ವಿಷಯಕ್ಕೆ ಹೋಗು

ಮೆಟ್ರಿಕ್ ಪದ್ಧತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಕಿಲೊಗ್ರಾಂ ರಾಶಿ ಮತ್ತು ಮೂರು ಮೆಟ್ರಿಕ್ ಅಳತೆಯ ಸಾಧನಗಳು: ಸೆಂಟಿಮೀಟರ್‌ಗಳಲ್ಲಿ ಒಂದು ಅಳತೆ ಪಟ್ಟಿ, ಡಿಗ್ರಿ ಸೆಲ್ಸಿಯಸ್‌ನಲ್ಲಿ ಒಂದು ಉಷ್ಣಮಾಪಕ, ಮತ್ತು ವಿಭವವನ್ನು ವೋಲ್ಟ್‌ಗಳಲ್ಲಿ, ಆಂಪೇರ್‌ಗಳಲ್ಲಿ ಪ್ರವಾಹವನ್ನು ಮತ್ತು ಓಮ್‌ಗಳಲ್ಲಿ ರೋಧವನ್ನು ಅಳೆಯುವ ಒಂದು ಬಹುಮಾಪಕ.

ಮೆಟ್ರಿಕ್ ಪದ್ಧತಿ ಎನ್ನುವುದು ಭೌತಪರಿಮಾಣಗಳಾದ ಉದ್ದ, ರಾಶಿ ಮತ್ತು ಕಾಲಗಳನ್ನು ಅನುಕ್ರಮವಾಗಿ ಮೀಟರ್, ಕಿಲೊಗ್ರಾಮ್ ಮತ್ತು ಸೆಕೆಂಡು ಎಂಬ ಏಕಮಾನಗಳಲ್ಲಿ ನಿರೂಪಿಸುವ ಅಂತಾರಾಷ್ಟ್ರೀಯ ಮಾಪನ ವ್ಯವಸ್ಥೆ (ಮೆಟ್ರಿಕ್ ಸಿಸ್ಟಮ್). ಪ್ರಪಂಚದ ಬಹುತೇಕ ರಾಷ್ಟ್ರಗಳಲ್ಲಿ ಈ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಈ ಪದ್ಧತಿಯ ಉಪಜ್ಞೆಗೆ ಮೊದಲು ಬೇರೆ ಬೇರೆ ರಾಷ್ಟ್ರಗಳು ತಮ್ಮ ತಮ್ಮ ಸ್ಥಳೀಯ ಆವಶ್ಯಕತೆ ಹಾಗೂ ಸೌಕರ್ಯಗಳಿಗೆ ಅನುಗುಣವಾಗಿ ತಮ್ಮದೇ ಆದ ಮಾಪನಪದ್ಧತಿಗಳನ್ನು ಹೊಂದಿದ್ದವು. ಇವುಗಳಲ್ಲಿ ಅನೇಕ ಸಮಸ್ಯೆಗಳೂ ವ್ಯವಹಾರ ತೊಡಕುಗಳೂ ತಲೆದೋರುತ್ತಿದ್ದುವು. ಇಂದೂ ಪ್ರಪಂಚದ ಕೆಲವೆಡೆಗಳಲ್ಲಿ ಮಾತ್ರ ಹಿಂದಿನ ಬ್ರಿಟಿಷ್ ಅಥವಾ ಇಂಪೀರಿಯಲ್ ಪದ್ಧತಿಯನ್ನು ಅನುಸರಿಸುವುದಿದೆ.

ಇತಿಹಾಸ

[ಬದಲಾಯಿಸಿ]

ಮೆಟ್ರಿಕ್ ಪದ್ಧತಿಯ ಆದಿಮ ಸ್ವರೂಪವನ್ನು 1790ರ ದಶಕಗಳಲ್ಲಿ ಫ್ರಾನ್ಸಿನ ವಿಜ್ಞಾನಿಗಳ ತಂಡ ರೂಪಿಸಿತು.[]: 2–3 []: 46  ಅನಂತರ ಈ ಪದ್ಧತಿಯ ನಿರೂಪಣೆಗಳನ್ನು ಅನೇಕ ಸಲ ಪರಿಷ್ಕಾರಗೊಳಿಸಿ ಮತ್ತಷ್ಟು ನಿಖರವಾದ ಏಕಮಾನಗಳನ್ನು ಸೇರಿಸಲಾಗಿದೆ. 1850ರ ವೇಳೆಗೆ ಗ್ರೀಸ್, ದಿ ನೆದರ್‌ಲೆಂಡ್ಸ್, ಸ್ಪೇನ್ ಮತ್ತು ಇಟಲಿಯ ಕೆಲವೊಂದು ಭಾಗಗಳು ಈ ಪದ್ಧತಿಯನ್ನು ಸ್ವೀಕರಿಸಿದುವು. ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನ 1870 ರಿಂದ 1875ರ ತನಕ ನಡೆದು ಉದ್ದ ಮತ್ತು ರಾಶಿಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ನಿಖರತೆ ಇರುವ ಮಾಪನೆಯ ಶಿಷ್ಟತೆಗಳನ್ನು ರೂಪಿಸುವುದು ಸಾಧ್ಯವಾಯಿತು. ಅಮೆರಿಕ ಸಂಯುಕ್ತ ಸಂಸ್ಥಾನಗಳೂ ಸೇರಿದಂತೆ ಈ ಸಮ್ಮೇಳನದಲ್ಲಿ 17 ರಾಷ್ಟ್ರಗಳು ಭಾಗವಹಿಸಿದ್ದುವು. ಟ್ರೀಟಿ ಆಫ್ ದ ಮೀಟರ್[] ಎಂಬ ಹೆಸರಿನ ಒಪ್ಪಂದಕ್ಕೆ ಸಹಿಬಿದ್ದು (1875) ಅಗತ್ಯ ಬಿದ್ದಾಗ ಮೆಟ್ರಿಕ್ ಪದ್ಧತಿಯನ್ನು ಯುಕ್ತರೀತಿಯಲ್ಲಿ ಬದಲಾಯಿಸಲು ಒಂದು ಶಾಶ್ವತ ಸಂಸ್ಥೆಯನ್ನು ಸ್ಥಾಪಿಸುವುದೂ ಸಾಧ್ಯವಾಯಿತು. ಈ ಸಂಸ್ಥೆಯ ಹೆಸರು ಇಂಟರ್‌ನ್ಯಾಷನಲ್ ಬ್ಯೂರೋ ಆಫ್ ವೇಯ್ಟ್ ಅಂಡ್ ಮೆಷರ್ಸ್.[] ಇದು ಪ್ಯಾರಿಸ್ಸಿನಲ್ಲಿದೆ.

ಈ ಪದ್ಧತಿಯನ್ನು 1900 ರ ವೇಳೆಗೆ ಪ್ರಪಂಚದ 35 ರಾಷ್ಟ್ರಗಳು ಅಳವಡಿಸಿಕೊಂಡುವು. ಇವುಗಳಲ್ಲಿ ಪ್ರಮುಖವಾಗಿ ಯುರೋಪ್ ಹಾಗೂ ದಕ್ಷಿಣ ಅಮೆರಿಕ ಖಂಡದ ಪ್ರಮುಖ ರಾಷ್ಟ್ರಗಳೂ ಸೇರಿದ್ದುವು. 1970 ರ ದಶಕಗಳ ವೇಳೆಗೆ ಪ್ರಪಂಚದ ಬಹುತೇಕ ರಾಷ್ಟ್ರಗಳೂ ತಮ್ಮ ಹಳೆಯ ಮಾಪನಪದ್ಧತಿಗಳಿಗೆ ಬದಲಾಗಿ ಮೆಟ್ರಿಕ್ ಪದ್ಧತಿಯನ್ನು ಅಳವಡಿಸಿಕೊಂಡವು. ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಕೆನಡ ರಾಷ್ಟ್ರಗಳು ಮಾತ್ರ ಇವನ್ನು ಅಳವಡಿಸಕೊಳ್ಳದೆ ಈ ಬದಲಾವಣೆಯನ್ನು ಕಾರ್ಯರೂಪಕ್ಕೆ ತರುವ ಸಲುವಾಗಿ ಒಂದು ಆಯೋಗವನ್ನು ರಚಿಸಿಕೊಂಡುವು (1970). ಹಂತ ಹಂತವಾಗಿ ಹಳೆಯ ಮಾಪನ ಪದ್ಧತಿಯನ್ನು ನೂತನ ಪದ್ಧತಿಗೆ ಬದಲಾಯಿಸಿಕೊಳ್ಳಲು ನಿರ್ದಿಷ್ಟ ಅವಧಿಯ ಯೋಜನೆಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಸರ್ಕಾರ ರೂಪಿಸಿಕೊಂಡಿತು. 1974 ರಲ್ಲಿ ಅಲ್ಲಿಯ ಪ್ರಜಾಪ್ರತಿನಿಧಿಗಳ ಸಭೆಯಲ್ಲಿ ಬದಲಾವಣೆಯ ಈ ಮಸೂದೆ ಬಿದ್ದುಹೋದರೂ ಕೆಲವೊಂದು ಕೈಗಾರಿಕೆಗಳು ಬದಲಾವಣೆಗಾಗಿ ತಮ್ಮದೇ ಆದ ಯೋಜನೆಗಳನ್ನು ರೂಪಿಸಿಕೊಂಡವು. 1965 ರಲ್ಲಿ ಗ್ರೇಟ್ ಬ್ರಿಟನ್ ಈ ಬದಲಾವಣೆಗಾಗಿ ಹತ್ತು ವರ್ಷಗಳ ಅವಧಿಯ ಒಂದು ಕಾರ್ಯಕ್ರಮ ರೂಪಿಸಿಕೊಂಡು ತನ್ನ ಇತರ ಕಾಮನ್‌ವೆಲ್ತ್ ಸದಸ್ಯ ರಾಷ್ಟ್ರಗಳಿಗೂ ಈ ಬಗ್ಗೆ ಪ್ರೇರಣೆ ನೀಡಿತು.

ಭಾರತದ ವಿಚಾರವಾಗಿ ಹೇಳುವುದಾದರೆ, ರೂಢಿಯಲ್ಲಿ ದಾಶಮಿಕ ಸಂಖ್ಯಾ ವ್ಯವಸ್ಥೆ ಪ್ರಚಲಿತವಾಗಿರುವುದರಿಂದ ಇದರ ನಿಕಟವರ್ತಿಯಾದ ಮೆಟ್ರಿಕ್ ಮಾಪನ ವ್ಯವಸ್ಥೆ ವೈಜ್ಞಾನಿಕವಾಗಿ ಹೆಚ್ಚು ಜನಪ್ರಿಯತೆಗಳಿಸಿತು. ಮೊದಲು ಎಫ್.ಪಿ.ಎಸ್. ವ್ಯವಸ್ಥೆಯನ್ನು (ಬ್ರಿಟಿಷ್ ಸಿಸ್ಟಮ್) ಅನುಸರಿಸುತ್ತಿದ್ದ ಭಾರತ ಸರ್ಕಾರ ಶಾಸನರೀತ್ಯ (ದ ಸ್ಟ್ಯಾಂಡರ್ಡ್ ವೆಯ್ಟ್ಸ್ ಆ್ಯಕ್ಟ್: 1950ರಲ್ಲಿ ಮಂಜೂರಾಯಿತು) ಮೆಟ್ರಿಕ್ ವ್ಯವಸ್ಥೆಯನ್ನು (1960) ರೂಢಿಗೆ ತಂದಿತು.

ಏಕಮಾನಗಳ ವ್ಯಾಖ್ಯೆ

[ಬದಲಾಯಿಸಿ]

ಮೆಟ್ರಿಕ್ ಮಾಪನಪದ್ಧತಿಯಲ್ಲಿ ಬಳಸಲಾಗುವ ಉದ್ದ, ರಾಶಿ ಮತ್ತು ಕಾಲಗಳನ್ನು ನಿರೂಪಿಸಲು ಅನುಕ್ರಮವಾಗಿ ಬಳಸುವ ಮೀಟರ್, ಕಿಲೊಗ್ರಾಮ್ ಮತ್ತು ಸೆಕೆಂಡ್ ಏಕಮಾನಗಳ ವ್ಯಾಖ್ಯೆ ಹೀಗಿದೆ:

ಮೀಟರ್

[ಬದಲಾಯಿಸಿ]

ಕ್ರಿಪ್ಟಾನ್-86 ಎಂಬ ಧಾತು ನಿರ್ದ್ರವ್ಯತೆಯಲ್ಲಿ ತನ್ನ ಪರಮಾಣುವಿನ 2p10 ಮತ್ತು 5d5  ಶಕ್ತಿಮಟ್ಟಗಳ ನಡುವೆ ಜರುಗುವ ಸಂಕ್ರಮಣಕ್ಕೆ ಅನುಗುಣವಾಗಿ ಹೊರಸೂಸುವ ಕಿತ್ತಳೆ ಬಣ್ಣದ ವಿಕಿರಣದ 1650763.63 ಅಲೆಯುದ್ದಗಳಿಗೆ ಸಮನಾದ ಉದ್ದ.[]

ಕಿಲೊಗ್ರಾಮ್

[ಬದಲಾಯಿಸಿ]

40C ಉಷ್ಣತೆಯಲ್ಲಿ ಒಂದು ಘನ ಸೆಂಟಿಮೀಟರ್ ಘನ ಗಾತ್ರದ ನೀರಿನ ತೂಕವೇ ಒಂದು ಗ್ರಾಮ್.[] 1000 ಘನಸೆಂಟಿಮೀಟರುಗಳಷ್ಟು ತೂಕದ ಪ್ಲಾಟಿನಮ್ ಸಿಲಿಂಡರನ್ನು ಒಂದು ಶಿಷ್ಟ ಕಿಲೋಗ್ರಾಮ್ ಎಂದು ಅಂಗೀಕರಿಸಲಾಯಿತು. ಶೇಕಡಾ 90 ಭಾಗ ಪ್ಲಾಟಿನಮ್ ಮತ್ತು ಶೇಕಡಾ 10 ಭಾಗ ಇರಿಡಿಯಮ್‌ನಿಂದ ತಯಾರಿಸಲಾಗಿರುವ ಒಂದು ಸಿಲಿಂಡರಿನ ತೂಕವೇ ಕಿಲೋಗ್ರಾಮ್. ಇದನ್ನು ಪ್ಯಾರಿಸ್ಸಿನ ಸೆವ್ರೇ ಎಂಬಲ್ಲಿ ಇರುವ ಅಂತಾರಾಷ್ಟ್ರೀಯ ತೂಕ ಮತ್ತು ಅಳತೆಗಳ ಸಂಸ್ಥೆಯಲ್ಲಿ ಇಡಲಾಗಿದೆ.

ಸೆಕೆಂಡ್

[ಬದಲಾಯಿಸಿ]

ಕಾಲಮಾಪನೆಯ ಮೂಲಭೂತ ಏಕಮಾನ. ಮೊದಲಿಗೆ ಇದನ್ನು ಸೌರದಿವಸದ 1/86400 ಎಂದು ವ್ಯಾಖ್ಯಿಸಲಾಗಿತ್ತು. ಇದರ ವ್ಯಾಖ್ಯೆಯನ್ನು 1955 ರಲ್ಲಿ ಬದಲಾವಣೆ ಮಾಡಿದರು. 1967ರಲ್ಲಿ ಪರಮಾಣು ಗಡಿಯಾರದ (ಅಟಾಮಿಕ್ ಕ್ಲಾಕ್) ಆಧಾರದ ಮೇಲೆ ಸೆಕೆಂಡಿನ ಅವಧಿಯನ್ನು ಪರಮಾಣು ಸೆಕೆಂಡ್ ರೂಪದಲ್ಲಿ ನಿರೂಪಿಸಲಾಗಿದೆ. ಸೀಸಿಯಮ್-133 ಪರಮಾಣುವಿನ ಭೂಸ್ಥಿತಿಯ (ಗ್ರೌಂಡ್‌ಸ್ಟೇಟ್) ಎರಡು ಅತಿಸೂಕ್ಷ್ಮ ಮಟ್ಟಗಳ (ಹೈಪರ್‌ಫೈನ್ ಲೆವೆಲ್ಸ್) ನಡುವೆ ಜರಗುವ ಸಂಕ್ರಮಣದಿಂದಾಗಿ ಹೊರಬರುವ ವಿಕಿರಣದ 9,192,631,770 ಕಂಪನಗಳಿಗೆ ಬೇಕಾಗುವ ಅವಧಿ.

ಕಾಲ ಸಂದಂತೆ ಮೆಟ್ರಿಕ್ ಮಾಪನಪದ್ಧತಿಯಲ್ಲಿ, ಅಗತ್ಯಗಳಿಗೆ ಅನುಗುಣವಾಗಿ ಇನ್ನಿತರ ಪರಮಾಣುಗಳ ಏಕಮಾನಗಳೂ ಸೇರ್ಪಡೆಗೊಂಡವು. ಮೆಟ್ರಿಕ್ ಮಾಪನ ಪದ್ಧತಿಗೆ ಅಂತಾರಾಷ್ಟ್ರೀಯ ಮನ್ನಣೆ ಒದಗಿ ಅದನ್ನು ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆ (ಇಂಟರ್‌ನ್ಯಾಷನಲ್ ಸಿಸ್ಟಮ್ ಆಫ್ ಯೂನಿಟ್-ಎಸ್‌ಐ) ಎಂದು ಕರೆಯುವುದು ರೂಢಿಗೆ ಬಂತು. ಪ್ರಪಂಚದ ವೈಜ್ಞಾನಿಕ ಹಾಗೂ ತಂತ್ರಜ್ಞಾನದ ವಿವಿಧ ಶಾಖೆಗಳಲ್ಲಿ ಇಂದು ಎಸ್‌ಐ ಪದ್ಧತಿಯನ್ನು ಬಳಸುವುದಿದೆ. ಶಿಕ್ಷಣ ಕ್ಷೇತ್ರದಲ್ಲಿ ಕೂಡ ಅಂತಾರಾಷ್ಟ್ರೀಯ ಏಕಮಾನ ಪದ್ಧತಿಯಲ್ಲೇ ಪರಿಮಾಣಗಳನ್ನು ನಿರೂಪಿಸುವುದೂ, ಪಠ್ಯಪುಸ್ತಕಗಳನ್ನು ರಚಿಸುವುದೂ ರೂಢಿಗೆ ಬಂದಿದೆ.

ಇನ್ನಿತರ ಮೂಲಭೂತ ಏಕಮಾನಗಳು

[ಬದಲಾಯಿಸಿ]

ಅಂತಾರಾಷ್ಟ್ರೀಯ ಏಕಮಾನ ಪದ್ಧತಿ ಎಂಬ ಹೆಸರಿನಿಂದ ಪ್ರಚಲಿತವಾಗಿರುವ ಹಾಗೂ ಮೆಟ್ರಿಕ್ ಮಾಪನವ್ಯವಸ್ಥೆಯ ಚೌಕಟ್ಟಿಗೆ ಒಳಪಡುವ ಇನ್ನಿತರ ಮೂಲಭೂತ ಏಕಮಾನಗಳು ಇವು:

ಇವಲ್ಲದೆ ರೇಡಿಯನ್ (rad) ಮತ್ತು ಸ್ಟಿರಡಿಯನ್ (sr) ಎಂಬ ಪೂರಕ ಏಕಮಾನಗಳೂ ಉಂಟು.

ವ್ಯುತ್ಪನ್ನ ಏಕಮಾನಗಳು

[ಬದಲಾಯಿಸಿ]

ಮೇಲಿನ ಏಳು ಮೂಲಭೂತ ಪರಿಮಾಣಗಳನ್ನು ಬಳಸಿಕೊಂಡು ಮತ್ತೆ ಕೆಲವೊಂದು ಪರಿಮಾಣಗಳಿಗೆ ವ್ಯುತ್ಪನ್ನ ಏಕಮಾನಗಳನ್ನು (ಡಿರೈವ್ಡ್ ಯೂನಿಟ್ಸ್) ನಿರೂಪಿಸುವುದಿದೆ.

ಪರಿಮಾಣ ಏಕಮಾನ ಪ್ರತೀಕ
ಬಲ (ಫೋರ್ಸ್) ನ್ಯೂಟನ್ N
ಕೆಲಸ, ಶಕ್ತಿ (ವರ್ಕ್, ಎನರ್ಜಿ) ಜೌಲ್[] J
ಸಾಮರ್ಥ್ಯ (ಪವರ್) ವಾಟ್[೧೦][೧೧][೧೨] W
ವಿದ್ಯುತ್ ರೋಧ (ಎಲೆಕ್ಟ್ರಿಕಲ್ ರೆಸಿಸ್ಟೆನ್ಸ್) ಓಮ್ Ω
ಆವರ್ತಾಂಕ (ಫ್ರೀಕ್ವೆನ್ಸಿ) ಹರ್ಟ್ಸ್[೧೩] Hz
ಕಾಂತಾಭಿವಾಹ (ಮ್ಯಾಗ್ನೆಟಿಕ್ ಫ್ಲಕ್ಸ್) ವೇಬರ್ Wb
ಸಂಮರ್ದ (ಪ್ರೆಷರ್) ಪ್ಯಾಸ್ಕಲ್ Pa
ವಿದ್ಯುದಾವೇಶ (ಎಲೆಕ್ಟ್ರಿಕ್ ಚಾರ್ಜ್) ಕೂಲಂಬ್[೧೪][೧೫] C
ವಿದ್ಯುದ್ವಿಭವ (ಎಲೆಕ್ಟ್ರಿಕ್ ಪೊಟೆನ್ಷಿಯಲ್) ವೋಲ್ಟ್[೧೬] V
ಪ್ರಕಾಶ (ಇಲ್ಯೂಮಿನೆನ್ಸ್) ಲಕ್ಸ್[೧೭][೧೮] lx
ಕಾಂತೀಯ ಪ್ರೇರಣೆ (ಮ್ಯಾಗ್ನೆಟಿಕ್ ಇಂಡಕ್ಷನ್) ಟೆಸ್ಲ T
ಸುಧಾರಣೆ (ಕೆಪಾಸಿಟೆನ್ಸ್) ಫ್ಯಾರೆಡ್[೧೯] F
ಪ್ರೇರಕತ್ವ (ಇಂಡಕ್ಟೆನ್ಸ್) ಹೆನ್ರಿ[೨೦] H
ಕಾಂತಿಅಭಿವಾಹ (ಲ್ಯೂಮಿನಸ್ ಫ್ಲಕ್ಸ್) ಲ್ಯೂಮೆನ್ lm

ಏಕಮಾನಗಳ ಭಿನ್ನರಾಶಿ ಮತ್ತು ಘಾತಗಳನ್ನು ಕುರಿತು ಪೂರ್ವಪ್ರತ್ಯಯ ಹಾಗೂ ಪ್ರತೀಕಗಳು

[ಬದಲಾಯಿಸಿ]
ಭಿನ್ನರಾಶಿ 			 ಪೂರ್ವಪ್ರತ್ಯಯ			ಪ್ರತೀಕ
10-1				    ಡೆಸಿ			          d
10-2				    ಸೆಂಟಿ			  c
10-3				    ಮಿಲಿ			  m
10-6				    ಮೈಕ್ರೊ			  μ
10-9				    ನ್ಯಾನೋ			  n
10-12				    ಪೈಕೋ			  p
10-15				    ಫೆಮ್‌ಟೋ		          f
10-18				    ಅಟ್ಟೋ			  a
ಘಾತ			    ಪೂರ್ವಪ್ರತ್ಯಯ		  	ಪ್ರತೀಕ
101				ಡೆಕ				  da
102				ಹೆಕ್ಟ				  h
103				ಕಿಲೊ				  k
106				ಮೆಗಾ				  M
109				ಗಿಗಾ				  G
1012				ಟೆರಾ				  T

ಉಲ್ಲೇಖಗಳು

[ಬದಲಾಯಿಸಿ]
  1. Alder (2004). The Measure of all Things – The Seven-Year-Odyssey that Transformed the World. Abacus. ISBN 978-0-349-11507-8.
  2. Konvitz, Josef (1987). Cartography in France, 1660–1848: Science, Engineering, and Statecraft. University of Chicago Press. ISBN 978-0-226-45094-0.
  3. "Treaty of the Metre". Encyclopædia Britannica. 2013. Archived from the original on 11 May 2013. Retrieved 28 March 2013.
  4. "Brief history of the SI". BIPM. Retrieved 14 May 2020.
  5. Baird, K. M.; Howlett, L. E. (1963). "The International Length Standard". Applied Optics. 2 (5): 455–463. Bibcode:1963ApOpt...2..455B. doi:10.1364/AO.2.000455.
  6. Zupko, Ronald Edward (1990). Revolution in Measurement: Western European Weights and Measures Since the Age of Science. Philadelphia: American Philosophical Society. ISBN 978-0-87169-186-6.
  7. International Bureau of Weights and Measures (20 May 2019), The International System of Units (SI) (PDF) (9th ed.), ISBN 978-92-822-2272-0, archived from the original on 18 October 2021
  8. CIE (2020). CIE S 017:2020 ILV: International Lighting Vocabulary, 2nd edition (2nd ed.). CIE.
  9. International Bureau of Weights and Measures (2006), The International System of Units (SI) (PDF) (8th ed.), p. 120, ISBN 92-822-2213-6, archived (PDF) from the original on 2021-06-04, retrieved 2021-12-16
  10. Newell, David B; Tiesinga, Eite (2019). The international system of units (SI) (Report). Gaithersburg, MD: National Institute of Standards and Technology. doi:10.6028/nist.sp.330-2019. https://nvlpubs.nist.gov/nistpubs/SpecialPublications/NIST.SP.330-2019.pdf.  §2.3.4, Table 4.
  11. Yildiz, I.; Liu, Y. (2018). "Energy units, conversions, and dimensional analysis". In Dincer, I. (ed.). Comprehensive energy systems. Vol 1: Energy fundamentals. Elsevier. pp. 12–13. ISBN 9780128149256.
  12. International Bureau of Weights and Measures (2006), The International System of Units (SI) (PDF) (8th ed.), pp. 118, 144, ISBN 92-822-2213-6, archived (PDF) from the original on 2021-06-04, retrieved 2021-12-16
  13. "SI Brochure: The International System of Units (SI) – 9th edition" (PDF). BIPM: 26. Retrieved 7 August 2022.
  14. "SI Brochure (2019)" (PDF). SI Brochure. BIPM. p. 127. Retrieved May 23, 2019.
  15. BIPM (20 May 2019). "Mise en pratique for the definition of the ampere in the SI". BIPM. Retrieved 2022-02-18.
  16. "SI Brochure, Table 3 (Section 2.2.2)". BIPM. 2006. Archived from the original on 2007-06-18. Retrieved 2007-07-29.
  17. International Bureau of Weights and Measures (20 May 2019), The International System of Units (SI) (PDF) (9th ed.), ISBN 978-92-822-2272-0, archived from the original on 18 October 2021
  18. CIE (2020). CIE S 017:2020 ILV: International Lighting Vocabulary, 2nd edition (2 ed.). CIE.
  19. The International System of Units (SI) (8th ed.). Bureau International des Poids et Mesures (International Committee for Weights and Measures). 2006. p. 144.
  20. Rowlett, Russ. "How Many? A Dictionary of Units of Measurement". University of North Carolina at Chapel Hill. Archived from the original on 2016-08-29. Retrieved 2011-08-29.


ಹೊರಗಿನ ಕೊಂಡಿಗಳು

[ಬದಲಾಯಿಸಿ]