ವಿಷಯಕ್ಕೆ ಹೋಗು

ಡಾರ್ಜಿಲಿಂಗ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾರ್ಜಿಲಿಂಗ್‌
Darjeeling
town
Government
 • ChairmanNo leader as such
Population
 (2001)
 • Total೧,೦೭,೫೩೦

ಡಾರ್ಜಿಲಿಂಗ್‌ (ನೇಪಾಳಿ:दार्जीलिंग ಭಾರತದ ರಾಜ್ಯಗಳಲ್ಲೊಂದಾದ ಪಶ್ಚಿಮ ಬಂಗಾಳದಲ್ಲಿನ ಒಂದು ಪಟ್ಟಣವಾಗಿದೆ. ಇದು ಒಂದು ಜನಪ್ರಿಯ ತಾಣವಾಗಿ ಹೆಸರಾಗಿದೆ.

ಇದು ಡಾರ್ಜಿಲಿಂಗ್‌ ಜಿಲ್ಲೆಯ ಕೇಂದ್ರಸ್ಥಾನವಾಗಿದ್ದು, ಹಿಮಾಲಯದ ಕೆಳಗಿನ ಪರ್ವತಶ್ರೇಣಿಯಲ್ಲಿರುವ ಶಿವಾಲಿಕ್‌ ಬೆಟ್ಟಗಳಲ್ಲಿ ಒಂದು ಸರಾಸರಿ ಎತ್ತರದಲ್ಲಿದೆ6,982 ft (2,128 m). ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಕಾಲದಲ್ಲಿ, ಡಾರ್ಜಿಲಿಂಗ್‌ನ ಸಮಶೀತೋಷ್ಣ ಹವಾಮಾನವು ಇದನ್ನೊಂದು ಗಿರಿಧಾಮವನ್ನಾಗಿ (ಬೆಟ್ಟದ ಮೇಲಿರುವ ಪಟ್ಟಣ) ಅಭಿವೃದ್ಧಿ ಮಾಡುವಂತೆ ಮಾಡಿತು. ಬೇಸಗೆ ಕಾಲದಲ್ಲಿ ಬಯಲು ಪ್ರದೇಶದ ಸೆಕೆಯಿಂದ ಪಾರಾಗಲು ಹವಣಿಸುತ್ತಿದ್ದ ಬ್ರಿಟಿಷ್‌ ನಿವಾಸಿಗಳಿಗೆಂದೇ ಇದನ್ನು ಅಭಿವೃದ್ಧಿಪಡಿಲಾಯಿತು. ಈ ಕಾರಣಕ್ಕೆ ಇದು ಬೇಸಗೆ ರಾಜಧಾನಿ ಎಂದು ಜನಪ್ರಿಯವಾಯಿತು.

ಇಲ್ಲಿರುವ ಚಹಾ ಉದ್ಯಮ ಮತ್ತು UNESCOವಿಶ್ವ ಪರಂಪರೆ ತಾಣವಾಗಿರುವ ಡಾರ್ಜಿಲಿಂಗ್‌ ಹಿಮಾಲಯನ್‌ ರೈಲ್ವೆಗಳಿಂದಾಗಿ ಡಾರ್ಜಿಲಿಂಗ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯವಾಗಿದೆ. ಇಲ್ಲಿರುವ ಚಹಾ ತೋಟಗಳು 19ನೇ ಶತಮಾನದ ಮಧ್ಯಭಾಗದಲ್ಲಿ ಆರಂಭಗೊಂಡಿದ್ದು, ಈ ಪ್ರದೇಶವನ್ನು ಬ್ರಿಟಿಷರು ಅಭಿವೃದ್ಧಿಪಡಿಸಿದ್ದರು. ಅದರ ಒಂದು ಭಾಗವಾಗಿ ಇಲ್ಲಿ ಚಹಾ ತೋಟಗಳು ಅಭಿವೃದ್ಧಿಗೊಂಡಿವೆ. ಈ ಪ್ರದೇಶದ ಚಹಾ ಬೆಳೆಗಾರರು ಕಪ್ಪು ಚಹಾದ ವಿಶಿಷ್ಟ ಮಿಶ್ರತಳಿಗಳು ಹಾಗೂ ಹುದುಗಿಸುವ ಕೌಶಲವನ್ನು ಅಭಿವೃದ್ಧಿಪಡಿಸಿದ್ದು, ಅವುಗಳ ಪೈಕಿ ಅನೇಕ ಹದವಾದ ಮಿಶ್ರಣಗಳು ವಿಶ್ವದಲ್ಲೇ ಅತ್ಯುತ್ತಮ ಎಂದು ಪರಿಗಣಿಸಲ್ಪಟ್ಟಿವೆ.[] ಡಾರ್ಜಿಲಿಂಗ್‌ ಪಟ್ಟಣ ಹಾಗೂ ಬಯಲು ಪ್ರದೇಶವನ್ನು ಸಂಪರ್ಕಿಸುವ ಡಾರ್ಜಿಲಿಂಗ್ ಹಿಮಾಲಯನ್‌ ರೈಲ್ವೆಯನ್ನು 1999ರಲ್ಲಿ ವಿಶ್ವ ಪರಂಪರೆ ತಾಣವೆಂದು ಘೋಷಿಸಲಾಗಿದ್ದು, ಇದು ಭಾರತದಲ್ಲಿ ಇನ್ನೂ ಸೇವೆ ಸಲ್ಲಿಸುತ್ತಿರುವ ಕೆಲವೇ ಕೆಲವು ಹಬೆ ಎಂಜಿನ್‌ಗಳಲ್ಲಿ ಒಂದಾಗಿದೆ.

ಡಾರ್ಜಿಲಿಂಗ್‌ ಪಟ್ಟಣ ಬ್ರಿಟಿಷ್‌ ಶೈಲಿಯ ಹಲವು ಸಾರ್ವಜನಿಕ‌ ಶಾಲೆಗಳನ್ನು ಹೊಂದಿದೆ. ಇವು ಭಾರತದ ವಿವಿಧ ಭಾಗಗಳಿಂದ ಮತ್ತು ನೆರೆಹೊರೆಯ ದೇಶಗಳಿಂದಲೂ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. 1980ರ ದಶಕದಲ್ಲಿ ಕಂಡುಬಂದ ಒಂದು ಪ್ರತ್ಯೇಕ ಗೂರ್ಖಾಲ್ಯಾಂಡ್ ರಾಜ್ಯದ ಬೇಡಿಕೆಯ ಹೋರಾಟಕ್ಕೆ ನೆರೆಹೊರೆಯ ಕಾಲಿಂಪಾಂಗ್‌ಕೂಡಾ ಸೇರಿದಂತೆ ಡಾರ್ಜಿಲಿಂಗ್ ಪಟ್ಟಣವು ಒಂದು ಪ್ರಧಾನ ಕೇಂದ್ರವಾಗಿತ್ತು. ಒಂದು ಪ್ರತ್ಯೇಕ ರಾಜ್ಯದ ಉದ್ದೇಶ ಹೊಂದಿರುವ ಈ ಪ್ರಜಾಸತ್ತಾತ್ಮಕ ಆಂದೋಲನವು ಮತ್ತೆ ಪ್ರಾರಂಭವಾಗಿದ್ದು, ಈ ಬಾರಿ ಈ ಆಂದೋಲನದಲ್ಲಿ ಯಾವುದೇ ಹಿಂಸೆಯು ಕಂಡುಬಂದಿಲ್ಲ. ಬೆಳೆಯುತ್ತಲೇ ಇರುವ ಪ್ರವಾಸಿಗರ ದಟ್ಟಣೆ ಮತ್ತು ಕಳಪೆ ನಗರೀಕರಣ ಯೋಜನೆಗಳಿಂದಾಗಿ ಉದ್ಭವಿಸಿದ ಪರಿಸರದ ಸಂಪನ್ಮೂಲಗಳ ಬೇಡಿಕೆಯಲ್ಲಿನ ಹೆಚ್ಚಳದಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಪಟ್ಟಣದ ನಾಜೂಕಾದ ಪರಿಸರವು ಅಪಾಯದಲ್ಲಿ ಸಿಲುಕಿದೆ.

ಇತಿಹಾಸ

[ಬದಲಾಯಿಸಿ]

ಡಾರ್ಜಿಲಿಂಗ್‌ನ ಇತಿಹಾಸ ಬಂಗಾಳ‌, ಭೂತಾನ್‌, ಸಿಕ್ಕಿಂ ಮತ್ತು ನೇಪಾಳಗಳ ಇತಿಹಾಸದೊಂದಿಗೆ ಹೆಣೆದುಕೊಂಡಿದೆ. ಲೆಪ್ಚಾ ಬುಡಕಟ್ಟು ಜನರು ವಾಸಿಸುವ ಕೆಲವು ಗ್ರಾಮಗಳಿದ್ದ ವಸಾಹತುವನ್ನೂ ಒಳಗೊಂಡಂತೆ ಡಾರ್ಜಿಲಿಂಗ್‌ ಸುತ್ತಮುತ್ತಲ ಪ್ರದೇಶವನ್ನು 19ನೇ ಶತಮಾನದ ಆರಂಭದವರೆಗೆ ಬಂಗಾಳ‌, ನೇಪಾಳ ಮತ್ತು ಸಿಕ್ಕಿಂ ರಾಜಮನೆತನಗಳು[] ಆಗಿಂದಾಗ್ಗೆ ಆಳಿದವು.[]

1828ರಲ್ಲಿ ಈಸ್ಟ್‌ ಇಂಡಿಯಾ ಕಂಪನಿಯ ಅಧಿಕಾರಿಗಳ ನಿಯೋಗ, ಸಿಕ್ಕಿಂಗೆ ಹೋಗುವ ಮಾರ್ಗ ಮಧ್ಯದಲ್ಲಿ ಡಾರ್ಜಿಲಿಂಗ್‌ನಲ್ಲಿ ತಂಗಿತು. ಇಲ್ಲಿನ ಉತ್ತಮ ಹವಾಗುಣವನ್ನು ಕಂಡ ನಿಯೋಗ ಬ್ರಿಟಿಷ್‌ ಸೈನಿಕರಿಗೆ ಆರೋಗ್ಯಧಾಮ ನಿರ್ಮಿಸಲು ಇದು ಪ್ರಶಸ್ತ ಸ್ಥಳ ಎಂದು ನಿರ್ಧರಿಸಿತು.[][] ಈ ಪ್ರದೇಶವನ್ನು ಸಿಕ್ಕಿಂನ ಧರ್ಮರಾಜರಿಂದ (ಚೋಗ್ಯಾಲ್‌) ಗುತ್ತಿಗೆ ಪಡೆಯಲು ಈಸ್ಟ್‌ ಇಂಡಿಯಾ ಕಂಪನಿಯು 1835ರಲ್ಲಿ ಮಾತುಕತೆಯನ್ನು ನಡೆಸಿತು.[] ಈಸ್ಟ್‌ ಇಂಡಿಯಾ ಕಂಪನಿಯಲ್ಲಿ ಓರ್ವ ಶಸ್ತ್ರವೈದ್ಯರಾಗಿದ್ದ ಅರ್ಥರ್ ಕ್ಯಾಂಪ್‌ಬೆಲ್‌ ಹಾಗೂ ಲೆಫ್ಟಿನೆಂಟ್‌ ನೇಪಿಯರ್ (ನಂತರದಲ್ಲಿ ಇವರು ಮಗ್ದಾಳದ ಲಾರ್ಡ್‌ ನೇಪಿಯರ್ ಆದರು)ರವರುಗಳಿಗೆ ಅಲ್ಲಿ ಒಂದು ಗಿರಿಧಾಮವನ್ನು ನಿರ್ಮಿಸುವ ಜವಾಬ್ದಾರಿಯನ್ನು ವಹಿಸಲಾಯಿತು. 1841ರಲ್ಲಿ ಬ್ರಿಟಿಷರು ಡಾರ್ಜಿಲಿಂಗ್‌ನಲ್ಲಿ ಪ್ರಾಯೋಗಿಕ ಚಹಾ ತೋಟಗಳನ್ನು ಹುಟ್ಟುಹಾಕಿದರು. ಈ ಪ್ರಾಯೋಗಿಕ ಚಹಾ ತೋಟಗಳಲ್ಲಿ ಯಶಸ್ಸು ಕಂಡಿದ್ದರಿಂದ, 19ನೇ ಶತಮಾನದ ಉತ್ತರಾರ್ಧದ ವೇಳೆಗೆ ನಗರದ ಸುತ್ತಮುತ್ತ ಚಹಾ ತೋಟಗಳು ಅಭಿವೃದ್ಧಿಯಾದವು.[] 1849ರಲ್ಲಿ ಸಿಕ್ಕಿಮ್‌ ಮತ್ತು ಈಸ್ಟ್‌ ಇಂಡಿಯಾ ಕಂಪನಿಯ ನಡುವೆ ನಡೆದ ಘರ್ಷಣೆಯ ಘಟನೆಯೊಂದರ ಕೆಲವು ವರ್ಷಗಳ ನಂತರ ಡಾರ್ಜಿಲಿಂಗ್‌ನ್ನು ಬ್ರಿಟಿಷ್ ಭಾರತೀಯ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಲಾಯಿತು.[] ಈ ಅವಧಿಯಲ್ಲಿ ವಲಸಿಗರನ್ನು, ಪ್ರಮುಖವಾಗಿ ನೇಪಾಳದಿಂದ ಬಂದ ವಲಸಿಗರನ್ನು ನಿರ್ಮಾಣ ಕಾಮಗಾರಿಗಳಲ್ಲಿ, ಚಹಾ ತೋಟಗಳಲ್ಲಿ ಮತ್ತು ಇತರೆ ಕೃಷಿ ಷಂಬಂಧಿ ಯೋಜನೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳಲಾಯಿತು.[] ಬ್ರಿಟಿಷ್‌ ನಿವಾಸಿಗಳಿಗಾಗಿ ಶಾಲೆಗಳು ಮತ್ತು ಕ್ಷೇಮಾಭಿವೃದ್ಧಿ ಕೇಂದ್ರಗಳನ್ನು ನಿರ್ಮಿಸುವ ಕಾರ್ಯವನ್ನು ಸ್ಕಾಟಿಷ್ ಧರ್ಮಪ್ರಚಾರಕ ಸಂಸ್ಥೆಗಳು ಕೈಗೆತ್ತಿಕೊಂಡಿದ್ದರಿಂದಾಗಿ ಡಾರ್ಜಿಲಿಂಗ್ ಒಂದು ಪ್ರಮುಖ ಶಿಕ್ಷಣ ಕೇಂದ್ರವಾಗಿ ಖ್ಯಾತಿ ಪಡೆಯಲು ಅಡಿಗಲ್ಲು ಹಾಕಿದಂತಾಯಿತು.

