ರಸ್ತೆ
ರಸ್ತೆಯು ಎರಡು ಗ್ರಾಮ, ಪಟ್ಟಣ ಇಲ್ಲವೇ ನಗರಗಳ ನಡುವೆ ಗಾಡಿ, ಕಾರು, ಬಸ್ಸು, ಲಾರಿ ಮುಂತಾದ ನೆಲವಾಹನಗಳ ಸಂಚಾರಕ್ಕೆ ಎಡೆಮಾಡಿಕೊಡುವ ಪಥ (ರೋಡ್). ನಾಗರಿಕತೆಯ ಅಭಿವರ್ಧನೆಯಲ್ಲಿ ರಸ್ತೆಗಳ ಪಾತ್ರ ರಕ್ತಪರಿಚಲನೆಯಲ್ಲಿ ಧಮನಿಗಳ ಪಾತ್ರದಂತೆ ಅತ್ಯಂತ ಮಹತ್ತ್ವಪೂರ್ಣವಾದದ್ದು.[೧]
ನಿರ್ಮಾಣ
[ಬದಲಾಯಿಸಿ]ಪ್ರಾಚೀನಕಾಲದಲ್ಲಿ ಕಾಲುಹಾದಿಗಳೇ ಬೆಳೆದು ಅವಶ್ಯಕತೆಗೆ ಅನುಗುಣವಾಗಿ ರಸ್ತೆಗಳು ಮೈದಳೆದವು. ಇಲ್ಲೆಲ್ಲ ಸಮೀಪತ್ವವೇ ನಿರ್ಣಾಯಕ ಆದುದು ವಾಡಿಕೆ. ಅದರೆ ವಾಹನಗಳಲ್ಲಿ ಸುಧಾರಣೆ ಬಂದಂತೆ, ವೇಗ, ಭಾರ, ಸಾಮಥ್ರ್ಯ ಎಂಬ ಖಚಿತ ವೈಜ್ಞಾನಿಕ ಅಂಶಗಳಿಗೆ ಗಮನ ಕೊಡುವುದು ಅನಿವಾರ್ಯ ಆದಂತೆ ಮತ್ತು ವಾಹನಗಳ ಸಂದಣಿ ಬಗ್ಗೆ ಎಚ್ಚರವಹಿಸುವುದು ಅಗತ್ಯವಾದಂತೆ ರಸ್ತೆನಿರ್ಮಾಣ ಒಂದು ವೈಜ್ಞಾನಿಕ ಅಧ್ಯಯನದ ವಿಷಯವಾಯಿತು.
ರಸ್ತೆ ನಿರ್ಮಾಣಗೈಯುವ, ಮೊದಲು ಅದು ಹಾದು ಕ್ರಮಿಸಬೇಕೆಂದು ಉದ್ದೇಶಿಸಿರುವ ಪ್ರದೇಶದ ಸವಿವರ ಸರ್ವೇಕ್ಷಣೆ ಮಾಡಿ ರಸ್ತೆಯ ಜಾಡನ್ನು ಗುರುತಿಸಲಾಗುವುದು. ಬಳಿಕ ಕಾಮಗಾರಿಯಲ್ಲಿ ತೊಡಗಲಾಗುವುದು. ಸೇತುವೆ, ಅಡಿಗಾಲುವೆ, ಚರಂಡಿ ಕೆಲಸ ಜೊತೆಯಲ್ಲೇ ಆರಂಭವಾಗುವುದು.
ಇಂದು ರಸ್ತೆಯ ಜಾಡು ನಿಶ್ಚಯಿಸಲು ಟೋಪೊ ನಕಾಸೆಗಳು ಬಂದಿವೆ. ಮಣ್ಣು ಕೆಲಸವನ್ನು ಶೀಘ್ರವಾಗಿ ಮಾಡಲು ಯಂತ್ರಗಳಿವೆ. ರಸ್ತೆಯ ಮೇಲು ಭಾಗವನ್ನು ಗಟ್ಟಿಗೊಳಿಸಲು ಕಲ್ಲಿನ ಜಲ್ಲಿಯೇ ಅಲ್ಲದೆ ಡಾಂಬರು, ಮ್ಯಾಕ್‍ಡಮ್ ಮತ್ತು ಸಿಮೆಂಟ್ ಕಾಂಕ್ರಿಟ್ ಬಂದಿವೆ. ಎಷ್ಟು ದೊಡ್ಡ ನದಿಯ ಮೇಲಾದರೂ ರಸ್ತೆಸೇತುವೆ ಕಟ್ಟುವುದು ಸಾಧ್ಯವಾಗಿದೆ. ಬಂಡೆಗಳಲ್ಲಿ ಕುಳಿ ತೋಡಲು ಒತ್ತಡದ ಗಾಳಿಯ ಬಲದಿಂದ ಕೆಲಸಮಾಡುವ ಯಂತ್ರಗಳಿವೆ. ಅಲ್ಲದೇ ಅವುಗಳಲ್ಲಿ ಸಿಡಿಮದ್ದು ಇಟ್ಟು ಸಿಡಿಸಿ ಕಲ್ಲನ್ನು ಸೀಳಬಹುದು. ನೆಲವನ್ನು ಮಟ್ಟಮಾಡಲು ಬುಲ್‍ಡೋಸರುಗಳಿವೆ. ವೇಗವಾಗಿ ಚಲಿಸುವ ಮೋಟಾರುವಾಹನಗಳು ಬರುವ ತನಕ ಗಟ್ಟಿಯಾದ ಮತ್ತು ದೂಳಿಲ್ಲದ ರಸ್ತೆಯ ಅವಶ್ಯಕತೆ ಎದುರಾಗಿರಲಿಲ್ಲ. ಕಬ್ಬಿಣದ ಪಟ್ಟೆಗಳಿಂದ ಭದ್ರಗೊಳಿಸಿದ ಚಕ್ರ ಮತ್ತು ಕುದುರೆ ಅಥವಾ ಎತ್ತಿನ ಕಾಲಿಗೆ ಕಬ್ಬಿಣದ ಲಾಳ ಇದ್ದಲಿ ರಸ್ತೆಗೆ ಪ್ರತಿಯೊಂದು ವರ್ಷವೂ ಮಳೆಗಾಲ ಮುಗಿದ ಮೇಲೆ ಸಾಮಾನ್ಯ ದುರಸ್ತಿ ಮಾಡಿದರೆ ಮುಂದಿನ ವರ್ಷದ ತನಕವೂ ಅದು ಉಳಿದಿರುತ್ತಿತ್ತು. ಪಕ್ಕದ ಸಾಲು ಮರಗಳು ಮಳೆಯ ಹೊಡೆತ ನೇರವಾಗಿ ರಸ್ತೆಯ ಮೇಲೆ ಬೀಳದಂತೆ ತಡೆಯುತ್ತಿದ್ದವು. ಅವುಗಳ ನೆರಳಿನಲ್ಲಿ ರಸ್ತೆಯ ತೇವ ಬಹುಕಾಲ ಉಳಿದಿರುತ್ತಿತ್ತು. ಆದರೆ ಈಗಿನ ಯಂತ್ರಯುಗದಲ್ಲಿ ರಸ್ತೆಯ ಮೇಲ್ಮೈಯನ್ನು ಡಾಂಬರು, ಸಿಮೆಂಟ್ - ಕಾಂಕ್ರಿಟ್‍ಗಳಿಂದ ನಿರ್ಮಿಸುವುದು ಅನಿವಾರ್ಯ.
ಹೊಸರಸ್ತೆಯ ತಳಪಾಯವನ್ನು ನಿರ್ಣಯಿಸುವಾಗ ಅಲ್ಲಿಯ ಮಣ್ಣಿನ ಸ್ವಭಾವವನ್ನೂ ಅದರ ಮೇಲೆ ಮುಂದೆ ಸಂಚರಿಸುವ ವಾಹನಗಳ ತೂಕ, ರಸ್ತೆಯ ಚದರ ಏಕಮಾನದ ಮೇಲೆ ಬೀಳುವ ಸರಾಸರಿ ಭಾರ ಇವನ್ನು ಗಣನೆಗೆ ತೆಗೆದುಕೊಳ್ಳಬೇಕು. ಹೊಸರಸ್ತೆಗಳ ನಿರ್ಮಾಣದಲ್ಲಿ ವಿವಿಧ ಬಗೆಯ ತಳಪಾಯದ ಕ್ರಮಗಳು ಬಳಕೆಯಲ್ಲಿವೆ. ಟೆಲ್ಫರ್ಡ್ ಎಂಬಾತ ಬಳಕೆಗೆ ತಂದ ಕ್ರಮದಲ್ಲಿ 12 ರಿಂದ 22 ಸೆಂಮೀ ದಪ್ಪದ ಕಲ್ಲುಗಳನ್ನು ಮಧ್ಯೆ ಸಂದು ಬಿಡದಂತೆ ಎಚ್ಚರಿಕೆಯಿಂದ ಜೋಡಿಸಿ ಮೋಟರು ವಾಹನಗಳ ಸಂಚಾರ ವಿಶೇಷವಾಗಿರುವ ರಸ್ತೆಗಳಲ್ಲಿ ಕಾಂಕ್ರೀಟಿನ ವರಾಂಡ ಚಪ್ಪಡಿಯನ್ನು ಸ್ಥಳದಲ್ಲಿಯೇ ಹಾಕುತ್ತಾರೆ. 9 ಮೀ ಅಗಲವಾದ ರಸ್ತೆಗೆ ನಡುವೆ 23 ಸೆಂಮೀ, ಕೊನೆಗಳಲ್ಲಿ 7.5 ಸೆಂಮೀ ಮಂದವಾಗಿರುವ ದಪ್ಪ ಕಲ್ಲುಗಳ ತಳಪಾಯ ಅವಶ್ಯವೆಂಬುದು ಟೆಲ್ಫರ್ಡ್‍ನ ಅಭಿಮತ. ಈ ತಳಪಾಯದ ಮೇಲೆ 15 ಸೆಂಮೀ ಮಂದದ ಸಣ್ಣಜಲ್ಲಿಯನ್ನು ಹರಡಿ ರಸ್ತೆಯ ಮೇಲೆ ಬಿದ್ದ ಮಳೆಯ ನೀರು ಶೀಘ್ರವಾಗಿ ಪಕ್ಕಗಳಿಗೆ ಹರಿಯಲು ಅನುವು ಮಾಡಿಕೊಡಬೇಕೆಂದು ಸೂಚಿಸಿದ. ರಸ್ತೆ ಹಾಳಾಗಲು ಅದರ ಮೇಲಿನ ವಾಹನಸಂಚಾರ ಮಾತ್ರವೇ ಕಾರಣವಲ್ಲ. ಬಿದ್ದ ಮಳೆಯ ನೀರು ಬೇಗ ಹೊರಕ್ಕೆ ಹೋಗದೆ ಇರುವುದು ಕೂಡ ಅಷ್ಟೇ ಮುಖ್ಯ ಕಾರಣ ಎಂದು ತೋರಿಸಿದ. ರಸ್ತೆಯ ತಳಪಾಯ ಯಾವಾಗಲೂ ತೇವವಾಗದೆ ಒಣಗಿಯೇ ಇರಬೇಕು. ಅದಕ್ಕಾಗಿ ಮಳೆ ಬೀಳುವುದಕ್ಕೆ ಮುಂಚೆ ಚರಂಡಿಗಳನ್ನು ರಿಪೇರಿಮಾಡಬೇಕು.
ರಸ್ತೆಯ ಬಗೆಗಳು
[ಬದಲಾಯಿಸಿ]ಮಣ್ಣಿನ ರಸ್ತೆಗಳು : ಗತಕಾಲದ ಸ್ಮಾರಕಗಳಾದ ಮಣ್ಣಿನ ರಸ್ತೆಗಳನ್ನು ಇಂದು ವಿಶೇಷವಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಮಾತ್ರ ನೋಡಬಹುದು.
ಮೆಕಡಮ್ ರಸ್ತೆ: ಮೆಕಡಮ್ ಎಂಬ ಸ್ಕಾಟ್‍ಲ್ಯಾಂಡ್‍ನ ಇಂಜಿನಿಯರು ಗಟ್ಟಿಯಾದ ಗ್ರ್ಯಾನೈಟ್ ಕಲ್ಲನ್ನು ಸುಮಾರು 2.5 ಸೆಂಮೀ ರಿಂದ 4.0 ಸೆಂ.ಮೀ ಅಳತೆಗೆ ಒಡೆದು ರಸ್ತೆಯ ತಳವನ್ನು ಪಿಕಾಸಿಗಳಿಂದ ಕೆದಕಿ ಅದರ ಮೇಲೆ ರಸ್ತೆಯ ಅಗಲಕ್ಕೂ ಜಲ್ಲಿ ಹಾಕಿ, ಆವಿ ಎಂಜಿನ್ನಿನನಿಂದ ಓಡುವ ರಸ್ತೆಯ ರೋಲರಿನಿಂದ ಜಲ್ಲಿಯ ಪದರನ್ನು ಅಡಕಿಸಿದ. ಈ ನಮೂನೆ ಭಾರತದಲ್ಲಿ ವಿಶೇಷವಾಗಿ ಬಳಕೆಯಲ್ಲಿದೆ.
ಡಾಂಬರು ರಸ್ತೆ : ಹದಗೊಳಿಸಿದ ಎಣ್ಣೆ, ಡಾಂಬರು ಮತ್ತು ಅಸ್ಫಾಲ್ಟ್ - ಇವುಗಳನ್ನು ಬಂಧಕಗಳಾಗಿ ಬಳಸಿ ರಸ್ತೆಯಿಂದಾಗುವ ದೂಳನ್ನು ಕಡಿಮೆಮಾಡಲಾಗುವುದು, ಅಲ್ಲದೆ ಸರ್ವಋತುಯೋಗ್ಯ ರಸ್ತೆಯನ್ನು ನಿರ್ಮಿಸಲಾಗುವುದು.
ಸಿಮೆಂಟ್-ಕಾಂಕ್ರಿಟ್ ರಸ್ತೆ : ಎಲ್ಲ ನಮೂನೆಯ ವಾಹನಗಳು ಓಡಾಡುವ ನಗರಗಳಲ್ಲಿ ಈ ರಸ್ತೆ ಸರ್ವೋತ್ತಮವಾದುದು. ಮೆಕ್‍ಡಮ್ ರಸ್ತೆಗಳಿಗೆ ಖರ್ಚು ಕಡಿಮೆಯಾದ್ದರಿಂದ ಅವು ಎಲ್ಲ ದೇಶಗಳಲ್ಲಿಯೂ ವ್ಯಾಪಕವಾಗಿ ಬಳಕೆಯಾದವು. 19ನೆಯ ಶತಮಾನದ ಉತ್ತರಾರ್ಧದಲ್ಲಿ ರೈಲ್ವೆಗಳ ಪೈಪೋಟಿಯಿಂದ ರಸ್ತೆಗಳ ಕಡೆಗೆ ಗಮನ ಕಡಿಮೆಯಾಯಿತು. 1867ರಲ್ಲಿ ಟ್ರಿನಿಡಾಡ್‍ನಿಂದ ಬಂದ ಅಸ್ಫಾಲ್ಟನ್ನು ಲಂಡನ್ನಿನಲ್ಲಿ ರಸ್ತೆಗಳಿಗೆ ಉಪಯೋಗಿಸಿದರು. ಅದೇ ವರ್ಷ ಆವಿ ಎಂಜಿನ್ನಿನಿಂದ ನಡೆಯುವ ರೋಲರುಗಳು ಮೊದಲಿಗೆ ಬಂದವು. ಅದಕ್ಕೆ ಮುಂಚೆ ಗಾಡಿಗಳ ಓಡಾಟದಿಂದಲೇ ರಸ್ತೆಯ ಜಲ್ಲಿಯನ್ನು ಅಡಕಿಸಬೇಕಾಗಿತ್ತು. ಈಚೆಗೆ ಡೀಸಲ್ಲನ್ನೂ ಪೆಟ್ರೋಲನ್ನೂ ಉಪಯೋಗಿಸುವ ರೋಲರುಗಳು ಬಂದಿವೆ. 20ನೆಯ ಶತಮಾನದಲ್ಲಿ ಮೋಟರು ವಾಹನಗಳು ಬಂದ ಬಳಿಕ ರಸ್ತೆಗಳ ದುರಸ್ತಿಗೆ ರಾಷ್ಟ್ರೀಯ ಪ್ರಾಮುಖ್ಯ ಪ್ರಾಪ್ತವಾಯಿತು. ಮೆಕಡಮ್ ರಸ್ತೆಯಲ್ಲಿ ಎತ್ತು ಅಥವಾ ಕುದುರೆ ಜಾರಿ ಬೀಳುವ ಹೆದರಿಕೆಯಿಲ್ಲ. ಆದರೆ ವೇಗವಾಗಿ ಚಲಿಸುವ ವಾಹನಗಳು ಈ ರಸ್ತೆಗಳ ಮೇಲೆ ಹೋದಾಗ ದೂಳು ವಿಶೇಷವಾಗಿ ಏಳುತ್ತಿತ್ತು. ಸಾಲದ್ದಕ್ಕೆ ಈ ಅತಿವೇಗದ ವಾಹನಗಳು ರಸ್ತೆಯ ಜಲ್ಲಿಯನ್ನು ಚದಿರಿಸುತ್ತಿದ್ದವು. ಅದಕ್ಕಾಗಿ ಟಾರಿನ ರಸ್ತೆ ಬಳಕೆಗೆ ಬಂದಿತು.
ರಸ್ತೆಯ ಆಡಳಿತ
[ಬದಲಾಯಿಸಿ]ಇಪ್ಪತ್ತನೆಯ ಶತಮಾನದ ಎರಡನೆಯ ದಶಕದಲ್ಲಿ ಮೋಟರು ವಾಹನಗಳ ಸಂಚಾರ ಭಾರತದ ಎಲ್ಲ ಕಡೆಗಳಲ್ಲಿಯೂ ಹರಡಿದ ಬಳಿಕ ರಸ್ತೆಯ ದುರಸ್ತಿ ಒಂದು ರಾಷ್ಟ್ರೀಯ ಸಮಸ್ಯೆಯಾಯಿತು. ದೂರದ ನಗರಗಳ ನಡುವೆ ನೇರವಾಗಿ ಮೋಟಾರು ವಾಹನಗಳು ಓಡಾಡಲು ಪ್ರಾರಂಭವಾದಾಗ ಹಳೆಯ ರಸ್ತೆಗಳ ಜಲ್ಲಿ ಪುಡಿಯಾಗಿ ದೂಳು ತುಂಬಿಕೊಂಡಿತು. ಆಗ ಆ ಒಂದೊಂದು ಜಿಲ್ಲೆಯ ಮುನಿಸಿಪಾಲಿಟಿಗಳಾಗಲಿ, ಡಿಸ್ಟ್ರಿಕ್ಟ್ ಬೋರ್ಡುಗಳಾಗಲಿ ದುರಸ್ತಿಯ ಜವಾಬ್ದಾರಿ ವಹಿಸಿಕೊಳ್ಳುವುದು ಅಸಾಧ್ಯವಾಯಿತು. ಮೊದಲು ಮೂರು ನಾಲ್ಕು ಜಿಲ್ಲೆಗಳನ್ನು ಹಾದು ಹೋಗುವ ಜಿಲ್ಲಾ ರಸ್ತೆಗಳ ನಿರ್ಮಾಣವಾಯಿತು. ಇವುಗಳ ವೆಚ್ಚವನ್ನು ಆಯಾ ಜಿಲ್ಲೆಗಳು ವಹಿಸಿಕೊಂಡವು. ಕ್ರಮೇಣ ಎರಡು ಮೂರು ಜಿಲ್ಲೆಗಳ ಮೂಲಕ ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಅವಶ್ಯಕವಾಯಿತು. ಆಗ ಕೇವಲ ದುರಸ್ತಿ ಖರ್ಚನ್ನು ಪ್ರಾಂತೀಯ ಸರ್ಕಾರಗಳೂ ಪಟ್ಟಣಗಳೊಳಗೆ ದೂಳಿಲ್ಲದಂತೆ ಸಿಮೆಂಟ್ ಕಾಂಕ್ರೀಟಿನ ರಸ್ತೆಗಳೂ ಹೆದ್ದಾರಿಗಳಿಗೆ ಅಸ್ಫಾಲ್ಟಿನ ರಸ್ತೆಯನ್ನೂ ನಿರ್ಮಿಸುವ ವೆಚ್ಚದ ಒಂದು ಪಾಲನ್ನು ಕೇಂದ್ರ ಸರ್ಕಾರವೂ ವಹಿಸಿಕೊಳ್ಳಬೇಕಾಗಿ ಬಂತು. ಈ ವೆಚ್ಚವನ್ನು ಸರಿತೂಗಿಸಲು ಸರ್ಕಾರ ಪೆಟ್ರೋಲಿನ ಮೇಲೆ ತೆರಿಗೆ ವಿಧಿಸುತ್ತದೆ. ರಾಷ್ಟ್ರದ ವಿವಿಧ ಪ್ರದೇಶಗಳ ನಡುವೆ ಸಂಚಾರ ಮತ್ತು ಸಂಪರ್ಕ ಸೌಲಭ್ಯ ಒದಗಿಸುವ ರಸ್ತೆಗಳು ರಾಷ್ಟ್ರೈಕ್ಯ ಕಾಪಾಡುವಲ್ಲಿ ನಿರ್ವಹಿಸುವ ಪಾತ್ರ ಅತಿಮುಖ್ಯವಾದದ್ದು.