ಕಿಳ್ಳೆಕ್ಯಾತ

ವಿಕಿಪೀಡಿಯ ಇಂದ
Jump to navigation Jump to search

ಚರ್ಮದ ಗೊಂಬೆಗಳ ಆಟ ಆಡಿಸಿ, ಗ್ರಾಮೀಣ ಜನತೆಗೆ ಮನೋರಂಜನೆಯ ಜೊತೆಗೆ ಭಾರತೀಯ ಕಥನ ಪರಂಪರೆಯನ್ನ ಕಲಿಸುತ್ತಾ ಬಂದ ವಾರಸುದಾರರು ಕಿಳ್ಳೆಕ್ಯಾತರು. ಕಿಳ್ಳೆಕ್ಯಾತ, ಸಿಳ್ಳೆಕ್ಯಾತ, ಛತ್ರಿ ಕಿಳ್ಳೆಕ್ಯಾತರು, ಗೊಂಬೆಯಾಡಿಸುವವರು ಎಂದೆಲ್ಲಾ ಕರೆಸಿಕೊಳ್ಳೋ ಇವರ ಮಾತೃಭಾಷೆ ಮರಾಠಿ. ಆದರೆ ಇವರು ಭಾಷಾ ಸಾಮರಸ್ಯದ ಪ್ರತೀಕದಂತೆ ಕನ್ನಡಿಗರೊಂದಿಗೆ ಕನ್ನಡಿಗರಂತೆಯೇ ಕನ್ನಡ ನಾಡಿನ ಹಳ್ಳಿಗಳಲ್ಲೂ ಇದ್ದಾರೆ.

ಅರ್ಥ[ಬದಲಾಯಿಸಿ]

ಕಿಳ್ಳೆ ಅಥವಾ ಶಿಳ್ಳೆ ಎಂಬ ಪದಗಳಿಗೆ ವಕ್ರ ಅಥವಾ ಗೂಬೆಮೂತಿಯ ಎಂಬ ಅರ್ಥಗಳಿವೆ. ಇದ್ದಿಲು ಬಣ್ಣದ, ಜಡ್ಡು ಮೂಗಿನ ಅತಿ ಉಬ್ಬಿದ ತುಟಿಯ ಗುಡಾಣ ಹೊಟ್ಟೆಯ ಸೊಟ್ಟಪಟ್ಟಾದ ಕೈ ಕಾಲುಗಳುಳ್ಳ ಗಂಡು ಗೊಂಬೆಯೇ ಸಿಳ್ಳೆಕ್ಯಾತ. ಈ ಗೊಂಬೆಯನ್ನ ಆಡಿಸುವವರನ್ನೇ ಹೀಗೆ ಕರೆದಿರಬೇಕು.

ಗೊಂಬೆಗಳ ತಯಾರಿ[ಬದಲಾಯಿಸಿ]

ದಕ್ಷಿಣ ಭಾರತದಲ್ಲೇ ಪ್ರಸಿದ್ದವಾದ ಇವರ ಕಲೆ ವಿಶ್ವಕ್ಕೆ ನೀಡಿದ ಕೊಡುಗೆಯೂ ಹೌದು. ಮಳೆಗಾಲವನ್ನು ಬಿಟ್ಟು ಉಳಿದ ಎಲ್ಲಾ ಕಾಲದಲ್ಲೂ ಆಟ ಪ್ರದರ್ಶಿಸುವ ಇವರ ಮೂಲ ಕಸುಬೇ ಗೊಂಬೆಯಾಟ. ಇವರು, ತಮ್ಮ ಗೊಂಬೆಗಳನ್ನ ಹದಮಾಡಿದ ಜಿಂಕೆ ಚರ್ಮ ಮತ್ತು ಮೇಕೆ ಚರ್ಮಗಳಿಂದ ತಯಾರಿಸುತ್ತಾರೆ. ಅವುಗಳನ್ನು ಬಣ್ಣ ಬಣ್ಣಗಳಿಂದ ಚಿತ್ರಿಸಿ ದೇಹದ ಭಾಗಗಳನ್ನ ತಂತಿ ಮತ್ತು ಬಿದಿರುಗಳಿಂದ ಜೋಡಿಸಿ ಅವುಗಳ ಅಂಗಾಂಗಗಳು ಚಲಿಸುವಂತೆ ಮಾಡಿರುತ್ತಾರೆ.

ಪ್ರದರ್ಶನಗಳು[ಬದಲಾಯಿಸಿ]

  • ಬಹುತೇಕ ರಾಮಾಯಣ ಮತ್ತು ಮಹಾಭಾರತದ ವಸ್ತುಗಳನ್ನೇ ಇವರು ಪ್ರದರ್ಶನಕ್ಕೆ ತೆಗೆದುಕೊಳ್ಳುತ್ತಾರೆ. ಇತ್ತೀಚೆಗೆ ರಾಜರ ಕಥೆ, ಸ್ವಾತಂತ್ರ್ಯ ಹೋರಾಟಗಾರರ ಕಥೆ, ಬಸವಣ್ಣ, ಗಾಂಧಿ ಮೊದಲಾದವರ ಕಥೆಗಳೊಂದಿಗೆ ಏಡ್ಸ್ ಜಾಗೃತಿ, ಪರಿಸರ ಜಾಗೃತಿಯಂತಹ ಸಾಮಾಜಿಕ ಸಮಸ್ಯೆಗಳನ್ನೂ ಇವರು ಗೊಂಬೆಯಾಟ ಮಾಡಿ ತೋರಿಸುತ್ತಾರೆ.
  • ಮೊದಲೆಲ್ಲಾ ರಾತ್ರಿಯಿಡೀ ರಾಮಾಯಣ, ಮಹಾಭಾರತಗಳ ಒಂದು ಪ್ರಸಂಗ ನಾಟಕವಾದರೆ ಅಥವಾ ಐದಾರು ದಿನಗಟ್ಟಲೆ ಪ್ರದರ್ಶಿಸುತ್ತಿದ್ದ ಇವರ ಗೊಂಬೆ ಆಟವು ಈಗೀಗ ನಾಲ್ಕು ಅಥವಾ ಐದು ತಾಸುಗೆ ಸೀಮಿತವಾಗಿದೆ. ಈ ಆಟ ಬಿಳಿ ಪರದೆ, ಲೈಟು, ತಾಳ, ಮದ್ದಳೆಗಳನ್ನು ಒಳಗೊಂಡಿರುತ್ತದೆ. ಗಂಡಸರು ಗಂಡುಗೊಂಬೆಗೆ ಧ್ವನಿ ನೀಡಿದರೆ, ಸ್ತ್ರೀ ಪಾತ್ರಗಳಿಗೆ ಮಹಿಳೆಯರು ಧ್ವನಿ ನೀಡುತ್ತಾರೆ.

ಸಂಶೋಧನೆ[ಬದಲಾಯಿಸಿ]

ಕಲಿಯುಗದ ಆರಂಭದಲ್ಲಿ ಗೊಂಬೆ ಕುಣಿಸುವ ವೃತ್ತಿ ದೇವರಿಂದಲೇ ಈ ಜಾತಿಗೆ ನೇಮಕವಾಯಿತು ಎಂಬ ನಂಬಿಕೆಯಿದೆ. ಆದ್ದರಿಂದ ಕಲಿಕ್ಯಾತ ಎಂಬ ಹೆಸರೇ ಕಾಲಕ್ರಮೇಣ ಕಿಳ್ಳೆಕ್ಯಾತ ಆಗಿರಬೇಕು ಎಂದು ಡಾ. ಅರ್ಜುನ್ ಗೊಳಸಂಗಿಯವರು ತಮ್ಮ ಸಂಶೋಧನಾ ಗ್ರಂಥದಲ್ಲಿ ತಿಳಿಸಿದ್ದಾರೆ.

ಸಹಾಯಕ ಲೇಖನಗಳು[ಬದಲಾಯಿಸಿ]

ತೊಗಲು ಗೊಂಬೆಯಾಟ

ಮಾಹಿತಿ ಕೃಪೆ[ಬದಲಾಯಿಸಿ]

ಪ್ರಜಾವಾಣಿಯಲ್ಲಿ ಶಿವಕುಮಾರ್ ಕಂಪ್ಲಿ ಅವರ ಲೇಖನ