ಬ್ರಜ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಜ ಭಾಷೆ ಪಶ್ಚಿಮೀ ಹಿಂದಿಉಪಭಾಷೆ.[೧] ಇದು ಶಾರಸೇನಿ (ಶೂರಸೇನ ದೇಶದ ಒಂದು ಭಾಷೆ) ಅಪಭ್ರಂಶದ ಮುಖ್ಯ ರೂಪದಿಂದ ವಿಕಾಸಗೊಂಡಿದೆ. ಶೂರಸೇನ ದೇಶದ ಮತ್ತೊಂದು ಹೆಸರು ಬ್ರಜಮಂಡಲ. ಬ್ರಜ ಎಂದರೆ ಹಸುಗಳ ಹಿಂಡು ಅಥವಾ ಗೋಚಾರಣ ಭೂಮಿ ಎಂದರ್ಥ. ಪಶುಪಾಲನೆ ಮುಖ್ಯವಾದ್ದರಿಂದ ಆ ಪ್ರದೇಶಕ್ಕೆ ಬ್ರಜಮಂಡಲವೆಂಬ ಹೆಸರು ಬಂದಿರಬೇಕೆಂದು ವಿದ್ವಾಂಸರ ಊಹೆ. ಬ್ರಜಭಾಷೆ ಮಥುರಾ, ಆಗ್ರಾ, ಅಲೀಗಢ, ಧೌಲಪುರ, ಮೈನಪುರಿ, ಏಟಾ, ಬದಾಯೂನ್ ಮತ್ತು ಬರೇಲಿಯ ಸುತ್ತಮುತ್ತ ಬಳಕೆಯಲ್ಲಿದೆ. ಈ ಭಾಷೆಯನ್ನಾಡುವ ಜನಸಂಖ್ಯೆ ಸುಮಾರು ೧.೨೫ ಕೋಟಿ.

ಪದ ನಿಷ್ಪತ್ತಿ[ಬದಲಾಯಿಸಿ]

ಬ್ರಜ ಎಂಬುದು ಸಂಸ್ಕೃತದ ವ್ರಜ ಎಂಬುದರ ತದ್ಭವ ರೂಪ. ಈ ಭಾಷೆಯಲ್ಲಿ ಆಧುನಿಕ ಭಾರತೀಯ ಆರ್ಯ ಭಾಷೆಗಳಲ್ಲಿರುವ ಮೂಲಸ್ವರಗಳೂ ವ್ಯಂಜನಗಳೂ ಇವೆ. ಉದಾಸೀನ ಸ್ವರಗಳು, ಮುರಮುರ ಸ್ವರಗಳು, ಅಘೋಷ ಸ್ವರಗಳು ಕಂಡುಬರುತ್ತವೆ. ಸಾಹಿತ್ಯಕ ಬ್ರಜಭಾಷೆಯಲ್ಲಿ ಈ ಸ್ವರಗಳ ಬಳಕೆ ಇಲ್ಲ. ಧ್ವನಿಯನ್ನು ರ್ ಧ್ವನಿಯನ್ನಾಗಿ ಉಚ್ಚರಿಸಲಾಗುವುದು. ಊಷ್ಮ ಧ್ವನಿಗಳಾದ ಸ್, ಶ್, ಷ್ ಗಳಲ್ಲಿ ಸ್ಪಷ್ಟ ವ್ಯತ್ಯಾಸ ಕಂಡುಬರುವುದಿಲ್ಲ. ಪದ ಮಧ್ಯದಲ್ಲಿ ಬರುವ ದ್ ಧ್ ಧ್ವನಿಗಳು ಡ್ ಢ್ ಧ್ವನಿಗಳಾಗಿ ಉಚ್ಚಾರವಾಗುತ್ತವೆ. ಚ ವರ್ಗಕ್ಕೆ ಸೇರಿದ ಧ್ವನಿಗಳನ್ನು ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ, ಬೇರೆ ಬೇರೆ ಭಾಷೆಗಳ ಪ್ರಭಾವವೇ ಇದಕ್ಕೆ ಕಾರಣ. ಅಂ ದೀರ್ಘಸ್ವರ ಉಚ್ಚಾರದಲ್ಲಿ ಹ್ರಸ್ವವಾಗುತ್ತದೆ. ಪ್ರಾಕೃತ, ಅಪಭ್ರಂಶ ಭಾಷೆಗಳ ಪ್ರಭಾವದಿಂದ ದ್ವಿತ್ವ ವ್ಯಂಜನಗಳು ಬಳಕೆಯಲ್ಲಿವೆ. ನಾಮಧಾತುಗಳಿಗೆ ಪರಸರ್ಗಗಳನ್ನು ಬಳಸಲಾಗುವುದು. ಎರಡು ಬಗೆಯ ಲಿಂಗ ವ್ಯವಸ್ಥೆ, ಎರಡು ಬಗೆಯ ವಚನ ವ್ಯವಸ್ಥೆಯುಂಟು. ಏಕವಚನ ರೂಪಗಳನ್ನು ಬಹುವಚನರೂಪಗಳಾಗಿ ಬಳಸಬಹುದಾದ ಸಾಧ್ಯತೆಯಿದೆ. ಕ್ರಿಯಾಧಾತುಗಳಿಗೆ ಸಹಾಯಕ ಕ್ರಿಯಾಪದಗಳನ್ನು ಬಳಸಿ ಕೃದಂತಗಳಾಗಿ ಪರಿವರ್ತಿಸಬಹುದು. ಸಂಯುಕ್ತ ಕ್ರಿಯಾಪದಗಳು ಸರಳವಾಗಿವೆ. ತುರ್ಕಿ, ಅರಬ್ಬೀ, ಪಾರ್ಸಿ ಮುಂತಾದ ಭಾಷೆಗಳ ಶಬ್ದಗಳೂ ಪದಗಳೂ ಹೆಚ್ಚು ಸಂಖ್ಯೆಯಲ್ಲಿವೆ. ಅನುಕರಣಾತ್ಮಕ ಶಬ್ದಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ತದ್ಭವ ರೂಪಗಳ ಬಳಕೆ ಹೆಚ್ಚಾಗಿರುವುದರಿಂದ ವಾಕ್ಯಗಳು ಸರಳವಾಗಿವೆ. ಯೋಗಾತ್ಮಕ ಮತ್ತು ಪ್ರಯೋಗಾತ್ಮಕ ರುಪಗಳೇ ಪ್ರಧಾನವಾಗಿವೆ. ಸಂಯೋಗಾತ್ಮಕ ರೂಪಗಳು ಬಹಳ ಕಡಿಮೆ ಸಂಖ್ಯೆಯಲ್ಲಿರುವುದರಿಂದ ವಾಕ್ಯಗಳಲ್ಲಿ ಸಂಗೀತಾತ್ಮಕ ಗುಣವನ್ನು ಕಾಣಬಹುದು.

ಬಜ್ರ ಭಾಷೆಯ ಉಪಭಾಷೆ[ಬದಲಾಯಿಸಿ]

ಈ ಭಾಷೆಯಲ್ಲಿ ಮೂರು ಉಪಭಾಷೆಗಳಿವೆ. ಅವು ಪೂರ್ವೀ ಬ್ರಜ, ಪಶ್ಚಿಮೀ ಬ್ರಜ ಮತ್ತು ದಕ್ಷಿಣೀ ಬ್ರಜಭಾಷಾರೂಪಗಳು. ಮೊದಲನೆಯ ರೂಪ ಮೈನಪುರಿ, ಏಟಾ, ಬದಾಯೂನ್, ಬರೇಲಿ, ಫರೂಕಾಬಾದ್, ಕಾನ್ಪುರ ಮುಂತಾದ ಕಡೆಗಳಲ್ಲೂ ಎರಡನೆಯ ರೂಪವನ್ನು ಮಥುರಾ, ಆಗ್ರಾ, ಅಲೀಗಢ, ಬುಲಂದರ್ ಶಹರ್ ಮುಂತಾದ ಕಡೆಗಳಲ್ಲೂ ಕೊನೆಯರೂಪ ಧೌಲಪುರ, ಕತೌಲಿ, ಭರತ್ ಪುರ. ಗ್ವಾಲಿಯರ್, ಜಯಪುರ ಮುಂತಾದೆಡೆಗಳಲ್ಲೂ ಬಳಕೆಯಲ್ಲಿವೆ. ಇವುಗಳ ಜೊತೆಗೆ ಕೇಂದ್ರೀಯ ಅಥವಾ ಮಧ್ಯ ಬ್ರಜಭಾಷಾರೂಪವೂ ಬಳಕೆಯಲ್ಲಿದೆ.

ಪಶ್ಚಿಮ ಬ್ರಜಭಾಷಾರೂಪವೇ ಶಿಷ್ಟರೂಪವೆಂದು ಪರಿಗಣಿತವಾಗಿದೆ. ಉಳಿದ ರೂಪಗಳಲ್ಲಿ ರಾಜಸ್ಥಾನಿ, ಬುಂದೇಲಿ, ಖಡೀಬೋಲಿ, ಪಹಾಡಿ, ಕನೌಜಿ ಭಾಷಾಪ್ರಭಾವಗಳು ಕಾಣಿಸಿಕೊಂಡಿವೆ. ಸಾಹಿತ್ಯ ರಚನೆಗೆ ದೇವನಾಗರಿ ಲಿಪಿಯನ್ನು ಹೆಚ್ಚಾಗಿ ಬಳಸುವರು. ಪಾರ್ಸಿ ಮತ್ತು ಕೈಥಿ ಲಿಪಿಗಳ ಬಳಕೆಯೂ ಉಂಟು.

ಬದ್ರ ಸಾಹಿತ್ಯ[ಬದಲಾಯಿಸಿ]

ಭಾಷೆ, ಸಾಹಿತ್ಯ ಮತ್ತು ಲೋಕಸಾಹಿತ್ಯ (ಜನಪದ ಸಾಹಿತ್ಯ) ಇವೆರಡರಲ್ಲೂ ಶ್ರೀಮಂತವಾಗಿದೆ. ಬ್ರಜ ಸಾಹಿತ್ಯ ಕಾಲ ವಿಭಜನೆಯ ಬಗ್ಗೆ ವಿದ್ವಾಂಸರಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿವೆಯಾದರೂ ಅಧ್ಯಯನದ ದೃಷ್ಟಿಯಿಂದ ಪೂರ್ವಯುಗ (೧೪೨೦ ತನಕ), ಮಧ್ಯಯುಗ (೧೪೦೦ರಿಂದ ೧೮೦೦ರ ತನಕ ಮತ್ತು ಆಧುನಿಕ ಯುಗ (೧೯೦೦ರಿಂದ ಇಂದಿನತನಕ) ಎಂಬುದಾಗಿ ವಿಭಾಗಿಸಿಕೊಳ್ಳಲಾಗಿದೆ.

ಪೂರ್ವಯುಗ[ಬದಲಾಯಿಸಿ]

ಈ ಯುಗದಲ್ಲಿ ರಜಪೂತರು ಭಾರತದಲ್ಲಿ ಅತ್ಯಂತ ಪ್ರಬಲರಾಗಿದ್ದರು. ಶಾಕಂಬರಿಯ ಚೌಹಾನರು, ಕನೂಜಿನ ರಾಠೋಡರು, ಗುಜರಾತಿಸೋಲಂಕಿ, ಗ್ವಾಲಿಯರಿಕಛವಾಹರು ಮತ್ತು ಮಹೋಬೆಯ ಚಂದೇಲರು ಮಧ್ಯಪ್ರದೇಶವನ್ನು ಗೆಲ್ಲಲು ಹವಣಿಸುತ್ತಿದ್ದರು. ಪ್ರತಿಯೊಬ್ಬ ರಾಜನ ಬಳಿ ಕವಿಚಾರಣರು ಇದ್ದರು. ಇವರು ಕತ್ತಿ ಹಿಡಿದರೆ ಕಾಳಗ, ಕಂಠ ಹಿಡಿದರೆ ಕಾವ್ಯ ಎನ್ನುವಂತೆ ಸವ್ಯಸಾಚಿಗಳು. ತಮ್ಮ ಆಶ್ರಯದಾತ ರಾಜರ ಗುಣಗಾನ, ಪೌರುಷ ವರ್ಣನೆ ಇವರ ವೃತ್ತಿ. ರಾಜನನ್ನೂ ಆತನ ಕುಲವನ್ನೂ ಕುರಿತವು ಚಾರಣ ಕವಿತೆಗಳೆಂದು ಹೆಸರಾದವು. ಇವು ಸಾಮಾನ್ಯವಾಗಿ ಭಾವಗೀತೆ, ಖಂಡಕಾವ್ಯ ಮತ್ತು ಮಹಾಕಾವ್ಯ ರೂಪಗಳಲ್ಲಿವೆ. ಇವುಗಳಲ್ಲಿ ಯುದ್ಧ ಮತ್ತು ಮದುವೆಗೆ ಸಂಬಂಧಿಸಿದ ವರ್ಣನೆಗಳಿವೆ. ಅಲ್ಲಿ ರಾಜರ ಸಾಹಸಕೃತ್ಯಗಳಿಗೆ ಪ್ರಣಯವೇ ಪ್ರೇರಕ. ಈ ಕಾವ್ಯಗಳ ನಾಯಕರು ಸುಂದರ ಸ್ತ್ರೀಯೊಬ್ಬಳ ಸಲುವಾಗಿ ಹೊಸ ಸಾಹಸ ಕೃತ್ಯಗಳಲ್ಲಿ ತೊಡಗುತ್ತಿದ್ದರು. ಆದುದರಿಂದ ರಾಜಪೂತ ವೀರರ ಪೌರುಷ ಪ್ರಭಾವ ಕಾವ್ಯಗಳಿಗೆ ರಾಸೋ ಎಂದು ಕರೆಯುತ್ತಾರೆ. ರಾಸೋ ಕಾವ್ಯಗಳಲ್ಲಿ ವೀರರಸ ಪ್ರಧಾನ ಶೃಂಗಾರ ರಸ ಅದಕ್ಕೆ ಪೋಷಕವಾಗಿ ಬರುತ್ತದೆ.

ಈ ಅವಧಿಯ ಪ್ರಾಚೀನ ಗ್ರಂಥ ಬೀಸಲದೇವ ರಾಸೋ. ಇದೊಂದು ಚಿಕ್ಕ ಕಾವ್ಯ. ಇದರಲ್ಲಿ ನಾಲ್ಕು ಅಧ್ಯಾಯಗಳೂ ಎರಡು ಸಾವಿರ ಪದ್ಯಗಳೂ ಇವೆ. ಅಜಮೀರಿನ ರಾಜ ಬೀಸಲದೇವ ಅಥವಾ ನಾಲ್ಕನೆಯ ವಿಗ್ರಹರಾಜನ ಆಸ್ಥಾನ ಕವಿ ನರಪತಿ ನಾಲ್ಹ ಈ ಕಾವ್ಯವನ್ನು ರಚಿಸಿದನೆಂದು ತಿಳಿದುಬಂದಿದೆ. ಇದರಲ್ಲಿ ಶೃಂಗಾರರಸ ಪ್ರಧಾನ. ಭೋಜರಾಜನ ಮಗಳಾದ ರಾಜಮತಿಯನ್ನು ಬೀಸಲದೇವ ಮದುವೆಯಾದುದು, ಮಾತಿಗೆ ಮಾತು ಬಂದು ಅವನು ಆಕೆಯ ಮೇಲೆ ಕೋಪಗೊಂಡು ಹೊರಟುಹೋದುದು, ಪ್ರಿಯತಮನ ವಿರಹದಲ್ಲಿ ಆಕೆ ನರಳಿ, ಮತ್ತೆ ಅವನನ್ನು ಪಡೆಯುವುದು-ಈ ಕಾವ್ಯದ ಕಥಾವಸ್ತು. ಈ ಕಾವ್ಯದ ಭಾಷೆ. ಕರ್ತೃಕಾಲ ಸಂದಿಗ್ಧವಾಗಿದೆ. ಚಂದಬರದಾಯಿ (೧೧೨೭-೯೨) ಎಂಬವನ 'ಪೃಥ್ವೀರಾಜ ರಾಸೋ ಪ್ರಾಚೀನ ಕರತಿಗಳ ಪೈಕಿ ಮುಖ್ಯವಾದುದು. ಇದು ಎರಡೂವರೆ ಸಾವಿರ ಪುಟಗಳ ಒಂದು ಬೃಹತ್ ಗ್ರಂಥ. ಇದರಲ್ಲಿ 69 ಅಧ್ಯಾಯಗಳೂ ಒಂದು ಲಕ್ಷ ಪದ್ಯಗಳೂ ಇವೆ. ಈ ಕಾವ್ಯದ ಪ್ರಥಮಾರ್ಧವನ್ನು ಕವಿ ಬರೆದನಂತೆ. ಉತ್ತರಾರ್ಧವನ್ನು ಅವನ ಮಗ ಜಲ್ಹಣ ಪೂರ್ಣ ಗೊಳಿಸಿದನಂತೆ. ಕಾವ್ಯದಲ್ಲಿ ಆಬುವಿನ ಯಜ್ಞಕುಂಡದಿಂದ ನಾಲ್ಕು ಕ್ಷತ್ರಿಯ ಕುಲಗಳ ಉಗಮ, ಅಜಮೀರಿನಲ್ಲಿ ಚೌಹಾನರ ರಾಜ್ಯಸ್ಥಾಪನೆಯಿಂದ ಹಿಡಿದು ಪೃಥ್ವಿರಾಜನ ಸೋಲು ಮತ್ತು ಅವನ ಸಾವಿನವರೆಗೂ ಕಥೆ ಇದೆ. ಭಾಷೆ ಪ್ರಧಾನವಾಗಿ ಬ್ರಜ. ಆದರೆ ವೀರ ರೌದ್ರಗಳನ್ನು ವರ್ಣಿಸುವಾಗ ಪ್ರಾಕೃತ ಶಬ್ದಗಳೂ ಪ್ರಾಕೃತದ ಹಾಗೆ ನಿನಾದಿಸುವ ಶಬ್ದಗಳೂ ಹೆಚ್ಚಾಗಿ ಪ್ರಯುಕ್ತವಾಗಿವೆ. ಕಾವ್ಯದಲ್ಲಿ ಶೃಂಗಾರದ ಮನೋರಮ ನಿರೂಪಣೆಯೂ ವೀರದ ಓಜೋಮಯ ವ್ಯಂಜನೆಯೂ ಇವೆ. ಇಲ್ಲಿಯ ಕಥೆಯನ್ನು ತನ್ನ ಹೆಂಡತಿಯ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಶುಕ ಶುಕಿಯ ಸಂವಾದದ ಮೂಲಕ ಕವಿ ಹೇಳಿದ್ದಾನೆ.

ಜಗನಿಕ (೧೧೭೩) ಕವಿಯ ಕೃತಿ ಆಲ್ಹಾಖಂಡ್ ಒಂದು ಖಂಡಕಾವ್ಯ. ಮಹೋಬಿಯ ಪರಮಾರ ರಾಜನ ಮಾಗಧ ಕವಿ. ಈತ ಮಹೋಬೆಯ ಇಬ್ಬರು ಖ್ಯಾತವೀರರಾದ ಆಲ್ಹಾ ಮದ್ತು ಊದಲ್ (ಉದಯ ಸಿಂಹ) ಎಂಬವರೆ ವೀರ ಚರಿತ್ರೆಯನ್ನು ಬರೆದಿದ್ದಾನೆ. ಈ ಕಾವ್ಯ ಉತ್ತರ ಭಾರತದ ಹಳ್ಳಿಯಲ್ಲಿ ಇಂದಿಗೂ ಜನಪ್ರಿಯವಾಗಿದೆ. ದುರ್ದೈವದಿಂದ ಮೂಲಕೃತಿ ಉಪಲಬ್ಧವಾಗಿಲ್ಲ. ಪೂರ್ವೀ ಬ್ರಜ ಭಾಷೆಯಲ್ಲಿರುವ ಈಗಿನ ಗ್ರಂಥ ಹತ್ತೊಂಬತ್ತನೆಯ ಶತಮಾನದಲ್ಲಿ ಸಂಚಾರಿ ಹಾಡುಗಾರರು ಹಾಡುತ್ತಿದ್ದ ಪದ್ಯಗಳ ಸಂಗ್ರಹ ಅವಲಂಬಿಸಿ ಸಂಪಾದಿತವಾದುದು.

೧೧೯೨ರ ಆಚೆಗೆ ಸುಮಾರು ಹನ್ನೆರಡು ವರ್ಷಗಳೊಳಗೆ ಗಂಗಾನದಿ ಬಯಲಿನ ಎಲ್ಲ ಹಿಂದೂ ರಾಜ್ಯಗಳೂ ನಾಶವಾದುವು. ಜೊತೆಗೆ ಸ್ಥಳೀಯ ಹಿಂದೀ ಉಪಭಾಷೆಗಳೂ ಅವುಗಳ ಸಾಹಿತ್ಯವೂ ಹಾನಿಗೀಡಾದುವು. ಮೊದಮೊದಲಿನ ಮುಸ್ಲಿಮ್ ಪ್ರಭುತ್ವದಲ್ಲಿ ಎಂದರೆ ಸುಲ್ತಾನರ ಕಾಲದಲ್ಲಿ, ಬ್ರಜಸಾಹಿತ್ಯದ ಮೇಲೆ ಇರುಳು ಕವಿದುಕೊಂಡಿತು. ಸೋತ ಜನರ ಭಾಷೆಯಲ್ಲಾಗಲಿ ಸಾಹಿತ್ಯದಲ್ಲಾಗಲಿ ಈ ಪರಕೀಯ ಪ್ರಭುಗಳಿಗೆ ಆಸ್ಥೆಯಿರಲಿಲ್ಲ. ಈ ಅವಧಿಯಲ್ಲಿ ಗಮನಕ್ಕೆ ಬರುವ ಹೆಸರೆಂದರೆ ಅಮೀರ್ ಖುಸ್ರೋ (೧೨೫೪-೧೩೨೫). ಇವನ ನಿಜನಾಮ ಅಬ್ದುಲ್ ಹಸನ್. ಈತ ಪ್ರಧಾನವಾಗಿ ಪರ್ಷಿಯನ್ ಲೇಖಕ. ಈತನ ಬರೆವಣಿಗೆಯ ಅಧಿಕಭಾಗ ಪರ್ಷಿಯನ್ ಭಾಷೆಯಲ್ಲಿದ್ದರೂ ಸ್ಥಳೀಯ ಉಪಭಾಷೆಗಳನ್ನೂ ಆತ ನಿರ್ಲಕ್ಷಿಸಲಿಲ್ಲ. 'ಖಾಲಿಕ್ ಬಾರೀ, ಕೆಲವು ಮಸನವಿಗಳನ್ನೂ ಅನೇಕ ಹಿಂದೀ ಪದ್ಯಗಳನ್ನು ಖುಸ್ರೋ ರಚಿಸಿದ್ದಾನೆ. ಈತನ ಪಹೇಲಿಗಳು (ಒಗಟುಗಳು) ತುಂಬ ಪ್ರಸಿದ್ಧವಾಗಿವೆ. ಇವುಗಳಲ್ಲಿ ಉಕ್ತಿವೈಚಿತ್ರ್ಯ ಪ್ರಧಾನವಾಗಿದೆ. ಇವನ ರಚನೆಗಳು ಖಡೀಬೋಲಿ ಮತ್ತು ಬ್ರಜಭಾಷೆಗಳೆರಡರಲ್ಲೂ ಇವೆ.

ಗೋರಖ್ ನಾಥ್ ಎಂಬಾತ ಹಿಂದೀ ಗದ್ಯವನ್ನು ಮೊದಲು ಬರೆದವನೆಂದು ಪರಿಗಣಿತನಾಗಿದ್ದಾನೆ. ಆದರೆ ಆತನ ಕೃತಿಗಳು ಉಪಲಬ್ಧವಾಗಿಲ್ಲ. ೧೭೯೮ಕ್ಕೆ ಹಿಂದಿನ ಹಸ್ತಪ್ರತಿಗಳೆಲ್ಲವೂ ಸಂಪೂರ್ಣವಾಗಿ ನಷ್ಟವಾಗಿವೆ. ವೀರ ಮತ್ತು ಭಕ್ತಿಯ ಯುಗಸಂಧಿಯ ಕವಿ ವಿದ್ಯಾಪತಿಯ (ಸು.೧೩೬೦-೧೪೨೮) ಭಾವಗಿತೆಗಳಲ್ಲಿ ಬ್ರಜರೂಪಗಳನ್ನು ಗುರುತಿಸಬಹುದಾಗಿದ್ದರೂ ಅವು ಬಿಹಾರಮೈಥಿಲೀ ಉಪಭಾಷೆಯಲ್ಲಿವೆ.

ಮಧ್ಯಯುಗ[ಬದಲಾಯಿಸಿ]

ಈ ಅವಧಿಯಲ್ಲಿ ಸಾಹಿತ್ಯ ಕೇಂದ್ರ ರಾಜಸ್ಥಾನದಿಂದ ಗಂಗಾನದಿ ಬಯಲಿಗೆ ವರ್ಗಾವಣೆಗೊಂಡಿತು. ಈ ಅವಧಿಯ ಮೊದಲನೆಯ ಶತಕ ಹಿಂದೀ ಸಾಹಿತ್ಯಕ್ಕೆ ವಿಶೇಷವಾಗಿ ಯಾವ ಕಾಣಿಕೆಯನ್ನೂ ಸಲ್ಲಿಸಲಿಲ್ಲ. ಕಬೀರನ ಹೆಸರೊಂದೇ ಇದಕ್ಕೆ ಅಪವಾದದಂತಿದೆ. ಆದರೆ ಆತನ ಕೃತಿಗಳೆಲ್ಲವೂ ಖಡೀಬೋಲಿ, ಭೋಜ್‍ಪುರಿ, ಅವಧೀ ಭಾಷೆಗಳ ಅಥವಾ ಖಡೀಬೋಲಿ ಮತ್ತು ಪಂಜಾಬೀ ಭಾಷೆಗಳ ಮಿಶ್ರರೂಪದಲ್ಲಿ ಇವೆ. ಈ ಕಾಲದ ವಿಖ್ಯಾತ ಗ್ರಂಥವೂ ಸಿಖ್ಖರ ಧರ್ಮಗ್ರಂಥವೂ ಆದ 'ಗುರುಗ್ರಂಥ ಸಾಹಿಬ್ ಎಂಬುದು 164ರಲ್ಲಿ ಸಂಗ್ರಹಿತವಾಯಿತು. ಇದರ ಭಾಷೆ ಬ್ರಜಭಾಷೆ, ಕೆಲವೆಡೆಗಳಲ್ಲಿ ಮಾತ್ರ ಖಡೀಬೋಲಿ ಮತ್ತು ಪಂಜಾಬೀ ರೂಪಗಳು ಸಿಕ್ಕುತ್ತವೆ. ಅಮರ ಕವಯತ್ರಿ ಮೀತಾ ಹದಿನಾರನೆಯ ಶತಮಾನದವಳು. ಆಕೆ ರಾಜಸ್ಥಾನದಲ್ಲಿ ಹುಟ್ಟಿ ಬೆಳೆದಳು. ಬೃಂದಾವನದಲ್ಲಿ (ಬ್ರಜ-ಭೂಮಿ) ಕೆಲವು ಕಾಲವಿದ್ದಳು. ತನ್ನ ಕೊನೆಯ ದಿನಗಳನ್ನು ಗುಜರಾತಿನಲ್ಲಿ ಕಳೆದಳು. ಆದ್ದರಿಂದ ಆಕೆ ಕೃಷ್ಣನನ್ನು ಕುರಿತು ಬರೆದ ಭಕ್ತಿ ಗೀತೆಗಳಲ್ಲಿ ರಾಜಸ್ಥಾನಿ, ಬ್ರಜ ಮತ್ತು ಗುಜರಾತೀ ಭಾಷಾಪದಗಳನ್ನು ಕಾಣಬಹುದು.

೧೫ನೆಯ ಶತಮಾನದ ಉತ್ತರಾರ್ಧದಲ್ಲೂ ಹದಿನಾರನೆಯ ಶತಮಾನದ ಪೂರ್ವ ಭಾಗದಲ್ಲೂ ಸಾಂಸ್ಕೃತಿಕ ಪುನರುಜ್ಜೀವನ ಉದ್ಭವಗೊಂಡದ್ದು ಒಂದು ಮುಖ್ಯ ಪ್ರಗತಿ. ವಾಯವ್ಯದ ಪರಕೀಯ ಆಕ್ರಮಣಕಾರರು ತಮ್ಮದೇ ಆದ ಒಂದು ಮತ ಧರ್ಮವನ್ನೂ ಆಚಾರವನ್ನು ರೂಪಿಸಿಕೊಂಡು ಗಂಗಾನದಿಯ ಫಲವತ್ತಾದ ಬಯಲಿನಲ್ಲಿ ನೆಲಸಿದರು. ಇಂಥ ವಿಷಮ ಸನ್ನಿವೇಶಗಳಲ್ಲಿ ಸೋತ ಜನದ ಸಾಮಾನ್ಯ ರೂಢಿಯಂತೆ, ಅವರ ಬುದ್ಧಿ ಗತಕಾಲದತ್ತ ತಿರುಗಿ, ವೈಷ್ಣವ ಮತದ ಪುನರುತ್ಥಾನದ ಮಹಾಧಾರ್ಮಿಕ ಚಳವಳಿಯ ಮೂಲಕ ತನ್ನನ್ನು ಪ್ರಕಾಶಪಡಿಸಿಕೊಂಡಿತು. ಈ ಅವಧಿಯಲ್ಲಿ ರಾಮಾನುಜರ ವೈಷ್ಣವ ಮತದ ಧಾರ್ಮಿಕ ವಿಚಾರಗಳು ಉತ್ತರಕ್ಕೆ ಹಬ್ಬಿತು. ರಾಮಾನುಜರ ಬರಹಗಳು ಸಂಸ್ಕೃತದಲ್ಲಿದ್ದುದರಿಂದ ಜನರಲ್ಲಿ ಬೇಗ ಹರಡಲಿಲ್ಲ. ಆತನ ಶಿಷ್ಯ ರಮಾನಂದ ಕಾಶಿಯನ್ನು ತನ್ನ ಮೂಲಸ್ಥಾನವಾಗಿ ಮಾಡಿಕೊಂಡು ಭಾರತಾದ್ಯಂತ ಸಂಚರಿಸಿ ಈ ಮತವನ್ನು ಪ್ರಾಚುರ್ಯಗೊಳಿಸಿದ. ಆತ ಜಾತಿಭೇದಗಳನ್ನು ತಿರಸ್ಕರಿಸಿದನಾದ್ದರಿಂದ ಸಮಾಜದ ಎಲ್ಲ ಸ್ತರಗಳಿಂದಲೂ ಆತನ ಹತ್ತಿರಕ್ಕೆ ಶಿಷ್ಯರು ಬಂದರು. ಉದಾಹರಣೆಗೆ ಕಬೀರ ಮುಸ್ಲಿಮ್ ನೇಯ್ಗೆಯವ, ರೈದಾಸ ಜೋಡುಹೊಲಿಯುವವ, ಮೀರ ಜೋಧಪುರದ ರಾಜಕುಮಾರಿ. ಭಕ್ತಿಪಂಥವನ್ನು ಮುಂದುವರಿಸಿದ ವಲ್ಲಭಾಚಾರ್ಯ ಪುಷ್ಟಿಮಾರ್ಗ ಸ್ಥಾಪಿಸಿದ. ರಮಾನಂಥನಿಗೆ ರಾಮನೇ ಅಧಿದೈವವಾದರೆ, ವಲ್ಲಭಾಚಾರ್ಯನಿಗೆ ಕರಷ್ಣನೇ ಅಧಿದೈವ. ಆದಕಾರಣ ಹಿಂದಿಯ ಭಕ್ತಿ ಕವಿತೆ ರಾಮಕಾವ್ಯ. ಕೃಷ್ಣಕಾವ್ಯ ಎಂಬ ಎರಡು ರೂಪಗಳಲ್ಲಿ ಕಾಣಿಸಿಕೊಂಡಿತು.

ಆ ಕಾಲದ ರಾಜಕೀಯ ವಿಪ್ಲವ ಮತ್ತು ಆದರಿಂದ ಹುಟ್ಟಿದ ಧಾರ್ಮಿಕ ಪುನರುತ್ಥಾನಗಳು ಸಾಹಿತ್ಯದ ಮೇಲೆ ತನ್ನ ಮುದ್ರೆ ಒತ್ತದಿರಲಿಲ್ಲ. ಹಿಂದೂ ರಾಜ್ಯಗಳು ನಿರ್ನಾಮವಾಗಿ ವೀರರಸೋಚಿತವಾದ ಕಾವ್ಯವಸ್ತುಗಳೇ ದುರ್ಲಭವಾದುದರ ಪರಿಣಾಮವಾಗಿ ಕವಿಗಳ ಕಲ್ಪನೆ ಭಕ್ತಿಗೀತೆಗಳತ್ತ ಹೊರಳಿತು. ಈ ಅವಧಿಯ ಕೊನೆಯ ಹಂತದಲ್ಲಿ ನಾಶವಾಗದೆ ಉಳಿದಿದ್ದ ಬುಂದೇಲ್ ಖಂಡ ಮತ್ತು ರಾಜಸ್ಥಾನದ ಅರಸರ ಆಸ್ಥಾನ ಕವಿಗಳು ಅಲಂಕಾರಶಾಸ್ತ್ರ ಪ್ರಭಾವದಿಂದ ಉದ್ಭವಿಸಿದ ಕವಿತೆಗಳನ್ನು ರಚಿಸಿದರು.

ವಸ್ತುತಃ ಮಧ್ಯಯುಗದ ಹಿಂದೀ ಸಾಹಿತ್ಯದ ಇತಿಹಾಸ ಬ್ರಜಭಾಷೆಯ ಇತಿಹಾಸ. ಅವಧಿ ಉಪಭಾಷೆಯಲ್ಲಿ ರಚನೆಗೊಂಡಿರುವ ಮಲ್ಲಿಕ್ ಮಹಮದ್‍ಜೈಶಿ (ಕ್ರಿ. ಶ. ಸು. ೧೫೪೦) ಎಂಬಾತನ 'ಪದ್ಮಾವತ್ ಮತ್ತು ತುಳಸೀದಾಸನ (ಕ್ರಿ. ಶ. ೧೫೭೫) 'ರಾಮಚರಿತ ಮಾನಸಗಳನ್ನು ಬಿಟ್ಟರೆ ಈ ಕಾಲದ ಎಲ್ಲ ಮುಖ್ಯಕೃತಿಗಳೂ ಬ್ರಜಭಾಷೆಯಲ್ಲಿವೆ. ವಲ್ಲಭಾಚಾರ್ಯ ಗೋವರ್ಧನದಲ್ಲಿ (ಮಧುರಾಜಿಲ್ಲೆ) ಶ್ರೀ ನಾಥಜಿ ದೇವಸ್ಥಾನ (೧೫೧೯) ನಿರ್ಮಿಸಿದಂದಿನಿಂದ ಬ್ರಜಭೌಷೆಯ ಸಾಹಿತ್ಯಕ್ಕೆ ಅಸ್ತಿತ್ವ ದೊರಕಿತು. ಮಹಾಪ್ರಭುವಲ್ಲಭಾಚಾರ್ಯ ಪ್ರತಿಭಾಶಾಲಿಗಳಾದ ಭಕ್ತ ಕವಿಗಳನ್ನು ಆಯ್ದು ಅವರಲ್ಲಿ ಆಧ್ಯಾತ್ಮಿಕ ತೇಜಸ್ಸು ತುಂಬಿದ. ಈ ಪೈಕಿ ಸೂರದಾಸ ಮತ್ತು ನಂದದಾಸ ಪ್ರಮುಖರು. ಮಹಾಪ್ರಭು ವಲ್ಲಭಾಚಾರ್ಯನ ಪುತ್ರ ಗೋಸ್ವಾಮಿ ವಿಠಲನಾಥ ತನ್ನ ತಂದೆಯ ಸಂಪ್ರದಾಯಗಳನ್ನು ಅನುಸರಿಕೊಂಡು ಬಂದುದಲ್ಲದೆ ಅಷ್ಟಛಾಪ್, ಎಂಬ ಎಂಟು ಮಹಾಕವಿಗಳ ತಂಡ ಸ್ಥಾಪಿಸಿದ. ಸಾಂಪ್ರದಾಯಿಕ ಪರಂಪತೆಯಲ್ಲಿ ಈ ಎಂಟು ಮಂದಿಯನ್ನು ಕೃಷ್ಣನ ಅವತಾರ ಎಂದು ಪರಿಗಣಿಸಲಾಗಿದೆ. ಸೂರದಾಸ, ನಂದದಾಸ, ಪರಮಾನಂದದಾಸ, ಕುಂಬನದಾಸ. ಕೃಷ್ಣದಾಸ, ಚತುರ್ಭುಜದಾಸ. ಗೋವಿಂದಸ್ವಾಮಿ ಮತ್ತು ಛೀತಸ್ವಾಮಿ. ಕೃಷ್ಣಭಕ್ತಿ ಸಂಪ್ರದಾಯದವರಿಗೆ ಭಾಗವತ ಪುರಾಣವೇ ಸ್ಫೂರ್ತಿದಾಯಕ ಮೂಲ. ಈ ಪ್ರಧಾನ ಕೃತಿಯಿಂದಲೇ ಕವಿಗಳು ಸ್ಥೂಲವಾಗಿ ತಮ್ಮ ಕಾವ್ಯವಸ್ತುಗಳನ್ನು ಆಯ್ದುಕೊಂಡರು. ಅದಕ್ಕೆ ತಮ್ಮದೇ ಆದ ಆತ್ಮವನ್ನಿತ್ತರು.

