ವಿಷಯಕ್ಕೆ ಹೋಗು

ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುರುಕುಲ ಕಾಂಗ್ರಿ ವಿಶ್ವವಿದ್ಯಾಲಯವು ಪಂಜಾಬಿನ ಆರ್ಯ ಪ್ರತಿನಿಧಿ ಸಭೆಯವರು ಪ್ರಾಚೀನ ಭಾರತದ ಶಿಕ್ಷಣ ಪದ್ಧತಿಯನ್ನನುಸರಿಸಿ 1902ರಲ್ಲಿ ಆರಂಭಿಸಿದ ಒಂದು ರಾಷ್ಟ್ರೀಯ ವಿದ್ಯಾಸಂಸ್ಥೆ. ಇದನ್ನು ಆರ್ಯ ಸಮಾಜದ ಸಂನ್ಯಾಸಿ, ದಯಾನಂದ ಸರಸ್ವತಿಗಳ ಅನುಯಾಯಿಯಾದ ಸ್ವಾಮಿ ಶ್ರದ್ಧಾನಂದರು, ಪ್ರಾಚೀನ ಭಾರತದ ಗುರುಕುಲ ಶಿಕ್ಷಣ ಪದ್ಧತಿಯನ್ನು ಪುನಶ್ಚೇತನಗೊಳಿಸುವ ಏಕೈಕ ಉದ್ದೇಶದಿಂದ ಆರಂಭಿಸಿದರು.[] ಮೊದಲು ಒಂದು ಪ್ರಾಥಮಿಕ ಶಾಲೆಯಾಗಿ ಅಸ್ತಿತ್ವಕ್ಕೆ ಬಂದ ಈ ಸಂಸ್ಥೆ, ಈಗ ಪೂರ್ಣ ಪ್ರಮಾಣದ ಒಂದು ಪರಿಗಣಿತ ವಿಶ್ವವಿದ್ಯಾಲಯವಾಗಿ (ಡೀಮ್ಡ್ ಯೂನಿವರ್ಸಿಟಿ) ರೂಪುಗೊಂಡಿದೆ. ಮೊದಲಿಂದಲೂ ಇದು ಸರ್ಕಾರದ ಸಹಾಯಧನಕ್ಕೆ ಕೈಯೊಡ್ಡದೆ ಸ್ವತಂತ್ರ ವಾತಾವರಣದಲ್ಲಿ ಕೆಲಸ ಮಾಡುತ್ತ ಬಂದಿದೆ; ಸರ್ಕಾರದ ಪರೀಕ್ಷೆ ನಿರೀಕ್ಷೆಗಳಿಂದಲೂ, ನಿಯಂತ್ರಣದಿಂದಲೂ ವಿಮುಕ್ತವಾಗುಳಿದುಕೊಂಡು ತನ್ನದೇ ಆದ ದೃಷ್ಟಿಧ್ಯೇಯಗಳನ್ನು ಹೊಂದಿದ್ದು ತನ್ನವೇ ಆದ ಕಾರ್ಯಕ್ರಮಗಳನ್ನು ಹಾಕಿಕೊಂಡು ಬೆಳೆದು ಬರುತ್ತಿದೆ.

ಪ್ರಾಚೀನ ಭಾರತದ ಶಿಕ್ಷಣ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವ ಮಹೋದ್ದೇಶದಿಂದ ಆರಂಭವಾದ ಈ ರಾಷ್ಟ್ರೀಯ ವಿದ್ಯಾಲಯ ತನ್ನ ದೃಷ್ಟಿ ಧ್ಯೇಯಗಳನ್ನು ಸ್ಪಷ್ಟಪಡಿಸುತ್ತ `ಮನೆ ಮತ್ತು ಶಾಲೆ-ಇವೆರಡರ ಸನ್ನಿವೇಶ ಸೌಲಭ್ಯಗಳನ್ನು ಒಳಗೊಂಡಂತೆ ವಸತಿ ವಿದ್ಯಾಲಯದಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆಗೊಳ್ಳಬೇಕು; ಮಕ್ಕಳು ತಂದೆಯ ಸಣ್ಣ ಕುಟುಂಬದಿಂದ ಗುರುಗಳ ವಿಶಾಲ ಕುಟುಂಬಕ್ಕೆ ಕಾಲಿಟ್ಟರೂ ಕುಟುಂಬದ ಸನ್ನಿವೇಶಗಳೇ ಅಲ್ಲೂ ಇದ್ದು, ಮನೆ ಮತ್ತು ಶಾಲೆಗಳೆರಡರ ಸತ್ಪ್ರಭಾವವನ್ನೂ ಬೀರುವಂತಿರಬೇಕು; ಅಂಥ ಗುರುಕುಲದಲ್ಲಿ ಶಿಕ್ಷಣದಂತೆ ಊಟ ವಸತಿಗಳೂ ಉಚಿತವಾಗಿ ದೊರಕಬೇಕು; ಅಲ್ಲಿಗೆ ಪ್ರವೇಶಾವಕಾಶ ಕೋರುವವರಿಗೆ ಜಾತಿ, ಮತ, ಅಂತಸ್ತು ಮುಂತಾದ ಭಿನ್ನತೆಗಳು ಅಡ್ಡಿಯಾಗಬಾರದು. ಗುರುಕುಲದಲ್ಲಿ ಎಲ್ಲ ಮಕ್ಕಳನ್ನೂ ಪಕ್ಷಪಾತವಿಲ್ಲದೆ ಏಕರೀತಿಯಲ್ಲಿ ನೋಡಿಕೊಳ್ಳಬೇಕು. ಎಲ್ಲರೂ ಸಮವಸ್ತ್ರ ಧರಿಸಿ ಒಂದೇ ರೀತಿಯ ಆಹಾರ ಸೇವಿಸುತ್ತ ಒಂದೇ ರೀತಿಯ ಜೀವನ ನಡೆಸುವ ಅವಕಾಶವಿರಬೇಕು. ಸಹನೆ, ಕಷ್ಟಸಹಿಷ್ಣುತೆ ಮುಂತಾದ ವಿಹಿತಗುಣಗಳನ್ನು ಮಕ್ಕಳಲ್ಲಿ ಬೆಳೆಸಲು ಎಲ್ಲ ಪ್ರಯತ್ನಗಳನ್ನೂ ಮಾಡಬೇಕು; ಬ್ರಹ್ಮಚರ್ಯವನ್ನು ನಿಷ್ಠೆಯಿಂದ ಆಚರಿಸಲು ಒತ್ತಾಯಿಸಿ ಅವರಲ್ಲಿ ಗುಣಶೀಲಗಳ ನಿರೂಪಣೆಗೆ ಯತ್ನಿಸಬೇಕು; ಅವರ ಲೈಂಗಿಕ ಆಸಕ್ತಿಯನ್ನು ಫಲದಾಯಕವಾದ ಮಾರ್ಗದಲ್ಲಿ ಉದಾತ್ತಗೊಳಿಸಲು ಯತ್ನಿಸಬೇಕು'- ಎಂದು ಸೂಚಿಸಿದೆ.

ಇತಿಹಾಸ

[ಬದಲಾಯಿಸಿ]