1881ರಲ್ಲಿ ಡಾರ್ಜಿಲಿಂಗ್‌ ಹಿಮಾಲಯನ್‌ ರೈಲ್ವೆಯನ್ನು ಆರಂಭಿಸಿದ್ದರಿಂದ, ಈ ಪ್ರದೇಶದ ಅಭಿವೃದ್ಧಿ ತೀವ್ರಗೊಂಡಿತು.[] 1898ರಲ್ಲಿ ಡಾರ್ಜಿಲಿಂಗ್‌ ಪ್ರಬಲವಾದ ಭೂಕಂಪದ (ಇದು "ಡಾರ್ಜಿಲಿಂಗ್ ದುರ್ಘಟನೆ" ಎಂದೇ ಹೆಸರಾಗಿದೆ.) ಹೊಡೆತಕ್ಕೆ ಸಿಲುಕಿತು. ಇದರ ಪರಿಣಾಮ ಡಾರ್ಜಿಲಿಂಗ್‌ ಪಟ್ಟಣಕ್ಕೆ ಮತ್ತು ಅಲ್ಲಿನ ನಿವಾಸಿಗಳಿಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿತು.[][]

ಡಾರ್ಜಿಲಿಂಗ್‌ ಯುದ್ಧ ಸ್ಮಾರಕ

ಬ್ರಿಟಿಷ್‌ ಆಳ್ವಿಕೆಯ ಅಡಿಯಲ್ಲಿ, ಡಾರ್ಜಿಲಿಂಗ್‌ ಪ್ರದೇಶವು ಆರಂಭದಲ್ಲಿ "ಅನಿರ್ಬಂಧಿತ ಜಿಲ್ಲೆ" (ಬ್ರಿಟಿಷ್‌ ಆಳ್ವಿಕೆ ಯಲ್ಲಿ, ಆರ್ಥಿಕವಾಗಿ ಹಿಂದುಳಿದ ಜಿಲ್ಲೆಗಳಿಗೆ ಅನ್ವಯಿಸುವ ಆಡಳಿತದ ಒಂದು ಯೋಜನೆ[೧೦] ) ಯಾಗಿತ್ತು. ಹೀಗಾಗಿ ಬ್ರಿಟಿಷ್‌ ಆಳ್ವಿಕೆಯ ಕಾಯಿದೆ ಮತ್ತು ನಿಬಂಧನೆಗಳು ದೇಶದ ಇತರೆ ಭಾಗಗಳಿಗೆ ಅನ್ವಯಿಸಿದಂತೆ ಈ ಜಿಲ್ಲೆಗೆ ಸಹಜವಾಗಿ ಅನ್ವಯಿಸಿರಲಿಲ್ಲ. 1905ರ ಬಂಗಾಳ ವಿಭಜನೆಯ ಪರಿಣಾಮವೆಂಬಂತೆ, ಈ ಪ್ರದೇಶವು ರಾಜ್‌ಷಾಹಿ ವಿಭಾಗದ[೧೧] ಆಳ್ವಿಕೆಯ ಅಡಿಯಲ್ಲಿ ಬಂದಿತು ಮತ್ತು ಹೊಸದಾಗಿ ರಚನೆಯಾದ ಪೂರ್ವಬಂಗಾಳ ಮತ್ತು ಅಸ್ಸಾಂ ಪ್ರಾಂತ್ಯದಲ್ಲಿ ಸೇರ್ಪಡೆಯಾಯಿತು.

ಈ ವ್ಯವಸ್ಥೆಯ ಪ್ರಕಾರ ಡಾರ್ಜಿಲಿಂಗ್, ಆಧುನಿಕ ಬಾಂಗ್ಲಾದೇಶರಂಗ್‌ಪುರ್‌ ಜಿಲ್ಲಾಡಳಿತದ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿತು. ನಂತರದ ದಿನಗಳಲ್ಲಿ ಎಂದರೆ, 1919ರಲ್ಲಿ ಈ ಪ್ರದೇಶವನ್ನು "ಹಿಂದುಳಿದ ವಿಶಾಲ ಪ್ರದೇಶ" ಎಂದು ಘೋಷಿಸಲಾಯಿತು.[೧೦] ಡಾರ್ಜಿಲಿಂಗ್‌ನ ಗಣ್ಯ ನಿವಾಸಿಗಳು ಆ ಕಾಲದ ಬ್ರಿಟಿಷ್‌ ಆಡಳಿತ ವರ್ಗಕ್ಕೆ ಸೇರಿದವರಾಗಿದ್ದರು. ಇವರು ಪ್ರತಿ ಬೇಸಗೆಯಲ್ಲಿ ಡಾರ್ಜಿಲಿಂಗ್‌ಗೆ ಭೇಟಿ ನೀಡುತ್ತಿದ್ದರು. ಕೋಲ್ಕತ್ತಾದ (ಆಗಿನ ಕಲ್ಕತ್ತಾ) ಶ್ರೀಮಂತ ಭಾರತೀಯ ನಿವಾಸಿಗಳು, ರಾಜಾರ್ಹ ಸಂಸ್ಥಾನಗಳಿಗೆ ಸೇರಿದ ಶ್ರೀಮಂತ ಮಹಾರಾಜರುಗಳು ಮತ್ತು ಭೂಮಾಲೀಕತ್ವ ಹೊಂದಿದ್ದ ಜಮೀನುದಾರರೂ ಕೂಡಾ ಹೆಚ್ಚೆಚ್ಚು ಸಂಖ್ಯೆಯಲ್ಲಿ ಡಾರ್ಜಿಲಿಂಗ್‌ಗೆ ಭೇಟಿ ನೀಡಲು ಆರಂಭಿಸಿದರು.[೧೨]

ಪ್ರವಾಸಿ ತಾಣವಾಗಿ ಬೆಳೆಯಲು ಆರಂಭಿಸಿದ ಡಾರ್ಜಿಲಿಂಗ್‌ "ಬೆಟ್ಟಗಳ ರಾಣಿ" ಎಂದು ಜನಪ್ರಿಯವಾಗತೊಡಗಿತು.[೧೩] ಈ ಪಟ್ಟಣವು ದೂರದ ಪ್ರದೇಶದಲ್ಲಿ ನೆಲೆಗೊಂಡಿದ್ದರಿಂದ ಮತ್ತು ಸಣ್ಣ ಪ್ರಮಾಣದ ಜನಸಂಖ್ಯೆಯನ್ನು ಹೊಂದಿದ್ದರಿಂದಾಗಿ, ಭಾರತದ ಸ್ವಾತಂತ್ರ್ಯ ಹೋರಾಟದ ಅವಧಿಯಲ್ಲಿ ಯಾವುದೇ ಮಹತ್ವಪೂರ್ಣ ರಾಜಕೀಯ ಚಟುವಟಿಕೆಗಳಿಗೆ ಸಾಕ್ಷಿಯಾಗಲಿಲ್ಲ.

ಆದರೂ, 1930ರ ದಶಕದಲ್ಲಿ ಬಂಗಾಳದ ರಾಜ್ಯಪಾಲರಾಗಿದ್ದ ಸರ್‌ ಜಾನ್‌ ಆಂಡರ್ಸನ್‌ ಅವರನ್ನು ಕ್ರಾಂತಿಕಾರಿಗಳು ಹತ್ಯೆ ಮಾಡಲು ಪ್ರಯತ್ನಿಸಿದ ಘಟನೆ ಜರುಗಿತು. ಆದರೆ ಕ್ರಾಂತಿಕಾರಿಗಳ ಪ್ರಯತ್ನ ವಿಫಲವಾಯಿತು.[೧೧]

ಡಾರ್ಜಿಲಿಂಗ್‌ನ ಮಾರುಕಟ್ಟೆಯಲ್ಲಿ ತರಕಾರಿಗಳನ್ನು ಮಾರುತ್ತಿರುವ ಮಹಿಳೆ

1947ರಲ್ಲಿ ಭಾರತ ಸ್ವತಂತ್ರವಾದ ನಂತರ ಡಾರ್ಜಿಲಿಂಗ್‌ ಪಶ್ಚಿಮ ಬಂಗಾಳ ರಾಜ್ಯದೊಂದಿಗೆ ವಿಲೀನವಾಯಿತು. ಬೆಟ್ಟದ ಮೇಲಿರುವ ಪಟ್ಟಣಗಳಾದ ಡಾರ್ಜಿಲಿಂಗ್‌, ಕುರ್ಸಿಯಾಂಗ್‌, ಕಾಲಿಂಪಾಂಗ್ ಮತ್ತು ಟೆರಾಯ್‌ ಟೆರಾಯ್‌‌(/2) ಪ್ರದೇಶದ ಕೆಲವು ಭಾಗಗಳನ್ನು ಒಳಗೊಂಡ ಪ್ರತ್ಯೇಕ ಡಾರ್ಜಿಲಿಂಗ್‌ ಜಿಲ್ಲೆ ರಚನೆಯಾಯಿತು. 1950ರಲ್ಲಿ ಪೀಪಲ್ಸ್ ರಿಪಬ್ಲಿಕ್‌ ಆಫ್‌ ಚೀನ, ಟಿಬೆಟ್‌ನ್ನು ಸೇರಿಸಿಕೊಂಡಾಗ ಸಾವಿರಾರು ನಿರಾಶ್ರಿತ ಟಿಬೆಟಿಯನ್ನರು ಡಾರ್ಜಿಲಿಂಗ್‌ ಜಿಲ್ಲೆಯಾದ್ಯಂತ ನೆಲೆಗೊಂಡರು. ಇಲ್ಲಿನ ವೈವಿಧ್ಯಮಯ ಜನಾಂಗಗಳ ಕಾರಣದಿಂದಾಗಿ ಇಲ್ಲಿ ಸಮಾಜೋ-ಆರ್ಥಿಕ ಉದ್ವಿಗ್ನತೆಗಳು ತಲೆದೋರಿದವು ಮತ್ತು ಜನಾಂಗೀಯತೆಯ ತತ್ವದ ಅನುಸಾರ ಗೂರ್ಖಾಲ್ಯಾಂಡ್‌ ಮತ್ತು ಕಮ್ಟಾಪುರ್‌ ಎಂಬ ಪ್ರತ್ಯೇಕ ರಾಜ್ಯಗಳ ರಚನೆಯ ಕುರಿತಾದ ಬೇಡಿಕೆಯು 1980ರ ದಶಕದಲ್ಲಿ ಜನಪ್ರಿಯವಾಯಿತು.

G.N.L.F.ಧ್ವಜ

ಗೂರ್ಖಾ ನ್ಯಾಷನಲ್ ಲಿಬರೇಷನ್ ಫ್ರಂಟ್‌‌ನ ಕರೆಯ ಮೇರೆಗೆ ನಡೆದ 40 ದಿನಗಳ ಮುಷ್ಕರದ ನಂತರ ಸಮಸ್ಯೆಗಳು ಉಲ್ಬಣಗೊಂಡವು. ಈ ಅವಧಿಯಲ್ಲಿ ನಗರದಾದ್ಯಂತ ಹಿಂಸೆಯು ಆವರಿಸಿಕೊಂಡಿದ್ದರಿಂದಾಗಿ ಸುವ್ಯವಸ್ತೆಯನ್ನು ಪುನರ್‌ಸ್ಥಾಪಿಸಲು ರಾಜ್ಯ ಸರ್ಕಾರವು ಭಾರತೀಯ ಸೇನೆಯ ನೆರವು ಕೋರಬೇಕಾಗಿ ಬಂತು. ಸುಭಾಷ್‌ ಗಿಷಿಂಗ್‌ ಅವರ ಅಧ್ಯಕ್ಷತೆಯ ಅಡಿಯಲ್ಲಿ ಡಾರ್ಜಿಲಿಂಗ್ ಗೂರ್ಖಾ ಹಿಲ್‌ ಕೌನ್ಸಿಲ್‌ ರಚನೆಯಾಗುವುದರೊಂದಿಗೆ ರಾಜಕೀಯ ಉದ್ವಿಗ್ನತೆಗಳು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಯಿತು. ಜಿಲ್ಲೆಯ ಆಡಳಿತ ನಿರ್ವಹಿಸಲು DGHCಗೆ ಅರೆ-ಸ್ವಾಯತ್ತತಾ ಅಧಿಕಾರವನ್ನು ನೀಡಲಾಯಿತು. ನಂತರದ ದಿನಗಳಲ್ಲಿ ಇದರ ಹೆಸರು "ಡಾರ್ಜಿಲಿಂಗ್‌ ಗೂರ್ಖಾ ಅಟಾನಮಸ್‌‌ ಹಿಲ್‌ ಕೌನ್ಸಿಲ್‌" (DGAHC) ಎಂದು ಬದಲಾಯಿತು. ಈಗ ಡಾರ್ಜಿಲಿಂಗ್ ಶಾಂತವಾಗಿದ್ದರೂ, ಗೂರ್ಖಾ ಜನಮುಕ್ತಿ ಮೋರ್ಚಾದಂತಹ ಕೆಲವು ಅಹಿಂಸಾ ರಾಜಕೀಯ ಪಕ್ಷಗಳ ಬೆಂಬಲದಿಂದಾಗಿ ಪ್ರತ್ಯೇಕ ರಾಜ್ಯದ ವಿವಾದವು ಇನ್ನೂ ಸುಳಿದಾಡುತ್ತಲೇ ಇದೆ.

ಭೂಗೋಳ

[ಬದಲಾಯಿಸಿ]

and Darjeeling seen from [[.]]

ಡಾರ್ಜಿಲಿಂಗ್‌ನಿಂದ ಕಾಣುವಂತೆ ಮೌಂಟ್‌ ಕಾಂಚನಜುಂಗ ಶಿಖರ

ಘುಮ್‌ನಿಂದ ದಕ್ಷಿಣದಲ್ಲಿ ಪ್ರಾರಂಭವಾಗುವ ಡಾರ್ಜಿಲಿಂಗ್‌-ಜಲಪಹಾರ್‌ ಶ್ರೇಣಿಯ ಮೇಲಿನ ಡಾರ್ಜಿಲಿಂಗ್‌ ಹಿಮಾಲಯ ಪರ್ವತ ಪ್ರದೇಶದ ಒಂದು ಸರಾಸರಿ ಎತ್ತರದಲ್ಲಿ6,982 ft (2,128 m)[೧೪] ಡಾರ್ಜಿಲಿಂಗ್‌ ಇದೆ. Y ಆಕಾರದಲ್ಲಿರುವ ಈ ಶ್ರೇಣಿಯ ತಳಹದಿ ಕಟಪಹಾರ್‌ ಮತ್ತು ಜಲಪಹಾರ್‌ನಲ್ಲಿ ನೆಲೆಗೊಳ್ಳುತ್ತದೆ ಹಾಗೂ ಇದರ ಎರಡು ಪಾರ್ಶ್ವಗಳು ವೀಕ್ಷಣಾ ಬೆಟ್ಟದ ಉತ್ತರ ದಿಕ್ಕಿನಲ್ಲಿ ಎರಡು ಬೇರೆ ಬೇರೆ ಕವಲುಗಳಾಗಿ ಒಡೆಯುತ್ತವೆ. ಇದರ ಈಶಾನ್ಯ ಭಾಗ ಹಟಾತ್ತನೆ ಕೆಳಗಿಳಿದು ಮತ್ತೆ ಲೆಬಾಂಗ್‌ ಚಾಚುಭಾಗದಲ್ಲಿ ಕೊನೆಗೊಳ್ಳುತ್ತದೆ. ಇದೇ ವೇಳೆ, ಉತ್ತರ ಬಿಂದುವಿನ ಮೂಲಕ ಹಾದು ಹೋಗುವ ಇದರ ವಾಯುವ್ಯ ಭಾಗ ಟುಕ್ವೆರ್‌ ಚಹಾ ತೋಟದ ಸಮೀಪದ ಕಣಿವೆಯಲ್ಲಿ ಅಂತ್ಯಗೊಳ್ಳುತ್ತದೆ.[]

ಡಾರ್ಜಿಲಿಂಗ್‌, ಸಾದರ್‌ ಉಪವಿಭಾಗದ ಮುಖ್ಯ ಪಟ್ಟಣವೂ ಮತ್ತು ಜಿಲ್ಲೆಯ ಕೇಂದ್ರಸ್ಥಾನವೂ ಆಗಿದೆ. ಡಾರ್ಜಿಲಿಂಗ್‌ ಬೆಟ್ಟಗಳು ಹಿಮಾಲಯದ ಕೆಳ ಶ್ರೇಣಿಯಲ್ಲಿ ನೆಲೆಗೊಂಡಿವೆ. ಆದರೂ ಇವು ಶಿವಾಲಿಕ್‌ ಬೆಟ್ಟಗಳ ಒಂದು ಭಾಗವಾಗಿಲ್ಲ. ಇಲ್ಲಿನ ಮಣ್ಣು ಪ್ರಮುಖವಾಗಿ ಮರಳುಶಿಲೆ ಹಾಗೂ ಮುದ್ದೆಯಾದ ಶಿಲಾಸ್ತರಗಳಿಂದ ಮಾಡಲ್ಪಟ್ಟಿದ್ದು, ಅವು ಹಿಮಾಲಯದ ಮಹೋನ್ನತ ಶ್ರೇಣಿಯ ಘನೀಕೃತ ಹಾಗೂ ಪುಡಿಪುಡಿಯಾದ ಮಿಶ್ರಣದ ಉಬ್ಬಿದ ಭಾಗವಾಗಿವೆ.

