ವಿಷಯಕ್ಕೆ ಹೋಗು

ಥಾಮಸ್ ಡಿ ಕ್ವಿನ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಥಾಮಸ್ ಡಿ ಕ್ವಿನ್ಸಿ - (1785-1859). ಆಂಗ್ಲಪ್ರಬಂಧಕಾರ, ವಿಮರ್ಶಕ.

ಬದುಕು

[ಬದಲಾಯಿಸಿ]

ಮ್ಯಾಂಚೆಸ್ಟರಿನಲ್ಲಿ, ಅನುಕೂಲ ಪರಿಸ್ಥಿತಿಯಲ್ಲಿದ್ದ ಬಟ್ಟೆ ವ್ಯಾಪಾರಿ ತಾಮಸ್ ಕ್ವಿನ್ಸಿಯ 8 ಮಕ್ಕಳಲ್ಲಿ 5ನೆಯವನಾಗಿ ಹುಟ್ಟಿದ. 7 ವರ್ಷದವನಿರುವಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯ ಪೋಷಣೆಯಲ್ಲಿ ಬೆಳೆದ. ಕೆಲವು ಕಾಲ ಖಾಸಗಿ ಶಿಕ್ಷಣ ಪಡೆದ ಮೇಲೆ 1801ರಲ್ಲಿ ಮ್ಯಾಂಚೆಸ್ಟರ್ ಗ್ರಾಮರ್ ಶಾಲೆಗೆ ಸೇರಿದ. ಅಲ್ಲಿ ಸುಖವಾಗಿ ಓದಿಕೊಂಡಿರದೆ 18 ತಿಂಗಳುಗಳ ಅನಂತರ ಓಡಿಹೋಗಿ ಮುಂದಿನ 8 ತಿಂಗಳ ಕಾಲವನ್ನು ವೇಲ್ಸ್ ಮತ್ತು ಲಂಡನ್ನಿನಲ್ಲಿ ಪೋಲಿಯಾಗಿ ಅಲೆದಾಡಿ ಕಳೆದ. ಹತ್ತಿರ ಇದ್ದ ಹಣವೆಲ್ಲ ಶೀಘ್ರದಲ್ಲಿಯೇ ಖರ್ಚಾಯಿತಾಗಿ ಅನೇಕ ಕಷ್ಟಗಳನ್ನು ಎದುರಿಸಿದ. ಈ ಅವಧಿಯಲ್ಲಿಯೇ ಇವನಿಗೆ ಆ್ಯನ್ ಎಂಬ ಸೂಳೆಯ ಸ್ನೇಹವುಂಟಾದದ್ದು, ಚಿಕ್ಕಂದಿನಲ್ಲಿ ಒದಗಿದ ಇಂಥ ಅನುಭವಗಳ ಪ್ರಭಾವನ್ನು ಈತನ ಸಾಹಿತ್ಯ ಕೃತಿಗಳಲ್ಲಿ ಕಾಣಬಹುದಾಗಿದೆ. 1803ರ ಕೊನೆಯಲ್ಲಿ ಈತನನ್ನು ಆಕ್ಸ್‍ಫರ್ಡಿಗೆ ಕಳಿಸಲಾಯಿತು. ಮುಂದಿನ 5 ವರ್ಷಗಳನ್ನು ಈತ ವೊರ್ಸೆಸ್ಟರ್ ಕಾಲೇಜಿನಲ್ಲಿ ಕಳೆದ. ಅಲ್ಲಿದ್ದಾಗಲೆ ಇವನಿಗೆ ಅಫೀಮಿನ ಚಟ ಅಂಟಿಕೊಂಡಿತು (1804). ಮೊದಲಿಗೆ ಮುಖದ ತೀವ್ರ ನರಶೂಲೆಯ ಶಮನಕ್ಕಾಗಿಯೂ ಅನಂತರ ಮಾನಸಿಕ ಉತ್ತೇಜನಕ್ಕಾಗಿಯೂ ಈತ ಪ್ರಾರಂಭಿಸಿದ ಅಫೀಮಿನ ಬಳಕೆ ಕೊನೆಗೆ ಜೀವಾವಧಿಯ ಚಟವಾಗಿ ಪರಿಣಮಿಸಿತು. ಒಳ್ಳೆಯ ವಿದ್ಯಾರ್ಥಿಯಾಗಿದ್ದರೂ ಉಪೇಕ್ಷೆಯಿಂದಲೋ ಅನುತ್ತೀರ್ಣನಾಗುವ ಭಯದಿಂದಲೋ ಅಫೀಮಿನ ಚಟದ ಕಾರಣವಾಗಿಯೋ ಪದವಿ ಪಡೆಯದೆ ತನ್ನ ಶಿಕ್ಷಣವನ್ನು ಈತ ಮುಗಿಸಿದ. ಆಗಲೇ ಸಾಹಿತ್ಯಕೃತಿಗಳ ಮೂಲಕ ಅಪ್ರತ್ಯಕ್ಷವಾಗಿ ಪರಿಚಿತರಾಗಿದ್ದ ವರ್ಡ್ಸ್‍ವರ್ತ್ ಮತ್ತು ಕೋಲ್‍ರಿಚ್‍ರ ಮೊದಲ ದರ್ಶನ ಇವನಿಗೆ 1807ರಲ್ಲಿ ಆಯಿತು. 1809ರಿಂದ 1830ರ ವರಿಗೆನ ಅವಧಿಯಲ್ಲಿ ಹೆಚ್ಚು ಕಾಲವನ್ನು ಈತ ಗ್ರಾಸ್‍ಮಿಯರಿನಲ್ಲಿ-ವರ್ಡ್ಸ್‍ವರ್ತ್‍ನ ಸಾಮೀಪ್ಯದಲ್ಲಿ-ಕಳೆದರೂ ಆಗಾಗ್ಗೆ ಲಂಡನ್ನಿಗೆ ಹೋಗಿ ಬರುತ್ತಿದ್ದು ಕೋಲ್‍ರಿಜ್, ಲ್ಯಾಮ್, ಹ್ಯಾಜ್ಲಿಟ್ ಮತ್ತು ಉಳಿದ ಲೇಕ್ ಡಿಸ್ಟ್ರಿಕ್ಟಿನ ಸಾಹಿತಿಗಳೊಡನೆ ನಿಕಟಸಂಬಂಧವನ್ನಿಟ್ಟುಕೊಂಡಿದ್ದ. 1816ರಲ್ಲಿ ಮಾರ್ಗರೆಟ್ ಸಿಂಪ್ಸನ್ನಳೆಂಬ ಸ್ಥಳೀಯ ರೈತನ ಮಗಳನ್ನು ಮದುವೆಯಾದ. ಉತ್ತಮ ಗೃಹಿಣಿಯಾಗಿದ್ದ ಆಕೆ ಇವನ ಅಫೀಮಿನ ಚಟವನ್ನು ಹತೋಟಿಯಲ್ಲಿಡುವುದಕ್ಕೆ ಸಾಕಷ್ಟು ಪ್ರಯತ್ನ ಮಾಡಿದ್ದುಂಟು. ಸುಮಾರು 18 ತಿಂಗಳಕಾಲ ವೆಸ್ಟ್‍ಮೋರ್‍ಲ್ಯಾಂಡ್ ಗಜೆಟ್ಟಿನ ಸಂಪಾದಕನಾಗಿ ಕೆಲಸಮಾಡಿ ಅನಂತರ 1821ರಿಂದ ದಿ ಲಂಡನ್ ಮ್ಯಾಗಜೀನ್, ಬ್ಲ್ಯಾಕ್‍ವುಡ್ಸ್ ಮ್ಯಾಗಜಿನ್, ಟೀಟ್ಸ್ ಮ್ಯಾಗಜೀನ್, ಹಾಗ್ಸ್ ಇನ್‍ಸ್ಟ್ರಕ್ಟರ್, ದಿ ಎಡಿನ್‍ಬರೊ ಲಿಟರರಿ ಗೆಜೆóಟ್ ಮೊದಲಾದ ಪತ್ರಿಕೆಗಳಿಗೆ ಅವ್ಯಾಹತವಾಗಿ ಲೇಖನಗಳನ್ನು ಬರೆಯತೊಡಗಿದ. ದೊಡ್ಡ ಕುಟುಂಬವನ್ನು ಸಾಕಬೇಕಾಗಿ ಬಂದದ್ದರಿಂದ ಈತ ನಿರಂತರ ಸಾಲದಲ್ಲಿ ಮುಳುಗಿರುತ್ತಿದ್ದುದಲ್ಲದೆ ದಸ್ತಗಿರಿಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಮೇಲಿಂದ ಮೇಲೆ ತನ್ನ ವಾಸಸ್ಥಾನವನ್ನು ಬದಲಾಯಿಸಬೇಕಾಗಿ ಬರುತ್ತಿತ್ತು. 1830ರಲ್ಲಿ ಈತ ತನ್ನ ಕುಟುಂಬದೊಡನೆ ಎಡಿನ್‍ಬರೋಗೆ ಹೋಗಿ ಅಲ್ಲಿ ಹತ್ತಿರವೇ ಇದ್ದ ಲಾಸ್‍ವೇಡ್ ಎಂಬ ಹಳ್ಳಿಯಲ್ಲಿ ತನ್ನ ಮುಂದಿನ ದಿನಗಳನ್ನು ಕಳೆದ. 1837ರಲ್ಲಿ ಹೆಂಡತಿ ಸತ್ತಳು. ಕೆಲವು ಕಾಲ ಈತ ಅಫೀಮನ್ನು ಮಿತಿಮೀರಿ ಸೇವಿಸತೊಡಗಿದ್ದುಂಟು. 1813ರಲ್ಲಿ ಈತ ದಿನವೊಂದಕ್ಕೆ 8000ರಿಂದ 1200 ತೊಟ್ಟು ಅಫೀಮನ್ನು ತಿಂದದ್ದುಂಟು. 1844ರಲ್ಲಿ ಆ ಚಟ ಸ್ವಲ್ಪ ಹತೋಟಿಗೆ ಬಂತಾದರೂ 1858ರಲ್ಲಿ ಡಿಸೆಂಬರ್ ತಿಂಗಳ ದಿನಾಂಕ 8ರಂದು ಅದರ ಪರಿಣಾಮವಾಗಿಯೇ ಈತ ಅಸುನೀಗಿದ.

