ಲಾರ್ಡ್ ಕರ್ಜನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾರ್ಜ್ ನ್ಯಾಥೆನಿಯಲ್ ಕರ್ಜನ್(11 January 1859 – 20 March 1925) ಅಥವಾ ಲಾರ್ಡ್ ಕರ್ಜನ್ ಇಂಗ್ಲೆಂಡಿನ ರಾಜಕಾರಣಿ. ಭಾರತದ ವೈಸ್ರಾಯ್ (1898-1905), ಬ್ರಿಟನಿನ ವಿದೇಶಾಂಗ ಕಾರ್ಯದರ್ಶಿ (1919-1924).

ಜನನ ಮತ್ತು ಬಾಲ್ಯ[ಬದಲಾಯಿಸಿ]

(

4ನೆಯ ಬ್ಯಾರನ್ ಸ್ಕಾರ್ಸ್ಡೇಲನ ಹನ್ನೊಂದು ಮಕ್ಕಳ ಪೈಕಿ ನಾಲ್ಕನೆಯವನಾಗಿ 1859ರ ಜನವರಿ 11ರಂದು ಡರ್ಬಿಷೈರಿನ ಕೆಡ್ಲ್‌ಸ್ಟನ್ ಹಾಲಿನಲ್ಲಿ ಹುಟ್ಟಿದ. ಕರ್ಜನ್‍ನಿಗೆ 16 ವರ್ಷವಾಗಿದ್ದಾಗ ತಾಯಿ ತೀರಿಕೊಂಡಳು. ಬಾಲ್ಯದಲ್ಲಿ ಕರ್ಜ಼ನನ ಮೇಲೆ ಬಹುವಾಗಿ ಪ್ರಭಾವ ಬೀರಿದವರೆಂದರೆ ಈತನ ಗೃಹ ಶಿಕ್ಷಕಿ ಮತ್ತು ಪ್ರಾಥಮಿಕ ಶಾಲಾಧ್ಯಾಪಕ ). ಕಷ್ಟಪಟ್ಟು ದುಡಿಯುವ ಅಭ್ಯಾಸವೂ ವಿವರಗಳನ್ನು ಗಮನಿಸುವ ಗುಣವೂ ಕರ್ಜ಼ನನಿಗೆ ಬಂದದ್ದು ಇವರಿಂದ. ಈಟನ್, ಆಕ್ಸ್‌ಫರ್ಡ್‍ಗಳಲ್ಲಿ ಕರ್ಜ಼ನ್ ಶಿಕ್ಷಣ ಪಡೆದ. ಆಕ್ಸ್‌ಫರ್ಡಿನಲ್ಲಿದ್ದಾಗ ಇವನಿಗೆ ಬೆನ್ನುಮೂಳೆ ಬಾಗಿತು. ಈ ನೋವನ್ನವನ್ನು ತನ್ನ ಇಡೀ ಜೀವನಪರ್ಯಂತ ಅನುಭವಿಸ ಬೇಕಾಯಿತು. ಬಾಗಿದ ಬೆನ್ನನ್ನು ನೆಟ್ಟಗೆ ಮಾಡಲು ಕರ್ಜ಼ನ್ ಉಕ್ಕಿನ ಕವಚ ತೊಡುತ್ತಿದ್ದ. ಇದರಿಂದ ಇಡೀ ದೇಹವೇ ಸೆಟೆದಂತೆ ಕಾಣುತ್ತಿತ್ತು. ಈ ಗುಣವೇ ಮನಸ್ಸನ್ನೂ ಹೊಕ್ಕಿತೇನೋ ಎಂಬಂತೆ ಮುಂದಿನ ಜೀವನದಲ್ಲಿ ಇವನ ನಡತೆಯೂ ಘಟನೆಗಳೂ ರೂಪುಗೊಂಡುವು. ಕಾಲೇಜು ಸಂಘದ ಅಧ್ಯಕ್ಷನಾಗಿ ಕರ್ಜ಼ನ್ ಆಯ್ಕೆಗೊಂಡ.

ಜೀವನ[ಬದಲಾಯಿಸಿ]

ಶಿಕ್ಷಣ ಮುಗಿದ ಮೇಲೆ ಧಾರಾಳವಾಗಿ ಸಂಚರಿಸಿದ; ಸಮಾಜ ಜೀವನದಲ್ಲಿ ಬೆರೆತ. ಕನ್ಸರ್ವೆಟಿವ್ ಪಕ್ಷದ ವತಿಯಿಂದ ಕರ್ಜ಼ನ್ ಬ್ರಿಟಿಷ್ ಪಾರ್ಲಿಮೆಂಟನ್ನು ಪ್ರವೇಶಿಸಿದ್ದು 1886ರಲ್ಲಿ. ಐದು ವರ್ಷಗಳ ಅನಂತರ (1891) ಈತ ಭಾರತಕ್ಕೆ ಕೆಳಕಾರ್ಯದಶಿಯಾಗಿ ನೇಮಕಹೊಂದಿದ. 1895ರಲ್ಲಿ ವಿದೇಶಾಂಗ ವ್ಯವಹಾರಗಳ ಕೆಳಕಾರ್ಯದರ್ಶಿಯ ಹುದ್ದೆ ಇವನಿಗೆ ಲಭ್ಯವಾಯಿತು. ಈ ಕಾಲದಲ್ಲಿ ಕರ್ಜ಼ನ್ ಮಧ್ಯ ಏಷ್ಯ, ಪಶ್ಚಿಮ ಏಷ್ಯ, ಭಾರತ, ಚೀನ, ಅಮೆರಿಕ ಮುಂತಾದ ಕಡೆಗಳಲ್ಲಿ ಪ್ರವಾಸಮಾಡಿ ವಿಪುಲವಾದ ಸಾಮಗ್ರಿಯನ್ನೂ ಅನುಭವವನ್ನೂ ಸಂಗ್ರಹಿಸಿಕೊಂಡ. ಇವನ ಲೇಖನಿಯಿಂದ ಅನೇಕ ಪುಸ್ತಕಗಳು ಹೊರ ಬಂದುವು. 1895ರಲ್ಲಿ ಕರ್ಜ಼ನ್ ಅಮೆರಿಕದ ಕೋಟ್ಯಧಿಶ್ವರನೊಬ್ಬನ ಮಗಳನ್ನು (ಮೇರಿ ಲೀಟರ್) ಮದುವೆಯಾದ.

ಭಾರತದ ವೈಸ್‍ರಾಯ್‍ಯಾಗಿ[ಬದಲಾಯಿಸಿ]

ಕರ್ಜ಼ನ್ ಭಾರತದ ವೈಸ್ರಾಯಿಯಾದದ್ದು 1898ರಲ್ಲಿ. ಆಗ ಇವನಿಗೆ ಇನ್ನೂ 40 ವರ್ಷ ತುಂಬಿರಲಿಲ್ಲ. ಈ ಹೊಸ ಹುದ್ದೆಯಲ್ಲಿ ಕರ್ಜ಼ನ್ ಅತ್ಯಂತ ಉತ್ಸಾಹದಿಂದಲೇ ಕಾರ್ಯವನ್ನಾರಂಭಿಸಿದ. ತನ್ನ ವೈಸ್ರಾಯ್‍ಗಿರಿಯಲ್ಲಿ ಕರ್ಜ಼ನ್ ಮಾಡಿದ ಸುಧಾರಣೆಗಳೂ ಸಾಧನೆಗಳೂ ಅನೇಕ. ಬ್ರಿಟಿಷ್ ಆಡಳಿತಕ್ಕೆ ಕಿರುಕುಳ ಕೊಡುತ್ತಿದ್ದ ವಾಯವ್ಯ ಗಡಿಪ್ರದೇಶದ ಜನರ ಮೇಲೆ ಹೆಚ್ಚಿನ ಹತೋಟಿ ತರುವ ಉದ್ದೆಶದಿಂದ ಕರ್ಜ಼ನ್ ಅದನ್ನೊಂದು ಪ್ರತ್ಯೇಕ ಪ್ರಾಂತ್ಯವಾಗಿ ವಿಭಜಿಸಿದ. ಆದರೂ ಪರಿಸ್ಥಿತಿ ಕೈಮೀರಿದ್ದರಿಂದ 1901ರಲ್ಲಿ ವಝೀರಿಗಳ ಮೇಲೆ ಸೈನಿಕ ಕಾರ್ಯಾಚರಣೆ ನಡೆಸ ಬೇಕಾಯಿತು. ಇದು ಬ್ರಿಟಿಷ್‍ರ ವಿಜಯವಾಗಿ ಪರ್ಯವಸಾನಗೊಂಡಿತು. ಬ್ರಿಟಿಷ್ ಹಿತಗಳಿಗೆ ರಷ್ಯನರಿಂದ ಧಕ್ಕೆಯೊದಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಕರ್ಜ಼ನ್ 1903ರಲ್ಲಿ ಪರ್ಷಿಯನ್ ಖಾರಿ ಪ್ರದೇಶಕ್ಕೆ ಭೇಟಿಕೊಟ್ಟ. ಟಿಬೆಟಿನಲ್ಲಿ ಅವರ ಪ್ರಭಾವ ಬೆಳೆಯದಂತೆ ಮಾಡಲು ಬ್ರಿಟಿಷ್ ನಿಯೋಗವೊಂದನ್ನು ಅಲ್ಲಿಗೆ ಕಳಿಸಿದ. ಆದರೆ ಟಿಬೆಟಿನೊಂದಿಗೆ ವಿರಸ ಬೆಳೆಯಿತು. ಬ್ರಿಟಿಷ್ ಭಾರತ ಸೇನೆ ಲ್ಹಾಸಾಗೆ ನುಗ್ಗಿತು. 1904ರಲ್ಲಿ ಟಿಬೆಟರು ಶಾಂತಿಗೆ ಒಡಂಬಡಬೇಕಾಯಿತು. ಆಡಳಿತದ ನಾನಾ ಶಾಖೆಗಳನ್ನು ಕರ್ಜ಼ನ್ ತೀಕ್ಷ್ಣವಾದ ತನಿಖೆಗೆ ಒಳಪಡಿಸಿ ಅವನ್ನು ಸುಧಾರಿಸಿದ. ಇಂಪೀರಿಯಲ್ ಕೆಡೆಟ್ ಕೋರನ್ನು ಸ್ಪಾಪಿಸಿದವನೂ ಕಲ್ಕತ್ತದ ವಿಕ್ಟೋರಿಯ ಸ್ಮಾರಕಭವನ ನಿರ್ಮಿಸಿದವನೂ ಕರ್ಜ಼ನನೇ. ಈ ಭವನಕ್ಕಾಗಿ ಭಾರತದ ಶ್ರೀಮಂತರನೇಕರಿಂದ ಈತ ಅಪಾರ ಧನಸಂಗ್ರಹಮಾಡಿದ. 1903ರಲ್ಲಿ ಏಳನೆಯ ಎಡ್ವರ್ಡನ ಪಟ್ಟಾಭಿಷೇಕದ ಸಂದರ್ಭದಲ್ಲಿ ಕರ್ಜ಼ನನೂ ದೆಹಲಿಯಲ್ಲಿ ದರ್ಬಾರ್ ನಡೆಸಿದ. ಭಾರತದ ಹಣಕಾಸಿನ ನಿರ್ವಹಣೆಯಲ್ಲಿ ಕರ್ಜ಼ನ್ ತೋರಿದ ಚಾಕಚಕ್ಯತೆ ಅಸಾಧಾರಣ. ಈತನ ಕಾಲದಲ್ಲಿ ಉಪ್ಪಿನ ತೆರಿಗೆ ಎರಡು ಸಾರಿ ಇಳಿಯಿತು. ಕಡಿಮೆ ವರಮಾನಗಳ ಮೇಲಣ ತೆರಿಗೆ ರದ್ದಾಯಿತು. ಸರ್ಕಾರಿ ರಹಸ್ಯ ಕಾಯಿದೆ ಭಾರತೀಯ ಗಣಿಗಳ ಕಾಯಿದೆ, ಪ್ರಾಚೀನ ಸ್ಮಾರಕಗಳ ಸಂರಕ್ಷಣಾ ಕಾಯಿದೆ, ಸಹಕಾರ ಸಂಘಗಳ ಕಾಯಿದೆ--ಮುಂತಾದ ಹಲವಾರು ಕಾಯಿದೆಗಳು ಜಾರಿಗೆ ಬಂದದ್ದು ಈತನ ಅಧಿಕಾರದ ಕಾಲದಲ್ಲೇ. ಆದರೆ ಕರ್ಜನನ ಧೋರಣೆಯೂ ಇವನು ಕೈಗೊಂಡ ಹಲವು ಕ್ರಮಗಳೂ ಜನರಲ್ಲಿ ತೀವ್ರ ಅಸಮಾಧಾನಕ್ಕೂ ಕ್ರೋಧಕ್ಕೂ ಕಾರಣವಾದುವು. ವಿಶ್ವವಿದ್ಯಾಲಯಗಳ ಮಸೂದೆ ಇಂಥ ಕ್ರಮಗಳಲ್ಲೊಂದು. ಬಂಗಾಲದ ವಿಭಜನೆಯಿಂದಂತೂ ಸಿಂಹದ ಕೇಸರವನ್ನೇ ಹಿಡಿದೆಳೆದಂತಾಯಿತು. ಭಾರತೀಯರ ಗುಣವನ್ನೂ ಭಾರತ ರಾಷ್ಟ್ರೀಯ ಕಾಂಗ್ರೆಸನ್ನೂ ಅವಹೇಳನ ಮಾಡಿ ಈತ ಮಾಡಿದ ಅನೇಕ ಭಾಷಣಗಳಿಂದ ಜನರಲ್ಲಿ ವಿರೋಧ ತೀವ್ರವಾಯಿತು. ಎಲ್ಲ ರಾಜಕೀಯ ಚಳವಳಿಗಳನ್ನೂ ಮರ್ದಿಸಲು ಕೈಕೊಂಡ ಕ್ರಮಗಳಿಂದ ಪರಿಸ್ಥಿತಿ ಸುಧಾರಿಸುವ ಬದಲು ಇನ್ನೂ ಹದಗೆಟ್ಟಿತು. ಭಾರತೀಯರ ರಾಷ್ಟ್ರಪ್ರೇಮವೂ ಕಾಂಗ್ರೆಸಿನ ಬಗ್ಗೆ ಅವರ ಅಭಿಮಾನವೂ ಬೆಳೆಯಲು ಕರ್ಜ಼ನನ ಅತ್ಯುಗ್ರ ಕ್ರಮಗಳೂ ಕಾರಣವಾದುವು. 1903ರಲ್ಲಿ ಕಜರ್óನನ ವೈಸ್ರಾಯ್ ಅಧಿಕಾರಾವಧಿ ಮುಗಿಯಿತು. 1904ರಲ್ಲಿ ಈತ ಮತ್ತೆ ನೇಮಕಗೊಂಡ. ಆದರೆ ವೈಸ್ರಾಯ್ ಮಂಡಲಿಯ ಸೈನಿಕ ಸದಸ್ಯನ ಅಧಿಕಾರವೇನೆಂಬುದರ ಬಗ್ಗೆ ಕಜರ್óನನಿಗೂ ಪ್ರದಾನ ದಂಡನಾಯಕನಾಗಿದ್ದ ಲಾರ್ಡ್ ಕಿಚನರನಿಗೂ ಮನಸ್ತಾಪ ಬೆಳೆದು, ಕರ್ಜ಼ನ ಕೊನೆಗೆ ತನ್ನ ಹುದ್ದೆಗೆ ರಾಜೀನಾಮೆ ನೀಡಿದ. ಲಾರ್ಡ್ ಕಿಚನರ್ ಗೆ ಲಂಡನಿನಲ್ಲಿ ವಿಶೇಷ ಪ್ರಭಾವವಿದ್ದದ್ದರಿಂದ ಇಂಗ್ಲೆಂಡಿನ ಸರ್ಕಾರ ಕರ್ಜ಼ನನ ರಾಜೀನಾಮೆಯನ್ನು ಒಪ್ಪಿಕೊಂಡಿತು (1905). ಮರುವರ್ಷ ಕರ್ಜನನ ಪತ್ನಿ ತೀರಿಕೊಂಡಳು.

ಸ್ವದೇಶದಲ್ಲಿ[ಬದಲಾಯಿಸಿ]

1907ರಲ್ಲಿ ಈತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕುಲಾಧಿಪತಿಯಾಗಿ (ಛಾನ್ಸಲರ್) ಚುನಾವಣೆಗೊಂಡು ಮತ್ತೆ ರಾಜಕೀಯಕ್ಕೆ ಜಾರಿಕೊಳ್ಳಲು ಸಮಯಕಾಯುತ್ತಿದ್ದ. ಅಲ್ಲೂ ಅನೇಕ ಸುಧಾರಣೆಗಳನ್ನು ಜಾರಿಗೆ ತಂದ. ಈತ ಕೆಡಲ್ ಸ್ಟನಿನ್ ಅರ್ಲ್ ಮತ್ತು ಬ್ಯಾರನ್ ರ್ಯಾವೆನ್ಸ್‌ಡೇಲ್ ಆದದ್ದು 1911ರಲ್ಲಿ. 1915ರಲ್ಲಿ ಆಸ್ಕ್ವಿತನ ಯುದ್ಧಕಾಲೀನ ಸಂಮಿಶ್ರ ಸರ್ಕಾರದಲ್ಲಿ ಕರ್ಜ಼ನನಿಗೆ ಲಾರ್ಡ್ ಪ್ರಿವಿಸೀಲ್ನ ಅಧಿಕಾರ ಲಭ್ಯವಾಯಿತು. 1916ರಲ್ಲಿ ಆಸ್ಕ್ವಿತನ ಸರ್ಕಾರದ ಪತನವಾದ ಮೇಲೆ ಅಧಿಕಾರಕ್ಕೆ ಬಂದ ಡೇವಿಡ್ ಲಾಯ್ಡ್‌ ಜಾರ್ಜನ ಸರ್ಕಾರದಲ್ಲಿ ಕರ್ಜ಼ನ್ ಯುದ್ಧದ ಒಳಸಂಪುಟದ ಸದಸ್ಯರಲ್ಲೊಬ್ಬನಾಗಿದ್ದ. 1917ರಲ್ಲಿ ಗ್ರೇಸ್ ಹಿಂಡ್ಸ್‌ ಡಗ್ಗನ್ ಎಂಬ ಅಮೆರಿಕನ್ ವಿಧವೆಯೊಬ್ಬಳನ್ನು ವಿವಾಹವಾದ. 1919 ಆರಂಭದಲ್ಲಿ ಪ್ಯಾರಿಸಿನ ಶಾಂತಿ ಸಮ್ಮೇಳನದಲ್ಲಿ ಭಾಗವಹಿಸುವುದಕ್ಕಾಗಿ ಲಾರ್ಡ್ ಬಾಲ್ಫರ್ ಅಲ್ಲಿಗೆ ಹೋಗಿದ್ದಾಗ ಅವನ ಸ್ಥಾನದಲ್ಲಿ ಈತ ಹಂಗಾಮಿಯಾಗಿ ವಿದೇಶಾಂಗ ಕಚೇರಿಯ ಹೊಣೆ ಹೊತ್ತಿದ್ದ. ಆ ವರ್ಷದ ಅಕ್ಟೋಬರಿನಲ್ಲಿ ಬಾಲ್ಫರ್ ರಾಜೀನಾಮೆ ನೀಡಿದ್ದರಿಂದ ಕರ್ಜ಼ನನನ್ನೇ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕ ಮಾಡಿದಾಗ ಈತನ ಬಾಳಿನ ಆಕಾಂಕ್ಷೆಗಳಲ್ಲೊಂದು ಪುರೈಸಿದಂತಾಯಿತು. ಆದರೆ ಇವನಿಗೂ ಪ್ರಧಾನಮಂತ್ರಿಗೂ ಒಳ್ಳೆಯ ಸಂಬಂಧ ಬೆಳೆಯಲಿಲ್ಲ. ಕರ್ಜ಼ನನನ್ನು ಕೇಳದೆಯೇ ಅವನ ಶಾಖೆಯ ವಿಚಾರಗಳನ್ನು ಪ್ರಧಾನಮಂತ್ರಿ ಇತ್ಯರ್ಥಪಡಿಸುತ್ತಿದ್ದ. ತುರ್ಕಿ ಗ್ರೀಸ್ಗಳ ನಡುವೆ ಘರ್ಷಣೆಯಾದಾಗ ತುರ್ಕರನ್ನು ಯುರೋಪಿನಿಂದಲೂ ಗ್ರೀಕರನ್ನು ಏಷ್ಯದಿಂದಲೂ ದೂರ ಇಡಬೇಕೆಂಬುದು ಕರ್ಜ಼ನನ ನೀತಿಯಾಗಿತ್ತು. ಲಾಯ್ಡ್‌ ಜಾರ್ಜ್ ಇದನ್ನೊಪ್ಪಲಿಲ್ಲ. ಕರ್ಜ಼ನ್ ಪ್ರತಿಭಟಿಸಿದ. ರಾಜೀನಾಮೆ ಕೊಡುವುದಾಗಿ ಬೆದರಿಸಿದ. ಆದರೆ ರಾಜೀನಾಮೆ ಕೊಡುವ ಸ್ಥೈರ್ಯ ಬರಲಿಲ್ಲ. ಪದೇ ಪದೇ ಈತ ಮಾಡುತ್ತಿದ್ದ ಇಂಥ ಬೆದರಿಕೆಗಳು ಅಪಹಾಸ್ಯಕ್ಕೆಡೆಕೊಟ್ಟುವು. ಲಾಯ್ಡ್‌ ಜಾರ್ಜನ ತುರ್ಕಿ ನೀತಿ ವಿಫಲಗೊಂಡು ಅವನ ಸಂಮಿಶ್ರ ಸರ್ಕಾರಕ್ಕೆ ಗಂಡಾಂತರ ಬಂತು. ಬ್ರಿಟನಿನಲ್ಲಿ ಚುನಾವಣೆ ನಡೆಸಬೇಕೆಂದು ತೀರ್ಮಾನವಾಯಿತು. ಸ್ವಲ್ಪ ಕಾಲಾನಂತರ ಲಾಯ್ಡ್‌ ಜಾರ್ಜ್ ಮತ್ತೆ ಕರ್ಜ಼ನನನ್ನು ಕಡೆಗಣಿಸಿ ವಿದೇಶಾಂಗ ವ್ಯವಹಾರಗಳಲ್ಲಿ ನೇರವಾಗಿ ಸಂಧಾನ ನಡೆಸತೊಡಗಿದ. ಇದರಿಂದ ಕರ್ಜ಼ನನ ಅಸಮಾಧಾನ ಪರಮಾವಧಿಗೇರಿತು. ಕೊನೆಗೂ ಈತ ರಾಜೀನಾಮೆ ಕೊಟ್ಟ. ಕರ್ಜ಼ನನ ಅಭಿಮಾನ ಆಮೇಲೆ ಆಂಡ್ರ್ಯೂಬೊನಾರ್ ಲಾನ ಕಡೆಗೆ ತಿರುಗಿತು. 1922ರಲ್ಲಿ ಆತ ಪ್ರಧಾನಿಯಾದಾಗ ಕರ್ಜ಼ನ್ ವಿದೇಶಾಂಗ ಕಾರ್ಯದರ್ಶಿಯಾದ. ಕೊನೆಗೂ ಕರ್ಜ಼ನನಿಗೆ ತನ್ನ ಸಂಪೂರ್ಣ ಅಧಿಕಾರ ಚಲಾಯಿಸುವ ಸ್ವಾತಂತ್ರ್ಯ ಲಭ್ಯವಾಯಿತು. ಆದರೆ 1923ರಲ್ಲಿ ಅನಾರೋಗ್ಯ ನಿಮಿತ್ತ ಬೊನಾರ್ ಲಾ ರಾಜೀನಾಮೆ ನೀಡಿದ. ಆಗ ತಾನೇ ಪ್ರಧಾನಿಯಾಗುವೆನೆಂದು ಕರ್ಜ಼ನ್ ನೆನೆದಿದ್ದ. ಆದರೆ ಪಕ್ಷದ ಸದಸ್ಯರು ಕರ್ಜ಼ನನ ನಿರೀಕ್ಷೆಯನ್ನು ಸುಳ್ಳುಮಾಡಿ ಸ್ಯಾನ್ಲೆ ಬಾಲ್ಡ್ವಿನನನ್ನು ತಮ್ಮ ನಾಯಕನನ್ನಾಗಿ ಆರಿಸಿದರು. ಪೀರ್ ಆದವನು ಪ್ರಧಾನಿಯಾಗಬಾರದೆಂಬುದು ಅವರು ಕೊಟ್ಟ ಕಾರಣ. ಆದರೆ ವಾಸ್ತವ ಕಾರಣ ಬೇರೆ. ಕರ್ಜನನ ವೈಭವ ಅಟ್ಟಹಾಸಗಳೂ ಅಹಂಭಾವವೂ ಅನೇಕರಿಗೆ ಹಿಡಿಸುತ್ತಿರಲಿಲ್ಲ. ಪ್ರಜಾಪ್ರಭುತ್ವಯುಗದಲ್ಲಿ ಇವು ದೊಡ್ಡ ಅವಗುಣಗಳೆಂಬುದು ಅವರ ನಂಬಿಕೆಯಾಗಿತ್ತು. ತನಗೆ ಪ್ರಧಾನಿ ಹುದ್ದೆ ದೊರಕದಿದರೂ ಬಾಲ್ಡ್ವಿನನ ಸರ್ಕಾರದಲ್ಲಿ ಕರ್ಜನ್ ಮುಂದುವರಿಯಲೊಪ್ಪಿದ. 1923ರ ಚುನಾವಣೆಯಲ್ಲಿ ಬಾಲ್ಡ್ವಿನ್ ಸೋತ. 1924ರಲ್ಲಿ ಬಾಲ್ಡ್ವಿನ್ ಮತ್ತೆ ಸರ್ಕಾರ ರಚಿಸಿದಾಗ ಅದರಲ್ಲಿ ಕರ್ಜ಼ನನಿಗೆ ಸ್ಥಾನ ದೊರಕಲಿಲ್ಲ. ಈತ ಲಾರ್ಡ್ ಪ್ರಿವಿಸೀಲನ ಹುದ್ದೆಯಲ್ಲೇ ಸಮಾಧಾನಪಟ್ಟುಕೊಳ್ಳಬೇಕಾಯಿತು. 1925ರ ಮಾರ್ಚ್ 20 ರಂದು ಕರ್ಜ಼ನ್ ತೀರಿಕೊಡ. 1921ರಲ್ಲಿ ಈತ ಮಾರ್ಕ್ವಿಸ್ ಎಂದು ಸನ್ಮಾನಿತನಾಗಿದ್ದ. *