ಆದರೂ ಇಲ್ಲಿನ ಮಣ್ಣು ಪೂರ್ಣ ಘನೀಕೃತವಾಗಿಲ್ಲ (ಮಳೆ ನೀರನ್ನು ಇಲ್ಲಿನ ಮಣ್ಣು ಹರಿದುಬಿಡುತ್ತದೆಯೇ ಹೊರತು ಹಿಡಿದಿಡುವುದಿಲ್ಲ.) ಆದ್ದರಿಂದ ಇದು ಕೃಷಿಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ. ಈ ಪ್ರದೇಶ ಕಡಿದಾದ ಇಳಿಜಾರುಗಳನ್ನು ಮತ್ತು ಸಡಿಲವಾದ ಮಣ್ಣಿನ ಮೇಲ್ಪದರವನ್ನು ಹೊಂದಿರುವುದರಿಂದ ಮಳೆಗಾಲದ ಅವಧಿಯಲ್ಲಿ ಆಗಿದಾಂಗ್ಗೆ ಭೂಕುಸಿತಗಳು ಸಂಭವಿಸುತ್ತಲೇ ಇರುತ್ತವೆ. ಭಾರತೀಯ ಮಾನಕ ಸಂಸ್ಥೆಯ ಪ್ರಕಾರ ಈ ಪಟ್ಟಣವು ಭೂಕಂಪಗಳ ವಲಯ- IVರ ಅಡಿಯಲ್ಲಿ ಬರುತ್ತದೆ. ಈ ವಲಯವು ಭಾರತದ ಮತ್ತು ಯುರೇಷಿಯಾದ ವಿರೂಪ ಭೂಪದರದ ಒಮ್ಮುಖವಾಗಿರುವ ಸರಹದ್ದಿನ ಸಮೀಪ ಬರುವಂಥಾದ್ದಾಗಿದ್ದು, ಇದು ಆಗಾಗ ಭೂಕಂಪಗಳಿಗೆ ಈಡಾಗುತ್ತಿರುತ್ತದೆ. ಬೆಟ್ಟಗಳು ಉನ್ನತ ಶಿಖರಗಳೊಳಗೆ ಬೆಚ್ಚಗೆ ಕುಳಿತಿದ್ದು, ಹಿಮಚ್ಛಾದಿತ ಹಿಮಾಲಯದ ಶ್ರೇಣಿಗಳು ಪಟ್ಟಣವನ್ನು ದೂರದಿಂದ ಆವರಿಸುತ್ತವೆ. ವಿಶ್ವದ ಮೂರನೇ ಅತಿ ಎತ್ತರದ ಶಿಖರವಾಗಿರುವ ಕಾಂಚನಜುಂಗ ಶಿಖರ (8,598 ಮೀ ಅಥವಾ 28,208 ಅಡಿಗಳು) ಎದ್ದುಕಾಣುವಂಥ ಮನಮೋಹಕ ಶಿಖರವಾಗಿದೆ. ಮೋಡಗಳಿಲ್ಲದ ಶುಭ್ರ ವಾತಾವರಣವಿರುವ ದಿನಗಳಲ್ಲಿ ನೇಪಾಳದ ಮೌಂಟ್‌ ಎವರೆಸ್ಟ್‌‌ (29,035 ಅಡಿಗಳು ಅಥವಾ 8,850 ಮೀ) ಶಿಖರವನ್ನು ಕೂಡ ನೊಡಬಹುದು.[೧೫]

ಈ ಪ್ರದೇಶದಲ್ಲಿ ಹಲವಾರು ಚಹಾ ತೋಟಗಳಿವೆ. ಸೌದೆ ಹಾಗೂ ಮರದ ದಿಮ್ಮಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಡಾರ್ಜಿಲಿಂಗ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಅರಣ್ಯನಾಶದ ಸಮಸ್ಯೆಯನ್ನು ಎದುರಿಸುತ್ತಿವೆ. ಜೊತೆಗೆ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದಾಗಿ ವಾಯುಮಾಲಿನ್ಯವೂ ಅಧಿಕಗೊಳ್ಳುತ್ತಿದೆ.[೧೬] ಡಾರ್ಜಿಲಿಂಗ್‌ ಸುತ್ತಮುತ್ತಲಿರುವ ಸಸ್ಯವೈವಿಧ್ಯಗಳಲ್ಲಿ, ಪಾಪ್ಲರ್‌ ಅರಣ್ಯ, ಭೂರ್ಜ ಮರ, ಓಕ್‌, ಎಲ್ಮ್‌ ಮರಗಳ ಸಮಶೀತೋಷ್ಣ, ಪತನಶೀಲ ಕಾಡುಗಳಷ್ಟೇ ಅಲ್ಲದೇ ತೇವಭರಿತ ಆಲ್ಪೈನ್‌ ಪರ್ವತದ ನಿತ್ಯಹರಿದ್ವರ್ಣದ, ಶಂಕುವಿನಾಕಾರದ ಕಾಯಿಗಳನ್ನು ಬಿಡುವ ಹಚ್ಚಹಸಿರಾದ ತೇವಭರಿತ ಆಲ್ಪೈನ್‌ ಮರ ಮುಂತಾದವು. ದಟ್ಟವಾದ ನಿತ್ಯ ಹರಿದ್ವರ್ಣದ ಕಾಡುಗಳು ಪಟ್ಟಣದ ಸುತ್ತಲೂ ಆವರಿಸಿಕೊಂಡಿದ್ದು, ಅಪರೂಪದ, ವೈವಿಧ್ಯಮಯ ಮರಬಾಳೆ ಗಿಡಗಳು ಅಲ್ಲಿ ಕಾಣಸಿಗುತ್ತವೆ. ಲಾಯ್ಡ್ಸ್‌ ಬಟಾನಿಕಲ್‌ ಗಾರ್ಡನ್‌ (ಲಾಯ್ಡ್‌ ಸಸ್ಯತೋಟ) ಸಾಮಾನ್ಯ ಮತ್ತು ಬಹಳ ಅಪರೂಪದ ಸಸ್ಯಜಾತಿಗಳನ್ನು ಸಂರಕ್ಷಿಸಿದರೆ, ಪದ್ಮಜ ನಾಯ್ಡು ಹಿಮಾಲಯನ್‌ ಜೂವಾಲಜಿಕಲ್‌ ಪಾರ್ಕ್‌, (ಪದ್ಮಜ ನಾಯ್ಡು ಹಿಮಾಲಯದ ಮೃಗಾಲಯ) ಅಪಾಯದಂಚಿನಲ್ಲಿರುವ ಹಿಮಾಲಯದ ಪ್ರಾಣಿಗಳನ್ನು ಸಂರಕ್ಷಿಸುತ್ತಿರುವ ಮತ್ತು ತಳಿ ಅಭಿವೃದ್ಧಿ ನಡೆಸುತ್ತಿರುವ ದೇಶದಲ್ಲಿನ ಏಕೈಕ ತಜ್ಞ ಮೃಗಾಲಯವಾಗಿದೆ.[೧೭]

ಹವಾಗುಣ

[ಬದಲಾಯಿಸಿ]
ಬಿರುಮಳೆಯಲ್ಲಿ ಚಿತ್ರಿಸಲಾದ ಡಾರ್ಜಿಲಿಂಗ್‌ನ ದಾರಿ

ಡಾರ್ಜಿಲಿಂಗ್‌ನ ಸಮಶೀತೋಷ್ಣ ಹವಾಗುಣ ಐದು ವಿಭಿನ್ನವಾದ ಕಾಲಗಳನ್ನು ಹೊಂದಿದೆ: ವಸಂತಕಾಲ, ಬೇಸಗೆಕಾಲ, ಶರತ್ಕಾಲ, ಚಳಿಗಾಲ ಮತ್ತು ಮಳೆಗಾಲ.ಬೇಸಗೆಕಾಲ (ಮೇನಿಂದ ಜೂನ್‌ವರೆಗೆ ಇರುತ್ತದೆ) ಇಲ್ಲಿ ಹಿತಕರವಾಗಿದ್ದು, ಗರಿಷ್ಟ ಉಷ್ಣಾಂಷವು ಅಪರೂಪಕ್ಕೆಂಬಂತೆ 15 °C (57 °F)ಯನ್ನು ದಾಟುತ್ತದೆ.

ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಳೆಗಾಲದಲ್ಲಿ ತೀವ್ರವಾಗಿ ಮತ್ತು ಧಾರಾಕಾರವಾಗಿ ಸುರಿಯುವ ಮಳೆಯಿಂದ ಆಗಿದಾಂಗ್ಗೆ ಭೂಕುಸಿತಗಳು ಸಂಭವಿಸುತ್ತವೆ. ಇದು ಡಾರ್ಜಿಲಿಂಗ್‌ನ್ನು ದೇಶದ ಇತರ ಭಾಗಗಳಿಗೆ ಸಂಪರ್ಕಿಸುವ ರಸ್ತೆಮಾರ್ಗಗಳನ್ನು ಮುಚ್ಚಿಬಿಡುತ್ತದೆ. ಚಳಿಗಾಲದಲ್ಲಿ ಉಷ್ಣಾಂಶ 10–-7 °C (12–18 °F)ಗಳ ಸರಾಸರಿಯಲ್ಲಿರುತ್ತದೆ.−11 °C (12.2 °F) ಹಗಲಿನಲ್ಲಿ ಉಷ್ಣಾಂಶ ಮೈ ಹೆಪ್ಪುಗಟ್ಟುವ ಹಂತಕ್ಕೆ ಕುಸಿಯುತ್ತದೆ ಅಲ್ಲದೆ ಹಿಮಸುರಿತ ಒಂದು ರೀತಿಯಲ್ಲಿ ಸಾಮಾನ್ಯವಾಗಿರುತ್ತದೆ.

ಮಳೆಗಾಲ ಮತ್ತು ಚಳಿಗಾಲಗಳಲ್ಲಿ ಡಾರ್ಜಿಲಿಂಗ್‌ನ್ನು ದಟ್ಟವಾದ ಮಂಜು ಮತ್ತು ಮಬ್ಬು ಆವರಿಸಿರುತ್ತದೆ. ವಾರ್ಷಿಕ ಸರಾಸರಿ ಉಷ್ಣಾಂಶವು 1 °C (34 °F)ನಷ್ಟಿರುತ್ತದೆ; ಮಾಸಿಕ ಸರಾಸರಿ ಉಷ್ಣಾಂಶವು 10–12 °C (12–54 °F)ನ ಆಜೂಬಾಜಿನಲ್ಲಿರುತ್ತದೆ.[೧೮] 1957ರ ಆಗಸ್ಟ್ 23ರಂದು ಜಿಲ್ಲೆಯಲ್ಲಿ ಅತ್ಯಂತ ಗರಿಷ್ಠ ಪ್ರಮಾಣದ ಉಷ್ಣಾಂಶ 20.7 °C (69.1 °F) ದಾಖಲಾಗಿತ್ತು; ಅದೇ ರೀತಿ 1905ರ ಫೆಬ್ರವರಿ 11ರಂದು ಅತ್ಯಂತ ಕನಿಷ್ಠ ಉಷ್ಣಾಂಶ 15 °C (4 °F) ದಾಖಲಾಗಿತ್ತು.[೧೯]

ಇಲ್ಲಿನ ಸರಾಸರಿ ವಾರ್ಷಿಕ ಹಿಮಸುರಿತ 281.8 ಸೆಂ.ಮೀ.(110.9 ಇಂಚುಗಳು) ಆಗಿರುತ್ತದೆ; ಜುಲೈ ತಿಂಗಳಲ್ಲಿ ಅತ್ಯಂತ ಹೆಚ್ಚು ಹಿಮಸುರಿತ ದಾಖಲಾಗುತ್ತದೆ. (75.3 ಸೆಂ.ಮೀ ಅಥವಾ 29.6 ಇಂಚುಗಳು).[೧೮]

ಪೌರಾಡಳಿತ

[ಬದಲಾಯಿಸಿ]
ಚಿತ್ರ:DarjeelingGorkhaRally.jpg
ಡಾರ್ಜಿಲಿಂಗ್‌ನಲ್ಲಿ ನಡೆಯುತ್ತಿರುವ ರಾಜಕೀಯ ಮೆರವಣಿಗೆ

ಡಾರ್ಜಿಲಿಂಗ್‌ ಪಟ್ಟಣ ಒಕ್ಕೂಟವು ಡಾರ್ಜಿಲಿಂಗ್‌ ಪುರಸಭೆ ಮತ್ತು ಪಟ್ಟಬೊಂಗ್‌ ಚಹಾ ತೋಟವನ್ನು ಒಳಗೊಳ್ಳುತ್ತದೆ.[೨೦]

1850ರಲ್ಲಿ ಸ್ಥಾಪನೆಯಾದ ಡಾರ್ಜಿಲಿಂಗ್‌ ಪುರಸಭೆ, 10.57 ಚದರ ಕಿ.ಮೀ (4.08 ಚದರ ಮೈಲಿ) ವ್ಯಾಪ್ತಿಯಲ್ಲಿ ಪಟ್ಟಣದ ನಾಗರಿಕ ಆಡಳಿತವನ್ನು ನಿರ್ವಹಿಸುತ್ತದೆ.[೨೦] ಪುರಸಭೆಯು, ಚುನಾಯಿತ ಸದಸ್ಯರು ಮತ್ತು ಸರ್ಕಾರದ ನಾಮನಿರ್ದೇಶಿತ ಸದಸ್ಯರಿರುವ ಮಂಡಳಿಯನ್ನು ಒಳಗೊಂಡಿರುತ್ತದೆ. ಈ ಮಂಡಳಿಯಲ್ಲಿ ಡಾರ್ಜಿಲಿಂಗ್‌ನ 32 ನಗರ ವಿಭಾಗ‌ಗಳಲ್ಲಿ ಪ್ರತಿಯೊಂದು ನಗರ ವಿಭಾಗ‌ದಿಂದ ಚುನಾಯಿತರಾಗಿ ಬಂದ ಸದಸ್ಯರೂ ಮತ್ತು ಸರ್ಕಾರದಿಂದ ನಾಮನಿರ್ದೇಶನಗೊಂಡ ಕೆಲವು ಸದಸ್ಯರೂ ಸೇರಿರುತ್ತಾರೆ. ಪುರಸಭಾ ಸದಸ್ಯರ ಮಂಡಳಿಯು ತನ್ನ ಚುನಾಯಿತ ಸದಸ್ಯರ ಪೈಕಿ ಒಬ್ಬನನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡುತ್ತದೆ.[] ಅಧ್ಯಕ್ಷರು ಪುರಸಭೆಯ ಕಾರ್ಯಕಾರಿ ಮುಖ್ಯಸ್ಥರಾಗಿರುತ್ತಾರೆ.

ಗೂರ್ಖಾ ನ್ಯಾಷನಲ್‌ ಲಿಬರೇಷನ್‌ ಫ್ರಂಟ್‌ (GNLF) ಪ್ರಸ್ತುತ ಪುರಸಭೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸಮಗ್ರ ಡಾರ್ಜಿಲಿಂಗ್‌ ಜಿಲ್ಲೆಯ ಗೂರ್ಖಾ ಪ್ರಾಬಲ್ಯವಿರುವ ಬೆಟ್ಟ ಪ್ರದೇಶಗಳು, ಡಾರ್ಜಿಲಿಂಗ್‌ ಗೂರ್ಖಾ ಅಟಾನಮಸ್‌ ಹಿಲ್‌ ಕೌನ್ಸಿಲ್‌ (ಡಾರ್ಜಿಲಿಂಗ್ ಬೆಟ್ಟದ ಸ್ವಾಯತ್ತತಾ ಗೂರ್ಖಾ ಮಂಡಳಿ) ಸ್ಥಾಪನೆಯಾದ 1988ನೇ ಇಸವಿಯಿಂದಲೂ ಅದರ ಅಧಿಕಾರ ವ್ಯಾಪ್ತಿಗೆ ಒಳಪಟ್ಟಿವೆ. ಶಿಕ್ಷಣ, ಆರೋಗ್ಯ ಮತ್ತು ಪ್ರವಾಸೋದ್ಯಮವೂ ಸೇರಿದಂತೆ ಬೆಟ್ಟಗಳ ಕೆಲವೊಂದು ನಿಶ್ಚಿತ ವಿಚಾರಗಳನ್ನು ನಿರ್ವಹಿಸುವ ಅಧಿಕಾರವನ್ನು DGHCಯ ಚುನಾಯಿತ ಪುರಸಭಾ ಸದಸ್ಯರಿಗೆ ನೀಡಲಾಗಿದೆ. ಡಾರ್ಜಿಲಿಂಗ್‌ ಪಟ್ಟಣವು ಡಾರ್ಜಿಲಿಂಗ್‌ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು, ಭಾರತ ಸಂಸತ್ತಿನ ಕೆಳಮನೆಯಾದ ಲೋಕಸಭೆಗೆ ಒಬ್ಬ ಸದಸ್ಯನನ್ನು ಆಯ್ಕೆ ಮಾಡಿ ಕಳಿಸುತ್ತದೆ.[೨೧] ಅಲ್ಲದೆ ಪಶ್ಚಿಮ ಬಂಗಾಳ ರಾಜ್ಯ ಶಾಸನಸಭೆಯಾದ ವಿಧಾನಸಭೆಯಲ್ಲಿನ ಒಬ್ಬ ಸದಸ್ಯನನ್ನು ಆಯ್ಕೆ ಮಾಡುತ್ತದೆ.

2004ರ ಸಂಸತ್‌ ಚುನಾವಣೆಯಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಗೆಲುವು ಸಾಧಿಸಿದರೆ, 2006ರ ಚುನಾವಣೆಯಲ್ಲಿ ರಾಜ್ಯ ವಿಧಾನಸಭಾ ಸ್ಥಾನವನ್ನು GNLF ತನ್ನದಾಗಿಸಿಕೊಂಡಿತು. ಡಾರ್ಜಿಲಿಂಗ್ ಪಟ್ಟಣವು ಜಿಲ್ಲಾ ಆರಕ್ಷಣಾ‌ ಅಧಿಕಾರ ವ್ಯಾಪ್ತಿಯಲ್ಲಿ ಬರುತ್ತದೆ (ಇದು ರಾಜ್ಯ ಆರಕ್ಷಣಾ ವ್ಯವಸ್ಥೆಯ ಒಂದು ಭಾಗವಾಗಿದೆ). ಉಪ ಪೊಲೀಸ್‌ ವರಿಷ್ಠಾಧಿಕಾರಿ ಪಟ್ಟಣದ ಭದ್ರತೆ ಮತ್ತು ಕಾನೂನು ಸುವ್ಯಸ್ಥೆಗಳ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ. ಡಾರ್ಜಿಲಿಂಗ್‌ ಪುರಸಭಾ ಪ್ರದೇಶವು ಡಾರ್ಜಿಲಿಂಗ್‌ ಮತ್ತು ಜೋರ್‌ಬಂಗಲೋ ಎಂಬಲ್ಲಿ ಎರಡು ಆರಕ್ಷಕ ಠಾಣೆಗಳನ್ನು ಹೊಂದಿದೆ.[೨೨]

ನಿತ್ಯೋಪಯೋಗಿ ಸೇವೆಗಳು

[ಬದಲಾಯಿಸಿ]
ಚಿತ್ರ:DarjeelingSewageNew.jpg
ಮನೆಗಳ ಹಿಂಭಾಗದಲ್ಲಿ ಹರಿಯುತ್ತಿರುವ ಮೋರಿ

ಪ್ರಾಕೃತಿಕ ಚಿಲುಮೆ ಅಥವಾ ಕಾರಂಜಿಗಳು ಡಾರ್ಜಿಲಿಂಗ್‌ನ ನೀರಿನ ಅಗತ್ಯವನ್ನು ಬಹುತೇಕ ಪೂರೈಸುತ್ತವೆ. ಇವುಗಳಿಂದ ಸಂಗ್ರಹಿಸಲಾದ ನೀರನ್ನು ಸೆಂಚಾಲ್‌ ಸರೋವರಕ್ಕೆ (10 ಕಿ.ಮೀ ಅಥವಾ6.2 miles (10.0 km) ಪಟ್ಟಣದ ಆಗ್ನೇಯ ಭಾಗ) ತಿರುಗಿಸಲಾಗುತ್ತದೆ. ಇಲ್ಲಿಂದ ಪಟ್ಟಣಕ್ಕೆ ನೀರನ್ನು ಕೊಳವೆಗಳ ಮೂಲಕ ಸಾಗಿಸಲಾಗುತ್ತದೆ. ಚಿಲುಮೆಗಳಿಂದ ಸರಬರಾಜಾಗುವ ನೀರು ಕೊರತೆಯಾಗುವ ಬೇಸಗೆ ಕಾಲದಲ್ಲಿ, ಪಟ್ಟಣಕ್ಕೆ ಹತ್ತಿರವಿರುವ ವರ್ಷದ ಎಲ್ಲ ಕಾಲದಲ್ಲೂ ಬತ್ತದೆ ಹರಿಯುವ ಖೊಂಗ್‌ ಖೊಲ ಎಂಬ ಸಣ್ಣ ತೊರೆಯಿಂದ ನೀರನ್ನು ಪೂರೈಸಲಾಗುತ್ತದೆ. ಇಲ್ಲಿ ನೀರಿನ ಬೇಡಿಕೆ ಮತ್ತು ಸರಬರಾಜಿನ ನಡುವೆ ಏಕಪ್ರಕಾರವಾಗಿ ವಿಸ್ತರಿಸುತ್ತಿರುವ ಅಂತರವಿದ್ದು, ಪಟ್ಟಣದ 50%ಗಿಂತಲೂ ಸ್ವಲ್ಪ ಅಧಿಕ ಕುಟುಂಬಗಳು ಪುರಸಭೆಯ ನೀರು ಸರಬರಾಜು ವ್ಯವಸ್ಥೆಯನ್ನು ನಂಬಿಕೊಂಡಿವೆ.[] ಡಾರ್ಜಿಲಿಂಗ್‌ ಪಟ್ಟಣ ಒಳಚರಂಡಿ ವ್ಯವಸ್ಥೆಯನ್ನು ಹೊಂದಿದ್ದು, ಮನೆಗಳಿಂದ ಮತ್ತು ಸುಮಾರು ಐವತ್ತು ಸಮುದಾಯ ಶೌಚಾಲಯಗಳಿಂದ ಸ್ಥಳೀಯ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ. ಈ ತ್ಯಾಜ್ಯವನ್ನು ಆರು ಕೇಂದ್ರೀಯ ರೊಚ್ಚು ತೊಟ್ಟಿಗಳಿಗೆ ತಲುಪಿಸಲಾಗುತ್ತದೆ ಹಾಗೂ ಅಂತಿಮವಾಗಿ ಪ್ರಾಕೃತಿಕ ಜ್ಹೋರಾ (ಜಲಮಾರ್ಗಗಳು)ಗಳಲ್ಲಿ ವಿಲೇವಾರಿ ಮಾಡಲಾಗುತ್ತದೆ. ರಸ್ತೆ ಬದಿಯಲ್ಲಿರುವ ಚರಂಡಿಗಳು ಕೂಡಾ ಕೊಳಚೆ ನೀರು ಮತ್ತು ಮಳೆನೀರನ್ನು ಸಂಗ್ರಹಿಸುತ್ತವೆ. ಡಾರ್ಜಿಲಿಂಗ್ ಪುರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ ಸುಮಾರು 50 ಟನ್‌ಗಳಷ್ಟು (110,200 lb) ಘನತ್ಯಾಜ್ಯ ಉತ್ಪಾದನೆಯಾಗುತ್ತಿದ್ದು, ಇದನ್ನು ಹತ್ತಿರವಿರುವ ವಿಲೇವಾರಿ ಸ್ಥಳಗಳಲ್ಲಿ ವಿಲೇವಾರಿ ಮಾಡಲಾಗುತ್ತಿದೆ.[]

ಪಶ್ಚಿಮ ಬಂಗಾಳ ರಾಜ್ಯ ವಿದ್ಯುತ್‌ ಮಂಡಳಿಯು ಪಟ್ಟಣಕ್ಕೆ ವಿದ್ಯುತ್‌ ಸರಬರಾಜು ಮಾಡಿದರೆ, ಪಶ್ಚಿಮ ಬಂಗಾಳ ಅಗ್ನಿಶಾಮಕ ಸೇವೆಯು ಪಟ್ಟಣಕ್ಕೆ ತುರ್ತುಸೇವೆಗಳನ್ನು ಒದಗಿಸುತ್ತದೆ. ಡಾರ್ಜಿಲಿಂಗ್‌ ಪಟ್ಟಣ ಆಗಿದಾಂಗ್ಗೆ ವಿದ್ಯುತ್‌ ಕಡಿತದ ಸಮಸ್ಯೆಯನ್ನು ಎದುರಿಸುತ್ತದೆಯಲ್ಲದೆ ವಿದ್ಯುತ್ ಸರಬರಾಜಿನ ವೋಲ್ಟೇಜ್‌ ಅಸ್ಥಿರವಾಗಿರುತ್ತದೆ. ಹೀಗಾಗಿ ವೋಲ್ಟೇಜ್‌ ಸ್ಟೇಬಿಲೈಸರ್‌ಗಳ (ವೋಲ್ಟೇಜ್‌ ಸ್ಥಿರತೆ ಕಾಪಾಡುವ ಯಂತ್ರಗಳು) ತಯಾರಿಕೆ ಇಲ್ಲಿನ ಬಹುತೇಕ ಮನೆಗಳಲ್ಲಿ ಜನಪ್ರಿಯವಾಗಿದೆ.

ಇಲ್ಲಿನ ಬಹುತೇಕ ಎಲ್ಲ ಪ್ರಾಥಮಿಕ ಶಾಲೆಗಳನ್ನು ಈಗ ಡಾರ್ಜಿಲಿಂಗ್‌ ಗೂರ್ಖಾ ಅಟಾನಮಸ್‌ ಹಿಲ್‌ ಕೌನ್ಸಿಲ್‌ ನಿರ್ವಹಿಸುತ್ತಿದೆ.

ಪುರಸಭಾ ವ್ಯಾಪ್ತಿಯ ಮೆಟ್ಟಿಲುದಾರಿ ಅಥವಾ ಕಾಲುದಾರಿಗಳನ್ನೂ ಒಳಗೊಂಡಂತೆ ಎಲ್ಲ ತೆರನಾದ ರಸ್ತೆಗಳ ಒಟ್ಟು ಉದ್ದ ಸುಮಾರು 90 ಕಿ.ಮೀ (56 ಮೈಲಿಗಳು); ಇವುಗಳನ್ನು ಪುರಸಭೆ ನಿರ್ವಹಿಸುತ್ತದೆ.[]

ವಾಣಿಜ್ಯ

[ಬದಲಾಯಿಸಿ]
ಡಾರ್ಜಿಲಿಂಗ್‌ ಚಹಾ ತೋಟ

ಡಾರ್ಜಿಲಿಂಗ್‌ನ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಎರಡು ಪ್ರಮುಖ ಉದ್ಯಮಗಳೆಂದರೆ, ಪ್ರವಾಸೋದ್ಯಮ ಮತ್ತು ಚಹಾ ಉದ್ಯಮ. ಡಾರ್ಜಿಲಿಂಗ್ ಚಹಾ ಕಪ್ಪು ಚಹಾಗಳಲ್ಲೇ ಅತ್ಯುತ್ಕೃಷ್ಠವಾದದ್ದು ಎಂದು ಗುರುತಿಸಲ್ಪಟ್ಟಿದ್ದು, ಇದು ಜಗತ್ತಿನೆಲ್ಲೆಡೆ ಜನಪ್ರಿಯವಾಗಿದೆ;[] ವಿಶೇಷವಾಗಿ UKಯಲ್ಲಿ ಮತ್ತು ಹಿಂದಿನ ಬ್ರಿಟಿಷ್‌ ಸಾಮ್ರಾಜ್ಯವನ್ನು ರೂಪಿಸಿದ್ದ ದೇಶಗಳಲ್ಲಿ ಇದು ಅತ್ಯಂತ ಜನಪ್ರಿಯವಾಗಿದೆ.ಇಲ್ಲಿನ ಚಹಾ ಉದ್ಯಮವು, ದೇಶದ ಇತರೆ ಭಾಗಗಳ ಚಹಾ ಬೆಳೆಗಾರರಿಂದಷ್ಟೇ ಅಲ್ಲದೆ ನೇಪಾಳದಂತಹ ಇತರೆ ದೇಶಗಳಲ್ಲಿ ಉತ್ಪಾದನೆಗೊಂಡ ಚಹಾದಿಂದ ಇತ್ತೀಚಿನ ದಿನಗಳಲ್ಲಿ ಪೈಪೋಟಿಯನ್ನು ಎದುರಿಸುತ್ತಿದೆ.[೨೩] ಕಾರ್ಮಿಕರ ವ್ಯಾಜ್ಯಗಳು, ಕಾರ್ಮಿಕರ ಹಂಗಾಮಿ ವಜಾ, ಚಹಾ ತೋಟಗಳ ಮುಚ್ಚುವಿಕೆ ಮುಂತಾದ ಬಹುವ್ಯಾಪಕವಾದ ಆತಂಕಗಳು ಚಹಾ ಉದ್ಯಮದಲ್ಲಿನ ಹೂಡಿಕೆ ಮತ್ತು ಉತ್ಪಾದನೆಯ ಮೇಲೆ ದುಷ್ಪರಿಣಾಮ ಬೀರಿವೆ.[೨೪] ಹಲವು ಚಹಾ ತೋಟಗಳು ಕಾರ್ಮಿಕರ ಸಹಕಾರಿ ತತ್ವದ ಮಾದರಿಯಲ್ಲಿ ನಡೆಯುತ್ತಿವೆ. ಮತ್ತೆ ಕೆಲವು ಪ್ರವಾಸಿ ಧಾಮ‌ಗಳಾಗಿ ಪರಿವರ್ತನೆಯಾಗುವ ಕುರಿತು ಯೋಜನೆಯನ್ನು ಹಾಕುತ್ತಿವೆ.[೨೪] ಚಹಾ ತೋಟಗಳಲ್ಲಿ ದುಡಿಯುತ್ತಿರುವ ಕಾರ್ಮಿಕರಲ್ಲಿ 60%ಗಿಂತ ಹೆಚ್ಚಿನವರು ಮಹಿಳೆಯರು. ಕಾರ್ಮಿಕರ ಸಂಭಾವನೆಯ ಒಂದರ್ಧ ಭಾಗವನ್ನು ಹಣದ ರೂಪದಲ್ಲಿ ನೀಡಿದರೆ, ಉಳಿದ ಇನ್ನರ್ಧ ಭಾಗವನ್ನು ವಸತಿ, ಅನುದಾನಿತ ಆಹಾರ ಸಾಮಗ್ರಿಗಳು, ಉಚಿತ ವೈದ್ಯಕೀಯ ಸೌಲಭ್ಯ ಮುಂತಾದ ಸೌಲಭ್ಯಗಳ ರೂಪದಲ್ಲಿ ನೀಡಲಾಗುತ್ತದೆ.[೨೫]

ಜಿಲ್ಲೆಯ ಅರಣ್ಯ ಮತ್ತು ಇತರೆ ಪ್ರಾಕೃತಿಕ ಸಂಪನ್ಮೂಲಗಳು, ನಿರಂತರವಾಗಿ ಬೆಳೆಯುತ್ತಲೇ ಇರುವ ಜನಸಂಖ್ಯೆಯಿಂದ ವ್ಯತಿರಿಕ್ತ ಪರಿಣಾಮವನ್ನು ಎದುರಿಸುತ್ತಿವೆ.[೨೦] ಸ್ವಾತಂತ್ರ್ಯಾನಂತರದ ವರ್ಷಗಳು ಶಿಕ್ಣಣ, ಸಂಪರ್ಕ ಮತ್ತು ಕೃಷಿ ವಲಯಗಳಲ್ಲಿ ಮಹತ್ವಪೂರ್ಣ ಬೆಳವಣಿಗೆಯನ್ನು ಕಂಡಿದ್ದು, ಕೃಷಿಯಲ್ಲಿ ಆಲೂಗಡ್ಡೆ, ಏಲಕ್ಕಿ, ಶುಂಠಿ, ಕಿತ್ತಳೆ ಮುಂತಾದ ವೈವಿಧ್ಯಮಯ ವಾಣಿಜ್ಯ ಬೆಳೆಗಳ ಉತ್ಪಾದನೆಯು ಸೇರಿದೆ.

ಪಟ್ಟಣದ ಸುತ್ತಮುತ್ತ ವಾಸಿಸುವ ಗ್ರಾಮೀಣ ಜನತೆಗೆ ಇಲ್ಲಿನ ಇಳಿಜಾರುಗಳಲ್ಲಿ ನಿರ್ಮಿಸಿದ ಮೆಟ್ಟಿಲುಪಾತಿಗಳಲ್ಲಿ ಮಾಡುವ ಕೃಷಿಯೇ ಮುಖ್ಯ ಜೀವನೋಪಾಯದ ಮಾರ್ಗ. ಇದೇ ಕೃಷಿಯಿಂದ ಪಟ್ಟಣಕ್ಕೆ ಹಣ್ಣು ಮತ್ತು ತರಕಾರಿ ಲಭ್ಯವಾಗುತ್ತದೆ.

ಬೇಸಗೆ ಮತ್ತು ವಸಂತಕಾಲಗಳು ಇಲ್ಲಿಗೆ ಬರುವ ಪ್ರವಾಸಿಗರಿಗೆ ಹೆಚ್ಚು ಪ್ರಿಯವಾದ ಕಾಲಗಳು. ಈ ಕಾಲಗಳು ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಡಾರ್ಜಿಲಿಂಗ್‌ನ ಬಹಳಷ್ಟು ನಿವಾಸಿಗಳಿಗೆ ಉದ್ಯೋಗ ಒದಗಿಸುತ್ತವೆ. ಕೆಲವರು ಹೊಟೇಲು ಮತ್ತು ರೆಸ್ಟೋರೆಂಟುಗಳನ್ನು ಸ್ವಂತವಾಗಿ ನಡೆಸುತ್ತಿದ್ದರೆ ಮತ್ತೆ ಕೆಲವರು ಅವುಗಳಲ್ಲಿ ಕೆಲಸ ಮಾಡುತ್ತಾರೆ. ಪ್ರವಾಸೋದ್ಯಮ ಕಂಪನಿಗಳ ಪರವಾಗಿ ಕೆಲಸ ಮಾಡುವ ಮತ್ತು ಮಾರ್ಗದರ್ಶಿಗಳಾಗಿ ಕೆಲಸ ಮಾಡುವ ಮೂಲಕ ಬಹಳಷ್ಟು ಜನ ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಡಾರ್ಜಿಲಿಂಗ್‌ ತನ್ನ ಮನಮೋಹಕ ಪ್ರಕೃತಿ ಸೌಂದರ್ಯದಿಂದಾಗಿ ಬಾಲಿವುಡ್‌ ಮತ್ತು ಬಂಗಾಳಿ ಸಿನೆಮಾಗಳ ಜನಪ್ರಿಯ ಚಿತ್ರೀಕರಣ ತಾಣವಾಗಿದೆ. ಆರಾಧನಾ , ಮೇ ಹೂ ನಾ ಮತ್ತು ಕಾಂಚನಜುಂಗ - ಇಲ್ಲಿ ಚಿತ್ರೀಕರಣಗೊಂಡ ಕೆಲವು ಜನಪ್ರಿಯ ಚಿತ್ರಗಳು. ಡಾರ್ಜಿಲಿಂಗ್‌ ಜಿಲ್ಲಾ ಕೇಂದ್ರವಾಗಿರುವುದರಿಂದ ಇಲ್ಲಿನ ಸರ್ಕಾರಿ ಕಚೇರಿಗಳು ಹಲವರಿಗೆ ಉದ್ಯೋಗ ನೀಡಿವೆ. ಬಂಗಾಳ, ಸಿಕ್ಕಿಂ ಮತ್ತು ಟಿಬೆಟ್‌‌ನ ಸಾಂಪ್ರದಾಯಿಕ ಕಲೆಗಳು ಹಾಗೂ ಕರಕುಶಲ ವಸ್ತುಗಳ ಮಾರಾಟದಿಂದ ಡಾರ್ಜಿಲಿಂಗ್‌ನ ಆರ್ಥಿಕತೆಗೆ ಸಣ್ಣ ಪ್ರಮಾಣದ ಕೊಡುಗೆ ಸಿಗುತ್ತಿದೆ.

ಸಾರಿಗೆ

[ಬದಲಾಯಿಸಿ]
ಡಾರ್ಜಿಲಿಂಗ್‌ ಸಮೀಪಿಸುತ್ತಿರುವ "ಆಟಿಕೆ ರೈಲು"

ಸಿಲಿಗುರಿಯಿಂದ ಡಾರ್ಜಿಲಿಂಗ್‌ ಹಿಮಾಲಯನ್‌ ರೈಲ್ವೆ (ಇದನ್ನು "ಆಟಿಕೆ ರೈಲು" ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತದೆ.) ಯಲ್ಲಿ 50 ಮೈಲಿಗಳ ದೂರ ಪ್ರಯಾಣಿಸಿದರೆ (80 ಕಿ.ಮೀ) ಅಥವಾ ರೈಲ್ವೆ ಹಳಿಯನ್ನೇ ಅನುಸರಿಸುವ ಹಿಲ್‌ ಕಾರ್ಟ್‌ ರಸ್ತೆ (ರಾಷ್ಟ್ರೀಯ ಹೆದ್ದಾರಿ 55) ಯ ಮೂಲಕ ಪ್ರಯಾಣಿಸಿದರೆ ಡಾರ್ಜಿಲಿಂಗ್‌ ತಲುಪಬಹುದು. ಡಾರ್ಜಿಲಿಂಗ್‌ ಹಿಮಾಲಯನ್‌ ರೈಲ್ವೆಯು 60 ಸೆಂ.ಮೀ.(2 ಅಡಿ) ಗಳ ನ್ಯಾರೋ-ಗೇಜ್‌ ರೈಲ್ವೆಯಾಗಿದೆ. ಇದು 1999ರಲ್ಲಿ UNESCOದಿಂದ ವಿಶ್ವ ಪರಂಪರೆ ತಾಣ ಎಂದು ಘೋಷಿಸಲ್ಪಟ್ಟಿದ್ದು, ಈ ಗೌರವ ಪಡೆದ ವಿಶ್ವದ ಎರಡನೇ ರೈಲ್ವೆಯಾಗಿದೆ.[] ನಿಯಮಿತವಾಗಿ ಸಾರಿಗೆ ಸೇವೆ ಒದಗಿಸುವ ಬಸ್‌ಗಳು ಮತ್ತು ಬಾಡಿಗೆ ವಾಹನಗಳು ಡಾರ್ಜಿಲಿಂಗ್‌‌ನ್ನು ಸಿಲಿಗುರಿ ಮತ್ತು ಅಕ್ಕಪಕ್ಕದ ಪಟ್ಟಣಗಳಾದ ಕುರ್ಸೆಯಾಂಗ್, ಕಾಲಿಂಪಾಂಗ್‌ ಮತ್ತು ಗ್ಯಾಂಗ್ಟಕ್‌ಗಳಿಗೆ ಸಂಪರ್ಕಿಸುತ್ತವೆ. ಕಡಿದಾದ ಇಳಿಜಾರುಗಳಿಂದ ಕೂಡಿದ ಈ ಪ್ರದೇಶವನ್ನು ಲ್ಯಾಂಡ್‌ ರೋವರ್‌ಗಳು ಸುಲಭವಾಗಿ ಕ್ರಮಿಸುವುದರಿಂದ ಇವುಗಳನ್ನು ಒಳಗೊಂಡಂತೆ ನಾಲ್ಕು ಚಕ್ರದ ವಾಹನಗಳು ಇಲ್ಲಿನ ಜನಪ್ರಿಯ ಸಾರಿಗೆ ವಾಹನಗಳಾಗಿವೆ. ಆದರೂ, ಮಳೆಗಾಲದಲ್ಲಿ ಉಂಟಾಗುವ ಭೂಕುಸಿತಗಳಿಂದಾಗಿ ಇಲ್ಲಿನ ರಸ್ತೆ ಮತ್ತು ರೈಲ್ವೆ ಸಂಪರ್ಕಗಳು ಆಗಿಂದಾಗ್ಗೆ ತೊಂದರೆಗೊಳಗಾಗುತ್ತಲೇ ಇರುತ್ತವೆ. ಡಾರ್ಜಿಲಿಂಗ್‌ಗೆ ಅತ್ಯಂತ ಸಮೀಪದ ವಿಮಾನನಿಲ್ದಾಣ ಇಲ್ಲಿಗೆ 93 ಕಿ.ಮೀ.(58 ಮೈಲಿಗಳು) ದೂರದಲ್ಲಿ ಸಿಲಿಗುರಿಗೆ ಸಮೀಪವಿರುವ ಬಾಗ್ದೋಗ್ರದಲ್ಲಿದೆ.

ಇಂಡಿಯನ್‌ ಏರ್‌ಲೈನ್ಸ್, ಜೆಟ್‌ ಏರ್‌ವೇಸ್‌ ಮತ್ತು ಏರ್‌ ಡೆಕ್ಕನ್‌ - ಇವು ಇಲ್ಲಿನ ಮೂರು ಪ್ರಮುಖ ವಿಮಾನ ಸಾರಿಗೆಗಳಾಗಿದ್ದು ಈ ಪ್ರದೇಶವನ್ನು ದೆಹಲಿ, ಕೋಲ್ಕತ್ತಾ ಮತ್ತು ಗುವಾಹಟಿಗಳಿಗೆ ಸಂಪರ್ಕಿಸುತ್ತವೆ. ಅತ್ಯಂತ ಸಮೀಪದ ರೈಲ್ವೆ ನಿಲ್ದಾಣವು ಹೊಸ ಜಲ್‌‌ಪೈಗುರಿಯಲ್ಲಿದೆ. ಇದು ದೇಶದ ಬಹುತೇಕ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಪಟ್ಟಣದ ವ್ಯಾಪ್ತಿಯೊಳಗೆ ಜನರು ಸಾಮಾನ್ಯವಾಗಿ ಕಾಲ್ನಡಿಗೆಯಲ್ಲೇ ಸಂಚರಿಸುತ್ತಾರೆ. ಕಡಿಮೆ ದೂರದ ಸ್ಥಳಗಳನ್ನು ತಲುಪಲು ಇಲ್ಲಿನ ನಿವಾಸಿಗಳು ಬೈಸಿಕಲ್, ದ್ವಿಚಕ್ರ ವಾಹನಗಳು ಮತ್ತು ಬಾಡಿಗೆ ಟ್ಯಾಕ್ಸಿಗಳನ್ನು ಬಳಸುತ್ತಾರೆ. ಡಾರ್ಜಿಲಿಂಗ್ ಹಗ್ಗದ‌ಮಾರ್ಗ (ಇದಕ್ಕೆ ಕೇಬಲ್‌ ಕಾರು ಎಂಬ ಹೆಸರೂ ಇದೆ) 1968 ರಿಂದ 2003ರವರೆಗೆ ಕಾರ್ಯ ನಿರ್ವಹಿಸಿತು. ಆದರೆ ಒಮ್ಮೆ ಅಪಘಾತ ಸಂಭವಿಸಿ ನಾಲ್ಕು ಪ್ರವಾಸಿಗರು ಮೃತರಾದ ದುರ್ಘಟನೆಯ ನಂತರ ಇದನ್ನು ನಿಲ್ಲಿಸಲಾಗಿದೆ.[೨೬][೨೭]

ಜನಸಂಖ್ಯಾ ವಿಚಾರ

[ಬದಲಾಯಿಸಿ]
ಚಿತ್ರ:Darjeelinghillhouses.jpg
ಪಟ್ಟಣದಲ್ಲಿನ ಕಾಂಕ್ರೀಟ್‌/ಇಟ್ಟಿಗೆ ಮತ್ತು ಮರದಿಂದ ನಿರ್ಮಾಣಗೊಂಡಿರುವ ಮನೆಗಳು

ಡಾರ್ಜಿಲಿಂಗ್‌ ನಗರ ಸಂಘಟನೆ (ಇದು ಪಟ್ಟಬಾಂಗ್‌ ಚಹಾ ತೋಟವನ್ನೂ ಒಳಗೊಂಡಿದೆ.) 12.77 ಚದರ ಕಿ.ಮೀ(4.93 ಚದರ ಮೈಲಿ) ಪ್ರದೇಶವನ್ನು ಒಳಗೊಂಡಿದ್ದು 109,163ರಷ್ಟು ಜನಸಂಖ್ಯೆಯನ್ನು ಹೊಂದಿದೆ; ಇದೇವೇಳೆ ಪುರಸಭಾ ಪ್ರದೇಶವು 107,530ರಷ್ಟು ಜನಸಂಖ್ಯೆಯನ್ನು ಹೊಂದಿದೆ.[೨೦] ಇದೇ ಅಲ್ಲದೆ ಪಟ್ಟಣಕ್ಕೆ ಹೆಚ್ಚುವರಿಯಾಗಿ ಪ್ರತಿನಿತ್ಯ ಸರಾಸರಿ 20,500 – 30,000ದಷ್ಟು ಅಸ್ಥಿರ ಜನಸಂಖ್ಯೆಯೂ ಸೇರುತ್ತದೆ. ಇದು ಪ್ರಮುಖವಾಗಿ ಪ್ರವಾಸಿಗರನ್ನು ಒಳಗೊಂಡಿರುತ್ತದೆ.[] ಪುರಸಭಾ ಪ್ರದೇಶ ವ್ಯಾಪ್ತಿಯ ಜನಸಂಖ್ಯಾ ಸಾಂದ್ರತೆ ಪ್ರತಿ ಚದರ ಕಿ.ಮೀ.ಗೆ 10,173ರಷ್ಟು ಇದೆ.[೨೦] ಪ್ರತಿ 1000 ಪುರುಷರಿಗೆ 1,017 ಮಹಿಳೆಯರಂತೆ[೨೦] ಲಿಂಗ ಅನುಪಾತವಿದ್ದು, ಇದು ರಾಷ್ಟ್ರೀಯ ಸರಾಸರಿ ಅನುಪಾತಕ್ಕಿಂತ ಜಾಸ್ತಿ. ಇಲ್ಲಿನ ಮಹಿಳೆಯರು ಮನೆಯ ದುಡಿಮೆಯ ಸದಸ್ಯರಾಗಿ ಮತ್ತು ಈ ಪ್ರದೇಶದ ಪ್ರಮುಖ ಕಾರ್ಯಪಡೆಯೂಗಿ ಮಹತ್ವದ ಕೊಡುಗೆ ನೀಡುತ್ತಾರೆ. ಇದು ಅತಿಯಾದ ವಲಸೆಯ ಪರಿಣಾಮವಾಗಿದೆ.[]

ಹಿಂದೂಧರ್ಮ ಪ್ರಮುಖ ಧರ್ಮವಾಗಿದ್ದು, ಇದರ ನಂತರ ಬೌದ್ಧಧರ್ಮವಿದೆ.

ಕ್ರೈಸ್ತಧರ್ಮೀಯರು ಮತ್ತು ಮುಸ್ಲಿಮರು ಗಣನೆಗೆ ಸಿಗಬಹುದಾದ ಅಲ್ಪಸಂಖ್ಯಾತ ಸಮುದಾಯವಾಗಿದೆ.[೨೮]

ಇಲ್ಲಿನ ಜನಾಂಗೀಯ ಸಂಯೋಜನೆ ಬಂಗಾಳ, ನೇಪಾಳ, ಭೂತಾನ್‌ ಮತ್ತು ಸಿಕ್ಕಿಂಗಳ ಜನಾಂಗಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಇಲ್ಲಿನ ಜನರಲ್ಲಿ ಬಹುಪಾಲು ಬಂಗಾಳಿ ಮತ್ತು ನೇಪಾಳಿ ಜನಾಂಗೀಯ ಹಿನ್ನೆಲೆಯಿಂದ ಬಂದವರಾಗಿದ್ದಾರೆ. ಇಲ್ಲಿನ ಸ್ಥಳೀಯ ಜನಾಂಗೀಯ ಸಮುದಾಯಗಳಲ್ಲಿ ಇವು ಸೇರಿಕೊಂಡಿವೆ: ತಮಂಗ್‌ಗಳು, ಲೆಪ್ಚಾಗಳು,ಭುಟಿಯಾಗಳು, ಷೆರ್ಪಾಗಳು, ರಾಯಿಸ್‌‌ಗಳು, ಯಮ್ಲೂಗಳು, ದಮಾಯ್‌ಗಳು, ಕಮಾಯ್‌ಗಳು, ನೆವಾರ್‌ಗಳು ಮತ್ತು ಲಿಂಬುಗಳು ಡಾರ್ಜಿಲಿಂಗ್‌ನಲ್ಲಿ ವಾಸಿಸುವ ಇತರೆ ಸಮುದಾಯಗಳಲ್ಲಿ, ಮಾರವಾಡಿಗಳು‌, ಆಂಗ್ಲೋ-ಇಂಡಿಯನ್ನರು, ಚೀನಿಯರು, ಬಿಹಾರಿಗಳು ಮತ್ತು ಟಿಬೆಟಿಯನ್ನರು ಸೇರಿದ್ದಾರೆ.

ಇಲ್ಲಿ ಅತಿ ಹೆಚ್ಚು ಜನರು ಬಳಸುವ ಸಾಮನ್ಯ ಭಾಷೆಯೆಂದರೆ ನೇಪಾಳಿ. ಹಿಂದಿ ಮತ್ತು ಇಂಗ್ಲಿಷ್‌ ಭಾಷೆಗಳೂ ಕೂಡ ಬಳಕೆಯಲ್ಲಿವೆ.

ಕಳೆದ ಶತಮಾನದಲ್ಲಿ, ವಿಶೇಷವಾಗಿ 1970ರ ನಂತರದಲ್ಲಿ ಡಾರ್ಜಿಲಿಂಗ್‌ನ ಜನಸಂಖ್ಯೆ ಗಣನೀಯವಾಗಿ ಬೆಳೆದಿದೆ. 1990ರ ದಶಕದಲ್ಲಿ ವಾರ್ಷಿಕ ಬೆಳವಣಿಗೆ ದರವು ಅತಿ ಹೆಚ್ಚು ಎಂದರೆ 45%ವರೆಗೂ ತಲುಪಿತು. ಇದು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಸರಾಸರಿ ಬೆಳವಣಿಗೆಗಿಂತ ಜಾಸ್ತಿಯಾಗಿದೆ.[] ಈ ವಸಾಹತು ಪಟ್ಟಣವನ್ನು ಕೇವಲ 10,000ದಷ್ಟು ಜನಸಂಖ್ಯೆಯನ್ನು ಗಮನದಲ್ಲಿರಿಸಿಕೊಂಡು ರೂಪಿಸಲಾಗಿತ್ತು. ನಂತರದ ದಿನಗಳಲ್ಲಿ ಉಂಟಾದ ಜನಸಂಖ್ಯಾ ಬೆಳವಣಿಗೆಯಿಂದಾಗಿ ಮೂಲಭೂತ ಸೌಲಭ್ಯಗಳು ಮತ್ತು ಪರಿಸರೀಯ ಸಮಸ್ಯೆಗಳನ್ನು ವ್ಯಾಪಕ ಪ್ರಮಾಣದಲ್ಲಿ ಹುಟ್ಟುಹಾಕಿತು. ಭೂವೈಜ್ಞಾನಿಕ ಲಕ್ಷಣಗಳಿಗೆ ಸಂಬಂಧಿಸಿದಂತೆ ಈ ಪ್ರದೇಶವು ಹೊಸದಾಗಿ ರೂಪುಗೊಂಡಿರುವಂಥಾದ್ದಾಗಿದ್ದು ಅಸ್ಥಿರ ಲಕ್ಷಣವನ್ನು ಹೊಂದಿದೆ. ಹಾಗಾಗಿ ಹೆಚ್ಚಿನ ಪ್ರಮಾಣದ ಪರಿಸರೀಯ ಸಮಸ್ಯೆಗಳನ್ನು ಎದುರಿಸುತ್ತಿದೆ.[] ಸುತ್ತಮುತ್ತಲ ಬೆಟ್ಟಗಳನ್ನು ಬೋಳು ಮಾಡುತ್ತಿರುವುದೂ ಸೇರಿದಂತೆ ಪರಿಸರದ ಅವನತಿಯು ಒಂದು ಸುಂದರ ಪ್ರವಾಸಿ ತಾಣವಾಗಿದ್ದ ಡಾರ್ಜಿಲಿಂಗ್‌ನ ಆಕರ್ಷಣೆಯು ಕಳೆಗುಂದುವಂತೆ ಮಾಡಿದೆ.[೧೬]

ಸಂಸ್ಕೃತಿ

[ಬದಲಾಯಿಸಿ]
ಹಿಂದೂ ದೇವಾಲಯವೊಂದರ ಸುತ್ತ ಇರುವ ಬೌದ್ಧ ಬರಹಗಳೊಂದಿಗಿನ ಬಣ್ಣ ಬಣ್ಣದ ಧ್ವಜಗಳು ಈ ರೀತಿಯ ಧ್ವಜಗಳು ದುಷ್ಟಶಕ್ತಿಗಳನ್ನು ನಿವಾರಿಸುತ್ತವೆ ಎಂಬುದು ನಂಬಿಕೆ
ಟಿಬೆಟಿಯನ್‌ ನಿರಾಶ್ರಿತರ ಸ್ವಸಹಾಯ ಕೇಂದ್ರ

ಪಟ್ಟಣದ ವಿವಿಧ ಜನಾಂಗಕ್ಕೆ ಸೇರಿದ ಜನತೆಯು, ದೀಪಾವಳಿ, ಕ್ರಿಸ್‌ಮಸ್‌, ದಸರಾ, ಹೋಳಿ ಮುಂತಾದ ಪ್ರಮುಖವಾದ ಧಾರ್ಮಿಕ ಹಬ್ಬಗಳೇ ಅಲ್ಲದೆ ಹಲವು ಸ್ಥಳೀಯ ಹಬ್ಬ-ಹರಿದಿನಗಳನ್ನೂ ಆಚರಿಸುತ್ತದೆ. ಲೆಪ್ಚಾಗಳು ಮತ್ತು ಭುಟಿಯಾಗಳು ಜನವರಿಯಲ್ಲಿ ಹೊಸ ವರ್ಷವನ್ನು ಆಚರಿಸಿದರೆ, ಟಿಬೆಟಿಯನ್ನರು ತಮ್ಮ ಹೊಸ ವರ್ಷ (ಲೋಸರ್ ‌)ವನ್ನು ಫೆಬ್ರವರಿ-ಮಾರ್ಚ್‌ನಲ್ಲಿ ತಮ್ಮ "ಪ್ರೇತ ನೃತ್ಯ"ದೊಂದಿಗೆ ಆಚರಿಸುತ್ತಾರೆ. ಮಾಘೆ ಸಂಕ್ರಾಂತಿ , ರಾಮ ನವಮಿ , ಚೋಟ್ರಲ್‌ ದುಚೆನ್ ‌, ಬುದ್ಧ ಜಯಂತಿ , ದಲೈ ಲಾಮರ ಹುಟ್ಟುಹಬ್ಬ ಮತ್ತು ತೆಂಡೊಂಗ್‌ ಲ್ಹೋ ರುಮ್‌‌ಫಾತ್‌ ಹಬ್ಬ- ಇವು ಇಲ್ಲಿನ ಜನ ಆಚರಿಸುವ ಕೆಲವು ಇತರೆ ಹಬ್ಬಗಳು. ಇವುಗಳಲ್ಲಿ ಕೆಲವು ಸ್ಥಳೀಯ ಸಂಸ್ಕೃತಿಯ ವೈಶಿಷ್ಟ್ಯಗಳಾಗಿದ್ದರೆ, ಉಳಿದವು ಭಾರತದ ಉಳಿದ ಭಾಗಗಳು, ನೇಪಾಳ, ಭೂತಾನ್ ಹಾಗೂ ಟಿಬೆಟ್‌ನ ಜೊತೆ ಹಂಚಿಕೊಳ್ಳಲಾದ ಹಬ್ಬಗಳಾಗಿವೆ. ಡಾರ್ಜಿಲಿಂಗ್‌ ಇನಿಷಿಯೇಟಿವ್‌ ಎಂದೇ ಹೆಸರಾಗಿರುವ ನಾಗರಿಕ ಸಮಾಜದ ಆಂದೋಲನವು ಹುಟ್ಟುಹಾಕಿರುವ ಡಾರ್ಜಿಲಿಂಗ್‌ ಉತ್ಸವವು ಹತ್ತು ದಿನಗಳ ಉತ್ಸವವಾಗಿದ್ದು, ಪ್ರತಿವರ್ಷ ಚಳಿಗಾಲದಲ್ಲಿ ನಡೆಯುತ್ತದೆ. ಇಲ್ಲಿ ಡಾರ್ಜಿಲಿಂಗ್‌ ಬೆಟ್ಟಗಳ ಶ್ರೇಷ್ಟ ಸಂಗೀತ ಮತ್ತು ಸಾಂಸ್ಕೃತಿ ಪರಂಪರೆಯನ್ನು ಮುಖ್ಯ ವಿಷಯವಾಗಿ ಇರಿಸಿಕೊಂಡು ಅದನ್ನು ಉನ್ನತವಾಗಿ ವರ್ಣಿಸಲಾಗುತ್ತದೆ.[೨೯]

ಡಾರ್ಜಿಲಿಂಗ್‌ನಲ್ಲಿನ ಅತ್ಯಂತ ಜನಪ್ರಿಯ ಆಹಾರವೆಂದರೆ ಮೋಮೋ . ಇದು ಆವಿಯಿಂದ ಬೇಯಿಸಲಾದ ಒಂದು ರೀತಿಯ ಕಣಕದ ಖಾದ್ಯವಾಗಿದ್ದು, ಹಂದಿಮಾಂಸ, ಗೋಮಾಂಸ ಮತ್ತು ತರಕಾರಿಗಳನ್ನು ಕಣಕ ಮುಚ್ಚಿಗೆಯಲ್ಲಿ ಬೇಯಿಸಿ ಇದನ್ನು ತಯಾರಿಸಲಾಗುತ್ತದೆ. ಹೀಗೆ ತಯಾರಿಸಲಾದ ಈ ಖಾದ್ಯವನ್ನು ತಿಳಿಯಾದ ಸೂಪ್‌ನೊಂದಿಗೆ ಬಡಿಸಲಾಗುತ್ತದೆ. ವಾಯ್‌‌-ವಾಯ್‌, ಎಂಬ ಪ್ಯಾಕ್‌ ಮಾಡಲಾಗಿರುವ ಲಘು ಆಹಾರವು ಮುಂಚಿತವಾಗಿಯೇ ಬೇಯಿಸಿರುವ ಶಾವಿಗೆಯನ್ನು ಒಳಗೊಂಡಿದ್ದು, ಇದನ್ನು ಪೊಟ್ಟಣದಿಂದ ನೇರವಾಗಿ ಒಣ ಆಹಾರವಾಗಿಯೇ ಸೇವಿಸಬಹುದು ಇಲ್ಲವೇ ಸೂಪ್‌ ರೂಪದಲ್ಲಿಯೂ ಸೇವಿಸಬಹುದು.

ಹಸು ಅಥವಾ ಚಮರೀಮೃಗದ ಹಾಲಿನಿಂದ ಮಾಡಲಾಗುವ ಚುರ್ಪೀ ಒಂದು ತೆರನಾದ ಗಟ್ಟಿ ಗಿಣ್ಣು. ಕೆಲವು ವೇಳೆ ಇದನ್ನು ಅಗಿದು ತಿನ್ನುತ್ತಾರೆ. ಸೂಪ್ ರೂಪದಲ್ಲಿ ಬಡಿಸಲಾಗುವ, ಶಾವಿಗೆಯ ಒಂದು ರೂಪವಾದ ಟುಕ್ಪಾ ಕೂಡ ಡಾರ್ಜಿಲಿಂಗ್‌ನ ಜನಪ್ರಿಯ ಆಹಾರ. "ಆಲೂ ದಮ್‌" ಇಲ್ಲಿನ ಅತ್ಯಂತ ಜನಪ್ರಿಯ ಲಘು ಆಹಾರ. ಬೇಯಿಸಿದ ಆಲೂಗಡ್ಡೆಯನ್ನು ಮೆಣಸಿನ ಪುಡಿ, ಖಾದ್ಯ ಬಣ್ಣ ಮತ್ತು ಅರಿಶಿಣಗಳಿಂದ ಅಲಂಕರಿಸಿ, ಮಾಂಸರಸದೊಂದಿಗೆ ಪಲ್ಯದಂತೆ ಅಥವಾ ಕೆಲವೊಮ್ಮೆ ನೀರು ನೀರಾಗಿರುವಂತೆ ಈ ಆಹಾರವನ್ನು ತಯಾರಿಸಲಾಗುತ್ತದೆ.ಇದನ್ನು ಬಹುತೇಕವಾಗಿ ಉಪ್ಪಿನಕಾಯಿ ಮತ್ತು ಅಲೂಗಡ್ಡೆ ಚಿಪ್ಸ್‌ ಅಥವಾ ಇತರೆ ಲಘು ತಿಂಡಿಗಳೊಂದಿಗೆ ಸೇವಿಸಲಾಗುತ್ತದೆ. ಇಲ್ಲಿ ಅಪಾರ ಸಂಖ್ಯೆಯ ರೆಸ್ಟಾರಂಟ್‌ಗಳು ಇದ್ದು, ಇವು ಭಾರತೀಯ, ಐರೋಪ್ಯ ಮತ್ತು ಚೀನೀ ಪಾಕಪದ್ಧತಿಯ ವೈವಿಧ್ಯಮಯ ಸಾಂಪ್ರದಾಯಿಕ ಆಹಾರಗಳನ್ನು ತಯಾರಿಸಿ ಪ್ರವಾಸಿಗರನ್ನು ಉಪಚರಿಸುತ್ತವೆ.

ಪ್ರಸಿದ್ಧವಾದ ಡಾರ್ಜಿಲಿಂಗ್ ಚಹಾ ತೋಟಗಳಿಂದ ಸಂಗ್ರಹಿಸಲಾದ ಚಹಾ ಇಲ್ಲಿನ ಜನಪ್ರಿಯ ಪಾನೀಯ; ಜೊತೆಗೆ ಕಾಫೀ ಕೂಡ ಜನಪ್ರಿಯ. "ರಕ್ಷಿ" ಮತ್ತು ಝಾದ್‌ ಹಾಗೂ ತೊಂಗ್ಬಾ", ಇದನ್ನೂ ಇಲ್ಲಿನ ಜನ ಇಷ್ಟಪಡುತ್ತಾರೆ. ಇದು ಛಾಂಗ್‌ನಂತೆಯೇ ಇರುತ್ತದೆ - ಇವೆಲ್ಲ ಇಲ್ಲಿ ಲಭ್ಯವಿರುವ ಸ್ಥಳೀಯ ಪಾನೀಯಗಳು. ಮಿಲ್ಲೆಟ್‌ (ರಾಗಿ, ಜೋಳ, ನವಣೆ, ಸಜ್ಜೆ ಮತ್ತು ಸಾವೆಯಂಥ ಯಾವುದೇ ಧಾನ್ಯ) ನಿಂದ ತಯಾರಿಸುವ ಛಾಂಗ್ ಇಲ್ಲಿನ ಸ್ಥಳೀಯ ತಯಾರಿಕೆಯ ಬಿಯರ್‌ ಆಗಿದೆ.[೩೦]

ವಸಾಹತು ವಾಸ್ತುಶೈಲಿ ಡಾರ್ಜಿಲಿಂಗ್‌ನಲ್ಲಿನ ಹಲವು ಕಟ್ಟಡಗಳ ಗುಣಲಕ್ಷಣವಾಗಿದೆ. ಹಲವು ಟ್ಯೂಡರ್ ಅಣಕು ಶೈಲಿಯ ನಿವಾಸಗಳು, ಗೋಥಿಕ್‌ ಶೈಲಿಯ ಚರ್ಚ್‌ಗಳು, ರಾಜ ಭವನ (ರಾಜ್ಯಪಾಲರ ನಿವಾಸ), ಪ್ಲ್ಯಾಂಟರ್ಸ್‌ ಕ್ಲಬ್‌ (ಚಹಾ ಬೆಳೆಗಾರರ ಕೂಟ) ಮತ್ತು ಹಲವು ಶೈಕ್ಷಣಿಕ ಸಂಸ್ಥೆಗಳು ಇದಕ್ಕೆ ಉದಾಹರಣೆಯಾಗಿವೆ. ಬೌದ್ಧ ಸನ್ಯಾಸಿ ಮಂದಿರಗಳು ಪಗೋಡ ಶೈಲಿಯ ವಾಸ್ತುವಿನ್ಯಾಸವನ್ನು ಹೊಂದಿವೆ. ಡಾರ್ಜಿಲಿಂಗ್‌, ಸಂಗೀತದ ಒಂದು ಕೇಂದ್ರಸ್ಥಾನವಾಗಿ ಮತ್ತು ಸಂಗೀತಗಾರು ಹಾಗೂ ಸಂಗೀತಪ್ರೇಮಿಗಳ ತಾಣವಾಗಿ ಗುರುತಿಸಲ್ಪಟ್ಟಿದೆ. ಸಂಪ್ರದಾಯಗಳು ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಇಲ್ಲಿನ ಸಂಗೀತವು ವಹಿಸಿರುವ ಪಾತ್ರದ ಕುರಿತು ಹೆಮ್ಮೆ ಪಡುವ ಸ್ಥಳೀಯ ಜನರಿಗೆ ಹಾಡುಗಾರಿಕೆ ಮತ್ತು ಸಂಗೀತ ವಾದ್ಯಗಳ ನುಡಿಸುವಿಕೆ ಕಾಲಕ್ಷೇಪ ಅಥವಾ ಮನರಂಜನೆಯ ಸಾಮಾನ್ಯ ವಿಷಯಗಳಾಗಿವೆ.[೩೧] ಪಾಶ್ಚಾತ್ಯ ಸಂಗೀತ ಇಲ್ಲಿನ ಯುವಜನತೆಯಲ್ಲಿ ಬಹು ಜನಪ್ರಿಯವಾಗಿದ್ದು, ನೇಪಾಳಿ ರಾಕ್‌ ಸಂಗೀತಕ್ಕೆ ಡಾರ್ಜಿಲಿಂಗ್‌ ಪ್ರಮುಖ ಕೇಂದ್ರವಾಗಿದೆ.

ಕ್ರಿಕೆಟ್‌ ಮತ್ತು ಫುಟ್‌ಬಾಲ್‌ಗಳು ಡಾರ್ಜಿಲಿಂಗ್‌ನ ಜನಪ್ರಿಯ ಕ್ರೀಡೆಗಳಾಗಿವೆ. ರಬ್ಬರ್‌ ಪಟ್ಟಿ(ಇದನ್ನು ಚುಂಗಿ ಎನ್ನುತ್ತಾರೆ)ಯಿಂದ ಮಾಡಲಾದ ಚೆಂಡಿ‌ನ ಸುಧಾರಿತ ರೂಪವನ್ನು ಇಲ್ಲಿನ ಕಡಿದಾದ ಬೀದಿಗಳಲ್ಲಿ ಆಡಲು ಬಳಸಲಾಗುತ್ತದೆ.

ಭೇಟಿ ಕೊಡಬಹುದಾದ ಇಲ್ಲಿನ ಕೆಲವು ಪ್ರಸಿದ್ಧ ಸ್ಥಳಗಳೆಂದರೆ, ಹಿಂದೂ ಮತ್ತು ಬೌದ್ಧ ದೇವರುಗಳು ಒಟ್ಟಿಗೆ ಪೂಜಿಸಲ್ಪಡುವ ಅನನ್ಯ ಸ್ಥಳವಾದ ಮಹಾಕಾಲ‌ ದೇವಾಲಯ, ಪ್ರಖ್ಯಾತ ಹಿಮಚಿರತೆ, ಕೆಂಪು ಪಾಂಡಾಗಳೂ ಸೇರಿದಂತೆ ಹಿಮಾಲಯದ ಅಪಾಯದಂಚಿನ ಪ್ರಾಣಿಗಳ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಹುಟ್ಟುಹಾಕಲಾದ ಟೈಗರ್‌ ಹಿಲ್ಮೃಗಾಲಯ, ಬೌದ್ಧ ಸನ್ಯಾಸಿ ಮಂದಿರಗಳು ಮತ್ತು ಚಹಾ ತೋಟಗಳು. ಹಿಮಾಲಯದ ಅನನ್ಯತೆ ಮತ್ತು ಸೌಂದರ್ಯದ ಆನಂದವನ್ನು ಅರಸ ಬಯಸುವ ಚಾರಣಿಗರನ್ನು ಮತ್ತು ಕ್ರೀಡಾಪಟುಗಳನ್ನು ಪಟ್ಟಣವು ಆಕರ್ಷಿಸುತ್ತದೆ. ಉಸಿರು ಬಿಗಿ ಹಿಡಿಯುವಂತೆ ಮಾಡುವ ನಯನಮನೋಹರ ದೃಶ್ಯಗಳ ಸಂಧಕ್‌ಫು, ಸಾಹಸಪ್ರಿಯರಿಗೆ ಮೀಸಲಾದ ಜನಪ್ರಿಯವಾದ ಸ್ಥಳವಾಗಿದೆ. ಭಾರತ ಮತ್ತು ನೇಪಾಳದ ಕೆಲವು ಶಿಖರಗಳನ್ನು ಏರುವ ಪ್ರಯತ್ನಗಳಿಗೆ ಇದು ಪ್ರಾರಂಭ ಬಿಂದು ಕೂಡ ಆಗಿದೆ. ಮೌಂಟ್‌ ಎವರೆಸ್ಟ್‌ ಶಿಖರವನ್ನು ಮೊದಲ ಬಾರಿಗೆ ಏರಿದ ಇಬ್ಬರಲ್ಲಿ ತೇನ್‌‌ಸಿಂಗ್‌ ನೋರ್ಗೆ ಕೂಡ ಒಬ್ಬರು. ಇವರು ತಮ್ಮ ಯೌವ್ವನಾವಸ್ಥೆಯ ಬಹುತೇಕ ಕಾಲವನ್ನು ಡಾರ್ಜಿಲಿಂಗ್‌ನ ಷೆರ್ಪಾ ಸಮುದಾಯದಲ್ಲೇ ಕಳೆದರು. ಅವರ ಈ ಯಶಸ್ಸಿನಿಂದಾಗಿ 1954ರಲ್ಲಿ ಡಾರ್ಜಿಲಿಂಗ್‌ನಲ್ಲಿ ಹಿಮಾಲಯನ್ ಮೌಂಟೆನಿಯರಿಂಗ್ ಇನ್‌ಸ್ಟಿಟ್ಯೂಟ್‌ನ (ಹಿಮಾಲಯ ಪರ್ವತಾರೋಹಣ ಸಂಸ್ಥೆ) ಸ್ಥಾಪನೆಯಾಗಲು ಪ್ರಚೋದನೆ ಸಿಕ್ಕಿದಂತಾಯಿತು. ಟಿಬೆಟಿಯನ್‌ ನಿರಾಶ್ರಿತರ ಸ್ವಸಹಾಯ ಕೇಂದ್ರದಲ್ಲಿ ರತ್ನಗಂಬಳಿಗಳು, ಮರ ಮತ್ತು ಚರ್ಮದ ಕಲಾಕೃತಿಗಳಂತಹ ಟಿಬೆಟಿಯನ್ ಕರಕುಶಲ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಘುಮ್‌ ಮಠ,(ಪಟ್ಟಣದಿಂದ5 miles (8.0 km) 8 ಕಿ.ಮೀ ) ಭುಟಿಯಾ ಬುಸ್ಟಿ ಮಠ, ಮಾಗ್‌-ಧೋಂಗ್ ಯೋಲ್‌ಮೋವ ಗಳಂತಹ ಹಲವು ಬೌದ್ಧ ಸನ್ಯಾಸಿ ಮಂದಿರಗಳು ಪ್ರಾಚೀನ ಬೌದ್ಧ ಬರಹಗಳನ್ನು ಸಂರಕ್ಷಿಸಿವೆ.

ಶಿಕ್ಷಣ

[ಬದಲಾಯಿಸಿ]

ಡಾರ್ಜಿಲಿಂಗ್‌ನ ಶಾಲೆಗಳು ರಾಜ್ಯ ಸರ್ಕಾರದಿಂದ ಇಲ್ಲವೇ ಖಾಸಗಿ ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳಿಂದ ನಡೆಸಲ್ಪಡುತ್ತವೆ. ರಾಷ್ಟ್ರೀಯ ಭಾಷೆಯಾದ ಹಿಂದಿ ಮತ್ತು ರಾಜ್ಯದ ಅಧಿಕೃತ ಭಾಷೆಯಾದ ಬೆಂಗಾಲಿಯನ್ನು ಹೇರಲಾಗಿದ್ದರೂ, ಇಲ್ಲಿನ ಶಾಲೆಗಳು ಮುಖ್ಯವಾಗಿ ಇಂಗ್ಲಿಷ್‌ ಮತ್ತು ನೇಪಾಳಿ ಭಾಷೆಗಳನ್ನು ತಮ್ಮ ಬೋಧನಾ ಮಾಧ್ಯಮವಾಗಿ ಬಳಸುತ್ತವೆ.

ಈ ಶಾಲೆಗಳು ICSE, CBSE ಇಲ್ಲವೇ ಪಶ್ಚಿಮ ಬಂಗಾಳ ಮಾಧ್ಯಮಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿರುತ್ತವೆ. ಭಾರತದಲ್ಲಿದ್ದ ಬ್ರಿಟಿಷರಿಗೆ ಬೇಸಗೆ ಕಾಲದ ಆಶ್ರಯಧಾಮವಾಗಿದ್ದ ಡಾರ್ಜಿಲಿಂಗ್, ಅತಿ ಶೀಘ್ರದಲ್ಲಿ ಎಟನ್, ಹ್ಯಾರೋ ಮತ್ತು ರಗ್‌ಬಿ ಮಾದರಿಯ ಪಬ್ಲಿಕ್‌ ಶಾಲೆಗಳ ಸ್ಥಾಪನೆಗೆ ನೆಚ್ಚಿನ ಸ್ಥಳವಾಗಿ ರೂಪುಗೊಂಡಿತು. ಇದರಿಂದಾಗಿ ಬ್ರಿಟಿಷ್ ಅಧಿಕಾರಿಗಳ ಮಕ್ಕಳು ಪ್ರತ್ಯೇಕ ಶಿಕ್ಷಣವನ್ನು ಪಡೆಯಲು ಅವಕಾಶ ನೀಡಿದಂತಾಯಿತು.[೩೨] ಸೇಂಟ್‌ ಜೋಸೆಫ್ಸ್ ಕಾಲೇಜ್ (ಶಾಲಾ ವಿಭಾಗ), ಲೊರೆಟೋ ಕಾನ್ವೆಂಟ್‌, ಸೇಂಟ್‌ ಪಾಲ್ಸ್ ಸ್ಕೂಲ್‌ ಮತ್ತು ಮೌಂಟ್‌ ಹರ್ಮನ್‌ ಸ್ಕೂಲ್‌ ಮುಂತಾದ ಸಂಸ್ಥೆಗಳು ಭಾರತ ಮತ್ತು ದಕ್ಷಿಣ ಏಷ್ಯದ ಎಲ್ಲೆಡೆಯಿಂದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತವೆ. ಹಲವು ಶಾಲೆಗಳು (ಇವುಗಳಲ್ಲಿ ಕೆಲವು ನೂರು ವರ್ಷಗಳಿಗಿಂತ ಹಳೆಯವು) ಬ್ರಿಟಿಷ್‌ ಮತ್ತು ವಸಾಹತು ಪರಂಪರೆಯಿಂದ ಬಂದ ಸಂಪ್ರದಾಯಗಳಿಗೆ ಈಗಲೂ ಅಂಟಿಕೊಂಡಿವೆ. ಡಾರ್ಜಿಲಿಂಗ್‌ ಮೂರು ಕಾಲೇಜುಗಳನ್ನು ಹೊಂದಿದೆ - ಸೇಂಟ್‌ ಜೋಸೆಫ್ಸ್‌ ಕಾಲೇಜ್‌, ಲೊರೆಟೋ ಕಾಲೇಜ್‌, ಸೇಲ್‌ಸಿಯನ್‌ ಕಾಲೇಜ್ ಮತ್ತು ಡಾರ್ಜಿಲಿಂಗ್‌ ಸರ್ಕಾರಿ ಕಾಲೇಜು- ಇವೆಲ್ಲ ಸಿಲಿಗುರಿಯಲ್ಲಿರುವ ಉತ್ತರ ಬಂಗಾಳ ವಿಶ್ವವಿದ್ಯಾಲಯದಿಂದ ಅಂಗೀಕೃತಗೊಂಡಿವೆ.

ಮಾಧ್ಯಮ

[ಬದಲಾಯಿಸಿ]

ಡಾರ್ಜಿಲಿಂಗ್‌ನಲ್ಲಿರುವ ಇಂಗ್ಲಿಷ್‌ ಭಾಷೆಯ ದಿನಪತ್ರಿಕೆಗಳೆಂದರೆ, ಸಿಲಿಗುರಿಯಲ್ಲಿ ಮುದ್ರಣವಾಗುವ ದಿ ಸ್ಟೇಟ್ಸ್‌ಮನ್‌ ಮತ್ತು ದಿ ಟೆಲಿಗ್ರಾಫ್ , ಕೋಲ್ಕೊತ್ತಾದಲ್ಲಿ ಮುದ್ರಣವಾಗುವ ದಿ ಹಿಂದೂಸ್ಥಾನ್‌ ಟೈಮ್ಸ್‌ ಮತ್ತು ಟೈಮ್ಸ್‌ ಆಫ್‌ ಇಂಡಿಯಾ . ಇವುಗಳೆಲ್ಲ ಮುದ್ರಣವಾದ ಒಂದು ದಿನದ ನಂತರ ಇಲ್ಲಿನ ಜನರಿಗೆ ತಲುಪುತ್ತವೆ. ಡಾರ್ಜಿಲಿಂಗ್‌ನಿಂದ ಮುದ್ರಣವಾಗಿ ಬರುವ ಡಾರ್ಜಿಲಿಂಗ್‌ ಟೈಮ್ಸ್ ‌ ಇಲ್ಲಿನ ಏಕೈಕ, ಇಂಗ್ಲಿಷ್‌ ಭಾಷೆಯ ಮಾಸಿಕ ಸುದ್ದಿ-ನಿಯತಕಾಲಿಕವಾಗಿದೆ‌. ಇವುಗಳ ಜೊತೆಗೆ ನೇಪಾಳಿ, ಹಿಂದಿ ಮತ್ತು ಬಂಗಾಳಿ ಪತ್ರಿಕೆಗಳನ್ನೂ ಕಾಣಬಹುದು. "ಸುನ್‌ಚರಿ", "ಹಿಮಾಲಿ ದರ್ಪಣ್‌" ಇಲ್ಲಿನ ನೇಪಾಳಿ ವೃತ್ತಪತ್ರಿಕೆಗಳು. ಸಾರ್ವಜನಿಕ ರೇಡಿಯೋ ಕೇಂದ್ರವಾದ ಆಲ್‌ ಇಂಡಿಯಾ ರೇಡಿಯೋ ಡಾರ್ಜಿಲಿಂಗ್‌ನಲ್ಲಿ ಪ್ರಸಾರವಾಗುವ ಏಕೈಕ ರೇಡಿಯೋ ಕೇಂದ್ರವಾಗಿದೆ. ಇದೇನೆ ಇದ್ದರೂ ದೂರದರ್ಶನದ ವಿಚಾರದಲ್ಲಿ ಮಾತ್ರ, ದೇಶದೆಲ್ಲೆಡೆ ಪ್ರಸಾರವಾಗುವ ಹೆಚ್ಚೂ ಕಡಿಮೆ ಎಲ್ಲ ದೂರದರ್ಶನ ವಾಹಿನಿ‌ಗಳು ಡಾರ್ಜಿಲಿಂಗ್‌‌ನಲ್ಲೂ ದೊರೆಯುತ್ತವೆ. ರಾಜ್ಯ ಸರ್ಕಾರದ ಒಡೆತನದ ಭೌಮಿಕ ಜಾಲ ದೂರ್‌ದರ್ಶನ್‌ ಅನ್ನು ಹೊರತುಪಡಿಸಿ, ಕೇಬಲ್‌ ದೂರದರ್ಶನವು, ಪಟ್ಟಣದ ಬಹುತೇಕ ಮನೆಗಳಿಗೆ ಪ್ರಸಾರ ಸೇವೆ ನೀಡುತ್ತಿದ್ದರೆ, ಹೊರವಲಯದ ಪ್ರದೇಶಗಳು ಮತ್ತು ಶ್ರೀಮಂತ ಕುಟುಂಬಗಳಲ್ಲಿ ಉಪಗ್ರಹ ದೂರದರ್ಶನ ಸಾಮಾನ್ಯವಾಗಿದೆ. ಮುಖ್ಯವಾಹಿನಿಯ ಭಾರತೀಯ ವಾಹಿನಿ‌ಗಳೇ ಅಲ್ಲದೆ ಸ್ಥಳೀಯ ನೇಪಾಳಿ ಭಾಷೆಯ ಚಾನೆಲ್‌ಗಳೂ ಪಟ್ಟಣದಲ್ಲಿ ಪ್ರಸಾರವಾಗುತ್ತವೆ. ಅಂತರಜಾಲ ಸೇವಾಕೇಂದ್ರಗಳು ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಸುಸ್ಥಾಪಿತಗೊಂಡಿದ್ದು, ಡಯಲ್‌-ಅಪ್‌ ಸಂಪರ್ಕದ ಮೂಲಕ ಅಂತರಜಾಲದ ಸೇವೆ ನೀಡುತ್ತವೆ. BSNL, 128 kbit/s ವೇಗದವರೆಗಿನ ಬ್ರಾಂಡ್‌ಬ್ಯಾಂಡ್‌ ಸಂಪರ್ಕದ ಸೀಮಿತ ರೂಪದ ಸೇವೆಯನ್ನು DIAS (ನೇರ ಅಂತರಜಾಲ ಸಂಪರ್ಕ ಸೇವೆ) ಸಂಪರ್ಕಗಳ ಮೂಲಕ ನೀಡುತ್ತದೆ. ಈ ಪ್ರದೇಶದಲ್ಲಿ BSNL, ರಿಲಯನ್ಸ್ ಇನ್ಫೋಕಾಂ, ವೊಡಾಪೋನ್‌, ಏರ್‌ಟೆಲ್‌ ಮತ್ತು ಏರ್‌ಸೆಲ್‌ ನಂತಹ ಸ್ಥಳೀಯ ಸೆಲ್ಯುಲರ್‌ ಕಂಪನಿಗಳು ಸೇವೆ ಒದಗಿಸುತ್ತಿವೆ.

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ "Champagne among teas". Deccan Herald. The Printers (Mysore) Private Ltd. 2005-06-17. Archived from the original on 2007-02-21. Retrieved 2006-07-18.
  2. ೨.೦೦ ೨.೦೧ ೨.೦೨ ೨.೦೩ ೨.೦೪ ೨.೦೫ ೨.೦೬ ೨.೦೭ ೨.೦೮ ೨.೦೯ ೨.೧೦ Khawas, Vimal (2003). "Urban Management in Darjeeling Himalaya: A Case Study of Darjeeling Municipality". The Mountain Forum. Archived from the original on 2004-10-20. Retrieved 2006-05-01.{{cite web}}: CS1 maint: bot: original URL status unknown (link)ಈಗ ಇಲ್ಲಿನ ಅಂತರಜಾಲ‌ ಸಂಗ್ರಹದಲ್ಲಿ ಲಭ್ಯವಿದೆ (7 June 2006ರಂದು ಸಂಪರ್ಕಿಸಲಾಗಿದೆ.)
  3. "Darjeeling Tea". h2g2, BBC. 2005-05-12. Retrieved 2006-08-17.
  4. ೪.೦ ೪.೧ "The History of Darjeeling — The Queen of Hills". Darjeelingpolice. Archived from the original on 2009-07-01. Retrieved 2009-03-11.
  5. ೫.೦ ೫.೧ "History of Darjeeling". darjnet.com. Retrieved 2006-08-17.
  6. "Darjeeling Tea History". Darjeelingnews. Retrieved 2006-05-02.
  7. ೭.೦ ೭.೧ "Mountain Railways of India". UNESCO World Heritage Centre. Retrieved 2006-04-30.
  8. "A Pride of Panners" (PDF Format). Baron Courts of Prestoungrange & Dolphinstoun. p. 43. Retrieved 2006-04-30.
  9. (Lee 1971)
  10. ೧೦.೦ ೧೦.೧ Chakraborty, Subhas Ranjan (2003). "Autonomy for Darjeeling: History and Practice". Experiences on Autonomy in East and North East: A Report on the Third Civil Society Dialogue on Human Rights and Peace (By Sanjoy Borbara). Mahanirban Calcutta Research Group. Retrieved 2006-08-13.
  11. ೧೧.೦ ೧೧.೧ "History of Darjeeling". exploredarjeeling.com. Archived from the original on 2006-04-21. Retrieved 2006-05-02.
  12. Shringla, T.T. (2003). "Travelogues: Toy Train to Darjeeling". India Travelogue. Retrieved 2006-06-08.
  13. Chattopadhyay, S.S. (2005). "Return of the queen". Frontline. 22 (01). Archived from the original on 2007-09-26. Retrieved 2006-07-30. {{cite journal}}: Unknown parameter |month= ignored (help)
  14. "GeneralInformation". zubin.com. Archived from the original on 2006-04-30. Retrieved 2006-04-30.
  15. "Darjeeling". Encyclopædia Britannica. Encyclopædia Britannica Premium Service. Retrieved 2006-07-26.
  16. ೧೬.೦ ೧೬.೧ TERI (2001). "Sustainable Development in the Darjeeling Hill Area" (PDF). Tata Energy Research Institute, New Delhi. (TERI Project No.2000UT64). p. 20. Archived from the original (PDF) on 2006-06-23. Retrieved 2006-05-01.
  17. "Padmaja Naidu Himalayan Zoological Park". Darjeelingnews.net. Retrieved 2006-05-04.
  18. ೧೮.೦ ೧೮.೧ "Weatherbase entry for Darjeeling". Canty and Associates LLC. Archived from the original on 2020-10-22. Retrieved 2006-04-30.
  19. "geography". darjeelingnews.net. Archived from the original on 2006-04-27. Retrieved 2006-04-30.
  20. ೨೦.೦ ೨೦.೧ ೨೦.೨ ೨೦.೩ ೨೦.೪ ೨೦.೫ Directorate of Census Operations, West Bengal (2003). "Table-4 Population, Decadal Growth Rate, Density and General Sex Ratio by Residence and Sex, West Bengal/ District/ Sub District, 1991 and 2001". Retrieved 2006-04-30.
  21. "Assembly Constituencies - Corresponding Districts and Parliamentary Constituencies" (PDF). West Bengal. Election Commission of India. Archived from the original (PDF) on 2008-10-03. Retrieved 2008-10-02.
  22. Directorate of Census Operations, West Bengal (2003). "Table-3 District Wise List of Statutory Towns ( Municipal Corporation, Municipality, Notified Area and Cantonment Board), Census Towns and Outgrowths, West Bengal, 2001". Retrieved 2006-04-30.
  23. "Darjeeling tea growers at risk". BBC News. 2001-07-27. Retrieved 2006-05-08.
  24. ೨೪.೦ ೨೪.೧ Haber, Daniel B (2004-01-14). "Economy-India: Famed Darjeeling Tea Growers Eye Tourism for Survival". Inter Press Service News Agency. Archived from the original on 2006-06-02. Retrieved 2006-05-08.
  25. "Darjeeling Tea Facts". Darjeelingnews.net. Archived from the original on 2006-05-04. Retrieved 2006-05-08.
  26. "Darjeeling ropeway mishap kills four". Page One. The Statesman. 2003-10-20. Archived from the original on 2007-09-29. Retrieved 2007-06-30.
  27. Mookerjee, Soma (2007-06-22). "Darjeeling Ropeway to open again". Bengal. The Statesman. Archived from the original on 2008-04-18. Retrieved 2007-06-30.
  28. "Darjeeling Festivals". darjeelingnews.net. Retrieved 2006-05-01.
  29. Chattopadhyay, S.S. (2003). "The spirit of Darjeeling". Frontline. 20 (25). Archived from the original on 2006-05-13. Retrieved 2006-05-01. {{cite journal}}: Unknown parameter |month= ignored (help)
  30. ಜಾಸ್‌ಚ್ಕೆ, H. Ä. ಟಿಬೆಟಿಯನ್‌-ಇಂಗ್ಲಿಷ್‌ ಡಿಕ್ಷ್‌‌ನರಿ , ಪುಟ. 341. (1881). ಮರುಮುದ್ರಣ: (1987). ಮೋತಿಲಾಲ್‌ ಬನಾರ್ಸಿದಾಸ್‌, ದೆಹಲಿ. ISBN 81-208-0321-3.
  31. Rasaily DP, Lama RP. "The Nature-centric Culture of the Nepalese". The Cultural Dimension of Ecology. Indira Gandhi National Centre for the Arts, New Delhi. Archived from the original on 2006-07-15. Retrieved 2006-07-31.
  32. Lal, Vinay. ""Hill Stations: Pinnacles of the Raj." Review article on Dale Kennedy, The Magic Mountains : Hill Stations and the British Raj". UCLA Social Sciences Computing. Retrieved 2001-07-30.


ಪರಾಮರ್ಶನಗಳು

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]
  • ಡಾರ್ಜಿಲಿಂಗ್‌ ಓಪನ್ ಡೈರೆಕ್ಟರಿ ಪ್ರಾಜೆಕ್ಟ್