ಸೂತ್ರದ ಗೊಂಬೆಯಾಟ
ಗೋಚರ
ಸೂತ್ರದ ಗೊಂಬೆಯಾಟ[೧] [೨]ಮನರಂಜನೆಗಾಗಿ ಸೃಷ್ಟಿಗೊಂಡು ಬೆಳೆದು ಬಂದಿರುವ ಕಲೆ. ಹೆಸರೇ ಹೇಳುವಂತೆ ಇಲ್ಲಿ ಸೂತ್ರ, ಗೊಂಬೆ ಮತ್ತು ಸೂತ್ರಧಾರ ಪ್ರಮುಖ. ವಿಶೇಷ ವೆಂದರೆ ಸೂತ್ರಧಾರ ತೆರೆಯ ಮರೆಯಲ್ಲೇ ಇದ್ದು ಕೇವಲ ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡಿಸುವುದು.
ಪರಿಚಯ
[ಬದಲಾಯಿಸಿ]- ಜನಪದ[೩] ಕಲಾಕ್ಷೇತ್ರದ ಅದರಲ್ಲೂ ಜನಪದ ರಂಗಭೂಮಿಯ ಒಂದು ಚಮತ್ಕಾರಯುತ ಆಕರ್ಷಕ ಕಲೆ ಸೂತ್ರದ ಗೊಂಬೆ. ಹೆಸರೇ ಹೇಳುವಂತೆ ಇಲ್ಲಿ ಸೂತ್ರ, ಗೊಂಬೆ ಮತ್ತು ಸೂತ್ರಧಾರ ಪ್ರಮುಖ. ಜೀವಂತ ವ್ಯಕ್ತಿಗಳಿಗೆ ಬದಲಾಗಿ ಗೊಂಬೆಗಳನ್ನು ಸೂತ್ರದ ಹಿಡಿತದಲ್ಲಿ ತನ್ನ ಕೈಚಳಕದಿಂದ ಆಡಿಸಿ ತೋರಿಸುವ ಸೂತ್ರಧಾರನ ಕಲಾಕುಶಲತೆ ಮೆಚ್ಚತಕ್ಕದ್ದು. ವಿಶೇಷವೆಂದರೆ ಸೂತ್ರಧಾರ ತೆರೆಯ ಮರೆಯಲ್ಲೇ ಇದ್ದು ಕೇವಲ ಗೊಂಬೆಗಳಿಂದ ಅಭಿನಯ ಪ್ರದರ್ಶನ ಮಾಡಿಸುವುದು.
- ದೂರದಿಂದ ನೋಡುವ ಪ್ರೇಕ್ಷಕರಿಗೆ ರಂಗ ಸಜ್ಜಿಕೆಯ ಮೇಲೆ ಪಾತ್ರದ ಸಂದರ್ಭಕ್ಕನುಗುಣವಾಗಿ ಗೊಂಬೆಗಳು ಬಂದು ಪ್ರದರ್ಶನ ನೀಡಿ ಹೋಗುವುದು ಮಾತ್ರ ಕಾಣುತ್ತದೆ. ಸೂತ್ರದ ಹಿಡಿತದಲ್ಲಿ ಆಡುತ್ತಿರುವುದು ಕಾಣಿಸುವುದಿಲ್ಲ. ಆಧುನಿಕ ರೀತಿಯ ಚಲನ ಚಿತ್ರಗಳ ಪ್ರವೇಶವಾಗುವ ಮೊದಲು ಕಾಲಿರಿಸಿದ ಮೂಕಿ ಚಿತ್ರಗಳನ್ನು ನೆನಪಿಗೆ ತರುವ ಈ ಕಲೆ ಆ ಚಿತ್ರಗಳಿಗಿಂತ ಅನೇಕ ಪಾಲು ಆಕರ್ಷಕ ರೀತಿಯಲ್ಲಿ ಕಂಡು ಬರುತ್ತದೆ. ಈ ಕಲೆಯನ್ನು 'ಪುತ್ಥಳಿ ಗೊಂಬೆಯಾಟ’ವೆಂದೂ ಕರೆಯುತ್ತಾರೆ.