ಡಿ ಕ್ವಿನ್ಸಿ ಕೇವಲ ಗದ್ಯ ಬರೆಹಗಾರನಾಗಿದ್ದು ಕಾವ್ಯರಚನೆ ಮಾಡಲಿಲ್ಲವಾದರೂ ಅವನ ಗದ್ಯವೇ ಅನೇಕ ಸಲ ಕಾವ್ಯದ ಮಟ್ಟಕ್ಕೇರಿರುವುದುಂಟು. ಖ್ಯಾತ ಗದ್ಯಲೇಖಕನೆಂದೇ ಈತ ಹೆಸರಾಗಿದ್ದಾನೆ.

ಡಿ ಕ್ವಿನ್ಸಿಯ ಸಾಹಿತ್ಯಕೃತಿಗಳು ಕ್ಲೋಸ್ಟರ್ ಹೈಮ್ (1832) ಎಂಬ ಕಾದಂಬರಿಯಿಂದ ಹಿಡಿದು ಆನ್ ದಿ ನಾಕಿಂಗ್ ಎಟ್ ದಿ ಗೇಟ್ ಇನ್ ಮ್ಯಾಕ್‍ಬೆತ್ (1823) ಎಂಬ ಕಿರುವಿಮರ್ಶೆಯ ವರೆಗೆ ವ್ಯಾಪಿಸಿದ್ದು ಸುಮಾರು 150 ಶಿರೋನಾಮೆಗಳಲ್ಲಿ ಪ್ರಕಟಿತವಾಗಿವೆ. ತತ್ತ್ವಶಾಸ್ತ್ರ, ಅರ್ಥಶಾಸ್ತ್ರ ಇತಿಹಾಸ ಹಾಗೂ ಸಾಹಿತ್ಯಗಳಿಗೆ ಸಂಬಂಧಿಸಿದ ವಿವಿಧ ವಿಷಯಗಳ ಮೇಲೆ ಬರೆದಿರುವನಾದರೂ ಇವನ ಹೆಚ್ಚು ಗಮನಾರ್ಹವಾದ ಕೃತಿಗಳು ಆತ್ಮಕಥಾ ನಿರೂಪಣೆ ಮತ್ತು ವಿಮರ್ಶೆಗಳ ರೂಪದಲ್ಲಿವೆ.

ಕನ್ಫೆಷನ್ಸ್ ಆಫ್ ಎನ್ ಇಂಗ್ಲಿಷ್ ಓಪಿಯಮ್ ಈಟರ್ ಇಂದಿಗೂ ಮಾಸದ ಸಾಹಿತ್ಯಕೃತಿಯಾಗಿದೆ. 1821ರಲ್ಲಿ ಅದು ಲಂಡನ್ ಮ್ಯಾಗಜೀನ್‍ನಲ್ಲಿ ಮೊದಲು ಪ್ರಕಟವಾಗಿ ಮರುವರ್ಷ ಒಂದು ಚಿಕ್ಕ ಹೊತ್ತಗೆಯ ರೂಪದಲ್ಲಿ ಹೊರಬಿತ್ತು.

ಕವಿ ವೇಲ್ಸ್‍ನಲಿ ಚಿಕ್ಕ ವಯಸ್ಸಿನಲ್ಲಿ ನಡೆಸಿದ ಅಲೆತ, ಅಫೀಮು ಸೇವನೆಯ ಚಟದ ಪರಾರಂಭ, ಕ್ರಮೇಣ ದಿನಕ್ಕೆ ಎಂಟುಸಾವಿರ ತೊಟ್ಟುಗಳನ್ನು ಸೇವಿಸುವ ಘಟ್ಟವನ್ನು ಮುಟ್ಟಿದ್ದು, ಎಂಟು ವರ್ಷಗಳ ಕಾಲ ಇದರಿಂದ ಅನುಭವಿಸಿದ ಭಯಂಕರ ಪರಿಣಾಮಗಳು, ಇದರಿಂದ ಉಂಟಾದ ದಿಗ್ಭ್ರಮೆಗೊಳಿಸುವ ಕನಸುಗಳೂ, ಕ್ರಮೇಣ ವಿಶೇಷ ಸಂಕಟವನ್ನು ಅನುಭವಿಸಿ, ಈ ಚಟದಿಂದ ಮುಕ್ತನಾದುದು-ಇವುಗಳ ವೃತಾಂತ ಕೃತಿಯಲ್ಲಿದೆ. ಇಲ್ಲಿನ ವೃತ್ತಾಂತ ಮನಸ್ಸನ್ನು ಸೆರೆಯಿಡಿಯುವಂಥದು. ಅಫೀಮು ಸೃಷ್ಟಿಸಿದ ದೃಶ್ಯಗಳ ನಿರೂಪಣೆ ಓದುಗರನ್ನು ದಂಗುಬಡಿಸುವಂತಿದೆ. ಅಫೀಮಿನಿಂದ ಮತ್ತನಾದ ಮನಸ್ಸಿನ ಕನಸುಗಳನ್ನು ಮತ್ತು ಮಾಯಾ ಚಿತ್ರಗಳನ್ನು ವರ್ಣಿಸುವಲ್ಲಿ ಗ್ರಂಥಕರ್ತ ಶಬ್ದ ವೈಭವದಿಂದ ಕೂಡಿದ ವಿಭಾವನೆಯ ಗದ್ಯವನ್ನು ಬಳಸುತ್ತಾನೆ. ಇಲ್ಲಿನ ವರ್ಣನಾತ್ಮಕ ಭಾಗಳನ್ನು ಸ್ರೀಮ್ ಪ್ಯೂಗ್ಸ್ ಎಂದು ಕರೆಯುತ್ತಾರೆ. ಡಿ ಕ್ವಿನ್ಸಿಯ ಪ್ರತಿಗಳನ್ನು 1890ರಲ್ಲಿ 14 ಸಂಪುಟಗಳಲ್ಲಿ ಪ್ರಕಟಿಸಿದ ಪ್ರಾಧ್ಯಾಪಕ ಡೇವಿಡ್ ಮೋಸನ್ನನೇ ಇವನ ಜೀವನ ಚರಿತ್ರೆಯನ್ನೂ ಬರೆದಿದ್ದಾನೆ (1878).


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: