ವಿಷಯಕ್ಕೆ ಹೋಗು

ತಾಮ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


29 ನಿಕ್ಕಲ್ತಾಮ್ರಸತವು
-

Cu

Ag
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ತಾಮ್ರ, Cu, 29
ರಾಸಾಯನಿಕ ಸರಣಿtransition metal
ಗುಂಪು, ಆವರ್ತ, ಖಂಡ 11, 4, d
ಸ್ವರೂಪmetallic pinkish red
ಅಣುವಿನ ತೂಕ 63.546(3) g·mol−1
ಋಣವಿದ್ಯುತ್ಕಣ ಜೋಡಣೆ [Ar] 3d10 4s1
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 1
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)8.96 g·cm−3
ದ್ರವಸಾಂದ್ರತೆ at ಕ.ಬಿ.8.02 g·cm−3
ಕರಗುವ ತಾಪಮಾನ1357.77 K
(1084.62 °C, 1984.32 °ಎಫ್)
ಕುದಿಯುವ ತಾಪಮಾನ2835 K
(2562 °C, 4643 °F)
ಸಮ್ಮಿಲನದ ಉಷ್ಣಾಂಶ13.26 kJ·mol−1
ಭಾಷ್ಪೀಕರಣ ಉಷ್ಣಾಂಶ300.4 kJ·mol−1
ಉಷ್ಣ ಸಾಮರ್ಥ್ಯ(25 °C) 24.440 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 1509 1661 1850 2089 2404 2836
ಅಣುವಿನ ಗುಣಗಳು
ಸ್ಪಟಿಕ ಸ್ವರೂಪface centered cubic
ಆಕ್ಸಿಡೀಕರಣ ಸ್ಥಿತಿಗಳು+1, +2, +3, +4
(mildly basic oxide)
ವಿದ್ಯುದೃಣತ್ವ1.90 (Pauling scale)
ಅಣುವಿನ ತ್ರಿಜ್ಯ135 pm
ಅಣುವಿನ ತ್ರಿಜ್ಯ (ಲೆಖ್ಕಿತ)145 pm
ತ್ರಿಜ್ಯ ಸಹಾಂಕ138 pm
ವಾನ್ ಡೆರ್ ವಾಲ್ಸ್ ತ್ರಿಜ್ಯ140 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆdiamagnetic
ವಿದ್ಯುತ್ ರೋಧಶೀಲತೆ(20 °C) 16.78 nΩ·m
ಉಷ್ಣ ವಾಹಕತೆ(300 K) 401 W·m−1·K−1
ಉಷ್ಣ ವ್ಯಾಕೋಚನ(25 °C) 16.5 µm·m−1·K−1
ಶಬ್ದದ ವೇಗ (ತೆಳು ಸರಳು)(r.t.) (annealed)
3810 m·s−1
ಯಂಗ್ ಮಾಪಾಂಕ110 - 128 GPa
ವಿರೋಧಬಲ ಮಾಪನಾಂಕ48 GPa
ಸಗಟು ಮಾಪನಾಂಕ140 GPa
ವಿಷ ನಿಷ್ಪತ್ತಿ 0.34
ಮೋಸ್ ಗಡಸುತನ3.0
Vickers ಗಡಸುತನ369 MPa
ಬ್ರಿನೆಲ್ ಗಡಸುತನ874 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-50-8
ಉಲ್ಲೇಖನೆಗಳು
ತಾಮ್ರ

ತಾಮ್ರ (Copper) ಪ್ರಾಚೀನ ಮಾನವರಿಗೆ ತಿಳಿದಿದ್ದ ಕೆಲವೇ ಲೋಹಗಳಲ್ಲಿ ಒಂದು. ಇದು ಮೂಲಧಾತುಗಳಲ್ಲಿ ಪ್ರಮುಖವಾದುದು. ಪ್ರಾಚೀನ ಕಾಲದಲ್ಲಿ ಇದು ಮೆಡಿಟರೇನಿಯನ್ ಸಮುದ್ರದ್ವೀಪವಾದ ಸೈಪ್ರಸ್ನಲ್ಲಿ ಪ್ರಮುಖವಾಗಿ ದೊರೆಯುತ್ತಿದ್ದುದರಿಂದ ಇದಕ್ಕೆ ಸಿಪ್ರಿಯನ್ ಲೋಹ ಎಂದು ಹೆಸರಿತ್ತು.[] ಇದರ ರಾಸಾಯನಿಕ ಸಂಕೇತ ವಾದ "Cu" ಹಾಗೂ ಹೆಸರು "ಕಾಪರ್" ಸಿಪ್ರಿಯನ್ ಲೋಹದ ರೋಮನ್ ರೂಪವಾಗಿದೆ. ಇದು ಬಹಳ ಉಪಯುಕ್ತ ಲೋಹವಾಗಿದ್ದು ವ್ಯಾಪಕವಾಗಿ ಬಳಕೆಯಲ್ಲಿದೆ. ಇದು ಅತ್ಯುತ್ತಮ ವಾಹಕವಾಗಿರುವುದರಿಂದ ಪ್ರಪಂಚದಲ್ಲಿ ಉತ್ಪಾದನೆಯಾಗುವ ಸುಮಾರು ೬೦ ಶೇಕಡಾ ವಿದ್ಯುತ್ ತಂತಿಯಾಗಿ ಬಳಕೆಯಲ್ಲಿದೆ. ಬೇರೆ ಲೋಹಗಳೊಂದಿಗೆ ಸುಲಭವಾಗಿ ಬೆರೆಯುವುದರಿಂದ ಹಿತ್ತಾಳೆ, ಕಂಚು ಮುಂತಾದ ಉಪಯುಕ್ತ ಮಿಶ್ರ ಲೋಹಗಳ ತಯಾರಿಕೆಯಲ್ಲಿ ಪ್ರಮುಖ ಲೋಹವಾಗಿದೆ. ಇದೊಂದು ಮೃದುವಾದ ಲೋಹವಾಗಿದ್ದು, ಅತ್ಯಂತ ಹೆಚ್ಚು ಉಷ್ಣತೆ ಮತ್ತು ವಿದ್ಯುತ್ ವಾಹಕತೆಯನ್ನು ಹೊಂದಿದೆ.[]

ರಾಸಾಯನಿಕ ಲಕ್ಷಣಗಳು

[ಬದಲಾಯಿಸಿ]
A copper disc (99.95% pure) made by continuous casting; etched to reveal crystallites.
Copper just above its melting point keeps its pink luster color when enough light outshines the orange incandescence color.

ಆವರ್ತಕೋಷ್ಟಕದ 1ನೆಯ ಗುಂಪಿನ ಸಂಕ್ರಾಂತಿ ಲೋಹ (ಕಾಪರ್). ಪರಮಾಣು ಸಂಖ್ಯೆ 29. ಪರಮಾಣು ತೂಕ 63.54. ರಾಸಾಯನಿಕ ಪ್ರತೀಕ cu (ಲ್ಯಾಟಿನ್ನಿನ ಕ್ಯುಪ್ರಮ್‍ನಿಂದ, ಅರ್ಥ ಸೈಪ್ರಸ್ ದ್ವೀಪದ ಅದುರು, ಆ ದ್ವೀಪದಲ್ಲಿ ಇದು ವಿಪುಲವಾಗಿ ಆ ದಿನಗಳಂದು ದೊರೆಯುತ್ತಿದ್ದುದರಿಂದ). ನೈಸರ್ಗಿಕವಾಗಿ ಲಭಿಸುವ ಸಮಸ್ಥಾನಿಗಳು 63Cu ಮತ್ಥು 65Cu ಎಲಕ್ಟ್ರಾನಿಕ್ ವಿನ್ಯಾಸ 1s2 2s2 2p6 3s2 3p6 3d1010 4s1 ದ್ರವನಬಿಂದು 10830 ಅ, ಕುದಿಬಿಂದು 23360 ಅ. ಅತ್ಯಂತ ಪ್ರಾಮುಖ್ಯವಿರುವ ಕಬ್ಬಿಣೇತರ (ನಾನ್‍ಫೆರಸ್) ಲೋಹಗಳ ಪೈಕಿ ಒಂದು. ಇದರ ರಾಸಾಯನಿಕ, ಭೌತಿಕ, ವೈದ್ಯುತ ಹಾಗೂ ಯಾಂತ್ರಿಕ ಗುಣಗಳಿಂದಾಗಿ ಮತ್ತು ಇದರ ಸರ್ವ ಸಾಧಾರಣ ಬಾಹುಳ್ಯದಿಂದಾಗಿ ತಾಮ್ರ ಬಲು ಉಪಯುಕ್ತ ಲೋಹ ಎನ್ನಿಸಿದೆ. ಮನುಷ್ಯ ಬಳಕೆಗೆ ತಂದ ಮೊದಲ ಲೋಹಗಳ ಪೈಕಿ ತಾಮ್ರವೂ ಸೇರಿರುವುದು.

ಇತಿಹಾಸ

[ಬದಲಾಯಿಸಿ]

ಶಿಲಾಯುಗದ ಕೊನೆಯ ಭಾಗದಲ್ಲಿ (ಕ್ರಿ. ಪೂ. ಸು. 10,000) ತಾಮ್ರದ ಶೋಧವಾಗಿರಬಹುದು. ಆ ವೇಳೆಗೆ ಬದುಕಿದ್ದ ನವಶಿಲಾಯುಗದ ಮಾನವ ಕ್ರಿ. ಪೂ. ಸು. 8000ದ ಹೊತ್ತಿಗೆ ತಾಮ್ರವನ್ನು ಮೊದಲ ಬಾರಿಗೆ ಬಳಕೆಗೆ ತಂದನೆಂದು ಅಂದಾಜು ಮಾಡಲಾಗಿದೆ. ಪ್ರಕೃತಿಯಲ್ಲಿ ಮುಕ್ತ ಲೋಹಸ್ಥಿತಿಯಲ್ಲಿ ದೊರೆಯುವ ತಾಮ್ರವನ್ನು ಈ ಮಾನವ ಉಪಯೋಗಿಸಿ ಹಲವಾರು ಒರಟು ಹತ್ಯಾರುಗಳನ್ನು ತಯಾರಿಸಿರಬಹುದು. ಕುಟ್ಟಿ, ತಟ್ಟಿ, ಎಳೆದು ನಿರ್ಮಿಸಿದ ಈ ಬಗೆ ಬಗೆಯ ಹತ್ಯಾರುಗಳ ಉಜ್ಜ್ವಲ ಕೆಂಬಣ್ಣ ಅತ್ಯಂತ ಆಕರ್ಷಕವಾಗಿದ್ದುದರಿಂದ ತಾಮ್ರ ಬಲು ಬೆಲೆಯುಳ್ಳ ಪದಾರ್ಥವೆಂದು ಆ ದಿನಗಳಂದು ಪರಿಗಣಿಸಲ್ಪಟ್ಟದ್ದು ಸಹಜವೇ ಆಗಿದೆ. ಹೀಗಾಗಿ ಈ ಲೋಹದ ವ್ಯಾಪಕ ಅನ್ವೇಷಣೆ ಅಂದಿನ ಮಾನವನ ಗೀಳಾಯಿತು. ತಾಮ್ರದ ನಿಕ್ಷೇಪಗಳ ಶೋಧನೆಗಳಾಗಿ ಮಾಡಿದ ಪ್ರಯತ್ನಗಳ ಫಲವಾಗಿ (ಕ್ರಿ. ಪೂ. ಸು. 6000) ತಾಮ್ರವನ್ನು ಕಾಸಿ ಕರಗಿಸಿ ಬಳಿಕ ಬೇಕಾದ ಆಕಾರಕ್ಕೆ ಎರಕ ಹೊಯ್ಯಬಹುದು ಎಂಬ ತಿಳಿವಳಿಕೆ ಮೂಡಿತು. ಇದರ ಮುಂದಿನ ಹೆಜ್ಜೆ ತಾಮ್ರಯುತ ಶಿಲೆಗೂ ಲೋಹತಾಮ್ರಕ್ಕೂ ಇರುವ ಸಂಬಧದ ಅರಿವು. ತಾಮ್ರಯುತ ಶಿಲೆಯ ಪುಡಿಯನ್ನು ಕಾಸಿ ದೊರೆವ ದ್ರವಪದಾರ್ಥದಿಂದ ಲೋಹ ತಾಮ್ರವನ್ನು ಪಡೆಯಬಹುದು ಎನ್ನುವ ಜ್ಞಾನ ಮೂಡಿದಾಗ ಲೋಹವಿದ್ಯೆ (ಮೆಟಲರ್ಜಿ) ಮೈದಳೆಯಿತು. ತಾಮ್ರ ವಸ್ತುಗಳ ನಿರ್ಮಾಣದಲ್ಲಿ ಸಾಕಷ್ಟು ಮುಂದುವರಿದಿದ್ದಂಥಹ ರಾಷ್ಟಗಳೆಂದರೆ ಈಜಿಪ್ಟ್ (ಕ್ರಿ, ಪೂ. ಸು. 5000), ಸಿನಾಯ್ ಪರ್ಯಾಯ ದ್ವೀಪ (ಕ್ರಿ, ಪೂ. ಸು. 3800) ಮತ್ತು ಭಾರತ (ಕ್ರಿ, ಪೂ. ಸು.2500).ತಾಮ್ರವು ಪ್ರಥಮ ಮಾನವ ನಿರ್ಮಿತ ಮಿಶ್ರಲೋಹ.ಇದನ್ನು ಕ್ರಿ.ಪೂ ೩೫೦೦ರಲ್ಲಿ ನಿರ್ಮಿಸಲಾಗಿತ್ತು ಎಂದು ನಂಬಲಾಗಿದೆ.[] ತಾಮ್ರವನ್ನು ತವರದೊಡನೆ (ಟಿನ್) ಮಿಶ್ರಮಾಡಿದಾಗ ದೊರೆಯುವ ಮಿಶ್ರ ಲೋಹಕ್ಕೆ ಕಂಚು ಎಂದು ಹೆಸರು. ಇದರ ಅಸ್ತಿತ್ವ ಕ್ರಿ, ಪೂ. ಸು. 3700 ರ ವೇಳೆಗೆ ಬಂದಿತ್ತು ಎಂಬುದಕ್ಕೆ ಈಜಿಪ್ಪಿನ ಪಿರಮಿಡ್‍ಗಳಲ್ಲಿ ನಿದರ್ಶನ ದೊರೆತಿದೆ. ಈಜಿಪ್ಪಿನಲ್ಲಿ ಕಂಚಿನ ಯುಗ ಹೀಗೆ ತೊಡಗಿತು. ಆದರೆ ಆ ಮೊದಲೇ ಏಷ್ಯದ ಕೆಲವಡೆಗಳಲ್ಲಿ ಕಂಚಿನಯುಗ ಪ್ರಾರಂಭವಾಗಿತ್ತು ಎಂದು ತಿಳಿದಿದೆ.

ಆಕರಗಳು

[ಬದಲಾಯಿಸಿ]

ತಾಮ್ರ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ವಿವಿಧ ರೂಪಗಳ ಅದುರುಗಳಲ್ಲಿ ದೊರೆಯುವುದು. ಇವನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು (ಆವರಣಗಳಲ್ಲಿರುವ ಸಂಖ್ಯೆಗಳು ಆಯಾ ಅದುರಿನಲ್ಲಿರುವ ತಾಮ್ರದ ಅಂಶವನ್ನು ಸನ್ನಿಹಿತವಾಗಿ ಸೂಚಿಸುತ್ತವೆ.)

  1. ತಾಮ್ರದ ಸಲ್ಫೈಡ್ ಅದುರುಗಳು : ಚಾಲ್ಕೊಸೈಟ್ ಅu2S (79.0%) ಕೊವೆಲ್ಲೈಟ್ ಅuS (66.5%), ಚಾಲ್ಕೊಪೈರೈಟ್ ಅu ಈe S2 (34.6%). ಬಾರ್ನೈಟ್ ಅu5 ಈe S4 (63.3%), ಎನರ್ಜೈಟ್ ಅu3 (ಂs , Sb) S4 (48.4%) ಮತ್ತು ಟೆಟ್ರಹೈಡ್ರೈಟ್ ಅu3 SbS2 (46.7%).
  1. ತಾಮ್ರದ ಆಕ್ಸೈಡ್ ಅದುರುಗಳು : ಕ್ಯುಪ್ರೈಟ್ ಅu2ಔ (88.8%). ಟೆನರೈಟ್ ಅuಔ (79.9%), ಮ್ಯಾಲಕೈಟ್ ಅuಅಔ3 ಅu (ಔಊ)2 (57.5%). ಅಜೂರೈಟ್ 2ಅuಅಔ3 ಅu(ಔಊ)2 (55,3%), ಕ್ರೈಸೊಕೊಲ್ಲ ಅuSiಔ3. 2ಊ2ಔ, ಬ್ರೋಕನೈಟ್ ಅu4 (ಔಊ)6 Sಔ4 (56.2%) ಮತ್ತು ಚಾಲ್ಕಂತೈಟ್ ಅuSಔ4 5ಊ2ಔ (25,5%)
  1. ಪ್ರಾಕೃತಿಕ (ನೇಟಿವ್) ಅದುರು : ಹೆಸರೇ ಸೂಚಿಸುವಂತೆ ನಿಸರ್ಗದಲ್ಲಿ ಹರಡಿ ಹೋಗಿ ಅಲ್ಲಿ ಇಲ್ಲಿ ಲೋಹರೂಪದಲ್ಲಿಯೇ ದೊರೆಯುವ ತಾಮ್ರ, ಅu (99,9%) .

ಈ ಎಲ್ಲ ಬಗೆಯ ಅದುರುಗಳ ಪೈಕಿ ಚಾಲ್ಕೊಪೈರೈಟ್ ಅತ್ಯಂತ ಪ್ರಮುಖ ಖನಿಜ. ಶಿಲಾಸಿರಗಳು, ಸಾಗರತಳಗಳಲ್ಲಿನ ಕೆಸರು ಮಣ್ಣು, ಮಾನವನ ಯಕೃತ್ತು, ಬಸವನ ಹುಳು, ಜೇಡ ಮುಂತಾದ ಎಡೆಗಳಲ್ಲಿ ತಾಮ್ರ ದೊರೆಯುತ್ತದೆ.

ಅದುರು ಸಂಸ್ಕರಣ

[ಬದಲಾಯಿಸಿ]

ಇದರಲ್ಲಿ ಮೂರು ಹಂತಗಳಿವೆ. ಮೊದಲನೆಯದಾಗಿ, ನೆಲದಿಂದ ಇಲ್ಲವೇ ಗಣಿಗಳಿಂದ ಅಗೆದು ತೆಗೆದ ಕಲ್ಲು ಮಣ್ಣುಗಳೊಡನೆ ತಾಮ್ರ ಬೆರೆತುಕೊಂಡಿರುವುದರಿಂದ ಮತ್ತು ಇಂಥ ಜಂಕುಗಳು ಸಾಕಷ್ಟು ಮೊತ್ತದಲ್ಲಿ ಇರುವುದರಿಂದ ಇವನ್ನು ಬೇರ್ಪಡಿಸುವುದು ತೀರ ಅಗತ್ಯ. ಈ ಪ್ರಕ್ರಮಕ್ಕೆ ಅದುರು ಶುದ್ಧೀಕರಣ ಎಂದು ಹೆಸರು. ಎರಡನೆಯದಾಗಿ, ಹೀಗೆ ಲಭಿಸಿದ ಸಾಂದ್ರ ಅದುರಿನಿಂದ ಲೋಹ ತಾಮ್ರವನ್ನು ಹೊರತೆಗೆಯಬೇಕು. ಈ ಪ್ರಕ್ರಮಕ್ಕೆ ಲೋಹ ಉಪಲಬ್ಧಿ (ಮೆಟಲ್ ರಿಕವರಿ) ಎಂದು ಹೆಸರು. ಮೂರನೆಯದಾಗಿ, ಇಂಥ ಲೋಹದೊಡನೆ ರಾಸಾಯನಿಕವಾಗಿ ಸಂಯೋಗಗೊಂಡಿರುವ ಅಶುದ್ಧತೆಗಳ ನಿರ್ಮೂಲನ. ಈ ಪ್ರಕ್ರಮಕ್ಕೆ ಲೋಹ ಶುದ್ಧೀಕರಣ ಎಂದು ಹೆಸರು. ಈಗ ಈ ಮೂರೂ ಹಂತಗಳನ್ನು ವಿವರವಾಗಿ ಪರಿಶೀಲಿಸೋಣ.

ಅದುರು ಶುದ್ಧೀಕರಣ

[ಬದಲಾಯಿಸಿ]

ಸಾಧಾರಣವಾಗಿ ತಾಮ್ರದ ಅದುರುಗಳನ್ನು ಕರಗಿಸುವುದರ ಮೂಲಕ (ಉಷ್ಣ ಲೋಹ ವೈಜ್ಞಾನಿಕ ವಿಧಾನಗಳು - ಪೈರೊ ಮೆಟಲರ್ಜಿಕಲ್ ಮೆಥಡ್ಸ್) ಇಲ್ಲವೇ ನಿಕ್ಷಾಲನದ (ಲೀಚಿಂಗ್) ಮೂಲಕ (ಜಲಲೋಹವೈಜ್ಞಾನಿಕ ವಿಧಾನಗಳು-- ಹೈಡ್ರೊಮೆಟಲರ್ಜಿಕಲ್ ಮೆಥಡ್ಸ್) ಸಂಸ್ಕರಿಸುತ್ತಾರೆ. ಸಲ್ಫೈಡ್ ಅದುರುಗಳಾದರೆ ಅವನ್ನು ವರಣಾತ್ಮಕ ಪ್ಲವನ (ಸೆಲೆಕ್ಟಿವ್ ಫ್ಲೊಟೇಶನ್) ರೀತಿಯಿಂದ ಮೊದಲಿಗೆ ಸಾಂದ್ರೀಕರಿಸುವುದು ವಾಡಿಕೆ. ಆಕ್ಸೈಡ್ ಅದುರುಗಳನ್ನಾದರೋ ನಿಕ್ಷಾಲಿಸುವುದು (ಲೀಚ್) ಮೊದಲ ಹಂತ ವರಣಾತ್ಮಕ ಪ್ಲವನ ರೀತಿಯಲ್ಲಿ ಅದುರನ್ನು ಬಲು ಸೂಕ್ಷ್ಮವಾಗಿ ಅರೆದು ನೀರು ಮತ್ತು ಆಯ್ದ ಅಭಿಕರ್ಮಕಗಳೊಂದಿಗೆ (ರೀ ಏಜೆಂಟ್ಸ್) ಬೆರೆಸಿ ಈ ಮಿಶ್ರಣಕ್ಕೆ ವಾಯುವನ್ನು ಪೂರೈಸಿ ತೀವ್ರವಾಗಿ ಕುಲುಕಲಾಗುತ್ತದೆ. ಇದರಿಂದ ದಟ್ಟವಾದ ನೊರೆ ಮೈದಳೆಯುವುದು. ನೊರೆಯಲ್ಲಿರುವ ವಾಯುಗುಳ್ಳೆಗಳೊಡನೆ ತಾಮ್ರದ ಕಣಗಳು ಆದಷ್ಟು ಹೆಚ್ಚಿನ ಪ್ರಮಾಣದಲ್ಲಿ ಅಂಟಿಕೊಂಡಿರುವುದು ಸಾಧ್ಯವಾಗಬೇಕು ಎಂಬುದನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಅಭಿಕರ್ಮಕಗಳನ್ನು ಆಯುವರು. ಮಿಶ್ರಣದಲ್ಲಿ ತೇಲುತ್ತಿರುವ ತಾಮ್ರಸಹಿತವಾದ ನೊರೆಯನ್ನು ತಳದ ಕಿಟ್ಟಿ ಪದಾರ್ಥದಿಂದ ಬೇರ್ಪಡಿಸುವುದು ಸುಲಭ. ಈ ಪ್ರಕ್ರಿಯೆಯನ್ನು ಮತ್ತೆ ಮತ್ತೆ ಪುನರಾವರ್ತಿಸಿ ಅದುರಿನಲ್ಲಿರುವ 95% ಯಾ ಹೆಚ್ಚು ತಾಮ್ರವನ್ನು ಮೂಲ ಅದುರಿನ ತೂಕದ 10%-20% ತೂಕದಷ್ಟಕ್ಕೆ ಸಾಂದ್ರೀಕರಿಸುವುದು ಸಾಧ್ಯವಿದೆ. ಹೀಗೆ ಲಭಿಸಿದ ಸಾಂದ್ರವಸ್ತುವನ್ನು ಬಿಸಿಮಾಡಿ ಹುರಿಯಲಾಗುವುದು . ಇದರ ಉತ್ಪನ್ನವಾಗಿ ದೊರೆಯುವ ಪದಾರ್ಥಕ್ಕೆ ಕ್ಯಾಲ್ಸೈನ್ ಎಂದು ಹೆಸರು (ಇದು ಶುದ್ಧ ತಾಮ್ರವಲ್ಲ) : ಲೋಹವಿಜ್ಞಾನದಲ್ಲಿ ಇದನ್ನು ಮ್ಯಾಟ್ ಎಂದು ಕರೆಯುವುದುಂಟು. ಇದು ತಾಮ್ರ ಮತ್ತು ಕಬ್ಬಿಣ ಧಾತುಗಳು ಸಲ್ಫೈಟ್.

ಲೋಹ ಉಪಲಬ್ಧಿ

[ಬದಲಾಯಿಸಿ]

ಮ್ಯಾಟನ್ನು ಕರಗಿಸುವುದರ ಮೂಲಕ ಇಲ್ಲವೇ ವಿದ್ಯುದ್ವಿಚ್ಛೇದನ ತಂತ್ರಗಳ ಮೂಲಕ ಲೋಹತಾಮ್ರವನ್ನು ಪಡೆಯಬಹುದು. ಕೆಲವು ವೇಳೆ ತಾಮ್ರವನ್ನು ಹರಕುಮುರುಕುಗಳಿಂದ ಮರುಪಡೆಯುವುದುಂಟು.

ಮ್ಯಾಟನ್ನು ಊದು ಕುಲುಮೆಗಳಲ್ಲಿ (ಬ್ಲಾಸ್ಟ್ ಫರ್ನೇಸಸ್ _ ಇಂಥ ಒಂದು ಕುಲುಮೆಯಲ್ಲಿ ಸಂಸ್ಕರಣೆಗೆ ಒಳಪಡುವ ವಸ್ತುವಿಗೆ ಉಷ್ಣ ಮಾಡಿನಿಂದ ವಿವರಿಸಲ್ಪಡುವುದರಿಂದ ಈ ಹೆಸರು ಬಂದಿದೆ) ಇಲ್ಲವೇ ವಿದ್ಯುತ್ ಕುಲುಮೆಗಳಲ್ಲಿ ಕರಗಿಸಿ ಲೋಹ ತಾಮ್ರವನ್ನು ಬೇರ್ಪಡಿಸುವರು.

ಜಲಲೋಹವೈಜ್ಞಾನಿಕ ಇಲ್ಲವೇ ನಿಕ್ಷಾಲನ ವಿಧಾನದಲ್ಲಿ ಅದುರನ್ನು ಸೂಕ್ತ ದ್ರಾವಕದೊಂದಿಗೆ ಸಂಸ್ಕರಿಸಿ ದೊರೆಯುವ ದ್ರಾವಣದಿಂದ ತಾಮ್ರವನ್ನು ಬೇರ್ಪಡಿಸಲಾಗುವುದು. ತಾಮ್ರದ ಆಕ್ಸೈಡ್ ಅದುರುಗಳು ನಿಕ್ಷಾಲನಕ್ಕೆ ಸುಲಭವಾಗಿ ಬಗ್ಗುತ್ತವೆ.

ತಾಮ್ರದ ಅದುರುಗಳನ್ನು ಸಲ್ಫ್ಯೂರಿಕ್ ಆಮ್ಲದಿಂದ ನಿಕ್ಷಾಲಿಸಿದಾಗ ದೊರೆವ ನಿಕ್ಷಾಲಿತ ದ್ರಾವಣದಲ್ಲಿ ತಾಮ್ರ ಅದರ ಸಲ್ಫೇಟ್ ರೂಪದಲ್ಲಿ ಇರುವುದು. ಈ ದ್ರಾವಣಕ್ಕೆ ವಿದ್ಯುತ್ ಪ್ರವಾಹವನ್ನು ಹರಿಸಿ (ಇದೇ ವಿದ್ಯುದ್ವಿಚ್ಚೇದನ ವಿಧಾನ) ಲೋಹ ತಾಮ್ರವನ್ನು ಪಡೆಯಬಹುದು.

ಲೋಹ ಶುದ್ಧೀಕರಣ

[ಬದಲಾಯಿಸಿ]

ಮೇಲಿನ ಎರಡು ಹಂತಗಳ ಅಂತ್ಯದಲ್ಲಿ ಲಭಿಸುವ ಲೋಹದಲ್ಲಿ ಅಶುದ್ಧತೆಗಳು ಇರುವುದು ಅಪರೂಪವೇನಲ್ಲ. ಇವು 1% ರ1/10 ಕ್ಕಿಂತಲೂ ಕಡಿಮೆ ಇರುವಂತೆ ಮಾಡುವ ಪ್ರಕ್ರಿಯೆಯೇ ಲೋಹಶುದ್ಧೀಕರಣ.

ಅಗ್ನಿಶುದ್ಧೀಕರಣ ವಿಧಾನದಲ್ಲಿ ಲೋಹವನ್ನು ಮೊದಲು ಉತ್ಕರ್ಷಣಕ್ರಿಯೆಗೂ ಮತ್ತೆ ಅಪಕರ್ಷಣ ಕ್ರಿಯೆಗೂ ಒಳಪಡಿಸಲಾಗುತ್ತದೆ. ಇದರ ಅಂತ್ಯದಲ್ಲಿ ಸ್ಪಷ್ಟವಾದ ಗುಲಾಬಿ ಬಣ್ಣದ ಲೋಹ ಮೈದಳೆಯುವುದು. ಇದನ್ನು ಸಾಂದ್ರವಾದ ಚಪ್ಪಡಿಗಳಾಗಿ ಎರಕ ಹುಯ್ಯಬಹುದು. ವಿದ್ಯುದ್ವಿಚ್ಛೀದನ ಶುದ್ಧೀಕರಣ ವಿಧಾನದಿಂದಲೂ ಶುದ್ಧ ಲೋಹವನ್ನು ಪಡೆಯುವುದುಂಟು.

ಗುಣಗಳು

[ಬದಲಾಯಿಸಿ]

ವಿದ್ಯುದ್ವಾಹಕತ್ವ ಗುಣದಲ್ಲಿ ಬೆಳ್ಳಿಗೆ ಮೊದಲ ಮಣಿ, ತಾಮ್ರಕ್ಕೆ ಎರಡನೆಯದು. ವಿವಿಧ ರಾಸಾಯನಿಕ ಕ್ರಿಯೆಗಳನ್ನೂ ವಾತಾವರಣದ ಕೊರೆಯುವಿಕೆಯನ್ನೂ ತಾಮ್ರ ಯಶಸ್ವಿಯಾಗಿ ಎದುರಿಸಿ ಉಳಿಯಬಲ್ಲದು. ಹೀಗಾಗಿ ವಿವಿಧ ಔದ್ಯೋಗಿಕ ಕ್ಷೇತ್ರಗಳಲ್ಲಿ ತಾಮ್ರದ ಬಳಕೆ ವಿಪುಲವಾಗಿದೆ : ವಿದ್ಯುದ್ವಾಹಕ ತಂತಿಗಳ ನಿರ್ಮಾಣ, ವಿದ್ಯುದುಪಕರಣಗಳ ತಯಾರಿಕೆ, ಇತ್ಯಾದಿ, ಕಂಚು, ಮಂಜ ಲೋಹ, ಜರ್ಮನ್ ಬೆಳ್ಳಿ, ಡೆಲ್ಟಾ ಲೋಹ, ಗಂಟೆ ಕಂಚು, ತುಪಾಕಿ ಕಂಚು ಮುಂತಾದ ಮಿಶ್ರಲೋಹಗಳ ತಯಾರಿಕೆಯಲ್ಲಿ ತಾಮ್ರದ ಪಾತ್ರ ಹಿರಿದು. ತಾಮ್ರದಿಂದ ಎರಡು ಬಗೆಯ ಸಂಯುಕ್ತಗಳು ಲಭಿಸುತ್ತವೆ : ವೇಲೆನ್ಸ್ 1 ಇರುವ ಕ್ಯುಪ್ರಸ್ ಮತ್ತು ವೇಲೆನ್ಸ್ 2 ಇರುವ ಕ್ಯುಪ್ರಿಕ್. ವೇಲೆನ್ಸ್ 3 ಇರುವ ಹಲವಾರು ಅಸ್ಥಿರ ಸಂಯುಕ್ತಗಳು ಸಹ ತಿಳಿದಿವೆ.

ಆಕ್ಸೈಡುಗಳು

[ಬದಲಾಯಿಸಿ]

ಆಕ್ಸೈಡುಗಳ ವೇಲೆನ್ಸಿಗಳಿಗೆ ಅನುಗುಣವಾಗಿ ತಾಮ್ರ ಕ್ಯುಪ್ರಸ್ ಆಕ್ಸೈಡ್ ಮತ್ತು ಕ್ಯುಪ್ರಿಕ್ ಆಕ್ಸೈಡ್ ಎಂಬ ಎರಡು ಬಗೆಯ ಆಕ್ಸೈಡುಗಳನ್ನು ಸಿದ್ಧಗೊಳಿಸುತ್ತದೆ. ಕ್ಯುಪ್ರಸ್ ಆಕ್ಸೈಡು ಕೆಂಪು ಸ್ಫಟಿಕಾಕಾರದ ಒಂದು ವಸ್ತು. ಇದನ್ನು ವಿದ್ಯುದ್ವಿಚ್ಛೇದನದಿಂದ ಇಲ್ಲವೆ ಕುಲವೆಂದು ಪದ್ಧತಿಯಿಂದ ಸಿದ್ಧಗೊಳಿಸಬಹುದು. ಹೈಡ್ರೋಜನ್, ಕಾರ್ಬನ್ ಮಾನಾಕ್ಸೈಡ್ ಮತ್ತು ಮಸಿ ಮುಂತಾದವುಗಳಿಂದ ಕ್ಯುಪ್ರಿಕ್ ಆಕ್ಸೈಡನ್ನು ಸುಲಭವಾಗಿ ತಾಮ್ರಲೋಹವಾಗಿ ಅಪಕರ್ಷಿಸಬಹುದು. ಗಾಜಿನೊಂದಿಗೆ ಮಿಶ್ರಗೊಳಿಸಿದಾಗ ಅದು ಕೂಡ ಕೆಂಪುಬಣ್ಣ ತಳೆಯುವುದು. ಖನಿಜಾಮ್ಲಗಳಲ್ಲಿ ಇದನ್ನು ಬೆರೆಸಿದಾಗ ಬಣ್ಣರಹಿತ ಕ್ಯುಪ್ರಸ್ ಲವಣಗಳು ಸಿದ್ಧಗೊಳ್ಳುತ್ತವೆ. ಕ್ಯುಪ್ರಿಕ್ ಆಕ್ಸೈಡ್ ಕಪ್ಪು ಬಣ್ಣದ ಹುಡಿ. ತಾಮ್ರದ ಕಾರ್ಬೊನೇಟ್, ಹೈಡ್ರಾಕ್ಸೈಡ್ ಅಥವಾ ನೈಟ್ರೇಟುಗಳ ಜ್ವಲನ ಕ್ರಿಯೆಯಿಂದ ಅಥವಾ ಕ್ಯುಪ್ರಸ್ ಆಕ್ಸೈಡನ್ನು ಕಾಸುವುದರಿಂದ ಇದನ್ನು ರಚಿಸಬಹುದು. ಇದರಿಂದ ಗಾಜಿಗೆ ಹಸಿರು ಬಣ್ಣ ಉಂಟಾಗುತ್ತದೆ. ಖನಿಜಾಮ್ಲಗಳಲ್ಲಿ ಇದು ಕರಗುವುದರಿಂದ ನೀಲಿ ಅಥವಾ ಹಸಿರು ದ್ರಾವಣಗಳು ಉಂಟಾಗುತ್ತವೆ.

ಹ್ಯಾಲೈಡುಗಳು

[ಬದಲಾಯಿಸಿ]

ತಾಮ್ರಲೋಹ ಮತ್ತು ತಾಮ್ರ ಆಕ್ಸೈಡುಗಳ ಮೇಲೆ ಉಂಟಾಗುವ ಹೈಡ್ರೋಕ್ಲೋರಿಕ್ ಆಮ್ಲದ ಪರಿಣಾಮವಾಗಿ ಕ್ಯುಪ್ರಸ್ ಕ್ಲೋರೈಡ್ ರೂಪಗೊಳ್ಳುತ್ತದೆ. ತಾಮ್ರ ಲೋಹ ಮತ್ತು ಕ್ಯುಪ್ರಿಕ್ ಕ್ಲೋರೈಡುಗಳ ಮೇಲೆ ಹೈಡ್ರೊಕ್ಲೋರಿಕ್ ಆಮ್ಲ ಮಾಡುವ ಪರಿಣಾಮದಿಂದ ಕೂಡ ಕ್ಯುಪ್ರಸ್ ಕ್ಲೋರೈಡನ್ನು ತಯಾರಿಸಬಹುದು. ಹೈಡ್ರೋಕ್ಲೋರಿಕ್ ಆಮ್ಲದಲ್ಲಿ ಕ್ಯುಪ್ರಿಕ್ ಆಕ್ಸೈಡನ್ನು ಕರಗಿಸಿ ಸಹ ಕ್ಯುಪ್ರಿಕ್ ಕ್ಲೋರೈಡನ್ನು ಪಡೆಯಬಹುದು. ಹಲವಾರು ಬಗೆಯ ಬಣ್ಣಗಳನ್ನು ರೂಪಿಸುವಲ್ಲಿ ಇದು ಅತ್ಯಧಿಕ ಉಪಯೋಗವುಳ್ಳದ್ದಾಗಿದೆ. ತಾಮ್ರ ಮತ್ತು ಅಯೋಡಿನುಗಳ ನೇರ ಸಂಯೋಗದಿಂದ ಕ್ಯುಪ್ರಸ್ ಆಕ್ಸೈಡನ್ನು ತಯಾರಿಸಬಹುದು.

ಸಲ್ಫೈಡುಗಳು ಮತ್ತು ಸಲ್ಫೇಟುಗಳು

[ಬದಲಾಯಿಸಿ]

ತಾಮ್ರ ಸಲ್ಫೈಡ್ ಭೂಮಿಯಲ್ಲಿ ಚಾಲ್ಕೊಪೈರೈಟ್ ಎಂಬ ಖನಿಜರೂಪದಲ್ಲಿ ದೊರೆಯುತ್ತದೆ. ಅತಿ ಉಷ್ಣತೆಯಲ್ಲಿ ತಾಮ್ರ ಮತ್ತು ಗಂಧಕಗಳ ನೇರ ಸಂಯೋಗಗಳಿಂದಲೂ ಇದನ್ನು ತಯಾರಿಸಬಹುದು. ಕ್ಯುಪ್ರಿಕ್ ಸಲ್ಫೈಡ್ ಭೂಮಿಯಲ್ಲಿ ಕೊವೆಲೈಟ್ ಎಂಬ ಖನಿಜರೂಪದಲ್ಲಿ ಸಿಗುವುದು. ತಾಮ್ರ ಲವಣ ದ್ರಾವಣದ ಮೇಲೆ ಹೈಡ್ರೊಜನ್ ಸಲ್ಫೈಡಿನ ಪರಿಣಾಮ ಉಂಟಾಗುವುದರಿಂದ ಕೂಡ ಇದನ್ನು ಸುಲಭವಾಗಿ ಸಿದ್ಧಗೊಳಿಸಬಹುದು. ಖನಿಜಾಮ್ಲದಲ್ಲಿ ಈ ಎರಡು ಸಂಯುಕ್ತಗಳು ವಿಲೀನವಾಗುವುದಿಲ್ಲ. ವ್ಯಾವಹಾರಿಕವಾಗಿ ಕ್ಯುಪ್ರಿಕ್ ಸಲ್ಫೇಟನ್ನು ನೀಲಿ ವಿಟ್ರಿಯೋಲ್ ಎಂದು ಕರೆಯುತ್ತಾರೆ. ತಾಮ್ರದ ಲವಣಗಳಲ್ಲೆಲ್ಲ ಇದು ಅತ್ಯಂತ ಮಹತ್ತ್ವದ್ದು. ಬಹುತರವಾಗಿ ಇದು ಅuSಔ4 5ಊ2ಔ . ಎಂಬ ಸ್ಫಟಿಕಾಕೃತಿಯದು. ಇದಕ್ಕೆ ಹೊಳಪಾದ ನೀಲಿ ಬಣ್ಣ ಉಂಟು. ತಾಮ್ರ ಆಕ್ಸೈಡಿನ ಮೇಲೆ ಸಲ್ಫ್ಯೂರಿಕ್ ಆಮ್ಲ ಮಾಡುವ ಪರಿಣಾಮದಿಂದಾಗಿ ಇದನ್ನು ಸಿದ್ಧಗೊಳಿಸಬಹುದು. ಇದು ನೀರಿನಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ಆದರೆ ಆಲ್ಕೊಹಾಲಿನಲ್ಲಿ ವಿಲೀನವಾಗುವುದಿಲ್ಲ. ಇದರ ನಿರ್ಜಲ ಲವಣಕ್ಕೆ ಜಲಾಕರ್ಷಕ ಸಾಮರ್ಥ್ಯ ಉಂಟು. ಆದ್ದರಿಂದ ತೇವವನ್ನಾರಿಸುವಲ್ಲಿ ಇದು ಉಪಯೋಗಕಾರಿ ಆಗಿದೆ. ಬಣ್ಣ ನಿರ್ಮಿತಿಯಲ್ಲಿ ಅತ್ಯಧಿಕವಾಗಿ ಇದನ್ನು ಉಪಯೋಗಿಸಿಕೊಳ್ಳುತ್ತಾರೆ.

ಕಾರ್ಬೊನೇಟುಗಳು

[ಬದಲಾಯಿಸಿ]

ತಾಮ್ರ ಲವಣ ದ್ರಾವಣದಲ್ಲಿ ಕ್ಷಾರೀಯ ಕಾರ್ಬೊನೇಟನ್ನು ಬೆರೆಸುವುದರಿಂದ ಪ್ರತ್ಯಾಮ್ಲೀಯ ತಾಮ್ರದ ಕಾರ್ಬೊನೇಟು ಸಿದ್ಧಗೊಳ್ಳುತ್ತದೆ. ಇದಕ್ಕೆ ಹೊಳಪುಳ್ಳ ನೀಲಿ ಅಥವಾ ಹಸಿರುಬಣ್ಣ ಉಂಟು. ಇದನ್ನು ಬಣ್ಣ ನಿರ್ಮಾಣಕ್ಕೆ ಉಪಯೋಗಿಸಲಾಗುತ್ತಿದೆ. ಇದು ಭೂಮಿಯಲ್ಲಿ ಅಜುರೈಟ್ ಮತ್ತು ಮ್ಯಾಲಕೈಟ್ ಎಂಬ ಖನಿಜಗಳ ರೂಪದಲ್ಲಿ ದೊರೆಯುವುದು.ಆರ್ಸೆನಿಕ್ಕಿನೊಡನೆ ತಾಮ್ರವನ್ನು ಬೆರೆಸುವುದರಿಂದ ಸಂಯುಕ್ತಗಳನ್ನು ಸಿದ್ಧಗೊಳಿಸಬಹುದು. ಇದಕ್ಕೆ ಹೊಳಪುಳ್ಳ ಹಸಿರುಬಣ್ಣವಿರುವುದು. ಇವು ವಿಷಪೂರಿತವಾಗಿರುತ್ತವೆ. ಇವನ್ನು ಕ್ರಿಮಿನಾಶಕಗಳಂತೆ ಹೆಚ್ಚು ಪ್ರಮಾಣದಲ್ಲಿ ಬಳಸುತ್ತಾರೆ. ತಾಮ್ರವನ್ನು ಪ್ರಬಲ ನೈಟ್ರಿಕ್ ಆಮ್ಲದಲ್ಲಿ ವಿಲೀನವಾಗಿಸುವುದರಿಂದ ಕ್ಯುಪ್ರಿಕ್ ನೈಟ್ರೇಟನ್ನು ತಯಾರಿಸಬಹುದು. ಅಧಿಕಪ್ರಮಾಣದಲ್ಲಿ ಅಮೊನಿಯದಲ್ಲಿ ತಾಮ್ರ ಲವಣವನ್ನು ಬೆರೆಸಿದಾಗ ವಿಶಿಷ್ಟವಾದ ನೀಲಿಬಣ್ಣ ಕಂಡುಬರುತ್ತದೆ. ಅದನ್ನೇ ಬೆಂಕಿಯಲ್ಲಿ ಹಾಕಿದಾಗ ಹೊಳಪಾದ ಹಸಿರುಬಣ್ಣದ ಕಿಡಿಗಳನ್ನು ಕಾಣಬಹುದು. ಹಾಗೆಯೇ ಇದರ ದುರ್ಬಲ ದ್ರಾವಣದ ಮೇಲೆ ಪೊಟ್ಯಾಸಿಯಮ್ ಫೆರೋ ಸಯನೈಡಿನ ಪರಿಣಾಮವಾದರೆ ಆಗ ಕಂದುಬಣ್ಣ ಉದ್ಭವವಾಗುತ್ತದೆ.

ಜೀವಕ್ರಿಯೆಗಳ ಮೇಲೆ ತಾಮ್ರದ ಪರಿಣಾಮ

[ಬದಲಾಯಿಸಿ]

ಸಸ್ಯಗಳ ಜೀವಕ್ರಿಯೆಗಳ ಮೇಲೆ ತಾಮ್ರ ಎರಡು ವಿಧವಾಗಿ ಪರಿಣಾಮ ಮಾಡುತ್ತದೆ : 1 ಕ್ಲೋರೊಫಿಲ್ಲನ್ನು ತಯಾರಿಸುವಲ್ಲಿ, 2 ಸಸ್ಯಗಳ ಎಂಜೈಮ್ ಕ್ರಿಯೆಗಳಲ್ಲಿ. ಸಸ್ಯಗಳ ಎಲೆಗಳಲ್ಲಿ ತಾಮ್ರ ಕ್ಲೋರೊಫಿಲ್ಲಿನ ಜೊತೆಗೆ ಅತ್ಯಂತ ನಿಕಟವರ್ತಿಯಾಗಿ ಕಾರ್ಯ ಕೈಕೊಂಡರೂ ಇದು ಹೇಗೆ ಆಗುತ್ತವೆ ಎಂಬ ವಿಚಾರ ಚೆನ್ನಾಗಿ ತಿಳಿದು ಬಂದಿಲ್ಲ. ಮೂರು ಎಂಜೈಮುಗಳಲ್ಲಿ ತಾಮ್ರ ಖಚಿತವಾಗಿ ಕಂಡುಬರುತ್ತದೆ. ಸಸ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ತಾಮ್ರ ಪೂರೈಕೆಯಾಗದೆ ಹೋದರೆ ಅವು ಬೀಜಗಳನ್ನು ಸಿದ್ಧಗೊಳಿಸಲು ಅಶಕ್ತವಾಗುತ್ತವೆ. ತಾಮ್ರ ಭೂಮಿಯಲ್ಲಿ ಇರಬೇಕಾದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಇದ್ದರೆ ಆಗ ಅದು ಸಸ್ಯಗಳಿಗೆ ವಿಷಕಾರಿ ಆಗುವುದುಂಟು. ಮಾನವನ ದೇಹದಲ್ಲಿ 100ರಂದ 150 ಮಿಲಿಗ್ರಾಮಗಳವರೆಗೆ ತಾಮ್ರ ಉಂಟು. ಅದರಲ್ಲಿ ಬಹುಭಾಗ ಇರುವುದು ಯಕೃತ್ತು ಮತ್ತು ಮೂಳೆಗಳಲ್ಲಿ. ರಕ್ತದಲ್ಲಿ ತಾಮ್ರಯುಕ್ತ ಮಾಂಸಲ ಪದಾರ್ಥ ಉಂಟು. ಅಲ್ಲದೆ ಹೆಮೋಗ್ಲೋಬಿನುಗಳಲ್ಲಿ ತಾಮ್ರದ ಅಂಶ ಇಲ್ಲದೇ ಹೋದರೂ ಅವುಗಳ ಉತ್ಪತ್ತಿಗೆ ತಾಮ್ರ ಅತ್ಯಂತ ಅವಶ್ಯವಾಗಿದೆ. ಕ್ರಿಮಿಗಳಲ್ಲಿ ಕೂಡ ತಾಮ್ರದ ಅಂಶ ಇರುವುದು. ದೇಹದಲ್ಲಿರುವ ನಂಜಿನ ಉತ್ಪಾದನೆಗೆ ತಾಮ್ರ ಅವಶ್ಯ.

ಭಾರತದಲ್ಲಿ ತಾಮ್ರ

[ಬದಲಾಯಿಸಿ]

ಪ್ರಪಂಚದ ಇತರ ಪ್ರದೇಶಗಳಿಗೆ ಹೋಲಿಸಿದಾಗ ಭಾರತದಲ್ಲಿ ತಾಮ್ರ ನಿಕ್ಷೇಪಗಳ ಸಂಖ್ಯೆ, ಗಾತ್ರ ಅತ್ಯಲ್ಪ. ಬಿಹಾರದ ಸಿಂಘ ಭೂಮ್‍ನಲ್ಲಿ ಈಚಿನ ವರ್ಷಗಳಲ್ಲಿ ಅಭಿವರ್ಧಿಸಿರುವ ತಾಮ್ರ ಕರಗಿಸುವ ಉದ್ಯಮ ಗಮನಾರ್ಹವಾಗಿದೆ. ವಾಸ್ತವವಾಗಿ ರಾಷ್ಟ್ರದ ಪ್ರಮುಖ ತಾಮ್ರ ಸಂಚಯಗಳು ಇರುವುದು ಬಿಹಾರದ ಸಿಂಘ್‍ಭೂಮ್ ಮತ್ತು ಖೇತ್ರಿಯಲ್ಲಿ ಹಾಗೂ ರಾಜಸ್ಥಾನದ ದರಿಬಾದಲ್ಲಿ. ಸಿಂಘ್‍ಭೂಮಿ£ ಸಂಚಯಗಳಲ್ಲಿ ಈ ಪ್ರಮಾಣ 1% ತಲಪುವುದೆಂದೂ ತಿಳಿದಿದೆ. ಸಿಕ್ಕಿಮ್ ಹಾಗೂ ಜಯಪುರ ಪ್ರದೇಶಗಳಲ್ಲಿ ಸಹ ತಾಮ್ರ ನಿಕ್ಷೇಪಗಳು ಇರಬಹುದೆಂದು ಊಹಿಸಲಾಗಿದೆ.

ಕರ್ನಾಟಕದಲ್ಲಿಯೂ ತಾಮ್ರದ ಕೆಲವು ಅಪ್ರಮುಖ ನಿಕ್ಷೇಪಗಳಿವೆ. ಇವುಗಳ ಪೈಕಿ ಹೆಸರಿಸಬೇಕಾದದ್ದು ಚಿತ್ರದುರ್ಗ ಜಿಲ್ಲೆಯ ಇಂಗಳಧಾಳು ನಿಕ್ಷೇಪ ದಾವಣಗೆರೆ, ಮದ್ದೂರು, ಕಲ್ಯಾಡಿ (ಹಾಸನ) ಕಪ್ಪತಗುಡ್ಡ (ಬಳ್ಳಾರಿ), ಹುಲ್ಲಹಳ್ಳಿ, (ನಂಜನಗೂಡು), ತಿಂತಿಣಿ (ರಾಯಚೂರು) ಈ ವಲಯಗಳಲ್ಲಿಯೂ ತಾಮ್ರದ ಅದುರುಗಳು ಇವೆ.

ಉಲ್ಲೇಖಗಳು

[ಬದಲಾಯಿಸಿ]
  1. http://periodic.lanl.gov/29.shtml
  2. http://environmentalchemistry.com/yogi/periodic/Cu.html
  3. McHenry, Charles, ed. (1992). The New Encyclopedia Britannica. Vol. 3 (15 ed.). Chicago: Encyclopedia Britannica, Inc. p. 612. ISBN 0-85229-553-7.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ತಾಮ್ರ&oldid=1161079" ಇಂದ ಪಡೆಯಲ್ಪಟ್ಟಿದೆ