- ಕನ್ನಡ ನಾಡಿನಲ್ಲಿ ಈ ಕಲೆ ಅತ್ಯಂತ ಪ್ರಾಚೀನತೆಯನ್ನು ಹೊಂದಿರುವುದಕ್ಕೆ ಆಧಾರಗಳಿವೆ. ವಚನಗಳಲ್ಲಿ ಇವುಗಳ ಪ್ರಸ್ತಾಪ ಬರುತ್ತದೆ. ದಾಸರ ಪದಗಳಲ್ಲಿ ಬರುವ'ಗೊಂಬೆಯಾಟ’ ಶಬ್ದ ಹಾಗೂ ಕೆಲವು ಶಾಸನಗಳಲ್ಲಿನ ಉಲ್ಲೇಖಗಳು ಗಮನಾರ್ಹ. ಸೂತ್ರದ ಗೊಂಬೆಯಾಟಕ್ಕೂ ಯಕ್ಷಗಾನ ಬಯಲಾಟಕ್ಕೂ ಒಂದು ಬಗೆಯ ಸಂಬಂಧವಿದ್ದು ಅವು ಪರಸ್ಪರ ಪೂರಕವಾಗಿವೆ. ಎರಡು ಕಲೆಗಳಲ್ಲಿ ಯಾವುದು ಪ್ರಾಚೀನ ಎಂಬುದನ್ನು ಸ್ಪಷ್ಟವಾಗಿ ಹೇಳಬರುವುದಿಲ್ಲ.
ಮನರಂಜನೆಯ ಸಾಧನವಾಗಿ ಸೂತ್ರದ ಗೊಂಬೆ
[ಬದಲಾಯಿಸಿ]- ಸೂತ್ರದ ಗೊಂಬೆಯಾಟ[೪] ಮನರಂಜನೆಗಾಗಿ ಸೃಷ್ಟಿಗೊಂಡು ಬೆಳೆದುಬಂದಿರುವ ಕಲೆ. ಗ್ರಾಮಾಂತರ ಪ್ರದೇಶಗಳ ಮೇಲೆ ನಾಗರಿಕತೆ ಯ ಪ್ರಭಾವ ಬೀಳುವುದಕ್ಕೆ ಮುಂಚೆ ಈ ಕಲೆಗೆ ಒಳ್ಳೆಯ ಆಕರ್ಷಣೆಯಿತ್ತು. ಮನರಂಜನೆಯ ಸಾಧನವಾಗಿ ಸೂತ್ರದ ಗೊಂಬೆ ಪ್ರಚಲಿತವಿದ್ದ ಕಾಲದಲ್ಲೇ ಯಕ್ಷಗಾನ-ಬಯಲಾಟ ಕಲೆಗಳು ಇದ್ದುವಾದರೂ ಈ ಕಲಾ ತಂಡಗಳು ಬಹುಶಃ ವೆಚ್ಚದ ದೃಷ್ಟಿಯಿಂದ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಪ್ರದರ್ಶನ ನೀಡುವುದು ಕಷ್ಟವಾಗಿತ್ತು.
- ಅಂತಹ ಸನ್ನಿವೇಶದಲ್ಲಿ ಸೀಮಿತ ಸಿಬ್ಬಂದಿ ಮತ್ತು ಕಡಿಮೆ ವೆಚ್ಚದ ಸೂತ್ರದ ಗೊಂಬೆಯಾಟದ ತಂಡಗಳು ಆಹ್ವಾನ ಬಂದ ಸ್ಥಳಗಳಿಗೆ ಹೋಗಿ ಪ್ರದರ್ಶನ ನೀಡುತ್ತಿದ್ದುವು. ಈ ಕಾರಣದಿಂದಾಗಿ ಸೂತ್ರ ಗೊಂಬೆ ಪೂರ್ವಕಾಲದಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿತ್ತು. ಸೂತ್ರದ ಗೊಂಬೆಯಾಟ ಪ್ರಮುಖವಾಗಿ ತುಮಕೂರು, ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಚಿತ್ರದುರ್ಗ ಜಿಲ್ಲೆಗಳಲ್ಲಿ ಹಾಗೂ ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಅಲ್ಲಲ್ಲಿ ಕಂಡು ಬರುತ್ತದೆ.
