ಕೀಲು ಕುದುರೆ

ವಿಕಿಪೀಡಿಯ ಇಂದ
Jump to navigation Jump to search

ಕೀಲು ಕುದುರೆಯು ಕರ್ನಾಟಕದ ಬಿಜಾಪುರ, ಬಳ್ಳಾರಿ, ಮಂಡ್ಯ, ಮೈಸೂರು, ಬೆಂಗಳೂರು, ಕೋಲಾರ, ಕೊಡಗು ಮತ್ತು ಇನ್ನು ಹಲವಾರು ಜಿಲ್ಲೆಗಳಲ್ಲಿ ಜನಪ್ರಿಯವಾದ ಕುಣಿತವಾಗಿದೆ. ಕೊಡಗಿನಲ್ಲಿ ಇದನ್ನು 'ಪೊಯ್ ಕುದುರೆ' ಎಂದು ಕರೆಯುವರು. 'ಕುದುರೆ ಕೋಲ' ಹಾಗೂ 'ಮರಗಾಲು ಕುಣಿತ'ಗಳು ಇದಕ್ಕೆ ಸಂವಾದಿಯಾದ ಪದವಾಗಿದೆ. ಜನಪದ ಕತೆಗಳ ಪ್ರಕಾರ ರಾಜಕುಮಾರನು ತನ್ನ ಪ್ರಿಯತಮೆಯನ್ನು ಗುಟ್ಟಾಗಿ ಸಂದರ್ಶಿಸುವಾಗ, ಇಲ್ಲವೆ ಆಕೆಯನ್ನು ಅಪಹರಿಸಿಕೊಂಡು ಹೋಗುವಾಗ ಕೀಲು ಕುದುರೆಯನ್ನು ಬಳಸುವ ಕಲ್ಪನೆಯು ಇದೆ. ಏಳು ಉಪ್ಪರಿಗೆ ಅರಮನೆ ಮೇಲೆ ‌‌‌‌‌‌‌‍‍‍‍‍‍‌‌‌‌‌‌‌‍‍‍‍‍‍‍‍‍‍‍‍ಜೋಪಾನವಾಗಿರುವಂತಹ ರಾಜಕುಮಾರಿ ಸಾಮೀಪ್ಯವನ್ನು ಆಕೆಯ ಪ್ರಿಯತಮ ಅಂತರಿಕ್ಶ ಮಾರ್ಗವಾಗಿ ಬಂದು ಸೇರಲು ಕೀಲುಕುದುರೆಯನ್ನು ಉಪಯೋಗಿಸುತ್ತಾನಂತೆ!

ಕೀಲು ಕುದುರೆಯ ತಯಾರಿಸುವಿಕೆ[ಬದಲಾಯಿಸಿ]

ಬಿದಿರಿನ ದಬ್ಬೆಗಳಿಂದ ರಚಿಸಿರುತ್ತಾರೆ. ಕುದುರೆಯ ಆಕಾರಕ್ಕೆ ತಕ್ಕಂತೆ ಹೊಟ್ಟೆ, ಎದೆ, ಮತ್ತು ಹಿಂಭಾಗವನ್ನು ಎಳೆಗಳಿಂದ ಹೆಣೆದು ರೂಪಿಸಿರುತ್ತಾರೆ. ತಲೆ ಮತ್ತು ಕತ್ತನ್ನು ಕಲಾವಿದರು ಇಲ್ಲವೇ ಆ ಊರಿನ ಗ್ರಾಮಸ್ತರು ಮಾಡಿಕೊಡುತ್ತಾರೆ. ಕುದುರೆಯ ತಲೆಯನ್ನು ಕಾಗದದ ಹಿಟ್ಟಿನಿಂದ ರಚಿಸಿರುತ್ತಾರೆ. ಇದು ಟೊಳ್ಳಾಗಿರುತ್ತದೆ. ಕುಣಿತಕ್ಕೆ ಸೂಕ್ತವಾದ ರೀತಿಯಲ್ಲಿ ಮರಗಾಲನ್ನು ಕಟ್ಟಿಕೊಂಡಿರುತ್ತಾರೆ. ಈ ಮರದ ಕಾಲನ್ನು ಎರಡು ಅಡಿ ಉದ್ದದ ಹಗುರು ಮರದಿಂದ ಮಾಡಿ ಅದರ ಮೇಲೆ ಕಲಾವಿದರ ಕಾಲುಗಳನ್ನು ಕೂರಿಸಲು ಅನುಕೂಲವಾಗುವಂತೆ 'ಕಂಡು' ಮಾಡಿರುತ್ತಾರೆ.'ಕೋಡಿನ್' ಭಾಗವನ್ನು ಕಾಲಿಗೆ ಮದ್ಯೆ ಒತ್ತದಂತೆ ಬಟ್ಟೆ ಇಟ್ಟು ಬಿಗಿಯಾಗಿ ಕಟ್ಟಿರುತ್ತಾರೆ. ಕುದುರೆಗೆ ಸೂಕ್ತವಾದ ಬಣ್ಣವನ್ನು ಹಾಕಲಾಗಿರುತ್ತದೆ.

ಕಲಾವಿದರ ವಸ್ತ್ರದ ಮಾದರಿ[ಬದಲಾಯಿಸಿ]

ಕಲಾವಿದರು ಕುದುರೆಯ ಬೆನ್ನಿನಲ್ಲಿ ಸೇರಿಕೊಂಡು ತನ್ನೆರಡು ಹೆಗಲುಗಳಿಗೆ ಕುದುರೆಯ ದಬ್ಬೆಯ ದೇಹವನ್ನು ಬಿಗಿದುಕೊಳ್ಳುತ್ತಾನೆ. ಲಗಾಮು ಕೈಯಲ್ಲಿ ಹಿಡಿದು ಅದರ ತಲೆ ಬಾಲಗಳನ್ನು ಆಡಿಸುತ್ತ ಹಿಂದು ಮುಂದು ಮಾಡಿ ಕುಣಿಯುವಾಗ ಕುದುರೆಯೇ ಸಹಜ ಭಂಗಿಯಲ್ಲಿ ಕುಣಿದಂತೆ ಭಾಸವಾಗುತ್ತದೆ. ರಾಜ ರಾಣಿಯರಂತೆ ಕಿರೀಟ, ಭುಜಕೀರ್ತಿ, ಎದೆಹಾರ, ನಡುಬಿಲ್ಲೆ, ವೀರಗಾಸೆಗಳನ್ನು ತೊಟ್ಟಿರುತ್ತಾರೆ. ಮುಖಕ್ಕೆ ಬಣ್ಣ ಹಾಕಿಕೊಂಡು, ಕಾಲಿಗೆ ಗೆಜ್ಜೆಯನ್ನು ಕಟ್ಟಿ ಕುಣಿಯುತ್ತಾರೆ. ಸಾಮ್ಯಾನವಾಗಿ ಈ ಕುಣಿತದಲ್ಲಿ ಒಬ್ಬರು ಗಂಡು, ಒಬ್ಬರು ಹೆಣ್ಣು ವೇಶ ಹಾಕಿಕೊಂಡು ಜೊತೆಯಾಗಿ ಕುಣಿಯುವ ವಾಡಿಕೆಯು ಇರುವುದು. ಕೆಲವು ಕಡೆ ನವಿಲು ಆಕೃತಿಗಳ ಕಲಾವಿದರು ಸೇರಿಕೊಂಡು ಕುಣಿಯುವಂತಹ ಬಗೆಯು ಇರುವುದು.

ಕೀಲು ಕುದುರೆಯ ವಾದ್ಯಗಳು[ಬದಲಾಯಿಸಿ]

ನಾಗಸ್ವರ, ಡೋಲು, ತಮಟೆ ಈ ವಾದ್ಯಗಳನ್ನು ಬಳಸಲಾಗುತ್ತದೆ. ಕೆಲವೊಮ್ಮೆ ಕರಡಿ ಮಜಲನ್ನು ಬಳಸುವುದುಂಟು. ಇತ್ತೀಚೆಗೆ ಬ್ಯಾಂಡ್ ಸೆಟ್ ಉಪಯೋಗಿಸುವುದು ಕಂಡುಬರುವುದು. ಹಬ್ಬ, ಮದುವೆ, ಉತ್ಸವದ ದಿನಗಳಲ್ಲಿ, ಹಳ್ಳಿಯ ಬಯಲಲ್ಲಿ ಇಲ್ಲವೇ ಅಗಲವಾದ ಹಾಗೂ ನೇರವಾದ ಬೀದಿಯಲ್ಲಿ ಪ್ರದರ್ಶನ ಮಾಡುವರು.

ಉಲ್ಲೇಖಗಳು[ಬದಲಾಯಿಸಿ]

  • ಕರ್ನಾಟಕ ಜನಪದ ಕಲೆಗಳು: ಸಂಪಾದಕ-ಗೊ.ರು.ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಶತ್ತು,೧೯೭೭
  • ಕರ್ನಾಟಕ ಜನಪದ ಕಲೆಗಳ ಕೋಶ: ಸಂಪಾದಕ-ಹಿ.ಚಿ.ಬೋರಲಿಂಗಯ್ಯ, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ ಹಂಪಿ, ೧೯೯೬