ಹರಿದ್ವಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹರಿದ್ವಾರ
ಹರಿದ್ವಾರ
हरिद्वार
city
Websiteharidwar.nic.in


ಹರಿದ್ವಾರ ( ಹಿಂದಿ ಭಾಷೆಯಲ್ಲಿ हरिद्वार ಎಂದು ಸಹ ಬರೆಯಲಾಗುತ್ತದೆ) ಭಾರತಉತ್ತರಾಖಂಡ ರಾಜ್ಯದಲ್ಲಿನ ಜಿಲ್ಲಾ ಕೇಂದ್ರ ಮತ್ತು ಹಿಂದೂ ಧರ್ಮೀಯರಿಗೆ ಪರಮ ಪಾವನ ಕ್ಷೇತ್ರಗಳಲ್ಲಿ ಒಂದಾಗಿದೆ. ಹೆಸರೇ ಸೂಚಿಸುವಂತೆ ಹರಿದ್ವಾರ ದೇವರೆಡೆಗೆ ಬಾಗಿಲು ಎನಿಸಿಕೊಳ್ಳುತ್ತದೆ. ಹಿಂದೂಗಳು ಅತಿ ಪವಿತ್ರ ಎಂದು ಭಾವಿಸುವ ೭ ಕ್ಷೇತ್ರಗಳಲ್ಲಿ ಹರಿದ್ವಾರ ಸಹ ಒಂದು. ಹಿಮಾಲಯಗೋಮುಖದಲ್ಲಿ ಉಗಮಿಸಿ ಪರ್ವತಗಳ ನಡುವೆ ೨೫೩ ಕಿ.ಮೀ. ಹರಿದು ಸಾಗಿಬರುವ ಗಂಗಾ ನದಿ ಹರಿದ್ವಾರದಲ್ಲಿ ಪೂರ್ಣವಾದ ಬಯಲು ಪ್ರದೇಶವನ್ನು ಸೇರುತ್ತದೆ. ಈ ಕಾರಣದಿಂದ ಹರಿದ್ವಾರಕ್ಕೆ ಗಂಗಾದ್ವಾರ ಎಂಬ ಹೆಸರು ಸಹ ಇದೆ.

ತನ್ನ ವಂಶಜರ ಮೋಕ್ಷಕ್ಕಾಗಿ ತಪಸ್ಸನ್ನಾಚರಿಸುತ್ತಿರುವ ಭಗೀರಥ ಚಕ್ರವರ್ತಿ.

ಹಿಂದೂ ಪುರಾಣಗಳಲ್ಲಿ ಹರಿದ್ವಾರದ ಉಲ್ಲೇಖ ಬಹಳವಾಗಿದೆ. ಸಮುದ್ರಮಥನದ ವೇಳೆ ಉದ್ಭವಿಸಿದ ಅಮೃತವನ್ನು ಗರುಡನು ಒಯ್ಯುತ್ತಿದ್ದಾಗ ಕಲಶದಿಂದ ಅಮೃತದ ಹನಿಗಳು ಉದುರಿದ ೪ ಸ್ಥಾನಗಳಲ್ಲಿ ಹರಿದ್ವಾರ ಸಹ ಒಂದು. ನಾಸಿಕ, ಉಜ್ಜಯಿನಿ ಮತ್ತು ಪ್ರಯಾಗ ಉಳಿದ ಮೂರು ಸ್ಥಳಗಳು. ಆದ್ದರಿಂದ ಈ ನಾಲ್ಕು ಸ್ಥಳಗಳಲ್ಲಿ ಕುಂಭ ಮೇಳ ಎಂಬ ಉತ್ಸವ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುತ್ತದೆ. ಮೂರು ಮೂರು ವರ್ಷಗಳ ಅಂತರದಲ್ಲಿ ಮೊದಲ ಮೂರು ಸ್ಥಳಗಳಲ್ಲಿ ನಡೆಯುವ ಕುಂಭಮೇಳದ ಅಂತಿಮ ಚರಣ ಪ್ರಯಾಗದಲ್ಲಿ ಮಹಾ ಕುಂಭ ಮೇಳವಾಗಿ ಆಚರಿಸಲ್ಪಡುತ್ತದೆ. ಹರಿದ್ವಾರದ ಹರ್-ಕಿ-ಪೌಡಿ ಎಂಬ ಸ್ಥಾನದಲ್ಲಿ ಅಮೃತದ ಬಿಂದುವು ಬಿದ್ದ ಸ್ಥಳವಿದ್ದು ಇದನ್ನು ಬ್ರಹ್ಮ ಕುಂಡವೆಂದು ಕರೆಯಲಾಗುತ್ತದೆ. ಇಲ್ಲಿ ಗಂಗಾ ನದಿಯಲ್ಲಿ ಸ್ನಾನ ಮಾಡುವುದು ಸಕಲ ಪಾಪಗಳನ್ನು ತೊಳೆದುಕೊಂಡು ಮೋಕ್ಷ ಸಾಧಿಸುವ ಅತಿ ಪವಿತ್ರಕಾಯಕವೆಂದು ಹಿಂದೂ ಶ್ರದ್ಧಾಳುಗಳು ನಂಬುವರು.

