ವಿಷಯಕ್ಕೆ ಹೋಗು

ನಿಕಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ನಿಕ್ಕಲ್ ಇಂದ ಪುನರ್ನಿರ್ದೇಶಿತ)


೨೮ ಕೊಬಾಲ್ಟ್ನಿಕಲ್ತಾಮ್ರ
-

Ni

Pd
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ನಿಕಲ್, Ni, ೨೮
ರಾಸಾಯನಿಕ ಸರಣಿtransition metal
ಗುಂಪು, ಆವರ್ತ, ಖಂಡ 10, 4, d
ಸ್ವರೂಪಹೊಳಪುಳ್ಳ ಲೋಹ
ಅಣುವಿನ ತೂಕ 58.6934(2) g·mol−1
ಋಣವಿದ್ಯುತ್ಕಣ ಜೋಡಣೆ [Ar] 3d8 4s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 16, 2
ಭೌತಿಕ ಗುಣಗಳು
ಹಂತsolid
ಸಾಂದ್ರತೆ (ಕೋ.ತಾ. ಹತ್ತಿರ)8.908 g·cm−3
ದ್ರವಸಾಂದ್ರತೆ at ಕ.ಬಿ.7.81 g·cm−3
ಕರಗುವ ತಾಪಮಾನ1728 K
(1455 °C, 2651 °ಎಫ್)
ಕುದಿಯುವ ತಾಪಮಾನ3186 K
(2913 °C, 5275 °F)
ಸಮ್ಮಿಲನದ ಉಷ್ಣಾಂಶ17.48 kJ·mol−1
ಭಾಷ್ಪೀಕರಣ ಉಷ್ಣಾಂಶ377.5 kJ·mol−1
ಉಷ್ಣ ಸಾಮರ್ಥ್ಯ(25 °C) 26.07 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 1783 1950 2154 2410 2741 3184
ಅಣುವಿನ ಗುಣಗಳು
ಸ್ಪಟಿಕ ಸ್ವರೂಪface centered cubic
ಆಕ್ಸಿಡೀಕರಣ ಸ್ಥಿತಿಗಳು4 [೧], 3, 2, 1 [೨]
(mildly basic oxide)
ವಿದ್ಯುದೃಣತ್ವ1.91 (Pauling scale)
ಅಣುವಿನ ತ್ರಿಜ್ಯ135 pm
ಅಣುವಿನ ತ್ರಿಜ್ಯ (ಲೆಖ್ಕಿತ)149 pm
ತ್ರಿಜ್ಯ ಸಹಾಂಕ121 pm
ವಾನ್ ಡೆರ್ ವಾಲ್ಸ್ ತ್ರಿಜ್ಯ163 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆferromagnetic
ವಿದ್ಯುತ್ ರೋಧಶೀಲತೆ(20 °C) 69.3 nΩ·m
ಉಷ್ಣ ವಾಹಕತೆ(300 K) 90.9 W·m−1·K−1
ಉಷ್ಣ ವ್ಯಾಕೋಚನ(25 °C) 13.4 µm·m−1·K−1
ಶಬ್ದದ ವೇಗ (ತೆಳು ಸರಳು)(r.t.) 4900 m·s−1
ಯಂಗ್ ಮಾಪಾಂಕ200 GPa
ವಿರೋಧಬಲ ಮಾಪನಾಂಕ76 GPa
ಸಗಟು ಮಾಪನಾಂಕ180 GPa
ವಿಷ ನಿಷ್ಪತ್ತಿ 0.31
ಮೋಸ್ ಗಡಸುತನ4.0
Vickers ಗಡಸುತನ638 MPa
ಬ್ರಿನೆಲ್ ಗಡಸುತನ700 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-02-0
ಉಲ್ಲೇಖನೆಗಳು

ನಿಕಲ್ ಒಂದು ಬಿಳಿ ಬಣ್ಣದ ಮೂಲವಸ್ತು. ಇದು ಒಂದು ಲೋಹ. ಪ್ರಾಚೀನರಿಗೆ ಇದರ ಮಿಶ್ರ ಲೋಹಗಳ ಉಪಯೋಗದ ಬಗ್ಗೆ ತಿಳಿದಿತ್ತಾದರೂ ಇದನ್ನು ೧೭೫೧ರಲ್ಲಿ ಸ್ವೀಡನ್ ದೇಶದ ಅಕ್ಸೆಲ್ ಕ್ರಾನ್ಸ್ಟೆಡ್ಟ್ (Axel Cronstedt) ಎಂಬ ವಿಜ್ಞಾನಿ ಮಿಶ್ರ ಲೋಹಗಳಿಂದ ಬೇರ್ಪಡಿಸಿದರು. ಇದು ಬಹಳ ಹೊಳಪುಳ್ಳ ಲೋಹವಾದುದರಿಂದ ಹಲವಾರು ಮಿಶ್ರಲೋಹಗಳ ಉತ್ಪಾದನೆಯಲ್ಲಿ ಉಪಯೋಗದಲ್ಲಿದೆ.[] ಮುದ್ರಣ, ನಾಣ್ಯಗಳ ತಯಾರಿಕೆ, ಕೈಗಾರಿಕೆಗಳಲ್ಲಿ ರಾಸಯನಿಕ ವೇಗವರ್ಧಕವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಲ್ಲಿದೆ.

ಇದು ಆವರ್ತ ಕೋಷ್ಟಕದ ೮ನೆಯ ಗುಂಪಿನ ಸಂಕ್ರಮಣಲೋಹ. ಪರಮಾಣು ಸಂಖ್ಯೆ ೨೮, ಪರಮಾಣು ತೂಕ ೫೮.೭೧. ರಾಸಾಯನಿಕ ಪ್ರತೀಕ Ni. ನೈಸರ್ಗಿಕವಾಗಿ ದೊರೆಯುವ ಐಸೊಟೋಪುಗಳು ೫೮, ೬೦, ೬೧, ೬೨, ೬೪.[] ಎಲೆಕ್ಟ್ರಾನಿಕ್ ವಿನ್ಯಾಸ 1s22s22p63s23p63d84s2. ದ್ರವನಬಿಂದು ೧೪೫೨C, ಕ್ವಥನ ಬಿಂದು ೨೮೦೦C ಸಾಂದ್ರತೆ (g / cm3 ಗಳಲ್ಲಿ ) ಘನ ವಸ್ತುವಿಗೆ ೮.೮, ಒಂಟಿ ಹರಳಿಗೆ ೯.೦೪. ಕ್ರಾನ್‌ಸ್ಟೆಡ್ ಎಂಬಾತ ಇದನ್ನು ನಿಕೊಲೈಟ್ ಎಂಬ ಅದುರಿನಿಂದ ಪ್ರತ್ಯೇಕಿಸಿದ (೧೭೫೧).[] ಬರ್ಗ್‌ಮ್ಯಾನ್ ೧೭೭೫ರಲ್ಲಿ ಶುದ್ಧ ಲೋಹವನ್ನೂ ಅದರ ಗುಣಗಳನ್ನೂ ಪತ್ತೆಹಚ್ಚಿದ.

ಪ್ರಸರಣ

[ಬದಲಾಯಿಸಿ]

ನಿಕಲ್ ಭೂಮಿಯ ಮೇಲ್ಪದರದಲ್ಲಿ ಇದರ ಶೇಕಡ ೦.೦೧೬ರಷ್ಟು ಹರಡಿದೆ. ಹೆಚ್ಚಾಗಿ ಸಲ್ಫರ್, ಆರ್ಸೆನಿಕ್ ಮತ್ತು ಆ್ಯಂಟಿಮೊನಿಗಳೊಡನೆ ಇದು ಸಂಯುಕ್ತಗಳ ರೂಪದಲ್ಲಿ ದೊರೆಯುವುದು. ಅಸಂಯುಕ್ತ ನಿಕಲ್ ಕಬ್ಬಿಣದೊಡನೆ ಮಿಶ್ರಲೋಹವಾಗಿ ಉಲ್ಕಾಶಿಲೆಗಳಲ್ಲಿ ಇರುತ್ತದೆ. ನಿಕಲಿನ ಮುಖ್ಯ ಖನಿಜಗಳೆಂದರೆ ಹಳದಿ ನಿಕಲ್ ಅದರು ಯಾ ಮಿಲ್ಲಿರೈಟ್ NiAs, ಕೆಂಪು ನಿಕಲ್ ಅದುರು ಯಾ ಕೂಫರ್ ನಿಕಲ್ NiAs, ಬಿಳಿ ನಿಕಲ್ ಅದುರು ಯಾ ನಿಕಲೈಟ್ NiAs2.[] ಲೋಹದ ತಯಾರಿಕೆಯ ದೃಷ್ಟಿಯಿಂದ ಇವುಗಳಿಗಿಂತ ಮುಖ್ಯವಾದ ಅದುರಿನ ಹೆಸರು ಪೆಂಟ್‌ಲ್ಯಾಂಡೈಟ್ NiS2 FeS. ಒಂಟಾರಿಯೋದ ಸಡ್‌ಬರಿಯಲ್ಲಿ ಇದು ಹೇರಳವಾಗಿ ಸಿಗುತ್ತದೆ.[] ಇದರಲ್ಲಿ ಸೇಕಡ ೩ ರವರೆಗೂ ನಿಕಲ್ ಇರಬಲ್ಲದು.

ತಯಾರಿಕೆ

[ಬದಲಾಯಿಸಿ]

ಅದುರುಗಳಲ್ಲಿ ಇರುವ ನಿಕಲಿನ ಅಂಶ ಅತ್ಯಲ್ಪ. ಇತರ ವಸ್ತುಗಳ ಸಂಯೋಗ ಯಾ ಮಿಶ್ರವಾಗಿರುವ ಪರಿಮಾಣಗಳಿಗೆ ಅನುಸಾರವಾಗಿ ನಿಕಲನ್ನು ಬೇರ್ಪಡಿಸುವ ವಿಧಾನಗಳು ಬೇರೆ ಬೇರೆ. ಇತ್ತೀಚೆಗೆ ಹೆಚ್ಚಿನ ಮೊತ್ತದ ನಿಕಲನ್ನು ಸಡ್‌ಬರಿಯ ಅದುರುಗಳಿಂದ ತಯಾರಿಸಲಾಗುತ್ತಿದೆ. ಇವುಗಳಲ್ಲಿ ತಾಮ್ರ ಕೂಡ ಉಂಟು. ಮೊದಲಿಗೆ ಅದುರುಗಳನ್ನು ವಾಯುವಿನಲ್ಲಿ ಚೆನ್ನಾಗಿ ಕಾಸಲಾಗುವುದು. ಆಗ ಸಲ್ಫರ್ ಮತ್ತು ಆರ್ಸೆನಿಕ್ ಧಾತುಗಳ ಕೆಲವಂಶ ಉತ್ಕರ್ಷಣಗೊಂಡು ಹೋಗುವುವು. ಬಳಿಕ ಅದುರುಗಳನ್ನು ಸಿಲಿಕ ಇರುವ ವಸ್ತುಗಳೊಡನೆ ವಾಯುವಿನ ಸಮಕ್ಷಮ ಬೆಸಿಮರ್ ಪರಿವರ್ತಕದಲ್ಲಿ ಕಾಸಿದಾಗ ಕಬ್ಬಿಣ ಧಾತು ಮಲರೂಪದಲ್ಲಿ ಬೇರ್ಪಡುವುದು. ನಿಕಲ್ ಮತ್ತು ತಾಮ್ರ ಸಲ್ಫೈಡುಗಳ ಮಿಶ್ರಣ ಸಿಕ್ಕುವುದು. ಇದನ್ನು ವಾಯುವಿನಲ್ಲಿ ಚೆನ್ನಾಗಿ ಕಾಸಿದಾಗ ಇವೇ ಲೋಹಗಳ ಆಕ್ಸೈಡುಗಳ ಮಿಶ್ರಣ ದೊರಕುವುದು. ಇದನ್ನು ಜಲಮಿಶ್ರಿತ ಸಲ್ಫ್ಯೂರಿಕ್ ಆಮ್ಲದೊಡನೆ ಕುಲುಕಿದಾಗ ತಾಮ್ರದ ಆಕ್ಸೈಡ್ ವಿಲೀನಿಸುವುದು. ಆದರೆ ನಿಕಲ್ ಆಕ್ಸೈಡ್ ಅಲ್ಪ ಮೊತ್ತದಲ್ಲಿ ಮಾತ್ರ ವಿಲೀನಿಸುವುದು. ನಿಕಲ್ ಆಕ್ಸೈಡನ್ನು ಬೇರ್ಪಡಿಸಿ ೩೦೦-೩೫೦ ಡಿಗ್ರಿ ಉಷ್ಣತೆಗೆ ಕಾಸಿ ಅದರ ಮೇಲೆ ಜಲಾನಿಲವನ್ನು (ವಾಟರ್ ಗ್ಯಾಸ್) ಹಾಯಿಸಿದಾಗ ಹೈಡ್ರೋಜನ್ನಿನಿಂದ ಆ ಆಕ್ಸೈಡ್ ಆಕರ್ಷಿಸಲ್ಪಟ್ಟು ನಿಕಲ್ ಉಳಿಯುವುದು. ಆದರೆ ಇದರಲ್ಲಿ ಕಲ್ಮಷಗಳಿರುವುವು. ಮೋಂಡ್ ಕಾರ್ಬೊನಿಲ್ ಪ್ರಕ್ರಿಯೆಯಿಂದ ನಿಕಲನ್ನು ಶುದ್ಧ ಮಾಡುವರು.[] ೫೫ºC ಡಿಗ್ರಿ ಉಷ್ಣತೆಯಲ್ಲಿ ಅಶುದ್ಧ ನಿಕಲಿನ ಮೇಲೆ ಇಂಗಾಲದ ಮಾನಾಕ್ಸೈಡ್ ವರ್ತಿಸಿದಾಗ ನಿಕಲ್ ಟೆಟ್ರ ಕಾರ್ಬೊನಿಲಿನ, Ni(CO)4, ಹಬೆ ಉಂಟಾಗುವುದು. ಇದನ್ನು ೧೫೦-೧೮೦ ಡಿಗ್ರಿ ಉಷ್ಣತೆಯಲ್ಲಿ ಇರಿಸಿದ ಗೋಪುರದಲ್ಲಿ ಹಾಯಿಸುವರು. ಆಗ ಈ ಹಬೆ ವಿಭಜನೆಗೊಂಡು ಚಲಾಯಮಾನವಾದ ನಿಕಲ್ ಚೂರುಗಳ ಮೇಲೆ ಲೋಹ ಜಮಾವಣೆ ಆಗುವುದು. ಹೊರಗೆ ಬರುವ ಇಂಗಾಲದ ಮಾನಾಕ್ಸೈಡ್ ಅನಿಲವನ್ನು ಪುನಃ ಉಪಯೋಗಿಸುವರು. ಈ ರೀತಿಯಲ್ಲಿ ಸಿಕ್ಕಿದ ನಿಕಲ್ ೯೯.೮% ಶುದ್ಧವಾಗಿರುವುದು.[] ವಿದ್ಯುದ್ವಿಶ್ಲೇಷಣದ ಮೂಲಕವೂ ಶುದ್ಧ ನಿಕಲನ್ನು ಪಡೆಯಬಹುದು. ನಿಕಲ್ ಸಲ್ಫೇಟಿನ ದ್ರಾವಣದಲ್ಲಿ ಶುದ್ಧ ನಿಕಲಿನ ಕ್ಯಾಥೋಡ್ ಮತ್ತು ಶುದ್ಧ ಮಾಡಬೇಕಾದ ನಿಕಲಿನ ತುಂಡುಗಳನ್ನು ಆ್ಯನೋಡ್ ಆಗಿ ಪ್ರಯೋಗಿಸಬೇಕು.

ಗುಣಗಳು

[ಬದಲಾಯಿಸಿ]

ನಿಕಲ್ ಲೋಹ ಬೆಳ್ಳಿಯಂತೆ ಶುಭ್ರವಾಗಿಯೂ ಹೊಳಪಾಗಿಯೂ ಇರುವುದು.. ಇದನ್ನು ಚೆನ್ನಾಗಿ ಕಾಂತಿಯುಕ್ತವಾಗಿ ಮಾಡಬಹುದು. ಇದು ಬೆಳ್ಳಿಯ ೧೩.೮%ರಷ್ಟು ವಿದ್ಯುದ್ವಾಹಕ. ನಿಕಲನ್ನು ತೆಳ್ಳಗಿನ ತಗಡಾಗಿ ತಟ್ಟಬಹುದು ; ಸೂಕ್ಷ್ಮ ತಂತಿಯಾಗಿ ಎಳೆಯಬಹುದು.[] ಶುದ್ಧ ನಿಕಲಿಗೆ ಕಾಂತೀಯ ಗುಣ ಉಂಟು. ಘನಸ್ಥಿತಿಯಲ್ಲಿ ನಿಕಲ್ ವಾಯು ಮತ್ತು ನೀರಿನ ಪ್ರಕ್ರಿಯೆಗಳನ್ನು ನಿರೋಧಿಸುತ್ತದೆ. ಆದರೆ ಸೂಕ್ಷ್ಮ ಪುಡಿರೂಪದಲ್ಲಿದ್ದಾಗ ವಾಯುವಿನಲ್ಲಿ ಸ್ವದಾಹಿ ಆಗಬಲ್ಲದು. ನಿಕಲ್ ತಂತಿಯನ್ನು ಆಕ್ಸಿಜನ್ನಿನಲ್ಲಿ ಕಾಸಿದಾಗ ಕಿಡಿಗಳನ್ನೂ ಸೂಸಿ ಉರಿಯುತ್ತದೆ. ನಿಕಲಿನ ತಗಡನ್ನು ವಾಯುವಿನಲ್ಲಿ ಕಾಸಿದಾಗ ಹೊಳಪು ಮಾಸುತ್ತದೆ. ಕಾಸಿದ ನಿಕಲ್ ಕ್ಲೋರೀನ್ ಮತ್ತು ಬ್ರೋಮೀನುಗಳಲ್ಲಿ ಉರಿಯುತ್ತದೆ. ಫಾಸ್ಫರಸ್, ಆರ್ಸೆನಿಕ್ ಮತ್ತು ಆ್ಯಂಟಿಮನಿಗಳೊಡನೆ ನಿಕಲ್ ಸಂಯೋಗಗೊಳ್ಳಬಲ್ಲದು. ಅಲ್ಯೂಮಿನಿಯಮಿನೊಡನೆ ಕಾಸಿದಾಗ ಅತಿ ತ್ವರೆಯಾಗಿ ಸಂಯೋಗಿಸುತ್ತದೆ. ನಿಕಲಿನ ಸೂಕ್ಷ್ಮ ಪುಡಿ, ಮುಖ್ಯತಃ, ಅಧಿಕೋಷ್ಣತೆಗಳಲ್ಲಿ ಹೈಡ್ರೊಜನ್ನನ್ನು ಹೀರುವುದು. ಜಲಮಿಶ್ರಿತ ಹೈಡ್ರೊಕ್ಲೋರೀಕ್ ಮತ್ತು ಸಲ್ಫ್ಯೂರಿಕ್ ಆಮ್ಲಗಳು ಸಾವಕಾಶವಾಗಿ ನಿಕಲಿನ ಮೇಲೆ ವರ್ತಿಸುವುವು. ಈ ಲೋಹದ ಜಲಮಿಶ್ರಿತ ನೈಟ್ರಿಕ್ ಆಮ್ಲದಲ್ಲಿ ವಿಲೀನವಾಗುವುದಾದರೂ ಸಾರ ನೈಟ್ರಿಕ್ ಆಮ್ಲದಲ್ಲಿ ನಿಶ್ಚೇಷ್ಟಿತವಾಗುವುದು. ಕ್ಷಾರಗಳು ನಿಕಲಿನ ಮೇಲೆ ವರ್ತಿಸುವುದಿಲ್ಲ.

