ತೈಮೂರ್ ಲಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ತೈಮೂರ್ (1336 - 1405) ಜಗತ್ತಿನ ಮಹಾ ಆಕ್ರಮಣಕಾರರಲ್ಲಿ ಒಬ್ಬ. ತುರ್ಕಿ ಬುಡಕಟ್ಟಿಗೆ ಸೇರಿದವ. ಕುಂಟನಾಗಿದ್ದರಿಂದ ಈತನಿಗೆ ತೈಮೂರ್ ಲಂಗ್ ಎಂಬ ಹೆಸರೂ ಬಳಕೆಯಲ್ಲಿದೆ.

ಬದುಕು[ಬದಲಾಯಿಸಿ]

ತೈಮೂರ್ ಹುಟ್ಟಿದ್ದು ರಷ್ಯದ ಟ್ರಾನ್ಸ್‍ಆಕ್ಸಿಯಾನದ ಕೆಷ್ ಎಂಬ ಹಳ್ಳಿಯಲ್ಲಿ. ಈತನ ತಂದೆ ತರಗಾಯ್; ಈತ ಬಾರ್ಲಾಸ್ ಎಂಬ ತುರ್ಕಿ ನಾಯಕನಾಗಿದ್ದ. ಈತ ಮಂಗೋಲ್ ವಂಶಸ್ಥನೂ ಹೌದು. ತರಗಾಯ್ ಇಸ್ಲಾಂ ಮತವನ್ನು ಸ್ವೀಕರಿಸಿದ್ದ. ತೈಮೂರ್ ಆ ಮತದ ನಿಷ್ಠಾವಂತ ಅನುಯಾಯಿಯಾಗಿ ಬೆಳೆದ. ಜಗತ್ತನ್ನೇ ಗೆಲ್ಲುವ ಮಹತ್ತ್ವಾಕಾಂಕ್ಷೆಯನ್ನೇ ಅಲ್ಲದೆ, ಅದನ್ನು ಇಸ್ಲಾಂ ಧರ್ಮಕ್ಕೆ ಶರಣಾಗುವಂತೆ ಮಾಡುವ ಆಸೆಯನ್ನೂ ಈತ ಬೆಳೆಸಿಕೊಂಡ.

ತೈಮೂರನ ಕಾಲದಲ್ಲಿ ಜೆಂಗಿಸ್ ಖಾನ್ ಕಟ್ಟಿದ್ದ ಸಾಮ್ರಾಜ್ಯ ಅನೇಕ ಸಣ್ಣ ಪುಟ್ಟ ರಾಜ್ಯಗಳಾಗಿ ಒಡೆದು ಹೋಗಿತ್ತು. ಅಂತಃಕಲಹಗಳಿಂದಾಗಿ ಈ ರಾಜ್ಯಗಳು ದುರ್ಬಲವಾಗಿದ್ದವು, ಈ ಸನ್ನಿವೇಶ ತೈಮೂರನಂಥ ಯೋಧನಿಗೆ ಸುವರ್ಣ ಅವಕಾಶ ಒದಗಿಸಿತು. ನಾಲ್ಕು ಮಂಗೋಲ್ ರಾಜ್ಯಗಳೊಡನೆ, ತೈಮೂರ್ ನಿಕಟಸಂಬಂಧ ಹೊಂದಿದ್ದ. ಅವುಗಳ ಪೈಕಿ ಕಿಪ್‍ಚಾಕ್ ರಾಜ್ಯವನ್ನು