- ಈ ಕಲೆ ತಲೆತಲಾಂತರಗಳಿಂದ ಬೆಳೆದು ಬಂದಿದ್ದರೂ ಇದನ್ನೇ ಜೀವನವೃತ್ತಿಯನ್ನಾಗಿ ಅವಲಂಬಿಸಿರುವವರು ಕಡಿಮೆ. ಈ ಕಲೆ ಪ್ರಚಲಿತವಿರುವ ಪ್ರದೇಶಗಳಲ್ಲಿ ಕೆಲವು ಆಸಕ್ತ ಕುಟುಂಬಗಳು ತಮ್ಮದೇ ಆದ ಮಂಡಳಿಗಳನ್ನು ರಚಿಸಿಕೊಂಡು ಕಲಾಪ್ರದರ್ಶನ ನೀಡುತ್ತ ಬಂದಿವೆ. ಇವರಿಗೆ ಇದೇ ಮೂಲ ವೃತ್ತಿಯಲ್ಲ; ಒಂದು ಹವ್ಯಾಸ. ಇಂಥ ಜನಾಂಗದವರೇ ಈ ಕಲೆಯನ್ನು ಪ್ರದರ್ಶಿಸಬೇಕೆಂಬ ನಿಯಮ-ನಿಬಂಧನೆಗಳೂ ಇಲ್ಲ. ಈ ಕಲಾಪ್ರದರ್ಶಕರಲ್ಲಿ ವ್ಯವಸಾಯ ಹಾಗೂ ಕುಶಲಕರ್ಮಿ ಕುಟುಂಬಗಳು ಹೆಚ್ಚು.
ವಿಶಿಷ್ಟತೆ
[ಬದಲಾಯಿಸಿ]- ಹತ್ತರಿಂದ ಹದಿನೈದು ಕಲಾವಿದರಿಂದ ಕೂಡಿದ ಕಲಾ ತಂಡದಲ್ಲಿ ಪ್ರತಿಯೊಂದು ಗೊಂಬೆಗೂ ಹಿನ್ನೆಲೆಯಲ್ಲಿ ಒಬ್ಬೊಬ್ಬ ಸೂತ್ರಧಾರನಿರಬೇಕು. ಈ ಆಟದಲ್ಲಿ ಭಾಗವತನೇ ಪ್ರಮುಖ. ತೆರೆಯ ಮುಂದೆ ಬರುವ ಪಾತ್ರಗಳಿಗೆ ತಕ್ಕಂತೆ ಭಾಗವತನಾದವನು ಹಾಡುತ್ತಾನೆ. ಉಳಿದವರು ದನಿಗೂಡಿಸುತ್ತಾರೆ. ಗೊಂಬೆಗಳ ಕುಣಿತ ನಡೆಯುತ್ತದೆ ಪಾತ್ರಗಳಿಗೆ ತಕ್ಕ ಮಾತುಗಳನ್ನು ಆಯಾ ಪಾತ್ರಗಳ ಸೂತ್ರಧಾರರೇ ಆಡುತ್ತಾರೆ.
- ಮಾತಿಗೆ ತಕ್ಕಂತೆ ಸೂತ್ರದ ಮೂಲಕ ಗೊಂಬೆಗಳ ಅಂಗಚಲನೆ, ಭಾವಾಭಿನಯ ವ್ಯಕ್ತವಾಗುತ್ತದೆ. ತಂಡದಲ್ಲಿ ಸೂತ್ರಧಾರಿಗಳಲ್ಲದೆ ಗೊಂಬೆಗಳನ್ನು ಸಿದ್ಧಪಡಿಸಿಕೊಡಲು ಒಬ್ಬಿಬ್ಬರು ಸಹಾಯಕರಿರುತ್ತಾರೆ. ಸೂತ್ರದ ಗೊಂಬೆಯಾಟದ ಹಿಮ್ಮೇಳ ಬಯಲಾಟದ ಹಿಮ್ಮೇಳವನ್ನೇ ಹೋಲುತ್ತದೆ. ಹಿಮ್ಮೇಳದ ಮುಖ ವೀಣೆ, ತಾಳ ಮತ್ತು ಮೃದಂಗ ವಾದಕರು ರಂಗಸ್ಥಳದ ಬಲಭಾಗದಲ್ಲಿರುತ್ತಾರೆ.
