ವಿಷಯಕ್ಕೆ ಹೋಗು

ಉದ್ದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ್ಯಾಮಿತೀಯ ಅಳತೆಗಳಲ್ಲಿ, ಉದ್ದ ಎಂದರೆ ಒಂದು ವಸ್ತುವಿನ ಅತ್ಯಂತ ವಿಸ್ತಾರವಾದ ಆಯಾಮ. ಅಂತರರಾಷ್ಟ್ರೀಯ ಪರಿಮಾಣಗಳ ಪದ್ಧತಿಯಲ್ಲಿ, ಉದ್ದ ಎಂದರೆ ದೂರದ ಅಳತೆಯ ಯಾವುದೇ ಪರಿಮಾಣ. ಇತರ ಸಂದರ್ಭಗಳಲ್ಲಿ, ಉದ್ದವು ಒಂದು ವಸ್ತುವಿನ ಒಂದು ಅಳೆಯಲಾದ ಆಯಾಮವಾಗಿದೆ. ಉದಾಹರಣೆಗೆ, ಅಗಲಕ್ಕಿಂತ ಉದ್ದ ಕಡಿಮೆ ಇರುವಂತೆ ಒಂದು ತಂತಿಯನ್ನು ಕತ್ತರಿಸಲು ಸಾಧ್ಯವಿದೆ.

ಉದ್ದವನ್ನು ಎತ್ತರದಿಂದ ವ್ಯತ್ಯಾಸಮಾಡಬಹುದು. ಎತ್ತರ ಎಂದರೆ ನೆಟ್ಟಗಿನ ವಿಸ್ತಾರ. ಅಗಲ ಎಂದರೆ ಪಾರ್ಶ್ವದಿಂದ ಪಾರ್ಶ್ವಕ್ಕೆ ಇರುವ ದೂರ, ಮತ್ತು ವಸ್ತುವಿನಲ್ಲಿ ಉದ್ದಕ್ಕೆ ಸಮಕೋನದಲ್ಲಿ ಅಳೆಯಲಾಗುತ್ತದೆ. ಉದ್ದವು ಒಂದು ಆಯಾಮದ ಮಾನವಾಗಿದೆ, ಮತ್ತು ವಿಸ್ತೀರ್ಣ ಎರಡು ಆಯಾಮದ ಮಾನವಾಗಿದೆ (ಉದ್ದವನ್ನು ಉದ್ದದಿಂದ ಗುಣಿಸಿದಾಗ) ಮತ್ತು ಘನ ಅಳತೆಯು ಮೂರು ಆಯಾಮದ ಮಾನವಾಗಿದೆ (ಉದ್ದವನ್ನು ಅದರಿಂದಲೇ ಮೂರು ಬಾರಿ ಗುಣಿಸಿದಾಗ). ಬಹುತೇಕ ಏಕಮಾನ ವ್ಯವಸ್ಥೆಗಳಲ್ಲಿ, ಉದ್ದದ ಏಕಮಾನವು ಒಂದು ಮೂಲ ಏಕಮಾನವಾಗಿರುತ್ತದೆ, ಮತ್ತು ಇದರಿಂದ ಇತರ ಏಕಮಾನಗಳನ್ನು ಪಡೆಯಲಾಗುತ್ತದೆ.

ಏಕಮಾನಗಳು

[ಬದಲಾಯಿಸಿ]

ಭೌತ ವಿಜ್ಞಾನಗಳು ಮತ್ತು ಶಿಲ್ಪವಿಜ್ಞಾನದಲ್ಲಿ, "ಉದ್ದದ ಏಕಮಾನಗಳ" ಬಗ್ಗೆ ಮಾತನಾಡಿದಾಗ, "ಉದ್ದ" ಶಬ್ದವು "ದೂರ" ಶಬ್ದದೊಂದಿಗೆ ಸಮಾನಾರ್ಥಕವಾಗಿದೆ. ಉದ್ದವನ್ನು ಅಳೆಯಲು ಬಳಸಲಾಗುವ ಹಲವಾರು ಏಕಮಾನಗಳಿವೆ. ಐತಿಹಾಸಿಕವಾಗಿ, ಉದ್ದದ ಏಕಮಾನಗಳನ್ನು ಮಾನವ ಶರೀರದ ಭಾಗಗಳ ಉದ್ದಗಳಿಂದ ಪಡೆದಿರಬಹುದು, ಉದಾಹರಣೆಗೆ ಹೆಜ್ಜೆದಾಪುಗಳ ಸಂಖ್ಯೆಯಲ್ಲಿ ಕ್ರಮಿಸಲಾದ ದೂರ, ಭೂಮಿ ಮೇಲಿನ ಹೆಗ್ಗುರುತುಗಳು ಅಥವಾ ಸ್ಥಳಗಳ ನಡುವಿನ ದೂರ, ಅಥವಾ ಸ್ವೇಚ್ಛಾನುಸಾರವಾಗಿ ಯಾವುದೋ ಸ್ಥಿರ ವಸ್ತುವಿನ ಉದ್ದದಿಂದ ಪಡೆಯಬಹುದು.

ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆಯಲ್ಲಿ (ಎಸ್ಐ), ಮೀಟರ್ ಉದ್ದದ ಮೂಲ ಏಕಮಾನವಾಗಿದೆ ಮತ್ತು ಈಗ ಇದನ್ನು ಬೆಳಕಿನ ವೇಗದ ಪರಿಭಾಷೆಯಲ್ಲಿ ವ್ಯಾಖ್ಯಾನಿಸಲಾಗುತ್ತದೆ. ಮೀಟರ್‍ನಿಂದ ಪಡೆಯಲಾದ ಸೆಂಟಿಮೀಟರ್ ಹಾಗೂ ಕಿಲೊಮೀಟರ್ ಕೂಡ ಸಾಮಾನ್ಯವಾಗಿ ಬಳಸಲಾದ ಏಕಮಾನಗಳಾಗಿವೆ. ಅಮೇರಿಕದ ಬಳಕೆಯ ಏಕಮಾನಗಳಲ್ಲಿ, ಏಕಮಾನಗಳ ಸಾಮ್ರಾಜ್ಯಶಾಹಿ ಪದ್ಧತಿಯಲ್ಲಿ, ಅಂಗುಲ, ಅಡಿ, ಗಜ, ಮತ್ತು ಮೈಲಿ ಸಾಮಾನ್ಯವಾಗಿ ಬಳಸಲಾದ ಉದ್ದದ ಏಕಮಾನಗಳಾಗಿವೆ.

ಖಗೋಳಶಾಸ್ತ್ರದಲ್ಲಿರುವಂತೆ, ಅಂತರಿಕ್ಷದ ವೈಶಾಲ್ಯತೆಯಲ್ಲಿನ ದೂರಗಳನ್ನು ಸೂಚಿಸಲು ಬಳಸಲಾಗುವ ಏಕಮಾನಗಳು ಸಾಮಾನ್ಯವಾಗಿ ಭೂಮಿಯ ಮೇಲೆ ಬಳಸಲಾಗುವ ಏಕಮಾನಗಳಿಗಿಂತ ಹೆಚ್ಚು ಉದ್ದವಾಗಿರುತ್ತವೆ ಮತ್ತು ಇವುಗಳಲ್ಲಿ ಖಗೋಳ ಮಾನ, ಜ್ಯೋತಿರ್ವರ್ಷ, ಮತ್ತು ಪಾರ್ಸೆಕ್ ಸೇರಿವೆ.

"https://kn.wikipedia.org/w/index.php?title=ಉದ್ದ&oldid=935257" ಇಂದ ಪಡೆಯಲ್ಪಟ್ಟಿದೆ