ಬಜ್ರ ಭಾಷಾ ಕವಿಗಳು[ಬದಲಾಯಿಸಿ]

ಸೂರದಾಸ[ಬದಲಾಯಿಸಿ]

ಈತನ ಶ್ರೇಷ್ಠ ಕೃಷ್ಣಲೀಲಾಗೀತಗಳಲ್ಲಿ ಬಹುಭಾಗ ೧೫೩೦-೧೫೫೦ ರ ಅವಧಿಯಲ್ಲಿ ರಚಿತವಾದವು. ಪ್ರಾಯಶಃ ಈತನ ಎಲ್ಲ ಕೃತಿಗಳ ಸಂಗ್ರಹಕ್ಕೆ 'ಸೂರಸಾಗರ್ ಎಂದು ಹೆಸರು. ಸೂರಸಾಗರದ ಪ್ರಧಾನ ರಸ ಶೃಂಗಾರ ಮತ್ತು ವಾತ್ಸಲ್ಯ. ವಾತ್ಸಲ್ಯ ಒಂದು ರಸವೆಂದು ಲಾಕ್ಷಣಿಕರು ಒಪ್ಪಿಲ್ಲದಿದ್ದರೂ ಕವಿ ತನ್ನ ಪ್ರತಿಭೆಯಿಂದ ಅದಕ್ಕೆ ರಸದ ಪಟ್ಟ ಕಟ್ಟಿದ್ದಾನೆ. ಮನುಷ್ಯನ ಭಾವಗಳನ್ನೂ ಸಂವೇದನೆಗಳನ್ನೂ ನಿರೂಪಿಸುವುದರಲ್ಲಿ ಈತನಿಗೆ ಸಮಾನವಾದವರು ಯಾರೂ ಇಲ್ಲ. ಈತನ ಪದ್ಯಗಳ ರಚನೆಯಲ್ಲಿ ಕಂಡು ಬರುವ ಸಾಮರಸ್ಯ ಮತ್ತು ಸೌಂದರ್ಯಗಳು ಎಂಥವರ ತಲೆಯನ್ನಾದರೂ ತೂಗಿಸುತ್ತವೆ. ಪ್ರಣಯದ ಸಮಸ್ತ ಮುಖಗಳನ್ನು ಬಿಡಿಸಿ ವರ್ಣಿಸುವುದರಲ್ಲಿ ಈತ ಮಹೋನ್ನಸೂರ್ ಸಾಗರದಲ್ಲಿ ಹನ್ನೆರಡು ಸ್ಕಂಧಗಳಿವೆ. ಅವುಗಳಲ್ಲಿ ಕೃಷ್ಣನ ಜೀವಿತ ಕುರಿತ ಹತ್ತನೆಯ ಸ್ಕಂಧ ಪ್ರಧಾನವಾದದ್ದು. ಅದರಲ್ಲಿ ೩,೫೦೦ ಪದ್ಯಗಳಿವೆ. 'ಭ್ರಮರ ಗೀತ ಎಂಬುದು ಸೂರಸಾಗರದ ಅತ್ಯುತ್ತಮಭಾಗ. ಕೃಷ್ಣನ ವಿರಹದಿಂದ ಸಂತಪ್ತರಾದ ಗೋಪಿಯರ ಗೋಳು ಶ್ರೋತೃಗಳ ಹೃದಯದಲ್ಲಿ ಕೋಮಲ ಭಾವ ಇದು ಸಹಜವೇ, ಏಕೆಂದರೆ ಕವಿಯ ಮಾತೃಭಾಷೆ ಅದು. ಕಾವ್ಯದಲ್ಲಿ ಕಂಡುಬರುವ ಮಾರ್ದವ, ವ್ಯಂಜಕತೆ, ನಾದ ಮಾಧುರ್ಯ ನಿಜಕ್ಕೂ ಅಚ್ಚರಿ ತರುವಂಥವು. ಸೂರದಾಸ ಬ್ರಜಭಾಷೆಯ ಆದಿಕವಿಯೆಂದು ಪರಿಗಣಿಸಲಾಗಿದೆ.

ನಂದದಾಸ (೧೫೧೫-೮೬)[ಬದಲಾಯಿಸಿ]

ಈತ ಗೋಸ್ವಾಮಿ ವಿಠಲನಾಥನ ಸಮಕಾಲೀನ. ಏಟಾ ಜಿಲ್ಲೆಯ ಸೊರೋ ಎಂಬಲ್ಲಿ ಜನಿಸಿದ. ಇವನ ಪ್ರಸಿದ್ಧ ಕೃತಿ 'ರಾಸ ಪಂಚಾಧ್ಯಾಯ ಇದು ರೋಲಾ ಛಂದಸ್ಸಿನಲ್ಲಿದೆ. ಕೃಷ್ಣ ರಾಸ ಕ್ರೀಡೆಯನ್ನು ಅಲಂಕಾರಿಕ ಶೈಲಿಯಲ್ಲಿ ಕವಿ ವರ್ಣಿಸಿದ್ದಾನೆ. ಕಾವ್ಯದ ಭಾಷೆ ಸಂಸ್ಕೃತ ಭೂಯಿಷ್ಠವಾಗಿದೆ. ಭಾಗವತದಶಮಸ್ಕಂಧ, ರುಕ್ಮಿಣೀ ಮಂಗಳ, ರೂಪ ಮಂಜರಿ, ವಿರಹಮಂಜರಿ, ದಾನಲೀಲಾ, ಭ್ರಮರಗೀತ, ಸುದಾಮಚರಿತ ಮುಂತಾದವು ಇವನ ಕೃತಿಗಳು.

ಗೋಕುಲನಾಥ (೧೫೫೧-೧೬೪೭)[ಬದಲಾಯಿಸಿ]

ವಲ್ಲಭಾಚಾರ್ಯನ ಮೊಮ್ಮಗ. ಈತ ತನ್ನ ತಾತನ ಎಂಬತ್ತನಾಲ್ಕು ಶಿಷ್ಯರ ಜೀವನಚರಿತ್ರೆಯನ್ನು ಗದ್ಯದಲ್ಲಿ ಬರೆದ. ಈ ಕಾರಣದಿಂದ ಈತನನ್ನು ಬ್ರಜಭಾಷೆಯ ಪ್ರಥಮ ಗದ್ಯಲೇಖಕನೆಂದು ಪರಿಗಣಿಸಬಹುದು. 'ಚೌರಾಶಿ ವೈಷ್ಣವನಕೀ-ವಾರ್ತಾ ಎಂಬುದು ಈ ಅವಧಿಯಲ್ಲಿ ಪ್ರಕಟವಾದ ಬಹುಮುಖ್ಯ ಗದ್ಯಗ್ರಂಥ. 'ದೋಸವ್ ಭಾವನ್ ವೈಷ್ಣವನ್ ಕೀ ವಾರ್ತಾ ಎಂಬ ಬ್ರಜಭಾಷೆಯ ಎರಡನೆಯ ಗದ್ಯಗ್ರಂಥ ಸಹ ಮೊದಲನೆಯದರ ಶೈಲಿಯಲ್ಲೇ ರಚಿತವಾಗಿದೆ. ಇದು ವಿಠಲನಾಥನ ಶಿಷ್ಯರ ಜೀವನ ಚರಿತ್ರೆ ವರ್ಣಿಸುತ್ತದೆ.

ಹಿತ ಹರಿವಂಶ[ಬದಲಾಯಿಸಿ]

ಈತ ರಾಧಾನವಲ್ಲಭೀಯ ಸಂಪ್ರದಾಯ ಸ್ಥಾಪಿಸಿದ. ಹುಟ್ಟಿದ್ದು ಮಧುರಾ ಜಿಲ್ಲೆಯಲ್ಲಿ. 'ಚೌರಾಶೀಪದ (ಎಂಬತ್ತುನಾಲ್ಕು ಪದಗಳು) ಎಂಬ ಸಂಗ್ರಹ ಈತನ ಕೃತಿಗಳ ಪೈಕಿ ಅತ್ಯುತ್ತಮವಾದದ್ದು. ಈತನ ಕೃತಿಯಲ್ಲಿ ಸಂಸ್ಕೃತ ಪ್ರಭಾವ ಕಾಣಬಹುದು.

ಬ್ರಜಮಂಡಲದ ಈ ಕವಿಕಾವ್ಯಗಳ ಮೂಲಕ ಬ್ರಜಭಾಷೆ ಸ್ಥಳೀಯ ಉಪಭಾಷೆಯ ಹಂತದಿಂದ ಸಾಹಿತ್ಯ ಭಾಷೆಯಾಗಿ ಪರಿಣಮಿಸಿ ಹಿಂದೀ ಪ್ರದೇಶದಲ್ಲಿಯ ಉಪಭಾಷೆಗಳೆಲ್ಲವುಗಳ ಪೈಕಿ ಶ್ರೇಷ್ಠತಮವೆನಿಸಿಕೊಂಡಿತು.

ತುಳಸೀದಾಸ್, ದಾಭಾದಾಸ್, ನರೋತ್ತಮದಾಸ್ ಎಂಬವರು ಹದಿನಾರನೆಯ ಶತಮಾನದ ಪ್ರಸಿದ್ಧ ಕವಿಗಳು. ಇವರು ಪೂರ್ವದ ಹಿಂದೀ ಪ್ರದೇಶಕ್ಕೆ ಸೇರಿದವರಾದರೂ ಬ್ರಜ ಭಾಷೆಯನ್ನೇ ತಮ್ಮ ಸಾಹಿತ್ಯ ಕೃಷಿಗೆ ಆರಿಸಿಕೊಂಡರು.

ಬ್ರಜ ಭಾಷಾ ಮಂಡಲದ ಹದಿನಾರನೆಯ ಶತಮಾನದ ಪ್ರಸಿದ್ಧ ಕವಿಗಳು[ಬದಲಾಯಿಸಿ]

ತುಳಸೀದಾಸ್ (೧೫೩೨-೧೬೨೭)[ಬದಲಾಯಿಸಿ]

ಈತ ರಮಾನಂದ ಪಂಥಕ್ಕೆ ಸೇರಿದವ. ಈತನ ಅಮರಕೃತಿ 'ರಾಮಚರಿತಮಾನಸ. ಇದು ಅವಧಿಯಲ್ಲಿ ರಚಿತವಾಗಿದೆ. ಈತನ ಮಿಕ್ಕೆಲ್ಲ ಕೃತಿಗಳು ಬ್ರಜಭಾಷೆಯಲ್ಲೇ ರಚಿತವಾದವು. 'ಕವಿತಾವಳೀ ಎಂಬುದು ರಾಮಕಥಾ ಪ್ರಸಂಗಗಳ ಮೇಲೆ ರಚಿತವಾದ ಕವಿತೆಗಳ ಸಂಗ್ರಹ ಇದು 'ಕವಿತ್ತ-ಸವೈಯ ಶೈಲಿಯಲ್ಲಿದೆ. ವಸ್ತುವಿನಲ್ಲಿ 'ಕವಿತಾವಳಿಯನ್ನೇ ಹೋಲುವ 'ಗೀತಾವಳಿ ಎಂಬುದು ಸೂರಸಾಗರದಂತೆ ಭಾವಗೀತ ರೂಪದಲ್ಲಿದೆ. 'ವಿನಯ ಪತ್ರಿಕಾ ಎಂಬುದು ಹೆಚ್ಚು ಆಧ್ಯಾತ್ಮಿಕವಾಗಿದೆ. ಅಲ್ಲದೆ ಆಳವಾದ ಮತೀಯ ಸಂವೇದನೆಯನ್ನು ಪ್ರಕಟಗೊಳಿಸುತ್ತದೆ. ಅದರ ಹೆಸರೇ ಸೂಚಿಸುವಂತೆ, ಕವಿ ತನ್ನ ಪ್ರಭುವಾದ ರಾಮನನ್ನೇ ಸಂಬೋಧಿಸುತ್ತಾನೆ. ಇದೊಂದು ಚರಮಗೀತೆಯಂತಿದೆ. ತುಳಸೀದಾಸನ ಬ್ರಜಭಾಷಾ ಕೃತಿಗಳಲ್ಲಿ ಒಮ್ಮೊಮ್ಮೆ ಪೂರ್ವದ ಪ್ರಭಾವವೂ ಕಾಣಿಸಿಕೊಳ್ಳುತ್ತದೆಯಾದರೂ ಬ್ರಜ ಕವಿಗಳಲ್ಲಿ ಆತನ ಸ್ಥಾನ ಸ್ಥಿರವಾದದ್ದು.

ನಾಭಾದಾಸ (೧೬ನೆಯ ಶತಮಾನ)[ಬದಲಾಯಿಸಿ]

ರಮಾನಂದ ಸಂಪ್ರದಾಯಕ್ಕೂ ಪೂರ್ವ ಹಿಂದೀ ಪ್ರದೇಶಕ್ಕೂ ಸೇರಿದ ಕವಿ. ಈತನ ಕೃತಿ 'ಭಕ್ತಮಾಲ್. ಇದರಲ್ಲಿ ಪ್ರಾಚೀನ ಮತ್ತು ಅರ್ವಾಚೀನರಾದ ಸುಮಾರು ಇನ್ನೂರು ಮಂದಿ ಭಕ್ತ ಕವಿಗಳ ಸಂಕ್ಷಿಪ್ತ ಜೀವನ ಚರಿತ್ರೆಗಳಿವೆ. ಛಪ್ಪೈ ಛಂದಸ್ಸಿನಲ್ಲಿ ರಚಿತವಾಗಿರುವ ಮುನ್ನೂರ ಹದಿನಾರು ಪದ್ಯಗಳು ಇದರಲ್ಲಿವೆ. ಇದು ಪ್ರೌಢಕೃತಿಯಲ್ಲಿದ್ದರೂ ಮೌಲಿಕ ಅಂಶಗಳನ್ನೊಳಗೊಂಡಿದೆ. ಕೃತಿಯ ಭಾಷೆ ಸರಳವೂ ಶುದ್ಧವೂ ಆಗಿದೆ.

ನರೋತ್ತಮ ದಾಸ (೧೬ನೆಯ ಶತಮಾನ)[ಬದಲಾಯಿಸಿ]

ಕೃಷ್ಣ ಮತ್ತು ಸುದಾಮರ ದಿವ್ಯ ಸ್ನೇಹವನನ್ನು ಕುರಿತ 'ಸುದಾಮ ಚರಿತ ಎಂಬ ಈತನ ಖಂಡಕಾವ್ಯ ಈತನಿಗೆ ಬ್ರಜಭಾಷೆಯ ಕವಿಗಳ ಪೈಕಿ ಗಣನೀಯ ಸ್ಥಾನವನ್ನು ದೊರಕಿಸಿಕೊಟ್ಟಿದೆ. ಕವಿ ಅವಧಿಯ ಪ್ರಾಂತಕ್ಕೆ ಸೇರಿದವನಾದುದರಿಂದ ಕೆಲವು ಪೂರ್ವೀ ಹಿಂದಿ ರೂಪಗಳು ಈತನ ಕಾವ್ಯದಲ್ಲಿ ಕಂಡುಬರುತ್ತವೆ.

ರಹೀಮ್ (೧೬ನೆಯ ಶತಮಾನ)[ಬದಲಾಯಿಸಿ]

ಈತ ಅಕ್ಬರನ ಆಸ್ಥಾನ ಕವಿ. ಐಹಿಕ ಜ್ಞಾನ ಸಮೃದ್ಧವಾಗಿರುವ ದೋಹಗಳಿಂದ ಈತ ಖ್ಯಾತನಾಗಿದ್ದಾನೆ. ಗಂಗ (೧೬ನೆಯ ಶತಮಾನ) ಎಂಬಾತನೂ ಅಕ್ಬರನ ಆಸ್ಥಾನ ಕವಿ. ಈತನ ಸಮಗ್ರ ಕೃತಿಗಳು ಲಭ್ಯವಾಗಿಲ್ಲ, ಕೆಲವು ಕವಿತೆಗಳು ಮಾತ್ರ ಸಿಕ್ಕಿವೆ.

೧೭ ಮತ್ತು ೧೮ನೆಯ ಶತಮಾನಗಳಲ್ಲಿ ಮುಖ್ಯವಾಗಿ ಪ್ರಭುತ್ವ ವರ್ಗದವರಿಗಾಗಿ ಮಾತ್ರ ಸಾಹಿತ್ಯ ರಚನೆಯಾಗುತ್ತಿತ್ತು. ಬುಂದೇಲಖಂಡ ಮತ್ತು ರಾಜಸ್ಥಾನಗಳಲ್ಲಿಯ ಹಿಂದೂ ರಾಜರ ಆಸ್ಥಾನ ಕವಿಗಳ ಕೈಯಲ್ಲಿ ಕೃಷ್ಣ ಕಾವ್ಯ ಹಿಂದಿನ ತನ್ನ ಭಕ್ತಿ ಸ್ವರೂಪವನ್ನು ಕಳೆದುಕೊಂಡಿತು. ಈ ಶತಮಾನಗಳಲ್ಲಿ ಕಂಡುಬರುವ ಮತ್ತೊಂದು ಮುಖ್ಯ ಪ್ರವೃತ್ತಿಯೆಂದರೆ ಆಗಿನ ಶ್ರೇಷ್ಠ ಕೃತಿಗಳೆಲ್ಲವೂ ಸಂಸ್ಕೃತದ ಅಲಂಕಾರ ಶಾಸ್ತ್ರವನ್ನು ಅವಲಂಬಿಸಿ ರಚಿತವಾಗಿವೆ. ಕವಿಗಳ ಸ್ವೋಪಜ್ಞತೆ ಶೃಂಗಾರ ಭಾವಗಳನ್ನು ಕುರಿತು ಉದಾಹರಿತವಾದ ಪದ್ಯಗಳಲ್ಲಿ ಮಾತ್ರ ಕಂಡುಬರುತ್ತದೆ. ವೀರರಸವನ್ನೂ ಭಕ್ತಿಯನ್ನೂ ಪ್ರತಿಪಾದಿಸುವ ಕೆಲವು ಕವಿಗಳು ಮಾತ್ರ ಇದಕ್ಕೆ ಅಪವಾದ.