ಬಳಸುವ ಸಾಧನ-ಸಲಕರಣೆಗಳು/ಮಾಡುವ ವಿಧಾನ
[ಬದಲಾಯಿಸಿ]- ಗೊಂಬೆಗಳನ್ನು ಸಾಮಾನ್ಯವಾಗಿ ಸಾಗುವಾನಿ, ಹಾಲಿವಾಣ, ಬೂರಗ, ಅತ್ತಿ ಮುಂತಾದ ಹಗುರವಾದ ಮರಗಳಿಂದ ತಯಾರಿಸುತ್ತಾರೆ. ಮುಖ, ಕೈಕಾಲು -ಇವುಗಳನ್ನು ರಚಿಸಲು ಸಾಗುವಾನಿಯನ್ನು ಬಳಸಿದರೆ, ಇನ್ನುಳಿದ ಭಾಗಗಳ ತಯಾರಿಕೆಗೆ ಮೆದು ವಾದ ಹಾಲಿವಾಣ, ಬೂರಗ ಅತ್ತಿ ಇತ್ಯಾದಿ ಮರಗಳನ್ನು ಬಳಸುತ್ತಾರೆ. ಈ ಕಲೆಯಲ್ಲಿ ಬಳಸುವ ಗೊಂಬೆಗಳನ್ನು ಸ್ಥೂಲವಾಗಿ ಗಂಡು ಗೊಂಬೆ, ಹೆಣ್ಣುಗೊಂಬೆ, ನಕಲಿ ಗೊಂಬೆ ಎಂದು ಮೂರು ಭಾಗಗಳಾಗಿ ವಿಂಗಡಿಸಬಹುದು.
- ಗಂಡು ಗೊಂಬೆಗಳ ಎತ್ತರ ೧೮ ಅಂಗುಲದಿಂದ ೨೭ ಅಂಗುಲಗಳು. ಹೆಣ್ಣು ಗೊಂಬೆಗಳು ಎತ್ತರದಲ್ಲಿ ಗಂಡು ಗೊಂಬೆಗಳಿಗಿಂತ ಚಿಕ್ಕವಿರುತ್ತವೆ. ಗೊಂಬೆಗಳಿಗೆ ಕೈ, ಕುತ್ತಿಗೆ, ಕಾಲುಗಳನ್ನು ಪ್ರತ್ಯೇಕವಾಗಿ ಕೀಲುಗಳ ಅಥವಾ ಗಟ್ಟಿಯಾದ ದಾರಗಳಿಂದ ಜೋಡಿಸಿರುತ್ತಾರೆ. ಈ ಜೋಡಿ ದಾರಗಳ ತುದಿಗಳನ್ನು ಒಂದು ಅಡ್ಡಪಟ್ಟಿಯ ಸಹಾಯದಿಂದ ಬಂಧಿಸಿರುತ್ತಾರೆ. ವಸ್ತ್ರಾಲಂಕಾರ, ಬಣ್ಣವೆಲ್ಲಾ ಯಕ್ಷಗಾನದ ಪಾತ್ರಗಳಿಗಿರುವಂತೆಯೇ ಇರುತ್ತದೆ.
- ರೌದ್ರ, ಸೌಮ್ಯ, ಕೋಮಲ ಇತ್ಯಾದಿ ಪಾತ್ರಗಳಿಗನುಗುಣವಾಗಿ ಗೊಂಬೆಗಳಿಗೆ ಬಣ್ಣ ಹಾಕಿರುತ್ತಾರೆ. ರಾಕ್ಷಸ ಪಾತ್ರಗಳ ಮುಖವರ್ಣಿಕೆ ಉಗ್ರಸ್ವರೂಪದ್ದಾಗಿರುತ್ತದೆ. ಶ್ರೀಕೃಷ್ಣನ ಪಾತ್ರಕ್ಕೆ ನೀಲಿಬಣ್ಣವನ್ನು ಬಳಸುತ್ತಾರೆ. ನಾರದ, ಮುನಿ ಪಾತ್ರಗಳು ಸಾಮಾನ್ಯವಾಗಿ ಸ್ವಲ್ಪ ಗಿಡ್ಡವಾಗಿರುತ್ತವೆ. ಕಥಾ ಪಾತ್ರಗಳಿಗನುಗುಣವಾಗಿ ಅವನ್ನು ಸುಂದರವಾದ ಬಟ್ಟೆಗಳಿಂದ ಸಿಂಗರಿಸಿರುತ್ತಾರೆ.
- ಹೆಣ್ಣು ಪಾತ್ರಗಳ ಬಳೆ, ಸರ, ಸೊಂಟಕ್ಕೆ ವಡ್ಯಾಣ, ಪಾದಕ್ಕೆ ನೂಪುರ, ಕರ್ಣಪತ್ರ, ಕಿರೀಟಾದಿ ಅಲಂಕಾರಗಳನ್ನು ಕೆತ್ತನೆಯಲ್ಲಿಯೇ ರಚಿಸಿ ಬಣ್ಣ ಹಾಕಿರುತ್ತಾರೆ. ಅಲ್ಲದೆ ಪಾತ್ರಗಳಿಗೆ ತಕ್ಕಂತಹ ಆಯುಧಗಳನ್ನು ಕೈಗಳಿಗೆ ಭದ್ರವಾಗಿ ಹೊಂದಿಸಿರುತ್ತಾರೆ. ಉದಾಹರಣೆಗೆ- ಅರ್ಜುನನಿಗೆ ಬಿಲ್ಲು ಬಾಣ, ಭೀಮನಿಗೆ ಗದೆ, ಶ್ರೀಕೃಷ್ಣನಿಗೆ ಚಕ್ರ, ಕೊಳಲು ಇತ್ಯಾದಿ.
- ಗಂಡು ಗೊಂಬೆಗಳನ್ನು ಕುಣಿಸುವಾಗ ಅದಕ್ಕೊಪ್ಪುವ ವೀರ, ಪರಾಕ್ರಮ, ಗಂಭೀರ ನಿಲುವುಗಳು ಪ್ರದರ್ಶಿತವಾಗುವಂತೆ ಮತ್ತು ಹೆಣ್ಣು ಗೊಂಬೆಗಳನ್ನು ಕುಣಿಸುವಾಗ ಹೆಣ್ಣಿಗನುಗುಣವಾದ ನಾಚಿಕೆ, ವಯ್ಯಾರ, ಬೆಡಗು-ಬಿನ್ನಾಣಗಳು ತೋರ್ಪಡುವಂತೆ ಅಂಗ ಚಲನೆಯಲ್ಲಿ ವ್ಯತ್ಯಾಸಗಳನ್ನು ಕಾಣಿಸುವ ಸೂತ್ರಧಾರರ ಕಲಾ ಚಾತುರ್ಯ ಅದ್ಭುತವಾದುದು!
ಆಡಿಸುವ ಕಲೆ
[ಬದಲಾಯಿಸಿ]- ಗೊಂಬೆಗಳ ತಲೆಗೆ ಎರಡು ಸೂತ್ರಗಳಿರುತ್ತವೆ. ಈ ಸೂತ್ರಗಳನ್ನು ಸೂತ್ರಧಾರ ತನ್ನ ತಲೆಗೆ ಸಿಕ್ಕಿಸಿಕೊಂಡಿರುತ್ತಾನೆ. ಕೈಗಳಿಗೆ ಉದ್ದನೆಯ ತೆಳುವಾದ ಸರಳಿನ ಕೊಕ್ಕೆಯನ್ನು ಹೊಂದಿಸಿಕೊಂಡು ಅದನ್ನು ಸೂತ್ರಧಾರ ಕೈಯಲ್ಲಿ ಹಿಡಿದು ಆಡಿಸುತ್ತಾನೆ. ಈ ಗೊಂಬೆಗಳ ಕಾಲುಗಳು ಕಾಣಿಸದಂತೆ ತುಂಬಿದ ನೆರಿಗೆಯುಳ್ಳ ಸೀರೆಯನ್ನು ನೆಲದವರೆಗೆ ಹಾಸುವಂತೆ ತೊಡಿಸುತ್ತಾರೆ. ಆಭರಣಗಳೂ ಪಾತ್ರಕ್ಕೆ ತಕ್ಕಂತೆ ಇದ್ದು, ತಲೆಗೆ ಸೂಕ್ತ ಶೃಂಗಾರ ಮಾಡಿ, ಹೆರಳು (ಜಡೆ) ಹಾಕಿ ಹೂವು ಮುಡಿಸಿರುತ್ತಾರೆ.
- ಸುಂದರವಾದ ಕೆತ್ತನೆಯ ಮುಖವರ್ಣಿಕೆ ತುಂಬ ಆಕರ್ಷಣೀಯವಾಗಿರುತ್ತದೆ. ನಕಲಿ ಗೊಂಬೆಗಳ ಎತ್ತರ ಸುಮಾರು ೧೮ ರಿಂದ ೨೨ ಅಂಗುಲಗಳಷ್ಟಿರುತ್ತದೆ. ಉಳಿದ ಗೊಂಬೆಗಳಂತೆ ಇವಕ್ಕೂ ತಲೆ ಮತ್ತು ಕೈಗಳಿಗೆ ಸೂತ್ರಗಳಿರುತ್ತವೆ. ಕೆಳದವಡೆ ಚಲಿಸುವಂತಿದ್ದು ಅದಕ್ಕೂ ಸೂತ್ರ ಜೋಡಿಸಿ ಹಾಸ್ಯ ಸನ್ನಿವೇಶಕ್ಕೆ ಅನುಕೂಲವಾಗುವಂತೆ ರಚಿಸಿರುತ್ತಾರೆ. ಅಂಗಿ-ಚಲ್ಲಣ ತೊಡಿಸಿದ ನಕಲಿಗೊಂಬೆಗಳ ಕೈಯಲ್ಲಿ ಕೋಲು ಇರುತ್ತದೆ. ತಲೆಯ ಮೇಲೆ ಉದ್ದನೆಯ ಟೋಪಿ ಇರುತ್ತದೆ.
- ನಕಲಿ ಸ್ತ್ರೀ ಗೊಂಬೆಗಳು ಸಾಧಾರಣ ಸೀರೆ ಧರಿಸಿದ್ದು ಸಾಮಾನ್ಯವಾಗಿರುತ್ತವೆ. ದೂತ-ದೂತಿಯರ ಕೆಲಸವೂ ಈ ನಕಲಿ ಪಾತ್ರಗಳಿಂದಲೇ ಆಗುತ್ತದೆ. ಸೂತ್ರಧಾರಿಗಳು ಕಥಾಪ್ರಸಂಗದ ಮಧ್ಯೆ ಮಧ್ಯೆ ಜನರನ್ನು ನಗಿಸಲು ನಕಲಿ ಪಾತ್ರಗಳನ್ನು ತಂದು, ಹಾಸ್ಯ ಸನ್ನಿವೇಶಗಳಿಂದ ಪ್ರೇಕ್ಷಕರನ್ನು ನಗಿಸುತ್ತಾರೆ. ಇವುಗಳ ಮುಖವರ್ಣಿಕೆಯೇ ನಗುವಂತಿದ್ದು, ಚಾಕಚಕ್ಯತೆಯ ಮಾತುಗಾರಿಕೆಯ ಸೂತ್ರಧಾರಿಗಳ ಕೈಯಲ್ಲಿ ಇವು ಉತ್ತಮ ಮನರಂಜನೆಯನ್ನು ನೀಡುತ್ತವೆ.
- ಈ ನಕಲಿ ಪಾತ್ರಗಳನ್ನು ಕೆಲವು ಕಡೆ ಹನುಮನಾಯಕನ ದಾಂಪತ್ಯ, ಅಳ್ಳಾಚಾರಿಯ ದಾಂಪತ್ಯ ಕೇವಲ ನಗೆಗಾಗಿ ಇರುವುದು. ಅಳ್ಳಾಚಾರಿಯ ಗೊಂಬೆ ಮಾನವನ ಮನದ ವಿಡಂಬನೆಯನ್ನು ಪ್ರದರ್ಶಿಸಿ ಹುಚ್ಚು ನಗೆಯನ್ನು ತರಿಸುವುದು. ಅಳ್ಳಾಚಾರಿ ಅವನ ಹೆಂಡತಿ ಇಬ್ಬರೂ ತೀರ ಮುಪ್ಪಿನವರು. ಅವರಿಗೆ ಮಕ್ಕಳಿರುವುದಿಲ್ಲ. ಮತ್ತ ಸಿರಿವಂತಿಕೆಯ ಪ್ರದರ್ಶನ ಮಾಡುವುದಕ್ಕಾಗಿ ಆಡಿಯಿಂದ ಮುಡಿಯವರೆಗೂ ವಿವಿಧಾಲಂಕಾರಗಳಿಂದ ಭೂಷಿತರಾಗಿರುವರು.
- ತಮ್ಮ ವೃದ್ಧಾಪ್ಯಕ್ಕೆ ಸರಿ ಹೊಂದದ ಶೃಂಗಾರ ಚೇಷ್ಟೆಗಳನ್ನು ತೋರಿಸುತ್ತಾ ಭಾವಾಭಾಸವನ್ನುಂಟು ಮಾಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಾಡಿಸುವರು. ಗಣಪತಿ, ಶಾರದೆ, ಬಾಲವೇಷಗಳ ಗೊಂಬೆಗಳೂ ಇದ್ದು ಅವು ಸಾಮಾನ್ಯ ೧೪ ಅಂಗುಲ ಎತ್ತರ ವಿರುತ್ತವೆ. ಬಯಲು ರಂಗಮಂದಿರವೇ ಗೊಂಬೆಯಾಟಕ್ಕೆ ಸೂಕ್ತ ವೇದಿಕೆ. ಸಾಮಾನ್ಯವಾಗಿ, ಸುಮಾರು ಹತ್ತು ಅಡಿ ಉದ್ದ, ಐದು ಅಡಿ ಎತ್ತರ ನಾಲ್ಕೈದು ಅಡಿ ಅಗಲದಷ್ಟಿರುವ ಒಂದು ಚೌಕಟ್ಟಿನಲ್ಲಿ ಸೂತ್ರದ ಗೊಂಬೆಯಾಟವನ್ನು ತೋರಿಸುತ್ತಾರೆ.
- ಅದರ ಮೇಲಂಚಿನಲ್ಲಿ ಸೂತ್ರಧಾರಿಗಳು ಕೈ ಊರಿಕೊಂಡು ಎದೆಯೊಡ್ಡಿಕೊಂಡು ಗೊಂಬೆ ಕುಣಿಸಲು ಅನುಕೂಲವಾಗುವಂತೆ ಭದ್ರವಾದ ಅಡ್ಡಕಟ್ಟನ್ನು ಕಟ್ಟಿರುತ್ತಾರೆ. ಇದನ್ನು `ಮಂತಿನ ಕೋಲು’, `ಮಂತಿನ ಕಟ್ಟೆ’ ಅಥವಾ `ಮಂತ್ರದ ಕಟ್ಟೆ’ ಎಂದು ಕರೆಯುತ್ತಾರೆ. ಈ ಅಡ್ಡಕಟ್ಟಿನಿಂದ ಮೂರಡಿ ಅಂತರದಲ್ಲಿ (ಮುಂಭಾಗಕ್ಕೆ) ಸೂತ್ರಧಾರಿಗಳು ಕಾಣಿಸದಂತೆ ಮೇಲಿನಿಂದ ಮತ್ತೊಂದು ತೆರೆಯನ್ನು ಇಳಿ ಬಿಟ್ಟಿರುತ್ತಾರೆ.
- ಈ ಎರಡು ತೆರೆಗಳ ನಡುವಿನ ಸ್ಥಳವೇ ಗೊಂಬೆಗಳ ರಂಗಸ್ಥಳ. ಗೊಂಬೆಗಳ ಪ್ರವೇಶಕ್ಕೆ ಎರಡೂ ಕಡೆಗಳಲ್ಲಿ ಜಾಗ ಬಿಟ್ಟಿರುತ್ತಾರೆ. ಸೂತ್ರಧಾರಿಗಳು ಮಂತಿನ ಕಟ್ಟೆಗೆ ಎದೆಯೊಡ್ಡಿ ಮುಂದಕ್ಕೆ ತಲೆಬಾಗಿ ಕೆಳಗೆ ನೋಡುತ್ತಾ ಸೂತ್ರಗಳನ್ನು ಆಡಿಸಿ ಗೊಂಬೆ ಗಳನ್ನು ಕುಣಿಸುತ್ತಾರೆ. ಅವಶ್ಯಬಿದ್ದರೆ ಗೊಂಬೆಗಳನ್ನು ಮೇಲಿನಿಂದಲೇ ಪ್ರವೇಶ ಮಾಡಿಸುತ್ತಾರೆ.
- ಹಿಂದೆ ಹೊಂಗೆ ಎಣ್ಣೆ, ಹರಳೆಣ್ಣೆ, ಹಿಪ್ಪೆಎಣ್ಣೆಯನ್ನು ಬೆಳಕಿಗಾಗಿ ಬಳಸುತ್ತಿದ್ದು ಸೂತ್ರಗಳು ಕಾಣಿಸದೇ ಬರೀ ಗೊಂಬೆಗಳ ಅಭಿನಯವೇ ಪ್ರೇಕ್ಷಕರಿಗೆ ತೋರಿಬಂದು ಅತ್ಯಂತ ಪರಿಣಾಮಕಾರಿವಾಗುತ್ತಿತ್ತು. ಆದರೆ ಈಗ ವಿದ್ಯುದ್ವೀಪಗಳ ಬಳಕೆಯಿಂದ ಗೊಂಬೆ ಪ್ರದರ್ಶನದಲ್ಲಿಯ ಸೂಕ್ಷ್ಮತೆ, ಕಲಾತ್ಮಕತೆ ಮಾಯವಾಗಿದೆ ಎನ್ನಬಹುದು.
ಪ್ರದರ್ಶನ
[ಬದಲಾಯಿಸಿ]- ರಂಗಸ್ಥಳದ ಒಳಭಾಗದಲ್ಲಿ ಪ್ರತ್ಯೇಕವಾದ ಸ್ಥಳದಲ್ಲಿ ಸುತ್ತಲೂ ಗೊಂಬೆಗಳನ್ನು ತೂಗಿ ಬಿಡಲು ಹಗ್ಗಗಳನ್ನು ಕಟ್ಟಿರುತ್ತಾರೆ. ಪ್ರದರ್ಶನಕ್ಕೆ ಇಪ್ಪತ್ತರಿಂದ ಇಪ್ಪತ್ತೈದು ಗೊಂಬೆಗಳು ಬೇಕಾಗುತ್ತವೆ. ಗೊಂಬೆಗಳ ಸಂಖ್ಯೆ ಕಲಾಮಂಡಳಿಯ ಆರ್ಥಿಕ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ. ಅರವತ್ತು ಗೊಂಬೆಗಳನ್ನು ಇಟ್ಟಿರುವವರೂ ಇದ್ದಾರೆ. ಸೂತ್ರದ ಗೊಂಬೆಯಾಟದಲ್ಲಿ ಗೊಂಬೆ ಕುಣಿಸುವುದನ್ನು ಬಿಟ್ಟರೆ ಉಳಿದೆಲ್ಲ ರೀತಿನೀತಿ ಸಂಪ್ರದಾಯಗಳೂ ಯಕ್ಷಗಾನ ಬಯಲಾಟದಲ್ಲಿರುವಂತೆಯೇ.
- ಪ್ರಾರಂಭದಲ್ಲಿ ಗಣಸ್ತುತಿ, ಶಾರದಾ ಪೂಜೆ ಇತ್ಯಾದಿಗಳಿದ್ದು, ಅದರಲ್ಲಿ ಬಳಸುವ ಕಥಾಪ್ರಸಂಗಗಳನ್ನೇ ಇಲ್ಲೂ ಬಳಸಿಕೊಳ್ಳುತ್ತಾರೆ. ಇಲ್ಲಿಯೂ ಭಾಗವತನದೇ ಮುಖ್ಯ ಪಾತ್ರ. ಕಥೆಯ ಪ್ರಾರಂಭದಲ್ಲಿ ಮತ್ತು ಅಂತ್ಯದಲ್ಲಿ ಪ್ರಾರ್ಥನೆ ಮತ್ತು ಮಂಗಳವನ್ನು ಗೊಂಬೆಗಳ ಕೈಲಿ ಆರತಿ ಬೆಳಗಿಸುವುದರ ಮೂಲಕ ಮಾಡಿಸುತ್ತಾರೆ.
- ಸೂತ್ರಗೊಂಬೆಯಾಟದಲ್ಲಿ ಪೌರಾಣಿಕ ಪ್ರಸಂಗಗಳ ಪ್ರದರ್ಶನವೇ ಹೆಚ್ಚು. ಕುರುಕ್ಷೇತ್ರ, ಕೃಷ್ಣಾರ್ಜುನರ ಕಾಳಗ, ಲವ ಕುಶ, ವೀರ ಅಭಿಮನ್ಯು, ರತಿ ಕಲ್ಯಾಣ, ಕನಕಾಂಗಿ, ಕೃಷ್ಣ ಸಂಧಾನ, ಕರ್ಣಪರ್ವ, ಲಂಕಾದಹನ, ಶಿವಾರ್ಜುನ ಕಾಳಗ ಮುಂತಾದವು ಜನಪ್ರಿಯ ಪ್ರಸಂಗಗಳು.
ಉಲ್ಲೇಖಗಳು
[ಬದಲಾಯಿಸಿ]- ↑ http://kannadajaanapada.blogspot.in/2013/05/blog-post_24.html
- ↑ "ಆರ್ಕೈವ್ ನಕಲು". Archived from the original on 2017-08-09. Retrieved 2017-03-20.
- ↑ "ಆರ್ಕೈವ್ ನಕಲು". Archived from the original on 2017-03-02. Retrieved 2017-03-20.
- ↑ "ಆರ್ಕೈವ್ ನಕಲು". Archived from the original on 2012-10-23. Retrieved 2017-03-20.