ವಿಷಯಕ್ಕೆ ಹೋಗು

ನಂಜುಂಡೇಶ್ವರ ದೇವಸ್ಥಾನ, ನಂಜನಗೂಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಂಜನಗೂಡು ನಂಜುಂಡೇಶ್ವರ
ನಂಜುಂಡೇಶ್ವರ ದೇವಸ್ಥಾನ
ಭೂಗೋಳ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆಮೈಸೂರು
ಸ್ಥಳನಂಜನಗೂಡು
ಸಂಸ್ಕೃತಿ
ಮುಖ್ಯ ದೇವರುಶಿವ
ಮುಖ್ಯ ದೇವಿಪಾರ್ವತಿ
ವಾಸ್ತುಶಿಲ್ಪ
ವಾಸ್ತುಶಿಲ್ಪ ಶೈಲಿTemple
ಇತಿಹಾಸ ಮತ್ತು ಆಡಳಿತ
ಅಧೀಕೃತ ಜಾಲತಾಣhttps://nanjangudtemple.kar.nic.in

ನಂಜುಂಡೇಶ್ವರ ದೇವಸ್ಥಾನ ( ಶ್ರೀಕಂಠೇಶ್ವರ ದೇವಸ್ಥಾನ ಎಂದೂ ಸಹ ಕರೆಯುತ್ತಾರೆ). ಇದು ಕರ್ನಾಟಕ ರಾಜ್ಯ, ದಕ್ಷಿಣ ಭಾರತದ ಹಿಂದೂ ತೀರ್ಥಯಾತ್ರೆಯ ಪಟ್ಟಣವಾದ ನಂಜನಗೂಡುನಲ್ಲಿರುವ ಪುರಾತನ ದೇವಾಲಯವಾಗಿದೆ. ಇದು ನಂಜುಂಡೇಶ್ವರ ದೇವನ ಪುರಾತನ ದೇವಾಲಯವಾಗಿದೆ.( ಶಿವನ ಇನ್ನೊಂದು ಹೆಸರು, ಇದನ್ನು ನಂಜುಂಡೇಶ್ವರ ಎಂದೂ ಕರೆಯಲಾಗುತ್ತದೆ). [] ದೇವಸ್ಥಾನವು ಕಾವೇರಿಯ ಉಪನದಿಯಾದ ಕಪಿಲಾ ನದಿಯ ಬಲದಂಡೆಯಲ್ಲಿದೆ. ನಂಜನಗೂಡು ದಕ್ಷಿಣ ಪ್ರಯಾಗ [] ಅಥವಾ ದಕ್ಷಿಣದ ಪ್ರಯಾಗ ಎಂದೂ ಕರೆಯಲ್ಪಡುತ್ತದೆ. ಸುಮಾರು ೫೨,೦೦೦ ಚದುರ ಅಡಿ ವಿಸ್ತೀರ್ಣದ, ಆಚ್ಛಾದಿತ ಪ್ರದೇಶದ ದ್ರುಷ್ಟಿಯಿಂದ ರಾಜ್ಯದಲ್ಲೇ ಪ್ರಥವ ಸ್ಥಾನಪಡೆದಿರುವ ಈ ಆಲಯದ ಉದ್ದ ೩೮೦ ಅಡಿ ಮತ್ತು ಅಗಲ ೧೬೮ ಅಡಿ. ೧೪೬ಕ್ಕೂ ಹೆಚ್ಛು ಕಂಬಗಳು ಈ ಆಲಯಕ್ಕೆ ಆಸರೆಯಾಗಿವೆ. ಹೀಗೆ ಬ್ರುಹತ್ ಮತ್ತು ಮಹತ್ತು ಎರಡೂ ದ್ರುಷ್ಟಿಯಿಂದಲೂ ವಿಶೇಷವಾಗಿರುವ ಈ ಆಲಯ ನಂಜನಗೂಡಿನ ಜೀವನಾಡಿಯಾಗಿದೆ.[]

ಪುರಾಣ

[ಬದಲಾಯಿಸಿ]

ಸಮುದ್ರ ಮಂಥನದ ಸಮಯದಲ್ಲಿ ದೇವತೆಗಳು ಮತ್ತು ರಾಕ್ಷಸರು ಮಂಥನ ಮಾಡುತಿದ್ದಾಗ ಮೊದಲು ಬಂದಿದ್ದೇ ಹಾಲಾಹಲ(ವಿಷ). ಇದರ ತಾಪವನ್ನು ತಾಳಲಾರದೆ ಪ್ರಂಪಂಚ ನಾಶವಾಗುತ್ತಿರಲು ಶಿವನು ಈ ನಂಜನ್ನು ಕುಡಿದಾಗ ಮಾತೆ ಪಾರ್ವತಿ ಆ ನಂಜನ್ನು ಶಿವನ ಕಂಠದಲ್ಲೇ ಬಂಧಿಸುತ್ತಾಳೆ. ನಂಜನ್ನು ಉಂಡ ಶಿವನಿಗೆ ನಂಜುಂಡ, ಮತ್ತು ನಂಜಾಗಿದ್ದ ಕಂಠಕ್ಕೆ ಶ್ರೀಕಂಠವೆಂದು ಹೆಸರಾಯಿತು. ಈ ಆಲಯದ ಲಿಂಗಕ್ಕೆ ನಂಜುಂಡೇಶ್ವರ ಅಥವಾ ಶ್ರೀಕಂಠೇಶ್ವರನೆಂದು ಕರೆಯುತ್ತಾರೆ[] [] [].

ಸ್ಥಳಪುರಾಣ

[ಬದಲಾಯಿಸಿ]

ಸ್ಥಳಪುರಾಣವು ಸ್ವಯಂಉದ್ಭವವಾದ ಚತುರ್ಯುಗದ ಮೂರ್ತಿ ಎನ್ನುತ್ತದೆ. ಕೈಲಾಸದ ಶಿಖರಭಾಗ ಇಲ್ಲಿ ಬಿದ್ದು ಲಿಂಗರೂಪವಾಯಿತೆನ್ನುತ್ತದೆ. ವಿಷಂಪ್ರಾಜಿ ಸೊಪ್ಪಿನ ಮೆಳೆಯ ನಡುವೆ ಹುದುಗಿ ಹೋಗಿದ್ದ ಲಿಂಗವನ್ನು ಪತ್ತೆಹಚ್ಚಿದ ಪರುಶುರಾಮ ಇಲ್ಲಿ ತಪಸ್ಸನ್ನಾಚರಿಸುವುದರ ಮೂಲಕ ತನ್ನ ಪಾಪ ಕಳೆದುಕೋಂಡರೆ, ಸತಿಯನ್ನು ಶಪಿಸಿ ಇಲ್ಲಿಗೆ ಬಂದ ಗೌತಮರು ಈ ಲಿಂಗದ ಆರಾಧನೆಯಿಂದ ಮನಸ್ಸು ಸಮಾಧಾನ ಹೊಂದಿ ಲಿಂಗಕ್ಕೆ ಆಲಯ ಕಟ್ಟಿಸಿ ರಥೋತ್ಸವ ಏರ್ಪಡಿಸಿದನಂತೆ. ಈಶ್ವರನ ಮುಕುಟದಿಂದ ರತ್ನಮಣಿ ಬಿದ್ದ ಸ್ಥಳ 'ಮಣಿ ಕರ್ಣಿಕಾ ತೀರ್ಥವಾಯಿತು[][][]. ವೃಶ್ಚಿಕ ಮಾಸದಲ್ಲಿ ಎಲ್ಲಾ ಪುಣ್ಯತೀರ್ಥಗಳೂ ಕಪಿಲೆಯಲ್ಲಿ ಸೇರುವುದರಿಂದ ಈ ಸಮಯದಲ್ಲಿ ಇಲ್ಲಿ ಸ್ಥಾನ ಮಾಡುವುದರಿಂದ ಸಕಲ ತೀರ್ಥಗಳಲ್ಲೂ ಮಿಂದ ಪುಣ್ಯ ಬರುತ್ತದೆ ಎಂದು ಪುರಾಣ ಹೇಳುತ್ತದೆ[೧೦][೧೧].

ನಿರ್ಮಣ ಮತ್ತು ವಾಸ್ತುಶಿಲ್ಪ

[ಬದಲಾಯಿಸಿ]

ಆಲಯವು ಮೇಲ್ನೋಟಕ್ಕೆ ದಾಕ್ಷಿಣಾತ್ಯ ಶೈಲಿಯ, ಮೈಸೂರು ಒಡೆಯರ ಕಾಲದ ವಾಸ್ತು ಎಂಬುದು ಸ್ಪಷ್ಟವಾದರೂ ಸುಕ್ಷ್ಮ ಅವಲೋಕಣ ಇಡೀ ಕಟ್ಟಡ ಒಂದೇ ಕಾಲದ ರಚನೆಯಲ್ಲ ಎಂಬುದು ಸ್ಪುಟಪಡಿಸುತ್ತದೆ. ಒಂಬತ್ತುನೇ ಶತಮಾನದಿಂದ ಇಪ್ಪತ್ತನೇ ಶತಮಾನದವರೆಗೂ ಈ ಆಲಯವು ರಚನೆ, ಪುನರ್ರಚನೆ, ಸೇರ್ಪಡೆಗಳ ಮೂಲಕ ವಿಸ್ತಾರವಾಗುತ್ತ ಬಂದಿದ್ದನ್ನು ಇಲ್ಲಿಯ ಶಾಸನ ಮತ್ತಿತ್ತರ ಆಧಾರಗಳಿಂದ ತಿಳಿಯಬಹುದು.

ದೇವಾಲಯದ ಮೊದಲ ಉಲ್ಲೇಖವು 10 ನೇ ಶತಮಾನದಲ್ಲಿದೆ. ಇದನ್ನು ಗಂಗರ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ ಎಂದು ನಂಬಲಾಗಿದ. ಮೂಲಗರ್ಭಗುಡಿ ಮತ್ತು ಸುಕನಾಸಿಗಳು ಗಂಗರ ಕಾಲದ ರಚನೆ. ಚೋಳರ ಕಾಲದಲ್ಲಿ ಹಲವಾರು ದತ್ತಿಗಳನ್ನು ಮತ್ತು ಸುಧಾರಣೆಗಳನ್ನು ಕಂಡಿದೆ. ಚೋಳರ ವಾಸ್ತುಶೈಲಿಯುನ್ನು ಆಲಯದ ಮೂಲ ನಿರ್ಮಾಣಗಳಲ್ಲಿ ಗುರುತಿಸಬಹುದು. ತದನಂತರ ಈ ಪ್ರದೇಶವನ್ನು ವಶಪಡಿಸಿಕೊಂಡ ಹೊಯ್ಸಳರು ದೇವಾಲಯವನ್ನು ವಿಸ್ತರಿಸಿದರು[೧೨]. ಈ ಕಾಲದಲ್ಲಿ ನವರಂಗ ರೂಪುಗೋಂಡಿದೆ. ಹದಿನಾರು ಕಂಬಗಳಿಂದ ಕೂಡಿದ ಅತಿ ವಿಶಾಲವಾಗಿ ನಿರ್ಮಿತವಾಗಿದ್ದ ಈ ನವರಂಗ ನಂತರ ನಿರ್ಮಾಣವಾಗಿರುವ ಏಳು ಚಿಕ್ಕ ಗುಡಿಗಳಿಂದಾಗಿ ಈಗ ಒಂಬತ್ತು ಕಂಬಗಳಿಗೆ ಸಂಕುಚಿತವಾಗಿದೆ. ಒಳ ಮಹಾದ್ವಾರದ ಮುಂದಿರುವ ನಾಟ್ಯ ಗಣಪತಿ ವಿಗ್ರಹದಲ್ಲೂ ಹೊಯ್ಸಳ ಶೈಲಿ ಕಂಡುಬರುತ್ತದೆ. ಒಳಗಿನ ಮಹಾದ್ವಾರ, ರಾಜಗೋಪುರ, ಬಲಿಪೀಠ, ದ್ವಜಸ್ತಂಭ, ಸ್ನಪನ ಗಣಪತಿ, ದಕ್ಷಿಣಮೂರ್ತಿ, ಸುರ್ಯನಾರಾಯಣ, ಪಾರ್ವತಿ ವಿಗ್ರಹ ಮತ್ತು ಗುಡಿ, ನಾರಾಯಣಸ್ವಾಮಿ ಗುಡಿಯು ಶ್ರೀದೇವಿ ಮತ್ತು ಭೂದೇವಿ ವಿಗ್ರಹ. ಆಲಯದ ಮುಂದಿರುವ ಕಲ್ಯಾಣಿ ವಿಜಯನಗರದ ಆರಂಭ ಕಾಲದ ರಚನೆಗಳಾಗಿವೆ. ಬಲಿಪೀಠದ ಮೇಲೆ ೧೪೩೨ರ ಶಾಸನವು ದಾಖಲಾಗಿದೆ[೧೩].. ೧೭ & ೧೮ ನೇ ಶತಮಾನದಲ್ಲಿ ಮೈಸೂರಿನ ಒಡೆಯರ್ ವಂಶಸ್ಥರು ಇದನ್ನು ಇನ್ನಷ್ಟು ಅಭಿವ್ರುದ್ದಿ ಪಡಿಸಿದರು[೧೪]. ನಂಜುಂಡೇಶ್ವರನ ಆರಾಧಕರಾದ ಇವರ ಕೊಡುಗೆಯು ದಾಖಲೆ ೧೬೪೪ರಲ್ಲಿ ದೊರೆಯುತ್ತದೆ. ಚಾಮರಾಜ ಒಡೆಯರ ಪುತ್ರ, ರಾಜ ಒಡೆಯರ್ ದಾಯಾದಿ ದಳವಾಯಿ ವಿಕ್ರಮರಾಯ ನಿರ್ಮಿಸಿದ ದೊಡ್ಡ ಬಸವನ ವಿಗ್ರಹದೋಂದಿಗೆ ಮುಂದೆ ಹೊರಪ್ರಾಕಾರ ಹಾಗು ಬಸವನಕಟ್ಟೆಯನ್ನು ನಿರ್ಮಿಸಿ ವಿಶಾಲಗೊಳಿಸಿದವನು ಕಳಲೆ ನೆಂಜರಾಜ.[೧೫][೧೬]

೯ ಅಂತಸ್ತಿನ, ೧೨೦ ಅಡಿ ಎತ್ತರದ ದೇವಾಲಯದ ಗೋಪುರ ಮತ್ತು ಅದರ ವಿಸ್ತಾರವಾದ ಹೊರಭಾಗವನ್ನು ಮೈಸೂರು ರಾಜ ಕೃಷ್ಣರಾಜ ಒಡೆಯರ್ ೩ ರ ರಾಣಿ ದೇವರಾಜಮ್ಮಣ್ಣಿ ನಿರ್ಮಿಸಿದ್ದಾರೆ. [೧೭]ಶಿವಪುರಾಣದಲ್ಲಿ ನಂಜುನಗೂಡನ್ನು ಶ್ರೀ ಗರಲಪುರಿ ಎಂದು ಉಲ್ಲೇಖಿಸಲಾಗಿದೆ. ಪೌರಾಣಿಕ ಪವಿತ್ರ ಸ್ಥಳವು ದಕ್ಷಿಣ ಭಾರತದಲ್ಲಿ ಶಿವನ ವಾಸಸ್ಥಾನವಾಗಿದೆ ಎಂದು ಹೇಳಲಾಗುತ್ತದೆ. ಇದನ್ನು ದಕ್ಷಿಣ ಕಾಶಿ ಎಂದೂ ಕರೆಯುತ್ತಾರೆ. ತನ್ನ ಭಕ್ತರಾದ ದೇವತೆಗಳು ಮತ್ತು ನಾರದ ಋಷಿಗಳ ಮನವಿಗೆ ಶಿವನು ಕಾಣಿಸಿಕೊಂಡನು. ಕೇಶಿ ಎಂಬ ರಾಕ್ಷಸನು ಬ್ರಹ್ಮ ಮತ್ತು ವಿಷ್ಣು ದೇವರಿಂದ ವರವನ್ನು ಪಡೆದನು, ಅವರು ಅವನನ್ನು ಕೊಲ್ಲಲು ಸಾಧ್ಯವಿಲ್ಲ. ಈ ವರದಿಂದ ಅವನು ಅಮರನಂತೆ ಒಳ್ಳೆಯವನೆಂದು ಭಾವಿಸಿದನು ಮತ್ತು ಜನರು, ದೇವತೆಗಳು ಮತ್ತು ಋಷಿಗಳನ್ನು ತೊಂದರೆಗೊಳಿಸಿದನು. ಅಂತಿಮವಾಗಿ, ನಾರದ ಋಷಿ ದೇವತೆಗಳೊಂದಿಗೆ ಶಿವನನ್ನು ಎಲ್ಲರನ್ನೂ ರಕ್ಷಿಸುವಂತೆ ಮನವಿ ಮಾಡಿದರು. ಭಗವಾನ್ ಶಿವನು ಗರಲಪುರಿ ಶ್ರೀ ಕ್ಷೇತ್ರದಲ್ಲಿ (ಈಗಿನ ನಂಜನಗೂಡು) ಕಾಣಿಸಿಕೊಂಡು ಕೇಶಿ ಎಂಬ ರಾಕ್ಷಸನನ್ನು ಕೊಂದನು. ಭಗವಾನ್ ಶಿವನು ತನ್ನ ಅಂಶಕ್ಕೆ ಭರವಸೆ ನೀಡಿದನು - ತನ್ನ ದೈವಿಕ ಆತ್ಮದ ಒಂದು ಭಾಗವು ಯಾವಾಗಲೂ ಇಲ್ಲಿಯೇ ಉಳಿಯುತ್ತದೆ ಮತ್ತು ಮಾನವೀಯತೆಯನ್ನು ಆಶೀರ್ವದಿಸುತ್ತದೆ. ಈ ಸ್ಥಳವು ಪಾಪಾ ವಿನಾಶಿನಿ - ಪಾಪಗಳನ್ನು ಹೋಗಲಾಡಿಸುತ್ತದೆ ಎಂದು ಶಿವನು ಭರವಸೆ ನೀಡಿದನು. ನಂಜುನಗೂಡಿನ ಶ್ರೀಕಂಠೇಶ್ವರ ಅಥವಾ ನಂಜುಂಡೇಶ್ವರ (ಶಿವ)ನನ್ನು ಪ್ರಾರ್ಥಿಸುವ ಪ್ರತಿಯೊಬ್ಬ ಮನುಷ್ಯನು ಪವಿತ್ರ ಕಬಿನಿ ನದಿಯಲ್ಲಿ ಸ್ನಾನ ಮಾಡಿದ ನಂತರ ಪಾಪಗಳನ್ನು ತೊಡೆದುಹಾಕುತ್ತಾನೆ ಮತ್ತು ಭಗವಂತ ಶಿವನಿಂದ ಆಶೀರ್ವದಿಸುತ್ತಾನೆ. ಋಷಿ ಪರಶುರಾಮನು ತನ್ನ ತಂದೆ ಯಮದಗ್ನಿ ಋಷಿಯ ಆದೇಶದಂತೆ ತನ್ನ ತಾಯಿಯ ಶಿರಚ್ಛೇದವನ್ನು ಮಾಡಿದ ನಂತರ, ಮಾತೃಹತ್ಯ - ತಾಯಿಯ ಹತ್ಯೆಯಿಂದ ತನ್ನ ಪಾಪಗಳನ್ನು ತೊಡೆದುಹಾಕಲು ಬಯಸಿದನು. ನಾರದ ಮುನಿಗಳ ಸಲಹೆಯಂತೆ ಗರಲಪುರಿ (ನಂಜನಗೂಡು) ತಲುಪಿ ಶ್ರೀ ನಂಜುಂಡೇಶ್ವರ ಸ್ವಾಮಿಯನ್ನು ಪ್ರಾರ್ಥಿಸಿದರು. ಭಗವಾನ್ ಶಿವನು ಪ್ರತ್ಯಕ್ಷನಾಗಿ ಋಷಿ ಪರಶುರಾಮನಿಗೆ ಮಂಟಪವನ್ನು ನಿರ್ಮಿಸಲು ಮತ್ತು ಶಿವಲಿಂಗಕ್ಕೆ ಪೂಜೆಯನ್ನು ಮಾಡಲು ಸಲಹೆ ನೀಡಿದನು. ತನ್ನ ಪರಶು - ಕೊಡಲಿಯಿಂದ ಪೊದೆಗಳನ್ನು ತೆರವುಗೊಳಿಸುತ್ತಿರುವಾಗ, ಅರಿವಿಲ್ಲದೆ ಋಷಿ ಪರಶುರಾಮನ ಕೊಡಲಿಯು ಶಿವಲಿಂಗಕ್ಕೆ ಬಡಿದಿತು ಮತ್ತು ಶಿವಲಿಂಗದ ತುದಿಯಲ್ಲಿ ರಕ್ತಸ್ರಾವ ಪ್ರಾರಂಭವಾಯಿತು. ಋಷಿ ಪರಶುರಾಮರು ತುಂಬಾ ತಪ್ಪಿತಸ್ಥರೆಂದು ಭಾವಿಸಿದರು ಮತ್ತು ನಾನು ಮತ್ತೊಂದು ಕ್ಷಮಿಸಲಾಗದ ಪಾಪವನ್ನು ಮಾಡಿದ್ದೇನೆ, ನನ್ನನ್ನು ಕೊಲ್ಲುವ ಮೂಲಕ ನನ್ನ ಎಲ್ಲಾ ಪಾಪಗಳಿಂದ ನಾನು ಮುಕ್ತನಾಗುತ್ತೇನೆ ಎಂದು ಹೇಳಿ ತನ್ನನ್ನು ಕೊಲ್ಲಲು ಸಿದ್ಧನಾದನು. ಭಗವಾನ್ ಶಿವನು ಕಾಣಿಸಿಕೊಂಡು ಋಷಿ ಪರಶುರಾಮನನ್ನು ಆಶೀರ್ವದಿಸಿದನು ಮತ್ತು ಶಿವಲಿಂಗದ ಮೇಲೆ ಒದ್ದೆಯಾದ ಮಣ್ಣನ್ನು ಲೇಪಿಸಲು ಹೇಳಿದನು (ಶ್ರೀ ನಂಜನಗೂಡಿನ ಮಣ್ಣಿನಲ್ಲಿ ಅಪಾರವಾದ ಗುಣಪಡಿಸುವ ಶಕ್ತಿಯಿದೆ). ಶಿವಲಿಂಗವು ರಕ್ತಸ್ರಾವವನ್ನು ನಿಲ್ಲಿಸಿತು. ಶಿವನು ಋಷಿ ಪರಶುರಾಮನಿಗೆ ಮಂಟಪವನ್ನು ನಿರ್ಮಿಸಲು ಮತ್ತು ಅವನ ತಪಸ್ಸನ್ನು ಮುಂದುವರಿಸಲು ಸಲಹೆ ನೀಡಿದನು. ಅಂತಿಮವಾಗಿ, ಶಿವನು ಋಷಿ ಪರಶುರಾಮನನ್ನು ಆಶೀರ್ವದಿಸಿದನು ಮತ್ತು ಅವನ ಎಲ್ಲಾ ಪಾಪಗಳಿಂದ ಅವನನ್ನು ಮುಕ್ತಗೊಳಿಸಿದನು ಮತ್ತು ಅವನಿಗೆ ಅಮರತ್ವವನ್ನು ದಯಪಾಲಿಸಿದನು. ಶಿವನ ಪತ್ನಿಯಾದ ಪಾರ್ವತಿ ದೇವಿಯು ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡಲು ಬಯಸಿದ್ದಳು. ಶಿವನು ಪಾರ್ವತಿ ದೇವಿಯನ್ನು ಗರಲಪುರಿ ನಂಗನಗೂಡಿಗೆ ಕರೆತಂದನು, ದೇವಿಯು ಕಬಿನಿ ನದಿಗೆ ಹೋಗಿ ನೀರನ್ನು ಸ್ಪರ್ಶಿಸಲು ಬಾಗಿದ. ರತ್ನದ ಮಣಿ - ಮಣಿ ತನ್ನ ಕಿರೀಟದಿಂದ ನೀರಿನಲ್ಲಿ ಬಿದ್ದಳು. ಭಗವಾನ್ ಶಿವನು ಪ್ರಸನ್ನನಾಗಿ, ದೇವಿ, ಇಲ್ಲಿಯವರೆಗೆ, ಈ ಸ್ಥಳವು ನನ್ನ ದೈವಿಕ ಆಶೀರ್ವಾದ ಮತ್ತು ಉಪಸ್ಥಿತಿಯನ್ನು ಹೊಂದಿತ್ತು, ಈ ಕ್ಷಣದಿಂದ ಅದು ನಿಮ್ಮ ಉಪಸ್ಥಿತಿ, ಅನುಗ್ರಹ ಮತ್ತು ಆಶೀರ್ವಾದವನ್ನು ಹೊಂದಿರುತ್ತದೆ. ಇದನ್ನು ದಕ್ಷಿಣ ಮಣಿಕರ್ಣಿಕಾ ಘಾಟ್ ಎಂದೂ ಕರೆಯುತ್ತಾರೆ.

ಟಿಪ್ಪುಸುಲ್ತಾನನು ಮೈಸೂರು ಸಂಸ್ಥಾನದ ಮೇಲೆ ಅಧಿಪತ್ಯ ಸ್ಥಾಪಿಸಿದಾಗ, ಆಲಯವು ಹಾನಿಗೊಳಗಾಗಿತ್ತೆಂದು ಬುಕಾನನ್ ಹೇಳುತ್ತಾನೆ[೧೮]. ದೇವಚಂದ್ರ ಕೂಡ, ಸರ್ವೇಜನರು ಕೇಳಿಕೊಂಡಾಗ ನಂಜನಗೂಡಿಗೆ ಇಲಾಬಾದ್ ಎಂದು ಕರೆದು ನಂಜುಂಡ ಲಿಂಗಮಂ ನಿರಾಜನಮೆಂದುಳಿಸಿದನೆಂದು ಹೇಳಿದ್ದಾನೆ. ಬಹುಶಃ ಟಿಪ್ಪು ಮೊದಲು ಆಲಯಕ್ಕೆ ಹಾನಿ ಮಾಡಲು ಯತ್ನಿಸಿದನಾದರೂ ನಂತರ ಅಮೂಲ್ಯವಾದ ಪಚ್ಚೆಲಿಂಗವನ್ನು, ಪಚ್ಚೆಹಾರವನ್ನು ಕಾಣಿಕೆಯಾಗಿ ನೀಡಿರುವ ಸಧ್ಯತೆ ಇದೆ[೧೯].

ಮೂರ್ತಿಗಳು

[ಬದಲಾಯಿಸಿ]

ನಂಜುಂಡೇಶ್ವರ ಲಿಂಗ: ಈ ಲಿಂಗವು ಸುಮಾರು ಮೂರೂ ಅಡಿ ಎತ್ತರದ ನಯವಾದ ಕೃಷ್ಣಶಿಲೆಯಿಂದ ರೂಪುಗೊಂಡಿದೆ. ಇದರ ಮೇಲಿರುವ ಬ್ರಹ್ಮಸೂತ್ರದ ಲಕ್ಷಣಗಳಿಂದ ಇದನ್ನ ವಿಜಯನಗರ ಆರಂಭಕಾಲದ್ದೆಂದು ಗುರುತಿಸಬಹುದು.  ಈ ಲಿಂಗದ ವಾಯುವ್ಯ ಭಾಗದಲ್ಲಿರುವ ಅರ್ಧ ಚಂದ್ರಾಕೃತಿಯ ಗುರುತು ಪರಶುರಾಮನ ಕೊಡಲಿಯಿಂದ ಆಗಿದ್ದು ಎಂಬ ಪ್ರತೀತಿ ಇದೆ.[೨೦]

ಆಧಿಕೇಶವ: ಇರಡೂವರೆ ಅಡಿ ಎತ್ತರದ ಜನಾರ್ಧನ ವಿಗ್ರಹ ಮತ್ತು ಅದರ ಗರ್ಭಗುಡಿಗಳು ನಂಜುಂಡೇಶ್ವರನ ಗರ್ಭ ಗುಡಿಗಿಂತಲೂ ಪುರಾತನವದ್ದಾಗಿದ್ದು. ನಂಜುಂಡೇಶ್ವರನ ಅಲಾಯಕ್ಕಿಂತ ಮೊದಲೇ ಇಲ್ಲಿ ನಾರಾಯಣನ ಗುಡಿ ಇದೆ.  ನಂತರ ನಂಜುಂಡೇಶ್ವರನ ಗುಡಿ ನಿರ್ಮಾಣವಾಗಿ ಕ್ರಮೇಣ ನಂಜುಂಡೇಶ್ವರನ ಪ್ರಭಾವ ಹೆಚ್ಚಿ ಆಲಯ ವಿಸ್ತಾರವಾದಾಗ ಎರಡು ಗುಡಿಗಳು ಒಂದೇ ಆವರಣಕ್ಕೆ ಸೇರಿ ಹೋದಂತ್ತಾಗಿದೆ.  ಆಧಿಕೇಶವನಿಗೆ ಗೋಕುಲಾಷ್ಟಮಿ, ಲಕ್ಶ್ಮಿ ಕಲ್ಯಾಣ ಬೃಂದಾವನೋತ್ಸವ ಮುಂತಾದ ದಿನಗಳಲ್ಲಿ ವಿಶೇಷ ಪೂಜೆ, ಉತ್ಸವ ನಡೆಯುತ್ತಿದ್ದು, ಸತ್ತವರಿಗೆ 'ವೈಕುಂಠದ ಬಾಗಿಲು' ತೆರೆಸುವ ಆಚರಣೆ ಇನ್ನು ರೂಡಿಯಲ್ಲಿದೆ.[೨೦]

ಪಾರ್ವತಿ: ವಿಜಯನಗರ ಶೈಲಿಯ ನಾಲ್ಕೂವರೆ ಅಡಿ ಎತ್ತರದ ಈ ವಿಗ್ರಹಕ್ಕೆ ತಾಳಿ ಕಂಠೀಹಾರ, ಭುಜಕೀರ್ತಿ, ಕೈಕಡಗ , ಕಾಲುಂದಗೆ ಹಾಗು ಕರಂಡ ಶೈಲಿಯ ಮುಕುಟಲಂಕಾರಗಳಿವೆ.  ಶ್ರೀಚಕ್ರವು ದೇವಿಯ ಮುಂದಿದೆ.

ದೊಡ್ಡ ಬಸವ: ಈಗ ಆಲಯದ ಒಳಗೆ ಸೇರಿಹೋಗಿರುವ, ಆದರೆ ನಿರ್ಮಾಣದ ಕಾಲದಲ್ಲಿ ಅಲಾಯದ ಹೊರಭಾಗದಲ್ಲಿ ಸ್ಟಾಪಿತವಾಗಿದ್ದ ಇದು ಇಲ್ಲಿಯ ಆಲಯದ ಪ್ರದಾಣ ಆಕರ್ಷಣೆಗಳಲ್ಲಿ ಒಂದಾಗಿದೆ. ಸುಮಾರು ಎಂಟು ಅಡಿ ಎತ್ತರವಿರುವ ನಯವಾದ ಕಪ್ಪು ಏಕಶಿಲೆಯಿಂದ ನಿರ್ಮಿತವಾಗಿರುವ ಈ ನಂದಿ ವಿಗ್ರಹವು ಗತದಲ್ಲಿ ಚಾಮುಂಡಿ ಬೆಟ್ಟದ ಬಸವನಿಗಿಂತ ಕಿರಿದಾಗಿದ್ದರೂ ಕಲೆಗಾರಿಗಯಲ್ಲಿ ಅತ್ಯುತ್ತಮವಾಗಿದೆ.

ಶ್ಯವಪುರಾತನರು: ಆಲಯದ ದಕ್ಷಿಣ ಪ್ರಾಕಾರದಲ್ಲಿರಿವ ಈ ಅರವತ್ತಾರು ಪುರಾತನನ ವಿಗ್ರಹಗಳು ಚೋಳ ಕಾಲದ್ದೆಂಬ ಮಾತಿದೆ. ಆದರೆ ವಿಗ್ರಹಗಳ ಶಿಲ್ಪಿಶೈಲಿಯು ಹದಿನೆಂಟನೇ ಶತಮಾನವನ್ನು ಪ್ರತಿನಿಧಿಸುವುದರಿಂದ ಆಲಯವನ್ನು ವಿಸ್ತಾರಗೊಳಿಸಿದ ಕಳಲೆ ನೆಂಜರಾಜಯ್ಯನಿಂದ ನಿರ್ಮಿತವಾಗಿರುವ ಸಾಧ್ಯತೆ ಹೆಚ್ಚಿದೆ.

''ಲೀಲಾಮೂರ್ತಿಗಳು: ಆಲಯದ ಉತ್ತರ ಪ್ರಕಾರದಲ್ಲಿ ಈಶ್ವರನ ವಿವಿಧ ಲೀಲೆಗಳನ್ನು ಸಾರುವ ಇಪ್ಪತ್ತೈದು ಮೂರ್ತಿಗಳಿವೆ. ಮುಮ್ಮಡಿ ಕೃಷ್ಣರಾಜ ಒಡೆಯರಿಂದ  ನಿರ್ಮಿತವಾಗಿರುವ ಈ ಮೂರ್ತಿಗಳು ಸಹಜ ಸುಂದರ ಕೆತ್ತನೆಯಿನ್ದ ಕೂಡಿದ್ದು ಹತ್ತೊಂಬತ್ತನೆ ಶತಮಾನದ ಮೂರ್ತಿ ಶಿಲ್ಪಕ್ಕೆ ಅತ್ಯುತ್ತಮ ಮಾದರಿಯಾಗಿವೆ. ಇವುಗಳಲ್ಲಿ ಕಾಳಸಂಹಾರ ಮೂರ್ತಿ ಮಾರ್ಕಂಡೇಯನನ್ನು ಯಮನಿಂದ ರಕ್ಷಿಸಲು ಮುಂದಾದ ಶಿವ ಮೃತ್ಯುಂಜಯ ರೂಪವನ್ನ ಹೊಂದಿರುವುದರಿಂದ ವಿಶೇಷ ಮಹತ್ವ ಪಡೆದಿದೆ.[೨೦]

ಮುಮ್ಮಡಿ ಕೃಷ್ಣರಾಜ ಒಡೆಯರ ಭಕ್ತಿ ವಿಗ್ರಹ: ಇವರು ನೇಂಜುಂಡೇಶ್ವರನ ಮೇಲಿಟ್ಟಿದ್ದ ಅತೀವ ಭಕ್ತಿಯ ದ್ಯುತಕವಾಗಿ ಕುಟುಂಬದೊಂದಿಗೆ ಅವರ ಭಕ್ತಿ ವಿಗ್ರಹವು ಆಲಯದ ದಕ್ಷಿಣ ಪ್ರಾಕಾರದಲ್ಲಿದೆ.

'ಚಂಡಿಕೇಶ್ವರ:ಆಲಯದ ಕಾವಲುಗಾರನಾದ ಇವನು, ಆಲಯಕ್ಕೆ ಬಂದು ಹೋಗುವವರ ಪುಣ್ಯದ ಲೆಕ್ಕ ಇಡುವವನು ಎಂಬ ನಂಬಿಕೆ ಇದೆ.  ಹೀಗಾಗಿ ತಾವು ಬಂದಿದ್ದರ ಬಗ್ಗೆ ಈತನಿಗೆ ಮನವರಿಕೆ ಮಾಡಿಕೊಡಲು ಇವನ ಪುಟ್ಟ ಗುಡಿಯ ಕಡೆ ಗೋಡೆ ಒತ್ತಿ ಚಪ್ಪಾಳೆ ಹಾಕಿ ' ಈಶ್ವರನ ದರ್ಶನ ಆಯಿತು, ಪಾರ್ವತೀ ದರ್ಶನ ಆಯಿತು, ಈಗ ನಿನ್ನ ದರ್ಶನಕ್ಕೆ ಬಂದಿದ್ದೇನೆ, ಯಮನ ಕಡೆಯವರು ಕೇಳಿದರೆ ಶಿವನ ಕಡೆಯವರು ಬಂದಿದ್ದರು ಎಂದು ಹೇಳಿಬಿಡು' ಎಂಬ ವರದಿ ಒಪ್ಪಿಸುತ್ತಾರೆ.  ಅಲ್ಲದೆ ಮಕ್ಕಳ ಚಂಡಿತನ ನಿವಾರಿಸುವ ಶಕ್ತಿ ಈತನಲ್ಲಿದೆ ಎಂಬ ನಂಬಿಕಿಯಿಂದಾಗಿ ಮಕ್ಕಳಿಂದ ಪೂಜೆ ಮಾಡಿಸಿ, 'ನನ್ನ ಚಂಡಿತನ ತಗೆದುಕೊಂಡು ಸಾಧುತನ ಕೊಡು ಎಂದು ಹೇಳಿಸುತ್ತಾರೆ.

ಲೋಹ ವಿಗ್ರಗಳು: ಆಲಯದಲ್ಲಿ ಸುಮಾರು ತೊಂಬತ್ತೊಂದು ಲೋಹ ವಿಗ್ರಹಗಳನ್ನು ನೋಡಬಹುದು. ಇವುಗಳಲ್ಲಿ ಹೆಚ್ಚು ಬಳಕೆಯಲ್ಲಿರುವುದು ಅಸ್ತ್ರಮೂರ್ತಿ, ಚಂದ್ರಶೇಖರ-ಪಾರ್ವತಿ, ಮತ್ತು ಉಮಾ-ಮಹೇಶ್ವರನ ವಿಗ್ರಹಗಳು.  ತಾಂಡವೇಶ್ವರ-ಶಿವಕಾಮಿನಿ ವಿಗ್ರಹಗಳು ನಟರಾಜನ ಪ್ರತಿರೂಪವಾಗಿ ನಿತ್ಯ ಪೂಜೆ ಪಡೆಯುತ್ತಿವೆ. ಗಣಪತಿ ದೇವಸೇನ-ಸುಬ್ರಮಣ್ಯ-ವಾಲ್ಲೀದೇವಿ, ಮನೋನ್ಮಣಿ, ಚಂಡಿಕೇಶ್ವರ ವಿಗ್ರಹಗಳು ಹಬ್ಬ, ಜಾತ್ರೆಗಳ ವೇಳೆಯಲ್ಲಿ ರಥಗಳನ್ನೇರುತ್ತವೆ. ಉಳಿದಂತೆ ೬೩ ಪುರಾತನದ ಲೋಹ ವಿಗ್ರಹಗಳು ಕಳಲೆ ನೆಂಜರಾಜಯ್ಯನಿಂದ ಕೊಡುಗೆಯಾಗಿ ದೇವಾಲಯದ ಅಮೂಲ್ಯ ಆಸ್ತಿಯಾಗಿವೆ.

ಆಲಯದ ಹೊರಪ್ರಕಾರದ ನಾಲ್ಕು ದಿಕ್ಕಿನ ಗೋಡೆಗಳ ಮೇಲೆ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿತವಾದ ಅಲಂಕಾರಿಕ ಚಿಕ್ಕ ಗೋಪುರಗಳ ಕೋಷ್ಠ ಸುತ್ತುವರಿದಿದೆ. ಪ್ರತಿಯೊಂದು ಕೋಷ್ಠದ ಒಳಗೆ ಇರುವ ಶಿವಮೂರ್ತಿಗಳು ಶಿಲ್ಪದ ದೃಷ್ಟಿಯಿಂದ ಮಹತ್ವದ ದೇವಾ ಮೂರ್ತಿಗಳಾಗಿವೆ.  ಅಷ್ಟದಿಕ್ಪಾಲಕರು, ನಾರಾಯಣ, ಬ್ರಹ್ಮ, ವೀರಭದ್ರ, ಚಾಮುಂಡೇಶ್ವರಿ, ಭೈರವ, ಹದಿನಾರು ವಿವಿಧ ಭಂಗಿಗಳ ಸುಬ್ರಮಣ್ಯ, ಏಳು ರೀತಿಯ ತಾಂಡವೇಶ್ವರ ಹತ್ತು ಮಾದರಿಯ ದಕ್ಷಿಣಾಮೂರ್ತಿ, ಇಪ್ಪತ್ತೈದು ಲೀಲಾಮೂರ್ತಿಗಳು, ಮುತ್ತು ನಾಲ್ಕು ವಿನ್ಯಾಸದ ಗಣಪತಿಗಳು, ಸಪ್ತಮಾತೃಕೆಯರು ಮುಂತಾದ ವೈವಿಧ್ಯಮಯ ಗಾರೆಶಿಲ್ಪಗಳಿವೆ.  ಅಪೂರ್ವ ವಿನ್ಯಾಸದಿಂದ ಕೊಡಿದ ಇವು ಆಲಯಕ್ಕೆ ಬಾಹ್ಯ ಆಕರ್ಷಣೆಯನ್ನು ನೀಡುವುದರ ಜೊತೆಯಾಗಿ ಕಲಾಶೈಲಿಯಿಂದ ಆಲಯದ ಅಂತರೀಗ ಮಹತ್ವವನ್ನು ಹೆಚ್ಚಿಸಿವೆ.  ಆಲಯದಲ್ಲಿ ಒಟ್ಟು ಇದು ವಿಮಾನ ಹಾಗೂ ಎರಡು ಮಹಾಗೋಪುರಗಳಿವೆ. ನಂಜುಡೇಶ್ವರನ ವಿಮಾನದ ಎಡ ಮತ್ತು ಬಲ ಭಾಗದಲ್ಲಿ ಎರಡು ಬಿಲ್ವ ವೃಕ್ಷಗಳು ಬೆಳೆದಿವೆ.  ಪಾರ್ವತೀ ಗುಡಿಯ ಬಲಪಕ್ಕದ ಬೆಳಕಿನ ಕಿಂಡಿಯ ಮೂಲಕ ನೋಡಿದರೆ ಎಡಭಾಗದ ವೃಕ್ಷ ಕಾಣಿಸುತ್ತದೆ. ಇದರ ದರ್ಶನದಿಂದ ಆಶ್ಚರ್ಯ, ಆನಂದಗಳ ಜೊತೆಗೆ ಅಲೌಕಿಕವಾದ ಅನುಭೂತಿಯನ್ನು ಭಕ್ತರು ಪಡೆಯುತ್ತಾರೆ.

ವಾಹನಗಳು: ನಂಜುಂಡೇಶ್ವರನ ಆಲಯದಲ್ಲಿ ಕುದುರೆ, ವೃಷಭ, ಆನೆ ಮುಂತಾದ ಪ್ರಾಣಿ ವಾಹನಗಳನ್ನು, ಗರುಡ, ಹಂಸ ಮುಂತಾದ ಪಕ್ಷಿ ವಿವಾಹನಗಳನ್ನು, ಕೈಲಾಸ ವಾಹನ, ಭೂತವಾಹನಗಂತಹ ಕಾಲ್ಪನಿಕ ವಾಹನಗಳನ್ನು ನೋಡಬಹುದು.  ಈ ವಾಹನಗಳು ಮರ, ಬೆಳ್ಳಿ, ಮತ್ತಿತರ ಲೋಹಗಳಿಂದ ನಿರ್ಮಿತವಾಗಿವೆ.  ಬೆಳ್ಳಿಯ ಚಿಕ್ಕಆನೆ ವಾಹನ , ನಂದಿವಾಹನ, ಕುದುರೆ ವಾಹನ, ಹಂಸವಾಹನಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರ ಆಸ್ಥಾನಿಕರು ಮತ್ತು ಸಂಭಂದಿಕರು ನೀಡಿದ್ದಾರೆ ಬೆಳ್ಳಿಪಲ್ಲಕಿಯನ್ನು ಸ್ವತಃ ಮಹಾರಾಜರೇ ನಿರ್ಮಿಸಕೊಟ್ಟಿರುತ್ತಾರೆ. ಈಗ ಹೆಚ್ಚಾಗಿ ಈ ವಾಹನಗಳನ್ನೇ ಬಳಸಿಕೊಳ್ಳುತ್ತಿದ್ದಾರೆ. ಇವುಗಳಿಗಿಂತ ದೊಡ್ಡದಾದ ಮರದ ನಂದಿವಾಹನ, ಗರುಡ ವಾಹನ, ಸರ್ಪವಾಹನ, ಭೂತವಾಹನ ಕುದುರೆವಾಹನ, ಹಂಸವಾಹನಗಳನ್ನು ಬಸವನಕಟ್ಟೆಯ ಎಡಭಾಗದಲ್ಲಿ ಇಡಲಾಗಿದೆ.  ಇವುಗಳಲ್ಲದೆ ಅರಮನೆ ಮುಂದಿರುವ ಆಲಯದ ವಾಹನ ಮಂಟಪದಲ್ಲಿ ಅತಿ ದೊಡ್ಡ ವಾಹನಗಳಾದ ಗಜರಾಥ, ಕುದುರೆವಾಹನ, ಬೆಳ್ಳಿ ಕೈಲಾಸ ವಾಹನಗಳನ್ನು ಇಡಲಾಗಿದೆ.[೨೧][೨೨][೨೦]

ರಥಗಳು

[ಬದಲಾಯಿಸಿ]

ನಂಜುಂಡೇಶ್ವರನ ಜಾತ್ರೆಯ ಮುಖ್ಯ ಆಕರ್ಷಣೆ ಎಂದರೆ ಇಲ್ಲಿನ ಪಂಚಾರಥಗಳು.  ದೊಡ್ಡರಥ ಸುಮಾರು ತೊಂಬತ್ತು ಅಡಿ ಎತ್ತರವಿದ್ದರೆ ಚಿಕ್ಕರಥ ಸುಮಾರು ನಲವತ್ತು ಅಡಿ ಎತ್ತರವಿದೆ. ಅಲ್ಲದೆ ಇತ್ತೀಚಿಗೆ ಸುಮಾರು ೪೦ ಅಡಿ ಎತ್ತರದ ಬೆಳ್ಳಿ ರಥವನ್ನು ಮಾಡಿಸಲಾಗಿದೆ. ದೊಡ್ಡರಥ ಮತ್ತು ಅಮ್ಮನವರ ರಥಗಳೆರಡೂ ಪುರಾತನವಾದವು. 'ಗೌತಮ ರಥ ' ಗಳೆಂದೇ ಪ್ರಸಿದ್ಧವಾಗಿವೆ.  ೧೮೧೯ರಲ್ಲಿ ಈ ರಥಗಳನ್ನು ಮುಮ್ಮಡಿ ಕೃಷ್ಣರಾಜ ಒಡೆಯರು ಜೀರ್ಣೋದ್ಧಾರ ಮಾಡಿಸುವಾ ಸಂದರ್ಭದಲ್ಲಿ 'ಗೌತಮರು ಮಾಡಿಸಿದ ರಥವು ಶಿಥಿಲವಾಗಿದ್ದು ಈ ದಿವಸ ಮಾಡಿಸಿದರ ಸೇವೆ' ಎಂದು ಹೇಳಲಾಗಿದೆ.  ನಂತರವೂ ಈ ರಥಗಳು ಅನೇಕ ಸಲ ಜೀರ್ಣೋದ್ಧಾರವಾಗಿವೆ.[೨೩]

ಈ ರಥಗಳ ಬೃಹುತ್ ಭಾರವನ್ನೆಲ್ಲಾ ಚಕ್ರಗಳೇ ಹೊರಬೇಕಾಗಿರುವುದ್ರಿಂದ ಚಕ್ರಗಳು ಬೇಗ ಶಿಥಿಲವಾಗುತ್ತವೆ. ಸುಮಾರು ಹದಿನಲ್ಕು ವರ್ಷಗಳಿಗೊಮ್ಮೆ ಚಕ್ರಗಳನ್ನು ಬದಲಾಯಿಸಲಾಗುತ್ತದೆ.  ಈ ರಥ ಚಕ್ರಗಳನ್ನು ಇಲ್ಲಿಗೆ ಸಮೀಪದ ಮುಳ್ಳೂರು ಗ್ರಾಮದ ಬಡಗಿಗಳು ಮಾಡುತ್ತಾರೆ.  ಚಕ್ರಗಳ ಮೇಲೆ ಕೆತ್ತಿದವರ ಹೆಸರು ಧಾಖಲಾಗಿವೆ.  ರಥಗಳಿಗೆ ನಾಲ್ಕು ಚಕ್ರಗಳಿರುವುದು ಸಾಮಾನ್ಯವಾದರೂ ದೊಡ್ಡ ರಥ ಮತ್ತು ಪಾರ್ವತೀ ರಥಗಳಿಗೆ ಆರು ಚಕ್ರಗಳಿವೆ.  ಇವುಗಳನ್ನು ಮಾಮೂಲಿ ಚಕ್ರಗಳಿಂತದಲ್ಲದೆ (ಅರಗಳ ಬದಲಿಗೆ) ಮರದ ಗಟ್ಟಿ ಹಲಗೆಗಳನ್ನು ವುರ್ತಾಕಾರದ ಲೋಹದ ಪಟ್ಟಿಗೆ ಬಂಧಿಸಿ ಮಾಡಲಾಗಿದೆ.  ಈ ಚಕ್ರಗಳ ವ್ಯಾಸ ಸುಮಾರು ಹತ್ತು ಅಡಿಗಳಷ್ಟಿದೆ.

ರಥದ ಮೇಲ್ಭಾಗವನ್ನು ರಥಪೀಠದ ಆಸರೆಯಲ್ಲಿ ಸುಮಾರು ನಲವತ್ತು ಅಡಿ ಎತ್ತರದ ನಾಲ್ಕು ಪೆನ್ನೇಮರಗಳನ್ನು ನಿಲ್ಲಿಸಿ ಅವುಗಳ ಸುತ್ತ ಇಪ್ಪತ್ತನಾಲ್ಕು ದಟ್ಟೆ(ಚಿಕ್ಕ ಸೀರೆ)ಗಳನ್ನು, ತೊಂಬತ್ತೆರಡು ಹೆಜ್ಜೆಗಳನ್ನು ಕಟ್ಟಿ ಅದರೊಳಗೆ ಉರ್ಜಿ(ಹಗ್ಗ)ಯನ್ನು ತುಂಬಿ ಸಿದ್ಧಗೊಳಿಸುತ್ತಾರೆ . ನಂತರ ಹೊರಭಾಗಕ್ಕೆ ಬಣ್ಣ ಬಣ್ಣದ ಭಾವುಟಗಳನ್ನು ತುದಿಯವರೆಗೂ ಸುತ್ತುತ್ತಾರೆ. ಎರಡು ದಿಕ್ಕುಗಳಿಗೆ ಬೃಹತ್ ಬಟ್ಟೆ ಬಾವುಟ ಕಟ್ಟುತ್ತಾರೆ. ತುದಿಗೆ ಸುಮಾರು ಹನ್ನೆರಡು ಅಡಿ ಉದ್ದ ಮತ್ತು ಆರು ಅಡಿ ವ್ಯಾಸದ ನಾಲ್ಕು ಹಿತ್ತಾಳೆಯ ಛತ್ರಿಗಳನ್ನು ಕಟ್ಟಿ ತುತ್ತತುದಿಯಲ್ಲಿ ಕಳಸ ಇಡುತ್ತಾರೆ.  ಹೀಗೆ ಕಾಮಟಿಗಳಿಂದ ಸಿದ್ದಗೊಂಡ ರಥ ಸುಮಾರು ತೊಂಬತ್ತಾರು ಅಡಿಗಳಷ್ಟು ಎತ್ತರ ಇದ್ದು ಆಲಯದ ಗೋಪುರಕ್ಕೆ ಸರಿ ಸಮಾನವೆನ್ನುವಂತೆ ನಿಲ್ಲುತ್ತದೆ. ಈ ರಥದ ಮುಂಭಾಗದಲ್ಲಿ, ನಾಲ್ಕು ಕುದುರೆಗಳು ಬ್ರಹ್ಮನ ಸಾರಥ್ಯದಲ್ಲಿ ರಥವನ್ನೆಳೆತ್ತಿವೆಯೇನೆಂಬ ಭಾವನೆ ಬರುವಂತೆ ಬ್ರಹ್ಮ ಮತ್ತು ಕುದುರೆಗಳ ಮರದ ಶಿಲ್ಪವನ್ನು ಜೋಡಿಸುರುತ್ತಾರೆ.  ಈ ರಥವನ್ನು ಎಳೆಯಲು ಸುಮಾರು ತೊಂಬತ್ತು ಮಾರು ಉದ್ದದ, ಒಂದು ಗೇಣು ದಪ್ಪದ ಉರ್ಜಿಯನ್ನು ಬಳಸುತ್ತಾರೆ. ರಥ ಎಳೆಯಲು ಸಹಸ್ರಾರು ಜನರು ಕೈಹಾಕಿದರು ರಥ ಜಗ್ಗದೆ ನಿಂತರೆ ಅದನ್ನು ಮುಂದೂಡಲು ಆನೆಯ ನೆರವನ್ನು ಪಡೆದುಕೊಳ್ಳಲ್ಲಗುತ್ತದೆ. ಉಳಿದ ನಾಲ್ಕು ರಥಗಳ ಅಲಂಕಾರವು ಹೀಗೆ ಇರುತ್ತದಾದರೂ ಮೂರೂ ಆಯಾಮಗಳಲ್ಲಿ ಅವುಗಳ ವಿಸ್ತೀರ್ಣ ಕಡಿಮೆ ಆಗುತ್ತದೆ.  ಚಿಕ್ಕರಥವನ್ನು ಪ್ರತಿ ಹುಣ್ಣಿಮೆ ಮತ್ತಿತರ ಹಬ್ಬಗಳಲ್ಲಿ ನಡೆಯುವ ರಥೋತ್ಸವಗಳಲ್ಲೂ ಬಳಸಿಕೊಳ್ಳುತ್ತಾರೆ.

ಜಾತ್ರೆ ಮತ್ತು ರಥೋತ್ಸವ

[ಬದಲಾಯಿಸಿ]

ದೊಡ್ಡ ಜಾತ್ರೆ ಮತ್ತು ಚಿಕ್ಕಜಾತ್ರೆ: ದೇವಸ್ಥಾನದಿಂದ ನಡೆಯುವ ದೊಡ್ಡ ಜಾತ್ರೆ ಉತ್ಸವವು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಜಾತ್ರೆಯಲ್ಲಿನ ಉತ್ಸವಗಳು ಐದು ವರ್ಣರಂಜಿತ ರಥಗಳನ್ನು ಒಳಗೊಂಡಿವೆ, ಇವುಗಳನ್ನು ರಥಬೀದಿಯಲ್ಲಿ(ಸುಮಾರು ೧.೫ ಕಿ.ಮಿ) ಭಕ್ತರು ಎಳೆಯುತ್ತಾರೆ. ಜಾತ್ರಾ ನಂತರ ಮುಂದಿನ ದಿನಗಲಲ್ಲಿ ಗಿರಿಜಾ ಕಲ್ಯಾಣ ೩ ದಿನಗಳ ಕಾಲ ನಡೆಯುತ್ತದೆ ಅತಿಂಮವಾಗಿ ತೆಪ್ಪೋತ್ಸವದೋಂದಿಗೆ ಕಾರ್ಯಕ್ರಮಕ್ಕೆ ಮುಗಿಯುತ್ತದೆ. ಇದು ಸಾಮಾನ್ಯವಾಗಿ ಎಪ್ರಿಲ್ ತಿಂಗಳ ಆರಂಭದಲ್ಲಿ ನಡೆಯುತ್ತದೆ [೨೪].

ರಥೋತ್ಸವ[೨೫]

  1. ಪ್ರತಿ ತಿಂಗಳ ಹುಣ್ಣಿಮೆಯ ದಿನ
  2. ಪ್ರತಿ ವರ್ಷ ರಥಸಪ್ತಮಿಯ ದಿನ
  3. ಮಹಾ ಶಿವರಾತ್ರಿಯ ದಿನ
  4. ಗಿರಿಜಾ ಕಲ್ಯಾಣ ಮಹೋತ್ಸವ
  5. ತೆಪ್ಪೊತ್ಸವ
  6. ಲಕ್ಷದೀಪೋತ್ಸವ
  7. ವರ್ಧಂತಿಯಂದು

ಛಾಯಾಂಕಣ

[ಬದಲಾಯಿಸಿ]

ಸಹ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Nanjundeshwara temple, Nanjangudu".
  2. Architecture of the Famous Srikanteshwara Temple
  3. "ಶ್ರೀ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ | ಮೈಸೂರು ಜಿಲ್ಲೆ, ಕರ್ನಾಟಕ ಸರ್ಕಾರ | ಪಾರಂಪರಿಕ ನಗರ | India". Retrieved 2024-07-17.
  4. Architecture of Karnataka#Nanjangud Temple
  5. "Sri Srikanteshwara Temple in Nanjangud.Info". Archived from the original on 2009-10-29. Retrieved 2022-08-06.
  6. "Tourism page in Nanjangud Town Municipal Council". Archived from the original on 2013-07-29. Retrieved 2022-08-06.
  7. "Srikanteshwara (Nanjundeswara) Temple | District Mysuru, Government of Karnataka | Heritage city | India" (in ಅಮೆರಿಕನ್ ಇಂಗ್ಲಿಷ್). Retrieved 2024-07-17.
  8. "Nanjangudu Srikanteshwara Shiva Temple". ePuja (in ಇಂಗ್ಲಿಷ್). Retrieved 2024-07-17.
  9. Masala Chai Media (2021-09-26). ಶ್ರೀ ನಂಜುಂಡೇಶ್ವರ ಸ್ವಾಮಿ ಸ್ಥಳ ಪುರಾಣ! | Story of Sri Nanjundeshwary Swamy | Mysore | Famous Temples. Retrieved 2024-07-17 – via YouTube.
  10. Hub, Mysuru Infra (2023-09-10). "Srikanteshwara Nanjangud Temple: A Testament to Spirituality and Tranquility". Mysuru Infra Hub (in ಅಮೆರಿಕನ್ ಇಂಗ್ಲಿಷ್). Retrieved 2024-07-17.
  11. "Sri Srikanteshwara swamy Temple, Rastrapathi Road, Nanjangudu - 571301, Mysuru District [TM000007].,Nanjangudu Sri Nanjundeshwaraswamy,Nanjangudu Sri Nanjundeshwaraswamy,Srikanteshwaraswamy". itms.kar.nic.in. Retrieved 2024-07-18.
  12. https://gazetteer.karnataka.gov.in/storage/pdf-files/pdf/taluk/nanjangudu%202011%20taluk/Preface.pdf[ಶಾಶ್ವತವಾಗಿ ಮಡಿದ ಕೊಂಡಿ]
  13. Settar, S. (1992). The Hoysaḷa Temples (in ಇಂಗ್ಲಿಷ್). Institute of Indian Art History Karnatak University. ISBN 978-81-900172-1-3.
  14. madur (2020-08-21). "Srikanteshwara Temple In Nanjangud, Mysore - An Architectural Journey Through Time". Karnataka.com (in ಅಮೆರಿಕನ್ ಇಂಗ್ಲಿಷ್). Retrieved 2024-07-17.
  15. https://ijcrt.org/papers/IJCRT2007559.pdf
  16. "34_Nanajagudu_Shrikanteshwara_Dharmika_Shasanagalu.pdf". Google Docs. Retrieved 2024-07-17.
  17. "Srikanteshwara (Nanjundeswara) Temple". Mysuru District Website.
  18. Buchanan-Hamilton, Francis (1807). A journey from Madras through the countries of Mysore, Canara, and Malabar.
  19. Daniélou, Alain (2003-02-11). A Brief History of India (in ಇಂಗ್ಲಿಷ್). Inner Traditions/Bear. ISBN 978-1-59477-794-3.
  20. ೨೦.೦ ೨೦.೧ ೨೦.೨ ೨೦.೩ "Sri Srikanteshwara swamy Temple, Rastrapathi Road, Nanjangudu - 571301, Mysuru District [TM000007].,Nanjangudu Sri Nanjundeshwaraswamy,Nanjangudu Sri Nanjundeshwaraswamy,Srikanteshwaraswamy". itms.kar.nic.in. Retrieved 2024-07-18.
  21. "Karnataka Itihasa Academy – Page 32 – Karnataka Itihasa Academy" (in ಅಮೆರಿಕನ್ ಇಂಗ್ಲಿಷ್). Retrieved 2024-07-18.
  22. https://dpal.karnataka.gov.in/storage/pdf-files/08%20of%201962%20(E).pdf
  23. "1,000-year-old Nanjangud temple to get a facelift soon". The Hindu (in Indian English). 2016-05-21. ISSN 0971-751X. Retrieved 2024-07-18.
  24. "ಅದ್ಧೂರಿಯಾಗಿ ಜರುಗಿದ ನಂಜನಗೂಡು ದೊಡ್ಡ ಜಾತ್ರೆ; ಪಂಚ ರಥ ಎಳೆದು ಸಂಭ್ರಮಿಸಿದ ಭಕ್ತರು". Vijay Karnataka. Retrieved 2024-07-18.
  25. information, Temples in India (2018-09-12). "Nanjangud Temple Timings, Jatra, Festivals". Templesinindiainfo (in ಅಮೆರಿಕನ್ ಇಂಗ್ಲಿಷ್). Retrieved 2024-07-18.