ವಿಷಯಕ್ಕೆ ಹೋಗು

ಕೈಲಾಸ ಪರ್ವತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

31°4′56″N 81°18′46″E / 31.08222°N 81.31278°E / 31.08222; 81.31278

ಕೈಲಾಸಪರ್ವತದ ದಕ್ಷಿಣಪಾರ್ಶ್ವದ ನೋಟ

ಕೈಲಾಸ ಪರ್ವತವು ಟಿಬೆಟ್ಹಿಮಾಲಯ ಶ್ರೇಣಿಯ ಗಾಂಗ್ ಡೈಸ್ ಸರಣಿಯ ಒಂದು ಶಿಖರ. ಈ ಪರ್ವತಪ್ರದೇಶವು ಏಷ್ಯಾದ ಹಲವು ಮಹಾನದಿಗಳಿಗೆ ಮೂಲಸ್ಥಾನವಾಗಿದೆ. ಸಿಂಧೂ ನದಿ, ಸಟ್ಲೆಜ್ ನದಿ ಮತ್ತು ಬ್ರಹ್ಮಪುತ್ರ ಈ ಆಸುಪಾಸಿನಲ್ಲಿಯೇ ಉಗಮಿಸುತ್ತವೆ. ಕೈಲಾಸಪರ್ವತವು ಹಿಂದೂ, ಬೌದ್ಧ, ಜೈನ ಮತ್ತು ಬಾನ್ ಧರ್ಮೀಯರಿಗೆ ಪವಿತ್ರ ತಾಣವಾಗಿದೆ. ಹಿಂದೂ ನಂಬಿಕೆಗಳ ಪ್ರಕಾರ ಕೈಲಾಸಪರ್ವತವು ಪರಶಿವನ ನೆಲೆ. ಕೈಲಾಸಪರ್ವತವು ಟಿಬೆಟ್ ನಲ್ಲಿ ಮಾನಸಸರೋವರ ಮತ್ತು ರಾಕ್ಷಸ್ ತಾಲ್ ಗಳ ಮಗ್ಗುಲಲ್ಲಿದೆ.

ಕೈಲಾಸಪರ್ವತವನ್ನು ಯಾರೂ ಆರೋಹಣ ಮಾಡಿರುವದರ ಬಗೆಗಿನ ದಾಖಲೆಗಳಿಲ್ಲ. ಹಿಂದೂ ಮತ್ತು ಬೌದ್ಧ ಧರ್ಮೀಯರು ಕೈಲಾಸಪರ್ವತವನ್ನು ಅತೀ ಪವಿತ್ರವಾದ ತಾಣವಾಗಿ ಪರಿಗಣಿಸುತ್ತಾರೆ ಹೀಗಾಗಿ ಈ ಪರ್ವತವನ್ನು ಏರಲು ಯಾರಿಗೂ ಅನುಮತಿ ದೊರೆಯುವುದಿಲ್ಲ. ಆಧಕಾರಣ ಜಗತ್ತಿನ ಪ್ರಮುಖ ಶಿಖರಗಳಲ್ಲಿ ಕೈಲಾಸಪರ್ವತವೊಂದು ಮಾತ್ರ ಆರೋಹಿಸಲ್ಪಟ್ಟಿಲ್ಲ. ಈ ಶಿಖರವು ೨೧,೭೭೮ ಅಡಿಗಳಷ್ಟು ಸಮುದ್ರಮಟ್ಟದಿಂದ ಎತ್ತರದಲ್ಲಿದೆ ಎಂದು ಅಂದಾಜು ಮಾಡಲಾಗಿದೆ.

ಹೆಸರುಗಳು

[ಬದಲಾಯಿಸಿ]

ಕೈಲಾಸ ಎಂಬ ಪದಕ್ಕೆ ಸಂಸ್ಕೃತ ಭಾಷೆಯಲ್ಲಿ ಸ್ಫಟಿಕ ಎಂಬ ಅರ್ಥವು ಇದೆ. ಟಿಬೆಟನ್ ಭಾಷೆಯಲ್ಲಿ ಈ ಪರ್ವತದ ಹೆಸರು ಗಾಂಗ್ಸ್ ರಿನ್-ಪೋ-ಚೆ. ಇದರ ಅರ್ಥವು "ಹಿಮದ ರತ್ನ" ಎಂದಾಗುವುದು. ಇನ್ನೊಂದು ಸ್ಥಳೀಯ ಹೆಸರು ಟಿಸೆ. ಜೈನ ಪರಂಪರೆಯಲ್ಲಿ ಕೈಲಾಸಪರ್ವತವನ್ನು ಅಷ್ಟಪಾದ ಎಂದು ಉಲ್ಲೇಖಿಸಲಾಗಿದೆ.

ಧಾರ್ಮಿಕ ಮಹತ್ವ

[ಬದಲಾಯಿಸಿ]

ಹಿಂದೂ ಧರ್ಮದಲ್ಲಿ

[ಬದಲಾಯಿಸಿ]
ಕೈಲಾಸಪರ್ವತದಲ್ಲಿ ತನ್ನ ಪತ್ನಿ ಪಾರ್ವತಿ ಮತ್ತು ಪುತ್ರರಾದ ಕಾರ್ತಿಕೇಯ ಮತ್ತು ಗಣೇಶರೊಂದಿಗೆ ಪರಶಿವ.

ಹಿಂದೂಧರ್ಮದ ಪ್ರಕಾರ ಪರಶಿವನು ಕೈಲಾಸಪರ್ವತದ ಶಿಖರದ ಮೇಲೆ ಹಿಮವಂತನ ಪುತ್ರಿ ಪಾರ್ವತಿಯೊಂದಿಗೆ ನೆಲೆಸಿರುವನು. ಶಿವನು ಇಲ್ಲಿ ಸದಾ ಧ್ಯಾನಮಗ್ನನಾಗಿರುತ್ತಾನೆ. ಅಲ್ಲದೇ ಧನಾಧಿಪತಿ ಕುಬೇರನ ನೆಲೆಯು ಸಹ ಕೈಲಾಸಪರ್ವತದ ಸನಿಹದಲ್ಲಿಯೇ ಎಂದು ಹೇಳಲಾಗುತ್ತದೆ. ಹಿಂದೂಧರ್ಮದ ಅನೇಕ ಶಾಖೆಗಳು ಕೈಲಾಸಪರ್ವತವನ್ನು ಸ್ವರ್ಗ, ಆತ್ಮದ ಅಂತಿಮ ನೆಲೆ ಮತ್ತು ವಿಶ್ವದ ಪರಮೋನ್ನತ ಅಧ್ಯಾತ್ಮಿಕ ಕೇಂದ್ರವೆಂದು ಪರಿಗಣಿಸುತ್ತವೆ.ವಿಷ್ಣುಪುರಾಣದ ಪ್ರಕಾರ ಕೈಲಾಸಪರ್ವತವು ಜಗತ್ತಿನ ಕೇಂದ್ರ ಮತ್ತು ಅದರ ನಾಲ್ಕು ಮುಖಗಳು ಸ್ಪಟಿಕ, ಪದ್ಮರಾಗ, ಸ್ವರ್ಣ ಮತ್ತು ನೀಲವೈಢೂರ್ಯದಿಂದ ಮಾಡಲ್ಪಟ್ಟಿವೆ. ಕೈಲಾಸಪರ್ವತವು ಜಗತ್ತಿನ ಆಧಾರಸ್ಥಂಭ. ಅದರ ಎತ್ತರ ೮೪೦೦೦ ಯೋಜನಗಳಷ್ಟು. ಅದು ವಿಶ್ವಮಂಡಲದ ಕೇಂದ್ರವಾಗಿದ್ದು ಪದ್ಮಾಕೃತಿಯಲ್ಲಿ ಹಬ್ಬಿರುವ ಆರು ಪರ್ವತಶ್ರೇಣಿಗಳ ಕೇಂದ್ರಸ್ಥಾನದಲ್ಲಿದೆ. ಕೈಲಾಸಪರ್ವತದಿಂದ ಹೊರಗಡೆ ಹರಿಯುವ ನಾಲ್ಕು ನದಿಗಳು, ನಾಲ್ಕೂ ದಿಕ್ಕಿನಲ್ಲಿ ಪ್ರವಹಿಸಿ ಜಗತ್ತನ್ನು ನಾಲ್ಕು ಪ್ರದೇಶಗಳನ್ನಾಗಿ ವಿಭಜಿಸಿವೆ.ಜಗತ್ತಿನ ಅತ್ಯಂತ ದೊಡ್ಡ ಮತ್ತು ಅತಿ ಪ್ರಮುಖ ಶಿಲೆಯಲ್ಲಿ ಕೊರೆದು ಮಾಡಿರುವ ದೇವಾಲಯವೆಂದರೆ ಎಲ್ಲೋರಾದ ಕೈಲಾಸ ದೇಗುಲ. ಇದಕ್ಕೆ ಕೈಲಾಸಪರ್ವತವೇ ಸ್ಫೂರ್ತಿ. ಈ ದೇವಸ್ಥಾನದ ಅನೇಕ ಶಿಲ್ಪಗಳು ಶಿವಪಾರ್ವತಿಯರಿಗೆ ಸಂಬಂಧಿಸಿದ ಘಟನಾವಳಿಗಳನ್ನು ತೋರಿಸುತ್ತವೆ. ಇವುಗಳ ಪೈಕಿ ರಾವಣನು ಕೈಲಾಸಪರ್ವತವನ್ನು ಬುಡಸಮೇತ ಕೀಳಲು ನಡೆಸಿದ ಪ್ರಯತ್ನವೂ ಒಂದು.

ಬೌದ್ಧ ಧರ್ಮದಲ್ಲಿ ಕೈಲಾಸಪರ್ವತ

[ಬದಲಾಯಿಸಿ]
ಕೈಲಾಸಪರ್ವತವನ್ನು ಚಿತ್ರಿಸಿರುವ ಟಿಬೆಟ್ ನ ಥಂಗ್ಕಾ

ತಾಂತ್ರಿಕ ಬೌದ್ಧರು ಕೈಲಾಸಪರ್ವತವು ಪರಮೋನ್ನತ ಆತ್ಮಾನಂದವನ್ನು ಪ್ರತಿನಿಧಿಸುವ ಡೆಮ್ ಚೋಕ್ ಬುದ್ಧನ ( ಡೆಮ್ ಚೋಗ್ ಮತ್ತು ಚಕ್ರಸಂವರ ಎಂಬ ಇತರ ಹೆಸರುಗಳು ಈತನಿಗೆ) ನೆಲೆಯೆಂದು ನಂಬುತ್ತಾರೆ. ತಾಂತ್ರಿಕ ಬೌದ್ಧಧರ್ಮದ ಮುಂದಾಳಾಗಿದ್ದ ಮಿಲರೇಪನು ಬಾನ್ ಧರ್ಮದ ನಾಯಕನಾಗಿದ್ದ ನಾರೋ-ಬೊಂಚುಂಗ್ ನಿಗೆ ಸವಾಲೆಸೆಯಲು ಟಿಬೆಟ್ ಗೆ ಆಗಮಿಸಿದನು. ಈರ್ವರ ಮಧ್ಯೆ ಮಾಯಮಂತ್ರಗಳ ತೀವ್ರ ಕದನ ನಡೆದು ಯಾರೂ ಜಯ ಸಾಧಿಸಲಾಗಲಿಲ್ಲ. ಕೊನೆಗೆ ಇಬ್ಬರಲ್ಲಿ ಯಾರು ಕೈಲಾಸಪರ್ವತದ ಶಿಖರವನ್ನು ಹೆಚ್ಚು ವೇಗವಾಗಿ ತಲುಪುವರೋ ಅವರೇ ವಿಜಯಿಯಾಗುವರೆಂದು ತೀರ್ಮಾನಿಸಲಾಯಿತು. ನಾರೋ-ಬೊಂಚುಂಗ್ ಮಾಯಾಪಾತ್ರೆಯೊಂದರ ಮೇಲೆ ಕುಳಿತು ಶಿಖರದತ್ತ ಧಾವಿಸತೊಡಗಿದರೆ ಮಿಲರೇಪನು ಮೌನವಾಗಿ ಕುಳಿತು ಧ್ಯಾನಮಗ್ನನಾದನು. ಆದರೆ ನಾರೋ-ಬೊಂಚುಂಗ್ ಇನ್ನೇನು ಶಿಖರವನ್ನು ಮುಟ್ಟಬೇಕೆನ್ನುವಷ್ಟರಲ್ಲಿ ಮಿಲರೇಪನು ಎದ್ದು ಸೂರ್ಯಕಿರಣಗಳ ಮೇಲೇರಿ ಶಿಖರವನ್ನು ಮೊದಲು ತಲುಪಿ ಸ್ಫರ್ದೆಯಲ್ಲಿ ವಿಜಯಿಯಾದನು. ಈತನಿಂದ ಟಿಬೆಟ್ ಗೆ ತಾಂತ್ರಿಕ ಬೌದ್ಧ ಧರ್ಮವು ಆಗಮಿಸಿತೆಂದು ನಂಬಿಕೆ. ( ಸೂಚನೆ : ಟಿಬೆಟ್ ಗೆ ತಾಂತ್ರಿಕ ಬೌದ್ಧಧರ್ಮವನ್ನು ತಂದವನು ಮಲಿರೇಪನೋ ಅಥವಾ ಪದ್ಮಸಂಭವನೋ ಎಂಬ ಬಗ್ಗೆ ಸಾಕಷ್ಟು ಗೊಂದಲವಿರುವುದು.)

ಜೈನಧರ್ಮದಲ್ಲಿ

[ಬದಲಾಯಿಸಿ]

ಕೈಲಾಸಪರ್ವತವನ್ನು ಅಷ್ಟಪಾದವೆಂದು ಕರೆಯುವ ಜೈನರು ತಮ್ಮ ಧರ್ಮದ ಮೂಲಪುರುಷ, ವರ್ತಮಾನ ಕಾಲದ ೨೪ ತೀರ್ಥಂಕರರಲ್ಲಿ ಮೊದಲನೆಯವನಾದ ಋಷಭದೇವ (ಆದಿನಾಥ ಎಂಬ ಹೆಸರೂ ಇದೆ) ನು ಈ ಸ್ಥಳದಲ್ಲಿ ನಿರ್ವಾಣ ಹೊಂದಿದನೆಂದು ನಂಬುವರು.

ಬಾನ್ ಧರ್ಮದಲ್ಲಿ

[ಬದಲಾಯಿಸಿ]

ಟಿಬೆಟ್ ನಲ್ಲಿ ಬೌದ್ಧಧರ್ಮಕ್ಕಿಂತ ಹಿಂದಿನದಾದ ಬಾನ್ ಧರ್ಮದ ಪ್ರಕಾರ ಈ ಸಂಪೂರ್ಣ ಪ್ರದೇಶ ಮತ್ತು ಒಂಭತ್ತು ಅಂತಸ್ತಿನ ಸ್ವಸ್ತಿಕ ಪರ್ವತವು ವಿಶ್ವದ ಸರ್ವ ಅಧ್ಯಾತ್ಮಿಕ ಶಕ್ತಿಗಳ ನೆಲೆ.

ತೀರ್ಥಯಾತ್ರೆ

[ಬದಲಾಯಿಸಿ]
ಉಪಗ್ರಹದಿಂದ ಕೈಲಾಸಪರ್ವತ, ಮಾನಸಸರೋವರ ಮತ್ತು ರಾಕ್ಷಸ ತಾಲ್ ಗಳ ಒಂದು ನೋಟ.

ಸಹಸ್ರಾರು ವರ್ಷಗಳಿಂದ ನಡೆದು ಬಂದಿರುವ ಸಂಪ್ರದಾಯದಂತೆ ಪ್ರತಿ ವರ್ಷ ದೊಡ್ಡ ಸಂಖ್ಯೆಯಲ್ಲಿ ಆಸ್ತಿಕರು ಕೈಲಾಸಪರ್ವತಕ್ಕೆ ತೀರ್ಥಯಾತ್ರೆ ಕೈಗೊಳ್ಳುವರು. ಹಲವು ಧರ್ಮದ ಶ್ರದ್ಧಾಳುಗಳು ಕೈಲಾಸಪರ್ವತಕ್ಕೆ ಕಾಲ್ನಡಿಗೆಯಲ್ಲಿ ಸುತ್ತುಬರುವುದು ಒಂದು ಪಾವನ ಕಾಯಕವೆಂದು ಭಾವಿಸುತ್ತಾರೆ. ಹಿಂದೂಗಳು ಮತ್ತು ಬೌದ್ಧರು ಪರ್ವತಕ್ಕೆ ಪ್ರದಕ್ಷಿಣವಾಗಿ ಸುತ್ತು ಬಂದರೆ ಜೈನರು ಮತ್ತು ಬಾನ್ ಧರ್ಮೀಯರು ಕೈಲಾಸಪರ್ವತಕ್ಕೆ ಅಪ್ರದಕ್ಷಿಣವಾಗಿ ಸುತ್ತು ಬರುತ್ತಾರೆ. ಪರ್ವತವನ್ನು ಒಂದು ಬಾರಿ ಸುತ್ತಿಬರಬೇಕಾದರೆ ೫೨ ಕಿ.ಮೀ. ಗಳಷ್ಟು ಉದ್ದದ ದಾರಿಯನ್ನು ಕ್ರಮಿಸಬೇಕಾಗುವುದು.

ಕೆಲವು ಯಾತ್ರಿಕರು ಕೈಲಾಸಪರ್ವತವನ್ನು ಒಂದೇ ದಿನದಲ್ಲಿ ಸುತ್ತಿಬರಬೇಕೆಂದು ನಂಬುವರು. ಆದರೆ ಒರಟು ಮೇಲ್ಮೈ, ಉನ್ನತಪ್ರದೇಶದಲ್ಲುಂಟಾಗುವ ಅಸ್ವಾಸ್ಥ್ಯ ಮತ್ತು ಪ್ರತಿಕೂಲ ವಾತಾವರಣಗಳಿಂದಾಗಿ ಇದು ಕಠಿಣಸಾಧ್ಯ ಮತ್ತು ಕೆಲವೇ ಕೆಲವರು ಮಾತ್ರ ಇದನ್ನು ಸಾಧಿಸುವರು. ಕೆಲವು ಭಕ್ತರು ಇಡೀ ಪರ್ವತಕ್ಕೆ ಅಂಗಪ್ರದಕ್ಷಿಣೆಯನ್ನು ಸಹ ಮಾಡುವರು. ಈ ಕ್ರಮದಲ್ಲಿ ಪ್ರತಿ ಹೆಜ್ಜೆಗೊಮ್ಮೆ ಭಕ್ತರು ಪರ್ವತಕ್ಕೆ ದೀರ್ಘದಂಡ ನಮಸ್ಕಾರ ಮಾಡಿ ಆ ಸ್ಥಾನವನ್ನು ಬೆರಳಿನಿಂದ ಗುರುತಿಸಿ ನಂತರ ಮಂಡಿಯೂರಿ ಪ್ರಾರ್ಥನೆ ಸಲ್ಲಿಸಿ ಮುಂದೆ ಕೈಗಳು ಮತ್ತು ಮಂಡಿಯ ಮೇಲೆ ಮೊದಲು ಗುರುತಿಸಿದ್ದ ಸ್ಥಾನಕ್ಕೆ ತೆವಳುವರು. ಈ ಪ್ರಕಾರದ ಅಂಗಪ್ರದಕ್ಷಿಣೆಯ ಮೂಲಕ ಕೈಲಾಸಪರ್ವತವನ್ನು ಒಂದು ಬಾರಿ ಸುತ್ತಿಬರಲು ಕನಿಷ್ಟ ನಾಲ್ಕು ದಿನಗಳು ತಗಲುತ್ತವೆಯಲ್ಲದೆ ಅತಿ ತೀವ್ರವಾದ ದೈಹಿಕ ದಂಡನೆಯನ್ನು ಸಹಿಸಿಕೊಳ್ಳಬೇಕಾಗುತ್ತದೆ.

ಕೈಲಾಸಪರ್ವತವು ಟಿಬೆಟ್ ನ ಹಿಮಾಲಯದಲ್ಲಿ ಅತಿ ದುರ್ಗಮ ಪ್ರಾಂತ್ಯದಲ್ಲಿ ಮತ್ತು ಪ್ರತಿಕೂಲ ಪರಿಸರದಲ್ಲಿದೆ. ಈಚೆಗೆ ಯಾತ್ರಿಕರಿಗೆ ಕೆಲವು ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವ ದಿಸೆಯಲ್ಲಿ ಪ್ರಯತ್ನಗಳು ಸಾಗಿವೆ. ಕೈಲಾಸಪರ್ವತವನ್ನು ಪೂಜಿಸುವ ಎಲ್ಲ ಧರ್ಮಗಳ ಪ್ರಕಾರ ಪರ್ವತಕ್ಕೆ ಕಾಲು ಸೋಕಿಸುವುದು ಅತಿ ಘೋರ ಪಾಪದ ಕಾರ್ಯ. ಇದನ್ನು ಮೀರಿ ಪರ್ವತವನ್ನು ಏರಲು ಹೊರಟವರು ಪ್ರಾಣಕಳೆದುಕೊಂಡರೆಂದು ಜನರ ಹೇಳಿಕೆ.

