ಜೀವನಚರಿತ್ರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವನಚರಿತ್ರೆಯು ಒಬ್ಬ ವ್ಯಕ್ತಿಯ ಜೀವನವನ್ನು ಯಥಾವತ್ತಾಗಿ ಚಿತ್ರಿಸುವ ಕೃತಿ (ಬಯಾಗ್ರಫಿ). ಇದರಲ್ಲಿ ಆತ್ಮಚರಿತ್ರೆಯೂ (ಆಟೋಬಯಾಗ್ರಫಿ) ಸೇರುತ್ತದೆ. ಮೊತ್ತಮೊದಲನೆಯದಾಗಿ ಆ ಚರಿತ್ರೆಯ ವ್ಯಕ್ತಿ ಬದುಕಿದ್ದಿರಬೇಕು: ಬದುಕಿನ ಸಂಗತಿಗಳು ನಿಜವಾಗಿರಬೇಕು. ಪ್ರಪಂಚದ ಯಾವ ಭಾಷೆಯಲ್ಲಿಯೂ ಮೊಮ್ಮೊದಲಿನ ಜೀವನಚರಿತ್ರೆಗಳು ವಿಚಾರದೃಷ್ಟಿಯ ಫಲವಾದ ಐತಿಹಾಸಿಕ ಪ್ರಜ್ಞೆಯಿಂದ ಹುಟ್ಟಿದವಲ್ಲ; ಆರಾಧನಾದೃಷ್ಟಿಯಿಂದ ಬೆಳೆದವು. ಈ ಬಗೆಯ ಜೀವನಚರಿತ್ರೆಯ ಆಂಕುರಾವಸ್ಥೆಯನ್ನು ವಿಶ್ವದ ಜನಪದ ಗೇಯಕಾವ್ಯಗಳಲ್ಲಿಯೂ ಪೌರಾಣಿಕ ಕಥೆಗಳಲ್ಲಿಯೂ ಕಾಣಬಹುದು. ಹೋಮರ್ ಕವಿಯ ಇಲಿಯಡ್ ಮತ್ತು ಆಡಿಸಿ, ಭಾರತದ ರಾಮಾಯಣ, ಮಹಾಭಾರತಗಳು ಮತ್ತು ಈಚಿನ ಪುರಾಣಗಳು- ಇವೆಲ್ಲ ದೇವತೆಗಳ, ಮಹಾವೀರರ ಚರಿತ್ರೆಗಳ ಸಂಕಲನಗಳು, ಈಚಿನ ಕಾಲಗಳಲ್ಲಿ, ಗ್ರಂಥಸ್ಥವಾಗುವುದಕ್ಕೆ ಮೊದಲು ಮುಖಸ್ಥವಾಗಿ, ಕರ್ಣಾಕರ್ಣಿಕೆಯಾಗಿ, ಸಾಗಿಬಂದವು. ಅಲೌಕಿಕ ಪುರುಷರಾದ ದೇವತೆಗಳ, ವೀರರ ಆರಾಧನೆಯ ಮನೋವೃತ್ತಿಯೆ (ಹೀರೊ ವರ್ಷಿಪ್) ಜೀವನಚರಿತ್ರೆಯ ಹುಟ್ಟಿಗೆ ಮೂಲಕಾರಣ. ಅನ್ಯರ ವಿಚಾರ ತಿಳಿದುಕೊಳ್ಳಬೇಕು, ಅವರ ಆದರ್ಶಗುಣಗಳನ್ನು ಅನುಸರಿಸಬೇಕು ಎಂಬ ಪ್ರವೃತ್ತಿ ಮಾನವನಲ್ಲಿ ಸಹಜ ಪವೃತ್ತಿಯಾಗಿ ರೂಪಗೊಂಡಾಗ ಜೀವನಚರಿತ್ರೆಯ ಉಗಮಕ್ಕೆ ಭೂಮಿಕೆ ಸಿದ್ಧವಾಯಿತು. ಆದರ್ಶವ್ಯಕ್ತಿಯ ಆದರ್ಶಗುಣಗಳನ್ನು ಪ್ರಕಟಿಸುವ ನಡೆನುಡಿಗಳನ್ನು, ಎಂದರೆ ಚರಿತ್ರೆಯನ್ನು, ಕಥನ ಮಾಡುವ ಕಲೆ ಪದ್ಯಕಥೆಯಾಗಿ ಹಾಡಾಗಿ, ಬೆಳೆಯಿತು; ಮೊದಮೊದಲು ಮುಖಸ್ಥವಾಗಿ ಯಾವುದೋ ಒಂದು ಕಾಲದಲ್ಲಿ ಲಿಖಿತರೂಪ ಪಡೆಯಿತು. ದೇಶವಿದೇಶಗಳ ಮಹಾಕಾವ್ಯಗಳ ಮತ್ತು ಪುರಾಣಗಳ ಈ ಆದರ್ಶ ಪುರುಷರು ಕಾಲ್ಪನಿಕ ವ್ಯಕ್ತಿಗಳು; ಅವರು ಚಾರಿತ್ರಿಕ ಎನ್ನುವುದಕ್ಕೆ ಪ್ರಮಾಣಗಳಿಲ್ಲ. ಆದರೂ ಅವರನ್ನು ಕುರಿತ ಬರೆವಣಿಗೆ ಇಂದಿಗೂ ಗದ್ಯಕಥಾರೂಪದಲ್ಲಿ ಮುಂದುವರಿದಿದೆ. ಕನ್ನಡದಲ್ಲಿ, ಜೈನತೀರ್ಥಂಕರ ಪುರಾಣಗಳು, ಹರಿಹರನ ರಗಳೆಗಳು, ವೀರಶೈವ ಪುರಾಣಗಳು, ಈ ಪದ್ಯಕಾವ್ಯಗಳನ್ನು ಅನುಸರಿಸಿ ಈಗಲೂ ರಚಿತವಾಗುತ್ತಿರುವ ಆಧುನಿಕ ಗದ್ಯಗ್ರಂಥಗಳು (ಉದಾ: ಸಿದ್ದಯ್ಯ ಪುರಾಣಿಕರ ಶರಣಲೀಲಾಮೃತ)-ಇವೆಲ್ಲ ಈ ಬಗೆಯ ಜೀವನ ಚರಿತ್ರೆಗಳು. ಎಲ್ಲ ಭಾರತೀಯ ಭಾಷೆಗಳಲ್ಲೂ ಇವು ಉಂಟು. ಇವನ್ನು ಪ್ರಾಚೀನ ದೃಷ್ಟಿಯ ಜೀವನಚರಿತ್ರೆಗಳು ಎಂದು ಕರೆಯಬಹುದು.

ಲಕ್ಷಣಗಳು[ಬದಲಾಯಿಸಿ]

ಅರ್ವಾಚೀನ ಜೀವನಚರಿತ್ರೆಯ ಸ್ವರೂಪ ಲಕ್ಷಣಗಳು ಬೇರೆಯ ತೆರ. ಮಹಾಕಾವ್ಯ ಪುರಾಣಗಳ ಕಾಲ್ಪನಿಕ ವ್ಯಕ್ತಿಗಳನ್ನು ಕುರಿತು ಬರೆದರೂ ಅವರ ಮಾನವೀಯ ಗುಣಗಳಿಗೆ ಪ್ರಾಧಾನ್ಯ ಕೊಟ್ಟು, ಅಷ್ಟಾದಶವರ್ಣನೆ ಉತ್ಪ್ರೇಕ್ಷಾದಿ ಅಲಂಕಾರಗಳು ಮುಂತಾದ ಸಾಂಪ್ರದಾಯಿಕ ಕಾವ್ಯಾಂಶಗಳನ್ನು ಬಿಟ್ಟು, ಬಳಕೆಯಲ್ಲಿರುವ ಗದ್ಯದಲ್ಲಿ ಬರೆದ ಕಥೆಗಳನ್ನು ಜೀವನಚರಿತ್ರೆಯ ವ್ಯಾಪ್ತಿಗೆ ಸೇರಿಸಿ ಕೊಳ್ಳಬೇಕಾಗುತ್ತದೆ-ಅವು ಶಾಶ್ವತ ಜೀವನ ಮೌಲ್ಯಗಳನ್ನು ನಿರೂಪಿಸುವುದರಿಂದ ಚ. ವಾಸುದೇವಯ್ಯನವರ ಭೀಷ್ಮಚರಿತೆ ಇದಕ್ಕೆ ಉತ್ತಮ ಉದಾಹರಣೆ. ಆದರೆ, ಆಧುನಿಕ ಸಾಹಿತ್ಯವಿಮರ್ಶಕರ ದೃಷ್ಟಿಯಲ್ಲಿ ಜೀವನಚರಿತ್ರೆ ಎಂದರೆ ಬದುಕಿದ್ದ ಇಲ್ಲವೆ ಬದುಕಿರುವ ವ್ಯಕ್ತಿಯ ಆದ್ಯಂತ ಜೀವನನ್ನು ಆಕರ್ಷಕವಾಗಿ ನಿರೂಪಿಸುವ ಗದ್ಯಕಥನ. ಚಾರಿತ್ರಿಕ ಮಹಾಪುರುಷರು, ಮತಸ್ಥಾಪಕರು, ಸಾಧುಸಂತರು, ಕವಿಗಳು, ರಾಜಕಾರಣಿಗಳು, ಯುದ್ಧವೀರರು, ದೇಶಭಕ್ತರು, ಸಮಾಜಸೇವಕರು, ವಿದ್ವಾಂಸರು, ಸಂಗೀತಗಾರರು, ಚಿತ್ರಕಾರರು, ನಟರು ಮುಂತಾದ ಕಲಾವಿದರು, ವಿಜ್ಞಾನಿಗಳು, ತತ್ತ್ವಶಾಸ್ತ್ರಜ್ಞರು, ದಾರ್ಶನಿಕರು ಮುಂತಾಗಿ ಜೀವನದ ಯಾವುದಾದರೂ ಕಾರ್ಯಕ್ಷೇತ್ರದಲ್ಲಿ ಚಿರಕಾಲ ಜನಮನದಲ್ಲಿ ನಿಲ್ಲುವಂಥ ಕೆಲಸಮಾಡಿ, ಆಯಾ ಕ್ಷೇತ್ರದಲ್ಲಿ ಆದರ್ಶಪುರುಷರೆನಿಸಿ, ಕೀರ್ತಿವಂತರಾಗಿ ಬಾಳಿದ ವ್ಯಕ್ತಿಗಳು ಚರಿತ್ರಾರ್ಹರು. ವಿಶ್ವದ ಎಲ್ಲ ಸಾಹಿತ್ಯಗಳಲ್ಲಿಯೂ ಇಂಥ ಮಹನೀಯರನ್ನು ಕುರಿತೇ ಜೀವನಚರಿತ್ರೆಗಳು ಹುಟ್ಟಿರುವುದು.

ಜೀವನಚರಿತ್ರೆಯಲ್ಲಿ ಸತ್ಯಾಂಶಕ್ಕೆ (ಫ್ಯಾಕ್ಟ್) ಮಾತ್ರ ಸ್ಥಾನ; ಕಲ್ಪನಾಂಶಕ್ಕೆ (ಫಿಕ್ಷನ್) ಕಿಂಚಿತ್ತೂ ಎಡೆಯಿಲ್ಲ. ಚರಿತ್ರೆಯಂತೆ ಜೀವನಚರಿತ್ರೆಯೂ ಸತ್ಯ ಸಂಗತಿಗಳ ಪ್ರಾಮಾಣಿಕವಾದ ದಾಖಲೆ. ವಸ್ತುನಿಷ್ಟೆ ಅದರ ಪ್ರಮುಖಲಕ್ಷಣ. ಸಮಗ್ರತೆ ಅದರ ಇನ್ನೊಂದು ಪ್ರಮುಖಲಕ್ಷಣ. ಸಮಗ್ರತೆ ಎಂದರೆ ಚರಿತ್ರ ನಾಯಕನ ಜನನದಿಂದ ತೊಡಗಿ ಮರಣದವರೆಗಿನ ಜೀವನದ ಎಲ್ಲ ಹಂತಗಳ, ಎಲ್ಲ ಮುಖಗಳ, ಎಲ್ಲ ಸಾಧನೆಸಿದ್ಧಿಗಳ, ಕೂಡಿದಮಟ್ಟಿಗೂ ವಿವರಪೂರ್ಣವಾದ ಕಾಲಾನುಕ್ರಮವಾದ ನಿರೂಪಣೆ. ಅನೇಕ ಸಂದರ್ಭಗಳಲ್ಲಿ ಉಪಲಬ್ಧಜೀವನ ವಿವರಗಳು ಬಹಳ ಕಡಿಮೆಯಾಗಿದ್ದು, ಕೃತಿನಾಯಕನ ಕಾರ್ಯಸಾಧನೆಯ ವರ್ಣನೆಯೇ ಗ್ರಂಥದ ಬಹುಭಾಗವನ್ನು ಆಕ್ರಮಿಸಿರುವುದು ಪ್ರಸಿದ್ಧ ಜೀವನ ಚರಿತ್ರೆಗಳ ಪರಿಶೀಲನೆಯಿಂದ ವ್ಯಕ್ತಪಡುತ್ತದೆ. ಕೀರ್ತಿವಂತರಾದ ಮಹಾಪುರುಷರು ಅಜರಾಮರರಾಗಿರುವುದು ಎಲ್ಲರಿಗೂ ಸಾಮಾನ್ಯವಾದ ಉಣ್ಣುವುದು, ಉಡುವುದು, ಹೊಟ್ಟೆಪಾಡಿಗಾಗಿ ದುಡಿಯುವುದು ಮುಂತಾದ ದಿನನಿತ್ಯದ ಕಾರ್ಯಗಳಿಂದ ಅಲ್ಲ. ಇಂಥ ಸಾಮಾನ್ಯಸಂಗತಿಗಳಲ್ಲಿ ಕೂಡ ಮಹಾಪುರುಷರು ಒಂದು ವೈಲಕ್ಷಣ್ಯವನ್ನು ಮರೆಯುವುದುಂಟು; ಚಾಣಾಕ್ಷನಾದ ಜೀವನಚರಿತ್ರಕಾರ ಅಂಥವನ್ನು ಗಮನಿಸಿ, ಬರೆಹದಲ್ಲಿ ಸೆರೆಹಿಡಿದು, ತನ್ನ ಕೃತಿನಾಯಕ ಸಾಧಾರಣದಲ್ಲಿ ಅಸಾಧಾರಣ ಎಂಬುದನ್ನು ತೋರಿಸುತ್ತಾನೆ; ಜೀವನ ಚರಿತ್ರೆ ಸೊಗಸುವುದು ಇಂಥ ಸಣ್ಣಸಣ್ಣ ಸಂಗತಿಗಳ ನಕ್ಷತ್ರ ಮಿನುಗಿನಿಂದ. ಆದರೂ ಕೃತಿನಾಯಕ ಅಮರನಾಗಿರುವುದು ಅವನ ಮಹತ್ವಪೂರ್ಣ ಕಾರ್ಯಗಳಿಂದ, ಅವುಗಳ ಸವಿಕಟ್ಟಾದ ವರ್ಣನೆಯಲ್ಲಿ ಅವನ ವ್ಯಕ್ತಿತ್ವ ಮಹಿಮೆ ಮೂರ್ತಿಮತ್ತಾಗಿ ಮೂಡಿನಿಲ್ಲುತ್ತವೆ. ಈ ಮೂರ್ತಿದರ್ಶನ ಮಾಡಿಸುವುದು ಜೀವನ ಚರಿತ್ರ ಲೇಖನಕಲೆಯ ಪರಮಸಿದ್ಧಿ. ಹೀಗೆ ಚರಿತ್ರೆಯ ನಿರ್ಲಿಪ್ತ ವಸ್ತುನಿಷ್ಠೆ, ಕಾದಂಬರಿಯ ಕಲೆಗಾರಿಕೆ-ಇವೆರಡರ ಸಹಯೋಗಸಿದ್ಧಿಯೆ ಜೀವನ ಚರಿತ್ರೆ. ಈ ಸಿದ್ಧಿ ಕಷ್ಟಸಾಧ್ಯ. ಇಂಥ ಆದರ್ಶ ಜೀವನ ಚರಿತ್ರೆ ವಸ್ತುನಿಷ್ಠವಾದರೂ ಲೇಖಕನ ವ್ಯಕ್ತಿತ್ವದ ವರ್ಚಸ್ಸು ಕೃತಿಯ ಮೇಲೆ ಬಿದ್ದೇ ಇರುತ್ತದೆ. ಹಾಗಿಲ್ಲವಾದರೆ, ಎಲ್ಲ ಜೀವನ ಚರಿತ್ರೆಗಳೂ ಒಂದೇ ಮಾದರಿಯಲ್ಲಿದ್ದುಬಿಡಬಹುದು. ಪ್ರಸಿದ್ಧ ಫ್ರೆಂಚ್ ಲೇಖಕ ಮಾರ್ವಾ (1885-1967) ಹೇಳುವಂತೆ, ಮಹತ್ವಪೂರ್ಣ ಜೀವನವನ್ನು ಚೆನ್ನಾಗಿ ನಿರೂಪಿಸಿದರೆ, ಅದು ಒಂದು ಜೀವನತತ್ವವನ್ನು ಸೂಚ್ಯವಾಗಿ ತಿಳಿಸುತ್ತದೆ; ಅದನ್ನು ವಾಚ್ಯವಾಗಿ ತಿಳಿಸುವುದರಿಂದ, ಜೀವನ ಮಹತ್ವವೇನೂ ಹೆಚ್ಚುವುದಿಲ್ಲ. ಅದೇ ಲೇಖಕ ಜೀವನ ಚರಿತ್ರೆಯ ಲಕ್ಷಣವನ್ನು ಹೀಗೆ ನಿರೂಪಿಸಿದ್ದಾನೆ. ಜೀವನ ಚರಿತ್ರೆಯಲ್ಲಿ ವಿಜ್ಞಾನದ ನಿಷ್ಕøಷ್ಟತೆಯನ್ನೂ ಕಲೆಯ ಗಾಡಿ ಮೋಡಿಗಳನ್ನೂ ಕಾದಂಬರಿಯ ಸತ್ಯಾನುಭೂತಿಯನ್ನೂ ಚರಿತ್ರೆಯ ಘನಸತ್ಯವನ್ನೂ ನಿರೀಕ್ಷಿಸುತ್ತೇವೆ. ಈ ಓರೆಗಲ್ಲಿನಲ್ಲಿ ತೇರ್ಗಡೆಯಾಗುವ ಜೀವನ ಚರಿತ್ರೆಗಳ ಸಂಖ್ಯೆ ಯಾವ ಭಾಷೆಯಲ್ಲಿಯಾದರೂ ವಿರಳ; ಕನ್ನಡದಲ್ಲಂತೂ ಅತ್ಯಂತ ವಿರಳ. ಈ ವಿರಳ ಪಂಕ್ತಿಗೆ ಸೇರಿದ ಜೀವನಚರಿತ್ರೆ ಉತ್ತಮ ಸಾಹಿತ್ಯಕೃತಿಯಾಗಿ ನಿಲ್ಲುತ್ತದೆ.