ಗಂಗಾ ಕಾಲುವೆಯ ಶಿರೋಭಾಗ.
ಗಂಗಾ ನದಿಯ ಇನ್ನೊಂದು ದಡದಿಂದ ಹರಿದ್ವಾರದ ನೋಟ.

ಇತಿಹಾಸಕಾಲದ ಹರಿದ್ವಾರ[ಬದಲಾಯಿಸಿ]

ಪ್ರಕೃತಿ ಸೌಂದರ್ಯದ ನೆಲೆಯಾದ ಹರಿದ್ವಾರ ಭಾರತದ ಸಂಸ್ಕೃತಿ ಮತ್ತು ನಾಗರಿಕತೆಯ ಪ್ರತೀಕವೆನಿಸಿದೆ. ಪುರಾಣಗಳಲ್ಲಿ ಕಪಿಲಸ್ಥಾನ, ಗಂಗಾದ್ವಾರ ಮತ್ತು ಮಾಯಾಪುರಿ ಎಂದು ಹರಿದ್ವಾರ ಹೆಸರಿಸಲ್ಪಟ್ಟಿದೆ. ಹಿಮಾಲಯದ ಚತುರ್ಧಾಮಗಳಾದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಮತ್ತು ಬದರಿನಾಥಗಳಿಗೆ ಯಾತ್ರೆ ಕೈಗೊಳ್ಳುವ ಮೊದಲು ಹರಿದ್ವಾರದ ಬ್ರಹ್ಮ ಕುಂಡದಲ್ಲಿ ಸ್ನಾನ ಮಾಡುವುದು ವಾಡಿಕೆ. ಶೈವ ಮತ್ತು ವೈಷ್ಣವ ಪಂಥಗಳೆರಡರ ಅನುಯಾಯಿಗಳಿಗೂ ಪಾವನಧಾಮವಾಗಿರುವ ಈ ಕ್ಷೇತ್ರವನ್ನು ವೈಷ್ಣವರು ಹರಿದ್ವಾರವೆಂದು ಕರೆದರೆ ಶೈವರು ಹರದ್ವಾರವೆಂದು ಹೆಸರಿಸುತ್ತಾರೆ. ಹರಿದ್ವಾರದ ಕಂಖಾಲ್ ಪ್ರದೇಶವು ಶಿವನ ಹಿಮಾಲಯದ ಕೆಳಗಿನ ವಾಸಸ್ಥಾನವೆಂದು ನಂಬಲಾಗಿದೆ. ಮಹಾಭಾರತವನಪರ್ವದಲ್ಲಿ ಧೌಮ್ಯ ಋಷಿಯು ಯುಧಿಷ್ಠಿರನಿಗೆ ಭಾರತದ ತೀರ್ಥಗಳ ಬಗ್ಗೆ ತಿಳಿಸುವಾಗ ಗಂಗಾದ್ವಾರ ಮತ್ತು ಕಂಖಾಲ್‌ಗಳನ್ನು ಉಲ್ಲೇಖಿಸಿದ್ದಾನೆ. ಕಪಿಲಮುನಿಯ ಆಶ್ರಮವು ಸಹ ಹರಿದ್ವಾರದಲ್ಲಿತ್ತೆಂದು ಉಲ್ಲೇಖಗಳಿವೆ. ಹರ್-ಕಿ-ಪೌಡಿಯ ಶಿಲೆಯೊಂದರ ಮೇಲೆ ವಿಷ್ಣುವಿನ ಪಾದದ ಗುರುತು ಇದ್ದು ಈ ಶಿಲೆಯನ್ನು ಗಂಗಾನದಿಯು ಸದಾಕಾಲ ಸ್ಪರ್ಶಿಸುತ್ತದೆ.

ಇಂದಿನ ಹರಿದ್ವಾರ[ಬದಲಾಯಿಸಿ]

ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿರುವ ಎರಡು ದೊಡ್ಡ ಆಣೆಕಟ್ಟುಗಳ ಪೈಕಿ ಭೀಮ್‌ಗೋಡಾ ಆಣೆಕಟ್ಟು ಹರಿದ್ವಾರದಲ್ಲಿದೆ. ೧೮೪೦ರಲ್ಲಿ ಸುತ್ತಲಿನ ಜಮೀನಿಗೆ ನೀರೊದಗಿಸುವ ಉದ್ದೇಶದಿಂದ ಮೇಲಣ ಗಂಗಾ ಕಾಲುವೆಯನ್ನು ರಚಿಸಿ ಅದಕ್ಕೆ ನೀರು ಹಾಯಿಸಲೆಂದು ಈ ಆಣೆಯನ್ನು ಕಟ್ಟಲಾಯಿತು. ಇದರ ಪರಿಣಾಮವಾಗಿ ಗಂಗಾ ನದಿಯ ಕೆಳಗಿನ ಪಾತ್ರದಲ್ಲಿ ನೀರಿನ ಹರಿವು ಗಣನೀಯವಾಗಿ ಕಡಿಮೆಯಾಗಿ ಒಳನಾಡ ನೌಕಾಯಾನಕ್ಕೆ ಸಾಕಷ್ಟು ಅಡಚಣೆಯಾಯಿತು. ಈಸ್ಟ್ ಇಂಡಿಯಾ ಕಂಪೆನಿಯ ಕಾಲದಲ್ಲಿ ಹಡಗುಗಳು ಗಂಗಾನದಿಯ ಮೂಲಕ ಹರಿದ್ವಾರವನ್ನು ತಲುಪಿ ಇನ್ನೂ ಮುಂದೆ ಟಿಹ್ರಿ ಪಟ್ಟಣದವರೆಗೆ ಸಾಗುತ್ತಿದ್ದವು. ಹರಿದ್ವಾರ ಅಂದಿನ ದಿನಗಳಲ್ಲಿ ಒಂದು ರೇವು ಪಟ್ಟಣವಾಗಿ ಪರಿಗಣಿಸಲ್ಪಡುತ್ತಿತ್ತು. ಸಮುದ್ರಮಟ್ಟದಿಂದ ೨೪೯.೭ ಮೀಟರ್ ಎತ್ತರದಲ್ಲಿರುವ ಹರಿದ್ವಾರದ ಉತ್ತರ ಮತ್ತು ಈಶಾನ್ಯದಲ್ಲಿ ಶಿವಾಲಿಕ ಪರ್ವತಗಳಿದ್ದರೆ ದಕ್ಷಿಣದಲ್ಲಿ ಗಂಗಾ ನದಿಯಿದೆ. ಹರಿದ್ವಾರದಲ್ಲಿ ಗಂಗೆಯ ನೀರು ಸಾಮಾನ್ಯವಾಗಿ ತಿಳಿಯಾಗಿದ್ದು ಶೀತಲವಾಗಿರುತ್ತದೆ. ಮಳೆಗಾಲದಲ್ಲಿ ಮಾತ್ರ ಪರ್ವತಗಳಿಂದ ಸಾಗಿಬರುವ ಮಣ್ಣಿನಿಂದಾಗಿ ನದಿಯ ನೀರು ರಾಡಿಯ ಬಣ್ಣಕ್ಕಿರುತ್ತದೆ.

ಹರಿದ್ವಾರದ ಒಂದು ಮುಖ್ಯ ಸ್ನಾನಘಟ್ಟ. ೧೮೮೦ರ ಚಿತ್ರ.

ಹರಿದ್ವಾರದಲ್ಲಿ ಹಿಂದು ವಂಶಾವಳಿಯ ದಾಖಲೆಗಳು[ಬದಲಾಯಿಸಿ]

ಹರಿದ್ವಾರದ ಮುಖ್ಯ ವೈಶಿಷ್ಟ್ಯವೆಂದರೆ ಹಿಂದೂ ವಂಶಾವಳಿಗಳು. ಇಲ್ಲಿನ ಬ್ರಾಹ್ಮಣ ಪಂಡಿತರು ತಲತಲಾಂತರಗಳಿಂದ ಹಿಂದೂ ಕುಟುಂಬಗಳ ವಂಶಾವಳಿಗಳನ್ನು ಕಾಪಾಡಿಕೊಂಡು ಬಂದಿದ್ದಾರೆ. ಪಂಡಾಗಳೆಂದು ಕರೆಯಲ್ಪಡುವ ಇವರು ಕುಟುಂಬಗಳ ವಂಶವೃಕ್ಷವನ್ನು ಕೈಬರಹದ ದಾಖಲೆಗಳ ರೂಪದಲ್ಲಿ ಜತನವಾಗಿಟ್ಟು ತಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸುತ್ತಾರೆ. ಸಾಮಾನ್ಯವಾಗಿ ಒಂದು ಜಿಲ್ಲೆಯಲ್ಲಿನ ಕುಟುಂಬಗಳ ವಂಶಾವಳಿಗಳನ್ನು ಒಬ್ಬ ಪಂಡಾ ನೋಡಿಕೊಳ್ಳುವರು. ದಕ್ಷಿಣ ಭಾಗವನ್ನು ಹೊರತುಪಡಿಸಿ ಭಾರತದ ಉಳಿದ ಎಲ್ಲಾ ಭಾಗದ ಹಾಗೂ ಇಂದಿನ ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳ ಹಿಂದೂ ಕುಟುಂಬಗಳ ವಂಶವೃಕ್ಷಗಳನ್ನು ಹರಿದ್ವಾರದಲ್ಲಿ ನೋಡಬಹುದು. ಒಬ್ಬ ವ್ಯಕ್ತಿಯು ತನ್ನ ಕುಟುಂಬದ ಹಿರಿಯರ ಬಗ್ಗೆ ಏಳು ತಲೆಮಾರುಗಳಷ್ಟು ಹಿಂದಿನ ಮಾಹಿತಿಯನ್ನು ಸುಲಭವಾಗಿ ಪಡೆಯಬಹುದಾಗಿದೆ. ಯಾತ್ರಿಗಳು ಹರಿದ್ವಾರಕ್ಕೆ ಬಂದಾಗ ತಮ್ಮ ಕುಟುಂಬದ ಪಂಡಾರನ್ನು ಹುಡುಕಿ ಭೇಟಿಯಾಗಿ ಅವರಲ್ಲಿ ತನ್ನ ಕುಟುಂಬದಲ್ಲಿ ಜರಗಿದ ವಿವಾಹ, ಜನನ, ಮರಣ ಇತ್ಯಾದಿಗಳ ಬಗ್ಗೆ ತಾಜಾ ಮಾಹಿತಿ ನೀಡಿ ವಂಶವೃಕ್ಷವು ಪರಿಪೂರ್ಣ ಮಾಹಿತಿ ಹೊಂದಿರುವಂತೆ ನೋಡಿಕೊಳ್ಳುತ್ತಾರೆ.

