ವಿಷಯಕ್ಕೆ ಹೋಗು

ಜಡೆ ಜಾನಪದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊಗ್ಗಿನ ಜಡೆ
ಮೂರು ಕಾಲಿನ ಜಡೆ

ಹೆಣ್ಣಿನ ಸೌಂದರ್ಯವೆಲ್ಲ ಅವಳ ಕೇಶದಲ್ಲಿ ಅಡಗಿದೆ ಎನ್ನುತ್ತಾರೆ ಬಲ್ಲವರು. ಪ್ರಾಚೀನ ಕಾಲದಿಂದಲೂ ಜಡೆಯ ಬಹುರೂಪವನ್ನು ಕವಿಗಳು ವರ್ಣನಾತ್ಮಕವಾಗಿ ಚಿತ್ರಿಸಿದ್ದಾರೆ. ಆಧುನಿಕ ರಾಷ್ಟ್ರಕವಿಗಳಾದ ಜಿ.ಎಸ್.ಶಿವರುದ್ರಪ್ಪನವರು 'ಜಡೆ'ಯಿಂದ ಆಕರ್ಷಿತರಾಗಿ "ಜಡೆ" ಎಂಬ ಕವಿತೆಯನ್ನೇ ರಚಿಸಿದ್ದಾರೆ.

ಪೀಠಿಕೆ

[ಬದಲಾಯಿಸಿ]

'ಸೌಂದರ್ಯ' ಎಂಬುದು ನೋಡುಗರ ಕಣ್ಣಿನಲ್ಲಿ, ಮನಸ್ಸಿನಲ್ಲಿ ಅವಿರ್ಭವಿಸುವಂತಹುದು. ಪ್ರಾಚೀನ ಕಾಲದಲ್ಲಿ ಗಂಡು-ಹೆಣ್ಣನ್ನು ಗುರ್ತಿಸಲು ಅವರ ಅಂಗಾಂಗಗಳನ್ನು ನೋಡ ಬೇಕಾಗುತ್ತಿತ್ತು. ಏಕೆಂದರೆ ಗಂಡಿಗೂ ಹೆಣ್ಣಿನಷ್ಟೇ ಉದ್ದವಾದ ತಲೆಗೂದಲಿರುತ್ತಿತ್ತು. ಯಾವುದಾದರೊಂದು ವಿಶೇಷ ಸಂದರ್ಭದಲ್ಲಿ ಹೆಣ್ಣು-ಗಂಡು ತಮ್ಮ ಮನಸ್ಸಿಗೊಪ್ಪುವಂತೆ ಅಲಂಕರಿಸಿಕೊಳ್ಳುತ್ತಿದ್ದರು. ಪ್ರಾಚೀನ ಕಾಲದಿಂದಲೂ ಕನ್ನಡತಿಯರು ಕೇಶಾಲಂಕಾರ ಕಲೆಯಲ್ಲಿ ನಿಪುಣರೆನಿಸಿ ಕೊಂಡಿದ್ದಾರೆ. ನಮ್ಮಲ್ಲಿ ಪುರುಷರ ಕೂದಲಿಗಿಂತ ಮಹಿಳೆಯರ ಕೂದಲಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ. ಹೆಣ್ಣಿನ ಸೌಂದರ್ಯವೆಲ್ಲ ಅವಳ ಕೇಶದಲ್ಲಿ ಅಡಗಿದೆ ಎನ್ನುತ್ತಾರೆ. ನಿಸರ್ಗದಲ್ಲಿ ಸಾಕಷ್ಟು ವೈವಿಧ್ಯವಿರುವಂತೆ, ಪ್ರಕೃತಿ ಎಂದು ಕರೆಯಲ್ಪಡುವ ಹೆಣ್ಣಿನಲ್ಲೂ ಆಕೆಯ ಕೂದಲಿನಲ್ಲೂ ಬಹಳಷ್ಟು ವಿಶಿಷ್ಟತೆಗಳಿವೆ. ಮದುವೆ, ನಾಮಕರಣ ಮುಂತಾದ ಶುಭ ಸಂದರ್ಭಗಳಲ್ಲಿ ಹೆಣ್ಣು ತನ್ನನ್ನು ,ತನ್ನ ಜಡೆಯನ್ನು ವಿಶೇಷವಾಗಿ ಅಲಂಕರಿಸಿಕೊಂಡು ಬೀಗುತ್ತಾಳೆ. ಕೂದಲಿನಲ್ಲಿ ಹಲವು ವಿಧಗಳಿವೆ- ದಟ್ಟ ಕೂದಲು, ನೀಳ ಕೂದಲು, ಗುಂಗುರು ಕೂದಲು, ವಿರಳ ಕೂದಲು, ಕಪ್ಪು ಕೂದಲು, ಕೆಂಚು ಕೂದಲು, ಬಿಳಿಮಿಶ್ರಿತ ಕಪ್ಪು ಕೂದಲು ಮುಖ್ಯವಾಗುತ್ತವೆ.

ಜನಪದ ಪುರಾಣಗಳಲ್ಲಿ ಜಡೆ

[ಬದಲಾಯಿಸಿ]

ಜಡೆ ಬಹಳ ಹಿಂದಿನಿಂದಲೂ ಸಾಹಿತ್ಯದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಹಾಗಾಗಿ ಪುರಾಣ, ಚರಿತ್ರೆಯೊಂದಿಗೆ ಜಡೆ ತಳಕು ಹಾಕಿಕೊಂಡಿದೆ. ಸರ್ವಜ್ಞನ ಸೋಮೇಶ್ವರ ಶತಕದಲ್ಲಿ ೧೨೦ ಜಡೆಗಳ ಬಗ್ಗೆ ಉಲ್ಲೇಖಗಳಿವೆ. ಕಾಡಿನಲ್ಲಿದ್ದ ಋಷಿಪುಂಗವರು ಉದ್ದನೆ ಜಡೆ ಬಿಡುತ್ತಿದ್ದೂ, ಆ ಜಡೆ ಗಂಟಾದರೆ ಅವರನ್ನು 'ಜಡೆಸಿದ್ದಯ್ಯ'ನೆಂದು ಕರೆದಿದ್ದಾರೆ. ಋಷಿ ಪತ್ನಿಯರು ನಾಗವೇಣಿಯರಾಗಿರುತ್ತಿದ್ದರು. ಪುರಾಣದಲ್ಲಿ ದೇವಾನುದೇವತೆಗಳಿಗೆಲ್ಲ ನೀಳಕೇಶವಿರುತ್ತಿತ್ತು. ಶಿಷ್ಟಪುರಾಣಕ್ಕೂ ಜನಪದ ಪುರಾಣಕ್ಕೂ ಬಹಳ ವ್ಯತ್ಯಾಸಗಳಿವೆ. ಶಿಷ್ಟ ಪುರಾಣದಲ್ಲಿ ದೈವತ್ವದ ಪರಿಕಲ್ಪನೆ ಭಯಭಕ್ತಿಯಿಂದ ಕೂಡಿದ್ದರೆ, ಜನಪದ ಪುರಾಣದಲ್ಲಿ ದೈವತ್ವದ ಪಾತ್ರಗಳನ್ನು ಜನಪದರೇ ಅನುಭವಿಸುತ್ತಾರೆ. ಸೀತೆಯ ಸಿರಿಮುಡಿಗೆ ರಾವಣ ಕೈ ಹಾಕಿದ್ದರಿಂದಲೇ ರಾಮಾಯಣ ನಡೆಯಿತು, ದ್ರೌಪದಿಯ ಶ್ರೀಮುಡಿಗೆ ದುಶ್ಯಾಸನ ಕೈ ಹಾಕಿದ್ದರಿಂದ ಮಹಾಭಾರತ ನಡೆಯಿತು. ಪರಶಿವ ಗಂಗೆಯನ್ನು ನಿಯಂತ್ರಿಸಲು ತನ್ನ ಜಟೆ ಬಳಸಿದ್ದಾನೆ. ಅದೇ ರೀತಿ ಮಾರಮ್ಮನ ಜಡೆ, ಎಲ್ಲಮ್ಮನ ಹಾವಿನ ಜಡೆ, ಮಂಟೇಸ್ವಾಮಿ/ಜುಂಜಪ್ಪರ ಚೇಳಿನಜಡೆ, ಶಿವನ ವ್ಯೂಮಕೇಶ ,ಅಕ್ಕಮಹಾದೇವಿಯ ನೀಳ ಕೇಶ ಮುಖ್ಯವಾಗುತ್ತದೆ. ಚಾಲುಕ್ಯನ ಜಡೆ ನಂದರ ನಾಶಕ್ಕೆ ಕಾರಣ ವಾಯಿತಂತೆ. ಬ್ರಹ್ಮ ಕಲಶ ಸ್ಥಾಪನೆ ಸಂದರ್ಭದಲ್ಲಿ ಕೂದಲಿನ ಪ್ರಸ್ತಾಪ ಬರುತ್ತದೆ. ಕೇಶ ಎಂಬುದು ಗೌರವ, ಪಾತಿವ್ರತ್ಯೆ, ಮರ್ಯಾದೆಯ ಸೂಚಕ.

ಶಿಲೆಗಳಲ್ಲಿ ಜಡೆಯ ಪರಿಕಲ್ಪನೆ

[ಬದಲಾಯಿಸಿ]

ಪ್ರಾಚೀನ ಕರ್ನಾಟಕದ ಶಿಲ್ಪಕಲೆಗಳಲ್ಲಿ, ಕನ್ನಡ ಕಾವ್ಯಗಳಲ್ಲಿ ದೊರೆಯುವ ಜಡೆ/ಮುಡಿಗಳ ವರ್ಣನೆ ಅಸಾಧಾರಣವಾದುದು. ಚಾಲುಕ್ಯರ ರಾಜಧಾನಿಯಾಗಿದ್ದ ಐಹೊಳೆ, ಪಟ್ಟದಕಲ್ಲು, ಲಡಖಾನ ವೊದಲಾದ ದೇವಾಲಯಗಳ ಕೇಶಲಂಕಾರ ವೈವಿಧ್ಯಮಯವಾಗಿವೆ. ಅವುಗಳಲ್ಲಿ ಪ್ರಮುಖ ವಾದುವುಗಳೆಂದರೆ-ಬಿಡುಮುಡಿ, ಸೋಗೆ ದುರುಂಬು, ಮುತ್ತಿನ ಮುಡಿ, ಎಳಲ್ಮುಡಿ, ಬಳಲ್ಮುಡಿ, ಗೋಡಂಬಿ ಮುಡಿ, ತೋರು ಮುಡಿ, ನಾಗರ ಜಡೆ, ಕೇದಗೆ ಹೂವಿನ ಜಡೆ ಮುಂತಾದುವು. ಬೇಲೂರು-ಹಳೇಬೀಡು ದೇವಾಲಯಗಳ ಶಿಲಾಬಾಲಿಕೆಯರ ಜಡೆ/ಮುಡಿಗಳು ಆಕರ್ಷಣೀಯ ವಾಗಿವೆ. ಬೀಸಣಿಗೆಯಾಕಾರದ ಜಡೆಮುಡಿಗೆ ಜರದ ಗೊಂಡೆಗಳನ್ನು ಕಟ್ಟಲಾಗಿದೆ. ಈ ಜಡೆ/ಮುಡಿಗೆ ಸಿರಿಮುಡಿ, ಬೇಲೂರ ಮುಡಿ ಎಂಬ ಹೆಸರಿದೆ. ವಿಜಯನಗರದ ಅರಸರ ಕಾಲದ ಶಿಲ್ಪಸುಂದರಿಯರ ಮುಡಿಗಳೆಲ್ಲ ಬಂಬಲ್ಮುಡಿ ಅಥವಾ ತೆಕ್ಕೆದುರುಂಬುಗಳಾಗಿವೆ. ಮಾಲೆ ಸೂಡಿನ ಕೇಶಾಲಂಕಾರವನ್ನು ಮಾಡಲಾಗಿದೆ. ಮುಡಿಗೆ ಗಂಗಾವನ ಮತ್ತು ಸಿಂಬಿ, ವಿವಿಧ ಬಗೆಯ ಜಾಲರಿಗಳನ್ನು ಬಳಸಿದ್ದಾರೆ.

ಜಡೆಯ ವಿಧಗಳು/ವಿನ್ಯಾಸಗಳು

[ಬದಲಾಯಿಸಿ]

೧.ಮೂರುಕಾಲಿನ ಜಡೆ, ೨.ಒಂದು ಜಡೆ, ೩.ಸಾವಿರ ಕಾಲಿನ ಜಡೆ, ೪.ತಲೆಗಂಟು/ಹೆಣೆಗಂಟು, ೫.ತೆಳು ಜಡೆ, ೬.ನಾಲ್ಕು ಕಾಲಿನ ಜಡೆ, ೭.ಎರಡು ಜಡೆ, ೮.ಬದನೆಕಾಯಿ ಜಡೆ, ೯.ಸೌತೆ ಕಾಯಿ ಜಡೆ, ೧೦.ಗಟ್ಟಿ ಜಡೆ, ೧೧.ಕತ್ತರಿ ಜಡೆ, ೧೨.ಮೊಲದ ಕಿವಿ ಜುಟ್ಟು, ೧೩.ಕೃಷ್ಣಗೊಂಡೆ, ೧೪.ನೀರು ಜಡೆ, ೧೫.ಬಾದಾಮಿ ಜಡೆ, ೧೬.ಕುದುರೆ ಜುಟ್ಟು, ೧೭.ಕುಂಡೆ ಹೆಣೆಗಂಟು, ೧೮.ಕೊತ್ತಂಬರಿ ಜುಟ್ಟು, ೧೯.ವೊಗ್ಗಿನ ಜಡೆ, ೨೦.ತುರುಬು, ೨೧.ಬಿಚ್ಚು ಮುಡಿ ಮುಂತಾದುವು.

ಜಡೆ ವಿವರಣೆ

[ಬದಲಾಯಿಸಿ]

ಜಡೆ ಹೆಣೆಯುವುದು/ಕಟ್ಟುವುದು ಒಂದು ವಿಶಿಷ್ಟ ಕಲೆ. ಬೈತಲೆ, ಎಡ ವಾರೆಗೆರೆ, ಬಲ ವಾರೆಗೆರೆ, ಚಿಕ್ಕಗೆರೆ, ನೇರ ತೆಗೆಯದೆ ಮುಡಿಕಟ್ಟುವವರಿದ್ದಾರೆ. ಮೇಲೆ ಹೇಳಿರುವ ಜನಪದ ಜಡೆಗಳಲ್ಲಿ ಒಂದೈದನ್ನು ಮಾತ್ರ ವಿವರಿಸುವೆ.

೧.ಕೃಷ್ಣಗೊಂಡೆ- ಈ ಮುಡಿ ಶೈಲಿಯನ್ನು ಸಾಮಾನ್ಯವಾಗಿ ಮಕ್ಕಳಿಗೆ ಹಾಕುವರು. ಮಗುವಿನ ನೆತ್ತಿಯ ಮೇಲೆ ನಾಲ್ಕು ಕಡೆ ಕೂದಲನ್ನು ಬಿಟ್ಟು ನಡುವೆ ಉಳಿದ ಕೂದಲನ್ನು ಎತ್ತಿಕಟ್ಟಿ ಕುಚ್ಚಿನಾಕಾರ ಮಾಡಿ ಗಂಟು ಕಟ್ಟುವುದು. ಇದನ್ನು ವೊದಲು ಯಶೋಧೆ ಬಾಲಕೃಷ್ಣನಿಗೆ ಹಾಕಿದ್ದಳಂತೆ.

೨.ಮೊಲದ ಕಿವಿ ಜುಟ್ಟು-ಕೂದಲನ್ನು ಸಿಕ್ಕಿಲ್ಲದಂತೆ ಬಾಚಿ, ನೇರ ತೆಗೆದು ಎರಡು ಬದಿಯಲ್ಲೂ ಸಮಾನ ಕೂದಲನ್ನು ತೆಗೆದು ಕೊಂಡು ಒಂದೊಂದು ಕಡೆಯು ಮುಕ್ಕಾಲು ಪಾಲು ಕೂದಲನ್ನು ಹಾಗೆ ಬಿಟ್ಟು, ಕಾಲು ಭಾಗದ ಕೂದಲನ್ನು ತುದಿವರೆವಿಗೂ ಹೆಣೆದು ರಬ್ಬರ್/ಟೇಪಿನಿಂದ ಕೂದಲನ್ನು ಭದ್ರಗೊಳಿಸಿ ಎರಡು ಕಡೆಯೂ ಆ ಕೂದಲನ್ನು ಮೇಲಕ್ಕೆತ್ತಿ ಕಟ್ಟುವರು. ಆಗ ಕಟ್ಟಿರುವ ಕೂದಲು ವೊಲದ ಕಿವಿಯಂತೆ ಕಾಣುತ್ತದೆ.

೩.ಸಾವಿರ ಕಾಲಿನ ಜಡೆ- ಹೆಸರಿಗೆ ಇದನ್ನು ಹಾಗನ್ನುತ್ತಾರಷ್ಟೆ. ಇದರಲ್ಲಿ ೨ವಿಧ. ೧.ಕೂದಲಿನ ಸಣ್ಣ ಸಣ್ಣ ಎಳೆ ತೆಗೆದು ಆ ಭಾಗಗಳನ್ನೇಲ್ಲ ಮೂರು ಕಾಲಿನ ಜಡೆಯ ಮಾದರಿಯಲ್ಲಿ ನಾಜೂಕಾಗಿ ಹೆಣೆಯುವುದು. ಜಡೆ ಹೆಣೆದಾಗ ದಟ್ಟಕೂದಲಿದ್ದರೆ ಜಡೆ ಅಂಗೈ ಅಗಲ ಕಾಣಿಸುತ್ತದೆ. ೨.ಕೂದಲನ್ನು ಚಿಕ್ಕ ಚಿಕ್ಕದಾಗಿ ತೆಗೆದು ಕೊಂಡು,೨೧ ಭಾಗಮಾಡಿ ಅವುಗಳಲ್ಲಿ ಚಿಕ್ಕ ಚಿಕ್ಕ ಜಡೆಗಳನ್ನು ಹೆಣೆದು(ನಿಗ್ರೊಗಳ ಜಡೆ ಮಾದರಿಯಲ್ಲಿ) ಅವನ್ನೇಲ್ಲ ಒಟ್ಟುಗೂಡಿಸಿ, ಮೂರುಕಾಲಿನ ಜಡೆ ಹೆಣೆದು ಮೇಲಕ್ಕೆತ್ತಿ ಕಟ್ಟುವುದು.

೪.ಮೊಗ್ಗಿನ ಜಡೆ-ಶ್ರೀಮಂತರು ಮತ್ತು ಮಧ್ಯಮ ವರ್ಗದ ಜನರು ಮಾತ್ರ ವೊಗ್ಗಿನ ಜಡೆ ಹಾಕಿಸುತ್ತಿದ್ದರು. ಸಾಮಾನ್ಯವಾಗಿ ಮೈಸೂರಿನ ದುಂಡು ಮಲ್ಲಿಗೆ ವೊಗ್ಗಿನಿಂದಲೆ ಜಡೆ ಹಾಕುವುದು ರೂಢಿ. ವೊದಲು ಮೂರು ಕಾಲಿನ ಜಡೆ ಹೆಣೆದು, ಜಡೆಯ ಕೊನೆಯಲ್ಲಿ ಕುಚ್ಚಾಕಿ ಅದನ್ನು ಬಿಗಿ ಭದ್ರಗೊಳಿಸಿ, ಉದ್ದವಾದ ಸೂಜಿಗೆ ಗಟ್ಟಿಯಾದ ದಾರದಿಂದ ಮೂರು ಮೂರು ಸಾಲು ವೊಗ್ಗನ್ನು ಪೋಣಿಸಿ ನಾಜೂಕಾಗಿ ಜಡೆಯ ಮೇಲೆ ವೊಗ್ಗನ್ನು ಕೂರಿಸುತ್ತಾ ನಡು ನಡುವೆ ಒಂದೊಂದು ಪುಟ್ಟ ಗುಲಾಬಿಯನ್ನು ಸೇರಿಸಿ, ಅದರ ಸುತ್ತಲೂ ತುಳಸಿ/ಪಚ್ಚೆ ಎಲೆಗಳನ್ನು ಜೋಡಿಸಿ ಮೂರು ಗಂಟೆಗಳ ಕಾಲ ತನ್ಮಯವಾಗಿ ಜಡೆ ಹೆಣೆಯುತ್ತಿದ್ದರು. ಆ ಜಡೆಯನ್ನು ಮೂರು ನಾಲ್ಕು ದಿನಗಳ ಕಾಲ ಬಿಚ್ಚುವ ಹಾಗಿರಲಿಲ್ಲ. ಜಡೆ ಹಾಕಿಸಿ ಕೊಂಡವರು ಮಲಗುವಾಗ ಮಖಾಡೆಯಾಗಿ ಮಲಗ ಬೇಕಾಗಿತ್ತು. ಇದರಲ್ಲಿ ಸಾಧಕಕ್ಕಿಂತ ಬಾಧಕವೇ ಅಧಿಕವಾದುದರಿಂದ, ಇಂದಿನವರು ಕೃತಕ ವೊಗ್ಗಿನ ಜಡೆಯ ವೊರೆ ಹೋಗುತ್ತಿದ್ದಾರೆ. ಅಪರೂಪಕ್ಕೆ ಸೂಜಿ ಮಲ್ಲಿಗೆಯಿಂದಲೂ ವೊಗ್ಗಿನ ಜಡೆ ಹಾಕಿಸಿಕೊಳ್ಳುತ್ತಿದ್ದರು.

೫.ತುರುಬು-ಇದರಲ್ಲಿ ಹಲವಾರು ವಿಧಗಳಿವೆ. ತಲೆಗಂಟು, ಬಿಚ್ಚೋಡೆ, ಸಿರಿ ಮುಡಿ, ಪೂಮುಡಿ, ಜೋಲ್ಮುಡಿ, ಜಡೆಮುಡಿ, ಸೋರ್ಮುಡಿ, ಮುತ್ತಿನ ಮುಡಿ, ಬಿಡು ಮುಡಿ, ಬಂಬಲ್ಮುಡಿ ಪ್ರಮುಖವಾದುವು. ಈ ತುರುಬುಗಳೆಲ್ಲ ಕಲಾತ್ಮಕವಾಗಿ ಹಾಕಲ್ಪಡುವಂತಹವು. ವೊದಲು ಒಂದು ಸಿಂಬಿ ಇಟ್ಟು ಕೂದಲಿನಿಂದ ದೊಡ್ಡ ಗಂಟನ್ನು ಕಟ್ಟ ಬೇಕು. ಉಳಿದರ್ಧ ಕೂದಲನ್ನು ಓರಣವಾಗಿ ಬಾಚಿ ಅರ್ಧ ಚಂದ್ರಾಕಾರದ ಸಿಂಬಿಯನ್ನು ಒಳಗಿಟ್ಟು ಸುತ್ತಲೂ ಕೂದಲನ್ನು ಸುತ್ತಿ ,ಅದನ್ನು ಮುಡಿಯ ಕೆಳಭಾಗದಿಂದ ನೆಟ್ಟಗೆ ಮುಡಿವರೆಗೆ ಬರುವಂತೆ ಮತ್ತೆ ಸುತ್ತಿ ಪಿನ್ನುಗಳನ್ನು ಹಾಕಿದರೆ ಬಿಡುಮುಡಿ ಸಿದ್ದ. ಇತ್ತೀಚಿನ ತುರುಬಿಗೆ ನೆಟ್ ಹಾಕುವುದು ನವೀನಶೈಲಿ ಎನಿಸಿದರೂ, ಹಿಂದೆ ನೆಟ್ ಗೆ ಮಣಿಬಲೆ ಎನ್ನುತ್ತಿದ್ದರು. ಸಣ್ಣ ಮುತ್ತು, ದೊಡ್ಡಮುತ್ತು, ಮಣಿ, ಸುರಗಿ, ಬಕುಲದಂತಹ ನಾಜೂಕಾದ ಹೂಗಳಿಂದ ಮುಡಿ ಬಲೆ ರಚಿಸಿ ಧರಿಸುತ್ತಿದ್ದರು.

ಜನಪದಗೀತೆಗಳಲ್ಲಿ ಜಡೆ

[ಬದಲಾಯಿಸಿ]
 • ೧.ಕನ್ನೇರ ಕೈಲಿ ಚಿನ್ನದ ಬಾಚಣಿಗೆ

ಕೆನ್ನೆ ಕೂದಲ ನಿಗೋರಿ ಬಾಚಾರಲ್ಲೆ
ಪುಟ್ಟಣ್ಣನೆಂಬೋ ಚೌಲಿಯ ತೂಬಿನ
ಮೇಲೆ ಹೂಡ್ಯಾರೆ ಹೊಸಹೂವ

 • ೨.ಕೆಳದಿಯ ಕೂದಲು ಚೊಗಚೀಯ ಕಾಯಂಗೆ

ನಿಗುಚಿ ಬೈತಲೆ ತೆಗೆದಾಳೆ ನನ/ಗೆಳತಿ
ಗೆಳತ್ಯಾರ ಬಳಗಕೆ ಅತಿ ಚೆಲುವಿ

 • ೩.ಕೆನ್ನೆ ಕೂದಲಿಗೆ ಚಿನ್ನದ ಗೊಜಲಿಂಡು

ಮುಕ್ಕಣ್ಣೇಶ್ವರನ ಮಡದಿ/ಗೌರಮ್ಮಗೆ
ಹೂವಿನ ಹೊನ್ನಾಲಿ ಬಿಗಿಸ್ಯಾರೆ

 • ೪.ತಂದೀಯ ನೆನೆದರ ತಂಗಳು ಬಿಸಿಯಾಯ್ತು

ಗಂಗಾದೇವಿ ನನ್ನ ಹಡೆದವ್ನ/ನೆನೆದರ
ಮಾಸಿದ ತಲೆಯು ಮಡಿಯಾಯ್ತು

 • ೫. ಮುತ್ತಿನ ಮೂಗುತಿ ಮೂರೆಸಳ ಕೇದಿಗಿ

ಮುಚ್ಚಿ ಕೊಂಡಾಳ ಹೆರಳಾಗ/ಕಂದಮ್ಮನ
ಎತ್ತಿ ಕೊಂಡವರಿಗೆ ಅನುಮಾನ

ಗಾದೆ ನಂಬಿಕೆಗಳಲ್ಲಿ ಜಡೆಯ ಪಾತ್ರ

[ಬದಲಾಯಿಸಿ]
 • ೧. ದಿನವೂ ಮುಡಿ ಬಿಚ್ಚಿ ತಲೆ ಬಾಚಬೇಕು; ಇಲ್ಲದಿದ್ದರೆ ಕೂದಲು ಗಂಟಾಗುತ್ತದೆ.
 • ೨. ಬಿಚ್ಚು ಕೂದಲು ಪುರುಷರನ್ನು ಆಕರ್ಷಿಸುತ್ತದೆ; ಆದುದರಿಂದ ಮನೆಯಿಂದ ಹೊರಗೋಗುವಾಗ ಕೂದಲನ್ನು ಹರಡಿಕೊಂಡು ಹೋಗಬಾರದು.
 • ೩. ಬಿಳಿ ಕೂದಲನ್ನು ಕೀಳಬಾರದು ಅದು ಕಿತ್ತಷ್ಟೂ ಹೆಚ್ಚಾಗುತ್ತದೆ; ಬಿಳಿ ಕೂದಲಿನವರಿಗೆ ಕೀಳರಿಮೆ ಜಾಸ್ತಿ.
 • ೪. ಜೇನು ತುಪ್ಪ ಹಚ್ಚಿದ್ರೆ ಕೂದಲು ಬೆಳ್ಳಗಾಗುತ್ತೆ; ಅರಿಶಿನ ಹಚ್ಚಿದ್ರೆ ಕೂದಲು ನಾಶವಾಗುತ್ತೆ.
 • ೫. ರಾತ್ರಿ ಹೊತ್ತಲ್ಲಿ ತಲೆ ಬಾಚಬಾರದು; ಕೂದಲನ್ನು ಕತ್ತರಿಸ ಬಾರದು.

ಕೇಶರಾಶಿಯನ್ನು ಶುಚಿಗೊಳಿಸುವ ವಿಧಾನ

[ಬದಲಾಯಿಸಿ]

ಕೂದಲನ್ನು ವಾರಕ್ಕೆರಡು ಬಾರಿ ಶುಚಿಗೊಳಿಸ ಬೇಕು. ಶುಚಿಗೊಳಿಸುವಾಗ ಕೂದಲಿಗೆ ಸೀಗೆಕಾಯಿ ಪುಡಿ, ಚಿಗರೆ ಪುಡಿ, ಬೇವಿನ ಎಲೆ, ದಾಸವಾಳದ ಎಲೆ, ಮದರಂಗಿ ಎಲೆ, ಕಡಲೆ ಹಿಟ್ಟು, ಮತ್ತಿಸೊಪ್ಪು, ಮೆಂತ್ಯೆ ಸೊಪ್ಪು, ಮೆಂತ್ಯೆಕಾಳು,ಹೆಸರುಕಾಳು ಮುಂತಾದುವನ್ನು ಪುಡಿಮಾಡಿ, ಸೀಗೆಪುಡಿತೊಂದಿಗೆ ಕಲೆಸಿ ತಲೆ ಕೂದಲನ್ನು ತೊಳೆದು ಕೊಂಡರೆ ಶಾಂಪುವಿಗಿಂತಲೂ ಆಹ್ಲಾದಕಾರಿಯಾಗಿರುತ್ತದೆ. ಕೂದಲು ಉದುರುವುದಿಲ್ಲ. ಹೊಟ್ಟು, ಹೇನು, ಸೀರು ಬರುವುದಿಲ್ಲ. ಹಾಗೊಂದು ವೇಳೆ ಕೂದಲಿಗೆ ಹೇನು ಬಂದರೆ, ತುಸು ಗರಿಕೆ, ಕರಿಬೇವು, ಮದರಂಗಿ ಎಲೆಗಳೊಂದಿಗೆ ಕೊಬ್ಬರಿ ಎಣ್ಣೆಯನ್ನು ಬಿಸಿ ಮಾಡಿ ಆರಿಸಿ ಕೂದಲಿಗೆ ಹಚ್ಚುವುದರಿಂದ ಅವುಗಳನ್ನು ನಿವಾರಿಸ ಬಹುದು.

ಡಾ.ಜಿ.ಎಸ್.ಎಸ್ ಅವರ ಜಡೆ ಕವಿತೆ

[ಬದಲಾಯಿಸಿ]

ಲಲನೆಯರ ಬೆನ್ನಿನೆಡೆ
ಹಾವಿನೊಲು ಜೋಲ್ವ ಜಡೆ
ಅತ್ತಿತ್ತ ಹರಿದ ಜಡೆ!
ಚೇಳ್ ಕೊಂಡಿಯಂತಹ ಜಡೆ
ಮೋಟು ಜಡೆ, ಚೋಟು ಜಡೆ
ಚಿಕ್ಕವರ ಚಿನ್ನ ಜಡೆ!
ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ
ಬಡವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ
ಗಂಟು ಜಡೆ!
ಅಕ್ಕ ತಂಗಿಯ ಮುಡಿಯ
ಹಿಡಿದು ನಾನೆಳೆದಂಥ
ಮಲ್ಲಿಗೆಯ ಕಂಪು ಜಡೆ
ಮಾತೃ ಮಮತಾವೃಕ್ಷ ಬಿಟ್ಟ ಬೀಳಲಿನಂತೆ
ಹರಿವ ತಾಯ ಜಡೆ!
"ಕುರುಕುಲ ಜೀವಾಕರ್ಷಣ ಪರಿಣತ"-ಆ
ಪಾಂಚಾಲಿಯ ಜಡೆ!
ಸೀತೆಯ ಕಣ್ಣೀರೊಳು ಮಿಂದ ಜಡೆ
ಓ ಓ ಈ ಜಡೆಗೆಲ್ಲಿ ಕಡೆ!

  * * * * * * *
ಸಂಜೆಯಲಿ ಹಗಲು ಕೆದರುವ ಕತ್ತಲೆಯ
ಕಪ್ಪು ಜಡೆ
ಬೆಳಗಿನಲಿ ಇರುಳು ಬಿಚ್ಚುವ ಬೆಳ್ಳನೆಯ
ಬೆಳಕು ಜಡೆ
ಒಮ್ಮೊಮ್ಮ ಮುಗಿಲಲ್ಲಿ ತೇಲುತ ಬರುವಂಥ
ಬೆಳ್ಳಕ್ಕಿಗಳ ಜಡೆ
ಕ್ರೌಂಚೆಗಳ ಜಡೆ
ಮರಮರದಿ ಬಳುತಿಹ ಹೂಬಿಟ್ಟ ಬಳ್ಳಿ ಜಡೆ
ಕಾಡು ಬಯಲಿನ ಹಸುರು ಹಸರದಲಿ ಹರಿ ಹರಿದು
ಮುನ್ನಡೆವ ಹೊಳೆಯ ಜಡೆ!
ಶ್ರೇಣಿ ಶ್ರೇಣಿಗಳಾಗಿ ಹರಿದಿರುವ ಗಿರಿಯ ಜಡೆ!
ಗಿರಿ ಶಿವನ ಶಿರದಿಂದ ಹಬ್ಬಿ ಹಸರಿಸಿನಿಂದ
ಕಾನನದ ಹಸುರು ಜಡೆ
ನಕ್ಷತ್ರಗಳ ಮುಡಿದ ನಟ್ಟಿರುಳ ನಭದ ಜಡೆ!
ಮುಂಗಾರು ಮೋಡಗಳು ದಿಕ್ಕು ದಿಕ್ಕಿಗೆ ಬಿಚ್ಚಿ
ಹರಡಿರುವ ಮಳೆಯ ಜಡೆ!
ಚಂದ್ರಚೂಡನ
ವ್ಯೋಮಕೇಶನ
ವಿಶ್ವವನೆ ವ್ಯಾಪಿಸುತ ತುಂಬಿರುವ ಜಡೆ
ಗಾನಗಳ ಕಾವ್ಯಗಳ ಶಲ್ಪಗಳ ಕಲೆಯ ಜಡೆ
ಎಲ್ಲವೊ ರಮ್ಯವೆಲ್ಲ!
ಜಡೆಯಾಚೆ ತಿರುಗಿಸಿದ ತಾಯ ಮುಖ ಮಾತ್ರ ಇಂದಿಗೂ
ಕಾಣದಲ್ಲ!