ಜೆಂಗಿಸ್‍ಖಾನನ ಜ್ಯೇಷ್ಠ ಪುತ್ರನ್ ವಂಶಸ್ಥರು ಆಳುತ್ತಿದ್ದರು. ಎರಡನೆಯದು ಮವಾರ್ ಉನ್ನಾರ್, ಅಲ್ಲ ಜಗ್ಗತಾಯ್ ವಂಶಸ್ಥರಿದ್ದರು. ಆ ಪ್ರದೇಶದಲ್ಲೇ ತೈಮೂರ್ ಹುಟ್ಟಿದ್ದು. ಮೂರನೆಯದು ಮೊಗಲಿತಾನ್. ನಾಲ್ಕನೆಯದು ಇಲ್ಯಾನರ ರಾಜ್ಯ. ಇದು ಪಶ್ಚಿಮದಲ್ಲಿ ಮೆಸಪೊಟೇಮಿಯದವರೆಗೂ ಹಬ್ಬಿತ್ತು. ಜೆಂಗೀಸ್‍ಖಾನನಂತೆ ಅತ್ಯಂತ ಮಹತ್ವಾಕಾಂಕ್ಷಿಯಾಗಿದ್ದ ತ್ರೈಮೂರ್ ಸ್ವಂತಂತ್ರ ರಾಜ್ಯ ಸ್ಥಾಪನೆಗೆ ಅವಕಾಶಕ್ಕಾಗಿ ಕಾಯುತ್ತಿದ್ದ. 1361ರ ಅನಂತರ ಈತ ಟ್ರಾನ್ಸ್ ಅಕ್ಸಿಯಾನದ ಇಲಿಯಾಸ ಖೋಜನಲ್ಲಿ ಮಂತ್ರಿಯಾಗಿದ್ದ. ಆದರೆ ಸ್ವಲ್ಪ ಕಾಲದ ತರುವಾಯ ತೈಮೂರ್ ಅಲ್ಲಿಂದ ಓಡಿಹೋಗಿ ತನ್ನ ಭಾವನಾದ ಅಮೀರ್ ಹುಸೇನನನ್ನು ಸೇರಿಕೊಂಡ. ಇಬ್ಬರೂ ಸೇರಿ ಸಾಹಸದಿಂದ ಹೋರಾಟ ನಡೆಸಿ, ಇಲಿಯಾಸ್ ಖೋಜನನ್ನು ಸೋಲಿಸಿದರು. (1364). 1369 ರ ವೇಳೆಗೆ ತೈಮೂರ್ ಸ್ವತಂತ್ರ ಪಾಳೆಯಗಾರನಾಗಿದ್ದ. 1370ರಲ್ಲಿ ತನ್ನ ಭಾವ ಹುಸೇನ ಮೇಲೆಯೇ ತಿರುಗಿಬಿದ್ದು ಅವನನ್ನು ಕೊಂದು ಜಗ್‍ತಾಯ್ ವಂಶದ ರಾಜ್ಯಕ್ಕೆ ಮೇಲೆಯೇ ತಿರುಗಿಬಿದ್ದು ಅವನನ್ನು ಕೊಂದು ಸಾಮ್ರಾಜ್ಯದ ಪುನಃಸ್ಥಾಪಕನೆಂದೂ ಸಾಮರ್‍ಕಾಂದಿನಲ್ಲಿ ಸಾರಿಕೊಂಡ. ತನ್ನನ್ನು ಸಾಮರ್‍ಕಾಂದಿ ಸಮ್ರಾಟನೆಂದು ಘೋಷಿಸಿಕೊಂಡು ರಾಜ್ಯವಾಳತೊಡಗಿದ.

ಮುಂದಿನ 10 ವರ್ಷ ತೈಮೂರ್ ಪೂರ್ವ ತುರ್ಕಿಸ್ತಾನದ ಜಟಾ ಪ್ರದೇಶದ ಖಾನರೊಡನೆ ಹೋರಾಟ ನಡೆಸಬೇಕಾಯಿತು. ಇದರಲ್ಲಿ ಜಯಶೀಲನಾದ ತೈಮೂರ್ 1380ರಲ್ಲಿ ಕಾಷ್‍ಗಾರನ್ನು ವಶಪಡಿಸಿಕೊಂಡ. 1383 ರಲ್ಲಿ ಹೆರಾತ್ ಪಟ್ಟಣವನ್ನು ಗೆದ್ದು ಪರ್ಷಿಯದ ದಂಡಯಾತ್ರೆಯನ್ನು ಪ್ರಾರಂಭಿಸಿದ. ಆ ಕಾಲದಲ್ಲಿ ಪರ್ಷಿಯದ ರಾಜಕೀಯ ಮತ್ತು ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿತ್ತು. ಅಂತಃಕಲಹ ದ್ವೇಷ ಅಸೂಯೆಗಳಿಗೆ ಒಳಗಾಗಿದ್ದ ರಾಜರು ತೈಮೂರನನ್ನು ಯುದ್ಧದಲ್ಲಿ ಎದುರಿಸಲಾರದೆ ಹೋದರು. ತೈಮೂರ್ ಖುರಾಸಾನ್ ಮತ್ತು ಪೂರ್ವ ಪರ್ಷಿಯವನ್ನು ಸುಲಭವಾಗಿ ವಶಪಡಿಸಿಕೊಂಡ (1383 - 85). 1386 - 1394 ರ ಅವಧಿಯಲ್ಲಿ ಫಾರ್ಸ್, ಇರಾಕ್, ಅಜರ್‍ಬೈಜಾನ್, ಅರ್ಮೀನೀಯ, ಮೆಸಪೊಟೇಮಿಯ ಮತ್ತು ಜಾರ್ಜಿಯಗಳು ತೈಮೂರನ ಕೈಸೇರಿದುವು.

ಈ ದಂಡಯಾತ್ರೆಗಳ ನಡುವೆ ಆಗಾಗ ಗೋಲ್ಡನ್ ಹೋರ್ಡ್ ಪ್ರದೇಶದ ಖಾನನಾದ ತೊಕ್ತಮಿಷ್‍ನ ಮೇಲೆಯುದ್ಧ ಮಾಡಿದೆ. ತೊಕ್ತಮಿಷನ ಸೈನ್ಯ ಅಜರ್ ಬೈಜಾನ್ (1385) ಮತ್ತು ಟ್ರ್ಯಾನ್ಸ್‍ಅಕ್ಸಿಯಾನಗಳ (1388) ಮೇಲೆ ದಾಳಿ ಮಾಡಿ ತೈಮೂರನ ಸೈನ್ಯವನ್ನು ಸೋಲಿಸಿತು. 1391 ರಲ್ಲಿ ತೈಮೂರ್ ತೊಕ್ತಮಿಷನನ್ನು ರಷ್ಯದ ವರೆಗೂ ಹಿಮ್ಮೆಟ್ಟಿಸಿದ. ಅಲ್ಲದೆ ಕದನದಲ್ಲಿ ಅವನನ್ನು ಸೋಲಿಸಿ, ಪದಚ್ಯುತಿಗೊಳಿಸಿದ. ದೃತಿಗೆಡದ ಖಾನ್ ಮತ್ತೆ ಹೊಸ ಸೇನೆಯನ್ನು ಸಂಘಟಿಸಿ 1395 ರಲ್ಲಿ ಕಾಕಸಸ್ ಕಡೆ ನುಗ್ಗಿದ. ಆದರೆ ಕುರ್ ನದಿಯ ಬಲಿ ತೈಮೂರ್ ಅವನನ್ನು ಸಂಪೂರ್ಣವಾಗಿ ಸೋಲಿಸಿದ. ರಷ್ಯವನ್ನು ಪ್ರವೇಶಿಸಿದ ತೈಮೂರ್ ಮಾಸ್ಕೋ ನಗರವನ್ನು ಒಂದು ವರ್ಷ ಕಾಲ ವಶಪಡಿಸಿಕೊಂಡಿದ್ದ. ಈ ದಂಡಯಾತ್ರೆಗಳಲ್ಲಿ ತೊಡಗಿದ್ದಾಗ ಪರ್ಷಿಯದಲ್ಲಿ ದಂಗೆಗಳು ಎದ್ದುವು. ಅವನ್ನು ತೈಮೂರ್ ಸದೆಬಡಿದ. ತೈಮೂರನ ರೋಷದ ಪರಿಣಾಮವಾಗಿ ಅನೇಕ ಪಟ್ಟಣಗಳು ನಾಶವಾದವು. ಅಸಂಖ್ಯಾತ ಜನ ಸಾವಿಗೆ ಈಡಾದರು.