ಮುಖ್ಯ ಸ್ಥಳಗಳು[ಬದಲಾಯಿಸಿ]

ಹರ್-ಕಿ-ಪೌಡಿಯ ಮಾಳವೀಯ ದ್ವೀಪದ ಗಡಿಯಾರದ ಗೋಪುರ.
ಹರ್-ಕಿ-ಪೌಡಿಯಲ್ಲಿ ಸಂಜೆಯ ಗಂಗಾ ಆರತಿಯ ದೃಶ್ಯ.
ಮಾನ್ಸಾ ದೇವಿ ಮಂದಿರಕ್ಕೆ ಹೋಗಲು ರೋಪ್‌ವೇ.

ಹಿಂದೂ ಸಂಪ್ರದಾಯದ ಪ್ರಕಾರ ಹರಿದ್ವಾರದಲ್ಲಿ ಪಂಚತೀರ್ಥಗಳಿವೆ ಅವೆಂದರೆ - ಗಂಗಾದ್ವಾರ (ಹರ್-ಕಿ-ಪೌಡಿ), ಕುಶಾವರ್ತ (ಘಾಟ್‌), ಕಂಖಾಲ್‌, ಬಿಲ್ವ ತೀರ್ಥ (ಮಾನ್ಸಾ ದೇವಿ) ಮತ್ತು ನೀಲ ಪರ್ವತ (ಚಂಡಿ ದೇವಿ).

ಹರ್-ಕಿ-ಪೌಡಿ

ಈ ಪವಿತ್ರ ಸ್ನಾನ ಘಟ್ಟವನ್ನು ಕ್ರಿ.ಪೂ. ಒಂದನೆಯ ಶತಮಾನದಲ್ಲಿ ರಾಜಾ ವಿಕ್ರಮಾದಿತ್ಯನು ಕಟ್ಟಿಸಿದನು. ಇಲ್ಲಿನ ಪ್ರಧಾನ ಸ್ಥಾನವು ಬ್ರಹ್ಮ ಕುಂಡ. ಪ್ರತಿದಿನ ಸಂಜೆ ಇಲ್ಲಿ ಗಂಗಾ ಆರತಿ ನಡೆಯುತ್ತದೆ. ಈ ಅದ್ಭುತ ಸಮಾರಂಭವು ಧಾರ್ಮಿಕರನ್ನು ಭಾವನಾತ್ಮಕವಾಗಿ ಬೇರೊಂದು ಲೋಕಕ್ಕೆ ಕರೆದೊಯ್ಯುತ್ತದೆ. ಆರತಿಯ ನಂತರ ಹೆಚ್ಚಿನ ಯಾತ್ರಿಕರು ಗಂಗಾ ನದಿಯಲ್ಲಿ ಹಣತೆಗಳನ್ನು ತೇಲಿಬಿಡುತ್ತಾರೆ. ಕತ್ತಲಿನಲ್ಲಿ ನದಿಯ ನೀರಿನ ಮೇಲೆ ಸಹಸ್ರಾರು ಹಣತೆಗಳು ಬೆಳಗುತ್ತ ತೇಲಿ ಸಾಗುವುದರ ನೋಟ ಅನಿರ್ವಚನೀಯ.

ಚಂಡಿ ದೇವಿ ಮಂದಿರ

ಚಂಡಿ ದೇವಿಯ ಆಲಯವು ಗಂಗಾ ನದಿಯ ಪೂರ್ವದಡದಲ್ಲಿ ನೀಲ ಪರ್ವತದ ಮೇಲೆ ಇದೆ. ಇಂದು ಕಾಣುವ ದೇವಾಲಯವು ಕಾಶ್ಮೀರದ ಮಹಾರಾಜರಿಂದ ಕಟ್ಟಿಸಲ್ಪಟ್ಟಿತು. ಸ್ಕಂದ ಪುರಾಣದಲ್ಲಿ ಈ ಸ್ಥಳದ ಬಗ್ಗೆ ಉಲ್ಲೇಖವಿದೆ. ಅದರ ಪ್ರಕಾರ ಇಲ್ಲಿ ಚಂಡಿ ದೇವಿಯು ಶುಂಭ ನಿಶುಂಭರೆಂಬ ಅಸುರರನ್ನು ಸಂಹರಿಸಿದಳು. ಈ ದೇವಾಲಯದ ಮೂಲ ವಿಗ್ರಹವನ್ನು ೮ನೆಯ ಶತಮಾನದಲ್ಲಿ ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದರೆಂದು ನಂಬಲಾಗಿದೆ. ಈ ಆಲಯವನ್ನು ಚಂಡಿಘಾಟ್‌ನಿಂದ ೩ ಕಿ.ಮೀ. ನಡೆದು ಅಥವಾ ರೋಪ್‌ವೇಯ ಮೂಲಕ ತಲುಪಬಹುದಾಗಿದೆ.

ಮಾನ್ಸಾ ದೇವಿ ಮಂದಿರ

ಮಾನ್ಸಾ ದೇವಿಯ ಆಲಯವು ಬಿಲ್ವ ಪರ್ವತದ ಮೇಲೆ ಇರುತ್ತದೆ. ಹೆಸರೇ ಸೂಚಿಸುವಂತೆ ಈ ದೇವಿ ಯಾಚಕರ ಮನೋಕಾಮನೆಗಳನ್ನು ಪೂರ್ಣಗೊಳಿಸುವ ದೇವತೆ. ಈ ಸ್ಥಾನವು ಪ್ರವಾಸಿಗರಿಗೆ ಪ್ರಿಯವಾದ ತಾಣ. ಈ ದೇವಾಲಯವನ್ನು ಕೇಬಲ್ ಕಾರ್‌ಗಳ ಮೂಲಕ ತಲುಪಬಹುದು. ಮಾನ್ಸಾ ದೇವಿಯ ಆಲಯದಲ್ಲಿ ದೇವಿಯ ಎರಡು ಮೂರ್ತಿಗಳಿದ್ದು ಒಂದರಲ್ಲಿ ದೇವಿಯನ್ನು ಮೂರು ಮುಖಗಳು ಮತ್ತು ಐದು ಬಾಹುಗಳಿರುವಂತೆ ತೋರಿಸಲಾಗಿದ್ದರೆ ಇನ್ನೊಂದರಲ್ಲಿ ದೇವಿಯು ೮ ಬಾಹುಗಳನ್ನು ಹೊಂದಿರುವಳು. ಮಾನ್ಸಾ ದೇವಿಯ ಆಲಯವಿರುವ ಬಿಲ್ವ ಪರ್ವತವು ಹರಿದ್ವಾರ ನಗರಮಧ್ಯದಲ್ಲಿಯೇ ಇದ್ದು ಹರ್-ಕಿ-ಪೌಡಿಗೆ ಸಮೀಪದಲ್ಲಿದೆ. ಪರ್ವತದ ಮೇಲಿನಿಂದ ಹರಿದ್ವಾರ ನಗರದ ಸುಂದರ ನೋಟ ಲಭ್ಯ.

ಮಾಯಾ ದೇವಿ ಮಂದಿರ

೧೧ನೆಯ ಶತಮಾನದ ಕಾಲದ ಈ ಮಂದಿರವು ಹರಿದ್ವಾರದ ಅಧಿಷ್ಠಾತ್ರಿ ದೇವತೆ ಮಾಯಾದೇವಿಯನ್ನು ಕುರಿತಾಗಿದೆ. ಈ ಸ್ಥಳವು ಒಂದು ಸಿದ್ಧಪೀಠವೆಂದು ಪರಿಗಣಿಸಲ್ಪಟ್ಟಿದೆ. ಇಲ್ಲಿ ಸತಿಯ ಹೃದಯ ಮತ್ತು ನಾಭಿಯ ಭಾಗಗಳು ನೆಲಕ್ಕೆ ಬಿದ್ದವೆಂದು ಐತಿಹ್ಯಗಳಿವೆ. ಮಾಯಾ ದೇವಿಯ ಮಂದಿರವು ಹರಿದ್ವಾರದ ಅತಿ ಪ್ರಾಚೀನ ಆಲಯಗಳಲ್ಲಿ ಒಂದು.

ದಕ್ಷ ಮಹಾದೇವ ಮಂದಿರ

ಹರಿದ್ವಾರದಿಂದ ೪ ಕಿ.ಮೀ. ದಕ್ಷಿಣದಲ್ಲಿ ಕಂಖಾಲ್ ಪಟ್ಟಣದಲ್ಲಿ ದಕ್ಷ ಮಹಾದೇವನ ಪ್ರಾಚೀನ ಮಂದಿರವಿದೆ. ಹಿಂದೂ ಪುರಾಣಗಳ ಪ್ರಕಾರ ದಾಕ್ಷಾಯಣಿಯ ತಂದೆ ದಕ್ಷ ಪ್ರಜಾಪತಿಯು ಇಲ್ಲಿ ಒಂದು ಯಜ್ಞವನ್ನು ನಡೆಸಿದನು. ಆದರೆ ಆ ಯಜ್ಞಕ್ಕೆ ತನ್ನ ಅಳಿಯ ಶಿವನನ್ನು ಆಹ್ವಾನಿಸಲಿಲ್ಲ. ನಂತರ ಪತ್ನಿ ದಾಕ್ಷಾಯಣಿಯ ಒತ್ತಾಯಕ್ಕೆ ಮಣಿದು ಶಿವನು ಅನಾಹೂತನಾಗಿ ಯಜ್ಞಕ್ಕೆ ಆಗಮಿಸಿದಾಗ ದಕ್ಷನು ಶಿವನನ್ನು ಅಪಮಾನಿಸಿದನು. ಇದರಿಂದ ನೊಂದ ದಾಕ್ಷಾಯಣಿ (ಸತಿ) ಯಜ್ಞಕುಂಡದಲ್ಲಿ ಬಿದ್ದು ಪ್ರಾಣ ನೀಗಿಕೊಂಡಳು. (ಈ ಕುಂಡವನ್ನು ಈಗ ಸತಿ ಕುಂಡವೆಂದು ಕರೆಯಲಾಗುತ್ತದೆ.) ಶಿವನು ಕ್ರುದ್ಧನಾಗಿ ವೀರಭದ್ರನೆಂಬ ಮಹಾಭೂತವನ್ನು ಸೃಷ್ಟಿಸಿದನು. ಈ ವೀರಭದ್ರನು ದಕ್ಷನನ್ನು ಸಂಹರಿಸಿದನು. ಮತ್ತೆ ಸೌಮ್ಯರೂಪಕ್ಕೆ ಮರಳಿದ ಶಿವನು ಇತರ ದೇವತೆಗಳ ಪ್ರಾರ್ಥನೆಗೆ ಮಣಿದು ದಕ್ಷನಿಗೆ ಪ್ರಾಣವನ್ನು ಮರಳಿ ನೀಡಲು ಒಪ್ಪಿ ಆಡಿನ ತಲೆಯೊಂದನ್ನು ದಕ್ಷನ ಮುಂಡಕ್ಕೆ ಜೋಡಿಸಿ ಪುನರ್ಜನ್ಮ ಕರುಣಿಸಿದನು. ಕಂಖಾಲ್ ಈ ಘಟನಾವಳಿಗಳೆಲ್ಲ ನಡೆದ ಸ್ಥಳವೆಂದು ನಂಬಲಾಗಿದೆ.

ನೀಲ ಧಾರಾ ಪಕ್ಷಿ ವಿಹಾರ

ಗಂಗಾ ನದಿಯ ಮುಖ್ಯ ಧಾರೆಯಾದ ನೀಲ ಧಾರಾದ ಆಸುಪಾಸಿನಲ್ಲಿ ಇರುವ ಈ ಪಕ್ಷಿವಿಹಾರವು ಪಕ್ಷಿಪ್ರಿಯರಿಗೆ ಅತಿ ಮೆಚ್ಚಿನ ತಾಣ. ಭೀಮ್‌ಗೋಡಾ ಬ್ಯಾರೇಜ್ ಪ್ರದೇಶದಲ್ಲಿ ಚಳಿಗಾಲದಲ್ಲಿ ಅನೇಕ ತಳಿಗಳ ಹಕ್ಕಿಗಳು ಬೃಹತ್ ಸಂಖ್ಯೆಯಲ್ಲಿ ಇಲ್ಲಿಗೆ ವಲಸೆ ಬರುತ್ತವೆ.

ಭೀಮ್‌ಗೋಡಾ ಕೆರೆ

ಇದು ಹರ್-ಕಿ-ಪೌಡಿಯಿಂದ ೧ ಕಿ.ಮೀ. ದೂರದಲ್ಲಿದೆ. ಐತಿಹ್ಯಗಳ ಪ್ರಕಾರ ಪಾಂಡವರು ಹರಿದ್ವಾರದ ಮಾರ್ಗವಾಗಿ ಹಿಮಾಲಯಕ್ಕೆ ತೆರಳುವಾಗ ಈ ಸ್ಥಾನದಲ್ಲಿ ಭೀಮನು ತನ್ನ ಮಂಡಿಯನ್ನು ನೆಲಕ್ಕೆ ಒತ್ತಿ ಗಂಗಾಜಲವನ್ನು ಪಡೆದುಕೊಂಡನು.

ಜೈರಾಮ್ ಆಶ್ರಮ

ಅನೇಕ ಶಿಲ್ಪಗಳು ಮತ್ತು ಚಿತ್ರಣವನ್ನು ಒಳಗೊಂಡಿದೆ. ಇಲ್ಲಿರುವ ಬಿಳಿ ಅಮೃತಶಿಲೆಯಲ್ಲಿ ಕಡೆದ ಸಮುದ್ರಮಥನದ ಶಿಲ್ಪ ಅದ್ಭುತವಾಗಿದೆ.