ಸಮಾರೋಪ

[ಬದಲಾಯಿಸಿ]

ಲಲಿತಕಲೆಗಳಲ್ಲಿ ಅಲಂಕಾರ ಕಲೆಯು ಒಂದು. ಅಲಂಕಾರಪ್ರಿಯತೆ ಹೆಣ್ಣಿನಲ್ಲಿ ರಕ್ತಗತವಾಗಿ ಬಂದಿದೆ. ಕೂದಲು ತುಂಬಾ ಗಟ್ಟಿಯಾದುದು. ಹೇಗೆಂದರೆ ದೊಂಬರಾಟದ ಹುಡುಗುಯೊಬ್ಬಳು ತನ್ನ ಜಡೆಗೆ ಕಲ್ಲನ್ನು ಕಟ್ಟಿ ಗಿರಿಗಿಟ್ಟೆಯಾಡಿದರೂ ಅದು ಕಿತ್ತು ಬರುವುದಿಲ್ಲ. ಜನಪದ ಕ್ರೀಡೆಯಾದ ಕೋಲಾಟದಲ್ಲಿ ಜಡೆಕೋಲಾಟವು ತುಂಬ ಪ್ರಸಿದ್ದಿ ಪಡೆದಿದೆ. ಆ ಆಟದಲ್ಲಿ ಅವರು ಸೀರೆಗಳನ್ನು ಕೂದಲಿಗೆ ಸಾಂಕೇತಿಕವಾಗಿ ಬಳಸಿಕೊಂಡು ಮೂರು ಕಾಲಿನ ಜಡೆ ಎಣೆದು, ಬಿಚ್ಚುತ್ತಾರೆ. ಜಡೆ ಹೆಣೆಯುವುದು ಒಗ್ಗಟ್ಟನ್ನು ಸೂಚಿಸಿದರೆ, ಜಡೆ ಬಿಚ್ಚುವುದು ಜೀವನ ಸಮಸ್ಯೆಗಳಿಂದ ಹೊರ ಬರುವ ಮಾರ್ಗವನ್ನು ತಿಳಿಸಿ ಕೊಡುತ್ತದೆ. ಗ್ರಾಮೀಣ ಜನಪದರು ನಗರ ಸಂಸ್ಕೃತಿಗೆ ಮಾರು ಹೋಗಿ, ತಮ್ಮ ಜೀವನ ಮೌಲ್ಯಗಳನ್ನು ಬಲಿಕೊಡುತ್ತಿದ್ದಾರೆ. ನೀಳವೇಣಿಯರು ಕಡಿಮೆಯಾಗಿದ್ದಾರೆ. ಈಗಿನವರಿಗೆ ಕೂದಲನ್ನು ಬೆಳೆಸುವುದರ ಬಗ್ಗೆ ನಿರಾಸಕ್ತಿಯಿದೆ. ಬ್ಯೂಟಿಪಾರ್ಲರ್ ಗಳು ಹೆಣ್ಣಿನಲ್ಲಿ ಅಲಂಕಾರದ ಅರಿವನ್ನು ಮೂಡಿಸುವ ಪ್ರಯತ್ನದಲ್ಲಿ ವಿಫಲವಾಗಿವೆ.

ಕೃತಿ ನೆರವು

[ಬದಲಾಯಿಸಿ]
 • ೧. ಕನ್ನಡ ವಿಷಯ ವಿಶ್ವ ಕೋಶ ಸುವರ್ಣ ಸಂಪುಟ
 • ೨. ಜಡೆ ಕವನ- ಡಾ.ಜಿ.ಎಸ್.ಶಿವರುದ್ರಪ್ಪ
 • ೩. ಮಹಿಳೆಯರ ಅಲಂಕಾರಗಳು - ಶಾಂತದೇವಿ ಮಾಳವಾಡ
 • ೪. ಜಾನಪದ ವಿಶ್ವಕೋಶ -ಮೈಸೂರು ವಿಶ್ವ ವಿದ್ಯಾ ನಿಲಯದ ಪ್ರಕಟಣೆ

ಚಿತ್ರಶಾಲೆ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]

<Reference /> [೧] [೨]


 1. http://kannadajaanapada.blogspot.in/
 2. http://kannadajaanapada.blogspot.in/2015/05/blog-post_40.html