ವಿಷಯಕ್ಕೆ ಹೋಗು

ಜಮಖಾನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಮಖಾನೆಯು ಸಾಮಾನ್ಯವಾಗಿ ವಿವಿಧ ವರ್ಣಗಳ ಹತ್ತಿ ನೂಲುಗಳಿಂದ ತಯಾರಿಸಿದ, ನೆಲದ ಮೇಲೆ ಹಾಸಲು ಚಾಪೆಯಂತೆ ಬಳಸುವ, ದಪ್ಪನೆಯ ಹಾಸು. ರೇಷ್ಮೆ ದಾರದ, ಸಸ್ಯಜನ್ಯ ನಾರುಗಳ ಮತ್ತು (ಈಚೆಗೆ) ಕೃತಕ ಎಳೆಗಳ ಬಳಕೆಯೂ ಉಂಟು. ಈ ಎಳೆಗಳ ಬದಲಾಗಿ ಉಣ್ಣೆ ನೂಲನ್ನು ಬಳಸಿ ತಯಾರಿಸಿದ ಹಾಸಿಗೆಗೆ ರತ್ನಗಂಬಳಿ ಎಂಬ ಹೆಸರಿದೆ. ಜಮಖಾನೆಯಲ್ಲಿ ಕಸೂತಿಯ ಕುಸುರಿ ಕೆಲಸಗಳನ್ನು ಮಾಡಿ ಅದರ ಸೌಂದರ್ಯವನ್ನು ವರ್ಧಿಸುವುದು ಸಾಧ್ಯ.

ಈಗ (1974) ಜಮಖಾನೆ ತಯಾರಿಸಲು ಭಾರತದಲ್ಲಿ ಅನೇಕ ಕಾರ್ಖಾನೆಗಳಿವೆ. ಇವು ಮುಖ್ಯವಾಗಿ, ಬೆಂಗಳೂರು, ಬಿಜಾಪುರ, ಗುಲ್ಬರ್ಗ, ಸೇಲಮ್, ಭವಾನಿ, ಲಖನೌ, ಪಂಜಾಬ್, ಸೌರಾಷ್ಟ್ರ, ಕಾಶ್ಮೀರ ಮುಂತಾದ ಎಡೆಗಳಲ್ಲಿ ಹರಡಿಹೋಗಿವೆ.

ಜಮಖಾನೆಗಳಲ್ಲಿ ಪ್ರಸಿದ್ಧವಾದ ವಿಧಗಳಿವು : ರೇಷ್ಮೆ ಡ್ರಗ್ಗೆಟ್ಸ್, ರತ್ನ ಜಮಖಾನೆ (ಪೈಲ್ ಕಾರ್ಪೆಟ್), ಚಿತ್ರ ಜಮಖಾನೆ (ಡಿಸೈನ್ ಕಾರ್ಪೆಟ್) ಮತ್ತು ಸಾದಾ ಜಮಖಾನೆ. ಕೊನೆಯ ಮೂರು ವಿಧವನ್ನು ರೇಷ್ಮೆ ಇಲ್ಲವೇ ನೂಲಿನ ಇಲ್ಲವೇ ಇವೆರಡರ ಮಿಶ್ರಣ ದಾರಗಳಿಂದ ನೇಯ್ಗೆ ಮಾಡಬಹುದು. ಜಮಖಾನೆಗೆ ಬೇಕಾದ ಎಳೆಗಳಿಗೆ ಬೇಕಾದ ಬಣ್ಣ ಹಾಕಬೇಕು. ಉಂಡೆಯನ್ನು ಬಿಲ್ಲಿನಿಂದ ಹೊಡೆದು, ಹಿಂಜಿಕೊಂಡು ಕೈ ಚರಕದಿಂದ ಬೇಕಾದಷ್ಟು ದಪ್ಪಕ್ಕೆ ನುಲಿದು, ದಾರ ಮಾಡಿ, ಕದರಿಗೆ (ಸ್ಪಿಂಡಲ್) ಸುತ್ತಿಕೊಳ್ಳಬೇಕು. ಈಗ ದೊರೆಯುವ ರೂಪಕ್ಕೆ ಕಂಡಿಗೆ ಎಂದು ಹೆಸರು. ಕಂಡಿಗೆಯನ್ನು ಎರಡು ಎಳೆಯಾಗಿ ಎಳೆದು ಲಟ್ಟಿ ಹಾಕಿಕೊಳ್ಳಬೇಕು. ಇದಾದಮೇಲೆಯೇ ಬಣ್ಣ ಹಾಕಬೇಕು. ಕೆಲವು ದಾರಗಳಿಗೆ ಬಣ್ಣ ಹಾಕದೆ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬಹುದು. ಇವುಗಳಿಗೆ ಉಣ್ಣೆದಾರ ಎಂದು ಹೆಸರು. ಜಮಖಾನೆಗಳನ್ನು ನಿಲುಮಗ್ಗ (ವರ್ಟಿಕಲ್ ಲೂಮ್) ಅಥವಾ ನೆಲಮಗ್ಗದಲ್ಲಿ (ಹಾರಿಜ಼ಾಂಟಲ್ ಲೂಮ್) ನೇಯ್ಗೆ ಮಾಡುತ್ತಾರೆ. ಆದರೆ ಡ್ರಗ್ಗೆಟ್ ಮತ್ತು ರತ್ನ ಜಮಖಾನೆಗಳನ್ನು ನಿಲುಮಗ್ಗದಲ್ಲಿಯೇ ತಯಾರಿಸುವುದು ಸಾಧ್ಯ.

ಜಮಖಾನೆಯ ತಯಾರಿಕೆಗೆ, ಮೊಟ್ಟಮೊದಲು, ನಿಲುಮಗ್ಗವನ್ನು ಸ್ಥಾಪಿಸಬೇಕು. ಈ ಮಗ್ಗದಲ್ಲಿ ಕೆಳಗೆ ಕೊಡುವ ದೊಡ್ಡ ಚದರ ಮರಕ್ಕೆ ಕೂರು (ರೋಲರ್) ಎಂದು ಹೆಸರು. ಇದಕ್ಕೆ ಒಂದು ಉಕ್ಕಿನ ಕಂಬಿಯನ್ನು (ಇಂಡಿಕಂಬಿ) ಕಟ್ಟಿರುತ್ತದೆ. ಮಗ್ಗದ ಮೇಲ್ಭಾಗದಲ್ಲಿ ದಪ್ಪ ಮರದ ಒಂದು ದಿಂಡನ್ನೂ (ಟೊಳ್ಳು ಬಂಬು) ಅದರ ಕೆಳಗೆ ಗಟ್ಟಿಯಾದ ಒಂದು ಬಂಬನ್ನೂ (ಕೆಳಬಂಬು) ಬಿಗಿಯಾಗಿ ಕಟ್ಟಿರುತ್ತದೆ. 10 ಸಂಖ್ಯೆಯ ದಾರವನ್ನು 8 ಎಳೆಯಾಗಿ ಎಳೆದು ಕೊಂಡು ರಾಟೆಯಿಂದ ಹುರಿ ಮಾಡಬೇಕು. ಈ ದಾರಗಳನ್ನು ಮಗ್ಗಕ್ಕೆ ಹಾಕುವ ಕ್ರಿಯೆಗೆ ಹಾಸು ಹಾಕುವುದು ಎಂದು ಹೆಸರು. ದಾರವನ್ನು ಮೇಲಿನ ಟೊಳ್ಳು ಬಂಬುವಿಗೆ ಹಾಕಿ ಕೆಲ ಬಂಬುವಿಗೆ ಮುಂದಿನಿಂದ ಒಂದು ಎಳೆಯೂ ಮತ್ತೆ ಹಿಂದಿನಿಂದ ಒಂದು ಎಳೆಯೂ ಬರುವ ಹಾಗೆ (ಅಂದರೆ ಈ ಹಾಸು ಎರಡು ಹೋಳಾಗಬೇಕು) ಹಾಕಿ ಕೆಳಗೆ ಇಂಡಿ ಕಂಬಿಯ ಮೇಲ ಸಾಲಾಗಿ ನಿಲ್ಲಿಸಬೇಕು. ಒಂದು ಅಡಿಗೆ 72 ಎಳೆ ಎರಡು ಹೋಳಾಗಿ ಸಾದಾ ಮಗ್ಗದಲ್ಲಿ ಬರುತ್ತದೆ. ಕೆಲವು ಜಮಖಾನೆಗಳಿಗೆ 1 ಅಡಿಗೆ 72ಕ್ಕಿಂತ ಹೆಚ್ಚಾಗಿ (86ರ ವರೆಗೆ) ಎಳೆಗಳು ಬರುವುದುಂಟು. ಈಗ ಮುಂದಿನಿಂದ ಬಂದ ಮೂರು ಎಳೆಗಳನ್ನೂ ಹಿಂದಿನಿಂದ ಬಂದ ಮೂರು ಎಳೆಗಳನ್ನೂ ಕೆಳ ಬಂಬುವಿಗೆ ಗಟ್ಟಿಯಾಗಿ ಕಟ್ಟಬೇಕು. ಈ ಕ್ರಿಯೆಗೆ ಹಲ್ಲುಕಟ್ಟುವುದು ಎಂದು ಹೆಸರು. ಎರಡು ಹೋಳಾಗಿರುವ ಈ ಎಳೆಗಳ ಮಧ್ಯದಲ್ಲಿ ಒಂದು ಗಳವನ್ನು ಸೇರಿಸಿ (ಇದಕ್ಕೆ ಜೋಗು ಕಂಬಿ ಎಂದು ಹೆಸರು, ರೀಡ್ ಚೇಂಜರ್) ಮೇಲಕ್ಕೆ ಎತ್ತಿ ಕಟ್ಟಬೇಕು. ಎಳೆಗಳು ಬೇರೆ ಬೇರೆಯಾಗಿರುವಂತೆ ಏರ್ಪಡಿಸಲು ಜೋಗು ಕಂಬಿ ನೆರವಾಗುತ್ತದೆ. ಈಗ ಈ ಎಳೆಗಳಿಗೆ ಹುರಿ ಮಾಡಿದ ದಾರಗಳಿಂದ ಬೆದೆ ಕಟ್ಟು (ಗಂಟು ಹಾಕುವಿಕೆ) ಕಟ್ಟಬೇಕು. ಮುಂದಿನಿಂದ ಬಂದ ಎಳೆಗಳ ಬೆದೆಯಲ್ಲಿ (ಗಂಟಿನಲ್ಲಿ) ಒಂದು ಸಣ್ಣ ಗಳ ಅಥವಾ ಕೊಳಾಯಿ (ಜಿ.ಐ. ಪೈಪ್) ಹಾಗೆಯೇ ಹಿಂದಿನಿಂದ ಬಂದ ಎಳೆಗಳ ಬೆದೆಯಲ್ಲಿಯೂ ಒಂದುಗಳವನ್ನು ಸೇರಿಸಿ, ನೇಯ್ಗೆಯಿಂದ ಒಂದು ಗಜ ಮೇಲೆ ಬರುವ ಹಾಗೆ ಕಟ್ಟಬೇಕು. ಇವು ಒಂದಕ್ಕೊಂದು ಒಂದು ಅಡಿ ದೂರದಲ್ಲಿರಬೇಕು. ಈ ಗಳಗಳು ಹಣಿ (ರೀಡ್) ಬದಲಾಯಿಸುವ ಸಲಕರಣೆ.

ನೇಯ್ಗೆ ಸರಿಯಾಗಿ ಬರಬೇಕಾದರೆ ಮಗ್ಗ ಬಿಗಿಯಾಗಿರಬೇಕಾದ್ದು ಅವಶ್ಯ. ಆದ್ದರಿಂದ ಕೂರಿನಲ್ಲಿ ಒಂದು ಗಡಪಾರೆ (ಕ್ರೋಬಾರ್) ಕೊಟ್ಟು ಮಗ್ಗವನ್ನು ಬಿಗಿ ಮಾಡಬೇಕು. ತರುವಾಯ ಬೆದೆ ಕಂಬಿಗಳಿಗೆ ಎರಡು ಅಥವಾ ಮೂರು ಕಡೆ (ಮಗ್ಗದ ಅಗಲ ಜಾಸ್ತಿ ಇದ್ದಲ್ಲಿ ಮತ್ತೆರಡು ಮೂರು ಕಡೆ) ಪಾಸಿ ಕೋಲು (ಹಣಿ ಬದಲಾಹಿಸುವ ಸಲಕರಣೆ-ಸನ್ನೆ ಹೊಂದಾಣಿಕೆ) ಕೊಟ್ಟು ಬಿಗಿಯಾಗಿ ಕಟ್ಟಬೇಕು. ಈಗ ಮಗ್ಗ ನೇಯ್ಗೆಗೆ ತಯಾರಾದಂತಾಯಿತು.

ಚಿತ್ರ ಅಥವಾ ರತ್ನ ಜಮಖಾನೆಗಳಿಗೆ ಬೇಕಾಗುವ ಚಿತ್ರವನ್ನು (ಡಿಸೈನ್) ಒಂದು ಗ್ರಾಫ್ ಕಾಗದದಲ್ಲಿ ಬರೆದುಕೊಳ್ಳಬೇಕು. ಗ್ರಾಫ್‍ನ ಒಂದೊಂದು ಗೆರೆಯೂ ಒಂದು ಎಳೆ ಅಥವಾ ನಮಗೆ ಬೇಕಾದಷ್ಟು ಎಳೆಗಳಿಗೆ ಸಮಾನವೆಂದು ಲೆಕ್ಕ ಹಾಕಿಕೊಂಡು ಓದಬೇಕು. ಚಿತ್ರಗಳ ವೈಶಿಷ್ಟ್ಯವನ್ನು ಬಣ್ಣಗಳ ಬದಲಾಯಿಕೆಯಲ್ಲಿ ತೋರ್ಪಡಿಸಬೇಕು. ಜಮಖಾನೆಯ ಯಾವ ತರಹ ಆದರೂ ಮೊದಲು ಜಮಖಾನೆಯ ಪ್ರಾರಂಭದಲ್ಲಿ ಬಿಳಿ ನೂಲನ್ನು ಹಣಿಯಲ್ಲಿ ಸೇರಿಸಿ ನೇಯ್ಗೆ ಮಾಡಬೇಕು. ಈ ನೂಲಿಗೆ ಕಕ್ಕು ಎಂದು ಹೆಸರು. ಕಕ್ಕುವನ್ನು ಬಹು ಬಿಗಿಯಾಗಿ ಹಾಕಬೇಕು. ಎದು ಸುಮಾರು ಅರ್ಧ ಅಂಗುಲ ಇರಬೇಕು. ಕಕ್ಕು ಹಾಕಿದ ಬಳಿಕ ನಮಗೆ ಬೇಕಾದ ಬಣ್ಣ ಉಣ್ಣೆ ದಾರಗಳಿಂದ ನೇಯ್ಗೆ ಮಾಡಬೇಕು. ಉಣ್ಣೆ ದಾರಗಳು ಸರಿಯಾಗಿ ಕುಳಿತುಕೊಳ್ಳಲು ಮಗ್ಗವನ್ನು ಆಗಾಗ್ಗೆ (ಅಂದರೆ ಎರಡು ಸಾಲಿಗೆ ಒಂದು ಸಲ) ಕಬ್ಬಿಣದ ಹಸ್ತದಿಂದ (ಐರನ್ ಕೂಂಬ್) ಹೊಡೆಯಬೇಕು. ಜಮಖಾನದ ಕೊನೆಯಲ್ಲಿಯೂ ಕಕ್ಕು ಹಾಕಬೇಕು.

ಸಾದಾ ಮತ್ತು ಚಿತ್ರ ಜಮಖಾನಗಳೆರಡರ ನೇಯ್ಗೆಯೂ ಒಂದೇ ರೀತಿ. ಚಿತ್ರದ ಜಮಖಾನೆಯಲ್ಲಿ ಬೇರೆ ಬೇರೆ ಬಣ್ಣದ ಉಣ್ಣೆಯನ್ನು ಅಥವಾ ಬತ್ತಿಯನ್ನು ಸೇರಿಸಲಾಗುವುದು. ಕೊನೆಯಿಂದ ಬರುವ ಬತ್ತಿಗೆ ಪ್ರಾಧಾನ್ಯ ಕೊಟ್ಟು ಅದರ ಬಿಗಿತದಲ್ಲಿ ಒಳಗಿನ (ಅಂದರೆ ಮೈದಾನದ) ಬತ್ತಿಯನ್ನು ನೇಯ್ಗೆ ಮಾಡುವುದಕ್ಕೆ ಟಿಕೇಟ್ ಕೊಡುವುದು ಎಂದು ಹೆಸರು. ರತ್ನ ಜಮಖಾನೆಯ ತಯಾರಿಕೆಯಲ್ಲಿ, ಅದಕ್ಕೆ ಬೇಕಾದ ಬಣ್ಣದ ನೂಲುಗಳು, ನೇಯುವವರಿಗೆ ಅವರ ಮೇಲಿನಿಂದ ಉಂಡೆಯಿಂದ, ಸಿಕ್ಕು ಸೇರಿದ ಹಾಗೆ ನೇತಾಡಿಸಬೇಕು. ಈ ಜಮಖಾನೆಯ ಚಿತ್ರದ ಪ್ರಕಾರ ದಾರಗಳನ್ನು ಒಳಗಿನ ಎಳೆಗೂ ಹೊರಗಿನ ಎಳೆಗೂ ಸೇರಿಸಿ ನಿಲ್ಲಿಸಿ ಕೊಯ್ಯಬೇಕು. ಹಾಗೆ ಒಂದು ಪಾಟಿ ಹಾಕಿದ ಬಳಿಕ ಹಣಿಯಲ್ಲಿ ನೂಲನ್ನು ಸೇರಿಸಿ ಜಮಖಾನೆಯ ಅರ್ಧಕ್ಕೂ ಮತ್ತು ಅಣಿ ಬದಲಾಯಿಸಿ ಮಿಕ್ಕ ಅರ್ಧಕ್ಕೂ ಹಾಕಿ ಹಸ್ತದಿಂದ ಗಟ್ಟಿಯಾಗಿ ಹೊಡೆಯಬೇಕು. ಆಮೇಲೆ ಕತ್ತರಿಯಿಂದ ಮಟ್ಟವಾಗಿ ಉಣ್ಣೆದಾರವನ್ನು ಕತ್ತರಿಸಬೇಕು. ಈ ಕೆಲಸಕ್ಕೆ ಬೇಕಾದ ಕತ್ತಿ ಬಹು ಚೂಪಾಗಿಯೂ ಮತ್ತೆ ಮೂಲೆಯಲ್ಲಿ ಭಾರವಾಗಿಯೂ ಇರುತ್ತದೆ. ರತ್ನ ಜಮಖಾನೆಯ ಕೆಲಸದಲ್ಲಿ ಚಿತ್ರವನ್ನು ಓದುವುದು ಉಣ್ಣೆ ಸೇರಿಸುವುದು ಮತ್ತು ಮಟ್ಟವಾಗಿ ಕತ್ತರಿಸುವುದು ಬಹು ಮುಖ್ಯವಾದ ಕೆಲಸ. ಜಮಖಾನೆ ನೇಯ್ಗೆ ಮುಗಿದ ತರುವಾಯ ಕಕ್ಕುವಿನಿಂದ 4 ಅಥವಾ 5 ಅಂಗುಲ ತಾಣೆದಾರಗಳನ್ನು ಬಿಟ್ಟು ಕೊಯ್ಯಬೇಕು. ಬಳಿಕ ಆ ದಾರಗಳನ್ನು ಒಂದಕ್ಕೊಂದು ಗಂಟು ಹಾಕಿ ಜಮಖಾನೆಗೆ ಬಿಗಿತ ಕೊಡಬೇಕು. ಅಲ್ಲಿಗೆ ಜಮಖಾನೆಯ ಕೆಲಸ ಪೂರೈಸುತ್ತದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಮಖಾನೆ&oldid=906777" ಇಂದ ಪಡೆಯಲ್ಪಟ್ಟಿದೆ