ಉಪಯೋಗಗಳು

[ಬದಲಾಯಿಸಿ]

ಮುಖ್ಯವಾಗಿ ಮಿಶ್ರಲೋಹಗಳಲ್ಲಿ ನಿಕಲಿನ ಉಪಯೋಗವಿದೆ. ಇದರ ಮಿಶ್ರಲೋಹಗಳು ಶುಭ್ರವಾಗಿದ್ದು ಹೊಳಪಿನಿಂದ ಕೂಡಿರುತ್ತವೆ. ನಿಕಲ್ ಮತ್ತು ತಾಮ್ರಗಳ ಮಿಶ್ರಲೋಹದ ನಾಣ್ಯಗಳು ಬಹಳ ಪ್ರಾಚೀನ ಕಾಲದಲ್ಲಿ ಕೂಡ ಬಳಕೆಯಲ್ಲಿದ್ದವು. ಆಧುನಿಕ ನಾಣ್ಯಗಳ ಮಿಶ್ರಲೋಹದಲ್ಲಿ ೭೫% ತಾಮ್ರ ೨೫% ನಿಕಲ್ ಇರುತ್ತವೆ. ಶುದ್ಧ ನಿಕಲನ್ನು ಕೂಡ ನಾಣ್ಯಗಳಲ್ಲಿ ಉಪಯೋಗಿಸುವುದಿದೆ. ಜರ್ಮನ್ ಸಿಲ್ವರ್ ಯಾ ನಿಕಲ್ ಸಿಲ್ವರ್ ಎಂಬ ಮಿಶ್ರಲೋಹದಲ್ಲಿ ೧೦%-೨೦% ನಿಕಲ್, ೪೦%-೭೦% ತಾಮ್ರ, ೫%-೧೦% ಸತುವು ಉಂಟು. ಇದು ಗೃಹೋಪಕರಣ ಮತ್ತು ಆಭರಣಗಳಲ್ಲಿ ನಕಲಿ ಬೆಳ್ಳಿಯೋಪಾದಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಶುದ್ಧ ನಿಕಲನ್ನು ಕೂಡ ಗೃಹ ಮತ್ತು ಪ್ರಯೋಗಶಾಲೆಗಳ ಕೆಲವು ಉಪಕರಣಗಳಲ್ಲಿ ಉಪಯೋಗಿಸುವುದುಂಟು. ನಿಕಲ್ ಬೆರೆತ ಉಕ್ಕಿಗೆ ನಿಕಲ್ ಸ್ಟೀಲ್ ಎಂದೇ ಹೆಸರು. ಇದು ಕಠಿನವಾಗಿಯೂ ಬಿಗುವಾಗಿಯೂ ಇರುವುದು. ಸ್ಟೇನ್‌ಲೆಸ್ ಸ್ಟೀಲ್ (ತುಕ್ಕುರಹಿತ ಉಕ್ಕು) ಎಂಬ ಮಿಶ್ರಲೋಹ. ವಾಯು, ನೀರು, ಪಾದರಸ ಮುಂತಾದವುಗಳಿಂದ ಮಾಸುವುದಿಲ್ಲ. ಗೃಹ, ಯಂತ್ರ ಮತ್ತು ಪ್ರಯೋಗಶಾಲೆಗಳ ಉಪಕರಣಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ. ಈ ಮಿಶ್ರಲೋಹದಲ್ಲಿ ಉಕ್ಕು, ನಿಕಲ್ ಮತ್ತು ಕ್ರೋಮಿಯಮ್ ಸೇರಿರುತ್ತವೆ. ೬೭% ನಿಕಲ್, ೨೮% ತಾಮ್ರ ಮತ್ತು ಅಲ್ಪ ಮೊತ್ತಗಳಲ್ಲಿ ಕಬ್ಬಿಣ ಮತ್ತು ಮ್ಯಾಂಗನೀಸ್ ಇರುವ ಮಿಶ್ರಲೋಹಕ್ಕೆ ಮೊನೆಲ್‌ಮೆಟಲ್ ಎನ್ನುವರು. ಇದು ಗಟ್ಟಿಯಾಗಿಯೂ ಬಿಗುಪಾಗಿಯೂ ಇರುತ್ತದೆ. ವಾಯು, ಕಡಲನೀರು ಆಮ್ಲಗಳ ವರ್ತನೆ ಮೊದಲಾದವನ್ನು ಇದು ನಿರೋಧಿಸಬಲ್ಲದು. ಆದ್ದರಿಂದ ರಾಸಾಯನಿಕ ಹಾಗೂ ಔದ್ಯೋಗಿಕ ಉಪಕರಣಗಳಲ್ಲಿ ಇದರ ಉಪಯೋಗ ಉಂಟು. ಕಾನ್‌ಸ್ಟ್ಯಾಂಟಿನ್ (೪೦% ನಿಕಲ್ ಮತ್ತು ೬೦% ತಾಮ್ರ) ಮತ್ತು ಮ್ಯಾಂಗನೀಸ್ (೪% ನಿಕಲ್, ೧೨% ಮ್ಯಾಂಗನೀಸ್ ಮತ್ತು ೮೪% ತಾಮ್ರ) ಮಿಶ್ರಲೋಹಗಳನ್ನು ವಿದ್ಯುದ್ರೋಧ ತಂತಿಗಳಲ್ಲಿ ಉಪಯೋಗಿಸಲಾಗುವುದು. ನೈಕ್ರೋಮನ್ನು (೬೦% ನಿಕಲ್ ಮತ್ತು ೪೦% ಕ್ರೊಮಿಯಮ್) ವಿದ್ಯುತ್ ಒಲೆ ಮತ್ತು ಶಾಖಕಾರಿಗಳಲ್ಲಿ ಬಳಸುವರು.

ಹೈಡ್ರೊಜನೀಕರಣದಲ್ಲಿ (ಹೈಡ್ರೊಜಿನೇಶನ್) ಕ್ರಿಯಾವರ್ಧಕವಾಗಿ ನಿಕಲಿನ ಉಪಯೋಗವಿದೆ.[] ನಿರ್ದಿಷ್ಟ ಉಷ್ಣತೆಗೆ ಕಾಸಿದ ತೈಲಗಳಲ್ಲಿ ನಿಕಲಿನ ಸೂಕ್ಷ್ಮ ಪುಡಿಗಳ ಸಮಕ್ಷಮ ಹೈಡ್ರೊಜನ್ನನ್ನು ಹಾಯಿಸಿದಾಗ ಆ ತೈಲಗಳ ಕಾರ್ಬನ್ನಿನ ಆಪರ್ಯಾಪ್ತ ಭಾಗಗಳು ಹೈಡ್ರೊಜನ್ನಿನೊಡನೆ ಸಂಯೋಗಗೊಂಡು ಪರ್ಯಾಪ್ತವಾಗುತ್ತವೆ. ಹೀಗೆ ಉಂಟಾದ ಸಂಯುಕ್ತಗಳು ಘನರೂಪದಲ್ಲಿರುವುವು. ಈ ಪ್ರಕ್ರಿಯೆಗೆ ತೈಲಗಳ ಘನೀಕರಣವೆಂದು ಕೂಡ ಹೆಸರಿದೆ. ಅಖಾದ್ಯ ತೈಲಗಳನ್ನು ಈ ಪ್ರಕ್ರಿಯೆಯಿಂದ ಖಾದ್ಯ ಪದಾರ್ಥಗಳಾಗಿ ಪರಿವರ್ತಿಸಬಹುದು. ನಿಕಲ್ ಅಮೋನಿಯಮ್ ಸಲ್ಫೇಟ್ ಲವಣವನ್ನು ನಿಕಲ್ ವಿದ್ಯುತ್ ವಿಲೇಪನ ಕಾರ್ಯದಲ್ಲಿ ಉಪಯೋಗಿಸುವುದಿದೆ.

ನಿಕಲ್ ಸಂಯುಕ್ತಗಳು

[ಬದಲಾಯಿಸಿ]

ಸಂಯುಕ್ತಗಳಲ್ಲಿ ನಿಕಲಿನ ವೇಲನ್ಸಿ ಪ್ರಾಯಶಃ ಎರಡು ಆಕ್ಸೈಡುಗಳು. ನಿಕಲ್ ಮಾನಾಕ್ಸೈಡ್, NiO; ನಿಕಲ್ ಹೈಡ್ರಾಕ್ಸೈಡ್, ನೈಟ್ರೇಟ್ ಯಾ ಕಾರ್ಬನೇಟನ್ನು ಕಾಸಿದಾಗ ಇದು ಪ್ರಾಪ್ತವಾಗುವುದು. ಹಸಿರು ಬಣ್ಣದ ಈ ಪುಡಿ ನೀರಿನಲ್ಲಿ ವಿಲೀನವಾಗುವುದಿಲ್ಲ; ಆದರೆ ಆಮ್ಲಗಳಲ್ಲಿ ಸುಲಭವಾಗಿ ವಿಲೀನವಾಗುವುದು. ಹೈಡ್ರೊಜನ್ನಿನಲ್ಲಿ ಇದನ್ನು ಕಾಸಿದಾಗ ಅಪಕರ್ಷಿಸಿ ನಿಕಲ್ ಉಳಿಯುವುದು. ಪಿಂಗಾಣಿ ಮತ್ತು ಎನಾಮಲುಗಳಿಗೆ ಬಣ್ಣ ಕೊಡುವುದರಲ್ಲಿ ಇದರ ಉಪಯೋಗ ಉಂಟು.

ನಿಕಲಿಕ್ ಆಕ್ಸೈಡ್ ಯಾ ನಿಕಲ್ ಸೆಸ್ವ್ಕಿ ಆಕ್ಸೈಡ್, NiO23 : ನಿಕಲ್ ನೈಟ್ರೇಟನ್ನು ಸಾಧಾರಣ ಉಷ್ಣತೆಗೆ ಕಾಸಿದಾಗ ಕಪ್ಪು ಚೂರ್ಣದ ರೂಪದಲ್ಲಿ ಇದು ಸಿಕ್ಕುವುದು. ಚೆನ್ನಾಗಿ ಕಾಸಿದಾಗ ಇದರಿಂದ ಆಕ್ಸಿಜನ್ ಹೊರಡುವುದು ಮತ್ತು ನಿಕಲ್ ಮಾನಾಕ್ಸೈಡ್ ಉಳಿಯುವುದು.

ನಿಕಲ್ ಡೈಆಕ್ಸೈಡ್, NiO2 : ನಿಕಲ್ ಲವಣದ ದ್ರಾವಣದೊಡನೆ ಕ್ಷಾರ ಹೈಪೊಕ್ಲೋರೈಡ್ ಯಾ ಹೈಪೊಬ್ರೋಮೈಟನ್ನು ಬೆರೆಸಿದಾಗ ಇದು ಕಪ್ಪು ಚೂರ್ಣವಾಗಿ ದೊರೆಯುವುದು. ಇದು ಪ್ರಬಲ ಉತ್ಕರ್ಷಣಕಾರಿ.

ನಿಕಲ್ ಹೈಡ್ರಾಕ್ಸೈಡ್ : Ni(OH)2 ನಿಕಲ್ ಲವಣದ ದ್ರಾವಣದೊಡನೆ ಕ್ಷಾರ ಹೈಡ್ರಾಕ್ಸೈಡ್ ದ್ರಾವಣ ಸೇರಿದಾಗ ನಿಕಲ್ ಹೈಡ್ರಾಕ್ಸೈಡ್ ಒತ್ತರಿಸಲ್ಪಡುವುದು. ಆಮ್ಲಗಳಲ್ಲಿ ಇದು ಸುಲಭವಾಗಿ ವಿಲೀನವಾಗುವುದು. ಅಮೊನಿಯ ದ್ರಾವಣದಲ್ಲಿ ಸಹ ಇದು ವಿಲೀನಗೊಂಡು ನೀಲಿಬಣ್ಣದ ದ್ರಾವಣವನ್ನು ಕೊಡುವುದು. ಕಾಸಿದಾಗ ನಿಕಲ್ ಮಾನಾಕ್ಸೈಡ್ ಉಳಿಯುವುದು.

ನಿಕಲಿನ ಲವಣಗಳು : ನಿಕಲಿನ ಆಕ್ಸೈಡ್, ಹೈಡ್ರಾಕ್ಸೈಡ್ ಯಾ ಕಾರ್ಬೊನೇಟನ್ನು ಆಮ್ಲಗಳಲ್ಲಿ ವಿಲೀನಗೊಳಿಸಿದಾಗ ನಿಕಲ್ ಲವಣಗಳು ಉಂಟಾಗುವುವು. ಇವುಗಳ ಬಣ್ಣ ಹಸಿರು.[೧೦] ಈ ಲವಣಗಳ ಸ್ಫಟಿಕಗಳಲ್ಲಿ ಸಂಯೋಜಿತ ಜಲವಿರುವುದು. ಉದಾಹರಣೆಗೆ ನಿಕಲ್ ಕ್ಲೋರೈಡ್ NiCl2.6H2O, ನಿಕಲ್ ಸಲ್ಫೇಟ್ NiSO4.7H2O, ನಿಕಲ್ ನೈಟ್ರೇಟ್ Ni(NO3)2.6H2O.

ನಿಕಲ್ ಟೆಟ್ರಕಾರ್ಬೊನಿಲ್, Ni(CO)4 : ಸೂಕ್ಷ್ಮ ನಿಕಲ್ ಚೂರ್ಣದ ಮೇಲೆ ೫೦º-೧೦೦ºC ಉಷ್ಣತೆಯಲ್ಲಿ ಇಂಗಾಲದ ಮಾನಾಕ್ಸೈಡನ್ನು ಹಾಯಿಸಿದಾಗ ನಿಕಲ್ ಟೆಟ್ರಕಾರ್ಬಾನಿಲ್ ಹಬೆಯ ರೂಪದಲ್ಲಿ ಬರುವುದು. ತಣಿದಾಗ ಇದು ೪೩ºCಯಲ್ಲಿ ಕುದಿಯುವ ವರ್ಣಹೀನ ದ್ರವವಾಗುವುದು. ಇದಕ್ಕೆ ವಾಸನೆ ಇಲ್ಲ. ಇದು ವಿಷಕಾರಿ. ನೀರಿನಲ್ಲಿ ವಿಲೀನವಾಗುವುದಿಲ್ಲ. ಆದರೆ ಆರ್ಸೆನಿಕ್ ದ್ರವಗಳಲ್ಲಿ ವಿಲೀನವಾಗುವುದು. ವಾಯುವಿನಲ್ಲಿ ಉಜ್ಜ್ವಲವಾಗಿ ಉರಿಯುವುದು. ಹಾಯಿಸಿದಾಗ ಆಸ್ಫೋಟನೆಯೊಡನೆ ವಿಭಜಿಸುವುದು. ಇಂಗಾಲದ ಮಾನಾಕ್ಸೈಡಿನೊಡನೆ ಮಿಶ್ರ ಮಾಡಿ ಕಾಸಿದ ಗಾಜಿನ ನಳಿಗೆಯಲ್ಲಿ ಹಾಯಿಸಿದಾಗ ಇದು ವಿಭಜನೆಗೊಳ್ಳುವುದು ಮತ್ತು ಕನ್ನಡಿಯೋಪಾದಿಯಲ್ಲಿ ನಿಕಲ್ ಗಾಜಿಗೆ ತಾಗಿಕೊಳ್ಳುವುದು.

ಉಲ್ಲೇಖಗಳು

[ಬದಲಾಯಿಸಿ]
  1. "Nickel Use In Society". Nickel Institute. Archived from the original on September 21, 2017.
  2. "Isotopes_of_nickel". www.chemeurope.com. Retrieved 2022-09-02.
  3. Weeks, Mary Elvira (1932). "The discovery of the elements: III. Some eighteenth-century metals". Journal of Chemical Education. 9 (1): 22. Bibcode:1932JChEd...9...22W. doi:10.1021/ed009p22.
  4. National Pollutant Inventory – Nickel and compounds Fact Sheet Archived December 8, 2011, ವೇಬ್ಯಾಕ್ ಮೆಷಿನ್ ನಲ್ಲಿ.. Npi.gov.au. Retrieved on January 9, 2012.
  5. McNeil, Ian (1990). "The Emergence of Nickel". An Encyclopaedia of the History of Technology. Taylor & Francis. pp. 96–100. ISBN 978-0-415-01306-2.
  6. Mond, L.; Langer, K.; Quincke, F. (1890). "Action of carbon monoxide on nickel". Journal of the Chemical Society. 57: 749–753. doi:10.1039/CT8905700749.
  7. Neikov, Oleg D.; Naboychenko, Stanislav; Gopienko, Victor G & Frishberg, Irina V (January 15, 2009). Handbook of Non-Ferrous Metal Powders: Technologies and Applications. Elsevier. pp. 371–. ISBN 978-1-85617-422-0. Archived from the original on May 29, 2013. Retrieved January 9, 2012.
  8. Hammond, C.R.; Lide, C. R. (2018). "The elements". In Rumble, John R. (ed.). CRC Handbook of Chemistry and Physics (99th ed.). Boca Raton, FL: CRC Press. p. 4.22. ISBN 9781138561632.
  9. "Nickel Compounds – The Inside Story". Nickel Institute. Archived from the original on 2018-08-31.
  10. "A Review on the Metal Complex of Nickel (Ii) Salicylhydroxamic Acid and its Aniline Adduct". www.heraldopenaccess.us. Retrieved 2022-07-19.


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನಿಕಲ್&oldid=1118468" ಇಂದ ಪಡೆಯಲ್ಪಟ್ಟಿದೆ