ಸಪ್ತರ್ಷಿ ಆಶ್ರಮ ಮತ್ತು ಸಪ್ತ ಸರೋವರ

ಹರಿದ್ವಾರದ ಸಮೀಪದಲ್ಲಿರುವ ಒಂದು ಸುಂದರ ತಾಣ. ಇಲ್ಲಿ ಸಪ್ತರ್ಷಿಗಳಾದ ಕಶ್ಯಪ, ವಸಿಷ್ಠ, ಅತ್ರಿ, ವಿಶ್ವಾಮಿತ್ರ, ಜಮದಗ್ನಿ, ಭಾರದ್ವಾಜ ಮತ್ತು ಗೌತಮ ಮಹರ್ಷಿಗಳು ತಪಸ್ಸನ್ನು ಆಚರಿಸಿದರೆನ್ನಲಾಗಿದೆ. ಗಂಗೆಯು ಇವರ ತಪಸ್ಸಿಗೆ ಭಂಗನ್ನುಂಟುಮಾಡದಿರಲೋಸುಗ ಈ ಸ್ಥಾನದಲ್ಲಿ ಏಳು ಕವಲಾಗಿ ಹರಿದಿರುವಳು.

ಪರಡ್ ಶಿವಲಿಂಗ

ಕಂಖಾಲ್‌ನ ಹರಿಹರ ಆಶ್ರಮದಲ್ಲಿ ಬೃಹತ್ ಗಾತ್ರದ ಈ ಶಿವಲಿಂಗವಿದೆ. ಜೊತೆಗೆ ಇಲ್ಲಿರುವ ರುದ್ರಾಕ್ಷದ ವೃಕ್ಷವು ಸಹ ಒಂದು ಪ್ರವಾಸಿ ಆಕರ್ಷಣೆಯಾಗಿದೆ.

ಸುರೇಶ್ವರಿ ದೇವಿ ಮಂದಿರ

ಹರಿದ್ವಾರ ನಗರದ ಹೊರಗೆ ರಾಣಿಪುರದಲ್ಲಿ ರಾಜಾಜಿ ರಾಷ್ಟ್ರೀಯ ಉದ್ಯಾನದಲ್ಲಿ ಅರಣ್ಯದ ಮಧ್ಯೆ ಇರುವ ಈ ಆಲಯವು ಪ್ರಶಾಂತ ವಾತಾವರಣದಲ್ಲಿದ್ದು ಭಕ್ತರನ್ನು ಮತ್ತು ಸಾಧು ಸಂತರನ್ನು ಸೆಳೆಯುತ್ತದೆ. ಈ ಆಲಯಕ್ಕೆ ತೆರಳಲು ಅರಣ್ಯ ಇಲಾಖೆಯ ಅನುಮತಿ ಅಗತ್ಯ.

ಭಾರತ್ ಮಾತಾ ಮಂದಿರ

ಬಹುಮಹಡಿಗಳುಳ್ಳ ಈ ಸಂಕೀರ್ಣವು ಭಾರತಮಾತೆಗೆ ಗೌರವಸೂಚಕವಾಗಿ ನಿರ್ಮಿಸಲ್ಪಟ್ಟಿದೆ. ಇಲ್ಲಿನ ಪ್ರತಿ ಮಹಡಿಯು ಭಾರತದ ಇತಿಹಾಸದ ಒಂದೊಂದು ಕಾಲದ ಘಟನಾವಳಿಗಳನ್ನು ಚಿತ್ರಿಸುತ್ತದೆ. ರಾಮಾಯಣದ ಕಾಲದಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮ ಕಾಲದವರೆಗಿನ ಮುಖ್ಯ ಘಟ್ಟಗಳನ್ನು ಇಲ್ಲಿ ಚಿತ್ರಿಸಲಾಗಿದೆ. ಹರಿದ್ವಾರದ ಅತಿ ಸುಂದರ ಮತ್ತು ಮುಖ್ಯ ಆಕರ್ಷಣೆಗಳಲ್ಲಿ ಭಾರತ್ ಮಾತಾ ಮಂದಿರವು ಸಹ ಒಂದು.

ಪಾವನ ಧಾಮ

ಹರಿದ್ವಾರ ನಗರದಲ್ಲಿಯೇ ಇರುವ ಸಂಪೂರ್ಣವಾಗಿ ಗಾಜಿನಿಂದಲೇ ನಿರ್ಮಿಸಲಾಗಿರುವ ಪಾವನ ಧಾಮ ಒಂದು ಆಧುನಿಕ ದೇವಾಲಯವಾಗಿದ್ದು ತನ್ನ ಅದ್ಭುತ ದೃಶ್ಯಗಳಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಮೇಲೆ ಹೆಸರಿಸಿರುವ ಆಲಯಗಳಲ್ಲದೆ ಹರಿದ್ವಾರದಲ್ಲಿ ದೊಡ್ಡ ಸಂಖ್ಯೆಯ ಆಲಯಗಳು ಮತ್ತು ಆಶ್ರಮಗಳಿವೆ. ಹರಿದ್ವಾರದ ಸಾತ್ವಿಕ ವಾತಾವರಣವನ್ನು ಕಾಪಾಡಿಕೊಳ್ಳಲು ಹರಿದ್ವಾರದಲ್ಲಿ ಮಾಂಸಾಹಾರ ಮತ್ತು ಮದ್ಯಪಾನಗಳ ಮೇಲೆ ಸಂಪೂರ್ಣ ನಿಷೇಧವಿದೆ.

ಹಬ್ಬ ಮತ್ತು ಉತ್ಸವಗಳು[ಬದಲಾಯಿಸಿ]

ಹರಿದ್ವಾರದಲ್ಲಿ ಗಂಗಾ ದಸರಾ.

ಹರಿದ್ವಾರವು ಹಿಂದೂ ಧಾರ್ಮಿಕತೆಯ ಅತಿ ಮುಖ್ಯ ಕೇಂದ್ರಗಳಲ್ಲಿ ಒಂದಾಗಿರುವುದರಿಂದಾಗಿ ಸಹಜವಾಗಿ ಇಲ್ಲಿ ವರ್ಷದಾದ್ಯಂತ ಉತ್ಸವಗಳು ಹಾಗೂ ಧಾರ್ಮಿಕ ಮೇಳಗಳು ನಡೆಯುತ್ತಲೇ ಇರುತ್ತವೆ. ಕವಡ್ ಮೇಳ, ಸೋಮವತಿ ಅಮಾವಾಸ್ಯಾ ಮೇಳ, ಗಂಗಾ ದಸರಾ ಮತ್ತು ಗುಘಾಲ್ ಮೇಳ ಇವುಗಳಲ್ಲಿ ಕೆಲವು. ಗುಘಾಲ್ ಮೇಳದಲ್ಲಿ ೨೦ ರಿಂದ ೨೫ ಲಕ್ಷ ಜನರು ಪಾಲ್ಗೊಳ್ಳುವರೆಂದು ಒಂದು ಅಂದಾಜಿದೆ.

ಇವುಗಳಲ್ಲದೆ ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ಜರಗುವ ಕುಂಭ ಮೇಳ ಅತಿ ದೊಡ್ಡ ಉತ್ಸವ. ಗುರು ಗ್ರಹವು ಕುಂಭರಾಶಿಯನ್ನು ಪ್ರವೇಸುವ ಸಮಯದಲ್ಲಿ ಈ ಕುಂಭ ಮೇಳ ನಡೆಯುವುದು. ಕುಂಭ ಮೇಳದ ಅತಿ ಪ್ರಾಚೀನ ದಾಖಲೆ ೭ನೆಯ ಶತಮಾನದಷ್ಟು ಹಳೆಯದು. ಬ್ರಿಟಿಷರ ಆಳಿಕೆಯ ಕಾಲದಲ್ಲಿ ೧೮೯೨ರಲ್ಲಿ ನಡೆದ ಕುಂಭ ಮೇಳದಲ್ಲಿ ಕಾಲರಾ ಪಿಡುಗಿನಿಂದಾಗಿ ಭಾರೀ ಅನಾಹುತವಾದ ನಂತರ ಹರಿದ್ವಾರದಲ್ಲಿ ಕುಂಭ ಮೇಳದ ಸಮಯದಲ್ಲಿ ಸೌಲಭ್ಯ ಸವಲತ್ತುಗಳನ್ನು ಒದಗಿಸುವಲ್ಲಿ ಹೆಚ್ಚಿನ ನಿಗಾ ವಹಿಸಲಾಯಿತು. ೧೯೦೩ರಲ್ಲಿ ನಡೆದ ಕುಂಭ ಮೇಳದಲ್ಲಿ ೪ ಲಕ್ಷ ಜನ ಭಾಗವಹಿಸಿದರೆಂದು ದಾಖಲಾಗಿದೆ. ೧೯೮೦ರ ದಶಕದ ಕುಂಭಮೇಳದಲ್ಲಿ ಹರ್-ಕಿ-ಪೌಡಿ ಪ್ರದೇಶದಲ್ಲಿ ಉಂಟಾದ ನೂಕುನುಗ್ಗಲಿನಲ್ಲಿ ಸುಮಾರು ೬೦೦ ಜನ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ತೆತ್ತರು. ೧೯೯೮ರ ಮಹಾ ಕುಂಭ ಮೇಳದಲ್ಲಿ ಸುಮಾರು ಒಂದು ಕೋಟಿ ಜನರು ಭಾಗವಹಿಸಿ ಮೇಳದ ಸಮಯದಲ್ಲಿ ಗಂಗಾ ಸ್ನಾನ ಮಾಡೀದರು. ಮಹಾ ಕುಂಭ ಮೇಳವು ವಿಶ್ವದಲ್ಲಿಯೇ ಅತಿ ಹೆಚ್ಚು ಜನ ಸೇರುವ ಸಂದರ್ಭವಾಗಿರುತ್ತದೆ.

ಹರಿದ್ವಾರವು ದೆಹಲಿಯಿಂದ ಸುಮಾರು ೨೦೦ ಕಿ.ಮೀ. ದೂರದಲ್ಲಿದ್ದು ಉತ್ತಮ ರಸ್ತೆ ಮತ್ತು ರೈಲು ಸಂಪರ್ಕಗಳನ್ನು ಹೊಂದಿದೆ.

ಬಾಹ್ಯ ಸಂಪರ್ಕಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: