ಸ್ವರಾಜ್ಯ
ಸ್ವರಾಜ್ಯ ಎಂದರೆ ಒಂದು ನಿದಿ೯ಷ್ಟ ಭೌಗೋಳಿಕ ಪರಿಧಿಯೊಳಗೆ ಸ್ವತಂತ್ರವಾಗಿ ಬದುಕುವ ಜನರಿರುವ ಪ್ರದೇಶ. ಇಲ್ಲಿ ಸ್ವರಾಜತ್ವ, ಸ್ವಯಮಾಡಳಿತ, ಸ್ವರಕ್ಷಣೆ ಎಲ್ಲವೂ ಇರುತ್ತವೆ. ರಾಜಕೀಯ ಶಾಸ್ತ್ರದ ಒಂದು ಪರಿಕಲ್ಪನೆಯಾದ ಒಂದು ದೇಶದ ಸ್ಥಾನಮಾನವನ್ನು ಇದು ತಿಳಿಸುತ್ತದೆ. ಇದು ಯಾವುದೇ ಬಗೆಯ ಅಧೀನಕ್ಕೆ ಒಳಪಡದೆ, ಸ್ವಾವಲಂಬಿ, ಸ್ವತಂತ್ರವರ್ತಿಯಾಗಿರುವ ವ್ಯವಸ್ಥೆ. ಮಾನವ ನಾಗರಿಕತೆಯ ಬೆಳೆವಣಿಗೆಯಲ್ಲಿ ಕಂಡು ಬಂದಿರುವ ಪ್ರಬುದ್ಧತೆಯ ಅಂಶವಾಗಿದೆ. ಗುಹೆಯ ಜೀವನದಿಂದ ಹಿಡಿದು ಆಧುನಿಕ ನಾಗರಿಕತೆಯತ್ತ ನಡೆಯುವಾಗ ರಾಜ್ಯಗಳ ಆಡಳಿತಕ್ಕೆ ಸಂಬಂಧಿಸಿದಂತೆ ನಾನಾ ಮಜಲುಗಳನ್ನು ಕಾಣುತ್ತೇವೆ. ಬಹುತೇಕ ಜಾಗತಿಕ ಇತಿಹಾಸ ಒಂದು ರೀತಿಯಲ್ಲಿ ಸ್ವರಾಜ್ಯದೆಡೆಗಿನ ಹೋರಾಟವೆನ್ನಬಹುದು.ಒಬ್ಬ ವ್ಯಕ್ತಿಯು ತನ್ನ ದೇಶ ಅಥವಾ ರಾಜ್ಯಕ್ಕೆ ತನ್ನ ಪ್ರಾಣವನ್ನು ಮೂಡಿಪಾಗಿಟ್ಟು ರಕ್ಷಿಸುತ್ತನೋ ಅದಕ್ಕೆ ಸ್ವರಾಜ್ಯ ಎಂದು ಕರೆಯುತ್ತೇವೆ
ಅರಿಸ್ಟಾಟಲನ ಪ್ರಕಾರ, ರಾಜಕೀಯ ಬೆಳೆವಣಿಗೆಯ ಚಕ್ರ ಏಕಚಕ್ರಾಧಿಪತ್ಯದಿಂದ ವರ್ಗಾಡಳಿತಕ್ಕೂ ಅನಂತರ ಪ್ರಜಾಪ್ರಭುತ್ವಯೆಡೆಗೂ ಸಾಗುತ್ತದೆ. ರಾಜ್ಯಾಡಳಿತದ ಹೊಸ ಹೊಸ ವ್ಯವಸ್ಥೆಗಳು ಕೊಡುವ ಅನುಭವದಿಂದ ಮತ್ತಷ್ಟು ಸುಧಾರಿತ ವ್ಯವಸ್ಥೆಯತ್ತ ಮಾನವ ಮುನ್ನಡೆಯುವುದು ಸ್ವಾಭಾವಿಕ. ಸ್ವರಾಜ್ಯವೆಂಬ ಪದ ಸ್ವವಿವರಿತವಾಗಿದೆ. ಸ್ವ ಎಂದರೆ ತಮಗೆ ತಾವೇ ರಾಜ್ಯಭಾರ ಮಾಡುವುದಾಗಿದೆ. ಪ್ರಜಾಪ್ರಭುತ್ವದ ಮೂಲ ಸ್ವರಾಜ್ಯವೆಂದರೂ ತಪ್ಪಾಗಲಾರದು. ಸ್ವರಾಜ್ಯದಲ್ಲಿ ಮತ್ತೊಂದು ದೇಶದ ಅಧೀನಕ್ಕೆ ಒಳಪಡದೆ, ಅಲ್ಲಿಯ ಜನ ತಮ್ಮ ಸ್ವಾತಂತ್ರ್ಯವನ್ನು ಅನುಭವಿಸುತ್ತಾರೆ. ಇದು ನ್ಯಾಯಶಾಸ್ತ್ರದ ಪರಿಕಲ್ಪನೆಯ ರೀತ್ಯಾ ದೇಶದ ಸಾರ್ವಭೌಮತ್ವವನ್ನು ಸೂಚಿಸುತ್ತದೆ. ಪ್ರಜಾಪ್ರಭುತ್ವದ ರೀತ್ಯಾ ಆ ದೇಶದ ಪ್ರಜೆಗಳು ಸರ್ಕಾರವನ್ನು ರಚಿಸಿಕೊಳ್ಳುತ್ತಾರೆ. ಸ್ವರಾಜ್ಯ ಹಾಗೂ ಪ್ರಜಾಪ್ರಭುತ್ವಗಳೆರಡೂ ಒಂದೇ.
ಈ ಹಿಂದೆ ಬಹುತೇಕ ದೇಶಗಳು ಕೆಲವೇ ದೇಶಗಳ ಆಡಳಿತಕ್ಕೆ ಒಳಪಟ್ಟಿದ್ದವು. ಬ್ರಿಟಿಷ್ ವಸಾಹತುಗಳು ಪ್ರಪಂಚದಲ್ಲೆಲ್ಲ ಇದ್ದು ಕಾಲಕ್ರಮೇಣ ಅವುಗಳೆಲ್ಲ ಸ್ವತಂತ್ರವಾಗಿವೆ. ಇವೆಲ್ಲಾ ಇಂದು ಸ್ವರಾಜ್ಯಗಳಾಗಿವೆ. ಆ ರಾಜ್ಯಗಳು ಇಂದು ತಮ್ಮ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ. ಜನರ ಸ್ವಾಭಿಮಾನದಿಂದ ಉದ್ಭವಿಸುವ ಸ್ವಾತಂತ್ರ್ಯ ಚಳವಳಿ ಹೋರಾಟದಿಂದ ದೇಶಗಳು ಪರಾಧೀನತೆಯಿಂದ ಮುಕ್ತವಾಗುತ್ತವೆ. ಅಲ್ಲಿನ ಜನತೆಯಿಂದ ಚುನಾಯಿತ ಪ್ರಾತಿನಿಧಿಕ ಶಾಸನಸಭೆಗಳು ಅಲ್ಲಿನ ಶಾಸನಗಳನ್ನು ರಚಿಸುತ್ತವೆ. ಅಲ್ಲದೆ, ಆ ಚುನಾಯಿತ ಪ್ರಾತಿನಿಧಿಕ ಸರ್ಕಾರ ಜನರ ವಿಶ್ವಾಸ ಇರುವವರೆಗೆ ಮಾತ್ರ ಇರುತ್ತದೆ. ಕೆಲವೊಮ್ಮೆ ಸ್ವರಾಜ್ಯದಲ್ಲಿ ಪ್ರಜಾಪ್ರಭುತ್ವವಿರದೆ ರಾಜನ ಅಥವಾ ನಿರಂಕುಶಾಧಿಕಾರಕ್ಕೂ ಅವಕಾಶವಾಗಬಹುದು. ಆದರೆ ಒಂದು ಅಂಶವೆಂದರೆ ನಿರಂಕುಶಾಧಿಕಾರಿ ಅದೇ ದೇಶಕ್ಕೆ ಸೇರಿದವನಾಗಿರುತ್ತಾನೆ. ಏನೇ ಆದರೂ ದೇಶೀಯರದೇ ಸ್ವರಾಜ್ಯದಲ್ಲಿ ಆಡಳಿತವಿರುತ್ತದೆ. ಅಂತಾರಾಷ್ಟ್ರೀಯ ಕಾನೂನಿನಲ್ಲೂ ಒಂದು ದೇಶ ಮತ್ತೊಂದು ದೇಶವನ್ನು ಬಲಾತ್ಕಾರದಿಂದ ಆಕ್ರಮಿಸುವಂತಿಲ್ಲ ಎಂಬ ನಿಯಮವಿದ್ದು ಸ್ವರಾಜ್ಯಕ್ಕೆ ಬೆಂಬಲವಿದೆ. ಅಂತಾರಾಷ್ಟ್ರೀಯ ಸಮುದಾಯ ಮತ್ತು ಸಂಘ ಸಂಸ್ಥೆಗಳೂ ಈ ಸ್ವರಾಜ್ಯ ಪರಿಕಲ್ಪನೆಯನ್ನೇ ಗೌರವಿಸುತ್ತವೆ.
ಭಾರತದಲ್ಲಿ, ಸ್ವರಾಜ್ಯ ಕಲ್ಪನೆಯನ್ನು ಪ್ರಥಮವಾಗಿ ಪ್ರತಿಪಾದಿಸಿದವರು ಬಾಲಗಂಗಾಧರ ಟಿಳಕರು. “ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು, ಅದನ್ನು ಪಡೆಯಲೇಬೇಕು” ಎಂಬ ಧ್ಯೇಯಮಂತ್ರವನ್ನು ಜನರಿಗೆ ಬೋಧಿಸಿದರು. ಮಹಾತ್ಮಗಾಂಧಿಯವರು ಸ್ವರಾಜ್ಯ ಅಥವಾ ಸ್ವಯಮಾಡಳಿತವನ್ನು ಅಹಿಂಸಾ ಮಾರ್ಗದಲ್ಲಿ ಗಳಿಸಿ ಹೊಸ ಪಥವನ್ನು ಹುಟ್ಟು ಹಾಕಿದರು. ಈ ಸ್ವರಾಜ್ಯ ತತ್ತ್ವವು ಪರಕೀಯರ ಆಡಳಿತದ ಹಿಂತೆಗೆತಕ್ಕೆ ಮತ್ತು ದೇಶದ ಸ್ವಾತಂತ್ರ್ಯಕ್ಕೆ ಸೀಮಿತವಾಗಿರದೆ ಸಾಮಾನ್ಯನು ಪ್ರಜ್ಞೆ ಪಡೆಯಲು ಸಹಾಯವಾಗುತ್ತದೆ.
ಗ್ರೀಕ್ ನಗರರಾಜ್ಯದಿಂದ ರೂಪುಗೊಂಡ ಸ್ವರಾಜ್ಯ ಕಲ್ಪನೆ ನಾನಾ ಆಯಾಮಗಳನ್ನು ಕಾಲಕ್ರಮೇಣ ಕ್ರಮಿಸಿ, ಸಂವಿಧಾನತ್ವ, ಕಾನೂನಿನ ಶ್ರೇಷ್ಠತೆ, ನಾಗರಿಕತನದ ಉತ್ಕøಷ್ಟತೆ ಹಾಗೂ ಸಾರ್ವಭೌಮತ್ವವನ್ನು ಇಂದು ಪ್ರತಿಬಿಂಬಿಸುತ್ತಿದೆ.