೧೯೫೦ರಲ್ಲಿ ಚೀನೀಯರಿಂದ ಟಿಬೆಟ್ ನ ಆಕ್ರಮಣ ಮತ್ತು ಭಾರತ-ಚೀನಾಗಳ ನಡುವೆ ಸಂಭವಿಸಿದ ಘರ್ಷಣೆಗಳಿಂದಾಗಿ ೧೯೫೯ ರಿಂದ ೧೯೮೦ ರ ವರೆಗೆ ಕೈಲಾಸಪರ್ವತದ ಯಾತ್ರೆ ನಿಂತುಹೋಗಿತ್ತು. ೧೯೮೦ರ ನಂತರ ಪ್ರತಿವರ್ಷ ಭಾರತದಿಂದ ಕೈಲಾಸಪರ್ವತಕ್ಕೆ ತೀರ್ಥಯಾತ್ರೆ ಕೈಗೊಳ್ಳಲು ನಿಗದಿತ ಸಂಖ್ಯೆಯ ಯಾತ್ರಿಕರಿಗೆ ಪರವಾನಿಗಿ ನೀಡಲಾಗುತ್ತಿದೆ. ಈ ಯಾತ್ರೆಯು ಭಾರತ ಮತ್ತು ಚೀನಾ ಸರಕಾರಗಳ ಮಾರ್ಗದರ್ಶನ ಮತ್ತು ನಿರ್ದೇಶನದಡಿ ನಡೆಯುವುದು. ಭಾರತೀಯರು ಸಾಮಾನ್ಯವಾಗಿ ಉತ್ತರಾಖಂಡಕುಮಾವ್ ಹಿಮಾಲಯವನ್ನು ಕಾಲ್ನಡಿಗೆಯಲ್ಲಿ ದಾಟಿ ಕೈಲಾಸಪರ್ವತವನ್ನು ತಲುಪುವರು. ಈ ಪಾದಯಾತ್ರೆಯು ಅತಿ ದೀರ್ಘದಾರಿಯದು ಮತ್ತು ಅಪಾಯಕಾರಿ ಕೂಡ. ಬೇರೆ ಮಾರ್ಗಗಳೆಂದರೆ ಕಾಠ್ಮಂಡುವಿನಿಂದ ಅಥವಾ ಲ್ಹಾಸಾದಿಂದ ರಸ್ತೆಯ ಮೇಲಿನ ಪಯಣ. ಕಾಠ್ಮಂಡು ಮತ್ತು ಲ್ಹಾಸಾಗಳನ್ನು ಭಾರತದಿಂದ ವಿಮಾನಯಾನದ ಮೂಲಕ ತಲುಪಬಹುದು.

ಪವಿತ್ರ ಕೈಲಾಸಪರ್ವತದ ಪ್ರದಕ್ಷಿಣೆಯನ್ನು ಕಾಲ್ನಡಿಗೆಯಿಂದ ಅಥವಾ ಕುದುರೆಯ ಮೇಲೆ ಕುಳಿತು ಮಾಡಬಹುದು. ಕಾಲ್ನಡಿಗೆಯು ೧೫೦೦೦ ಅಡಿ ಎತ್ತರದಲ್ಲಿ ಆರಂಭವಾಗಿ ಮುಂದೆ ೧೯೦೦೦ ಅಡಿ ಎತ್ತರದಲ್ಲಿ ಡೋಲ್ಮಾ ಪಾಸ್ ಅನ್ನು ದಾಟಬೇಕಾಗುವುದು. ಇದು ಒಟ್ಟು ಮೂರು ದಿನಗಳ ಹಾದಿ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]