ಇಂಗ್ಲಿಷರ ಆಡಳಿತ ಭಾರತದಲ್ಲಿ ಭದ್ರವಾದಂತೆ ಅವರ ಶಿಕ್ಷಣ ಪದ್ಧತಿಯೂ ದೇಶಾದ್ಯಂತ ಹರಡುತ್ತ ಬರುತ್ತಿತ್ತು. ಮೊದಮೊದಲು ಆರ್ಥಿಕ ಕಾರಣದಿಂದಾಗಿ ಜನತೆ ಅದನ್ನು ಸ್ವಾಗತಿಸಿದರೂ ಕ್ರಮ ಕ್ರಮವಾಗಿ ಅದರ ಬಗ್ಗೆ ವಿರೋಧ ಬೆಳದು ಬರುತಿತ್ತು. 1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾದ[] ಮೇಲೆ ಜನತೆಯಲ್ಲಿ ರಾಷ್ಟ್ರೀಯ ಭಾವನೆ ಬೆಳೆಯಲಾರಂಭಿಸಿತು. ಪರಕೀಯರ ಆಡಳಿತಾಧಿಕಾರವನ್ನು ಕೊನೆಗಾಣಿಸಬೇಕೆಂಬ ಆಕಾಂಕ್ಷೆಯೂ ಬಲಿಯುತ್ತ ಬಂತು. 1902ರಲ್ಲಿ ವೈಸ್‌ರಾಯ್ ಲಾರ್ಡ್ ಕರ್ಜ಼ನ್ ಕೈಗೊಂಡ ಕೆಲವು ಶೈಕ್ಷಣಿಕ ಕಾರ್ಯಕ್ರಮಗಳು ಸದುದ್ದೇಶದಿಂದ ಕೂಡಿದ್ದರೂ ಭಾರತೀಯರ ನಿಷ್ಠೆ ಮತ್ತು ಪ್ರತಿಭಾಜೀವನದ ಬಗ್ಗೆ ಅಗೌರವ ಸೂಚಿಸುವಂತಿದ್ದುವು. ಅದರ ಫಲವಾಗಿ ಆಗಲೇ ಪುಟವೇರುತ್ತಿದ್ದ ರಾಷ್ಟ್ರೀಯ ಭಾವನೆ ತಮ್ಮವೇ ಆದ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಪ್ರಚೋದಿಸಿತು. ಆಗ ಆರಂಭವಾದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಈ ಗುರುಕುಲ ವಿದ್ಯಾಲಯವೂ ಒಂದು. ಮುಂದೆ, ಗಾಂಧೀಜಿ ಇಂಗ್ಲೀಷ್ ಶಿಕ್ಷಣ ಸಂಸ್ಥೆಗಳನ್ನು ಬಹಿಷ್ಕರಿಸಬೇಕೆಂದೂ, ಅದರಿಂದ ಒಂದು ವರ್ಷದೊಳಗಾಗಿ ಸ್ವರಾಜ್ಯ ಲಭಿಸುವುದೆಂದೂ ಕರೆಯಿತ್ತಾಗ ಅನೇಕ ಅಧ್ಯಾಪಕರೂ, ವಿದ್ಯಾರ್ಥಿಗಳೂ ಇಂಗ್ಲಿಷ್ ಶಿಕ್ಷಣ ಸಂಸ್ಥೆಗಳಿಂದ ಹೊರಬಂದರು. ಹೋರಾಟವೇನೊ ನಡೆದು ಒಂದು ವರ್ಷ ಕಳೆಯಿತು. ಆದರೆ ಸ್ವರಾಜ್ಯ ಲಭಿಸುವ ಕಾಲ ಇನ್ನೂ ಬಹು ದೂರವಿರುವ ಅಂಶ ಸ್ಪಷ್ಟವಾಯಿತು. ಹೊರಬಂದಿದ್ದ ಅಧ್ಯಾಪಕರಿಗೂ, ವಿದ್ಯಾರ್ಥಿಗಳಿಗೂ ದೇಶಾದ್ಯಂತ ಇಂಗ್ಲಿಷ್ ಪದ್ಧತಿಗೆ ಸಮಾಂತರವಾಗಿ ರಾಷ್ಟ್ರೀಯ ಸಂಸ್ಥೆಗಳನ್ನು ಸ್ಥಾಪಿಸಿ ಆಶ್ರಯವೀಯುವ ಕಾರ್ಯ ಅಸಾಧ್ಯದ ಕೆಲಸವೆಂಬುದನ್ನು ನಾಯಕರು ಕಂಡುಕೊಂಡರು. ಅಂಥ ವ್ಯವಸ್ಥೆ ರಾಷ್ಟ್ರೀಯ ಸರ್ಕಾರದಿಂದ ಮಾತ್ರ ಸಾಧ್ಯವೆಂಬುದನ್ನು ಅರಿತುಕೊಂಡಿದ್ದ ಲಾಲಾ ಲಜಪತರಾಯರಂಥ ನಾಯಕರು ಇರತಕ್ಕ ಜನ ಮತ್ತು ಧನಮೂಲಗಳನ್ನು ಬಳಸಿಕೊಂಡು, ಕೆಲವು ಉನ್ನತ ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಸ್ಥಾಪಿಸಿ, ರಾಷ್ಟ್ರೀಯ ಭಾವನೆಯನ್ನು ಹರಡಬಲ್ಲ ನಾಯಕರನ್ನು ಸಿದ್ಧಪಡಿಸಬೇಕೆಂದು ಸಲಹೆ ಮಾಡಿದರು. ಅಂದಿಗಾಗಲೆ ಅಸ್ತಿತ್ವದಲ್ಲಿದ್ದ ಗುರುಕುಲ ವಿದ್ಯಾಲಯವನ್ನು 1924ರಲ್ಲಿ ಹರಿದ್ವಾರದ ಬಳಿ ಇರುವ ಕಾಂಗ್ರಿ ಎಂಬ ಸ್ಥಳಕ್ಕೆ ವರ್ಗಾಯಿಸಿ ಅದನ್ನು ಒಂದು ಉನ್ನತ ಶಿಕ್ಷಣ ಸಂಸ್ಥೆಯಾಗಿ ಪರಿವರ್ತಿಸಿದರು. ಇದು ನವ ದೆಹಲಿಯಿಂದ ಸುಮಾರು ೨೦೦ ಕಿ.ಮಿ. ದೂರವಿದ್ದು ಹರಿದ್ವಾರದಲ್ಲಿ ಗಂಗೆಯ ತಟದ ಮೇಲಿದೆ.[] ಭಾರತ ಸ್ವತಂತ್ರವಾದ ಮೇಲೆ 1962ರಲ್ಲಿ ವಿಶ್ವವಿದ್ಯಾನಿಲಯದ ಧನ ಆಯೋಗದ ಶಾಸನದ ಪ್ರಕಾರ ಪಾರ್ಲಿಮೆಂಟು ಈ ವಿದ್ಯಾಲಯವನ್ನು ಒಂದು ಪರಿಗಣಿತ ವಿಶ್ವವಿದ್ಯಾಲಯವಾಗಿ ಅಂಗೀಕರಿಸಿತು.[]

ಕಾರ್ಯಕ್ರಮ

[ಬದಲಾಯಿಸಿ]

ಗುರುಕುಲ ವಿದ್ಯಾಲಯ ಕಾಂಗ್ರಿಯು ವನಾಂತರ ಪ್ರದೇಶದಲ್ಲಿದೆ. ನಗರ ಜಂಜಡದಿಂದ ದೂರವಿರುವ ಈ ಪ್ರದೇಶ ಪ್ರಾಚೀನ ಕಾಲದ ಗುರುಕುಲ, ಆಶ್ರಮ ಮುಂತಾದ ವಿದ್ಯಾಕೇಂದ್ರಗಳ ಸ್ಮರಣೆಯನ್ನು ತರುವಂಥ ಹಾಗೂ ಬೋಧನೆಗೂ, ಅಧ್ಯಯನಕ್ಕೂ ಅತ್ಯಂತ ಸೂಕ್ತವೆನಿಸುವ ಸನ್ನಿವೇಶಗಳನ್ನು ಹೊಂದಿದೆ. ಅಲ್ಲಿಗೆ 6-10 ವರ್ಷದ ವಯಸ್ಸಿನ ಮಕ್ಕಳನ್ನು ಸೇರಿಸಿಕೊಳ್ಳುವರು. ಹದಿನಾಲ್ಕು ವರ್ಷಗಳ ಶಿಕ್ಷಣದ ಅನಂತರ ವಿದ್ಯಾರ್ಥಿ ಸ್ನಾತಕ ಅಥವಾ ಪದವೀಧರನಾಗುತ್ತಾನೆ. ಅನಂತರ ಇನ್ನೆರಡು ವರ್ಷಗಳ ಮುಂದುವರಿದ ವ್ಯಾಸಂಗದ ಮೂಲಕ ಡಾಕ್ಟರ್ ಅಥವಾ ವಾಚಸ್ಪತಿಯಾಗುತ್ತಾನೆ. ಗುರುಕುಲ ಪದ್ಧತಿಯ ಈ ಶಿಕ್ಷಣ ಗುಂಡುಮಕ್ಕಳಂತೆ ಹೆಣ್ಣುಮಕ್ಕಳಿಗೂ ಅನ್ವಯಿಸುತ್ತದೆ. 1922ರಲ್ಲಿ ಡೆಹರಾಡೂನಿನಲ್ಲಿ ಬಾಲೆಯರಿಗಾಗಿಯೇ ಕಾಲೇಜು ಮಟ್ಟದವರೆಗಿನ ಪ್ರತ್ಯೇಕ ಗುರುಕುಲವನ್ನು ಈ ಸಂಸ್ಥೆ ಆರಂಭಿಸಿತು.

ಗುರುಕುಲ ವಿದ್ಯಾಲಯ ಹೆಸರಿಗೆ ತಕ್ಕಂತೆ ಪೂರ್ಣವಾಗಿ ವಸತಿ ವಿದ್ಯಾಲಯವಾಗಿದ್ದು ಗುರುಶಿಷ್ಯರಿಬ್ಬರೂ ಒಂದೆಡೆ ವಾಸಿಸುವ ಅವಕಾಶ ಕಲ್ಪಿಸಿದೆ.

ಮೊದಲ ನಾಲ್ಕು ವರ್ಷಗಳ ತರಗತಿಗಳಲ್ಲಿ ಸಂಸ್ಕೃತ, ಹಿಂದಿ, ಗಣಿತ, ಭೂವಿವರಣೆ, ಚಿತ್ರಲೇಖನ, ಚರಿತ್ರೆ, ಧರ್ಮಶಾಸ್ತ್ರ, ನೀತಿಶಾಸ್ತ್ರ, ಮುಂತಾದ ವಿಷಯಗಳನ್ನು ಬೋಧಿಸುವರು. ಕಿಂಡರ್‌ಗಾರ್ಟನ್ ಆಟ, ನೂಲುವುದು, ಚಾಪೆ ಹೆಣೆಯುವುದು, ಮಣ್ಣಿನ ಕೆಲಸ ಮುಂತಾದ ಚಟುವಟಿಕೆಗಳ ಮೂಲಕ ಮಕ್ಕಳ ಕೈ ಮತ್ತು ಕಣ್ಣುಗಳ ಹೊಂದಾಣಿಕೆಯ ಕೌಶಲ್ಯವನ್ನು ವೃದ್ಧಿಪಡಿಸುವರು. ಐದನೆಯ ತರಗತಿಯಲ್ಲಿ ಇಂಗ್ಲೀಷ್ ಮತ್ತು ಭೌತವಿಜ್ಞಾನಗಳನ್ನು ಆರಂಭಿಸುವರು. ಪ್ರೌಢಶಾಲೆಯ ಅಂತಸ್ತಿನಲ್ಲಿ ನಡೆಯುವ ಅಧಿಕಾರ ಅಥವಾ ಪ್ರವೇಶ (ಎನ್ಟ್ರೆನ್ಸ್) ಪರೀಕ್ಷೆಯೊಂದರಲ್ಲಿ ಉತ್ತೀರ್ಣರಾದವರು ವಿಶ್ವವಿದ್ಯಾಲಯದ ತರಗತಿಗೆ ಹೋಗುವರು.

ಗುರುಕುಲ ವಿಶ್ವವಿದ್ಯಾಲಯದ ಶಿಕ್ಷಣವನ್ನು ಮೂರು ಪ್ರತ್ಯೇಕ ಮಹಾವಿದ್ಯಾಲಯಗಳಲ್ಲಿ ವ್ಯವಸ್ಥೆಗೊಳಿಸಿದೆ. ಮೊದಲನೆಯದಾದ ವೇದ ಮಹಾವಿದ್ಯಾಲಯದಲ್ಲಿ ವೇದಾಧ್ಯಯನಕ್ಕೂ ದರ್ಶನ, ಸಂಸ್ಕೃತ, ಸಾಹಿತ್ಯ, ಇತ್ಯಾದಿ ವಿಷಯಗಳ ವ್ಯಾಸಂಗಕ್ಕೂ ಅವಕಾಶ ಕಲ್ಪಿಸಿದೆ. ಎರಡನೆಯದಾದ ಸಾಧಾರಣ ಮಹಾವಿದ್ಯಾಲಯದಲ್ಲಿ (ಜನರಲ್ ಕಾಲೇಜ್) ಇಂಗ್ಲೀಷ್, ಇತಿಹಾಸ, ಅರ್ಥಶಾಸ್ತ್ರ, ಪಾಶ್ಚಾತ್ಯದರ್ಶನ, ತೌಲನಿಕ ಧರ್ಮಶಾಸ್ತ್ರ, ರಸಾಯನಶಾಸ್ತ್ರ ಇತ್ಯಾದಿ ವಿಷಯಗಳನ್ನು ಬೋಧಿಸುವರು. ಅವುಗಳಲ್ಲಿ ಕೆಲವು ವಿಷಯಗಳಲ್ಲಿ ಸ್ನಾತಕೋತ್ತರ ತರಗತಿಗಳನ್ನೂ ನಡೆಸುವರು. ಮೂರನೆಯದಾದ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪ್ರಾಚೀನ ಭಾರತದ ವೈದ್ಯವಿದ್ಯೆಯ ಮತ್ತು ಆಧುನಿಕ ವೈದ್ಯಶಾಸ್ತ್ರದ ಅಧ್ಯಯನಕ್ಕೆ ಅವಕಾಶವಿದೆ.

ವಿಶ್ವವಿದ್ಯಾಲಯದಲ್ಲಿ ಆದ್ಯಂತವೂ ಶಿಕ್ಷಣ ಮಾಧ್ಯಮ ಹಿಂದಿ. ಸಂಸ್ಕೃತದ ವ್ಯಾಸಂಗಕ್ಕೆ ಪ್ರಾಮುಖ್ಯವುಂಟು.

ರಾಷ್ಟ್ರೀಯ ಮೌಲ್ಯಮಾಪನ ಮತ್ತು ದೃಢೀಕರಣ ಮಂಡಳಿಯು (NAAC) ೨೦೧೫ ರಲ್ಲಿ ಈ ವಿಶ್ವವಿದ್ಯಾಲಯಕ್ಕೆ A+ ದರ್ಜೆ ನೀಡಿತು.[]

ಉಲ್ಲೇಖಗಳು

[ಬದಲಾಯಿಸಿ]
  1. "About Main Campus – GKV" (in ಅಮೆರಿಕನ್ ಇಂಗ್ಲಿಷ್). Retrieved 2021-05-23.
  2. Marshall, P. J. (2001), The Cambridge Illustrated History of the British Empire, Cambridge University Press, p. 179, ISBN 978-0-521-00254-7
  3. "Gurukul Kangri University | District Haridwar, Government of Uttarakhand | India" (in ಅಮೆರಿಕನ್ ಇಂಗ್ಲಿಷ್). Retrieved 2021-05-23.
  4. "University". www.ugc.ac.in. Retrieved 2021-05-23.
  5. Jaiswal, Sheo S. (December 4, 2021). "Amid internal rift, Gurukul Kangri univ's ranking slips to B". The Times of India (in ಇಂಗ್ಲಿಷ್). Retrieved 2022-04-26.


ಹೊರಗಿನ ಕೊಂಡಿಗಳು

[ಬದಲಾಯಿಸಿ]