ಭಾರತ ದಂಡಯಾತ್ರೆ (1398): ದೆಹಲಿಯ ಸುಲ್ತಾನರು ಮೂರ್ತಿಪೂಜಕರಾದ ಹಿಂದೂಗಳ ಬಗ್ಗೆ ಹೆಚ್ಚಿನ ಸಹಿಷ್ಣುತೆಯನ್ನು ತೋರಿದ್ದಾರೆಂಬ ನೆಪವೊಡ್ಡಿ ತೈಮೂರ್ ಅವರನ್ನು ಶಿಕ್ಷಿಸುವ ಉದ್ದೇಶದಿಂದ ಭಾರತದ ದಂಡಯಾತ್ರೆಯನ್ನು ಕೈಗೊಂಡನೆಂದು ಹೇಳಲಾಗಿದೆ. ಆಗ ಅವನ ವಯಸ್ಸು 60 ನ್ನು ದಾಟಿತ್ತು. 1398 ರ ಸೆಪ್ಟೆಂಬರ್ 24 ರಂದು ತೈಮೂರನ ಸೈನ್ಯ ಸಿಂಧೂನದಿಯನ್ನು ದಾಟಿತು. ತಾನು ಬಂದ ಹಾದಿಯಲ್ಲಿ ಸಿಕ್ಕಿದವರನ್ನು ಸುಲಿದು, ಪಟ್ಟಣಗಳನ್ನು ನಾಶಮಾಡಿ ಐಶ್ವರ್ಯವನ್ನು ಕೊಳ್ಳೆಹೊಡೆದು ದೆಹಲಿಯ ಕಡೆಗೆ ತೈಮೂರ್ ಸಾಗಿದ. ಡಿಸೆಂಬರ್ 17 ರಂದು ಪಾನಿಪಟ್ ಯುದ್ಧಭೂಮಿಯಲ್ಲಿ ಮಹಮದ್ ಬಿನ್ ತುಗಲಕನ ಸೇನೆಯನ್ನು ಸೋಲಿಸಿದ. ಮರುದಿನ ದೆಹಲಿಯನ್ನು ಪ್ರವೇಶಿಸಿದ. ತೈಮೂರನ ಸೈನ್ಯ ನಗರವನ್ನು ಸತತವಾಗಿ ಐದು ದಿವಸ ಲೂಟಿ ಮಾಡಿತು. ಕಟ್ಟಡಗಳು ಭಸ್ಮವಾದವು. ನಿರಪರಾಧಿ ಪ್ರಜೆಗಳು ಲಕ್ಷಗಟ್ಟಲೆ ಕೊಲೆಯಾದರು. ಇಲ್ಲವೆ ಬಂಧಿತರಾದರು. ತೈಮೂರನ ಹೊಡೆತದಿಂದ ಚೇತರಿಸಿಕೊಳ್ಳಲು ದೆಹಲಿಗೆ ಒಂದು ಶತಮಾನವೇ ಬೇಕಾಯಿತು. ಭಾರತದಲ್ಲಿ ಸಾಮ್ರಾಜ್ಯ ಸ್ಥಾಪಿಸುವುದು ತೈಮೂರನ ಉದ್ಧೇಶವಾಗಿರಲಿಲ್ಲ. ಆತ ಇಲ್ಲಿಗೆ ಕೇವಲ ಕೊಳ್ಳೆಯ ಹೊಡೆಯಲು ಬಂದಿದ್ದ. ಎಂತಲೇ ಕೇವಲ 15 ದಿವಸಗಳ ಅನಂತರ ಆತ ದೆಹಲಿಯಂದ ಕಾಲ್ತೆಗೆದ. 1399 ರ ಜನವರಿ 9 ರಂದು ತೈಮೂರ್ ಮೀರತ್ ಮೇಲೆ ದಾಳಿ ಮಾಡಿ ನಗರವನ್ನು ಕೊಳ್ಳೆಹೊಡೆದು ಜನರನ್ನು ಸಾಮೂಹಿಕವಾಗಿ ಕೊಲೆಗೆ ಈಡುಮಾಡಿದ. ಅಲ್ಲಿಂದ ಅರಿದ್ವಾರವನ್ನು ಹಾದು ಶಿವಾಲಿಕ್ ಬೆಟ್ಟಗಳ ಮೂಲಕ ಮುಂದುವರಿದು ಕಾಂಗಡಾ ಪ್ರದೇಶವನ್ನು ವಶಪಡಿಸಿಕೊಂಡ. ಅನಂತರ ಜಮ್ಮುವಿನ ಮೇಲೆ ದಾಳಿ ಮಾಡಿದ; ಹೋದಲ್ಲೆಲ್ಲ ಕೊಳ್ಳೆಹೊಡೆಯುವುದು. ಕಟ್ಟಡಗಳನ್ನು ಸುಡುವುದು, ಜನರನ್ನು ಕೊಲ್ಲುವುದು - ಇವೇ ಈತನ ಸೈನ್ಯದ ಮುಖ್ಯ ಕೆಲಸಗಳಾದವು. ಈ ರೀತಿ ಉತ್ತರ ಭಾರತದ ಬಹುಪಾಲು ಸಂಪತ್ತನ್ನು ಕೊಳ್ಳೆಹೊಡೆದ ತೈಮೂರ್ 1399ರ ಮಾರ್ಚ್ 19 ರಂದು ಸಿಂಧೂ ನದಿಯನ್ನು ದಾಟಿ ಸಾಮರ್‍ಕಾಂದಿನತ್ತ ಹಿಂದಿರುಗಿದ. ಭಾರತದಲ್ಲಿ ಬಂಧಿಸಿದ ಹೆಂಗಸರು, ಶಿಲ್ಪಿಗಳು ಹಾಗೂ ಕುಶಲಕರ್ಮಿಗಳನ್ನು ತನ್ನೊಡನೆ ಸಾಗಿಸಿದ. ಸುಮಾರು 90 ಆನೆಗಳ ಮೇಲೆ ಭಾರತದ ಹಿಂದೂ ದೇವಾಲಯಗಳ ಕಂಬ, ಚಪ್ಪಡಿ ಮುಂತಾದವನ್ನು ಸಾಗಿಸಿ ಅವನ್ನೇ ಉಪಯೋಗಿಸಿ ಸಾಮರ್‍ಕಾಂದಿನಲ್ಲಿ ಒಂದು ಮಸೀದಿ ಕಟ್ಟಿಸಿದ. ಭಾರತೀಯ ಶಿಲ್ಪಿಗಳಿಂದ ತನ್ನ ರಾಜಧಾನಿಯಲ್ಲಿ ಅನೇಕ ಹೊಸ ಕಟ್ಟಡಗಳನ್ನು ಕಟ್ಟಿಸಿದ. ಪಂಜಾಬ್ ಪ್ರಾಂತ್ಯದಲ್ಲಿ ತನ್ನ ದಳಪತಿಯೊಬ್ಬನನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ. ಈತ ಹೆಚ್ಚು ಕಡಿಮೆ ಪೂರ್ಣ ಸ್ವತಂತ್ರನೇ ಆಗಿದ್ದ.

