ಖುರಸಾನ್
ಖುರಸಾನ್ ಇರಾನಿನ ಈಶಾನ್ಯ ಭಾಗದಲ್ಲಿರುವ ಒಂದು ಪ್ರಾಂತ್ಯವಾಗಿತ್ತು. ಈ ಪ್ರಾಂತ್ಯದ ಜನರು ಮುಖ್ಯವಾಗಿ ಷಿಯಾ ಮುಸ್ಲಿಮರು.[೧] ಈ ಪ್ರಾಂತ್ಯವನ್ನು ೨೦೦೪ರಲ್ಲಿ ಮೂರು ಪ್ರತ್ಯೇಕ ಆಡಳಿತ ವಿಭಾಗಗಳಾಗಿ ವಿಭಜಿಸಲಾಯಿತು.[೨]
ಭೌಗೋಳಿಕ ವಿವರಗಳು
[ಬದಲಾಯಿಸಿ]ಉತ್ತರದಲ್ಲಿ ಹಿಂದಿನ ಟರ್ಕ್‌ಮೆನ್ ಸೋವಿಯತ್ ಸಮಾಜವಾದಿ ಗಣರಾಜ್ಯವೂ (ಈಗಿನ ತುರ್ಕ್ಮೇನಿಸ್ಥಾನ್), ಪೂರ್ವಕ್ಕೆ ಆಫ್‌ಘಾನಿಸ್ಥಾನವೂ, ಇತರ ದಿಕ್ಕುಗಳಲ್ಲಿ ಇರಾನಿನ ಮಜಾಂದರಾನ್, ಇಸ್‌ಫಹಾನ್, ಕೆರ್‌ಮನ್ ಮತ್ತು ಬಲೂಚಿಸ್ಥಾನ್ ಇವೆ. ವಿಸ್ತೀರ್ಣ (1,20,710) ಚ. ಮೈ. ಜನಸಂಖ್ಯೆ (20,23,612) (1956). ಪ್ರಾಂತ್ಯದ ಆಡಳಿತ ಕೇಂದ್ರ ಮೆಷೆದ್ (2,307,177 - 2020) ಆಗಿತ್ತು.[೩] ಸಮಾನಾಂತರವಾಗಿ ಹಬ್ಬಿರುವ ಎರಡು ಪರ್ವತಶ್ರೇಣಿಗಳು ಪ್ರಾಂತ್ಯದ ಉತ್ತರಭಾಗವನ್ನು ಆಕ್ರಮಿಸಿಕೊಂಡಿವೆ. ಒಂದು ಎಲ್‌ಬುರ್ಜ಼್ ಶ್ರೇಣಿಯ ಪೂರ್ವದ ವಿಸ್ತರಣ, ಇನ್ನೊಂದು ಕೋಪೇತ್ ದಾಗ್ ಎಂಬ ಸ್ವತಂತ್ರ ಶ್ರೇಣಿ. 10,000' ಗಿಂತ ಉನ್ನತವಾದ ಎರಡು ಶಿಖರಗಳಿವೆ. ದಕ್ಷಿಣದಲ್ಲೂ 7,000'-9,000' ಎತ್ತರದ ಶ್ರೇಣಿಗಳುಂಟು.
ಮರುಭೂಮಿ: ದಾಷ್ತ್ ಇ ಕಾವೀರ್ ಎಂಬ ಲವಣ ಮರುಭೂಮಿ ಖುರಸಾನ್ ಒಳಕ್ಕೆ ಚಾಚಿಕೊಂಡಿದೆ. ಈ ಮರುಭೂಮಿಯಲ್ಲಿ ಅಲ್ಲಲ್ಲಿ ಉಸುಬಿನಿಂದ ಕೂಡಿದ ಜವುಗುನೆಲವುಂಟು. ಕಾವೀರ್-ಇ ನಮಕ್, ಬಿಜಿಸ್ತಾನ್ ಮುಂತಾದ ಇತರ ಜವುಗುನೆಲಗಳೂ ಉಂಟು. ಆದರೆ ದಕ್ಷಿಣಕ್ಕೆ ಸಾಗಿದಂತೆ ನೆಲ ಶುಷ್ಕವಾಗುತ್ತದೆ. ಇಲ್ಲಿ ವಿಶಾಲವಾದ ಮರಳುಗುಡ್ಡೆಗಳೂ ಉಂಟು. ಉತ್ತರದಲ್ಲಿ ಅನೇಕ ದೊಡ್ಡ ಓಯಸಿಸ್‌ಗಳಿವೆ. ದಕ್ಷಿಣದಲ್ಲಿ ಓಯಸಿಸ್‌ಗಳ ಸಂಖ್ಯೆ ಕಡಿಮೆ. ಅವು ಚಿಕ್ಕವು. ಅನೇಕ ಕಡೆಗಳಲ್ಲಿ ವಸಂತಕಾಲದ ಮಳೆಯಿಂದ ಓಯಸಿಸ್‌ಗಳಿಗೆ ಗೋದಿ ಬಾರ್ಲಿಗಳಿಗೆ ಸಾಕಾಗುವಷ್ಟು ನೀರು ಲಭ್ಯವಾಗುತ್ತದೆ. ಉಳಿದೆಡೆಗಳಲ್ಲಿ ಓಯಸಿಸ್‌ಗಳಿಗೆ ನೆಲದ ಅಡಿಯ ನಾಲೆಗಳೂ ಬಾವಿಗಳೂ ಆಧಾರ.
ನದಿಗಳು: ಖುರಸಾನಿನ ವಾಯುಗುಣ ಖಂಡಾಂತರ ಮಾದರಿಯದು; ಆರೋಗ್ಯಕರ. ಚಳಿಗಾಲದಲ್ಲಿ ಚಳಿ ಹೆಚ್ಚು. ಖುರಸಾನ್‌ನಲ್ಲಿರುವ ನದಿಗಳೆಲ್ಲ ಚಿಕ್ಕವು. ಅನೇಕ ನದಿಗಳು ಮಳೆಗಾಲದಲ್ಲಿ ಸ್ವಲ್ಪ ದೂರ ಹರಿದು ಬತ್ತಿ ಹೋಗುತ್ತವೆ. ಆಟ್ರೆಕ್ ಒಂದು ಮುಖ್ಯ ನದಿ; ಕ್ಯಾಸ್ಪಿಯನ್ ಸಮುದ್ರವನ್ನು ಸೇರುತ್ತದೆ. ಕಲ್-ಇ-ಮುರೆ, ರುದ್-ಇ-ಷುರ್, ಕಷಾಫ್ ರುದ್ ಇವು ಇತರ ನದಿಗಳು. ಇವನ್ನೆಲ್ಲ ಬಹಳ ಮಟ್ಟಿಗೆ ಬೇಸಾಯಕ್ಕೆ ಉಪಯೋಗಿಸಿಕೊಳ್ಳುತ್ತಾರೆ. ಈ ನದಿಗಳು ಅಂತ್ಯಭಾಗದಲ್ಲಿ ಉಪ್ಪು ನೀರಿನಿಂದ ಕೂಡಿರುತ್ತವೆ.
ಜನಜೀವನ, ಕೃಷಿ
[ಬದಲಾಯಿಸಿ]ಖುರಸಾನಿನಲ್ಲಿ ಟರ್ಕ್‌ಮೆನ್, ಕುರ್ದ್, ತೈಮೂರಿ, ಜಮ್‌ಷಿದಿ, ಹೈದರಿ, ಇರಾನಿಯನ್, ಬರ್ಬರಿ, ಅರಬ್, ಜಿಪ್ಸಿ, ಯಹೂದಿ-ಮುಂತಾದ ಅನೇಕ ಪಂಗಡಗಳ ಜನರಿದ್ದಾರೆ. ಆ ಪ್ರದೇಶದ ಇತಿಹಾಸವೇ ಇದಕ್ಕೆ ಕಾರಣ.
ಖುರಸಾನಿನ ಜನರ ಮುಖ್ಯ ಕಸುಬು ಕೃಷಿ. ಹಣ್ಣು, ಧಾನ್ಯ, ಹತ್ತಿ, ಹೊಗೆಸೊಪ್ಪು, ಎಣ್ಣೆಬೀಜ, ಕುಸುಂಬೆ, ರೇಷ್ಮೆ ಮುಖ್ಯ ಉತ್ಪನ್ನಗಳು. ಅರಣ್ಯಗಳಿಂದ ಇಂಗು ಮತ್ತು ಗೋಂದು ಸಂಗ್ರಹವಾಗುತ್ತವೆ. ಜಾನುವಾರು ಸಮೃದ್ಧವಾಗಿದೆ. ನಿಷಾಪುರ್ ಬಳಿಯ ಮಾದಾನ್‌ನಲ್ಲಿ ವೈಡೂರ್ಯ ಸಿಗುತ್ತದೆ.[೪][೫] ಉಪ್ಪು ಇನ್ನೊಂದು ಉತ್ಪನ್ನ. ಕಬ್ಬಿಣ, ತಾಮ್ರ, ಸೀಸಗಳೂ ಅಲ್ಪ ಪರಿಮಾಣಗಳಲ್ಲಿ ಲಭ್ಯ ಉಂಟು. ಕೈಗಾರಿಕೆ ಹೆಚ್ಚಿಲ್ಲ. ಆಹಾರ ಪರಿಷ್ಕರಣ ಮುಖ್ಯವಾದ್ದು. ಇದಕ್ಕೆ ಮೆಷೆದ್ ಕೇಂದ್ರ. ಜಮಖಾನೆ, ಚರ್ಮ, ಹತ್ತಿ ಸರಕು, ಉಣ್ಣೆ, ಗೋಂದು, ವೈಡೂರ್ಯ-ಇವು ನಿರ್ಯಾತಗಳು. ಪ್ರಾಂತ್ಯದ ಮುಖ್ಯ ಪಟ್ಟಣ ಮೆಷಿದ್. ಟೆಹರಾನ್‌ಗೂ ಇಲ್ಲಿಗೂ ಟ್ರಾನ್ಸ್-ಇರಾನಿಯನ್ ರೈಲ್ವೆ ಸಂಪರ್ಕವುಂಟು. ಇಲ್ಲಿಂದ ತುರ್ಕ್‌ಮೆನಿಸ್ತಾನ್‍ನ ಅಷ್ಕಾಬಾದ್‌ಗೂ, ಜ಼ಹೀದಾನ್ ಮತ್ತು ಸೇಸ್ತಾನ್‌ಗೂ ರೈಲುಮಾರ್ಗಗಳುಂಟು. ಮೆಷೆದ್‌ನಲ್ಲಿರುವ ಇಮಾಂ ರೇಜ಼ಾ ಮಸೀದಿ ಷಿಯ ಮುಸ್ಲಿಮರಿಗೆ ಪವಿತ್ರವಾದ್ದು.[೬]
ಚರಿತ್ರೆ
[ಬದಲಾಯಿಸಿ]ಖುರಸಾನ್ ಅಥವಾ ಉದಿತೋದಿತ ಸೂರ್ಯನ ನಾಡು ಒಮ್ಮೆ ತುಂಬ ಪ್ರಸಿದ್ಧವಾಗಿತ್ತು.[೭] ಈಗ ಸೋವಿಯತ್ ದೇಶ ಮತ್ತು ಆಫ್ಘಾನಿಸ್ಥಾನದಲ್ಲಿರುವ ಪ್ರದೇಶಗಳೂ ಇದಕ್ಕೆ ಸೇರಿದ್ದುವು. 651-995ರ ವರೆಗೆ ಅರಬರು ಇದನ್ನು ಆಕ್ರಮಿಸಿಕೊಂಡಿದ್ದರು; 821-995ರ ವರೆಗೆ ಆಳಿದ ತಹಿರಿದ್, ಸಫರಿದ್ ಮತ್ತು ಸಮನಿದ್ ರಾಜವಂಶಗಳ ಆಳ್ವಿಕೆಯಲ್ಲಿ ಇದು ಸ್ವಾತಂತ್ರ್ಯ ಪಡೆಯಿತು. ಇರಾನಿಯನ್ ಸಂಸ್ಕೃತಿಯ ಪುನರುಜ್ಜೀವನವಾಯಿತು. ಘಜ್ನವಿಡ್, ಸೆಲ್‌ಜುಕ್, ಖ್ವಾರಿಜಂ ಆಳ್ವಿಕೆಗೂ ಸೇರಿತ್ತು. 1220ರಲ್ಲಿ ಚಿಂಗಜ಼್ ಖಾನನೂ, 1383ರಲ್ಲಿ ತೈಮೂರನು ಇದನ್ನು ದಾಳಿ ಮಾಡಿದರು. ಸಫವಿದ್ ರಾಜರು ಉಜ಼್ಬೇಕ್‌ನ ಆಕ್ರಮಣದ ವಿರುದ್ಧ ಇಲ್ಲಿ ಕಾದಾಟ ನಡೆಸಿದರು. ನಾದಿರ್ ಷಹನ ಮರಣದ ಅನಂತರ ಆಫ್ಘನರು ಇದನ್ನು ಆಕ್ರಮಿಸಿಕೊಂಡರು. ಕೆಲವು ಭಾಗವನ್ನು ಮಾತ್ರ ಖಾಜ಼ಾರರು ಮತ್ತೆ ಪಡೆದುಕೊಂಡರು. ಖುರಸಾನಿನ ಈಗಿನ ಸ್ವರೂಪ ಅದಕ್ಕೆ ಪ್ರಾಪ್ತವಾದ್ದು 1881ರಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ Khorasan tasnimnews Retrieved 1 September 2020
- ↑ Online edition, Al-Jazeera Satellite Network. "Iran breaks up largest province". Archived from the original on 20 ಮೇ 2006. Retrieved 30 ಏಪ್ರಿಲ್ 2006.
- ↑ "Razavi Khorasan (Iran): Counties & Cities – Population Statistics in Maps and Charts". citypopulation.de.
- ↑ "Turquoise Quality Factors". Gemological Institute of America.
- ↑ Scheffel, Richard L.; Wernet, Susan J., eds. (1980). Natural Wonders of the World (in ಇಂಗ್ಲಿಷ್). United States of America: Trusted Media Brands. p. 271. ISBN 0-89577-087-3.
- ↑ Hafiz, Yasmine (2014-04-24). "Imam Reza Shrine Is The Heart Of Shi'ite Iran And The World's Largest Mosque-- See It Through A Pilgrim's Eyes (PHOTOS)". Huffington Post (in ಅಮೆರಿಕನ್ ಇಂಗ್ಲಿಷ್). Archived from the original on 2017-05-08. Retrieved 2017-10-24.
- ↑ Compare Levant and Mashriq.