾರ ವೇದಿಕೆ, ಮುಂಬಯಿ ಪುಟ ೮೪