ಪರಿಣಾಮ, ಪ್ರಯೋಜನಗಳ ದೃಷ್ಟಿಯಿಂದ, ಸಾಹಿತ್ಯಪ್ರಕಾರಗಳಲ್ಲಿ ಜೀವನ ಚರಿತ್ರೆಗೆ ವಿಶಿಷ್ಟಸ್ಥಾನವಿದೆ. ಜೀವನ ಚರಿತ್ರೆಗಳು ಸಾಧಾರಣವಾಗಿ ಆದರ್ಶ ಪುರುಷರನ್ನು ಕುರಿತವಾದ್ದರಿಂದ ಜನರ ಮುಂದೆ ಉತ್ತಮ ಆದರ್ಶಗಳನ್ನು ಅವು ಇಡಬಲ್ಲವು. ಅವು ಅಸಾಧ್ಯ ಆದರ್ಶಗಳೇನಲ್ಲ. ಚರಿತ್ರನಾಯಕರು ನಮ್ಮಂತೆಯೇ ಮನುಷ್ಯಮಾತ್ರರಾಗಿ ಬದುಕಿ ಬಾಳಿದವರಾದ್ದರಿಂದ, ಅವರು ಸಾಧಿಸಿದ ಸಿದ್ಧಿಯನ್ನು ನಾವೂ ಪ್ರಯತ್ನಪಟ್ಟರೆ ಸಾಧಿಸಬಹುದು ಎಂಬ ಕಾರ್ಯಸಾಧ್ಯವಾದ ಆದರ್ಶವನ್ನು ಜೀವನ ಚರಿತ್ರೆಗಳು ಮುಂದಿಡುತ್ತವೆ. ಮನೋರಂಜನೆಯನ್ನು ಪ್ರಧಾನಧ್ಯೇಯವಾಗಿ ಉಳ್ಳ ಕಾದಂಬರಿ ಯಾವಾಗಲೂ ಸತ್‍ಪ್ರಭಾವವನ್ನು ಬೀರುತ್ತದೆ-ಎಂದು ಹೇಳಲಾಗುವುದಿಲ್ಲ. ಗಣ್ಯವ್ಯಕ್ತಿಯ ಜೀವನ ಚರಿತ್ರೆ ಸತ್‍ಪ್ರಭಾವವನ್ನು ಬೀರುವುದು ಸುನಿಶ್ಚಿತ.

ಆತ್ಮಕಥೆ[ಬದಲಾಯಿಸಿ]

ಆತ್ಮಕಥೆಯೂ ಜೀವನಚರಿತ್ರೆಯೇ. ಜೀವನಚರಿತ್ರೆಯ ಲೇಖಕ ವೀಕ್ಷಕಸ್ಥಾನದಲ್ಲಿ ನಿಂತು ನಿರ್ಲಿಪ್ತನಾಗಿ ತನ್ನ ನಾಯಕನ ವಾಸ್ತವ ಚಿತ್ರವನ್ನು ಮುಂದಿಡಲು ಸಾಧ್ಯ. ದಿನಚರಿ, ಪತ್ರವ್ಯವಹಾರ, ಆಪ್ತೇಷ್ಟರ ಬರೆಹಗಳು ಮತ್ತು ಹೇಳಿಕೆಗಳು- ಜೀವನಚರಿತ್ರಕಾರನ ಲೇಖನಕಾರ್ಯದಲ್ಲಿ ನೆರವಿಗೆ ನಿಲ್ಲುತ್ತವೆ. ಆತ್ಮಚರಿತ್ರೆಯ ನಾಯಕ ಸ್ವಯಂ ಲೇಖಕನಾದ್ದರಿಂದ ಅವನಿಗೆ ಅಂಥ ದಾಖಲೆಗಳ ನೆರವಿನ ಅಗತ್ಯವಿಲ್ಲ. ಅವನು ತನ್ನ ಕಥೆಯನ್ನು ನೆನಪಿನಿಂದಲೇ ಬರೆಯುತ್ತಾನೆ. ದಿನಚರಿ ಇಟ್ಟಿದ್ದರೆ, ನೆನಪನ್ನು ಖಚಿತಪಡಿಸಿಕೊಳ್ಳಲು ಅದನ್ನು ಉಪಯೋಗಿಸಿಕೊಳ್ಳಬಹುದು. ಆತ್ಮಚರಿತ್ರೆ ಪ್ರಾಮಾಣಿಕ ಹೌದು, ಅಥವಾ ಅಲ್ಲ ಎನ್ನುವುದಕ್ಕೆ ನಮಗೆ ಯಾವ ಪ್ರಮಾಣವೂ ಇಲ್ಲ. ಆತ್ಮಚರಿತ್ರಕಾರ ಬದುಕಿನಲ್ಲಿಯೂ ಪ್ರಾಮಾಣಿಕ ವ್ಯಕ್ತಿಯಾಗಿದ್ದರೆ ಆತ್ಮಚರಿತ್ರೆಯೂ ಪ್ರಾಮಾಣಿಕವಾಗಿರುತ್ತದೆ. ಆತ್ಮನಿರೀಕ್ಷಣೆ, ಆತ್ಮವಿಮರ್ಶೆ, ಕಷ್ಟದ ಕೆಲಸ. ಆತ್ಮಸ್ತುತಿ, ಪರನಿಂದೆ, ಮನುಷ್ಯಸ್ವಭಾವಕ್ಕೆ ಅಂಟಿಬಂದ ಜಾಡ್ಯ. ಆತ್ಮಕಥೆ ಬರೆಯುವವನು ಮುಪ್ಪಿನಿಂದ ಮಾಗಿ ಆತ್ಮಸಂಸ್ಕಾರವುಳ್ಳವನಾಗಿದ್ದರೆ ಸಂಯಮಶೀಲನಾಗಿದ್ದರೆ ತನ್ನ ಜೀವನದ ಒಳಿತನ್ನೂ ಕೆಟ್ಟದ್ದನ್ನೂ ತಪ್ಪುನೆಪ್ಪುಗಳನ್ನೂ ಅವುಗಳಿಗೆ ಉಚಿತವಾದ ಸ್ಥಾನವನ್ನು ಕಲ್ಪಿಸಿ, ನಿರ್ವಿಕಾರಮನಸ್ಸಿನಿಂದ ಹೇಳಲು ಸಮರ್ಥನಾಗುತ್ತಾನೆ. ತನ್ನ ಬಣ್ಣಿಸಬೇಡ, ಇದಿರ ಹಳಿಯಲುಬೇಡ ಎಂಬ ಗುರಿಯನ್ನು ಮುಟ್ಟಿದ ಪ್ರಾಮಾಣಿಕ ಆತ್ಮಕಥೆ ಜೀವನಚರಿತ್ರೆಗಿಂತ ಹೆಚ್ಚು ಸ್ವಾರಸ್ಯವುಳ್ಳದ್ದು; ಅಷ್ಟೇ ಪರಣಾಮ, ಪ್ರಯೋಜನಗಳುಳ್ಳದ್ದು.

ಪಾಶ್ಚಾತ್ಯ ದೇಶಗಳಲ್ಲಿ[ಬದಲಾಯಿಸಿ]

ಪಾಶ್ಚಾತ್ಯ ದೇಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೇಳುವುದಾದರೆ, ಗ್ರೀಸಿನ ಪ್ಲೂಟಾರ್ಕ್ (ಸು.ಕ್ರಿ.ಶ. 46-120?) ಜೀವನಚರಿತ್ರೆಯ ಜನಕ ಎಂದು ವಿದ್ವಾಂಸರ ಅಭಿಪ್ರಾಯ. ತಾಮಸ್ ನಾರ್ತ್ (1535-1601) ಎಂಬಾತ ಪ್ಲೂಟಾರ್ಕ್‍ನ ಜೀವನಕಥೆಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾನೆ. ಷೇಕ್ಸ್‍ಪಿಯರನ ಕೆಲವು ನಾಟಕಗಳಿಗೆ ಅವು ಕಥಾವಸ್ತುವನ್ನು ಒದಗಿಸಿದುವು. ಪ್ಲೂಟಾರ್ಕ್‍ನ ಸಂಕ್ಷಿಪ್ತ ಜೀವನಚಿತ್ರಗಳು ಆಧುನಿಕ ವ್ಯಕ್ತಿಚಿತ್ರಕ್ಕೆ ಮೂಲಮಾದರಿ. ಅಲ್ಲಿಂದ ಮುಂದೆ ಯೂರೋಪಿನ ಪ್ರಮುಖ ಭಾಷೆಗಳಾದ ಗ್ರೀಕ್, ಲ್ಯಾಟಿನ್, ಫ್ರೆಂಚ್, ಇಂಗ್ಲಿಷ್ ಭಾಷೆಗಳಲ್ಲಿ ಜೀವನಚರಿತ್ರೆಯೂ ಅದರೊಂದಿಗೆ ಆತ್ಮಕಥೆಯೂ ಒಂದು ಸಾಹಿತ್ಯಪ್ರಕಾರವಾಗಿ ಬೆಳೆಯತೊಡಗಿತು.

ಇಂಗ್ಲಿಷ್ ಸಾಹಿತ್ಯದಲ್ಲಿ ಜೀವನಚರಿತ್ರೆಯ ಸಂಪ್ರದಾಯ ಐರ್ಲೆಂಡಿನ ಸಂತಚರಿತ್ರಕಾರ ಆ್ಯಡಮ್ನನ್ ರಚಿಸಿದ ಸಂತ ಕೊಲಂಬನ ಜೀವನ (ಕ್ತಿ.ಶ.690) ಎಂಬ ಕೃತಿಯಿಂದ ಮೊದಲಾಯಿತೆಂದು ತಿಳಿದುಬಂದಿದೆ. ಅನಂತರದ ಗಮನಾರ್ಹ ಚರಿತ್ರೆಗಳ ಸಮೀಕ್ಷೆಯಲ್ಲಿ ಮರೆಯಲಾರದ ಹೆಸರುಗಳೆಂದರೆ ಸ್ಯಾಮ್ಯುಯೆಲ್ ಜಾನ್‍ಸನ್ (1700-1784) ಮತ್ತು ಜೇಮ್ಸ್ ಬಾಸ್‍ವೆಲ್ (1740-1795). ಜಾನ್‍ಸನ್ ತನಗಿಂತ ಹಿಂದೆ ಆಗಿಹೋದ ಕವಿಗಳ ಸಂಕ್ಷಿಪ್ತ ಜೀವನಪರಿಚಯವನ್ನು ದಿ ಲೈವ್ಸ್ ಆಫ್ ದಿ ಪೊಯೆಟ್ಸ್ ಎಂಬ ಗ್ರಂಥದಲ್ಲಿ ಮಾಡಿಕೊಟ್ಟು, ಕವಿಗಳ ಜೀವನಚರಿತ್ರೆಗಳ ರಚನೆಗೆ ಮಾರ್ಗದರ್ಶಕನಾದ. ಜಾನ್‍ಸನ್‍ನನ್ನು ಎಡೆಬಿಡದೆ ಹಿಂಬಾಲಿಸಿ, ಅವನ ಚರ್ಯೆಯ ವಿವರಗಳನ್ನು ಮಾತುಕತೆಯನ್ನು ಅಂದಂದೇ ಬರೆದಿಟ್ಟುಕೊಂಡು, ಬಾಸ್‍ವೆಲ್ ಬರೆದ ಜಾನ್‍ಸನ್‍ನ ಜೀವನಚರಿತ್ರೆ ಲೋಕವಿಖ್ಯಾತ ಕೃತಿ ಎನ್ನಿಸಿದೆ. ಈ ಕೃತಿ ತಾನೂ ಅಮರವಾಗಿ, ಕೃತಿನಾಯಕನನ್ನು ಅಮರನನ್ನಾಗಿ ಮಾಡಿದೆ. ಜಾನ್‍ಸನ್ ಬರೆದ ಗ್ರಂಥದ ಮಾದರಿಯ ಇನ್ನೊಂದು ಗ್ರಂಥ ಕೊಲ್‍ರಿಜ್ ಕವಿ ಬರೆದ ಬಯೋಗ್ರ್ಯಾಫಿಯ ಲಿಟರೇರಿಯ (ಸಾಹಿತ್ಯಲೋಕದ ಜೀವನ ಚರಿತ್ರೆಗಳು). ಇದರಲ್ಲಿ ಜೀವನವೃತ್ತಾಂತಕ್ಕಿಂತ ಕಾವ್ಯವಿಮರ್ಶೆಗೆ ಪ್ರಾಧಾನ್ಯ. ವಿಕ್ಟೋರಿಯ ಮಹಾರಾಣಿಯ ಕಾಲದಲ್ಲಿ (1837-1901) ಜೀವನಚರಿತ್ರೆಯ ಬರೆವಣಿಗೆ ಹುಲುಸಾಗಿ ಸಾಗಿತು. ಈ ಕಾಲದಲ್ಲಿ ಜೀವನಚರಿತ್ರೆಗಳನ್ನು ಬರೆದವರಲ್ಲಿ ಲಾಕ್‍ಹಾರ್ಟ್ (1794-1854) ಸರ್ ಸಿಡ್ನಿ ಲೀ (1859-1874), ಲಿಟನ್ ಸ್ಟ್ರ್ಯಾಚಿ (1880-1932), ಹೆರಾಲ್ಡ್ ನಿಕಲ್‍ಸನ್ (1886-1968) ಜೀವನಚರಿತ್ರಕಾರರೆಂದೇ ಹೆಸರಾದವರು. ಸಿಡ್ನಿ ಲೀ ಷೇಕ್ಸ್‍ಪಿಯರನ ಹಾಗೂ ಏಳನೆಯ ಎಡ್ವರ್ಡ್ ದೊರೆಯ ಜೀವನಚರಿತ್ರೆಗಳನ್ನು ರಚಿಸಿದ್ದಾನೆ. ಸ್ಟ್ರ್ಯಾಚಿಯ ವಿಕ್ಟೋರಿಯ ಕಾಲದ ಮಹನೀಯರನ್ನು ಕುರಿತ ಎಮಿನೆಂಟ್ ವಿಕ್ಟೋರಿಯನ್ಸ್ ಎಂಬ ಜೀವನಕಥಾಮಾಲಿಕೆ ತುಂಬ ಪ್ರಸಿದ್ಧವಾದುದು. ಆ್ಯಂದ್ರೆ ಮಾರ್ವಾ ತನ್ನ ಜೀವನಚರಿತ್ರೆಯ ಮುಖಗಳು ಎಂಬ ಗ್ರಂಥದಲ್ಲಿ ಸ್ಟ್ರ್ಯಾಚಿಯ ಕಲೆಗಾರಿಕೆಯನ್ನು-ಅದರಲ್ಲಿಯೂ ವಿಕ್ಟೋರಿಯ ರಾಣಿಯನ್ನು ಕುರಿತ ಅವನ ಗ್ರಂಥದ ಗರಿಮೆಯನ್ನು-ಮುಕ್ತಕಂಠದಿಂದ ಹೊಗಳಿದ್ದಾನೆ. ಉಲ್ಲೇಖಾರ್ಹರಾದ ಇತರ ಜೀವನಚರಿತ್ರಕಾರರೆಂದರೆ-ಕಾದಂಬರಿಕಾರ ಡಿಕನ್ಸ್‍ನ ಜೀವನಚರಿತ್ರೆ ಬರೆದಿರುವ ಕಾದಂಬರಿಕಾರ ಇ.ಎಂ. ಫಾರ್‍ಸ್ಟರ್, ಮೆಕಾಲೆಯ ಜೀವನಚರಿತ್ರೆ ಬರೆದಿರುವ ಜಾರ್ಜ್ ಆಟೋ ಟ್ರೆವಿಲ್ಯನ್ಸ್(1838-1928); ಗ್ಲಾಡ್‍ಸ್ಟನ್ನನ ಜೀವನಚರಿತ್ರೆಯನ್ನು ಹೆರಾಲ್ಡ್ ನಿಕಲ್‍ಸನ್ ಕಡೆಯ ಪಯಣ (ದಿ ಲ್ಯಾಸ್ಟ್ ಜರ್ನಿ) ಎಂಬ ಹೆಸರಿಟ್ಟು ಆಕರ್ಷಕವಾಗಿ ಬರೆದಿದ್ದಾನೆ. ಲಾರೆನ್ಸ್ ಬಿನ್ಯನ್ ಎಂಬ ಕವಿ ಬರೆದಿರುವ, ಅಕ್ಟರ್‍ನನ್ನು ಕುರಿತ ಜೀವನಚರಿತ್ರೆ, ಕಾವ್ಯಮಯವಾದ ಗದ್ಯದಲ್ಲಿದ್ದು, ಕಾದಂಬರಿ ಎಂಬ ಭ್ರಮೆಯನ್ನು ಹುಟ್ಟಿಸುತ್ತದೆ; ಇದನ್ನು ದೇಜಗೌ ಸೊಗಸಾಗಿ ಕನ್ನಡಕ್ಕೆ ಅನುವಾದ ಮಾಡಿದ್ದಾರೆ. ಮೋನಿಯರ್ ವಿಲಿಯಮ್ಸ್ (1819-1899) ಅವರು ಬುದ್ಧನ ಜೀವನಚರಿತ್ರೆಯನ್ನು ಬರೆದ ಮೊದಲಿಗರಲ್ಲಿ ಗಣ್ಯರು. ಇಂಗ್ಲಿಷ್ ಜೀವನಚರಿತ್ರೆಯ ಪರಂಪರೆ ಬಹಳ ಪುರಾತನವಾದುದಾದರೂ ಆಧುನಿಕ ಜೀವನಚರಿತ್ರೆ 20ನೆಯ ಶತಮಾನದ ಮೊದಲ ದಶಕದಲ್ಲಿ ಪ್ರಾರಂಭವಾಯಿತೆಂದು ನಿಕಲ್‍ಸನ್ನನ ಹೇಳಿಕೆ. ಯೂರೋಪಿನ ಇತರ ಭಾಷೆಗಳ ಪೈಕಿ ಇಟಾಲಿಯನ್, ಫ್ರೆಂಚ್, ಜರ್ಮನ್ ಭಾಷೆಗಳಲ್ಲಿ ಜೀವನಚರಿತ್ರೆ ಗಮನಾರ್ಹವಾಗಿ ಬೆಳೆದುಬಂದಿದೆ. ಈ ದೇಶಗಳ ಕೆಲವರು ಇಂಗ್ಲಿಷಿನಲ್ಲಿ ಜೀವನಚರಿತ್ರೆಗಳನ್ನು ಬರೆದಿದ್ದಾರೆ. ಫ್ರಾನ್ಸಿನ ಸಾಹಿತಿ ರಾಮ್ಯಾನ್ ರಾಲಾನ್(1860-1944) ರಾಮಕೃಷ್ಣ ಪರಮಹಂಸರನ್ನೂ ಸ್ವಾಮಿ ವಿವೇಕಾನಂದರನ್ನೂ ತಮ್ಮ ಕೃತಿಗಳ ಮೂಲಕ ಪಾಶ್ಚಾತ್ಯ ದೇಶಗಳಿಗೆ ಪರಿಚಯ ಮಾಡಿಕೊಟ್ಟಿದ್ದಾರೆ. ಸ್ವತಃ ವರ್ಣಚಿತ್ರಕಾರನಾದ ಇಟಲಿಯ ವಸಾóರೀ ಎಂಬಾತ(1511-1574) ಯೂರೋಪಿನ ಪುನರುತ್ಥಾನಕಾಲದ ವರ್ಣಚಿತ್ರಕಾರರ ಜೀವನಚರಿತ್ರೆಗಳ ರಚನೆಯ ಮೂಲಕ ತುಂಬ ಪ್ರಸಿದ್ಧನಾಗಿದ್ದಾನೆ.

ಆತ್ಮಕಥೆಗೆಳ ಉದಾಹರಣೆಗಳು[ಬದಲಾಯಿಸಿ]

ಯಾವ ದೇಶದಲ್ಲಿಯೇ ಆಗಲಿ, ಯಾವ ಕಾಲದಲ್ಲಿಯೇ ಆಗಲಿ, ಜೀವನಚರಿತ್ರೆಗೆ ಹೋಲಿಸಿದರೆ ಆತ್ಮಚರಿತ್ರೆ ಸಂಖ್ಯಾದೃಷ್ಟಿಯಿಂದ ತುಂಬ ಕಡಿಮೆ. ಸಾಹಿತ್ಯಗುಣದ ದೃಷ್ಟಿಯಿಂದ, ಪಾಶ್ಚಾತ್ಯದೇಶಗಳಲ್ಲಿ ಉತ್ತಮೋತ್ತಮ ಕೃತಿಗಳು ಸೃಷ್ಟಿಯಾಗಿವೆ. ಇಂಗ್ಲೆಂಡಿನ ಅತ್ಯಂತ ಪ್ರಸಿದ್ಧ ಆತ್ಮಕಥನಕಾರರಲ್ಲಿ-ರೋಮನ್ ಚಕ್ರಾಧಿಪತ್ಯದ ಚರಿತ್ರೆಯನ್ನು ಬರೆದಿರುವ ಗಿಬನ್ (1737-1794), ಕವಿ-ವಿಮರ್ಶಕ ಎಡ್ಮಂಡ್ ಗಾಸ್ (1849-1928), ಕಾರ್ಡಿನಲ್ ನ್ಯೂಮನ್ (1801-1890) ತತ್ತ್ವಶಾಸ್ತ್ರಜ್ಞ ಹಾಗೂ ಅರ್ಥಶಾಸ್ತ್ರಜ್ಞ ಜೆ.ಎಸ್.ಮಿಲ್ (1806-0873), ಪ್ರಸಿದ್ಧ ತತ್ತ್ವಶಾಸ್ತ್ರಜ್ಞ ಹರ್ಬರ್ಟ್ ಸ್ಪೆನ್‍ಸರ್ (1820-1903) ಮತ್ತು ಅತ್ಯಂತ ಈಚಿನ ಬರಹಗಾರ ಸಾಮರ್‍ಸೆಟ್ ಮಾಮ್ (1874-1965) ಇವರನ್ನು ಸ್ಮರಿಸಬಹುದು. ಮಾಮ್‍ನ ಸಮಿಂಗ್ ಅಪ್‍ನಲ್ಲಿ (ಉಪಸಂಹಾರ) ಬಿಚ್ಚುಮನಸ್ಸಿನ ನಿಸ್ಸಂಕೋಚ ಆತ್ಮವಿಮರ್ಶೆ ಗಂಭೀರಗತಿಯಲ್ಲಿ ಸಾಗಿ, ಅತ್ಯಂತ ಸ್ವಾರಸ್ಯವಾಗಿದೆ. "ನಾನು ಈ ಆತ್ಮಚರಿತ್ರೆಯ ಬರೆವಣಿಗೆಯಲ್ಲಿ ಅಪಾರ ಶ್ರಮವಹಿಸಿದ್ದೇನೆ; ಅದಕ್ಕಾಗಿ ತುಂಬ ಸಂಶೋಧನೆ ಮಾಡಿದ್ದೇನೆ; ಆದರೂ ಇದೊಂದು ಕಟ್ಟು ಕಥಯೆ"ಎಂಬ ಮಾಮ್‍ನ ಮಾತು ಗಮನಾರ್ಹ. ಸ್ವಲ್ಪವೂ ಶ್ರಮವಹಿಸದೆ ನೆನಪುಗಳನ್ನೆ ನೆಮ್ಮಿ ಬರೆಯುವ ಆತ್ಮಚರಿತ್ರೆ ಅಪಕ್ವ ಲೇಖಕನ ಕೈಲಿ ಯಾವ ರೂಪವನ್ನೂ ತಳೆಯಬಹುದೆಂಬುದನ್ನು ಇದರಿಂದ ಊಹಿಸಿಕೊಳ್ಳಬಹುದು.

ಫ್ರಾನ್ಸಿನ ಕ್ರಾಂತಿಕಾರಿ ಲೇಖಕ ರೂಸೋ ತನ್ನ ಆತ್ಮಕಥೆಯನ್ನು ಕನ್‍ಫೆಷನ್ (ತಪ್ಪೊಪಿಗೆ) ಎಂದು ಕರೆದಿದ್ದಾನೆ. ಎಂದ ಮಾತ್ರಕ್ಕೆ ಗ್ರಂಥದ ತುಂಬ ಅವನ ದೋಷದೌರ್ಬಲ್ಯಗಳ ಅವಿವೇಕಗಳ ಪಾಪಕಾರ್ಯಗಳ ಉಲ್ಲೇಖವೇ ತುಂಬಿಕೊಂಡಿದೆ ಎಂದು ಭಾವಿಸಬಾರದು. ಎಂಥ ಪ್ರಾಮಾಣಿಕ ಲೇಖಕನಾದರೂ ತನ್ನ ಅವಗುಣಗಳೆಲ್ಲವನ್ನೂ ಒಂದನ್ನೂ ಬಿಡದೆ ಹೇಳಿಕೊಳ್ಳುವುದಿಲ್ಲ. ರೂಸೋ ತನ್ನ ತಪ್ಪುಗಳ ಒಪ್ಪಿಗೆಗೂ ಇತರ ಸಂಗತಿಗಳ ಜೊತೆಗೆ ಸಮಪ್ರಾಧಾನ್ಯವಿತ್ತಿದ್ದಾನೆ. ಡೆ ಕ್ವಿನ್ಸಿ ಎಂಬ ಇಂಗ್ಲಿಷ್ ಲೇಖಕನೂ ಇದೇ ಮಾದರಿಯ ಆತ್ಮಚರಿತ್ರೆಯೊಂದನ್ನು (ಕನ್‍ಫೆಷನ್ ಆಫ್ ಎನ್ ಓಪಿಯಂ ಈಟರ್) ಲೇಖಿಸಿದ್ದಾನೆ. ಆತ್ಮಚರಿತ್ರೆಯಲ್ಲಿ ಸತ್ಯನಿಷ್ಠೆ ಇರಬೇಕು ಸರಿ, ಆದರೆ ಅದು ಎಂಥ ಸತ್ಯ? ಸರ್ವರಿಗೂ ಸಾಮಾನ್ಯವಾದ ಚಿಲ್ಲರೆ ಸಂಗತಿಗಳ ಯಥಾವತ್ತಾದ ನಿರೂಪಣೆಯಲ್ಲಿ ನೈಜತೆ ತೋರಬಹುದು. ಅದರಲ್ಲಿ ಬದುಕಿನ ಅಂತರಂಗನಿಷ್ಠವಾದ ಸತ್ಯ ಅಡಗಿದ್ದೀತೆ? ಈ ಮೂಲಭೂತ ಪ್ರಶ್ನೆಗಳಿಗೆ ಉತ್ತರ ಕೊಡುವಂಥದು ಜರ್ಮನಿಯ ಮಹಾಕವಿ ಗಯಟೆಯ (1749-1832) ಮಹಾಕೃತಿ ಎನಿಸಿದ ಆತ್ಮಚರಿತೆ. ಕಾವ್ಯ ಮತ್ತು ಸತ್ಯ ಎಂಬ ಕೃತಿನಾಮ ಅವನ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಪ್ರಪಂಚದಲ್ಲಿ ಕೋಲಾಹಲವನ್ನುಂಟುಮಾಡಿದ ಅಡಾಲ್‍ಫ್ ಹಿಟ್ಲರನ ಆತ್ಮಕಥೆಯನ್ನು (ಮೈನ್ ಕಾಂಫ್) ಯಾರೂ ಮರೆಯುವಂತಿಲ್ಲ. ರಷ್ಯದ ಬರಹಗಾರ ಮ್ಯಾಕ್ಸಿಂ ಗಾರ್ಕಿಯ (1868-1936) ನನ್ನ ಬಾಲ್ಯ ಎಂಬುದು ಕನ್ನಡಕ್ಕೂ ಅನುವಾದವಾಗಿದೆ. ಇದೇ ಸಂದರ್ಭದಲ್ಲಿ, ರವೀಂದ್ರನಾಥಠಾಗೂರರ ಬಾಲ್ಯ ಕಥನವು ಕನ್ನಡದಲ್ಲಿ ಅವತರಿಸಿರುವುದನ್ನು ಗಮನಿಸಬಹುದು. ಮಹಾತ್ಮ ಗಾಂಧಿಯವರ ಆತ್ಮಕಥೆ (ಮೈ ಎಕ್ಸ್‍ಪೆರಿಮೆಂಟ್ಸ್ ವಿತ್ ಟ್ರೂತ್) ಲೋಕಪ್ರಸಿದ್ಧವಾಗಿದೆ. ಇಬ್ಬರು ಮೂವರ ಕೈಯಲ್ಲಿ ಇದು ಅನುವಾದಗೊಂಡು ಕನ್ನಡ ಸಾಹಿತ್ಯದ ಮೇಲೆ ತುಂಬಾ ಪ್ರಭಾವ ಬೀರಿದೆ. ಸರ್ ಎಂ ವಿಶ್ವೇಶ್ವರಯ್ಯನವರ `ನನ್ನ ಕಾರ್ಯನಿರತ ಜೀವನದ ನೆನಪುಗಳು ಇಂಗ್ಲಿಷಿನಲ್ಲಿದ್ದರೂ ಈಚಿನ ದಿನಗಳಲ್ಲಿ ಕನ್ನಡ ಲೇಖಕರಿಗೆ ಸ್ಫೂರ್ತಿದಾಯಕವಾಗಿ ಪರಿಣಮಿಸಿದೆ.

ಕನ್ನಡದಲ್ಲಿ[ಬದಲಾಯಿಸಿ]

ಕನ್ನಡದಲ್ಲಿ ಜೀವನಚರಿತ್ರೆಯ ಸ್ವರೂಪವನ್ನೀಗ ಗಮನಿಸಬಹುದು. ಸುಮಾರು 19ನೆಯ ಶತಮಾನದ ಅಂತ್ಯದವರೆಗೂ ಕನ್ನಡ ಸಾಹಿತ್ಯದ ಮೇಲೆ ಸಂಸ್ಕøತ ಸಾಹಿತ್ಯ ಪ್ರಭಾವಮುದ್ರೆ ಕಂಡುಬರುತ್ತದಷ್ಟೆ. ಇದರ ಪರಿಣಾಮವಾಗಿ, ಸಂಸ್ಕøತದ ಮಾದರಿಯನ್ನು ಅನುಸರಿಸಿ, ಕನ್ನಡದಲ್ಲಿಯೂ ಜೀವನಚರಿತ್ರೆ ಎನ್ನಬಹುದಾದ ಸಣ್ಣದೊಡ್ಡ ಕೃತಿಗಳು ಕಾವ್ಯರೂಪದಲ್ಲಿ ಬೆಳೆದುಬಂದವು. ಹರಿಹರನ ರಗಳೆಗಳು, ಜೈನತೀರ್ಥಂಕರ ಪುರಾಣಗಳು ಮತ್ತು ಈ ಬಗೆಯ ಇತರ ಕೃತಿಗಳನ್ನು ಔಪಚಾರಿಕವಾಗಿ ಜೀವನಚರಿತ್ರೆ ಎನ್ನಬಹುದಷ್ಟೆ. ಬದುಕಿ ಬಾಳಿದ ಚಾರಿತ್ರಿಕ ಪುರುಷರೂ ಕವಿಗಳೂ ಸಹ (ಉದಾ. ಬಸವೇಶ್ವರ, ಸಿದ್ದರಾಮ, ಚೆನ್ನಬಸವ, ಮಹಾದೇವಿಯಕ್ಕ, ರಾಘವಾಂಕ, ಕಂಠೀರವ ನರಸರಾಜ, ಚಿಕ್ಕದೇವರಾಜ, ಇತ್ಯಾದಿ) ಕಾವ್ಯದೇವಾಗಾರದಲ್ಲಿ ಅಲಂಕೃತ ಪೂಜಾಮೂರ್ತಿಗಳಾಗಿ ಪ್ರತಿಷ್ಠಿತರಾದರು. ಮಹಿಮೆಯುಳ್ಳ ಮಾನವರನ್ನು ದೇವಾಂಶ ಸಂಭೂತರು, ಅವತಾರ ಪುರುಷರು, ಎಂದು ಭಾವಿಸುವ ಜನತಾಂತರ್ದೃಷ್ಟಿ ಕವಿ ಕಲ್ಪನೆಯಲ್ಲಿ ಬಣ್ಣವೇರಿತು. `ಚರಿತೆ ಎಂಬ ಹೆಸರಿನಲ್ಲಿ `ಪುರಾಣ' ವಾಯಿತು ಕಾವ್ಯ. ಜನಪದಸಾಹಿತ್ಯದ ಹಾಡುಗಳಲ್ಲಿ, ಪದ್ಯಗಳಲ್ಲಿ, ಪರಾರ್ಥಕ್ಕಾಗಿ ಪ್ರಾಣತೆತ್ತವರ ತ್ಯಾಗಜೀವನದ ವರ್ಣನೆ ನಿಜಸಂಗತಿಗಳ ಸುತ್ತ ಜನಮನದ ಸಾಮುದಾಯಿಕ ಪ್ರಜ್ಞೆ ಕಟ್ಟಿದ ಚರಿತೆ ಎಂದೇ ಭಾವಿಸಬಹುದು. ಕೆರೆಗೆ ಹಾರ ಅಂಥದೊಂದು ಮನೋಜ್ಞ ಕೃತಿ. ಪ್ರಾಚೀನ ಕನ್ನಡ ಶಾಸನದಲ್ಲಿ ರಾಜರ, ವೀರರ, ಮುನಿಗಳ, ಮಹಾಸತಿಗಳ ಸಾಹಸ, ವೈರಾಗ್ಯ, ಪಾತಿವ್ರತ್ಯ ಮುಂತಾದ ಸದ್ಗುಣಗಳನ್ನು ಪ್ರಶಂಶಿಸುವ ಜೀವನ ಚಿತ್ರಗಳು ದೊರೆಯುತ್ತವೆ. ಬಾದಾಮಿಯ ಶಾಸನದಲ್ಲಿ-ಸಾಧುಗೆ ಸಾಧು, ಮಾಧುರ್ಯಂಗೆ ಮಾಧುರ್ಯ, ಬಾಧಿಪ್ಪ ಕಲಿಗೆ ಕಲಿಯುಗ ವಿಪರೀತನಾದ ಕಪ್ಪೆಯರಭಟ್ಟ ಮಾಧವನ ವ್ಯಕ್ತಿಚಿತ್ರ ಇನ್ನೊಂದು ಮಾದರಿ. ಕವಿರಾಜಮಾರ್ಗದಲ್ಲಿ (850) ಶ್ರೀವಿಜಯನೂ ಆದಿಪುರಾಣದಲ್ಲಿ (941) ಆದಿಪಂಪನೂ ಮಾಡಿರುವ ಸ್ವವಿಷಯ ಕಥನ ಆತ್ಮಚರಿತೆಯ ಬೀಜರೂಪಗಳನ್ನು ಒಳಗೊಂಡಿದೆ. ಪಂಪಭಾರತದಲ್ಲಿ ಅರಿಕೇಸರಿಯ ವರ್ಣನೆಯೂ ರನ್ನನ ಕಾವ್ಯಗಳಲ್ಲಿ ಬರುವ ದಾನಚಿಂತಾಮಣಿ ಅತ್ತಿಮಬ್ಬೆ, ಇರಿವಬೆಡಂಗ, ತೈಲಪರವ್ಯಕ್ತಿ ಚಿತ್ರಗಳೂ ಕಾಲ್ಪನಿಕವಾಗಿರದೆ ಚಾರಿತ್ರಿಕ ವ್ಯಕ್ತಿಗಳ ಚುಟಕ ಚರಿತ್ರೆಗಳೇ ಆಗಿವೆ. ಶಿವಶರಣರ ವಚನಗಳೂ ಪುರಂದರ ಕನಕರ ಪದಗಳೂ ಪ್ರಾಮಾಣಿಕ ರಚನೆಗಳಾಗಿದ್ದು, ಮಸಕುಮಸಕಾದರೂ ಶುದ್ಧಸ್ವರೂಪದ ಜೀವನಚರಿತ್ರೆಯ ತುಣುಕುಗಳನ್ನು ಬಿಟ್ಟುಕೊಡುತ್ತವೆ. ಮೊತ್ತದಲ್ಲಿ ಹೇಳುವುದಾದರೆ, ಮೇಲ್ಕಂಡಂಥ ರಚನೆಗಳೂ ಇವನ್ನು ಅನುಸರಿಸಿ 19ನೆಯ ಶತಮಾನದ ಕಡೆಯ ಭಾಗದಲ್ಲಿಯೂ 20ನೆಯ ಶತಮಾನದ ಆದಿ ದಶಕಗಳಲ್ಲೂ ರಚಿತವಾದ ಗುಣಕಥನ ಸ್ವರೂಪದ, ರಾಜಭಕ್ತಿ, ಗುರುಭಕ್ತಿ, ಸ್ವಮತಾಭಿಮಾನ, ಉತ್ಕಟ ದೇಶಭಕ್ತಿ ಮತ್ತು ವ್ಯಕ್ತಿಗೌರವ ಭಾವನೆಗಳಿಂದ ಪ್ರೇರಿತವಾಗಿ, ವೀರಪೂಜಾ ವಿಧಾನವನ್ನೂ ಆರಾಧನಾ ಮನೋಭಾವವನ್ನೂ ಪ್ರತಿಬಿಂಬಿಸುವ ಗದ್ಯಕೃತಿಗಳೂ ಆಧುನಿಕ ಜೀವನಚರಿತ್ರೆಗೆ ಸೇತುವೆಗಟ್ಟಿದ ಅಭಿಮಾನಾಸ್ಪದವಾದ ಶ್ಲಾಘ್ಯ ಪ್ರಯತ್ನಗಳು. ಸ್ವಾತಂತ್ರ್ಯಪೂರ್ವದ ಆ ಕಾಲದಲ್ಲಿ ರಾಷ್ಟ್ರೀಯ ಜಾಗೃತಿ ಹಾಗೂ ಅದರ ಪರಿಣಾಮವಾಗಿ ಹೊಮ್ಮಿದ ಸ್ವಭಾಷಾಭಿಮಾನ-ಇವು ಇತರ ಸಾಹಿತ್ಯಪ್ರಕಾರಗಳಿಗಿಂತ ಹೆಚ್ಚಾಗಿ ಜೀವನಚರಿತ್ರೆಯ ನಿರ್ಮಾಣಕ್ಕೆ ಪ್ರಧಾನ ಪ್ರೇರಕಶಕ್ತಿಗಳಾದವು. ಕಾವ್ಯ ಪ್ರತಿಭೆ ಇದ್ದವರೂ ಇಲ್ಲದವರೂ ಜನರಲ್ಲಿ ದೇಶಭಾಷಾಭಿಮಾನಗಳನ್ನೂ ಜಾಗೃತಗೊಳಿಸುವ ಉದ್ದೇಶದಿಂದ ಭರತಖಂಡದ ಗತವೈಭವದ ಹಾಗೂ ನವಚೈತನ್ಯದ ಪ್ರತೀಕಗಳಂತಿದ್ದ ಮಹಾಪುರುಷರ ಜೀವಿತದ ಸಿದ್ಧಿಸಾಧನೆಗಳನ್ನು ಪರಿಚಯ ಮಾಡಿಕೊಡುವ ಸಲುವಾಗಿ, ಜೀವನಚರಿತ್ರೆಗಳನ್ನು ಬರೆದರು. ಕನ್ನಡದ ಜೀವನಚರಿತ್ರೆಯ ಪ್ರಗತಿಪಥವನ್ನು ಗುರುತಿಸುವ ಕಾರಣಕ್ಕಾಗಿ ಕೆಲವು ಪ್ರಾತಿನಿಧಿಕ ಕೃತಿಗಳನ್ನು ಅವುಗಳ ಲೇಖಕರನ್ನು ಉಲ್ಲೇಖಿಸಬಹುದು : ರೆವರೆಂಡ್ ಕಿಟೆಲ್‍ರವರ ಯೇಸುಕ್ರಿಸ್ತ (ಸು.1850); ಹರ್ಡೇಕರ್ ಮಂಜಪ್ಪನವರ (1886-1947) ಬಸವ, ಬುದ್ಧ, ಗಾಂಧಿ, ರಾಮತೀರ್ಥ-ಇವರನ್ನು ಕುರಿತ ಜೀವನಚರಿತ್ರೆಗಳು; ದೊಡ್ಡಬೆಲೆ ನಾರಾಯಣಶಾಸ್ತ್ರಿಗಳ (ಸು.1850) ಶಂಕರಾಚಾರ್ಯರ ಚರಿತ್ರೆ; ಫ.ಗು.ಹಳಕಟ್ಟಿಯವರ (1880-1963) ಶಿವಶರಣರ ಚರಿತ್ರೆಗಳು; ಮ.ಪ್ರ.ಪೂಜಾರರ ಮಹಮದ್ ಪೈಗಂಬರ್; ಹುರಳಿ ಭೀಮರಾಯರ ರಜಿóಯಾಬೇಗಮ್; ಆನವಟ್ಟಿ ರಾಮರಾಯ ನೆಪೋಲಿಯನ್ ಬೋನಪಾರ್ಟೆ (1866). ವಿಕ್ಟೋರಿಯ ಮಹಾರಾಣಿ 7ನೆಯ ಮತ್ತು 8ನೆಯ ಎಡ್ವರ್ಡ್ ಪಂಚಮ ಜಾರ್ಜರು, ಚಾಮರಾಜೇಂದ್ರ ಒಡೆಯರು (ಎಂ.ಸಿಂಗ್ರಯ್ಯ), ಮೈಸೂರಿನ ರಾಜ್ಯಲಕ್ಷ್ಮಿಯರು (ಸುಭೋದ ಎಂ.ರಾಮರಾವ್)-ಇವರನ್ನು ಕುರಿತ ಗ್ರಂಥಗಳು ಅಂದಿನ ರಾಜಭಕ್ತಿಯ ಸಂಕೇತಗಳು. ಇಲ್ಲಿ ಹೆಸರಿಸಿದ ಹೆಸರಿಸದೇ ಬಿಟ್ಟ ಜೀವನಚರಿತ್ರೆಗಳು-ಸ್ವಾತಂತ್ರ್ಯಪೂರ್ವದ ಮೊದಲಹಂತದ ಒಂದೆರಡು ದಶಕಗಳಲ್ಲಿ ರಚಿತವಾದವು. ಇವು ಆಧುನಿಕ ದೃಷ್ಟಿಯ ಜೀವನಚರಿತ್ರೆಯ ಬೆಳಸಿಗೆ ಕ್ಷೇತ್ರವನ್ನು ಹದಮಾಡಿದವು.

ಸ್ವಾತಂತ್ರ್ಯಪೂರ್ವದ ಎರಡನೆಯ ಹಂತದಲ್ಲಿ-ಎಂದರೆ, ಈ ಶತಮಾನದ ಪೂರ್ವಾರ್ಧದ ಎರಡನೆಯ ದಶಕದಲ್ಲಿ ತೊಡಗಿ, ಮೂರು ನಾಲ್ಕನೆಯ ದಶಕದಲ್ಲಿ ತಕ್ಕಮಟ್ಟಿಗೆ ಸಮೃದ್ಧವಾಗಿ ಬೆಳೆದ ಜೀವನಚರಿತ್ರೆಯ ಬೆಳೆಸನ್ನು ಕಲಾಪ್ರಜ್ಞೆಯಿಂದಲೂ ಸಾಹಿತ್ಯಸಿದ್ಧಿಯ ಬಲದಿಂದಲೂ ಕೃಷಿಮಾಡಿದವರಲ್ಲಿ ಚ.ವಾಸುದೇವಯ್ಯ, ಎಂ.ಎಸ್.ಪುಟ್ಟಣ್ಣ, ಆಲೂರು ವೆಂಕಟರಾಯ, ಡಿ ವಿ ಗುಂಡಪ್ಪ, ಸಿ.ಕೆ.ವೆಂಕಟರಾಮಯ್ಯ, ಎ.ಆರ್.ಕೃಷ್ಣಶಾಸ್ತ್ರೀ, ಟ.ಎಸ್.ವೆಂಕಣ್ಣಯ್ಯ, ಕುವೆಂಪು-ಇವರು ಅಗ್ರಮಾನ್ಯರು. ಈ ಮಹನೀಯರು ಸಾಹಿತ್ಯದ ಇತರ ಪ್ರಕಾರಗಳಲ್ಲೂ ಉತ್ತಮ ಕೃತಿಗಳನ್ನು ರಚಿಸಿದವರಾದ್ದರಿಂದ ಇವರು ರಚಿಸಿದ ಜೀವನಚರಿತ್ರೆಗಳು ಈ ಸಾಹಿತ್ಯಪ್ರಕಾರದಲ್ಲಿ ಮಾದರಿಗಳಾಗಿ ನಿಂತು, ಜೀವನಚರಿತ್ರೆಗೆ ಗಣ್ಯವಾದ ಸ್ಥಾನ ದೊರೆತು, ಮುಂದಿನ ಪೀಳಿಗೆಯ ಜೀವನಚರಿತ್ರಕಾರರಿಗೆ ಮಾರ್ಗಕಲ್ಪನೆ ಮಾಡಿಕೊಟ್ಟವು. ಚ.ವಾಸುದೇವಯ್ಯನವರು ಆರ್ಯಕೀರ್ತಿ ಮತ್ತು ಭೀಷ್ಮಚರಿತ್ರೆಗಳ ಮೂಲಕ ಜೀವನಚರಿತ್ರೆಯನ್ನು ಸಾಹಿತ್ಯದಮಟ್ಟಕ್ಕೆ ಏರಿಸಬಲ್ಲ ಗದ್ಯಶೈಲಿಯನ್ನು ರೂಪಿಸಿದರು. ಎಂ.ಎಸ್.ಪುಟ್ಟಣ್ಣಯ್ಯನವರು, ಕುಣಿಗಲ್ ರಾಮಶಾಸ್ತ್ರಿ, ಮಹಮೂದ್ ಗವಾನ್, ಸರ್ ಸಾಲಾರ್‍ಜಂಗ್ ಇವರಂಥ ಅಪರೂಪವ್ಯಕ್ತಿಗಳನ್ನು ಆರಿಸಿಕೊಂಡು ಸ್ವಂತ ಪರಿಶ್ರಮದಿಂದ ಸಾಮಗ್ರಿಸಂಕಲನಮಾಡಿ, ಜೀವನಚರಿತ್ರಕಾರನ ಕಾರ್ಯವಿಧಾನಕ್ಕೆ ಮೇಲ್ಪಂಕ್ತಿಯಾದರು. ಆಲೂರು ವೆಂಕಟರಾಯರು ಕರ್ನಾಟಕದ ವೀರರತ್ನಗಳು, ಗಾಂಧಿಯವರ ಚರಿತ್ರೆ, ವಿದ್ಯಾರಣ್ಯಚರಿತ್ರೆ-ಗಂಡುಶೈಲಿಯ ಈ ಕೃತಿಗಳನ್ನು ರಚಿಸಿ ಜೀವನಚರಿತ್ರೆಯನ್ನು ಒಂದು ಶಕ್ತಿಯುತ ಆಯುಧವನ್ನಾಗಿ ರೂಪಿಸಿಕೊಂಡು ದೇಶಾಭಿಮಾನವನ್ನೂ ಸ್ವಾತಂತ್ರ್ಯಪ್ರೇಮವನ್ನೂ ಕ್ರಾಂತಿಕಾರಕ ದೃಷ್ಟಿಯನ್ನೂ ಹೇಗೆ ಸಾಹಿತ್ಯದ್ವಾರದಿಂದ ಮೂಡಿಸಬಹುದೆಂಬುದನ್ನು ಸಿದ್ಧಪಡಿಸಿದರು. ಕೃಷ್ಣಶಾಸ್ತ್ರೀ ಮತ್ತು ವೆಂಕಣ್ಣಯ್ಯ ಇವರು ಜೊತೆಗೂಡಿ ಇಲ್ಲವೆ ಬೇರೆಯಾಗಿ ಮೂಲಬಂಗಾಳಿ ಗ್ರಂಥಗಳ ಆಧಾರದಿಂದ ಶ್ರೀರಾಮಕೃಷ್ಣ ಪರಮಹಂಸ, ನಾಗಮಹಾಶಯ, ಶ್ರೀರಾಮಕೃಷ್ಣಲೀಲಾಮೃತ ಮುಂತಾದ ಕೃತಿಗಳನ್ನು ಕನ್ನಡಕ್ಕೆ ತಂದು ಉತ್ತಮ ಮಾದರಿಗಳನ್ನು ಮುಂದಿಟ್ಟರಲ್ಲದೆ, ಜೀವನಚರಿತ್ರೆಯ ಸಂಪತ್ತನ್ನು ವೃದ್ಧಿಮಾಡಲು ಇಂಗ್ಲಿಷಿನ ಜೊತೆಗೆ ಭಾರತೀಯ ಭಾಷೆಗಳನ್ನೂ ಹೇಗೆ ಬಳಸಿಕೊಳ್ಳಬಹುದೆಂಬುದನ್ನು ತೋರಿಸಿಕೊಟ್ಟರು. ಕುವೆಂಪು ಅವರು ತಮ್ಮ ಶ್ರೀರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದ ಕೃತಿಗಳನ್ನು ರಚಿಸಿ, ಜೀವನಚರಿತ್ರೆಯ ಅಚ್ಚಿನಲ್ಲಿ ಸಾಹಿತ್ಯದ ಸತ್ಯವನ್ನು ಎರಕಹೊಯ್ಯವ ಕಲೆಗಾರಿಕೆಯನ್ನು ಮೆರೆದರು. ಸಿ.ಕೆ.ವೆಂಕಟರಾಮಯ್ಯನವರು ತಮ್ಮ `ಆಳಿದ ಮಹಾಸ್ವಾಮಿಯವರು (ನಾಲ್ವಡಿ ಕೃಷ್ಣರಾಜ ಒಡೆಯರು) ಎಂಬ ಕೃತಿಯಿಂದ ಸಮಕಾಲೀನ ವ್ಯಕ್ತಿಯ ಪೂರ್ಣಪ್ರಮಾಣದ ಜೀವನಚರಿತ್ರೆಯನ್ನು ಬರೆಯುವ ಶ್ರಮಸಾಧ್ಯವಾದ ಕಾರ್ಯವಿಧಾನಕ್ಕೆ ಶ್ರೇಷ್ಠನಿದರ್ಶನವನ್ನು ಒದಗಿಸಿದರು. ಮಾಸ್ತಿ ವೆಂಕಟೇಶ ಅಯ್ಯಂಗಾರರು ತಮ್ಮ ಕೃತಿನಾಯಕ ರವೀಂದ್ರನಾಥ ಠಾಕೂರರ ನೆಲೆವೀಡಿಗೆ ಯಾತ್ರೆ ಬೆಳೆಸಿ, ಜೀವನಚರಿತ್ರಕಾರನ ಕರ್ತವ್ಯನಿಷ್ಠೆಯನ್ನು ದೃಷ್ಟಾಂತಗೊಳಿಸಿದರು. ದಿವಾನ್ ಸಿ.ರಂಗಾಚಾರ್ಲು, ಗೋಪಾಲ ಕೃಷ್ಣ ಗೋಖಲೆ-ಈ ಕೃತಿಗಳ ನಿರ್ಮಾಪಕರಾದ ಡಿ.ವಿ.ಗುಂಡಪ್ಪನವರು ಜೀವನಚರಿತ್ರೆಯಲ್ಲಿ ಚರಿತ್ರಕಾರನ ನಿಷ್ಕøಷ್ಟತೆ ಮತ್ತು ವಸ್ತುನಿಷ್ಠಶೈಲಿ, ವ್ಯಕ್ತಿಚಿತ್ರಣದಲ್ಲಿ ಪ್ರಮಾಣಬದ್ಧವೂ ಸಾರಗ್ರಾಹಿಯೂ ಆದರ್ಶದರ್ಶಕವೂ ಆದ ಶಿಲ್ಪಚಾತುರ್ಯ-ಇವನ್ನು ಪ್ರಯತ್ನಪೂರ್ವಕ ಸಾಧಿಸುವ ಪರಿಶ್ರಮಕ್ಕೆ ಮೇಲುಪಂಕ್ತಿ ಹಾಕಿದರು. ಸುಭೋಧ ರಾಮರಾಯರು ಪುರಾಣಪುರುಷರು, ಚರಿತ್ರೆಯ ಮಹಾಪುರುಷರು, ಮತಾಚಾರ್ಯರು, ಸಾಧುಸಂತರು, ದೇಶಭಕ್ತರು, ಮುಂತಾಗಿ ನಾನಾ ಜೀವನ ಕ್ಷೇತ್ರಗಳನ್ನು ಪ್ರತಿನಿಧಿಸುವ ಆದರ್ಶಪುರುಷರ ವಿಷಯವಾಗಿ ಬಾಲಕ ಬಾಲಕಿಯರಿಗಾಗಿ ಸುಮಾರು 140 ಸಣ್ಣ ಜೀವನಚರಿತ್ರೆಗಳನ್ನು ಬರೆದು, ಎಳೆಯ ಮಕ್ಕಳು ಸತ್ಪ್ರಜೆಗಳಾಗಿ ಬಾಳಲು ಉತ್ತಮ ಆದರ್ಶಗಳನ್ನು ಮುಂದಿಡುವ ಸಾಹಿತ್ಯಕಾರ್ಯಯೋಜನೆಗೆ ಮಾರ್ಗದರ್ಶಕರಾದರು. ದ.ಕೃ.ಭಾರದ್ವಾಜರು ಕನ್ನಡನುಡಿಭಕ್ತರ ಜೀವನಚಿತ್ರಮಾಲಿಕೆಯನ್ನು ಕನ್ನಡನುಡಿಯಲ್ಲಿ ಪ್ರಕಟಿಸಿ (ಸು.1938-40), ಅನೇಕ ಬರೆಹಗಾರರ ಪರಿಚಯ ಮಾಡಿಕೊಟ್ಟರು. ಸಿದ್ದವನಹಳ್ಳಿ ಕೃಷ್ಣಶರ್ಮರು ತಮ್ಮ ಕನ್ನಡದ ಕಿಡಿಗಳು, ದೀಪಮಾಲೆ, ಕುಲದೀಪಕರು, ವಧಾಯಾತ್ರೆ, ಪರ್ಣಕುಟಿ ಎಂಬ ಗ್ರಂಥಗಳಲ್ಲಿ ತಾವು ಹತ್ತಿರದಿಂದ ಕಂಡುಬಲ್ಲ ಕನ್ನಡ ಸಾಹಿತಿಗಳ ಮತ್ತು ಗಾಂಧಿ, ಕಸ್ತೂರ ಬಾ, ವಲ್ಲಭಭಾಯಿ ಪಟೇಲ್, ರಾಜಾಜಿ, ವಿಶ್ವೇಶ್ವರಯ್ಯ ಮುಂತಾದ ಭಾರತ ಪುತ್ರಪುತ್ರಿಯರ ಭಾವಚಿತ್ರಗಳನ್ನು ತಮ್ಮದೇ ಆದ ಚುರುಕು ನಡೆಯ ಗದ್ಯದಲ್ಲಿ ರಚಿಸಿ ಹೊಸ ಮಾದರಿಯ ವ್ಯಕ್ತಿಚಿತ್ರಣಕಲೆಯನ್ನು ಪ್ರವರ್ತನ ಮಾಡಿದರು.

ಸಿ.ಕೆ.ವೆಂಕಟರಾಮಯ್ಯನವರು ಮಹಮದ್ ಪೈಗಂಬರ್, ಗೌತಮ ಬುದ್ಧ, ಹರ್ಷವರ್ಧನ ಇವುಗಳ ಮೂಲಕ ಗಣ್ಯ ಜೀವನಚರಿತ್ರಕಾರರಾದರು. ಜವಾಹರಲಾಲ್ ನೆಹರು ಅವರನ್ನು ಕುರಿತು ಅವರನ್ನು ಸಿ.ಅಶ್ವತ್ಥನಾರಾಯಣರಾವ್ (1936) ಮತ್ತು ಕಂದಾಡೆ ಕೃಷ್ಣಯ್ಯಂಗಾರ್ (1945) ಬರೆದ ಕೃತಿಗಳು, ಡಿ,ರೇಣುಕಾಚಾರ್ಯರ ಕೇಶವಚಂದ್ರ ಸೇನ್ (1939), ಶ್ರೀರಂಗದ ಕೆಮಾಲ್ ಪಾಶ, ಎನ್.ಎಸ್.ವೀರಪ್ಪನವರ ಐಸಾಕ್ ನ್ಯೂಟನ್ ಮತ್ತು ಚಾಲ್ರ್ಸ್ ಡಾರ್ವಿನ್, ಬಿ.ಚಂದ್ರಶೇಖರಯ್ಯನವರ ಅಬ್ರಹಾಂ ಲಿಂಕನ್ (1930)-ಇವು ಸ್ವಾತಂತ್ರ್ಯಪೂರ್ವದಲ್ಲಿ ಜೀವನಚರಿತ್ರೆಗೆ ಕನ್ನಡದಲ್ಲಿ ಸ್ಥಿರವಾದ ಸ್ಥಾನವನ್ನು ಕಲ್ಪಿಸಿಕೊಟ್ಟ. ಮೈತುಂಬಿಕೊಂಡ ಜೀವನಚರಿತ್ರೆಗಳಲ್ಲಿ ಉಲ್ಲೇಖಾರ್ಹವಾದ ಕೆಲವು ಮಾತ್ರ. ಸಾಹಿತ್ಯ ಚರಿತ್ರೆಯಲ್ಲಿ ಪ್ರಸಿದ್ಧರಾದ ವ್ಯಕ್ತಿಗಳ ಬಗೆಗೆ ಅಭ್ಯಾಸಪೂರ್ಣವೂ ಸಂಶೋಧನಾತ್ಮಕವೂ ಆದ ಜೀವನಚರಿತ್ರೆಗಳಿಗೆ ಎಂ.ಆರ್.ಶ್ರೀನಿವಾಸಮೂರ್ತಿಗಳ ಭಕ್ತಿಭಂಡಾರಿ ಬಸವಣ್ಣ (1931), ಕೆ.ಜಿ.ಕುಂದಣಗಾರರ ಮಹಾದೇವಿಯಕ್ಕ (1937), ಮುಳಿಯ ತಿಮ್ಮಪ್ಪಯ್ಯನವರ ನಾಡೋಜ ಪಂಪ-ಇವು ಶ್ರೇಷ್ಠ ಮಾದರಿಗಳಾದುವು. ಸ್ವಾತಂತ್ರ್ಯೊತ್ತರಕಾಲದಲ್ಲಿ ವಿಚಾರಪರತೆ, ವೈಜ್ಞಾನಿಕದೃಷ್ಟಿ, ಸಂಶೋಧಕ ಪ್ರವೃತ್ತಿ, ಕನ್ನಡ ಭಾಷಾಸಾಹಿತ್ಯಗಳ ವಿದ್ಯಾರ್ಥಿಗಳಲ್ಲದವರಲ್ಲಿಯೂ ಕನ್ನಡದಲ್ಲಿ ಜ್ಞಾನದಾಯಕ ಗ್ರಂಥರಚನೆ ಮಾಡಬೇಕೆಂಬ ಹಂಬಲ-ಇವುಗಳ ಪ್ರಭಾವದಿಂದ ಕೆಲವು ಸಮರ್ಥ ಲೇಖಕರು (ಇವರಲ್ಲಿ ಕೆಲವರು ಸ್ವಾತಂತ್ರ್ಯಪೂರ್ವದಲ್ಲಿ ಗ್ರಂಥ ರಚನೆ ಮಾಡಿದವರು) ಮಾದರಿಯಾಗುವಂಥ ಗ್ರಂಥಗಳನ್ನು ರಚಿಸಿದ್ದಾರೆ. ಈ ಕಾಲದಲ್ಲಿ ರಾಷ್ಟ್ರಸೇವಕರನ್ನು ಕುರಿತ ಗ್ರಂಥರಚನೆ ಹೊಸ ಹುರುಪಿನಿಂದ ಮುಂದುವರೆಯಿತು. ಜೊತೆಗೆ, ವಿಜ್ಞಾನಿಗಳ, ಆಧುನಿಕ ಸಾಹಿತಿಗಳ ಮತ್ತು ಕಲಾವಿದರ ಕಡೆಗೆ ಹೆಚ್ಚು ಗಮನ ಹರಿಯಿತು; ಜೀವನಚರಿತ್ರೆಯ ವಿಷಯ ವ್ಯಾಪ್ತಿ ವಿಸ್ತಾರವಾಯಿತು. ಹಿಂದಿನಂತೆ ಪುರಾಣಪುರುಷರು, ಧಾರ್ಮಿಕಪುರುಷರು, ಸಾಧುಸಂತರು-ಹಾಗೂ ರಾಷ್ಟ್ರಭಕ್ತರು-ಇವರನ್ನು ಕುರಿತ ಗ್ರಂಥರಚನೆ ಬಹುಮಟ್ಟಿಗೆ ಪುನರಾವೃತ್ತಿಯಾಗತೊಡಗಿತು; ಆದರೂ ರಚನಾವಿಧಾನದಲ್ಲಿ ಹೊಸ ದೃಷ್ಟಿ, ಸಮಗ್ರತೆ, ವಸ್ತುನಿಷ್ಠಶೈಲಿ ಇವುಗಳಿಂದಾಗಿ ಕೆಲಕೆಲವು ಕೃತಿಗಳು ಸ್ವಾಗತಾರ್ಹವೆನಿಸಿದುವು. ಈ ಹೊಸ ಬೆಳಸಿನ ತೆನೆಗಳಲ್ಲಿ ಗಟ್ಟಿಕಾಳು ಎನ್ನಬಹುದಾದವುಗಳ ಸಂಖ್ಯೆ ಕಡಮೆ; ಜೀವನಚರಿತ್ರೆಗಳನ್ನು ಬರೆದವರ ಸಂಖ್ಯೆ ಗಮನಾರ್ಹವಾಗಿದ್ದರೂ ಗುಣದ ದೃಷ್ಟಿಯಿಂದ ಇಲ್ಲವೆ ಕೃತಿಸಂಖ್ಯಾದೃಷ್ಟಿಯಿಂದ ಜೀವನಚರಿತ್ರಕಾರ ಎನ್ನುವ ಹೆಸರಿಗೆ ಪಾತ್ರರಾದವರ ಸಂಖ್ಯೆ ಇನ್ನೂ ಕಡಿಮೆ.

ಧಾರ್ಮಿಕ ಪುರುಷರನ್ನು ಕುರಿತ ಗ್ರಂಥಗಳಲ್ಲಿ ಪರಿಶ್ರಮಪೂರ್ಣವಾದ ಕೆಲವನ್ನು ಇಲ್ಲಿ ಉಲ್ಲೇಖಿಸಬಹುದು: ಉ.ಕ.ಸುಬ್ರಾಯಾಚಾರ್ ಅವರ ಯೇಸು ಕ್ರಿಸ್ತ ಶ್ರಮವಹಿಸಿ ಬರೆದ, ಸೊಗಸಾದ ಗ್ರಂಥ, ಜಿ.ಪಿ. ರಾಜರತ್ನಂ ಅವರ ಗೌತಮ ಬುದ್ಧ ಅವರ ಪಾಳಿಭಾಷೆಯ ವಿದ್ವತ್ತಿಗೆ ಸಾಕ್ಷಿ. ಶಂಕರಾಚಾರ್ಯರನ್ನು ಕುರಿತು (ಹಿಂದಿಯಲ್ಲಿ) ಬಲದೇವ ಉಪಾಧ್ಯಾಯ, ಚಿದಂಬರಾನಂದ, ಬಿ.ವೆಂಕಟರಾಮು, ಜಿ ಹನುಮಂತರಾವ್-ಈ ನಾಲ್ವರೂ ವಿಚಾರ ವಿಮರ್ಶಪೂರ್ವಕ ಪ್ರಾಮಾಣಿಕ ದೃಷ್ಟಿಯ ಗ್ರಂಥಗಳನ್ನು ಬರೆದಿದ್ದಾರೆ; ಹಿಂದಿಯಿಂದ ಎಸ್.ರಾಮಚಂದ್ರಶಾಸ್ತ್ರಿಗಳು ಅನುವಾದಮಾಡಿರುವ ಬಲದೇವರ ಗ್ರಂಥ ಹೆಚ್ಚು ಸಂಶೋಧನಾತ್ಮಕವೂ ಸಮಗ್ರವೂ ಆದ ಕೃತಿ; ಹನುಮಂತರಾಯರದ್ದು ಸಮತೂಕದ, ಪಕ್ವವಿಮರ್ಶೆಯ ಬರೆವಣಿಗೆ. ರಾಮಾನುಜರನ್ನು ಕುರಿತು ಎಂ. ಯಾಮುನಾಚಾರ್ಯ, ಎಚ್.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್, ಹುರಗಲವಾಡಿ ಲಕ್ಷ್ಮೀನರಸಿಂಹಶಾಸ್ತ್ರಿ, ಎಸ್.ಕೆ. ರಾಮಚಂದ್ರರಾವ್, ನಾಲ್ಕು ಗ್ರಂಥಗಳನ್ನು ನೀಡಿದ್ದಾರೆ; ನಾಲ್ಕೂ ಸವಿಯಾದ ಬರೆಹಗಳು; ಕೃತಿನಾಯಕ ಮೂರ್ತಿ ಸ್ವರೂಪವನ್ನು ಆಕರ್ಷಕವಾಗಿ ಕಡೆದು ನಿಲ್ಲಿಸಿವೆ. ವಿನೋದಾಬಾಯಿಯವರ ಆಂಡಾಳ್, ಮಹಾದೇವಿ, ಮೀರಾ ಎಂಬುದು ಒಂದು ತೌಲನಿಕ ಅಧ್ಯಯನ; ಮೂವರು ಮಹಿಲಾ ಸಂತರ ಆಧ್ಯಾತ್ಮಿಕ ಅನುಭಾವ ಜೀವನವನ್ನು ಮಹಿಳೆಯೇ ಪರಾಮರ್ಶಿಸಿರುವುದು ವಿಶೇಷ ಸಂಗತಿ. ಸಿದ್ಧಯ್ಯ ಪುರಾಣಿಕರ ಶರಣ ಚರಿತಾಮೃತ ನೂರಾರು ಶರಣದ ಸಿದ್ಧಿಸಾಧನೆಗಳನ್ನು ಪರಿಚಯ ಮಾಡಿಕೊಡುವ ಬೃಹತ್ಕøತಿ. ಎಸ್.ಕೆ. ರಾಮಚಂದ್ರರಾಯರ ಪೂರ್ಣಪ್ರಜ್ಞಪ್ರಶಸ್ತಿ (ಮಧ್ವಾಚಾರ್ಯರ ಜೀವನಚರಿತ್ರೆ) ಹಾಗೂ ಎಂ. ಚಿದಾನಂದಮೂರ್ತಿಯವರ ಬಸವಣ್ಣನವರು-ಕೃತಿನಾಯಕರ ಬಗೆಗೆ ಅಭಿಮಾನರಹಿತವಾದ ಸಂಶೋಧಕ ದೃಷ್ಟಿಯಿಂದ ಹೊಸ ನೋಟವನ್ನು ಮುಂದಿಡುವ ಪ್ರಾಮಾಣಿಕ ಪ್ರಯತ್ನಗಳು. ಅರವಿಂದ ಯೋಗಿಗಳನ್ನು ಕುರಿತು ಆರ್.ಆರ್. ದಿವಾಕರರು ಇಂಗ್ಲಿಷಿನಲ್ಲಿ ಬರೆದ ಗ್ರಂಥದ ಕನ್ನಡ ಅನುವಾದ ಒಂದು ಪ್ರಮಾಣಭೂತ ಜೀವನಚರಿತ್ರೆ; ಇದರಲ್ಲಿ ಜೀವನ ಕಥೆಯೊಂದಿಗೆ ಅರವಿಂದರ ಪೂರ್ಣಯೋಗದ ವಿಚಾರಧಾರೆ ಹಾಸು ಹೊಕ್ಕಾಗಿ ಹೆಣೆದುಕೊಂಡಿದೆ. ಇಲ್ಲಿ ಅರವಿಂದರನ್ನು ಸ್ವಾತಂತ್ರ್ಯಯೋಧರನ್ನಾಗಿ ಬಣ್ಣಿಸಲಾಗಿದೆ. ಸ್ವಾಮಿ ಪ್ರಣವೇಶಾನಂದರು ಸ್ವಾಮಿ ಶಾರದಾನಂದರ ಮೂಲ ಬಂಗಾಳಿ ಕೃತಿ ರಾಮಕೃಷ್ಣಲೀಲಾಪ್ರಸಂಗವನ್ನು ಅನುವಾದ ಮಾಡಿದ್ದಾರೆ. ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದ, ಶಾರದಾಮಣಿ ದೇವಿ-ಇವರನ್ನು ಕುರಿತು ಹಲವು ಪುಸ್ತಕಗಳು ರಚಿತವಾಗಿದೆ. ನಿಜಗುಣ ಶಿವಯೋಗಿ, ರಮಣಮಹರ್ಷಿ, ಚಂದ್ರಶೇಖರಭಾರತಿ ಮುಂತಾಗಿ ಯೋಗಿಗಳು ಮಠಾಧಿಪತಿಗಳು-ಇವರ ಬಗೆಗೂ ಸುವಾಚನೀಯ ಜೀವನಚರಿತ್ರೆಗಳು ಬಂದಿವೆ. ಧಾರ್ಮಿಕ ಪುರುಷರನ್ನು ಕುರಿತ ಗ್ರಂಥಬಾಹುಳ್ಯ ಕನ್ನಡಿಗರ ಧರ್ಮಶ್ರದ್ಧೆ ಜಾಗೃತವಾಗಿರುವುದರ ಕುರುಹು.

ವಿಜ್ಞಾನಿಗಳ ಬಗ್ಗೆ[ಬದಲಾಯಿಸಿ]

ವಿಜ್ಞಾನಿಗಳನ್ನು ಕುರಿತ ಜೀವನಚರಿತ್ರೆಗಳ ಸಂಖ್ಯೆ ಸಹಜವಾಗಿಯೇ ಕಡಿಮೆ. ಎಸ್.ಕೆ. ನರಸಿಂಹಮೂರ್ತಿಯವರ ಮಹಾವಿಜ್ಞಾನಿಗಳು ಮತ್ತು ಗೌರೀಶ ಕಾಯ್ಕಿಣಿಯವರ ಭಾರತೀಯ ವಿಜ್ಞಾನಿಗಳು-ಈ ಗ್ರಂಥಗಳಲ್ಲಿ ಒಟ್ಟಾಗಿ ಹಲವಾರು ವಿಜ್ಞಾನಿಗಳ ಸಂಕ್ಷಿಪ್ತಜೀವನಚರಿತ್ರೆಗಳು ಅಡಕವಾಗಿವೆ. ಸಸ್ಯವಿಜ್ಞಾನಿ ಜಗದೀಶ ಚಂದ್ರ ಬೋಸರ ಜೀವನಚರಿತ್ರೆ, ಬಿ.ವಿ. ಸುಬ್ಬರಾಯಪ್ಪ ಹಾಗೂ ಗೌರೀಶ ಕಾಯ್ಕಿಣಿ-ಈ ಇಬ್ಬರ ಲೇಖನಿಯಿಂದಲೂ ಚೆನ್ನಾಗಿ ಮೂಡಿಬಂದಿದೆ. ಈವ್ ಕ್ಯೂರಿ ತನ್ನ ತಾಯಿ ಮದಾಂ ಕ್ಯೂರಿಯನ್ನು ಕುರಿತು ಬರೆದ ಫ್ರೆಂಚ್‍ಭಾಷೆಯ ಜೀವನಚರಿತ್ರೆಯ ಇಂಗ್ಲಿಷ್ ಅವತರಣಿಕೆಯನ್ನು ಕೆ.ವಿ. ರತ್ನಮ್ಮ ಬಹು ಹಿಂದೆಯೇ (1945)ಅನುವಾದಿಸಿದ್ದರು. ಬಿ.ಎಸ್. ರುಕ್ಕಮ್ಮನವರು ಮದಾಂ ಕ್ಯೂರಿ ಕುರಿತು ಇನ್ನೊಂದು ಗ್ರಂಥ ಬರೆದಿದ್ದಾರೆ; ಇವರ ಗಮನಾರ್ಹ ಜೀವನಚರಿತ್ರೆ ಫ್ರಾನ್ಸಿನ ಪ್ರಸಿದ್ಧ ಕೀಟವಿಜ್ಞಾನಿಯನ್ನು ಕುರಿತದ್ದು-ಕೀಟಗಳ ಒಡನಾಡಿ ಫೇಬರ್. ವೈದ್ಯವಿಜ್ಞಾನಿ ಅಲೆಕ್ಸಾಂಡರ್ ಫ್ಲೆಮಿಂಗ್ ಮತ್ತು ಭಾರತದ ವಿಜ್ಞಾನಿ ಪಿ.ಸಿ.ರಾಯ್ ಇವರನ್ನು ಕುರಿತ ಸೂ. ಸುಬ್ರಹ್ಮಣ್ಯಂ ಅವರ ಗ್ರಂಥಗಳು ಒಳ್ಳೆಯ ಕೊಡುಗೆ. ಸಾಪೇಕ್ಷ ಸಿದ್ಧಾಂತ ಎಂಬ ಕ್ರಾಂತಿಕಾರಕ ವೈಜ್ಞಾನಿಕ ಸಿದ್ಧಾಂತವನ್ನು ಮಂಡಿಸಿದ ಆಲ್ಬರ್ಟ್ ಐಸ್ಟೈನ್ ಅವರ ಜೀವನಚರಿತ್ರೆಯಲ್ಲಿ, ಆ ಮಹಾವಿಜ್ಞಾನಿಯ ಮಾನವೀಯ ವ್ಯಕ್ತಿತ್ವಕ್ಕೆ ಪ್ರಾಧಾನ್ಯ ಕೊಟ್ಟು ಬರೆದಿರುವುದು ಎಸ್,ವಿ, ಶ್ರೀರಂಗರಾಜು ಅವರ ಗ್ರಂಥದ ವಿಶೇಷ. ಇದೇ ವಿಭಾಗದಲ್ಲಿ, ಕೈಗಾರಿಕೊದ್ಯಮಿಯೂ ಉದಾರಚರಿತನೂ ಆದ ಹೆನ್ರಿ ಫೋರ್ಡ್, ಮಹಾರಾಷ್ಟ್ರ ಮತ್ತು ಕರ್ನಾಟಕಗಳಲ್ಲಿ ಯಂತ್ರೋದ್ಯಮದ ಬೆಳೆವಣಿಗೆಗೆ ಕಾರಣಕರ್ತರಾದ ಲಕ್ಷಣರಾವ್ ಕೀರ್ಲೋಸ್ಕರ್, ವಿಶ್ವವಿಖ್ಯಾತರಾದ ಎಂಜಿನಿಯರ್ ಹಾಗೂ ಮೈಸೂರಿನ ದಿವಾನರು ಸರ್ ಎಂ. ವಿಶ್ವೇಶ್ವರಯ್ಯನವರು-ಈ ಮಹನೀಯರನ್ನು ಕುರಿತು ಅನುಕ್ರಮವಾಗಿ ಸ್ವಾತಂತ್ರ್ಯಪ್ರಿಯ (ಅನುವಾದಕರು), ಸಿ.ಎನ್. ರಾಘವಾಚಾರ್ ಮತ್ತು ತಿರುಮಲೆ ತಾತಾಚಾರ್ಯ ಶರ್ಮ ರಚಿಸಿರುವ ಒಳ್ಳೆಯ ಗ್ರಂಥಗಳನ್ನು ಇಲ್ಲಿ ಉಲ್ಲೇಖಿಸಬಹುದು.

ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ[ಬದಲಾಯಿಸಿ]

ಭಾರತಕ್ಕೆ ಸ್ವಾತಂತ್ರ್ಯ ಬಂದಮೇಲೆ ರಾಷ್ಟ್ರಾಭಿಮಾನದ ಜೊತೆಗೆ ರಾಜಕೀಯ ಪ್ರಜ್ಞೆಯೂ ಕೂಡಿಕೊಂಡ ಪರಿಣಾಮವಾಗಿ ಸ್ವಾತಂತ್ರ್ಯ ಹೋರಾಟದ ಮಹಾನಾಯಕರಾದ ಬಾಲಗಂಗಾಧರ ತಿಲಕ್, ಗಾಂಧಿ, ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು-ಇವರನ್ನು ಕುರಿತು ಅನೇಕಾನೇಕ ಗ್ರಂಥಗಳು ರಚಿತವಾಗಿವೆ. ಗಾಂಧಿಯವರ ಬಹುಮುಖ ವ್ಯಕ್ತಿತ್ವ, ಸಾಧನೆ, ವಿಚಾರಧಾರೆಗಳನ್ನು ಕುರಿತು 30-40 ಗ್ರಂಥಗಳು ಹೊರಬಂದಿವೆ. ಇವುಗಳ ಪೈಕಿ ಜೀವನಚರಿತ್ರೆಯ ಲಕ್ಷಣಗಳುಳ್ಳ ಗ್ರಂಥಗಳ ಸಂಖ್ಯೆ ಕಡಿಮೆಯೆಂದೇ ಹೇಳಬೇಕು. ಇವುಗಳ ಪೈಕಿ ಅನುವಾದಿತ ಗ್ರಂಥಗಳೂ ಉಂಟು. ಗಾಂಧಿಯವರ ಆತ್ಮಕಥೆ (ಸಿದ್ದವನಹಳ್ಳಿ ಕೃಷ್ಣಶರ್ಮರ ಅನುವಾದ), ವಿನ್ಸೆಂಟ್ ಷೀನ್‍ರ ಮಹಾತ್ಮ ಗಾಂಧಿ (ವಿ.ಎಸ್.ನಾರಾಯಣರಾಯರ ಅನುವಾದ), ಲೂಯಿ ಫಿಷರ್ ಅವರ ಮಹಾತ್ಮ ಗಾಂಧಿ (ಎಚ್.ವಿ.ಸಾವಿತ್ರಮ್ಮನವರ ಅನುವಾದ), ಪೋಲಾಕ್ ಅವರ ಗಾಂಧೀಜಿ (ತ.ರಾ.ಸು. ಅನುವಾದ) ವಿಶ್ವಖ್ಯಾತಿ ಗಳಿಸಿರುವ ಶ್ರೇಷ್ಠ ಗ್ರಂಥಗಳು. ತಾವು ಬಲ್ಲಂತೆ, ಕಂಡಂತೆ, ಸ್ವಾತಂತ್ರ್ಯಹೋರಾಟದ ಕಾಲದ ತಮ್ಮ ಅನುಭವ ರಾಸಾಯನದ ಸವಿ ಬೆರಸಿ ಗಾಂಧಿಯವರ ದರ್ಶನ ಮಾಡಿಸಿದ್ದಾರೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ಯರು, ತಮ್ಮ ಭಾರತ ಭಾಗ್ಯವಿಧಾತ ಎಂಬ ಗ್ರಂಥದಲ್ಲಿ, ದೇಜಗೌ ಅವರ ಮೋತೀಲಾಲ್ ನೆಹರು, ಶ್ರೀರಂಗರ ನಮ್ಮ ನೆಚ್ಚಿನ ನೆಹರು ಅಚ್ಚುಕಟ್ಟಾದ ಜೀವನಚರಿತ್ರೆಗಳು. ಬಾಬು ರಾಜೇಂದ್ರ ಪ್ರಸಾದ್, ನೇತಾಜಿ ಸುಭಾಷ ಚಂದ್ರ ಬೋಸ್ (ವೀರಕೇಸರಿ ಸೀತಾರಾಮಶಾಸ್ತ್ರಿ, ವಿ.ಎಸ್.ನಾರಾಯಣರಾವ್), ಲಾಲ್‍ಬಹದ್ದೂರ್ ಶಾಸ್ತ್ರಿ, ರಾಜಾಜಿ, ಡಾ, ಜಾಕಿರ್ ಹುಸೇನ್, ನಾ.ಸು.ಹರ್ಡೀಕರ್, ಗಂಗಾಧರರಾವ್ ದೇಶಪಾಂಡೆ-ಇವರ ಬಗ್ಗೆಯೂ ಜೀವನಚರಿತ್ರೆಗಳು ಬಂದಿವೆ. ಎಲ್ಲವೂ ಆದರ್ಶ ಜೀವನಚರಿತ್ರೆಯ ಸಾಹಿತ್ಯಸೌಂದರ್ಯವನ್ನು ಬೀರದಿದ್ದರೂ ನವಭಾರತ ನಿರ್ಮಾಪಕರ ವ್ಯಕ್ತಿತ್ವವನ್ನೂ ಹಾಗೂ ನವಭಾರತ ನಿರ್ಮಾಣದ ರೋಮಾಂಚಕ ಕಥೆಯನ್ನೂ ಒಟ್ಟಿನಲ್ಲಿ ಪರಿಚಯ ಮಾಡಿಕೊಡುತ್ತವೆ. ಈಚೆಗೆ ಸೂರ್ಯನಾಥ ಕಾಮತರ ಸಂಪಾದಕತ್ವದಲ್ಲಿ ಪ್ರಕಟಗೊಂಡಿರುವ (1974) ಸ್ವಾತಂತ್ರ್ಯ ಸಂಗ್ರಾಮದ ಸ್ಮøತಿಗಳು ಭಾಗ 1 ಎಂಬ ಬೃಹತ್ ಗ್ರಂಥದಲ್ಲಿ ಭಾರತ ಸ್ವಾತಂತ್ರ್ಯಸಂಗ್ರಾಮದಲ್ಲಿ ಹೋರಾಡಿದ ಕರ್ನಾಟಕದ ವೀರರ ಸ್ಮøತಿಚಿತ್ರಗಳಿವೆ.

ಸ್ವಾತಂತ್ರ್ಯಪೂರ್ವದಲ್ಲಿ ಮುದ್ದಣ, ರನ್ನ, ಲಕ್ಷ್ಮೀಶ, ಕುಮಾರವ್ಯಾಸ ಮುಂತಾದ ಪ್ರಾಚೀನ ಕವಿಗಳನ್ನು ಕುರಿತ ಪ್ರಶಸ್ತಿಗ್ರಂಥಗಳು ಯಶಸ್ವಿಯಾಗಿ ಕವಿಕಾವ್ಯಪರಿಚಯವನ್ನು ಮಾಡಿಕೊಟ್ಟವು. ಪ್ರಾಚೀನ ಕವಿಗಳನ್ನು ಕುರಿತ ಸಣ್ಣ ಪರಿಚಯಾತ್ಮಕ ಪುಸ್ತಕಗಳನ್ನು ಕನ್ನಡನಾಡಿನ ವಿಶ್ವವಿದ್ಯಾಲಯಗಳು ತಮ್ಮ ಪ್ರಚಾರೋಪನ್ಯಾಸ ಪುಸ್ತಕಮಾಲಿಕೆಯಲ್ಲಿ ಪ್ರಕಟಿಸುತ್ತಿವೆ. ಆಧುನಿಕ ಕನ್ನಡ ಸಾಹಿತಿಗಳಿಗೆ ಒಪ್ಪಿಸುವ ಸಂಭಾವನಾ ಗ್ರಂಥಗಳಲ್ಲಿ ಆಯಾ ಸಾಹಿತಿಯ ಸಂಕ್ಷಿಪ್ತ ಜೀವನಪರಿಚಯವನ್ನೂ ಸಾಹಿತ್ಯ ವ್ಯವಸಾಯದ ಸಮೀಕ್ಷೆಯನ್ನೂ ಕಾಣಬಹುದು. ಇವನ್ನು ಜೀವನಚರಿತ್ರೆ ಎನ್ನಲಾಗುವುದಿಲ್ಲ. ಪು.ತಿ.ನ., ಕೆ.ಎಸ್.ನರಸಿಂಹಸ್ವಾಮಿ, ಗೋವಿಂದ ಪೈ, ಕೈಲಾಸಂ, ಅ.ನ.ಕೃ. ಇವರ ಬಗ್ಗೆ ಪ್ರಕಟವಾಗಿರುವ ಪುಸ್ತಕಗಳನ್ನು ಔಪಚಾರಿಕವಾಗಿ ಜೀವನಚರಿತ್ರೆ ಎನ್ನಬೇಕು: ಪುಸ್ತಕ ತೆರೆದರೆ ನಮಗೆ ಸಿಕ್ಕುವುದು ಕೃತಿವಿಮರ್ಶೆ, ಸ್ವಲ್ಪಮಟ್ಟಿಗೆ ಕವಿಯ ಅಂತರಂಗ ವ್ಯಕ್ತಿತ್ವದರ್ಶನ. ಗಳಗನಾಥ (ಕೆ.ಎಸ್.ದೇಶಪಾಂಡೆ), ರಂ.ಶ್ರೀ.ಮುಗಳಿ ಅವರ ಜೀವನಚರಿತ್ರೆ (ವಿಠ್ಠಲ ಕುಲಕರ್ಣಿ), ವಿನಾಯಕ ಕೃಷ್ಣ ಗೋಕಾಕ್ (ರಾ.ಬ.ಲಕ್ಷ್ಮೇಶ್ವರ), ಹುಯಿಲಗೋಳ ನಾರಾಯಣರಾಯರು (ನೆಗಳೂರು ರಂಗನಾಥ), ಫ.ಗು.ಹಳಕಟ್ಟಿ-ಇವು ಒಳ್ಳೆಯ ಕೃತಿಗಳು. ಚೆನ್ನಪ್ಪ ಉತ್ತಂಗಿ-ತಿರುಳ್‍ಗನ್ನಡ ತಿರುಕ (ವರದರಾಜ ಹುಯಿಲಗೋಳ), ಮಧುರಚೆನ್ನರ ಜೀವನ ಮತ್ತು ಕಾರ್ಯ (ಸಿಂಪಿ ಲಿಂಗಣ್ಣ), ರಾ.ನರಸಿಂಹಾಚಾರ್ಯ (ಎನ್.ಅನಂತರಂಗಾಚಾರ್)-ಇವರನ್ನು ಕುರಿತು ಕನ್ನಡ ಸಾಹಿತ್ಯ ಪರಿಷತ್ತು ತನ್ನ ಗ್ರಂಥ ಪ್ರಕಾಶನ ಯೋಜನೆಯಲ್ಲಿ ಬರೆಯಿಸಿ ಪ್ರಕಟಿಸಿರುವ ಕೃತಿಗಳು ಈ ದಿಕ್ಕಿನಲ್ಲಿ ಕೊರತೆಯನ್ನು ಯಶಸ್ವಿಯಾಗಿ ತುಂಬಿಕೊಟ್ಟಿವೆ. ಕನ್ನಡ ಸಾಹಿತಿಗಳ ಸಂಬಂಧವಾದ ಆಧಾರ ಸಾಮಗ್ರಿಯ ಅಭಾವವೇ ಅವರ ಬಗೆಗೆ ಸಮರ್ಪಕ ಜೀವನಚರಿತ್ರೆಗಳು ನಿರ್ಮಾಣವಾಗುವ ಹಾದಿಯಲ್ಲಿ ಎದುರಿಸಬೇಕಾದ ದೊಡ್ಡ ಆತಂಕ. ಈ ಅಸಮರ್ಪಕ ಪರಿಸ್ಥಿತಿಯಲ್ಲಿ ದೇಜಗೌ ತಮ್ಮ ಗುರುಗಳಾದ ತೀ.ನಂ.ಶ್ರೀ. ಮತ್ತು ರಾಷ್ಟ್ರಕವಿ ಕುವೆಂಪು ಇವರನ್ನು ಕುರಿತು ಬರೆದಿರುವ ಪ್ರಮಾಣಭೂತವೂ ಆತ್ಮೀಯವೂ ಆದ ಪ್ರಸನ್ನ ಶೈಲಿಯ ಜೀವನಚರಿತ್ರೆಗಳು ಒಳ್ಳೆಯ ಮಾದರಿಗಳಾಗಿವೆ.

ಅನ್ಯದೇಶೀಯ ಹಾಗೂ ಇತರ ಭಾರತೀಯ ಭಾಷೆಗಳ ಸಾಹಿತಿಗಳ ಜೀವನಚರಿತ್ರೆಗಳ ಸಂಖ್ಯೆ ತೀರ ಕಡಿಮೆ. ಷೇಕ್ಸ್‍ಪಿಯರ್ ಮಹಾಕವಿಯ ನಾಲ್ಕನೆಯ ಶತಮಾನೋತ್ಸವ ಸಂದರ್ಭದಲ್ಲಿ ಪ್ರಕಟವಾದ ಷೇಕ್‍ಸ್ಪಿಯರಿಗೆ ನಮಸ್ಕಾರ ಎಂಬ ಸ್ಮಾರಕ ಗ್ರಂಥಗಳಲ್ಲಿ ಶಾ.ಬಾಲೂರಾಯರು ಬರೆದಿರುವ ಕವಿಯ ಸಂಕ್ಷಿಪ್ತ ಪರಿಚಯದಿಂದ ಮಾತ್ರ ನಾವು ತೃಪ್ತರಾಗಬೇಕು.

ಸ್ಯಾಮ್ಯುಯಲ್ ಜಾನ್‍ಸನ್ ಕೃತಿ (ಎನ್.ಎಸ್.ರಾಮಚಂದ್ರಯ್ಯ) ಶ್ಲಾಘ್ಯವಾದ ಸಣ್ಣ ಪ್ರಯತ್ನ : ಆ ಮಹಾವ್ಯಕ್ತಿಯ ಬಗೆಗೆ ಬಾಸ್‍ವೆಲ್ ಬರೆದಿರುವ ಕೃತಿಯ ಅನುವಾದದ ಅಗತ್ಯವಿದೆ. ಮಾಸ್ತಿಯವರ ರವೀಂದ್ರನಾಥ ಠಾಕೂರರ ಬಗೆಗಿನ ಉಲ್ಲೇಖ ಈ ಹಿಂದೆ ಆಗಿದೆ. ಇಂಗ್ಲಿಷಿನಿಂದ ತೋರು ದತ್ (ಚಿ.ನ.ಮಂಗಳ ಅವರಿಂದ), ವೇಮನ (ಕೆ.ವೆಂಕಟರಾಮಪ್ಪ ಅವರಿಂದ), ಸುಬ್ರಹ್ಮಣ್ಯ ಭಾರತಿ (ಕೆ.ಎಸ್.ನರಸಿಂಹಸ್ವಾಮಿ)-ಇವು ಅನುವಾದಗೊಂಡಿವೆ. ಪ್ರಭುಶಂಕರರ ಖಲೀಲ್ ಗಿಬ್ರಾನ್ ಒಂದು ಶ್ಲಾಘ್ಯಕೃತಿ. ಎ.ಆರ್.ಕೃಷ್ಣಶಾಸ್ತ್ರಿಗಳ ಬಂಕಿಮಚಂದ್ರ ಸ್ವತಂತ್ರವೂ ಸಮಗ್ರವೂ ಪೂರ್ಣಪ್ರಮಾಣದ್ದೂ ಆದ ಸುಂದರ ಸಾಹಿತ್ಯಕೃತಿಯೆನಿಸಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯನ್ನು ಗಳಿಸಿ, ಕನ್ನಡದಲ್ಲಿ ಈ ಸಾಹಿತ್ಯಪ್ರಕಾರಕ್ಕೇ ಒಂದು ಗೌರವಸ್ಥಾನವನ್ನು ದೊರಕಿಸಿಕೊಟ್ಟಿದೆ. ಪ್ರಪಂಚದ ಯಾವದೇ ಭಾಷೆಗೆ ಭಾಷಾಂತರವಾಗಲು ಯೋಗ್ಯವಾದ ಕೃತಿ ಇದು.

ಸಂಗೀತಗಾರರು, ಚಿತ್ರಕಲಾವಿದರು, ರಂಗನಟರು ಮುಂತಾದ ಕಲಾವಿದರ ಬಗೆಗೂ ಜೀವನಚರಿತ್ರೆಗಳ ರಚನೆ ಪ್ರಾರಂಭವಾಗಿರುವುದು ಸ್ವಾಗತಾರ್ಹವಾದ ಹೊಸ ಹೆಜ್ಜೆ. ನಾಟಕಶಿರೋಮಣಿ ಎ.ವಿ.ವರದಾಚಾರ್ (ಸಂ.ತೀ.ತಾ.ಶರ್ಮ), ವಾಗ್ಗೇಯಕಾರ ವಾಸುದೇವಾಚಾರ್ಯ (ವಿವಿಧ ಲೇಖಕರು), ವೀಣೆ ಶೇಷಣ್ಣ (ತಿರುಮಲೆ ರಾಜಮ್ಮ), ಭಾರತೀಯ ವಾಗ್ಗೇಯಕಾರರು (ಆರ್.ಆರ್.ಕೇಶವಮೂರ್ತಿ), ಕಲೋಪಾಸಕರು (ಪಿ.ಆರ್.ತಿಪ್ಪೇಸ್ವಾಮಿ), ಕರ್ನಾಟಕದ ಕಲಾವಿದರು (ಅ.ನ.ಕೃ.) ಕರ್ನಾಟಕಸಂಗೀತ ವಿದ್ವನ್ಮಣಿಗಳು (ಭಾಗ 1) (ಮತ್ತೂರು ಕೃಷ್ಣಮೂರ್ತಿ)-ಇವು ಸಮಗ್ರಜೀವನಚರಿತ್ರೆಗಳಿಲ್ಲದಿದ್ದರೂ ಮುಂದಿನ ಜೀವನಚರಿತ್ರಕಾರರಿಗೆ ಸಹಾಯಕ ಗ್ರಂಥಗಳಾಗಬಲ್ಲವು.

ಯಾವ ಭಾಷೆಯಲ್ಲಿಯೂ ಆತ್ಮಚರಿತ್ರೆ ವಿರಳವೇ. ಕನ್ನಡದಲ್ಲಿ ಬಹು ಹಿಂದೆಯೇ ಪ್ರಕಟವಾದ ಜಿ.ಪಿ.ರಾಜರತ್ನಂ ಅವರ `ಹತ್ತು ವರ್ಷ ಪೂರ್ತಿಗೊಂಡರೆ ಸಮಗ್ರವಾಗುತ್ತದೆ. ಕಾರಂತರ `ಹುಚ್ಚುಮನಸ್ಸಿನ ಹತ್ತುಮುಖಗಳು ಬೇರೆಬೇರೆ ಕಲಾಕ್ಷೇತ್ರಗಳಲ್ಲಿ ಅವರ ಪ್ರಯೋಗ, ಸಾಧನೆ, ಅನುಭಾವಗಳ ಪ್ರಾಮಾಣಿಕ ದಾಖಲೆ. ತುಸುಕಾಲದ ಮೇಲೆ ಬಂದ ಸಾಹಿತ್ಯಜ್ಞರ ಆತ್ಮಕಥನಗಳು ಕೆಲವು ಸಾಹಿತಿಗಳ ಸೀಮಿತ ಅನುಭವಗಳ ನಿವೇದನೆ. ನವರತ್ನ ರಾಮರಾಯರ ಕೆಲವು ನೆನಪುಗಳು ಅವರ ಜೀವನದ ಅನುಭವ ಸಾರ. ಮಾಸ್ತಿ ವೆಂಕಟೇಶ ಅಯ್ಯಂಗಾರರ ಭಾವ, ಮಾಗಿದ ಚೇತನದ ದಿವ್ಯಫಲ. ದೇಜಗೌ ಅವರ ಹೋರಾಟದ ಬದುಕು ಮಧ್ಯವಯಸ್ಸಿನಲ್ಲಿ ಬರೆದ, ರಜೋಗುಣರಂಜಿತವಾದ, ಸ್ವಾರಸ್ಯಪೂರ್ಣ ಕೃತಿ.

ಸಂಖ್ಯಾದೃಷ್ಟಿಯಿಂದ ಸ್ವಾತಂತ್ರ್ಯವರ್ಷಪೂರ್ವದ ಐದು ದಶಕಗಳ ಅವಧಿಯಲ್ಲಿ 500ಕ್ಕೆ ಕಡಿಮೆಯಿಲ್ಲದೆ ಜೀವನಚರಿತ್ರೆಗಳು ರಚಿತವಾಗಿವೆ ಎಂದು ಅಂದಾಜು ಮಾಡಬಹುದು; ಸ್ವಾತಂತ್ರ್ಯೋತ್ತರದ ಈಚಿನ ಎರಡೂವರೆ ದಶಕಗಳಲ್ಲಿ ಇಲ್ಲಿಯವರೆಗೆ (1972) 500ಕ್ಕೂ ಮಿಕ್ಕು ಹೊರಬಂದಿವೆ. ಈ ಸಂಖ್ಯಾಮಾನ ಈ ಸಾಹಿತ್ಯಪ್ರಕಾರದ ಸುಲಕ್ಷಣಬದ್ಧವಾದ ಬೆಳವಣಿಗೆಗೆ ಅಲ್ಲದಿದ್ದರೂ ಸುಮುಖವಾದ ಬೆಳವಣಿಗೆಗೆ ಆಶಾದಾಯಕ ದಿಕ್ಸೂಚಿ. ಈ ಲೆಕ್ಕದಲ್ಲಿ ಸಾಹಿತ್ಯಸೃಷ್ಟಿಯ ಮುಖ್ಯ ಪ್ರೇರಣೆಗಳಲ್ಲಿ ಒಂದಾದ ಧನಲಾಭದೃಷ್ಟಿಯಿಟ್ಟುಕೊಂಡು ಪಠ್ಯಪುಸ್ತಕವಾಗಬೇಕೆಂದು ರಚಿತವಾದ ಅಲ್ಪಾಯುಷಿಗಳಾದ ನೂರಾರು ಜೀವನಚರಿತ್ರೆಗಳು ಸೇರಿವೆ; ಈ ಸಾಹಿತ್ಯಪ್ರಕಾರದ ಕಣಜಕ್ಕೆ ಕಾಳಿಗಿಂತ ಹೆಚ್ಚಾಗಿ ಜೊಳ್ಳನ್ನು ತುಂಬಿವೆ. ಒಳ್ಳೆಯ ಜೀವನಚರಿತ್ರೆಗಳನ್ನು ಅಗತ್ಯವಾಗಿ ವಿದ್ಯಾರ್ಥಿಗಳ ಮುಂದಿಡಬೇಕು; ಆದರೆ ಪಠ್ಯಪುಸ್ತಕ ಆಗಬೇಕು ಎಂಬ ಏಕೈಕ ಉದ್ದೇಶದ ಇತಿಮಿತಿಗಳ ಚೌಕಟ್ಟಿನಲ್ಲಿ ಬರೆದ ಜೀವನಚರಿತ್ರೆ ಉತ್ತಮ ಸಾಹಿತ್ಯಕೃತಿ ಎನಿಸುವ ಸಂಭವ ಕಡಿಮೆ. ಉತ್ತಮವಾದ ಕೃತಿಯನ್ನು ಸೃಷ್ಟಿಸಿ, ಪಠ್ಯಪುಸ್ತಕದ ಉದ್ದೇಶಕ್ಕಾಗಿ ಅದನ್ನು ಸಂಕ್ಷೇಪ ಮಾಡುವುದು ವಿಹಿತವಾದ ಮಾರ್ಗ. ಬಹುಮಟ್ಟಿಗೆ ಈ ಸಾಹಿತ್ಯಪ್ರಕಾರಕ್ಕೆ ಮಾತ್ರ ವಿಶೇಷವಾಗಿ ಅಂಟಿಕೊಂಡಿರುವ ಈ ಅಂಟುಜಾಡ್ಯದಿಂದ ಲೇಖಕರು ದೂರವಿರಬೇಕು. ಪರಿಶ್ರಮಪೂರ್ಣವಾದ ಸಮಗ್ರ ಜೀವನಚರಿತ್ರೆಗಳನ್ನು ರಚಿಸಿ, ಆ ಸಾಹಿತ್ಯಪ್ರಕಾರದ ಘನತೆ ಗೌರವಗಳನ್ನು ಕಾಪಾಡಬೇಕು.

ಉಲ್ಲೇಖಗಳು[ಬದಲಾಯಿಸಿ]

 • Casper, Scott E. (1999). Constructing American Lives: Biography and Culture in Nineteenth-Century America. Chapel Hill: University of North Carolina Press. ISBN 978-0-8078-4765-7. {{cite book}}: Invalid |ref=harv (help)
 • Heilbrun, Carolyn G. (1988). Writing a Woman's Life. New York: W. W. Norton. ISBN 978-0-393-02601-6. {{cite book}}: Invalid |ref=harv (help)
 • Hughes, Kathryn (2009). "Review of Teaching Life Writing Texts, ed. Miriam Fuchs and Craig Howes" (PDF). Journal of Historical Biography. 5: 159–163. ISSN 1911-8538. Retrieved 1 February 2016. {{cite journal}}: Invalid |ref=harv (help)
 • Kendall, Paul Murray. "Biography". Encyclopædia Britannica. {{cite encyclopedia}}: Invalid |ref=harv (help)
 • Lee, Hermione (2009). Biography: A Very Short Introduction. Oxford University Press. ISBN 978-0-19-953354-1. {{cite book}}: Invalid |ref=harv (help)
 • Manovich, Lev (2001). The Language of New Media. Leonardo Book Series. Cambridge, Massachusetts: MIT Press. ISBN 978-0-262-63255-3. {{cite book}}: Invalid |ref=harv (help)
 • Meister, Daniel R. "The biographical turn and the case for historical biography" History Compass (Dec. 2017) DOI: 10.1111/hic3.12436 abstract
 • Miller, Robert L. (2003). "Biographical Method". In Miller, Robert L.; Brewer, John D. (eds.). The A–Z of Social Research: A Dictionary of Key Social Science Research Concepts. London: Sage Publications. pp. 15–17. ISBN 978-0-7619-7133-7. {{cite encyclopedia}}: Invalid |ref=harv (help)
 • Nawas, John A. (2006). "Biography and Biographical Works". In Meri, Josef W. (ed.). Medieval Islamic Civilization: An Encyclopedia. Vol. 1. New York: Routledge. pp. 110–112. ISBN 978-0-415-96691-7. {{cite encyclopedia}}: Invalid |ref=harv (help)
 • Regard, Frédéric, ed. (2003). Mapping the Self: Space, Identity, Discourse in British Auto/Biography. Saint-Étienne, France: Publications de l'Université de Saint-Étienne. ISBN 978-2-86272269-6. {{cite conference}}: Invalid |ref=harv (help)
 • Rines, George Edwin, ed. (1918). "Biography" . Encyclopedia Americana. Vol. 3. pp. 718–719. {{cite encyclopedia}}: Cite has empty unknown parameters: |HIDE_PARAMETER15=, |HIDE_PARAMETER13=, |HIDE_PARAMETER2=, |HIDE_PARAMETER21=, |HIDE_PARAMETER8=, |HIDE_PARAMETER17=, |HIDE_PARAMETER14=, |HIDE_PARAMETER5=, |HIDE_PARAMETER7=, |HIDE_PARAMETER22=, |HIDE_PARAMETER16=, |HIDE_PARAMETER19=, |HIDE_PARAMETER6=, |HIDE_PARAMETER9=, |HIDE_PARAMETER10=, |HIDE_PARAMETER11=, |HIDE_PARAMETER1=, |HIDE_PARAMETER4=, |HIDE_PARAMETER3=, and |HIDE_PARAMETER12= (help); Invalid |ref=harv (help)
 • Roberts, Brian (2002). Biographical Research. Understanding Social Research. Buckingham, England: Open University Press. ISBN 978-0-335-20287-4. {{cite book}}: Invalid |ref=harv (help)
 • Stone, Albert E. (1982). Autobiographical Occasions and Original Acts: Versions of American Identity from Henry Adams to Nate Shaw. Philadelphia: University of Pennsylvania Press. ISBN 978-0-8122-7845-3. {{cite book}}: Invalid |ref=harv (help)
 • Zinn, Jens O. (2004). Introduction to Biographical Research (Working paper 2004/4). Canterbury, England: Social Contexts and Responses to Risk Network, University of Kent. {{cite tech report}}: Invalid |ref=harv (help)

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

 • "Biography", In Our Time, BBC Radio 4 discussion with Richard Holmes, Nigel Hamilton and Amanda Foreman (June 22, 2000).
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: