ಸಂಕೇತಿ ಭಾಷೆ

ವಿಕಿಪೀಡಿಯ ಇಂದ
Jump to navigation Jump to search


ಸಾಂಕೇತಿ
ಮೂಲ ತ್ರಿಶೂರ್
ಬಳಕೆಯಲ್ಲಿರುವ 
ಪ್ರದೇಶಗಳು:
ಕರ್ನಾಟಕ
ಒಟ್ಟು 
ಮಾತನಾಡುವವರು:
?
ಭಾಷಾ ಕುಟುಂಬ:
 Southern
  Kannada
   Tamil–Kodagu
    Tamil–Malayalam
     ಕನ್ನಡ
      mixed
       ಸಾಂಕೇತಿ
ಭಾಷೆಯ ಸಂಕೇತಗಳು
ISO 639-1: ಯಾವುದೂ ಇಲ್ಲ
ISO 639-2: ಸೇರಿಸಬೇಕು
ISO/FDIS 639-3:

ಸಂಕೇತಿ ಭಾಷೆಯು ತಮಿಳು ಭಾಷೆಗಿಂತ ಭಿನ್ನವಾಗಿದ್ದು ಈಗ ಒಂದು ಸ್ವತಂತ್ರ ಭಾಷೆಯಾಗಿದೆ ಎಂಬುದು ಹಂಪ ನಾಗರಾಜಯ್ಯ ಮುಂತಾದ ದ್ರಾವಿಡ ಭಾಷಾತಜ್ಞರ ಅಭಿಪ್ರಾಯ. ಆದರೂ ಹಲವರು ಸಂಪ್ರದಾಯದ ಅಂಧಶ್ರದ್ಧೆಯಿಂದ ಇದನ್ನು ತಮಿಳಿನ ಒಂದು ಉಪಭಾಷೆಯೆಂದು ಈಗಲೂ ಹೇಳುತ್ತಾರೆ. ಇಲ್ಲಿ ಗಮನಿಸಬೇಕಾದ ಒಂದು ಮಹತ್ವಪೂರ್ಣ ವಿಚಾರವೆಂದರೆ ಸಂಕೇತಿ ಭಾಷೆಯು ಸಾಮಾನ್ಯ ತಮಿಳು ಭಾಷೆಯನ್ನಾಡುವವರಿಗೆ ಅರ್ಥವಾಗುವುದು ದುಸ್ಸಾಧ್ಯ.

ಸಂಕೇತಿ ಭಾಷೆಯು ತಮಿಳು ಭಾಷೆಯಿಂದ ಸರಿ ಸುಮಾರು ಮಲಯಾಳ ಭಾಷೆ ಬೇರ್ಪಟ್ಟ ಸಮಯದಲ್ಲೇ ತಾನು ಕವಲೊಡೆದಿದೆ. ಇದರ ವೈಶಿಷ್ಟ್ಯವೆಂದರೆ ಇದು ಮೂಲದ ಜನಾಂಗ ಹಾಗು ಪ್ರಾಂತ್ಯದೊಂದಿಗೆ ಯಾವುದೇ ಸಂಬಂಧವನ್ನು ಉಳಿಸಿಕೊಳ್ಳಲಿಲ್ಲ. ತತ್ಪರಿಣಾಮವಾಗಿ ಇದು ಸ್ವತಂತ್ರವಾಗಿಯೂ ಸ್ವಚ್ಛಂದವಾಗಿಯು ಬೆಳೆಯಿತು. ಈ ಭಾಷೆಯು ಕನ್ನಡ ಮತ್ತು ಸಂಸ್ಕೃತದಿಂದ ನಿಸ್ಸಂಶಯವಾಗಿ ಸ್ವೀಕರಣ ಹೊಂದಿರುವುದಾದರು, ತನ್ನದೇ ಆದ ಅನನ್ಯ ಮತ್ತು ವಿಶಿಷ್ಟ ಗುಣಗಳನ್ನು ಮೆರೆಯುತ್ತದೆ. ಇದು ಮಲಯಾಳ ಭಾಷೆಯೊಡನೆಯೂ ಕೆಲವು ಸಾಮ್ಯಗಳನ್ನು ಹೊಂದಿದೆ. ಸಂಕೇತಿಗಳು ಪೂರ್ವದಲ್ಲಿ ಈಗಿನ ಕೇರಳ - ತಮಿಳುನಾಡು ಗಡಿಪ್ರದೇಶದಿಂದ ವಲಸೆ ಬಂದವರಾದ್ದರಿಂದ ಈ ಉಭಯ ಜನಾಂಗದವರು ಸಮೀಪ ಭಾಷೆಯನ್ನು ಆಡುತ್ತಿದ್ದಿರಬಹುದಾದ ಸಂಭವತೆ ಹೆಚ್ಚು. ಸಂಕೇತಿ ಭಾಷೆಯಲ್ಲಿ ಬಳಕೆಯಲ್ಲಿರುವ ಕೆಲವು ಶಬ್ದಗಳು ಹಳೆಯ ಶಿಷ್ಟ ತಮಿಳು ಭಾಷೆಯ ಪದಕೋಶದೊಂದಿಗೆ ತುಲ್ಯವಾಗಿದೆ. ಇದಲ್ಲದೆ ಸಂಕೇತಿ ಭಾಷೆಯು ಮೂಲ-ದ್ರಾವಿಡ ಅಂಶಗಳು ಕೆಲವನ್ನು ಕಾಪಾಡಿಕೊಂಡು ಬಂದಿದೆ.

ಧ್ವನಿಮಾಗಳು[ಬದಲಾಯಿಸಿ]

ಸಂಕೇತಿಯು ತಾನು ಪಡೆದಿರುವ ಧ್ವನಿಮಾಗಳ ದೃಷ್ಟಿಯಿಂದಲೂ ಅತ್ಯಂತ ಸಮೃದ್ಧವೂ ವಿಸ್ತೃತವೂ ಆದ ಒಂದು ಭಾಶೆಯು. ಸಂಸ್ಕೃತ ಅಥವಾ ಕನ್ನಡದಲ್ಲಿ ಬಳಸಲ್ಪಡುವ ಎಲ್ಲ ಧ್ವನಿಮಾಗಳೊಡನೆ ಇನ್ನೂ ಕೆಲವು ವಿಶಿಷ್ಟ ಧ್ವನಿಮಾಗಳನ್ನು ಇದು ಪಡೆದಿದೆ. ಅದರಲ್ಲಿಯೂ ವಿಶೇಷತರವಾಗಿ "ಅ"ಕಾರವು ಉಚ್ಛರಿಸಲ್ಪಡುವ ವಿಧಾನದಿಂದ ಅರ್ಥದ ಮಾರ್ಪಾಟಿಗೆ ಎಡೆಮಾಡಿಕೊಡುವುದು. "ಅ‌^"ಕಾರವು "ಎ"ಕಾರದದಿಂದ ಬೆಳೆದಿರುವುದರಿಂದಲೂ ಪದಾದಿಯಲ್ಲಿ ಬರುವಾಗ ಇದು ಪ್ರಶ್ನಾರ್ಥವನ್ನು ಸೂಚಿಸುವುದರಿಂದಲೂ ಇದನ್ನು ನಾವು ಪ್ರಶ್ನಾರ್ಥಕ ಎಂದು ಕರೆಯುವುದು ಸಮಂಜಸ. ಇದಕ್ಕೆ ವಿಭಿನ್ನವಾಗಿ ಪದಾದಿಯ ಅಕಾರವು ನಿಶ್ಚಯಾರ್ಥವನ್ನು ಸೂಚಿಸುವುದು.


ಉದಾ: ಅ‍^ದು^- ಎಂದರೆ "ಯಾವುದು" ಎಂಬ ಅರ್ಥವೂ, ಅದು‌^- ಎಂದರೆ "ಅದು" ಎಂಬ ಅರ್ಥವೂ ಬರುವುದು. ಅಂತೆಯೇ ಅ^ತ್ತುಕ್ಕು^- ಏತಕ್ಕೆ/ಯಾವುದಕ್ಕೆ; ಅತ್ತುಕ್ಕು^- ಅದಕ್ಕೆ. ಅ^ವು(- ಯಾವನು; ಅವು(- ಅವನು.


ಈ ಹೇಳಿದ ಧ್ವನಿಮೆಯು ಬೇರೆ ಕಡೆಯಲ್ಲಿಯೂ ಬಂದು ಅರ್ಥವ್ಯತ್ಯಾಸಕ್ಕೆ ಕಾರಣವಾಗಬಹುದು.

ಇನ್ನೊಂದು ವಿಶೇಷ ಧ್ವನಿಮಾ ಎಂದರೆ "ಅವು(" ಮುಂತಾದ ಕಡೆಗಳ್ಳಿ ಬರುವ ಅನುನಾಸಿಕವು. ಇದು ಸ್ಪ್ಯಾನಿಶ್ ಭಾಷೆಯಲ್ಲಿ ಬರುವಂತಹ ಒಂದು ಧ್ವನಿಮಾ. ಪದಾಂತ್ಯದಲ್ಲಿ ಈ ಧ್ವನಿಮಾ ಇರುವುದು ಅಥವಾ ಇಲ್ಲದಿರುವುದು ಲಿಂಗವನ್ನು ಮಾರ್ಪಡಿಸುವುದು. ಇದು ಬಂದರೆ ಪುಲ್ಲಿಂಗವನ್ನು ಸೂಚಿಸಿಯೂ ಬಾರದಿದ್ದಲ್ಲಿ ಸ್ತ್ರೀಲಿಂಗ ಅಥವಾ ಬಹುವಚನವನ್ನು ಸೂಚಿಸುವುದು.


ಉದಾ: ಚೊಲ್ನಾ(- ಹೇಳಿದನು; ಚೊಲ್ನಾ- ಹೇಳಿದಳು, ಹೇಳಿದರು.


ಮತ್ತೊಂದು ವಿಶೇಷವೆಂದರೆ ಅರ್ಧ "ಉ^‍"ಕಾರ ಮತ್ತು ಪೂರ್ಣ ಉಕಾರ ಎರಡೂ ಧ್ವನಿಮೆಗಳು ಬರುವುದು. ತಮಿಳಿನಲ್ಲಿ ಪದಾನ್ತ್ಯದಲ್ಲಿ ಸರ್ವೇಸಾಮಾನ್ಯವಾಗಿ ಉ^ಕಾರವೇ ಬರುವುದು. ಇದಕ್ಕೆ ಅಪವಾದಗಳು ತೀರ ಕಡಿಮೆ. ಆದರೆ ಸಂಕೇತಿಯಲ್ಲಿ ಈ ಎರಡು ಧ್ವನಿಮೆಗಳು ವಿಭಿನ್ನ ಹಾಗು ಅರ್ಥವ್ಯತ್ಯಾಸಕ್ಕೆ ಕಾರಣ.


ಉದಾ: ಆಳು- ಆಳ; ಆಳು^- ಆಳು.


ಇವೇ ಅಲ್ಲದೆ "ಬ್ಯಾಂಕ್" ಎಂಬ ಆಂಗ್ಲ ಶಬ್ದದಲ್ಲಿ ಬರುವಂತಹ ಅಕಾರವೂ ಅಪರೂಪವಾಗಿ ಬಳಕೆಯಾಗುತ್ತದೆ.

ಸಂಕೇತಿಯಲ್ಲಿ ಖರ ಮತ್ತು ಘೋಷಗಳ ಭೇದಗಳು ನಿತ್ಯ ಹಾಗು ಅನುಲ್ಲಂಘ್ಯ. ತಮಿಳಿನಲ್ಲಿ ಹಾಗಲ್ಲ.

ವ್ಯಾಕರಣ ವ್ಯವಸ್ಥೆ[ಬದಲಾಯಿಸಿ]

ಸಂಕೇತಿ ಅತ್ಯಂತ ಸಮೃದ್ಧವಾದ ಶಬ್ದ ವಾಙ್ಮಯವನ್ನು ಹೊಂದಿದೆ. ಈ ಜನಾಂಗದಲ್ಲಿ ಸಂಬಂಧಗಳಿಗೆ ಹೆಚ್ಚು ಪ್ರಾಮುಖ್ಯವಿರುವುದರಿಂದ ಭಾಷೆಯಲ್ಲಿ ಸಂದಂಧವಾಚಕಗಳು ವಿಪುಲವಾಗಿ ದೊರೆಯುತ್ತವೆ. ವಚನಕ್ಕೆ ಹೆಚ್ಚು ಪ್ರಾಶಸ್ತ್ಯವುಂಟು. ಇದು ಕನ್ನಡ ಮತ್ತು ತಮಿಳು ಆಡುಭಾಷೆಗಳಲ್ಲಿ ಕಂಡುಬರುವುದಿಲ್ಲ. ಕಾಲ ಮತ್ತು ಪುರುಷಭೇದಗಳೂ ಸಹ ಸ್ಫುಟವಾಗಿ ಕಾಣುವುದು. ಲಿಂಗಗಳು ಮೂರು (ಪುಂ, ಸ್ತ್ರೀ ಮತ್ತು ನಪುಂಸಕ) ಇದ್ದು ಅಭಿವ್ಯಾಪ್ಯ(ನಾಂಬ, ನಮ್ಮಡೇ) ಮತ್ತು ವರ್ಜ್ಯ (ನಾಂಗ ಎಂಗಡೇ) ಸರ್ವನಾಮಗಳ ಭೇದ ಸ್ಪಷ್ಟವಾಗಿ ಕಂಡುಬರುವುದು. ವಿಭಕ್ತಿ ಪ್ರತ್ಯಯಗಳು ತಮಿಳಿಗಿಂತ ಸಾಕಷ್ಟು ಮಟ್ಟಿಗೆ ಭಿನ್ನವಾಗಿವೆ. ಸರ್ವೇಸಾಮಾನ್ಯವಾಗಿ ಪದಗಳೆಲ್ಲ ಸ್ವರಾಂತ್ಯಗಳಾಗಿದ್ದು ಭಾಷೆಗೆ ಮಾಧುರ್ಯ ಮತ್ತು ಗೇಯಾಂಶವನ್ನು ನೀಡುತ್ತದೆ. ಕನ್ನಡದ ಅಕಾರಾಂತ ಶಬ್ದಗಳೆಲ್ಲವು (ಹೆಸರುಗಳನ್ನೊಳಗೊಂಡು) ಬಹುಮಟ್ಟಿಗೆ ಸಂಕೇತಿಯಲ್ಲಿ ಉಕಾರಾಂತಗಳಾಗಿರುತ್ತವೆ. ವಿಧಿವತ್ತಾಗಿ ಕನ್ನಡದ ಎಕಾರಾಂತಗಳು ಹಾಗು ತಮಿಳಿನ ಐಕಾರಾಂತಗಳು ಸಂಕೇತಿಯಲ್ಲಿ ಅಕಾರಾಂತಗಳೇ. ಇದು ಮಲಯಾಳ-ತೆಲುಗು ಭಾಷೆಗಳಲ್ಲಿರುವಂತೆಯೇ ಉಳ್ಳ ವ್ಯವಸ್ಥೆ.

ನಿಷೇದಾರ್ಥವನ್ನು ಸೂಕ್ತ ಅಂತ್ಯಪ್ರತ್ಯಯಗಳ ಪ್ರಯೋಗದ ಮೂಲಕ ಸೂಚಿಸಲಾಗುತ್ತದೆ. ಈ ಪ್ರತ್ಯಯಗಳಲ್ಲಿ ಬಹುಮಟ್ಟಿಗೆ "ಅಲ್", "ಇಲ್", "ಆದೆ" ಇದ್ದು ಅಪರೂಪವಾಗಿ "ಆಮೆ", "ಆ" ಬರುವುದುಂಟು.

ಉದಾ: ನಾ ಪಣ್ಣಿನೇ(- ನಾನು ಮಾಡಿದೆನು; ನಾ ಪಣ್ಣಿತಿಲ್ಲೇ(- ನಾನು ಮಾಡಲಿಲ್ಲ; ನಾ ಪಣ್ಣಲ್ಲೇ(- ನಾನು ಮಾಡುವುದಿಲ್ಲ; ಪಾಣ್ಣಾದ್ (ಅಪರೂಪವಾಗಿ ಪಣ್ಣಾಮೆ)- ಮಾಡದೆ.

ಉತ್ತಮ ಪುರುಷ- ಏ(. ಪಣ್ಣಿನೇ(- ಮಾಡಿದೆನು; ಪಣ್ಣಿತಿಲ್ಲೇ(- ಮಾಡಲಿಲ್ಲೆನು.

ಮಧ್ಯಮ ಪುರುಷ- ಅ,ಆ. ಪಣ್ಣಿನಾ- ಮಾಡಿದೈ; ಪಣ್ಣಿತಿಲ್ಲಾ- ಮಾಡಲಿಲ್ಲ.

ಪ್ರಥಮ ಪುರುಷ- ಆ(. ಪಣ್ಣಿನಾ(- ಮಾಡಿದನು; ಪಣ್ಣಿನಾ- ಮಾಡಿದಳು, ಮಾಡಿದರು; ಪಣ್ಣಿತಿಲ್ಲಾ(- ಮಾಡಲಿಲ್ಲನು; ಪಣ್ಣಿತಿಲ್ಲಾ_ ಮಾಡಲಿಲ್ಲಳು, ಮಾಡಲಿಲ್ಲರು.


ವಚನ[ಬದಲಾಯಿಸಿ]

ಅದು‍^- ಅದು; ಅವ್ಹಾ- ಅವರು; ಅವ್ಹಿಯಾ-ಅವುಗಳು.

ಅದು^ ಪಣ್ಣಿತು^- ಅದು ಮಾಡಿತು; ಆವ್ಹಾ ಪಣ್ಣಿನಾ_ ಅವರು ಮಾಡಿದರು; ಅವ್ಹಿಯಾ ಪಣ್ಣಿತಿನ- ಅವು ಮಾಡಿದುವು.

ಅದು^ ಪಣ್ಣಿತಿಲ್ಲಾ- ಅದು ಮಾಡಲಿಲ್ಲ; ಅವ್ಹಾ ಪಣ್ಣಿತಿಲ್ಲಾ- ಅವರು ಮಾಡಲಿಲ್ಲರು; ಅವ್ಹಿಯಾ ಪಣ್ಣಿತಿಲ್ಲಿನ- ಅವು ಮಡಲಿಲ್ಲವು.

ಅದು^ ಪಣ್ಣಲ್ಲ- ಅದು ಮಾಡುವುದಿಲ್ಲ; ಅವ್ಹಾ ಪಣ್ಣಲ್ಲಾ- ಅವರು ಮಾಡರು; ಅವ್ಹಿಯಾ ಪಣ್ಣಲ್ಲಿನ- ಅವು ಮಾಡುವುದಿಲ್ಲ.


ಕಾಲ[ಬದಲಾಯಿಸಿ]

ಭೂತಕಾಲ- ಪಣ್ಣಿನೇ(- ಮಾಡಿದೆನು; ಪಣ್ಣಾಣಿಂದೇ(- ಮಾಡುತಲಿದ್ದೆ.

ವರ್ತಮಾನಕಾಲ- ಪಣ್ಣಾಣ್ ರಾಣಿ/ರಾಣೇ(- ಮಾಡುತ್ತಿದ್ದೇನೆ.

ಭವಿಷ್ಯತ್ಕಾಲ- ಪಣ್ಣಣಿ/ಪಣ್ಣಣೇ(- ಮಾಡುವೆನು; ಪಣ್ಣಾಣ್ ಇರಣಿ/ಇರಣೇ(- ಮಾಡುತಲಿರುವೆ.


ಉಪಭಾಷೆಗಳು[ಬದಲಾಯಿಸಿ]

ಸಂಕೇತಿ ಜನಾಂಗದ ನಾಲ್ಕು ಪ್ರಮುಖ ಪಂಗಡಗಳು ಕೆಲು ವಿಶೇಷ ಅಂಶಗಳಿರುವ ಉಪಭಾಷೆಗಳನ್ನು ಆಡುತ್ತಾರೆ. ಈ ಎಲ್ಲ ಉಪಭಾಷೆಗಳು ಪರಸ್ಪರ ಸುಲಭವಾಗಿ ಅರ್ಥವಾಗುತ್ತವೆ. ಈ ನಾಲ್ಕು ಉಪಭಾಷೆಗಳಲ್ಲಿ ಕೌಶಿಕ ಸಂಕೇತಿಯು ತಮಿಳಿನಿಂದ ಅತ್ಯಂತ ದೂರದಲ್ಲಿ ನಿಲ್ಲುತ್ತದೆ. ಈ ಭಾಷೆಗೆ ತನ್ನದೇ ಆದ ಲಿಪಿ ಇಲ್ಲದಿದ್ದರೂ ಒಂದು ಲಿಪಿಯನು ಅಳವಡಿಸುವ ಪ್ರಯತ್ನಗಳು ತೀವ್ರವಾಗಿ ನಡೆಯುತ್ತಿವೆ. ಸಂಕೇತಿಯಲ್ಲಿ ಹಲವು ಸಂಪ್ರದಾಯ ಹಾಡುಗಳು ದೊರೆಯುತ್ತವೆ. ಹಲವರು ಈ ಭಾಷೆಯಲ್ಲಿ ಗದ್ಯ, ಕವನ, ಹಾಡುಗಳು ಮುಂತಾದವುಗಳನ್ನು ರಚಿಸುವ ಯತ್ನವನ್ನು ನಡೆಸಿ ಸಾಫಲ್ಯವನ್ನು ಗಳಿಸಿರುವರು.

ಇದನ್ನೂ ನೋಡಿ[ಬದಲಾಯಿಸಿ]

ಮೂಲಗಳು[ಬದಲಾಯಿಸಿ]

  1. ಸಂಕೇತಿ ಭಾಷೆ- ಉಪನ್ಯಾಸ - ಡಾ|| ಶ್ರೀಕಾಂತ ಕೇ. ಮೂರ್ತಿ
  2. ದ್ರಾವಿಡಭಾಷಾವಿಜ್ಞಾನ- ಹಂಪ ನಾಗರಾಜಯ್ಯ
  3. ನಾಚಾರಮ್ಮನ ಜೀವನ ಚರಿತೆ - ಎಮ್. ಕೇಶವಯ್ಯ
  4. ಸಂಕೇತಿ ಜನಾಂಗ, ಸಂಸ್ಕೃತಿ ಮತ್ತು ಭಾಷೆ - ಸಿ.ಕೆ.ರಾಮಚಂದ್ರರಾಯರು