ಭಾರತದ ದಂಡಯಾತ್ರೆ ತೈಮೂರಿನ ಕೊನೆಯ ದಂಡಯಾತ್ರೆಯಾಗಲಿಲ್ಲ. ಅದೇ ವರ್ಷ (1399) ಅವನು ತನ್ನ ಜೀವನದ ಕೊನೆಯ ಹಾಗೂ ದೊಡ್ಡ ದಂಡಯಾತ್ರೆಯನ್ನು ಕೈಗೊಂಡ. ಈಜಿಪ್ಟಿನ ಮ್ಯಾಮೆಲೂಕ ಸುಲ್ತಾನನನ್ನು ಶಿಕ್ಷಿಸುವುದೇ ಈ ದಂಡಯಾತ್ರೆಯ ಗುರಿಯಾಗಿತ್ತು. ಆ ಸುಲ್ತಾನ ಬಾಗದಾದ್ ಸುಲ್ತಾನನಿಗೆ ಸಹಾಯ ಮಾಡಿ ಆತ ಅಜರ್‍ಬೈಜಾನನ್ನು ವಶಪಡಿಸಿಕೊಳ್ಳಲು ಸಾಧ್ಯಮಾಡಿಕೊಟ್ಟಿದ್ದಲ್ಲದೆ ಅಟೊಮನ್ ಸುಲ್ತಾನನಾದ ಮೊದಲನೆಯ ಬಯಜಿದ್, ಪೂರ್ವ ಆನಟೊಲಿಯವನ್ನು ವಶಪಡಿಸಿಕೊಳ್ಳಲೂ ಸಹಾಯ ಮಾಡಿದ್ದ. ಆದ್ದರಿಂದಲೇ ತೈಮೂರ್ ಅವನ ಮೇಲೆ ದಂಡೆತ್ತಿ ಹೋಗಿ ಮೊದಲು ಅಜರ್ ಬೈಜಾನಿನಲ್ಲಿ ತನ್ನ ಪ್ರಭುತ್ವವನ್ನು ಪುನಃಸ್ಥಾಪಿಸಿ ಸಿರಿಯದ ಕಡೆ ನುಗ್ಗಿದ. ಆಲೋಪ್ದೋಗೆ ಮುತ್ತಿಗೆ ಹಾಕಿ, ಅದನ್ನು ಸೂರೆ ಮಾಡಿ, ಮ್ಯಾಮಲೂಕನ ಸೇನೆಯನ್ನು ಸೋಲಿಸಿ, ಡಮಾಸ್ಕಸ್ ನಗರವನ್ನು ವಶಪಡಿಸಿಕೊಂಡ(401). ಅಲ್ಲಿಯ ಕುಶಲ ಕೆಲಸಗಾರರನ್ನು ಸಾಮರ್ ಕಾಂದಿಗೆ ಬಲತ್ಕಾರದಿಂದಕರೆದೊಯ್ದದ್ದರಿಂದ ಡಮಾಸ್ಕಸಿನ ಅಭ್ಯುದಯಕ್ಕೆ ಧಕ್ಕೆ ಬಂತು. ಅದೇ ವರ್ಷ ಬಾಗ್ದಾದ್ ನಗರವನ್ನು ಆಕ್ರಮಿಸಿ, ಸುಮಾರು 20,000 ಜನರನ್ನು ಕೊಂದು ಹಾಕಿದ. ತೈಮೂರ್ ಚಳಿಗಾಲವನ್ನು ಜಾರ್ಜಿಯಲ್ಲಿ ಕಳೆದು, ಆನಟೋಲಿಯದ ಮೇಲೆ ಆಕ್ರಮಣ ನಡೆಸಿ, ಆಟೊಮನ್ ಸುಲ್ತಾನ ಬಯಜಿದ್ದನ ಸೇನೆಯನ್ನು ಅಂಕರದ ಬಳಿ ಸೋಲಿಸಿದ. 1402 ರಲ್ಲಿ ಸ್ಮರ್ನವನ್ನು ರೋಡ್ಸ್ ಶ್ರೀಮಂತರಿಂದ ಕಸಿದುಕೊಂಡ. ಅತ್ತಕಡೆ ಈಜಿಪ್ಟಿನ ಸುಲ್ತಾನ ಶರಣಾಗತನಾದ. ದಿಗ್ವಿಜಯಿಯಾದ ತೈಮೂರ್ 1404 ರಲ್ಲಿ ತನ್ನ ರಾಜಧಾನಿ ಸಾಮರ್‍ಕಾಂದಿಗೆ ಹಿಂದಿರುಗಿದ. ಕೂಡಲೇ ಚೀನದ ಕಡೆ ಕಣ್ಣು ಹಾಯಿಸಿ ಅಲ್ಲಿಗೆ ಸೇನೆಯನ್ನು ಕಳುಹಿಸಲು ತಯಾರಾದ. 1404 ರ ಡಿಸೆಂಬರ್ ಅಂತ್ಯದಲ್ಲಿ ಸೇನೆಯ ನಾಯಕತ್ವ ವಹಿಸಿ ತೈಮೂರ್ ಅತ್ತ ಹೊರಟ. ಆದರೆ ದಾರಿಯಲ್ಲೇ 1405 ರ ಜನವರಿ 19 ರದು ನಿಧನ ಹೊಂದಿದ. ತೈಮೂರನ ದೇಹವನ್ನು ಅದ್ದೂರಿಯಿಂದ ಸಾಮರ್‍ಕಾಂದ್‍ಗೆ ತೆಗೆದುಕೊಂಡು ಹೋಗಿ ಸಮಾಧಿ ಮಾಡಲಾಯಿತು. ಜೀವನವನ್ನೇ ದಂಡಯಾತ್ರೆಗೆ, ನಗರಗಳ ನಾಶಕ್ಕೆ, ಐಶ್ವರ್ಯದ ಲೂಟಿಗೆ, ಪ್ರಾಣಹಾನಿಗೆ ಮುಡಿಪಾಗಿಟ್ಟಿದ್ದ ತೈಮೂರ್ ಪ್ರಪಂಚದಲ್ಲೇ ಒಬ್ಬ ಸಾಹಸಿ ಯೋಧನೆಂದು ಪರಿಗಣಿತನಾಗಿದ್ದಾನೆ. ತೈಮೂರನದು ವಿನಾಶಕ ಶಕ್ತಿಯಾದರೂ ಸುಂದರವಾದ, ವೈಭವಯುತವಾದ ಕಟ್ಟಡಗಳನ್ನು ನಿರ್ಮಿಸಿ ಸಂಸ್ಕøತಿಗೆ ತನ್ನ ಕೊಡುಗೆಯನ್ನು ಸಲ್ಲಿಸಿದ್ದಾನೆ.

ತೈಮೂರನ ಜೀವನದ ಸಾಹಸಮಯ ಸಾಧನೆಗಳನ್ನು ಅವನ ಬರಹದಿಂದಲೇ ತಿಳಿಯಬಹುದಾಗಿದೆ. ತಾನು ನಡೆಸಿದ ದಂಡಯಾತ್ರೆಗಳ ಬಗ್ಗೆ ಆತ ವಿವರವಾಗಿ ಬರೆದಿಟ್ಟಿದ್ದಾನೆ.

ತೈಮೂರನ ವಂಶಸ್ಥರು, ಮಧ್ಯ ಏಷ್ಯ ಮತ್ತು ಇರಾನ್ ಪ್ರದೇಶಗಳಲ್ಲಿ ರಾಜ್ಯವಾಳಿದರು. ಹಿರಾತ್ ನಗರವನ್ನು ಮಾಡಿಕೊಂಡ ಇವರು 15 ಮತ್ತು 16 ನೆಯ ಶತಮಾನಗಳಲ್ಲಿ ಪ್ರಬಲರಾಗಿದ್ದರು. ಆದರೆ ಇರಾನಿನಿಂದ ಓಡಿಸಲ್ಪಟ್ಟಾಗ ತೈಮೂರನ ವಂಶಸ್ಥನಾದ ಬಾಬರ್ ಭಾರತಕ್ಕೆ ಬಂದು ದೆಹಲಿಯಲ್ಲಿ ಮೊಗಲ್ ರಾಜಸಂತತಿಯನ್ನು ಸ್ಥಾಪಿಸಿದ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: