ತೀರ್ಥಕ್ಷೇತ್ರ
ವೇದದಲ್ಲಿ ಪುಣ್ಯಫಲಪ್ರದಗಳಾದ ಯಜ್ಞಗಳು ವಿಧೇಯವಾಗಿವೆ. ಆದರೆ ಎಲ್ಲರೂ ಯಜ್ಞಗಳನ್ನು ಮಾಡಲು ಸಾಧ್ಯವಿಲ್ಲ. ಆದಕಾರಣ ಋಷಿಗಳು ಎಲ್ಲರಿಗೂ ಉತ್ತಮ ಫಲಗಳನ್ನು ನೀಡುವ ತೀರ್ಥಗಳಿಂದ ಕೂಡಿದ ಕ್ಷೇತ್ರಗಳನ್ನು ತಿಳಿಸಿ ಈ ಕ್ಷೇತ್ರಗಳಿಗೆ ಹೋಗಿ ಸ್ನಾನ ಶ್ರಾದ್ಧಾದಿಗಳನ್ನು ಮಾಡಬೇಕೆಂದೂ ತೀರ್ಥಾಭಿಗಮನಂ ಪುಣ್ಯಂ ಯಜ್ಞೈರಪಿ ವಿಶಿಷ್ಯತೆ ಎಂದೂ ತಿಳಿಸಿರುತ್ತಾರೆ. ಇವುಗಳನ್ನು ತೀರ್ಥಕ್ಷೇತ್ರಗಳೆಂದು ಕರೆಯಲಾಗುತ್ತದೆ. ಋಷಿಗಳು ತಿಳಿಸಿರುವ ಎಲ್ಲ ತೀರ್ಥಕ್ಷೇತ್ರಗಳೂ ಪಾಪನಿವಾರಕಗಳಾದರೂ ಅವುಗಳಲ್ಲಿ ಪರಸ್ಪರ ಸಾಪೇಕ್ಷತೆ ಇರುವುದಿಲ್ಲ. ಕೆಲವು ತೀರ್ಥಕ್ಷೇತ್ರಗಳ ನಾಮಸ್ಮರಣ ಮಾತ್ರದಿಂದಲೇ ಪಾಪಗಳು ದೂರವಾಗುತ್ತವೆ ಎಂದು ತಿಳಿಸಿರುತ್ತಾರೆ.
ಸ್ವರ್ಗ ಮತ್ರ್ಯ ರಸಾತಲ ದೈವ ಎಂದು ಲೋಕಭೇದದಿಂದ ತೀರ್ಥಕ್ಷೇತ್ರಗಳು ನಾಲ್ಕು ವಿಧ. ಇವುಗಳಲ್ಲಿ ಮತ್ರ್ಯ ಲೋಕದಲ್ಲಿರುವ ತೀರ್ಥಕ್ಷೇತ್ರಗಳೂ ದೈವ ಅಸುರ ಆರ್ಷ ಮಾನುಷ ಎಂದು ನಾಲ್ಕು ಬಗೆ. ಬ್ರಹ್ಮ ವಿಷ್ಣು ಶಿವಾದಿ ದೇವ ನಿರ್ಮಿತವಾದುವು ದೈವ ತೀರ್ಥಕ್ಷೇತ್ರಗಳು. ವಾರಾಣಸಿ ಪ್ರಭಾಸ ಪುಷ್ಕರ ಮೊದಲಾದುವು ದೈವ ನಿರ್ಮಿತ ಕ್ಷೇತ್ರಗಳು. ಹೀಗೆಯೇ ಹಿಮವತ್ಪರ್ವತವನ್ನಾಶ್ರಯಿಸಿರುವ ಸರಸ್ವತೀ ಗಂಗಾ ನರ್ಮದಾ ಈ ಮೂರೂ ನದಿಗಳೂ ಬ್ರಹ್ಮ ವಿಷ್ಣು ಈಶ್ವರರೂಪ ತ್ರಿದೈವತಾತ್ಮಕ ನದಿಗಳು (ತೀರ್ಥಕ್ಷೇತ್ರಗಳು). ಕೇನಾಪಿ ನ ಕೃತಂ ಯತ್ರ ದೇವಖಾತಮಿತಿ ಸ್ಮೃತಂ ಎಂದು ತಿಳಿಸಿರುವಂತೆ ಈ ತೀರ್ಥಕ್ಷೇತ್ರಗಳು ಯಾರಿಂದಲೂ ನಿರ್ಮಿತವಾದವುಗಳಲ್ಲ.
ಗಯಾಸುರ ನಿರ್ಮಿತವಾದುದು ಗಯಾಕ್ಷೇತ್ರ. ಇದರಂತೆ ವಿವಿಧ ಅಸುರರಿಂದ ನಿರ್ಮಿತವಾದ ಕ್ಷೇತ್ರಗಳಿವೆ. ಋಷಿಗಳಿಂದ ಪ್ರತಿಷ್ಠಿತವಾದುವು ಆರ್ಷತೀರ್ಥಕ್ಷೇತ್ರಗಳು. ಚಂದ್ರಸೂರ್ಯ ವಂಶಗಳ ರಾಜರಿಂದ ನಿರ್ಮಿತವಾದುವು ಮಾನುಷ ತೀರ್ಥಕ್ಷೇತ್ರಗಳು. ಈ ತೀರ್ಥಕ್ಷೇತ್ರಗಳನ್ನೇ ಭೌಮಾಂತರಿಕ್ಷ ತ್ರಿಲೋಕಸ್ಥಿತಿ ಭೇದದಿಂದ ಮೂರುವಿಧವಾಗಿ ಪೃಥಿವ್ಯಾಂ ನೈಮಿಷಂ ತೀರ್ಥಮಂತರಿಕ್ಷೇ ಚಪುಷ್ಕರಂ ತ್ರಯಾಣಾಮಪಿ ಲೋಕಾನಾಂ ಕುರುಕ್ಷೇತ್ರಂ ವಿಶಾಂಪತೇ ಎಂದು ಪರಿಗಣಿಸಿದ್ದಾರೆ. ತೀರ್ಥಕ್ಷೇತ್ರ ನಾಮಸ್ಮರಣ, ನಾಮಕೀರ್ತನ, ಸಂದರ್ಶನ, ಕ್ಷೇತ್ರದಲ್ಲಿ ಸ್ನಾನದಾನ ಶ್ರಾದ್ಧಾದಿಗಳಿಂದ ಪುಣ್ಯಫಲ ಲಭಿಸುತ್ತದೆ.
ಪ್ರತಿಯೊಂದು ದಿವ್ಯಕ್ಷೇತ್ರದಲ್ಲೂ ಎಂಟು ತೀರ್ಥಗಳಿವೆ. ಇವನ್ನು ಅಷ್ಟಾಕ್ಷರೀ ಸ್ವರೂಪವೆಂದು ಪರಿಗಣಿಸಿರುತ್ತಾರೆ. ಸಾಮಾನ್ಯವಾಗಿ ಕಾರ್ತಿಕ ಮಾಸದಲ್ಲಿ ಈ ತೀರ್ಥಗಳಲ್ಲಿ ಜಲಸಮೃದ್ಧಿ ಇರುತ್ತದೆ. ಆ ತಿಂಗಳಿನಲ್ಲಿ ಕ್ಷೇತ್ರದಲ್ಲಿರುವ ದೇವರಿಗೆ ಈ ತೀರ್ಥಗಳಲ್ಲಿ ಅಭಿಷೇಕ ನಡೆಯುತ್ತದೆ. ಭಕ್ತರೂ ಆ ಕಾಲದಲ್ಲಿ ಆಯಾ ತೀರ್ಥಗಳಲ್ಲಿ ಸ್ನಾನಮಾಡಿ ಪುನೀತರಾಗುತ್ತಾರೆ. ಈ ಎಂಟು ತೀರ್ಥಗಳಿಗೆ ಅಷ್ಟ ತೀರ್ಥವೆಂದೂ ಈ ಉತ್ಸವಕ್ಕೆ ಅಷ್ಟತೀರ್ಥೋತ್ಸವ ಎಂದೂ ಹೆಸರಿದೆ. ಈ ತೀರ್ಥಸ್ನಾನರೂಪವಾದ ಉತ್ಸವ ಇಂದಿಗೂ ನಡೆಯುವುದು ರೂಢಿಯಲ್ಲಿದೆ.