ಕೇಶವದಾಸ (೧೭ನೆಯ ಸತಮಾನ)[ಬದಲಾಯಿಸಿ]

ಹೊಸ ಕವಿತಾಪಂಥದ ಮುಖಂಡ ಹಾಗೂ ಹಿಂದೀ ಸಾಹಿತ್ಯದ ನವರತ್ನಗಳಲ್ಲಿ ಈತನೊಬ್ಬ. ಈತನನ್ನು ಆಚಾರ್ಯನೆಂದು ಕರೆಯುತ್ತಾರೆ. ಬುಂದೇಲಖಂಡದ ಓರ್ಫ್ ರಾಜ್ಯದ ಆಸ್ಥಾನ ಕವಿ. ರಾಮಚಂದ್ರಿಕಾ ಈತನ ಪ್ರಸಿದ್ಧ ಕೃತಿ. ಇದರಲ್ಲಿ ಕವಿ ವಿವಿಧ ಛಂದಸ್ಸುಗಳನ್ನು ಬಳಸಿದ್ದಾನೆ. 'ಕವಿಪ್ರಿಯಾ ಎಂಬುದು ಅಲಂಕಾರಕ್ಕೆ ಸಂಬಂಧಪಟ್ಟಿದೆ ರಸಿಕಪ್ರಿಯ ನಾಯಕ ನಾಯಿಕೆ ಭೇದಗಳನ್ನು ತೋರಲು ರಚಿತವಾಗಿದೆ. ಕೇಶವನ ಶೈಲಿ ಅಲಂಕಾರನಿಬಿಡ ಮತ್ತು ಸಂಸ್ಕøತಮಯ. ಈತನ ಪದಸಂಪತ್ತಿನಲ್ಲಿ ಬುಂದೇಲಿಯ ಪ್ರಭಾವ ಕಂಡುಬರುತ್ತದೆ.

ರಸಖಾನ್ (೧೭ನೆಯ ಶತಮಾನ)[ಬದಲಾಯಿಸಿ]

ಈತ ದಿಲ್ಲಿಯ ಸರದಾರ. ವಿಠಲನಾಥನ ಶಿಷ್ಯ. ಕವಿತ ಮತ್ತು ಸವೈಯ ಛಂದಸ್ಸುಗಳಲ್ಲಿ ರಚಿತವಾಗಿರುವ ಈತನ ಕಾವ್ಯಗಳಲ್ಲಿ ಕೃಷ್ಣನನ್ನು ಕುರಿತು ಪ್ರೇಮವನ್ನೂ ಭಕ್ತಿಯನ್ನೂ ಕಾಣಬಹುದು. ಅನ್ಯಭಾಷಾ ಪ್ರಭಾವದಿಂದ ಈತನ ಕೃತಿ ಮುಕ್ತವಾಗಿದೆ.

ಸೇನಾಪತಿ (೧೭ನೆಯ ಶತಮಾನ)[ಬದಲಾಯಿಸಿ]

ಈತನ ಶೇಷ್ಠ ಕಾವ್ಯ 'ಕವಿತ್ತ-ರತ್ನಾಕರ ಇದು ಕವಿತ್ತ ಮತ್ತು ಸವೈಯ ಛಂದಸ್ಸುಗಳಲ್ಲಿದೆ. ಭಕ್ತಿ ಮತ್ತು ಅಲಂಕಾರಗಳ ಸಮ್ಮೇಳದಿಂದ ಕಾವ್ಯದ ಶೈಲಿ ಸುಂದರವಾಗಿದೆ. ಸಂವತ್ಸರದ ಆರು ಋತುಗಳನ್ನು ವರ್ಣಿಸುವ ಈತನ 'ಷಡೃತು ವರ್ಣನ ಎಂಬುದು ಬ್ರಜಭಾಷೆಯ ಪ್ರಕೃತಿ ಮೇಲಣ ಕವಿತೆಗಳಲ್ಲಿ ಅತ್ಯುತ್ತವಾದ್ದು.

ಬಿಹಾರಿ (೧೭ನೆಯ ಶತಮಾನ)[ಬದಲಾಯಿಸಿ]

ಈತ ಬಿಹಾರೀ ಸತ್ ಸೈ ಎಂಬ ಗ್ರಂಥದ ಕರ್ತೃ. ಇದರಲ್ಲಿ ಏಳುನೂರು ದೋಹಗಳಿವೆ. ಬ್ರಜ ಕವಿಗಳ ಪೈಕಿ ಬಿಹಾರಿಯೇ ಅತ್ಯಂತ ಜನಪ್ರಿಯ ಕವಿ. ಈತನ ಕವಿತಾ ಸಂಗ್ರಹದಲ್ಲಿಯ ಅನೇಕ ಪದ್ಯಗಳು ಅಲಂಕಾರ ಶಾಸ್ತ್ರದ ತತ್ತ್ವಗಳನ್ನು ಪ್ರತಿಪಾದಿಸಲು ರಚಿತವಾಗಿವೆ. ಈತನ 'ಸತ್ ಸೈ ಚಮತ್ಕಾರಗಳಿಂದಲೂ ಅದ್ಭುತವಾದ ಉತ್ಪ್ರೇಕ್ಷೆಗಳಿಂದಲೂ ಆಶ್ಚರ್ಯಕರವಾದ ಶ್ಲೇಷಗಳಿಂದಲೂ ಕೂಡಿದೆ. ಈತನ ಕಾವ್ಯದಲ್ಲಿ ಕೆಲವು ಪೂರ್ವ ಪ್ರಾಂತೀಯ ಶಬ್ದ ರೂಪಗಳು ಕಂಡುಬರುತ್ತವೆ.

ಮತಿರಾಮ್ (೧೭ನೆಯ ಶತಮಾನ)[ಬದಲಾಯಿಸಿ]

ಇವನ ಪ್ರಸಿದ್ಧ ಕೃತಿಗಳೆಂದರೆ ಲಲಿತ ಲಲಾಮ, ರಸರಾಜ ಮತ್ತು ಸತ್ ಸೈ ಅಲಂಕಾರಶಾಸ್ತ್ರ ಪ್ರವೀಣ. ಶೃಂಗಾರರಸದ ಕಡೆಗೆ ಇವನ ಒಲವು ಹೆಚ್ಚು, ಇವನ ಶೈಲಿ ಸರಳವಾಗಿದೆ. ನವೀನ ಭಾವಗಳನ್ನು ವರ್ಣಿಸುವುದರಲ್ಲಿ ಈತ ಯಶಸ್ವಿಯಾಗಿದ್ದಾನೆ, ಈತನ ಭಾಷೆಯಲ್ಲಿ ಪೂರ್ವೀ ಬ್ರಜ ರೂಪ ಕಂಡುಬರುತ್ತದೆ.

ಭೂಷಣ (೧೭ನೆಯ ಶತಮಾನ)[ಬದಲಾಯಿಸಿ]

ಈತ ಛತ್ರಸಾಲ್, ಶಿವಾಜಿ ಮತ್ತು ಸಾಹುಗಳ ಆಸ್ಥಾನಗಳಲ್ಲಿದ್ದವ. ಹಿಂದೂ ರಾಷ್ಟ್ರೀಯ ಭಾವನೆಯುಳ್ಳ ಕವಿ. 'ಶಿವರಾಜಭೂಷಣ' ಎಂಬುದು ಈತನ ಅತ್ಯುತ್ತಮ ಕೃತಿ. ಶೃಂಗಾರ ಕಾವ್ಯಕ್ಕೆ ಇದೊಂದು ಶ್ರೇಷ್ಠ ಉದಾಹರಣೆ. ಪ್ರತಿಯೊಂದು ಪದ್ಯವೂ ಶಿವಾಜಿಯ ಪ್ರಶಂಸೆಯನ್ನು ಒಳಗೊಂಡಿದೆ. ಈತನ ಕಾವ್ಯದಲ್ಲಿ ಅರಾಬಿಕ್ ಮತ್ತು ಪರ್ಷಿಯನ್ ಪದಗಳನ್ನು ಕಾಣಬಹುದು.

ಗೋರೇಲಾಲ್ (೧೮ನೆಯ ಶತಮಾನ)[ಬದಲಾಯಿಸಿ]

೧೮ನೆಯ ಶತಮಾನದ ಮೊದಲ ಕವಿಯಾದ ಈತ ಪನ್ನದ ಛತ್ರಸಾಲನ ಆಸ್ಥಾನ ಕವಿ. ಇವನ ಛತ್ರ ಪ್ರಕಾಶ ಎಂಬ ಗ್ರಂಥದ ವಸ್ತು ಬುಂದೇಲ್ ಖಂಡದ ಇತಿಹಾಸ. ಇದೊಂದು ದೋಹ ಮತ್ತು ಚೌಪೈ ಛಂದಸ್ಸುಗಳಲ್ಲಿ ರಚಿತವಾಗಿರುವ ಆಖ್ಯಾಯಿಕೆ. ಅವಧಿಯ ಮಹಾ ಕಾವ್ಯಗಳಲ್ಲಿ ಈ ರೀತಿಯ ಕವಿತೆಗಳ ಕುರುಹುಗಳು ಅಲ್ಲಲ್ಲಿ ಕಂಡುಬರುತ್ತವೆ. ಈ ದೃಷ್ಟಿಯಿಂದ ಬ್ರಜಭಾಷೆಯಲ್ಲಿ ಇದೊಂದು ಉತ್ತಮ ಕಾವ್ಯವೆನ್ನಬಹುದು. ಪೂರ್ವಪ್ರಾಂತ್ಯದ ರೂಪಗಳು ಇದರಲ್ಲಿ ಕಾಣಿಸಿಕೊಳ್ಳುತ್ತವೆ.

ದೇವ (೧೮ನೆಯ ಶತಮಾನ)[ಬದಲಾಯಿಸಿ]

ಬ್ರಜಭಾಷಾಕವಿತೆಯ ರೀತಿಪಂಥದ ಮುಖ್ಯ ಕವಿ. ಶೈಲಿ ವಿಚಾರದಲ್ಲಿ ಹೆಚ್ಚು ಪರಿಣತ. ಇಪ್ಪತ್ತನಾಲ್ಕಕ್ಕಿಂತಲೂ ಹೆಚ್ಚಾಗಿ ಗ್ರಂಥಗಳನ್ನು ರಚಿಸಿದ್ದಾನೆ. ಭಾವವಿಲಾಸ ಮತ್ತು ಅಷ್ಟಯಾಮ ಎಂಬವು ಈತನ ಪ್ರಸಿದ್ಧ ಗ್ರಂಥಗಳು. ಮೊದಲನೆಯದು ಅಲಂಕಾರಶಾಸ್ತ್ರವನ್ನೂ ಎರಡನೆಯದು ಶೃಂಗಾರ ರಸವನ್ನೂ ನಿರೂಪಿಸುತ್ತವೆ. ಇವುಗಳಲ್ಲಿ ನಾಯಕಿಯೊಬ್ಬಳ ದಿನಚರಿಯನ್ನು ವರ್ಣಿಸಲಾಗಿದೆ. ಹದಿನೆಂಟನೆಯ ಶತಮಾನದಲ್ಲಿ ಕಾವ್ಯಗಳ ರಚನೆ ಕಡಿಮೆಯಾಯಿತು. ಈ ಶತಮಾನದ ಪ್ರಧಾನ ಕವಿಗಳ ಪೈಕಿ ಘನಾನಂದ, ಭಿಖಾರೀದಾಸ ಮತ್ತು ಪದ್ಮಾಕರ್ ಎಂಬವರನ್ನು ವಿಶೇಷವಾಗಿ ಹೆಸರಿಸಬಹುದು. ಈ ಕವಿಗಳೆಲ್ಲ ಹೆಚ್ಚು ಜನಪ್ರಿಯರಾಗಿದ್ದರು ಮತ್ತು ಇವರೆಲ್ಲರೂ ಹದಿನೇಳನೆಯ ಶತಮಾನದ ಬ್ರಜ ಕಾವ್ಯಸಂಪ್ರದಾಯಗಳನ್ನೂ ಶೈಲಿಯನ್ನೂ ಅನುಸರಿಸಿದರು.

ಆಧುನಿಕ ಯುಗ[ಬದಲಾಯಿಸಿ]

ಹತ್ತೊಂಬತ್ತನೆಯ ಶತಮಾನ ಬ್ರಜ ಸಾಹಿತ್ಯದಲ್ಲಿ ಹೊಸ ರೂಪಗಳನ್ನೂ ಶೈಲಿಗಳನ್ನೂ ವಸ್ತುಗಳನ್ನೂ ಪದ ಪ್ರಯೋಗಗಳನ್ನೂ ತಂದಿತು. ಹಿಂದೀ, ಪ್ರದೇಶದ ಪ್ರಾತಿನಿಧಿಕ ಭಾಷೆಯಾದುದರಿಂದ ಬ್ರಜಭಾಷೆಹಿಂದೆ ಬಿದ್ದು, ಅದರ ಸ್ಥಾನವನ್ನು ಖಡೀಬೋಲಿ ಮೊದಲು ಗದ್ಯ ಅನಂತರ ಪದ್ಯವನ್ನು ಆಕ್ರಮಿಸಿತು. ಇಂಗ್ಲಿಷ್ ಸಾಹಿತ್ಯದ ಪ್ರಭಾವದಿಂದಲೂ ವಿದ್ಯಾಭ್ಯಾಸ, ಪಾಂಡಿತ್ಯ ಮತ್ತು ಆಡಳಿತಗಳ ಆವಶ್ಯಕತೆಗಳಿಂದಲೂ ಗದ್ಯಕ್ಕೆ ಪ್ರಾಶಸ್ತ್ಯ ದೊರೆಯಿತು. ಈ ವಿಷಮ ಪರಿಸ್ಥಿತಿಯಲ್ಲೂ ಬ್ರಜ ಭಾಷೆಯಲ್ಲಿ ಸಾಹಿತ್ಯ ಕೃಷಿ ಮುಂದುವರಿಯಿತು. ಹತ್ತೊಂಬತ್ತನೆಯ ಶತಮಾನದ ಬ್ರಜಬಾಷಾಕವಿಗಳ ಪೈಕಿ ಲಲ್ಲೂಲಾಲ್, ಸರ್‍ದಾರ್, ಗ್ವಾಲಾ, ಪಜ್‍ನೆಸ್, ಮತ್ತು ಭಾರತೇಂದು ಹರಿಶ್ಚಂದ್ರರ ಹೆಸರುಗಳನ್ನು ಉಲ್ಲೇಖಿಸಬಹುದು. ಇಪ್ಪತ್ತನೆಯ ಶತಮಾನದ ಪ್ರಸಿದ್ಧ ಕವಿಗಳೆಂದರೆ ಜಗನ್ನಾಥದಾಸ್ ರತ್ನಾಕರ್, ರಾಮಶಂಕರ್ ಶುಕ್ಲ ರಸಾಲ್, ವಿಯೋಗೀ ಹರಿ ಮತ್ತು ದುಲಾರೆ ಲಾಲ್ ಭಾರ್ಗವ.

ಬ್ರಜ ಜನಪದ ಸಾಹಿತ್ಯ[ಬದಲಾಯಿಸಿ]

ಇದು ಗದ್ಯರೂಪದಲ್ಲೂ ಪದ್ಯರೂಪದಲ್ಲೂ ದೊರೆಯುತ್ತದೆ. ಗದ್ಯ ಸಾಹಿತ್ಯ ಮುಖ್ಯವಾಗಿ ಜನಪದ ಕಥೆಗಳಿಂದ ಕೂಡಿದೆ. ಇವು ಧರ್ಮ, ನೀತಿ ಮತ್ತು ವಿನೋದಕ್ಕಾಗಿ ರಚಿತವಾದಂಥವು. ಜನಪದ ಕಥೆಗಳಲ್ಲಿ ಅನೇಕ ಆಶಯಗಳು(ಮೋಟಿಫ್) ಅಡಕವಾಗಿದೆ. ಜತೆಗೆ ಅಸಂಖ್ಯಾತ ಗಾದೆಗಳೂ ಸಿಕ್ಕುತ್ತವೆ. ಇವನ್ನು ಜನರು ಬೇರೆಬೇರೆ ಸಂದರ್ಭಗಳಲ್ಲಿ ತಮ್ಮ ದಿನಬಳಕೆಯ ಮಾತುಗಳಲ್ಲಿ ಬಳಸುತ್ತಾರೆ. ಜನಪದ ಕಾವ್ಯವನ್ನು ಎರಡು ಮುಖ್ಯ ವಿಭಾಗಗಳಾಗಿ ವಿಂಗಡಿಸಬಹುದು; ಲಾವಣಿಗಳು (ಬ್ಯಾಲೆಡ್ಸ್) ಮತ್ತು ಹಾಡುಗಳು. ಎರಡನೆಯದನ್ನು ಹೆಂಗಸರ ಹಾಡುಗಳು, ಗಂಡಸರು ಮಾತ್ರ ಹಾಡುವ ಹಾಡುಗಳು, ಋತು ಗೀತೆಗಳು, ಧಾರ್ಮಿಕ ಹಾಡುಗಳು, ವಿವಿಧ ಸಂಪ್ರದಾಯಗಳಿಗೆ ಸಂಬಂಧಪಟ್ಟ ಹಾಡುಗಳು ಮತ್ತು ಶಿಶುಪ್ರಾಸಗಳು ಎಂದು ಸ್ಥೂಲವಾಗಿ ವರ್ಗೀಕರಿಸಬಹುದು. ಈ ಸಾಹಿತ್ಯಕ್ಕೆ ಸಂಬಂಧಿಸಿದ ಅನೇಕ ಕೃತಿಗಳ ಸಂಗ್ರಹ ನಡೆದಿದೆ, ಕೆಲವು ಪ್ರಕಟಣೆಗೊಂಡಿವೆ. ಅವುಗಳ ವಿಮರ್ಶಾತ್ಮಕ ಅಧ್ಯಯನವೂ ನಡೆದಿದೆ.

ಉಲ್ಲೇಖ[ಬದಲಾಯಿಸಿ]

  1. https://www.vividlipi.com/news/literature-news/vajpayee-nenapu-nannolage/
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: